SKH
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
SKH

ಎರಡು ಬಾಷ್ಪಗಳ ನಡುವೆ (ಕೊಳೆತು ನಿಂತ ನೀರಲ್ಲು ಬದಲಾವಣೆಯ ಅಲೆ ಎದ್ದಿತು)

2/1/2018

0 Comments

 
Picture
ಸಮಾಜಕಾರ್ಯದ ವಿದ್ಯಾರ್ಥಿಗಳನ್ನು ಕಂಡಾಗ, ಅವರು ತಮ್ಮ ಪಾಠ-ಪ್ರವಚನಗಳಲ್ಲಿ ಮತ್ತು ಕ್ಷೇತ್ರಕಾರ್ಯದಲ್ಲಿ (Field Work) ನಿರತವಾಗಿರುವುದನ್ನು ಗಮನಿಸಿದಾಗ, ಅವರೊಂದಿಗೆ ಬೆರೆತು ಕೆಲಸದಲ್ಲಿ ತೊಡಗಿದಾಗ ನನಗೆ ಕುಮಾರಿ ಬಾಲಾ ಗುಪ್ತಾಳ ಜ್ಞಾಪಕವಾಗುತ್ತದೆ.
​
ದಿಲ್ಲಿ ವಿಶ್ವವಿದ್ಯಾಲಯದಲ್ಲಿ ನಾನು ವೃತ್ತ್ಯಾತ್ಮಕ (Professional) ಸಮಾಜಕಾರ್ಯದ ವಿದ್ಯಾರ್ಥಿಯಾಗಿದ್ದುದು 1956-58ರಲ್ಲಿ; ನನ್ನ ಸಹಪಾಠಿ ಕುಮಾರಿ ಬಾಲಾಗುಪ್ತಾ; ಆಕೆಯ ತಂದೆ ದೊಡ್ಡ ವ್ಯಾಪಾರಿ; ಆಕೆ ಸುಕೋಮಲ ವಾತಾವರಣದಲ್ಲಿ ಬೆಳೆದಾಕೆ; ಸಮಾಜಸೇವೆಯ ಹೆಸರಿನಲ್ಲಿ ಅಲ್ಲಿಲ್ಲಿ ಓಡಿಯಾಡುತ್ತಿದ್ದ ಗರಿಗರಿ ಸೀರೆಯ ನೀರೆಯರನ್ನು ಕಂಡ ಲಂಗದ ಹುಡುಗಿ ಗುಪ್ತಾಳಿಗೆ ತಾನೂ ಹಾಗಾಗಬೇಕೆಂಬ ಆಸೆ; ಆದ್ದರಿಂದ ದಿಲ್ಲಿ ವಿಶ್ವವಿದ್ಯಾಲಯದ ಸಮಾಜಕಾರ್ಯ ಸ್ನಾತಕೋತ್ತರ ಶಾಲೆಗೆ ಆಕೆ ಸೇರಿದಳು; ಆ ಶಾಲೆಯು ನಿಗದಿಗೊಳಿಸಿದ ಎಲ್ಲ ಕಾರ್ಯಕ್ರಮಗಳಲ್ಲಿ ತುಂಬಿದ ಆಸಕ್ತಿಯಿಂದ ಆಕೆ ಪಾಲ್ಗೊಳ್ಳತೊಡಗಿದಳು.
ಕ್ಷೇತ್ರಕಾರ್ಯದ ಪ್ರಾಮುಖ್ಯತೆ
ವೃತ್ತ್ಯಾತ್ಮಕ ಸಮಾಜಕಾರ್ಯ ಪ್ರಶಿಕ್ಷಣ (Training) ದ ಪ್ರಮುಖ ಅಂಗಗಳಲ್ಲಿ ಒಂದು ಕ್ಷೇತ್ರಕಾರ್ಯ. ವಾರದಲ್ಲಿ ಕನಿಷ್ಠ ಎರಡು ದಿನಗಳನ್ನು ಈ ಕಾರ್ಯಕ್ಕಾಗಿ ವಿದ್ಯಾರ್ಥಿಯು ಕಳೆಯಬೇಕು. ಕೊಳೆಗೇರಿಗಳಲ್ಲಿ (Slums), ಸಮಾಜಕಲ್ಯಾಣಕೇಂದ್ರಗಳಲ್ಲಿ (Social Welfare Centre / Agencies), ಕಚೇರಿ-ಕಾರ್ಖಾನೆಗಳಲ್ಲಿ, ಹಳ್ಳಿ ಸಮುದಾಯಗಳಲ್ಲಿ, ಇಂತಹವೇ ಆದ ವಿವಿಧ ಜನಜೀವನದ ಚಟುವಟಿಕೆಗಳ ಸಂಘಟನೆ-ವ್ಯವಸ್ಥೆಗಳಲ್ಲಿ (Organisation / Establishments) ಕಾರ್ಯ ಕೈಗೊಳ್ಳಬೇಕು. ಅಲ್ಲಿನ ಕಾರ್ಯಕ್ರಮಗಳನ್ನು, ರೀತಿ-ರಿವಾಜುಗಳನ್ನು ವೀಕ್ಷಿಸಿ, ಅರಿತುಕೊಳ್ಳಬೇಕು. ಅಲ್ಲಿನ ಜನರ ಮನೋದೃಷ್ಟಿಯನ್ನು ತಿಳಿದುಕೊಂಡು ಅದಕ್ಕೆ ವ್ಯತಿರಿಕ್ತವಾಗದ ಹಾಗೆ ನಡೆದುಕೊಳ್ಳಬೇಕು. ಅಲ್ಲಿನ ಸಮಸ್ಯೆಗಳನ್ನು ಅಂತೆಯೇ ಸಂಪನ್ಮೂಲಗಳನ್ನು ಗುರುತಿಸಬೇಕು. ಜನರೊಡಗೂಡಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ, ಅವುಗಳನ್ನು ಅನುಷ್ಠಾನಗೊಳಿಸಿ, ಅವುಗಳ ಪರಿಣಾಗಳನ್ನು ಅಳೆಯಬೇಕು. ಇದು ಕ್ಷೇತ್ರಕಾರ್ಯದ ಜೀವಾಳ.
 
ಸಂಯೋಗದ ಕೂಸು
ಅಲ್ಲಿ ವಿದ್ಯಾರ್ಥಿಗಳು ಅನೇಕ ಸಂದರ್ಭದಲ್ಲಿ ಇಕ್ಕಟ್ಟಿಗೆ ಸಿಕ್ಕಿಕೊಳ್ಳುತ್ತಾರೆ; ಗೊಂದಲದಲ್ಲಿ ಬೀಳುತ್ತಾರೆ; ದುಷ್ಟಶಕ್ತಿಗಳ ಬಲೆಗೆ ಬೀಳುತ್ತಾರೆ; ಶೋಷಣೆಯ ದೌರ್ಜನ್ಯದ ಘಟನೆಗಳಲ್ಲಿ ಮೂಕ ಸಾಕ್ಷಿಗಳಾಗಿರುತ್ತಾರೆ; ಮೋಸ-ವಂಚನೆಯ ಸಂಚಿಗೆ ಒಳಗಾಗುತ್ತಾರೆ; ತಮ್ಮ ಅರಿವಿಲ್ಲದೆಯೇ ವಿಪರೀತ ಪರಿಸ್ಥಿತಿಯ ಬಲಿಪಶುಗಳಾಗುತ್ತಾರೆ. ಆದುದರಿಂದ ಕ್ಷೇತ್ರಕಾರ್ಯದಲ್ಲಿ ಪ್ರತಿಯೊಂದು ಪ್ರಕ್ರಿಯೆಯಲ್ಲಿ ಅವರಿಗಿರಬೇಕಾದದ್ದು ಸದಾ ಎಚ್ಚರ, ಸ್ವಚ್ಛ ವಸ್ತುನಿಷ್ಠ ಕರ್ತವ್ಯಪ್ರಜ್ಞೆ ಮತ್ತು ಜನರ ಬಗೆಗಿನ ತಿಳಿಗಂಪನ (Empathy).

ಕುಮಾರಿ ಗುಪ್ತಾಳನ್ನು ದಿಲ್ಲಿಯ ಸುಪ್ರಸಿದ್ಧ ಝಂಡೇವಾಲ ಕೊಳೆಗೇರಿಗೆ ಕ್ಷೇತ್ರಕಾರ್ಯಕ್ಕಾಗಿ ನಮ್ಮ ಶಾಲೆಯವರು ಕಳುಹಿಸಿದರು. ಝಂಡೇವಾಲಾ ಕೊಳೆಗೇರಿಯು ಔದ್ಯೋಗೀಕರಣ, ನಗರೀಕರಣ ಮತ್ತು ರಾಜಕೀಯ ನಿರಾಶ್ರಿತರ ವಲಸೆಯ ಪ್ರಕ್ರಿಯೆಗಳ ಸಂಯೋಗದ ಕೂಸು. ತುರುಗಿದ ಗುಡಿಸಲುಗಳು, ಕಿರುವಗಲದ ಹಾವು ಸುತ್ತಿನ ಬೀದಿಗಳು, ಕೊಳೆ ಹರಿದು ಹರಡಿ ನಿಂತ ದುರ್ವಾಸನೆಯ ಕುಳಿಗೊಂಚಲುಗಳು, ಪಾಚಿಗಟ್ಟಿದ ಕೊಳೆನೀರ ಕಿರುಮಡುಗಳು, ಮಲವಿಸರ್ಜನೆಯ ಗುರುತಿನ ಹಿಕ್ಕೆಗಳು ನೋಡಿದಲ್ಲೆಲ್ಲಾ ರಾಶಿರಾಶಿ. ಬಿರಿದ ಹೊಟ್ಟೆಯ, ಸೊರು ಮೂಗಿನ, ಸಿಳ್ಳುಗಣ್ಣಿನ, ಕಿರುಚು ಬಾಯಿಯ, ಜೋಲು ಮೊರೆಯ ಮಕ್ಕಳು; ಹಸಿದ ಹೊಟ್ಟೆ, ಕೆದರು ತಲೆಯ, ನಾರು ಬಟ್ಟೆಯ ಜನಮಂದೆಗಳು; ಸ್ನಾನಕ್ಕೆ ನೀರಿಲ್ಲದೆ ಕೊಳೆಗೇರಿಯಂತೆ ಜನರ ದೇಹಗಳೂ ಹೊಲಸು ಹೊಲಸು.

ಇಂತಹ ಸಮುದಾಯದಲ್ಲಿ ಕೆಲಸ ಮಾಡುವುದಿರಲಿ, ಅದರಲ್ಲಿ ಒಮ್ಮೆಯಾದರೂ ಕಾಲಿಡುವುದು ಸಾಧ್ಯದ ಮಾತಲ್ಲ. ಈ ಕೊಳೆಗೇರಿಯನ್ನು ಕಂಡೊಡನೆಯೇ ತಾನಿರುವ ವಠಾರದ ನೆನಪಾಯಿತು ಕುಮಾರಿ ಗುಪ್ತಾಳಿಗೆ: ಅದು ಇದಕ್ಕೆ ತೀರ ವಿರುದ್ಧವಾದದ್ದು; ಅಗಲವಾದ, ನೇರವಾದ ಮತ್ತು ಸಿಮೆಂಟಿನಿಂದ ನಿರ್ಮಿತವಾದ ಉದ್ದುದ್ದನೆಯ ರಸ್ತೆಗಳು, ಕಸವನ್ನು ತುಂಬಲು ಅಲ್ಲಲ್ಲಿ ಇರಿಸಿರುವ ಡಬ್ಬಿಗಳು; ಮಹಡಿ ಮನೆಗಳು; ಸಾಲು ಸಾಲು ಮರಗಳು, ಆಟದ ಮೈದಾನ, ಸನಿಹದಲ್ಲಿಯೇ ನಾಲ್ಕಾರು ಹೆಜ್ಜೆಯಿರಿಸಿದರೆ ಹಸಿರು ಉದ್ಯಾನ; ಯಥೇಚ್ಛ ನೀರು; ಮಕ್ಕಳು ಅಭ್ಯಸಿಸಲು ಉಚ್ಚಮಟ್ಟದ ಅನುಕೂಲದವಾದ ಶಾಲೆಗಳು; ಇಸ್ತ್ರಿ ಮಾಡಿದ ಸಮವಸ್ತ್ರಧಾರಿ ನಗುನಗುವ ಆರೋಗ್ಯವಂತ ಮಕ್ಕಳು. ಇಂಥ ವಾತಾವರಣದಲ್ಲಿ ಹುಟ್ಟಿ ಪೋಷಿಸಲ್ಪಟ್ಟು ಬೆಳೆದು ಬಾಳುತ್ತಿರುವ ಬಾಲಾಗುಪ್ತಾ ಝಂಡೇವಾಲಾ ಕೊಳೆಗೇರಿಯಲ್ಲಿ ಕ್ಷೇತ್ರಕಾರ್ಯಕ್ಕೆ ಕಾಲಿಡಬೇಕಾಗಿತ್ತು.
 
ಬೃಹತ್ ಅಂತರ
ತಾನು ಬೆಳೆದು ಜೀವಿಸುತ್ತಿರುವ ವಠಾರಕ್ಕೂ ತಾನು ಕಾರ್ಯ ಕೈಗೊಳ್ಳಬೇಕಾಗಿರುವ ಕೊಳೆಗೇರಿಗೂ ಮೇಲ್ನೋಟಕ್ಕೇ ಕಾಣುವ ಬೃಹತ್ ಅಂತರವನ್ನು ಮನಗಂಡು ಕು. ಗುಪ್ತಾಳಿಗೆ ದಿಗ್ಭ್ರಮೆಯಾಯಿತು. ತಾನು ಅಲ್ಲಿಗೆ ಹೋಗಬೇಕಾಗುತ್ತದೆ, ತಾನು ಅಲ್ಲಿ ಇದ್ದು ಕೆಲಸ ಮಾಡಬೇಕಾಗುತ್ತದೆ ಎಂಬುದನ್ನು ನೆನೆದು ಆಕೆಗೆ ಭಯವಾಯಿತು. ಅಲ್ಲಿನ ಹೊಲಸಿನಲ್ಲಿ ತನ್ನ ಸುಕೋಮಲ ಪಾದಗಳನ್ನು ಇಡುವಾಗ ಆಕೆಯ ದುಃಖ ಕಣ್ಣೀರಾಗಿ ಉಕ್ಕಿ ಹರಿಯಿತು. ಇಲ್ಲಿ ಕಾಲಿಡಲಾರೆ; ಇಲ್ಲಿ ಕೆಲಸ ಮಾಡಲಾರೆ ಎಂದು ತಾನು ತನ್ನ ಉಸ್ತುವಾರಿ ಮಾರ್ಗದರ್ಶಕರಿಗೆ (Supervisor) ಹೇಳಿಬಿಡಬೇಕು, ಎಂದು ಆಲೋಚಿಸಿದಳು. ದಿಲ್ಲಿಯ ಹತ್ತಿರದ ಹಳ್ಳಿಗಳು ಈ ಕೊಳೆಗೇರಿಯಷ್ಟು ಅಧೋಗತಿಗೆ ಇಳಿದಿರಲಿಕ್ಕಿಲ್ಲ ಎಂದು ಆಕೆ ಭಾವಿಸಿದಳು. ತಾನೇಕೆ ಹಳ್ಳಿಗಳಿಗೆ ಕ್ಷೇತ್ರಕಾರ್ಯಕ್ಕಾಗಿ ಹೋಗಬಾರದು ಎಂದು ಚಿಂತಿಸಿದಳು. ಕ್ಷೇತ್ರಕಾರ್ಯದ ಕೇಂದ್ರವನ್ನು ಝಂಡೇವಾಲಾ ಕೊಳೆಗೇರಿಯಿಂದ ಬೇರೆಡೆಗೆ ಬದಲಿಸುವ, ತನ್ನ ಶಾಲೆಯ ಅಧಿಕಾರಿಗಳು ಒಪ್ಪದಿದ್ದರೆ ತಾನು ಸಮಾಜಕಾರ್ಯದ ಪ್ರಶಿಕ್ಷಣವನ್ನೇ ತೊರೆದುಬಿಟ್ಟು ಬೇರೆ ಯಾವುದಾದರೂ ಸಮಾಜವಿಜ್ಞಾನವನ್ನು ಆಯ್ದುಕೊಂಡು ಅಭ್ಯಸಿಸಿದರಾಯಿತು ಎಂದು ಬಗೆದಳು.
 
ಆಪ್ತ ಸಮಾಲೋಚನೆ
ತನ್ನ ಭಯ, ಆತಂಕ, ಆಲೋಚನೆ, ಯೋಜನೆ, ನಿರ್ಣಯ, ಇತ್ಯಾದಿಗಳನ್ನು ಆಕೆ ತನ್ನ ಮಾರ್ಗದರ್ಶಿ ಉಪಾಧ್ಯಾಯರ ಮುಂದಿರಿಸಿದಳು. ಸಮಾಜಕಾರ್ಯವನ್ನೇ ತಮ್ಮ ಜೀವನ ವೃತ್ತಿಯನ್ನಾಗಿಸಿಕೊಳ್ಳುವವರು ಕ್ಷೇತ್ರಕಾರ್ಯದಲ್ಲಿ ಬಂದೊದಗುವ ಆತಂಕಗಳನ್ನು ನಿವಾರಿಸಿಕೊಳ್ಳದೇ ಹೋದರೆ ಸಾರ್ಥಕವೇನು? ಸಮಾಜವು ಹೇಗೆ, ಏಕೆ ಮತ್ತು ಎಂಥ ಅಧೋಗತಿಗೆ ಇಳಿಯಬಹುದು ಎಂಬುದಕ್ಕೆ ಕೊಳೆಗೇರಿಯ ಸಮುದಾಯದಲ್ಲಿ ಸಿಗುವಷ್ಟು ಸಾಕ್ಷ್ಯಾಧಾರಗಳು ಬಹುಶಃ ಇನ್ನೆಲ್ಲೂ ಸಿಗುವುದಿಲ್ಲ. ಆದುದರಿಂದ ಸಮಾಜಕಾರ್ಯದಲ್ಲಿ ಅರ್ಪಣ ಮನೋಭಾವದಿಂದ ದುಡಿಯಬೇಕಾದವನಿಗೆ ಕೊಳೆಗೇರಿಯಂಥ ಸಮುದಾಯವು ಸಾಕಷ್ಟು ಸದವಕಶಾವನ್ನು ಒದಗಿಸಿಕೊಡುತ್ತದೆ. ಸಮಾಜಕಾರ್ಯಕರ್ತನ ವ್ಯಕ್ತಿತ್ವ ವಿಕಸನಕ್ಕೂ, ಆದರ್ಶ ರೀತಿಯಲ್ಲಿ ಅದು ರೂಪುಗೊಳ್ಳಲಿಕ್ಕೂ ಕೊಳೆಗೇರಿಯು ಸೂಕ್ತ ಪ್ರಯೋಗಾಲಯವಾಗಿದೆ, ಎಂದರು ಮಾರ್ಗದರ್ಶಕ ಶಿಕ್ಷಕರು; ಆಕೆಯ ಸಂದೇಹಗಳನ್ನು ವಿವರವಾಗಿ, ಸಮಾಧಾನವಾಗಿ ಚರ್ಚಿಸಿದರು; ಆಲೋಚನೆಯ, ತೊಡಕುಗಳ ನಾನಾ ಪದರುಗಳನ್ನು, ಪಲುಕುಗಳನ್ನು ಸ್ಪಷ್ಟವಾಗಿ ಪರಿಶೀಲಿಸಲು ಅವಕಾಶವನ್ನು ಕಲ್ಪಿಸಲಾಯಿತು; ನಿರ್ಭೀತಿಯಿಂದ ಬಿಚ್ಚುಮನಸ್ಸಿನಿಂದ ಚರ್ಚಿಸಲು ಕು. ಗುಪ್ತಾಳಿಗೆ ಸಾಕಷ್ಟು ಅವಕಾಶವನ್ನು ಅವರು ನೀಡಿದರು; ಆಳವಾದ ವಿಷಯಮಂಥನಕ್ಕೆ ಸೂಕ್ತ ಪ್ರಚೋದನೆ ಮತ್ತು ಪ್ರೋತ್ಸಾಹವನ್ನಿತ್ತರು.

ಸಮಾಜದ ರಚನೆ, ಅಲ್ಲಿನ ಸಮಸ್ಯೆಗಳು, ಸಮಸ್ಯೆಗೆ ಇರುವ ಕಾರಣಗಳು, ಸಮಾಜಕಾರ್ಯಕರ್ತನ ಪಾತ್ರದ ವ್ಯಾಪ್ತಿ ಮತ್ತು ಮಹತ್ವ, ಸಮಾಜಕಾರ್ಯದ ವಿದ್ಯಾರ್ಥಿಯು ಗಳಿಸಬೇಕಾದ ವೈಜ್ಞಾನಿಕ ಜ್ಞಾನ, ಪಡೆಯಬೇಕಾಗಿರುವ ವ್ಯಾವಾಹರಿಕ ಅನುಭವ, ಕರಗತ ಮಾಡಿಕೊಳ್ಳಬೇಕಾಗಿರುವ ವಿಧಾನ-ತಂತ್ರಗಳು, ರೂಪಿಸಿಕೊಳ್ಳಬೇಕಾಗಿರುವ ಕೌಶಲ್ಯಗಳು, ಬೆಳೆಸಿಕೊಳ್ಳಬೇಕಾಗಿರುವ ವ್ಯಕ್ತಿತ್ವ, ಇತ್ಯಾದಿಗಳೆಲ್ಲಾ ತರಂಗ ತರಂಗಗಳಾಗಿ, ಆದರೂ ಅಲ್ಲೋಲ ಕಲ್ಲೋಲಗಳಲ್ಲದ ರೀತಿಯಲ್ಲಿ, ಕು. ಗುಪ್ತಾಳ ಮನದೆದುರು ಸುಳಿದವು. ಆಕೆಯ ಅಂತರಂಗ ಈಗ ಮುದುಗೊಳ್ಳತೊಡಗಿತು; ಕರ್ತವ್ಯದ ಎಚ್ಚರ ಮೈದೋರಿತು; ಅದಮ್ಯ ಉತ್ಸಾಹ ಮರುಕಳಿಸಿತು; ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಧೈರ್ಯ ಮತ್ತು ವಿಶ್ವಾಸ ಅಂಕುರಿಸಿತು. ಇದೆಲ್ಲದರ ಪರಿಣಾಮವಾಗಿ ಕು. ಗುಪ್ತಾ ಝಂಡೇವಾಲಾ ಕೊಳೆಗೇರಿಯಲ್ಲಿ ಕ್ಷೇತ್ರಕಾರ್ಯಕ್ಕೆ ತೊಡಗಿದಳು.
 
ಸರಿದ ತೆರೆ
ಹೊಲಸಿನ, ವಿಕಾರದ, ಭಯೋತ್ಪಾದಕದ, ಜುಗುಪ್ಸೆಯನ್ನು ಹುಟ್ಟಿಸುವ ಭೂಮಾನವ ವಾತಾವರಣದ ಪರದೆಯನ್ನು ಕ್ರಮೇಣ ಕು. ಗುಪ್ತಾ ಸರಿಸತೊಡಗಿದಳು: ಕೊಳೆಗೇರಿ ಸರ್ವೇಕ್ಷಣವನ್ನು ಕೈಗೊಂಡಳು. ಈ ಕ್ರಮದಿಂದ ಆಕೆಗೆ ಆದದ್ದು ಮುಖ್ಯವಾಗಿ ಎರಡು ಲಾಭಗಳು:
  1. ಆ ಕೊಳೆಗೇರಿಯ ಸರಿಯಾದ ಸ್ವರೂಪದ ಚಿತ್ರವನ್ನು ಪಡೆದದ್ದು.
  2. ಅಲ್ಲಿನ ಕುಟುಂಬಗಳ, ಮುಖಂಡರ ಮತ್ತು ಜನಗಳ ಆತ್ಮೀಯ ಪರಿಚಯವನ್ನು ಗಳಿಸಿದ್ದುದು.

ಅಲ್ಲಿನ ಜನರೊಡನೆ ಅನುನಯ ಸಂಬಂಧವನ್ನು (Rapport) ನಿಧಾನವಾಗಿಯಾದರೂ ದೃಢವಾಗಿ ಸ್ಥಾಪಿಸಿ, ಬೆಳೆಸಿಕೊಂಡಳು. ಅಲ್ಲಿನ ಮಕ್ಕಳಲ್ಲಿ ನವುರನ್ನೂ, ಚೆಲುವನ್ನೂ, ಅಲ್ಲಿನ ವಯಸ್ಕರ ಕಣ್ಣಿನಲ್ಲಿ ಬೆಳೆಯಬೇಕೆಂಬ ಆಸೆಯನ್ನೂ, ಅಭೀಪಸ್ಸೆಯನ್ನೂ, ಅಲ್ಲಿನ ಹೆಂಗಳೆಯರ ಹೃದಯದಲ್ಲಿ ಮೈತ್ರಿಯನ್ನೂ, ಕಂಠದಲ್ಲಿ ಮಾಧರ್ಯ-ಮಾರ್ದವತೆಯನ್ನೂ, ಅವರೆಲ್ಲರ ಹಸ್ತಗಳಲ್ಲಿ ಸಹಕಾರವನ್ನೂ, ಅವರ ನಡತೆಯಲ್ಲಿ ಅಕುಟಿಲತೆಯನ್ನೂ, ನೇರವನ್ನೂ ಕು. ಗುಪ್ತಾ ಕಾಣತೊಡಗಿದಳು. ಅಮಾಯಕತೆ, ಮುಗ್ಧ ಮನೋಭಾವ, ಮುಚ್ಚು ಮರೆಯಿಲ್ಲದ ಸಂಬಂಧ ಅಲ್ಲಿನ ಸ್ಥಾಯೀಭಾವವೆಂಬಂತೆ ಆಕೆಗೆ ತೋರಿತು. ಕೆಸರಿನಲ್ಲಿ ಕಮಲವನ್ನು, ಕಮಲದಲ್ಲಿ ಗಂಧದ ಹುಡಿಯನ್ನು ಕಂಡಳು, ಆಸ್ವಾದಿಸಿದಳು. ತನ್ನ ವಠಾರದಲ್ಲಿನ ಜನರ ನಯ ವಿನಯದ ಹಿಂದಿರುವ ಅಮಾನವೀಯತೆ, ಕ್ರೌರ್ಯ, ವಂಚನೆ, ಶೋಷಣೆ, ಇತ್ಯಾದಿಗಳ ಅರಿವು ಆಕೆಗೆ ಆದಂತೆಲ್ಲಾ ಕೊಳೆಗೇರಿಯವರ ಒರಟು ತನದ ಅಂತರಂಗದಲ್ಲಿನ ಅತುಳವಾದ ಪ್ರೇಮ ಒಳಿತಲ್ಲವೆ, ಎನ್ನಿಸಿತು ಆಕೆಗೆ.
  
ಮಗುವಿನ ಪರಿಚಯ ಅದರ ತಾಯಿಯ ಪರಿಚಯಕ್ಕೆ, ತಾಯಿಯ ಪರಿಚಯ ಆಕೆಯ ಇಡಿಯ ಕುಟುಂಬಕ್ಕೆ, ಆ ಕುಟುಂಬದ ಮೂಲಕ ನೆರೆಯ ಕುಟುಂಬಗಳಿಗೆ, ಒಂದು ಗುಂಪಿನ ಸಂಪರ್ಕದಿಂದ ಇನ್ನೊಂದು ಗುಂಪಿನ ಆಂತರ್ಯಕ್ಕೆ, ಒಂದು ಕೆಲಸದ ಸೂತ್ರದಿಂದ ಮತ್ತೊಂದು ಕಾರ್ಯದ ಹಂದರಕ್ಕೆ ಆಕೆಯ ಸಂಚಾರ ಸಾಗಿತು. ವ್ಯಕ್ತಿಯ ವ್ಯಕ್ತಿತ್ವ, ಕುಟುಂಬದ ರಚನೆ, ಗುಂಪಿನ ವಿನ್ಯಾಸ, ಬಳಗದ ಹಬ್ಬು, ಆರ್ಥಿಕತೆಯ ಸ್ಥಿತಿಗತಿ, ಧಾರ್ಮಿಕ ವ್ಯವಸ್ಥೆಯ ರೂಪುರೇಖೆ, ಜನರ ಆಂತರ್ಯದ ಅಂಗವಾಗಿರುವ, ಆಗೀಗ ಅಭಿವ್ಯಕ್ತಗೊಳ್ಳುತ್ತಿರುವ, ಕಲೆ-ಸಾಹಿತ್ಯ-ಸಂಗೀತದ ಗತಿಬಿಂಬ, ಇಡಿಯ ಸಮುದಾಯದ ರಾಚನಿಕ-ಕ್ರಿಯಾತ್ಮಕತೆಯ ಸಂಕೀರ್ಣತೆ, ಇತ್ಯಾದಿಗಳೆಲ್ಲಾ ಆಕೆಯ ಒಳನೋಟಕ್ಕೆ ಸ್ಪಷ್ಟವಾಗತೊಡಗಿದವು. ಮಾನವಶಾಸ್ತ್ರ, ಸಮಾಜಶಾಸ್ತ್ರ, ಮನೋವಿಜ್ಞಾನ, ಪರಿಸರ ವಿಜ್ಞಾನಗಳ ಕೂಟ ಒಕ್ಕೂಟವಾಗಿ ಆಕೆಯ ಒಳಗನ್ನು ಬೆಳಗಿಸಿದುದರಿಂದ ಸಮಾಜಕಾರ್ಯಕರ್ತೆಯ ಕೈಗೆ ಬಲ ಬಂದಿತು.

ಆಸೆಯ ದೀಪ
ಆ ಕೊಳೆಗೇರಿಯು ಬಹುತೇಕ ಅನ್ಯರಾಷ್ಟ್ರ (ಪಶ್ಚಿಮ ಪಾಕಿಸ್ತಾನ) ದಿಂದ ವಲಸೆ ಬಂದು ನೆಲೆನಿಂತ ನಿರಾಶ್ರಿತರದಾಗಿತ್ತು. ಇದರಿಂದ ಅಲ್ಲಿನ ಸಾಮಾಜಿಕ ವ್ಯವಸ್ಥೆಯಾಗಲಿ, ಸಮುದಾಯ ಸಂಘಟನೆಯಾಗಲಿ ಇನ್ನೂ ಹಸಿ ಹಸಿಯಾಗಿಯೇ ಇತ್ತು, ಅಸ್ಥಿರತೆ ಸುಸ್ಪಷ್ಟವಾಗಿತ್ತು. ಸಮಾಜಕಾರ್ಯವು ಸಮುದಾಯದ ವಲಯದಲ್ಲಿ ನಡೆಸಲಾಗುತ್ತಿದ್ದರೂ ಅದಕ್ಕೊಂದು ಕೇಂದ್ರಸ್ಥಾನ ಬೇಕಾಗಿತ್ತು. ಕಿರಿಯದಾದರೂ ಪರವಾಗಿಲ್ಲ ಒಂದು ಕಟ್ಟಡ ಬೇಕಾಗಿತ್ತು. ಆಸುಪಾಸಿನಲ್ಲಿ ಒಂದು ಆಟದ ಬಯಲು ಬೇಕಾಗಿತ್ತು. ಈ ಎರಡೂ ಸಾಧ್ಯವಾದ ಮಟ್ಟಿಗೆ ಆ ಸಮುದಾಯದ ಮಧ್ಯದಲ್ಲಿಯೇ ಇರಬೇಕಾಗಿತ್ತು. ಕು. ಗುಪ್ತಾಳು ಅಲ್ಲಿನ ಇಂಚು ಇಂಚನ್ನೂ ಅಳೆಯುವಂತೆ ಪರಿಶೀಲಿಸಿದಳು; ಸೂಕ್ತ ಸ್ಥಳವಾವುದೆಂಬುದನ್ನು ಪರೀಕ್ಷಿಸಿದಳು; ಮುರುಕು ಗುಡಿಸಲೊಂದು ಭಜನೆಯ ಮಂದಿರವಾಗಿ ಉಪಯೋಗವಾಗುತ್ತಿದ್ದುದನ್ನು ಗುರುತಿಸಿದಳು; ಅದೇ ಪ್ರಸ್ತುತ ಮತ್ತು ಪ್ರಶಸ್ತ ಸ್ಥಳವೆಂಬ ಜನರ ಅಭಿಪ್ರಾಯಕ್ಕೆ ತನ್ನ ಸಮ್ಮತಿಯನ್ನು ಸೂಚಿಸಿದಳು; ಅದೇ ಗುಡಿಸಲು ಸಮುದಾಯದ ಕೇಂದ್ರವಾಗಿ ಮಾರ್ಪಾಟಾಯಿತು. ಹತ್ತಿರದಲ್ಲಿಯೇ ಇದ್ದ ವಿಶಾಲವಾದ, ಆದರೆ ಕೊಳೆನೀರು ನಿಂತ ಜಾಗವನ್ನು ಆಟದ ಮೈದಾನವೆಂದು ಸಾರಲಾಯಿತು. ಆ ಮುರುಕು ಕಿರು ಗುಡಿಸಿಲಿನಲ್ಲಿ ಹಿರಿಯ ಆಸೆಯ ದೀಪವನ್ನು ಹಚ್ಚಲಾಯಿತು. ಗುಪ್ತಾಳಿಗೆ ಶಿವಶರಣರ ವಚನಗಳ ಪರಿಚಯವೇನಾದರೂ ಇದ್ದಿದ್ದರೆ ಆಕೆಗೆ ಬಹುಶಃ ಈ ವಚನ ನೆನಪಾಗುತ್ತಿತ್ತು:

   ಮನೆ ನೋಡ ಬಡವರು,
   ಮನ ನೋಡಾ ಘನ.
   ಸೋಂಕಿನಲ್ಲಿ ಸುಖಿ,
   ಸರ್ವಾಂಗ ಕಲಿಗಳು.
   ಪಸರಕ್ಕನುವಿಲ್ಲ,
   ತತ್ಕಾಲಕ್ಕುಂಟು.
   ಕೂಡಲಸಂಗನ ಶರಣರು
   ಸ್ವತಂತ್ರ ಧೀರರು.

ಅಲ್ಲಿನ ಜನಗಳ ಮನೆಗಳೂ ಕಿರಿಯವು, ಹರಕು; ಅವರೂ ಬಡವರು; ಅವರಲ್ಲಿ ಪಸರಕ್ಕೆ, ಪ್ರದರ್ಶನಕ್ಕೆ, ಅನುಕೂಲವಿಲ್ಲ. ತತ್ಕಾಲಕ್ಕೆ ಉಂಟು ಎಂಬುದೂ ಒಂದು ದೃಷ್ಟಿಯಲ್ಲಿ ಅತಿಶಯೋಕ್ತಿಯಾದೀತೇನೂ! ಅಂತೂ ಕೊಳೆತು ನಿಂತ ಆ ನೀರಿನಲ್ಲಿ ಬದಲಾವಣೆಯ ಅಲೆ ಎದ್ದಿತು.

ಕು. ಗುಪ್ತಾ ದಿಲ್ಲಿ ಮುನಸಿಪಲ್ ಕಾರ್ಪೊರೇಶನ್ ಅಧಿಕಾರಿಗಳನ್ನು ಕಂಡು ದೂರದ ಮಣ್ಣನ್ನು ತರಿಸಿ, ಸಮುದಾಯ ಕೇಂದ್ರದ ಹತ್ತಿರದ ಕುಳಿಗಳನ್ನು ತುಂಬಿಸಿದಳು. ಆಟದ ಮೈದಾನವು ಮೈದಳೆದು ರೂಪುಗೊಂಡಿತು. ಮೊದಮೊದಲು ಹಿಂಜರಿಯುತ್ತಿದ್ದ ಮಕ್ಕಳು ಮುಂದುವರೆದು ಆಟದ ಮೈದಾನವನ್ನು ಸ್ವಚ್ಛಗೊಳಿಸಿದರು. ಅವರ ನವೀನ ಬೆಹೆನ್ (ಅಕ್ಕ) ಕಲಿಸಿದ ನಾನಾ ಆಟಗಳನ್ನು, ವಿವಿಧ ಹಾಡುಗಳನ್ನು ಕಲಿತರು; ಕಲಿತು ಆಡಿದರು, ಹಾಡಿದರು. ಮಕ್ಕಳ ಲವಲವಿಕೆಯನ್ನು ಕಂಡ ಹೆತ್ತವರು, ಹತ್ತಿರದವರು, ಬಂಧು-ಬಳಗದವರು, ಸಮುದಾಯದ ಇತರರು ಕುತೂಹಲದಿಂದ ಅಲ್ಲಿಗೆ ಹನಿಹನಿಯಾಗಿ, ಸಿವುಡು ಸಿವುಡಾಗಿ, ಕಲೆತರು, ಸುತ್ತಲೂ ನಿಂತರು, ನಿಂತು ವೀಕ್ಷಿಸಿದರು; ಖುಷಿಯಿಂದ ಕೈತಟ್ಟಿದರು, ಕೇಕೆ ಹಾಕಿ ನಕ್ಕರು.
ಮಕ್ಕಳ ಆಟದಿಂದ, ದೊಡ್ಡವರ ನೋಟದಿಂದ ಆರಂಭವಾದ ಕಾರ್ಯ ಕೇರಿಕೇರಿಯನ್ನು ಮನಮನವನ್ನು ಆವರಿಸತೊಡಗಿತು. ನೈರ್ಮಲ್ಯ ಹೊಸ ಕೈಕೆಲಸ, ಮನರಂಜನೆಯ ಕೂಟ, ಆರೋಗ್ಯ ತಪಾಸಣೆ, ವಿಚಾರಗೋಷ್ಠಿ.... ಹೀಗೆಯೇ ಹತ್ತಾರು ಚಟುವಟಿಕೆಗಳು. ಅಕ್ಕನವರು ಆಕೆಯ ಗೆಳತಿಯರನ್ನು, ಸಹಪಾಠಿಗಳನ್ನು, ಸಹಕಾರ್ಯಕರ್ತೆಯರನ್ನು ಇತರ ರೀತಿಯ ಕಲ್ಯಾಣ ಕಾರ್ಯದಲ್ಲಿ ನಿರತರಾದ ಜನರನ್ನು ಕರೆ ತಂದಳು. ಅವರನ್ನು ಕೊಳೆಗೇರಿ ನಿವಾಸಿಗಳಿಗೆ ಪರಿಚಯಮಾಡಿಸಿದಳು. ಅವರ ನೆರವಿನಿಂದ ಅಲ್ಲಿನವರ ಸಹಕಾರದಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸುವಲ್ಲಿ ನಿರತಳಾದಳು.

ಕು. ಗುಪ್ತಾಳ ಕೈ ಚಳಕದಿಂದ ದಿನದಿನವೂ ನವೀನ ದೃಶ್ಯ ಮೈದಳೆಯುತ್ತಿತ್ತು. ಅದು ಇನ್ನೂ ಹಲವಾರು ದೃಶ್ಯಗಳಿಗೆ, ಎಡೆಮಾಡಿಕೊಡುತ್ತಿತ್ತು. ಕ್ಷೇತ್ರಕಾರ್ಯದ ದಿನ ಯಾವಾಗ ಬೆಳಗಾದೀತು ಎನ್ನಿಸುತ್ತಿತ್ತು ಆಕೆಗೆ. ನಿಗದಿಯ ಪ್ರಕಾರ ವಾರಕ್ಕೆ ಹದಿನೈದು ತಾಸು ಕ್ಷೇತ್ರಕಾರ್ಯವನ್ನು ಕ್ರಮಬದ್ಧವಾಗಿ ಮಾಡಬೇಕಾಗುತ್ತಿತ್ತು. ಆದರೆ ಕು. ಗುಪ್ತಾ ಆ ಎರಡು ದಿನಗಳಲ್ಲಿ ಹದಿನಾರು ತಾಸಾದರೂ ಕೆಲಸ ಮಾಡುತ್ತಿದ್ದಳು. ಕೆಲವು ವಾರಗಳಲ್ಲಿ ಭಾನುವಾರವೂ ಕೊಳೆಗೇರಿಗೆ ಹೋಗಿ ಬರುತ್ತಿದ್ದಳು. ಬೇರೆ ದಿನಗಳಲ್ಲೂ ಆ ಕಡೆ ಬೇರೆ ಕೆಲಸಕ್ಕಾಗಿ ಆಕೆ ಹೋದಾಗ ಆ ಕೊಳೆಗೇರಿಗೆ ಕಾಲಿಟ್ಟು ಒಂದಿಬ್ಬರನ್ನು ಮಾತನಾಡಿಸಿಕೊಂಡು ಬಾರದಿದ್ದರೆ ಆಕಗೆ ಸಮಾಧಾನವಿಲ್ಲ. ಆಕೆಯ ಕೆಲಸವನ್ನು ಆಕೆಯ ತನ್ಮಯತೆಯನ್ನು ನೆನೆದರೆ ಬಸವಣ್ಣನ ಪೂಜೆಯ ನೆನಪಾಗುತ್ತದೆ. ಬಸವಣ್ಣ ಹೇಳುತ್ತಾರೆ:

   ವಾರವೆಂದರಿಯೆ,
   ದಿನವೆಂದರಿಯೆ!
   ಏನೆಂದರಿಯೆನಯ್ಯಾ,
   ನಾನು ಇರುಳೆಂದರಿಯೆ,
   ಹಗಲೆಂದರಿಯೆ
   ಏನೆಂದರಿಯೆನಯ್ಯಾ,
   ನಾನು ನಿಮ್ಮುವ ಪೂಜಿಸಿ,
   ಎನ್ನುವ ಮರೆದನು
   ಕೂಡಲ ಸಂಗಮದೇವ.

ಕ್ಷೇತ್ರಕಾರ್ಯದ ದಿನ ನಿಗದಿಯಾದ ವೇಳೆಗಿಂತ ಮೊದಲೇ ಕು. ಗುಪ್ತಾ ಕೊಳೆಗೇರಿಯಲ್ಲಿ ಹಾಜರ್. ಆಕೆಯ ನೀರೀಕ್ಷಣೆಯಲ್ಲಿಯೇ ಇರುವ ಮಕ್ಕಳು, ಮತ್ತೆ ಕೆಲವರು, ಸಂಜೆಯವರೆಗೂ ಕೆಲಸ. ಊಟಕ್ಕಾಗಿ ಹೋಗಿ ಬರುವಾಗಲೂ ಅಲ್ಲಿನ ಕೆಲಸದ ವಿನ್ಯಾಸದ ಬಗ್ಗೆ ಆಲೋಚನೆ. ಸಂಜೆಯಾದಾಗ ಮನೆಗೆ ಮರಳಲಾರದ ಮನಸ್ಸಿನಿಂದ ಕಾಲುಕಿತ್ತು ಇಡುವುದು. ಮುಸುಕಿನ ಮಬ್ಬಿನ ದಿಲ್ಲಿಯ ನವುರಾದ ಚಳಿಯ ಹವೆಯಲ್ಲಿ ಏನೋ ಪುಳಕ. ಆಕೆಯ ಎದೆಯಲ್ಲಿ ಕೊಳೆಗೇರಿಯ ಹತ್ತಿರದ ಇನ್ನೊಂದು ಕೊಳೆಗೇರಿಯಲ್ಲಿ ಮೋಹನದಾಸ ಕರಮಚಂದ ಗಾಂಧಿಯವರು ಉಳಿದುಕೊಳ್ಳುತ್ತಿದ್ದರೆಂಬುದು ಆಕೆಯ ಮನಸ್ಸಿನಲ್ಲಿ ಸುಳಿದಾಗ ಇತಿಹಾಸದ ನರುಗುಂಪು ಮರುಕಳಿಸಿದ ಭಾವ.
 
ಒಂದು ವರ್ಷದಲ್ಲಿ
ಒಂದು ವರ್ಷದ ಕೆಲಸದಿಂದ ಆಶ್ಚರ್ಯಕರ ಬದಲಾವಣೆ ಆ ಸಮುದಾಯದಲ್ಲಿ ಆಗಿತ್ತು. ಚರಂಡಿಯಲ್ಲಿ ಹೊಲಸು ನಿಲ್ಲದೆ ಹರಿದು ಹೋಗುತ್ತಿತ್ತು. ಕೊಳೆಯ ನೀರು ಮಲೆತು ನಿಂತ ಕುಳಿಗಳು ಸಮಮಟ್ಟಗೊಂಡಿದ್ದವು; ಮನೆ ಮನೆಯ ಅಂಗಳಗಳು ಸ್ವಚ್ಛವಾಗಿರತೊಡಗಿದವು; ಮನೆಯ ಒಳಗೆಲ್ಲಾ ಓರಣ ಮಿನುಗುತ್ತಿತ್ತು; ಬೆಳೆದ ಪ್ರತಿಯೊಂದು ಕೈ ಏನಾದರೂ ಉಪಯುಕ್ತ ಕಾರ್ಯದಲ್ಲಿ ತೊಡಗಿತ್ತು; ಹರಿದುದಾದರೂ ಶುಭ್ರವಾದ ಉಡಿಗೆಯಿಂದ ಮಕ್ಕಳು ಶಿಶುವಿಹಾರಕ್ಕೂ, ಶಾಲೆಗೂ ಹೋಗುತ್ತಿದ್ದರು. ವಯಸ್ಕರ ಶಿಕ್ಷಣದಲ್ಲಿ ಆಸಕ್ತಿ ತೋರತೊಡಗಿದರು; ಸಾರ್ವತ್ರಿಕ ದಾಕು ಹಾಕಿಸಿಕೊಳ್ಳುವುದು, ಕಾಯಿಲೆಯವರನ್ನು ಮುತುವರ್ಜಿಯಿಂದ ಆಸ್ಪತ್ರೆಗೆ ಸಾಗಿಸುವುದು ಸಾಮಾನ್ಯ ಕ್ರಮವಾಗತೊಡಗಿತು; ಹಬ್ಬಗಳನ್ನು ಸಾಮುದಾಯಿಕ ಸಂಘಟನೆಗಾಗಿ ಬಳಸಿಕೊಳ್ಳಲು ಆರಂಭವಾಯಿತು. ಹೀಗೆಯೇ ವೈವಿಧ್ಯಮಯ ಚಟುವಟಿಕೆಗಳು ಝಂಡೇವಾಲಾದ ರಾಚನಿಕ ಕ್ರಿಯಾತ್ಮಕ ಸ್ಥಿತಿಯ ಮಹತ್ತರ ಬದಲಾವಣೆಗೆ ಹಾದಿ ಮಾಡಿದ್ದವು.
 
ವಿದಾಯದ ಇಬ್ಬನಿ
ಕೊನೆಗೂ ಬಂದಿತು ಆ ದಿನ. ಅದು ಅಗಲಿಕೆಯ ದಿನ. ಕು. ಗುಪ್ತಾ ಆ ಕೊಳೆಗೇರಿಯಿಂದ ನಿರ್ಗಮಿಸುವ ಪ್ರಸಂಗ. ಸಮಾಜಕಾರ್ಯಕರ್ತನು ತನ್ನ ಅರ್ಥಿಯೊಡನೆ ಕಾರ್ಯನಿರತನಾಗಿರುವಾಗ ಕೊನೆಯ ಘಳಿಗೆಯ ಬಗ್ಗೆ ಮೊದಲಿನಿಂದಲೂ ಯೋಚಿಸಬೇಕಾಗುತ್ತದೆ. ಕಾರ್ಯಕರ್ತನಿಗೂ ಆ ಜನರಿಗೂ ಬೆಳೆದ ಸಂಬಂಧವು ಗಾಢವಾದಷ್ಟೂ ಒಂದು ದೃಷ್ಟಿಯಲ್ಲಿ ಕಷ್ಟವೇ. ಯಾಕೆಂದರೆ, ಅಂಥ ಸಂಬಂಧವನ್ನು ಮುರಿದುಕೊಂಡು ವಿದಾಯ ಹೇಳಿ ದೂರವಾಗುವುದು ಸುಲಭವಲ್ಲ.

ಕೊನೆಯ ದಿನದ ಬಗ್ಗೆ ಆ ಸಮುದಾಯದ ಮುಖಂಡರೂ ಮತ್ತಿತರರೂ ಕೂಡಿ ಸಮಾಲೋಚಿಸಿದರು. ಸಮುದಾಯದ ಕೇಂದ್ರವನ್ನು ತಳಿರು ತೋರಣಗಳಿಂದ ಅಲಂಕರಿಸಿದರು. ಆ ದಿನವಿಡೀ ಮಕ್ಕಳು ಆಟದ ಸ್ಪರ್ಧೆಯಲ್ಲಿ ಭಾಗವಹಿಸಿದರು. ಸಂಜೆ ಬೀಳ್ಕೊಡುಗೆಯ ಸಭೆಯನ್ನು ಜನರು ಏರ್ಪಡಿಸಿದರು. ದಿಲ್ಲಿಯಲ್ಲಿ ಸಾಮಾನ್ಯವಾಗಿ ಸಿಗುವ ಹೂ ಎಂದರೆ, ಚೆಂಡು ಹೂವು, ಪ್ರಫುಲ್ಲಿತವಾದ, ಬೊಗಸೆ ತುಂಬಬಹುದಾದ ಬಂಗಾರ ಬಣ್ಣದ ಅಕ್ಕಿ ಎಸಳಿನ ಆಯ್ದ ಚೆಂಡು ಹೂವುಗಳ ಆಳೆತ್ತರದ ಬಹುದೊಡ್ಡ ಹಾರವನ್ನು ಆ ಜನರು ತಯಾರಿಸಿರು. ಕು. ಬಾಲಾ ಗುಪ್ತಾಳೊ ತೆಳುದೇಹದ ಬಡಕಲು ಶರೀರ ಹುಡುಗಿ. ಆ ದೊಡ್ಡ ಹಾರವನ್ನು ಆ ಬೀಳ್ಕೊಡುಗೆಯ ಸಮಾರಂಭದಲ್ಲಿ ಆಕೆಯ ಕೊರಳಿಗೆ ಹಾಕಿದೊಡನೆ ಆಕೆ ಆ ಹಾರದ ಭಾರಕ್ಕೂ, ಆ ಜನರ ಕೃತಜ್ಞತೆಯ ಭಾರಕ್ಕೂ ಕುಸಿದು ಕುಳಿತಳು.
  
ಅನೇಕರು ಪ್ರಶಂಸೆಯ ಮಾತನಾಡಿದರು. ಆಕೆಯ ಬಗ್ಗೆ ಕವಿತೆ ರಚಿಸಿ, ಹಾಡಿದರು; ತಮಗೆ ತೋಚಿದ ರೀತಿಗಳಲ್ಲಿ ತಮ್ಮ ಕೃತಜ್ಞತೆಗಳನ್ನು ಹೇಳಿಕೊಂಡರು. ಕು. ಗುಪ್ತಾ ತನಗೆ ಜನರು ಅರ್ಪಿಸಿದ ಹಾರವನ್ನು ಹೊರಲಾರದೆ ಹೊತ್ತುಕೊಂಡು, ಗದ್ಗದ ಕಂಠೆಯಾಗಿ ಎದ್ದು ನಿಂತಳು. ಗಂಟಲು ಕಟ್ಟಿತು, ತುಟಿ ಅದುರಿದವು, ಕಣ್ಣೂ ಮಬ್ಬಾದವೂ, ನೀರು ಧಾರೆಯಾಗಿ ಎರಡೂ ಕೆನ್ನೆಗಳ ಮೇಲೆ ಹರಿಯಿತು.

ನಾನು ನಿಮ್ಮನ್ನು ಬಿಟ್ಟು ಅಗಲಿ ಹೋಗಲಾರೆ;
ಹೋಗಲಾರದೆ ಹೋಗುತ್ತಿರುವೆ.

ಇಷ್ಟು ಮಾತ್ರ ಆಕೆ ಹೇಳಿದಳು. ಇಷ್ಟು ಹೇಳಬೇಕಾದರೆ ಆಕೆ ಎಲ್ಲ ಶಕ್ತಿಯ ಪ್ರಯೋಗವಾಯಿತು. ಈ ಕೊಳೆಗೇರಿಗೆ ಕಾಲಿಡಲಾರದೆ ಕಾಲಿಡುವ ಮೊಟ್ಟಮೊದಲು ಉದುರಿದ ಬಾಷ್ಪಕ್ಕೂ, ಕಾಲ್ತೆಗೆಯಲಾರದೆ ಕಾಲ್ತೆಗೆಯುವ ಈ ಇಂದು ಹರಿಸಿದ ಬಾಷ್ಪಕ್ಕೂ ಎಷ್ಟು ಅಂತರ! ಈ ಎರಡರ ನಡುವೆ ಆದ ಮಾನವ ಸಂಬಂಧಗಳ ಸೇತು ಬಂಧನ ಮಧುರ ಯಾತನೆಯಲ್ಲವೇ? (7.12.1980)
 
ಡಾ.ಎಚ್.ಎಂ. ಮರುಳಸಿದ್ಧಯ್ಯ
ಆಕರ: ದಿಗ್ಭ್ರಾಂತ ಸಮಾಜಕ್ಕೆ ಬೆಳಕಿನ ದಾರಿ:
ಸಮಾಜಕಾರ್ಯ, ಸಂಪುಟ ಒಂದು
ಅರಿವಿನ ಆಳ ಗ್ರಂಥದಿಂದ ಆಯ್ದ ಭಾಗ
0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
+91-9980066890
+91-8310241136
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)