SKH
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
SKH

ಗಾಂಧೀ ವಿಚಾರ ಪರಂಪರೆಯಲ್ಲಿ ಸಮಾಜಸೇವೆ

7/6/2017

0 Comments

 
ಸಮಾಜಸೇವೆ ಎನ್ನುವ ಶಬ್ದ ಬಹಳ ಕಾಲದಿಂದ ನಮ್ಮ ದೇಶದಲ್ಲಿ ಪ್ರಚಾರದಲ್ಲಿತ್ತು. ಈಗಲೂ ಇದೆ. ಅದು ಪರಂಪರಾಗತವಾಗಿ ಬಂದ ಒಂದು ಕಲ್ಪನೆ.  ಅತಿ ಪ್ರಾಚೀನ ಕಾಲದಲ್ಲಿ, ಸುಮಾರು ನಾಲ್ಕುಸಾವಿರ ವರ್ಷಗಳಿಗಿಂತಲೂ ಹಿಂದೆ, ಅಲೆಮಾರಿ ಜೀವನ ಕ್ರಮೇಣ ಹೈನುಗಾರಿಕೆ, ಕೃಷಿ ಆಧಾರಿತ ಜೀವನಕ್ರಮವಾಗಿ ಬದಲಾವಣೆಗೊಂಡು, ಜನಸಮುದಾಯ ಒಂದು ಕಡೆಗೆ ನಿಲ್ಲುವಂತಾಯಿತು. ಜನಪದಗಳು ಅಸ್ತಿತ್ವಕ್ಕೆ ಬಂದವು, ಈ ಸಂದರ್ಭದಲ್ಲಿ ಸಂಕಟದಲ್ಲಿರುವವರಿಗೆ ಸಹಾಯ ಮಾಡಲು ವೈಯಕ್ತಿಕ ದಾನ, ಕ್ರಮೇಣ ದಾನಧರ್ಮ, ದಾನ ಸಂಹಿತೆಗಳು ನಿರ್ಮಾಣವಾದವು. ಕಾಲಕ್ರಮದಲ್ಲಿ ಆಧುನಿಕಯುಗ ಪ್ರಾರಂಭವಾದಾಗ, ಸಾರ್ವಜನಿಕ ಕಾರ್ಯಕ್ಷೇತ್ರದಲ್ಲಿ ಕೆಲವು ಗಣ್ಯ ವ್ಯಕ್ತಿಗಳಿಂದ  ಆಗ ಪ್ರಚಾರದಲ್ಲಿದ್ದ ಧರ್ಮಪ್ರೇರಿತವೆಂದು ನಂಬಲಾಗಿದ್ದ ಸಾಮಾಜಿಕ ದುಷ್ಟಾಚಾರಗಳನ್ನು, ಪದ್ಧತಿಗಳನ್ನು ನಿವಾರಿಸಿ ಸಂಕಷ್ಟಗೀಡಾಗಿದ್ದ ಜನರನ್ನು, ಮುಖ್ಯವಾಗಿ ಮೇಲ್ಜಾತಿ, ಮೇಲ್ವರ್ಗದ ವಿಧವೆಯರನ್ನು ರಕ್ಷಿಸಲು ಸಮಾಜಸುಧಾರಣಾ ಕಾರ್ಯವನ್ನು ಪ್ರಾರಂಭಿಸಿದರು. ಇವರಲ್ಲಿ ಪ್ರಮುಖರೆಂದರೆ ರಾಮ ಮೋಹನ್‍ರಾಯ, ಈಶ್ವರಚಂದ್ರ ವಿದ್ಯಾಸಾಗರ, ಶಶಿಪಾದ ಬ್ಯಾನರ್ಜಿ ಬಂಗಾಳದಲ್ಲಿ, ಎಂ.ಜಿ. ರಾನಡೆ, ರಾ.ಕೃ. ಭಂಡಾರಕರ, ಜಸ್ಟೀಸ್ ಚಂದಾವರಕರ, ಜ್ಯೋತಿರಾವ್‍ಫುಲೆ, ಪಂಡಿತಾ ರಮಾಬಾಯಿ ಮುಂಬಯಿ ಪ್ರಾಂತದಲ್ಲಿ, ಇದೇ ಸಮಯದಲ್ಲಿ ರಾಷ್ಟ್ರೀಯತಾ ಭಾವನೆ ದೇಶದಲ್ಲಿ ಹರಡತೊಡಗಿತ್ತು. ಸಮಾಜಸುಧಾರಣೆಯಿಂದ ಜನರಲ್ಲಿ ಭಿನ್ನಾಭಿಪ್ರಾಯ, ಒಡಕು ಆಗುವುದರಿಂದ, ರಾಷ್ಟ್ರೀಯತೆಗೆ ಅತ್ಯವಶ್ಯವಾದ ಜನರೆಲ್ಲರ ಒಗ್ಗಟ್ಟಿಗೆ, ಐಕ್ಯತೆಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಸ್ವಾತಂತ್ರ ಬಂದ ನಂತರ ಸಮಾಜಸುಧಾರಣಕಾರ್ಯ ಪ್ರಾರಂಭಿಸಬೇಕು ಎಂದು ಕೆಲವರ ವಾದ. ಈ ಗುಂಪಿನಲ್ಲಿ ಪ್ರಮುಖರೆಂದರೆ ಬಾಲಗಂಗಾಧರ ತಿಲಕ.
ದಕ್ಷಿಣ ಆಫ್ರಿಕಾದಿಂದ ಸ್ವದೇಶಕ್ಕೆ ವಾಪಸ್ಸಾದ ನಂತರ, ಅತ್ಯಲ್ಪ ಸಮಯದಲ್ಲಿಯೇ-ಸುಮಾರು 1920ರ ದಶಕದಲ್ಲಿ ಮೋಹನದಾಸ ಗಾಂಧಿ ಆಗಿನ ಅವಿಭಾಜ್ಯ ದೇಶದ (ಬ್ರಿಟಿಶ್ ಇಂಡಿಯಾ) ಅತ್ಯುನ್ನತ, ಅತಿ ಪ್ರಭಾವಿ ನಾಯಕನಾಗಿ ಹೊರಹೊಮ್ಮಿದರು-ಸಮಾಜ ಸುಧಾರಕನಾಗಿ, ಸ್ವಾತಂತ್ರ್ಯ ಸೇನಾನಿಯಾಗಿ. ಗಾಂಧೀಜಿ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ, ಆಂದೋಲನಕ್ಕಾಗಿ ನಿಯೋಜಿಸಿದ ಕಾರ್ಯಕ್ರಮದಲ್ಲಿ ರಾಜಕೀಯ ಕಾರ್ಯಕ್ರಮ ಹಾಗೂ ಸಮಾಜಸುಧಾರಣಾ ಕಾರ್ಯಕ್ರಮ ಎರಡನ್ನೂ ಸೇರಿಸಲಾಗಿತ್ತು. ಒಂದು ಮೊದಲು ಇನ್ನೊಂದು ನಂತರ ಈ ವಾದ ವಿವಾದ ಗಾಂಧೀಜಿಯಿಂದ ಮುಕ್ತಾಯವಾಯಿತು, ಗಾಂಧೀಜಿಯ ಆದರ್ಶ ವಿಚಾರ ಸಮುಚ್ಚಯದಲ್ಲಿ (Ideology) ಸತ್ಯ ಮತ್ತು ಅಹಿಂಸೆ, ಸಾರ್ವಕಾಲಿಕ, ಸರ್ವಸಾಂದರ್ಭಿಕ, ಪ್ರಶ್ನಾತೀತ ಮೌಲ್ಯಗಳು (Absolute Values) ಇವನ್ನು ಪಾಲಿಸುತ್ತ ವೈಯಕ್ತಿಕ, ಸಾಮೂಹಿಕ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವದು, ಜನಹಿತಕ್ಕೆ ವಿರೋಧವಾದ ಕಾನೂನುಗಳನ್ನು ಉಲ್ಲಂಘಿಸುವುದು-ಉದಾಹರಣೆಗೆ: ಕರನಿರಾಕರಣೆ, ಸರಕಾರದ ಅನುಮತಿ ಇಲ್ಲದೆ ಉಪ್ಪಿನ ಉತ್ಪಾದನೆ, ಇತ್ಯಾದಿ., ಈ ಎಲ್ಲ ಕಾರ್ಯಗಳ ಪರಿಣಾಮವಾಗಿ ಬಂಧಿತರಾಗಿ ಜೇಲಿಗೆ ಕಳಿಸಿದರೆ, ವಿರೋಧಿಸದೆ ಜೇಲುವಾಸ ಮಾಡುವುದು - ಇವೆಲ್ಲ ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ್ದು, ಇನ್ನೊಂದು ರಚನಾತ್ಮಕ ಕಾರ್ಯಕ್ರಮ, ಚರಖಾದಿಂದ ನೂಲು ತೆಗೆಯುವುದು, ಕೈಮಗ್ಗದಿಂದ ಖಾದಿ ಬಟ್ಟೆ ತಯಾರಿಕೆ, ಹಿಂದೀ ಭಾಷೆಯ ಪ್ರಚಾರ (ಸಂಪರ್ಕ ಭಾಷೆಯಾಗಿ) ಗ್ರಾಮೀಣ ಉದ್ಯೋಗಗಳ ಪುನರುಜ್ಜೀವನ, ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಗ್ರಾಮೀಣ ಜನರಿಗೆ ತಿಳಿಹೇಳಿ, ಸ್ವತಃ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡು, ಜನರಿಗೆ ಆದರ್ಶಪ್ರಾಯರಾಗಿ, ಅವರನ್ನು ಈ ಕೆಲಸಕ್ಕೆ ಪ್ರೇರೇಪಿಸುವುದು ಇತ್ಯಾದಿ., ಗಾಂಧಿವಿಚಾರದಿಂದ ಪ್ರಭಾವಿತರಾದ ಸ್ವಾತಂತ್ರ್ಯ ಆಂದೋಲನದಲ್ಲಿ ಭಾಗವಹಿಸಿದ ಕೆಲವರು ರಾಜಕೀಯ ಕ್ಷೇತ್ರದಲ್ಲಿಯೇ ದುಡಿದರೆ ಮತ್ತೆ ಕೆಲವರು ರಚನಾತ್ಮಕ ಕಾರ್ಯದಲ್ಲಿ ನಿರತರಾದರು. ಹಿಂದೆ ರಚನಾತ್ಮಕ ಕಾರ್ಯ (Construction Work) ಎಂದು ವರ್ಣಿಸಲಾದ ಕಾರ್ಯ, ಕ್ರಮೇಣ ಬದಲಾಗಿ ವಿನೋಬಾರ ನೇತೃತ್ವದಲ್ಲಿ ಸರ್ವೋದಯ ಚಳವಳಿಯಾಗಿ ಪರಿವರ್ತನೆಗೊಂಡಿತು. ಭೂದಾನ, ಗ್ರಾಮದಾನ, ಬುದ್ಧಿದಾನ, ಜೀವನದಾನ ಇತ್ಯಾದಿ., ಬಳಕೆಯಲ್ಲಿ ಬಂದವು. ಸರ್ವೋದಯ ಆಂದೋಲನದ ಧ್ಯೇಯ, ಶೋಷಣ ರಹಿತ, ಸರ್ವತೋಮುಖ ಅಭಿವೃದ್ಧಿಯ ಅಂತ್ಯೋದಯಕ್ಕೆ ಒತ್ತುಕೊಟ್ಟು, ಸರ್ವೋದಯ ಸಮಾಜದ ರಚನೆ, ಇದಕ್ಕೆ ಕಾರ್ಯವಿಧಾನಗಳಾಗಿ ಲೋಕಶಕ್ತಿಯ ಸೃಷ್ಟಿ, ಸಾಮೂಹಿಕ ಕಾರ್ಯಾಚರಣೆ (Social Action). ಜನರನ್ನು ಸಂಘಟಿಸಿ ಆತ್ಮಬಲ ವಿಶ್ವಾಸ ತುಂಬಿ, ಅನ್ಯಾಯವನ್ನು ಲೋಕಶಕ್ತಿಯ ಬಲ ಪ್ರದರ್ಶನದಿಂದ ವಿರೋಧಿಸಿ, ಸರ್ವಜನರ ಕಲ್ಯಾಣಕ್ಕಾಗಿ, ಅಭಿವೃದ್ಧಿಗಾಗಿ ಕಾರ್ಯನಿರತರಾಗುವುದು ಸರ್ವೋದಯ ಸಮಾಜವನ್ನು ಅಸ್ತಿತ್ವದಲ್ಲಿ ತರುವುದಕ್ಕೆ ಶ್ರಮಿಸುವುದು.

ಸಮಾಜಸೇವೆಗಾಗಿ ಗಾಂಧಿಜೀಯವರ ವಿಚಾರ ಪರಂಪರೆಯನ್ನು ವಿಸ್ತರಿಸಿ ಮುಂದುವರಿದ ಕಾರ್ಯಕ್ರಮಕ್ಕೆ ಕೆಲವು ಕಾರ್ಯ ಸೂತ್ರಗಳು ಅಸ್ತಿತ್ವದಲ್ಲಿ ಬಂದವು. ಇದನ್ನು ನಾನು ಪಂಚಸ್ವ ಸೂತ್ರಗಳೆಂದು ವರ್ಣಿಸುತ್ತೇನೆ. ಇವು ಹೀಗಿವೆ: ಸ್ವರಾಜ, ಸ್ವದೇಶಿ, ಸ್ವ-ಅವಲಂಬನೆ (ಸ್ವಾವಲಂಬನೆ), ಸ್ವ-ಅನುಭವ (ಸ್ವಾನುಭವ) ಮತ್ತು ಸ್ವ-ಅಧ್ಯಾಯ (ಸ್ವಾಧ್ಯಾಯ). ಇವುಗಳನ್ನು ವಿವರಿಸುವ ಪ್ರಯತ್ನ ಮಾಡುತ್ತೇನೆ.
 
ಸ್ವರಾಜ
ಸ್ವಾತಂತ್ರ ಆಂದೋಲನದ ಸಮಯದಲ್ಲಿ ಇದನ್ನು ಒಂದು ರಾಜಕೀಯ ಧ್ಯೇಯವೆಂದು ಪರಿಗಣಿಸಲಾಗುತ್ತಿತ್ತು. ಆದರೆ ಇದಕ್ಕೆ ವ್ಯಾಪಕ ಅರ್ಥವಿದೆ. ಸ್ವರಾಜ ಎಂದರೆ ಒಬ್ಬ ವ್ಯಕ್ತಿಯಾಗಲಿ, ಗುಂಪಾಗಲಿ, ಸಮುದಾಯವಾಗಲಿ, ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸುವ ಹಕ್ಕು, ಅಧಿಕಾರ ಇದೆ ಎಂದು ನಂಬಿ, ಅದನ್ನು ಸಂದರ್ಭೋಚಿತವಾಗಿ ಚಲಾಯಿಸುವುದು. ವೃತ್ತೀಯ ಸಮಾಜಕಾರ್ಯ ಸಾಹಿತ್ಯದಲ್ಲಿ ಇದನ್ನು ಸ್ವಯಂ ನಿರ್ಣಯ ತತ್ತ್ವ ಎಂದು ಹೇಳಲಾಗುತ್ತದೆ. ಸೇವಾರ್ಥಿಗೆ (Client) ತನ್ನ ಜೀವನಕ್ಕೆ ಸಂಬಂಧಿಸಿದ ನಿರ್ಣಯ, ತನ್ನ ಸಮಸ್ಯೆಗಳಿಗೆ ಯೋಗ್ಯ ಪರಿಹಾರವನ್ನು ವೃತ್ತೀಯ ಸಮಾಜಕಾರ್ಯಕರ್ತರ ಸಲಹೆ, ಸಹಾಯದಿಂದ ಪಡೆದುಕೊಳ್ಳುವುದು.
 
ಸ್ವದೇಶಿ
ಸ್ವಾತಂತ್ರ ಚಳವಳಿಯ ಸಮಯದಲ್ಲಿ ಸ್ವದೇಶಿ ಪ್ರಚಾರ ಮಾಡಿದಾಗ ನನ್ನ ಬಾಲ್ಯದಲ್ಲಿ ಕೇಳಿದ ಜನಪ್ರಿಯ ಗೀತೆಯ ಸಾಲು ಹೀಗಿದೆ: ಹಾಕು ಬೆಂಕಿಲಿ, ಉರಿಲಿ ಧಗ ಧಗ, ಧರಿಸು ಖಾದಿಯವಸ್ತ್ರವಾ, ಮಾತಾ, ದೇಶ ಹಿತಾ... ಇಂಗ್ಲೆಂಡಿನಲ್ಲಿ ತಯಾರಾದ ಮಿಲ್ ಬಟ್ಟೆಗಳ ಪೋಷಾಕನ್ನು ತ್ಯಜಿಸಿ, ಅವನ್ನು ಸುಟ್ಟು, ಸ್ವದೇಶಿ ಉತ್ಪಾದನೆಯಾದ ಖಾದಿ ಉಡುಪನ್ನು ಧರಿಸುವುದು ಸ್ವದೇಶಿಯ ಪ್ರತೀಕ. ಇದನ್ನು ಇಷ್ಟಕ್ಕೇ ಸೀಮಿತವಾಗಿಸಿದರೆ, ಇದು ಸಂಕುಚಿತ ಪರಿಕಲ್ಪನೆ, ಸಾಂಕೇತಿಕ ಕಾರ್ಯವಾಗುತ್ತದೆ. ಆದರೆ ಇದಕ್ಕೆ ವ್ಯಾಪಕ ಅರ್ಥವಿರುವ ಸಾಧ್ಯತೆ ಇದೆ. ಅದನ್ನು ಇಂಗ್ಲಿಷಿನಲ್ಲಿ 'Indigenous' ಎಂದು ಹೇಳಲಾಗುತ್ತದೆ. ಸಮಾಜಸಸೇವೆಯ ಸಂದರ್ಭದಲ್ಲಿ ಸ್ವದೇಶೀ ಸಂಸ್ಕೃತಿಯನ್ನು ಚೆನ್ನಾಗಿ ಅರಿತು, ಅದಕ್ಕೆ ಅನುಗುಣವಾಗಿ ಸಮಾಜಸೇವೆ ಮಾಡುವುದು.

ಪಾಶ್ಚಾತ್ಯ ದೇಶಗಳಲ್ಲಿ (ಅಮೆರಿಕೆಯಲ್ಲಿ) ಹುಟ್ಟಿ ಅಲ್ಲಿಯ ಸಂಸ್ಕೃತಿ, ಪರಿಸರದಿಂದ ಪ್ರಭಾವಿತವಾಗಿ ಅಲ್ಲಿಯ ಮೌಲ್ಯಗಳ, ಸೂತ್ರಗಳ ಕಾರ್ಯಾಚರಣೆಯ ಅಂಧಾನುಕರಣೆ ಇಂದು ವ್ಯಾಪಕವಾಗಿ ವೃತ್ತೀಯ ಸಮಾಜಕಾರ್ಯ ಶಿಕ್ಷಣ, ತರಬೇತಿ, ಕಾರ್ಯಾಚರಣೆಯಲ್ಲಿ ಹರಡಿಕೊಂಡಿದೆ. ಇದೊಂದು ವಿಷಾದನೀಯ ಪರಿಸ್ಥಿತಿ. ಇದರ ಅರ್ಥ ನಾವು ಪರಸಂಸ್ಕೃತಿಯ ಪ್ರಭಾವದಿಂದ ಸಂಪೂರ್ಣ ಮುಕ್ತರಾಗಬೇಕು, ಒಂದು ರೀತಿಯ ಕೂಪಮಂಡೂಕ ಮನೋವೃತ್ತಿಯವರಾಗಬೇಕೆಂದಲ್ಲ. ಗಾಂಧೀಜಿಯವರೇ ಹೇಳಿದಂತೆ - ಸರ್ವದಿಕ್ಕಿನಿಂದ ಬದಲಾವಣೆಯ ಗಾಳಿ ನನ್ನ ಮೇಲೆ ಬೀಸಲಿ, ಆದರೆ ಅದು ನನ್ನ ಕಾಲು ಜಾರಿಸಿ ತಳ್ಳಬಾರದು. ನಮ್ಮ ಕಾಲು ಭದ್ರವಾಗಿ ನಮ್ಮ ನೆಲದ ಮೇಲೆ ನಿಂತಿರಬೇಕು. ನಮ್ಮ ಸಂಸ್ಕೃತಿ, ಪರಂಪರೆ, ಜನಜೀವನ ಪದ್ಧತಿ, ಸಾಮಾಜಿಕ ವ್ಯವಸ್ಥೆ, ಮಾನವೀಯ ಸಂಬಂಧಗಳು, ಇವುಗಳನ್ನೆಲ್ಲ ಅರಿತುಕೊಳ್ಳಬೇಕು, ಇವು ಸದಾ ಬದಲಾಗುತ್ತಿರುತ್ತವೆ; ಚಲನಹೀನವಲ್ಲ, ಚಲನಶೀಲ ಸಾಮಾಜಿಕ ಪ್ರಕ್ರಿಯೆ. ಇವು ನಮಗೆ ಹಳೆಯ, ಹಳಸಲಾದ ಮಸ್ತಕಗಳಿಂದ, ವಿದ್ವತ್‍ಕ್ಷೇತ್ರದ ವಿದ್ವಾಂಸರ ಗ್ರಂಥ ಮತ್ತು ಉಪದೇಶಗಳಿಂದ ಲಭ್ಯವಾಗುವುದಿಲ್ಲ. ಇದಕ್ಕೆ ಸ್ವ-ಅನುಭವ, ಸ್ವ-ಅಧ್ಯಾಯ, ಅತ್ಯವಶ್ಯಕ. ಇದನ್ನು ಮುಂದೆ ವಿವರಿಸಲಾಗಿದೆ.
 
ಸ್ವಾವಲಂಬನೆ
ಸಮಾಜಕಾರ್ಯ, ಸೇವೆ ಸಹಾಯಾರ್ಥಿಗಳನ್ನು ಸ್ವಾವಲಂಬಿಗಳಾಗಿ ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರ ಕಂಡುಕೊಳ್ಳುವ ವಿಚಾರ ಶಕ್ತಿ, ಅದರ ಆಧಾರದ ಮೇಲೆ ಜೀವನ ಕ್ರಮವನ್ನು ನಿರ್ಧರಿಸಿ, ಕಾರ್ಯೋನ್ಮುಖರಾಗಿ ಸಫಲ, ಸಂತೃಪ್ತ ಜೀವನ ನಡೆಸುವದಕ್ಕೆ ಯೋಗ್ಯರಾಗಲು, ಸಶಕ್ತರಾಗಲು ಧೈರ್ಯ-ಸ್ಥೈರ್ಯ ಪಡೆದುಕೊಳ್ಳುವಂತೆ ಸಮಾಜಸೇವಕರು ಕಾರ್ಯಾಚರಣೆ ಮಾಡಬೇಕು. ಜನರನ್ನು ಪರಾವಲಂಬಿಗಳಾಗದಂತೆ ಜೀವಿಸಲು ಸರ್ವಶಕ್ಯ ಪ್ರಯತ್ನ ಮಾಡುವಂತೆ ಪ್ರಚೋದನೆ ನೀಡಬೇಕು.
 
ಸ್ವಾನುಭವ
ಹಿಂದೊಮ್ಮೆ ಸಮಾಜಕಾರ್ಯಕ್ಕೆ ಸಂಬಂಧಿತ ಜ್ಞಾನದ ಉಗಮ, ಅದರ ಸೆಲೆ ಏನು ಎಂದು ವಿಚಾರಿಸಲು- ಗಾಂಧೀಜಿ ಹಾಗೂ ಮಾವೊ ಝೆಡುಂಗ್ ಅವರ ಲೇಖನಗಳನ್ನು ಆಳವಾಗಿ ಅಧ್ಯಯನ ಮಾಡಿ ಒಂದು ಲೇಖನ ಬರೆದು ಪ್ರಕಟಿಸಿದೆ. ಅದು ಸಮಾಜಕಾರ್ಯ ಶಿಕ್ಷಣ ಕ್ಷೇತ್ರದ ಅಧ್ಯಾಪಕ ಮತ್ತು ಬರಹಗಾರರ ಗಮನಕ್ಕೆ ಬರಲಿಲ್ಲ. ಈ ಇಬ್ಬರು ಮಹಾನ್ ವ್ಯಕ್ತಿಗಳು ಒತ್ತಿ ಹೇಳಿದ್ದು- ಜ್ಞಾನಕ್ಕೆ ಅತ್ಯವಶ್ಯಕ ಅನುಭವ. ಅನುಭವ ಆಧಾರಿತ, ಅನುಭವ ವೇದ್ಯ ಜ್ಞಾನ ಬಹುಮೂಲ್ಯ, ಪ್ರಸ್ತುತ.

ಪ್ರಾರಂಭದಲ್ಲಿ ಸರ್ವೋದಯ ಕಾರ್ಯಕರ್ತರಿಗೆ ಸಾಮಾನ್ಯವಾಗಿ ತರಬೇತಿ ಇರಲಿಲ್ಲ-ಆವಶ್ಯಕತೆ ಇದೆ ಎಂದೂ ಅನಿಸಲಿಲ್ಲ. ಇದು ಆವಶ್ಯಕ ಎಂದು ಪರಿಗಣಿಸಿ ಸರ್ವೋದಯ ಯುಗ ಪ್ರಾರಂಭವಾದ ಮೇಲೆ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ತರಬೇತಿ ಕಾರ್ಯಕ್ರಮ ಪ್ರಾರಂಭವಾದರೂ, ಅದಕ್ಕೆ ಹಲವಾರು ಕಾರಣಗಳಿಂದ ಮಾನ್ಯತೆ, ಮಹತ್ವ ಸಿಗಲಿಲ್ಲ ಎಂದು ರಾಧಾಕೃಷ್ಣ ತಮ್ಮ ಲೇಖನದಲ್ಲಿ ಅಭಿಪ್ರಾಯ ವ್ಯಕ್ತಮಾಡಿದ್ದಾರೆ. ಮುಂದುವರಿದು ಅವರು ಹೇಳಿದ್ದು ಆಶ್ರಮವಾಸಿಗಳಾಗಿ, ಅನುಭವೀ ಹಿರಿಯ ನಾಯಕರ ನೆರಳಿನಲ್ಲಿ ಅವರ ಮಾರ್ಗದರ್ಶನದಲ್ಲಿ, ಅವರ ಕಾರ್ಯವಿಧಾನವನ್ನು ಅನುಕರಣೆ ಮಾಡುವ ಪರಂಪರೆ ಮುಂದುವರಿಯಿತು.

ಸಮಾಜಕಾರ್ಯಕ್ಕೆ ಆವಶ್ಯಕ ಜ್ಞಾನ ಸ್ವ-ಅನುಭವದ ಮೂಲಕ ಎಂದು ನನ್ನ ದೃಢವಾದ ನಂಬಿಕೆ. ಇದಕ್ಕೆ ಕಾರ್ಯಕ್ಷೇತ್ರದಲ್ಲಿ ತೊಡಗಿಕೊಂಡಾಗ ಸಂಚಯಿತವಾದ ಜ್ಞಾನಭಂಡಾರವನ್ನು ಪರಾಮರ್ಶೆ ಮಾಡಿ, ಸೂಕ್ತವಾದುದ್ದನ್ನು ಆಯ್ದುಕೊಂಡು, ಅದನ್ನು ಮತ್ತಷ್ಟು ವರ್ಧಿಸಿ, ಪರಿಶೀಲಿಸಿ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಶೇಖರಿಸಿ ಇಟ್ಟು, ಸಂದರ್ಭಾನುಸಾರ ಉಪಯೋಗ ಮಾಡಬೇಕು. ಸಾಧ್ಯವಾದರೆ ಲೇಖನ, ಭಾಷಣ, ಚರ್ಚಾಕೂಟಗಳ ಮೂಲಕ ಆ ಭಂಡಾರ ಇತರರಿಗೂ ಸಿಗುವಂತೆ, ಹಂಚಿಕೊಳ್ಳುವ ವೃತ್ತೀಯ ಪ್ರಯತ್ನ ಆಗಬೇಕು. ಆದರೆ ಇದು ಆಗಿಲ್ಲ. ಆಗುವ ಲಕ್ಷಣಗಳೂ ಕಾಣುತ್ತಿಲ್ಲ ಎಂದು ವಿಷಾದಪಡಬೇಕಾಗಿದೆ.
 
ಸ್ವ-ಅಧ್ಯಾಯ
ಈಗಾಗಲೇ ಸ್ವಾನುಭವದ ವಿವರಣೆ, ಚರ್ಚೆಯಲ್ಲಿ ಸ್ವಾಧ್ಯಾಯದ ಉಲ್ಲೇಖ, ಮಹತ್ವವನ್ನು ಹೇಳಲಾಗಿದೆ. ಆಗಾಗ (Periodically) ಸಮಾಜಕಾರ್ಯಕರ್ತ, ಸೇವಕ ತನ್ನ ಅನುಭವವನ್ನು ಮೆಲುಕು ಹಾಕಿ, ವಿವೇಚನೆಗೆ ಸಿಲುಕಿಸಿ, ಮೌಲ್ಯಮಾಪನಮಾಡಿ ಉಳಿಸಿಕೊಳ್ಳಬೇಕಾದುದ್ದನ್ನು ಉಳಿಸಿಕೊಂಡು, ಬಿಡಬೇಕಾದುದ್ದನ್ನು ಬಿಟ್ಟು, ಜ್ಞಾನ ಶೇಖರಣೆ, ಜ್ಞಾನಾಭಿವೃದ್ಧಿ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಹೋಗಬೇಕು. ಈ ಅನುಭವ ಮೌಲ್ಯಮಾಪನ ಸರ್ವೋದಯ ಕಾರ್ಯಪರಂಪರೆಯ ಪ್ರಮುಖ ಸೂತ್ರ ಎಂದು ನಂಬಲಾಗಿದೆ. ಇದು ವೃತ್ತೀಯ ಸಮಾಜಕಾರ್ಯಕ್ಕೂ ಅನ್ವಯಿಸುತ್ತದೆ. ಇದನ್ನು ಸಮಾಜಕಾರ್ಯ ವೃತ್ತೀಯ ಸಾಹಿತ್ಯದಲ್ಲಿ  (Self Evaluation) ಎಂದು ಹೇಳಲಾಗಿದೆ.

ಗಾಂಧೀಜಿಯವರ ವಿಚಾರಗಳಲ್ಲಿ ಆಂಶಿಕವಾಗಿ ಅಡಕವಾಗಿದ್ದು-ಅಲ್ಲಲ್ಲಿ ಹರಡಿಕೊಂಡಿದ್ದುದ್ದನ್ನು ಆಯ್ದು 'ಲೋಕಶಕ್ತಿ' ಎಂಬ ನಿರ್ದಿಷ್ಟ ಸೈದ್ಧಾಂತಿಕ ಪರಿಕಲ್ಪನೆಯನ್ನು ಯೋಚಿಸಿದವರು ವಿನೋಬಾ ಎನ್ನುತ್ತಾರೆ ಜಯಪ್ರಕಾಶ ನಾರಾಯಣ, ಲೋಕಶಕ್ತಿ ಎಂದರೆ ಜನರಲ್ಲಿ ಸುಪ್ತವಾಗಿರುವ ಚೇತನಶಕ್ತಿ, ಆತ್ಮಶಕ್ತಿ. ಇದನ್ನು ಕ್ರಿಯಾಶೀಲವಾಗಿಸಿ ಸಂಘಟಿತವಾಗಿ ಅನ್ಯಾಯ, ಶೋಷಣೆಗಳ ವಿರುದ್ಧ ಪ್ರತಿಭಟನೆಯ ಕಾರ್ಯವಿಧಾನವಾಗಿ ಬಳಸುವುದು, ಸರ್ವೋದಯ ಕಾರ್ಯಕರ್ತನ ಜವಾಬುದಾರಿ. ಲೋಕಶಕ್ತಿಯ ಸಂಘಟಿತ ರೂಪದ ಬಲಪ್ರದರ್ಶನ ಒಂದು ಕಾರ್ಯತಂತ್ರ, ಅದನ್ನು ಯಾವ ಸಂದರ್ಭದಲ್ಲಿ ಯಾವ ಉದ್ದೇಶಕ್ಕಾಗಿ, ಯಾವ ರೀತಿಯಲ್ಲಿ ಪ್ರಯೋಗಿಸಬೇಕು, ಈ ನಿರ್ಣಯ ಪರಿಸ್ಥಿತಿಯ ಗಂಭೀರ ಅಧ್ಯಯನದ ನಂತರ ಸರ್ವೋದಯ ಕಾರ್ಯಕರ್ತ ಜನಸಮುದಾಯದೊಡನೆ ಚರ್ಚಿಸಿ, ಮಾಡಬೇಕಾದ ನಿರ್ಣಯ. ಲೋಕಶಕ್ತಿಯ ಬಲಪ್ರದರ್ಶನದ ಇತ್ತೀಚಿನ ಯಶಸ್ವಿ ಉದಾಹರಣೆ: ಅಕ್ಟೋಬರ್ 2, 2012ರಂದು, ಸುಮಾರು 40,000 ಜನ ದಲಿತರು, ಆದಿವಾಸಿಗಳು, ಅಲೆಮಾರಿ ಗುಂಪಿನವರು, ಶಾಂತಿಯುತವಾಗಿ, ವ್ಯವಸ್ಥಿತವಾಗಿ, ಸಂಯಮದಿಂದ, ಸುಮಾರು 340 ಕಿ.ಮೀ. ದೂರದ ಪ್ರಯಾಣ, ಗ್ವಾಲಿಯರನಿಂದ ಹೊಸದಿಲ್ಲಿಗೆ ಪಾದಯಾತ್ರೆಯಿಂದ ಮಾಡಿದರು. ಇದರ ಸಂಘಟನೆ 'ಏಕತಾ ಪರಿಷತ್'ನಿಂದ, ಇದರ ನೇತಾರ ಡಿ.ವಿ. ರಾಜಗೋಪಾಲ. ಈ ಜನಸಮುದಾಯದ ಸಂಯಮದ ನಡತೆಯನ್ನು ಪೊಲೀಸ್ ಅಧಿಕಾರಿಗಳು ಪ್ರಶಂಸಿಸಿದರು. ಈ ಜನಸತ್ಯಾಗ್ರಹ ದಿಲ್ಲಿಯನ್ನು ತಲುಪಿ ಗ್ರಾಮೀಣ ಅಭಿವೃದ್ಧಿ ಮಂತ್ರಿ, ಜಯರಾಮ ರಮೇಶರನ್ನು ಸಂದರ್ಶಿಸಿ ತಮ್ಮ ಅಹವಾಲನ್ನು ಮುಂದಿಟ್ಟರು. ಇದರ ಫಲವಾಗಿ ಅರಣ್ಯ ಕಾನೂನು (ಪಂಚಾಯಿತಿ ಹಾಗೂ ನಮೂದಿತ ಪ್ರದೇಶಗಳ ಬಗ್ಗೆ) ಪಾಸಾಯಿತು!

ಸಾಮಾನ್ಯವಾಗಿ  ಗ್ರಾಮೀಣ ಜನತೆ ಸೋಮಾರಿತನದ,  ನಿಶ್ಚೇತನ ರೂಪದಲ್ಲಿ ದೈವಿಕ (Fatalistic) ಪರಿಹಾರದಲ್ಲಿ ನಂಬಿಕೆಯಿಟ್ಟು, 'ಆದದ್ದಾಗಲಿ ನಾವೇನೂ ಮಾಡಲು ಸಾಧ್ಯ' ಎನ್ನುವ ಮನೋಧೋರಣೆಯಲ್ಲಿರುತ್ತಾರೆ. ಈ ಮಾನಸಿಕ ಸಂಕೋಲೆಯಿಂದ ಅವರನ್ನು ಬಿಡುಗಡೆ ಮಾಡಿಸಿ, ತಮ್ಮ ಸಾಮಾಜಿಕ ಪರಿಸ್ಥಿತಿಯಲ್ಲಿ ಬದಲಾವಣೆ ತಂದು, ತಮ್ಮ ಜೀವನವನ್ನು ಸುಧಾರಿಸಿ ಅಭಿವೃದ್ಧಿಶೀಲ ದಿಕ್ಕಿನಲ್ಲಿ ಕಾರ್ಯನ್ವಿತರಾಗುವಂತೆ ಮಾಡುವುದು, ಲೋಕಶಕ್ತಿಯ ಸದುಪಯೋಗ. ಇದಲ್ಲದೇ ಮತ್ತು ಮುಂದುವರಿದು ವಿನೋಬಾ ಇನ್ನೊಂದು ಸೈದ್ಧಾಂತಿಕ ಪರಿಕಲ್ಪನೆಯನ್ನು ಸೃಷ್ಟಿಸಿದರು. ಅದು ಲೋಕಶಕ್ತಿಯ ಕಾರ್ಯಾಚರಣೆಯ ನಂತರ ಬಳಕೆಯಾಗಬೇಕಾದ ಕಾರ್ಯತಂತ್ರ- ಲೋಕನೀತಿ. ಇದು ರಾಜನೀತಿಗೆ ವ್ಯತಿರಿಕ್ತವಾದದ್ದು (ಇದನ್ನು ಜೆ.ಪಿ. ವಿವರಿಸಿಲ್ಲ) ಗಾಂಧೀಜಿ ಅಖಂಡ (ಬ್ರಿಟಿಶ್ ಇಂಡಿಯಾ) ಭಾರತದಲ್ಲಿ ರಾಜನೀತಿಕ-ಸಾಮಾಜಿಕ ಆಂದೋಲನದ ಸರ್ವೋಚ್ಚ ನಾಯಕನಾಗಿ ಉದಯಿಸಿದಾಗ ಕಾರ್ಯಪ್ರವರ್ತರಾದಾಗ ನಮ್ಮ ದೇಶ ಗ್ರಾಮೀಣ ದೇಶವಾಗಿತ್ತು. ಜನಗಣತಿಯ ಆಧಾರದ ಮೇಲೆ ಹೇಳುವುದಾದರೆ ಶೇಕಡಾ 90 ರಿಂದ 85 ರಷ್ಟು ಗ್ರಾಮೀಣ ಜನಸಂಖ್ಯೆ (1921 ರಿಂದ 1945ರವರೆಗೆ). ಹೀಗಾಗಿ ಗಾಂಧೀಜಿ ವಿಚಾರಗಳಲ್ಲಿ ಸಮಾಜಸೇವೆ ಅಂದರೆ ಗ್ರಾಮೀಣ ಜನಸೇವೆ. ಇದಲ್ಲದೇ ನಗರಗಳು ಗ್ರಾಮಗಳ ಶೋಷಣೆಯಿಂದ ಜೀವಿಸುತ್ತಿವೆ ಎನ್ನುವ ಭಾವನೆಯೂ ಸೇರಿಕೊಂಡಿತ್ತು. ಗಾಂಧೀಜಿ ಮತ್ತು ಅವರ ನಂತರ ಸರ್ವೋದಯ ಕಾರ್ಯಕರ್ತರು ತಮ್ಮೆಲ್ಲ ಕಾರ್ಯಗಳಲ್ಲಿ ಗ್ರಾಮೀಣ ಜನಜೀವನದ ಸುಧಾರಣೆ ಹಾಗೂ ಅಭಿವೃದ್ಧಿ ಇವುಗಳ ಬಗ್ಗೆ ಹೆಚ್ಚು ಲಕ್ಷ್ಯ ನೀಡಿದ್ದರು. ಸಮಾಜಸೇವಕ ಎಂದರೆ ಗ್ರಾಮವಾಸಿ, ಸಮಗ್ರ ಗ್ರಾಮ ಸೇವಕ. ಅವನು/ಳು ಗ್ರಾಮದ ಸರ್ವೇಸಾಮಾನ್ಯರ ಜೀವನಕ್ರಮಕ್ಕೆ ಭಿನ್ನವಾಗಿ ಜೀವನಕ್ರಮ ಶೈಲಿ, ರೂಪಿಸಿಕೊಳ್ಳಬಾರದು. ಜೀವನಕ್ಕೆ ಅತ್ಯವಶ್ಯವಾದ ಉಡುಪು, ಆಹಾರ, ಆಶ್ರಯ (ಆಶ್ರಮ ಅಥವಾ ಮನೆ) ಇವಕ್ಕಷ್ಟೇ ಸೀಮಿತವಾದ ಸರಳ ಜೀವನಶೈಲಿ ಇರಬೇಕು (Simple and austere life). ಆದರೆ ಅವನು/ಳು ದರಿದ್ರನಾಗಿ ಬಾಳಬೇಕಾಗಿಲ್ಲ.

ಗಾಂಧೀವಿಚಾರ ಪರಂಪರೆಯ ಸಮಾಜಸೇವೆಯ ಕೆಲವು ವಿಧಾನಗಳಲ್ಲಿ-ಜನರ ಜೊತೆ ಹಾರ್ದಿಕ ಸಾಮೀಪ್ಯದ ಸಂಬಂಧ ಸ್ಥಾಪನೆ ಅತಿಮುಖ್ಯ. ಇದು ಅಷ್ಟು ಸುಲಭವಲ್ಲ. ಯಾರೇ ಹೊರಗಿಂದ ಒಂದು ಗ್ರಾಮಕ್ಕೆ ಬಂದರೆ, ಜನರು 'ಇವನಾರು?' ಎಂದು ಕುತೂಹಲ-ಸಂಶಯ ಮಿಶ್ರಿತ ಭಾವನೆಯಿಂದ ನಿರೀಕ್ಷಿಸುವುದು ಸ್ವಾಭಾವಿಕ. ಸಮಾಜಸೇವಕನ ಮಾತು ನಡತೆ ಹೇಗಿರಬೇಕೆಂದರೆ-ಬಸವಣ್ಣನವರ ವಚನದಲ್ಲಿ ಹೇಳಿದಂತೆ ಇವನ್ಯಾರವ, ಇವನ್ಯಾರವ ಎಂದು ಪ್ರಾರಂಭವಾಗುವ ಪ್ರಕ್ರಿಯೆ, ನಂತರ ಇವ ನಮ್ಮವ, ಇವ ನಮ್ಮವ ಎಂದು ಅನ್ನುವಂತೆ ಆಗಬೇಕು. ಆದರೆ ಈ ಒಂದಾಗುವಿಕೆ ಸಂಪೂರ್ಣ ಗ್ರಾಮದ ಜನತೆಯ ರೀತಿಯಲ್ಲಿ ವಿಚಾರ ಮಾಡುವ, ನಡೆದುಕೊಳ್ಳುವ ರೀತಿಯದಾಗಬಾರದು. ಹಾಗಾದರೆ (Total Identification) ಗ್ರಾಮ ಸೇವಕ ಜನರಿಗೆ ಪರಿಣಮಕಾರಿ ಸಮಾಜಸೇವೆ ಮಾಡುವುದು ಸಾಧ್ಯವಿಲ್ಲ. ನಾನು ಭಾಗವಹಿಸಿದ ಒಂದು ವಿಚಾರ ಸಂಕಿರಣ-ಸಂವಾದದಲ್ಲಿ ಹಿರಿಯ ಸರ್ವೋದಯ ಕಾರ್ಯಕರ್ತ ಧಿರೇನ್ ಮಜುಮದಾರ-ಧಿರೇನ್ದಾ, ತಮ್ಮ ಅನುವಭವವನ್ನು ಹೀಗೆ ವರ್ಣಿಸಿದರು. ಜನರ ಜೊತೆ ಒಂದಾಗುವ ಪ್ರಯತ್ನದಲ್ಲಿ ನಾನು ಸಂಪೂರ್ಣ ಅವರಂತೆ ಬಾಳತೊಡಗಿದೆ. ಆಗ ನನ್ನ ಜನರೇ ನನ್ನನ್ನು ಕೊಳಕ-ಶ್ವಪಚ ಎಂದು ದೂರವಿಟ್ಟರು! ಗ್ರಾಮಸೇವಕ ಗ್ರಾಮವಾಸಿಯಾಗಿ ಕಾರ್ಯನಿರತನಾದಾಗ ಹತ್ತಿರವಾದರೂ ಸ್ವಲ್ಪ ಬೇರೆಯಾಗಿರಬೇಕು. ಇದು ಹೇಗೆ ಎಂದು ವಿವರಿಸಲು ಈ ಉಪಮೆಯ ಮೂಲಕ ಹೀಗೆ ಹೇಳಬಹುದು. ಮಣ್ಣು ನಿರೋಳಗಿದ್ದ ಕಮಲದಂತೆ ನೀರಿನ ಪಾತಳಿಗಿಂತ ತುಸು ಎತ್ತರದಲ್ಲಿ - ಸುತ್ತಲೂ ಆವರಿಸಿದ ಜಲಾವರಣವನ್ನು ನಿರ್ಲಿಪ್ತ ದೃಷ್ಟಿಯಿಂದ ನೋಡಲು ಸಾಧ್ಯವಾಗುವಂತೆ. ಇದನ್ನೇ ಗುರುರಾಮ ವಿಠ್ಠಲರ ಪದ್ಯದ ಸಾಲಿನಲ್ಲಿ ಹೀಗೆ ಹೇಳಬಹದು: ಅಂಟಿ ಅಂಟದ ಹಾಗೆ ಇರಬೇಕು ಸರ್ವೋದಯ ಕಾರ್ಯದ ಮಜಲುಗಳನ್ನು, ಹಂತಗಳನ್ನು ನಾರಾಯಣ ದೇಸಾಯಿ ಈ ರೀತಿ ಸಾರಾಂಶದಲ್ಲಿ ಹೇಳಿದ್ದಾರೆ: ಪ್ರಚಾರ (Propaganda), ಪರಿಚಯ (Initial Contact) ಅಧ್ಯಯನ (Survey/Study) ಸಹವಾಸ (Association), ಸೇವಾ (Service of Individuals), ಪ್ರತೀಕಾರ (Resistance). Constructive work or community service (ರಚನಾತ್ಮಕ/ಸಾಮುದಾಯಿಕ ಸೇವೆ*) Building of the climate of change (ಬದಲಾವಣೆಗೆ ಅನುಕೂಲವಾಗುವಂತೆ ಪರಿಸರ ನಿರ್ಮಾಣ)* ದೇಸಾಯಿಯವರು ಉಲ್ಲೇಖಿಸಿದ ಮಜಲುಗಳು, ವೃತ್ತೀಯ ಸಾಹಿತ್ಯದಲ್ಲಿ ವರ್ಣಿಸಲಾದ ಸಾಮುದಾಯಿಕ ಸಂಘಟನಾಕಾರ್ಯ ಪದ್ಧತಿಗೆ ಬಹಳಷ್ಟು ಹೋಲುವುದನ್ನು ನಾವು ಗಮನಿಸಬಹುದು.

ಸರ್ವೋದಯಯುಗ ಅಂತ್ಯವಾಗುವ ಹಂತದಲ್ಲಿದೆ. ಸರ್ವಸೇವಾಸಂಘ ಅಸ್ತಿತ್ವದಲ್ಲಿಲ್ಲ. ಪ್ರಮುಖ ನಾಯಕರೆಲ್ಲ ಮರೆಯಾಗಿದ್ದಾರೆ. ಈಗ ಅಲ್ಲಲ್ಲಿ ಕಾಣಸಿಗುವ ಕೆಲವು ಹೆಸರಾಂತ ಸರ್ವೋದಯ ಕಾರ್ಯಕರ್ತರು (ಚಂಡೀಪ್ರಸಾದಭಟ್ಟ, ಸುಂದರಲಾಲ ಬಹುಗುಣ, ದೊರೆಸ್ವಾಮಿ) ವಯೋವೃದ್ಧರಾಗಿದ್ದಾರೆ. ಹೊಸ ಪೀಳಿಗೆ ಮುಂದೆ ಬರುತ್ತಿರುವುದು ನಮಗೆ ಗೋಚರವಾಗಿಲ್ಲ. ಗೋಪಾಲಕೃಷ್ಣ ಗೋಖಲೆ ಸ್ಥಾಪಿಸಿದ ಭಾರತ ಸೇವಕ ಸಂಸ್ಥೆ (Servants of India Society) ಲಾಲಾ ಲಜಪತರಾಯ ಸ್ಥಾಪಿಸಿದ ಜನಸೇವಕ ಸಂಸ್ಥೆ (Servants of Peoples Society) ಗುಲಜಾರಿಲಾಲ ನಂದಾ ಸ್ಥಾಪಿಸಿದ ಭಾರತ ಸೇವಕ ಸಮಾಜ ಇವೆಲ್ಲ ಇತಿಹಾಸದ ಗರ್ಭಗಳಲ್ಲಿ ಅಡಗಿವೆ. ಸರ್ವೋದಯ ಕಾರ್ಯಪರಂಪರೆಯ ಭವಿಷ್ಯವೇನು? ವೃತ್ತೀಯ ಸಮಾಜಕಾರ್ಯ ಶಿಕ್ಷಣದಲ್ಲಿ ಇದಕ್ಕೆ ಮಹತ್ವದ ಸ್ಥಾನ ದೊರಕಿಲ್ಲ. ಬಹುಶಃ ಉಲ್ಲೇಖವೂ ಆಗುತ್ತಿರಲಿಕ್ಕಿಲ್ಲ. 1964-1966ರ ಸುದೀರ್ಘ ಸಂವಾದ, ಚರ್ಚೆಗಳ ನಂತರ ದಾಖಲಿಸಿದ ನಿರ್ಣಯಗಳು ಪ್ರಕಟಿತ ಪುಸ್ತಕದಲ್ಲಿಯೇ ಉಳಿದವು. ಕಾರ್ಯಾಚರಣೆಗೆ ತರುವ ಗಂಭೀರ ಪ್ರಯತ್ನ ಯಾವ ಸಮಾಜಕಾರ್ಯ ವಿದ್ವಾಂಸರಿಂದಲೂ, ಯಾವುದೇ ಸಂಘ-ಸಂಸ್ಥೆಗಳಿಂದಲೂ ಆಗಲಿಲ್ಲ.
​
* ಇದು ನನ್ನ ಭಾಷಾಂತರ. ಅವರು ಇಂಗ್ಲಿಷಿನಲ್ಲಿ ಮಾತ್ರ ಹೇಳಿದ್ದಾರೆ.
 
ಶಂಕರ ಪಾಠಕ
213, 16ನೆಯ ತಿರುವು, ಎಂ.ಸಿ. ಬಡಾವಣೆ, ವಿಜಯನಗರ, ಬೆಂಗಳೂರು-560040
0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
+91-9980066890
+91-8310241136
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)