SKH
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
SKH

ಹೈನುಗಾರಿಕೆ ಮೂಲಕ ಸಣ್ಣ ರೈತರ ಜೀವನೋಪಾಯ ಸುಧಾರಣೆಯಲ್ಲಿ ಸಂಸ್ಥೆಯ ಪಾತ್ರ.....................

6/20/2017

0 Comments

 
ಸಾರಾಂಶ
ಜನರ ಅದರಲ್ಲೂ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಅವರ ಆದಾಯದ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಕೃಷಿಯೊಂದಿಗೆ ಪಶು ಸಂಗೋಪಣೆ, ಮೀನು ಸಾಕಾಣಿಕೆ, ಜೇನು ಸಾಕಾಣಿಕೆ, ಕೋಳಿ ಸಾಕಾಣಿಕೆ, ಹೈನುಗಾರಿಕೆಯಂಥ ಕೃಷಿ ಸಂಬಂಧೀ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೈನುಗಾರಿಕೆಯು ಸಣ್ಣ, ಅತೀ ಸಣ್ಣ ರೈತರು ಮತ್ತು ಭೂ ರಹಿತರಿಗೆ ಅದರಲ್ಲೂ ಮಹಿಳೆಯರಿಗೆ ಕಡಿಮೆ ದರದ ಆಹಾರ ಮತ್ತು ಪೋಷಕಾಂಶ ಒದಗಿಸುವುದರ ಜೊತೆಗೆ ಅತೀ ಮುಖ್ಯವಾಗಿ ಸಹಾಯಕಾರಿಯಾಗಿದೆ. ಹೈನುಗಾರಿಕೆಯು ವರ್ಕೋಡು ಗ್ರಾಮದ ಸಣ್ಣ ಮತ್ತು ಅತಿ ಸಣ್ಣ ರೈತರ ಉಪ-ಆದಾಯದ ಮುಖ್ಯವಾದ ಮೂಲವಾಗಿದೆ. `ನಿವೃತ್ತ್ ಹೆಸರಿನ ಸ್ವಯಂ ಸೇವಾ ಸಂಸ್ಥೆಯು ಅಲ್ಲಿಯ ಜನರನ್ನು ಸಬಲೀಕರಿಸಿ, ಸಹಾಯ-ಸಹಕಾರಗಳನ್ನೊದಗಿಸಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲಾಗಿದೆ; ಜನರೂ ಸಂಸ್ಥೆಯನ್ನು ನಂಬಿ, ಅನುಸರಿಸಿದರು, ಹಾಗೂ ಈಗ ಅದರ ಪ್ರತಿಫಲವನ್ನು ಸವಿಯುತ್ತಿದ್ದಾರೆ. ಪ್ರಸಕ್ತ ಲೇಖನದಲ್ಲಿ ಹೈನುಗಾರಿಕೆಯ ಉಪಯೋಗಗಳು ಮತ್ತು ಪರಿಣಾಮಗಳನ್ನು ಹೊರತೆಗೆಯುವುದರೊಂದಿಗೆ ಸಾಮಾಜಿಕ-ಆರ್ಥಿಕ ಪರಿಸ್ಥಿತಿ, ಒಳಗೊಂಡಿರುವ ಸವಾಲುಗಳು ಹಾಗೂ ಸಂಸ್ಥೆಯ ವಹಿಸಿರುವ ಪಾತ್ರಗಳನ್ನು ಕುರಿತು ವಿಶ್ಲೇಷಿಸುವ ಪ್ರಯತ್ನ ಮಾಡಲಾಗಿದೆ. ಅಧ್ಯಯನದ ಸಮಸ್ಯೆಯನ್ನು ಶೋಧಿಸಲು ಸಂಖ್ಯಾತ್ಮಕ ಮತ್ತು ಗುಣಾತ್ಮಕ ದತ್ತಾಂಶಗಳೆರಡನ್ನೂ ಮೇಳೈಸಿಕೊಂಡಿರುವ ಮಾಹಿತಿಯನ್ನು ಬಳಸಲಾಗಿದೆ. ಸಂಖ್ಯಾತ್ಮಕ ಹಾಗೂ ಗುಣಾತ್ಮಕಗಳೆರಡೂ ಪ್ರಕಾರದ ದತ್ತಾಂಶಗಳನ್ನು ಸಂಗ್ರಹಿಸಲು ಮನೆ-ಮನೆ ಸಮೀಕ್ಷೆ ಮತ್ತು ಸಹಭಾಗಿತ್ವದ ಚರ್ಚಾ ಪದ್ಧತಿಗಳನ್ನು ಬಳಸಲಾಗಿತ್ತು. ಸಾಧನೆ ಮತ್ತು ಫಲಿತಗಳನ್ನು ಇಲ್ಲಿ ಶೇಕಡಾವಾರು ತೋರಿಸಲಾಗಿದೆ. `ರೈತರು ತಮಗಿರುವ ಜಮೀನಿನ ಸ್ವಲ್ಪ ಭಾಗವನ್ನು ಮೇವು ಬೆಳೆಯಲು ಬಳಸಿ, ಹೈನುಗಾರಿಕೆಯನ್ನು ಮಾಡಿದರೆ ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬಹುದು ಎಂಬುದನ್ನು ಈ ಅಧ್ಯಯನದಿಂದ ಕಂಡುಕೊಳ್ಳಲಾಗಿದೆ. ಆದರೆ ಸಮಸ್ಯೆಯೆಂದರೆ ಅದರಲ್ಲಿ ಕೆಲವರಿಗೆ ಭೂಮಿಯೇ ಇಲ್ಲಾ, ಆದಾಗ್ಯೂ ಅವರು ಹೈನುಗಾರಿಕೆಯನ್ನು ನಿರ್ವಹಿಸುತ್ತಿರುವುದೇ ವಾಸ್ತವ ಸೌಂದರ್ಯಯುತ ಸತ್ಯ. ಹೈನುಗಾರಿಕೆಯು ವರ್ಕೋಡು ಗ್ರಾಮಸ್ಥರ ಜೀವನವನ್ನು ಉನ್ನತೀಕರಿಸಿದೆ.
ಪೀಠಿಕೆ :
ಹೈನುಗಾರಿಕೆಯು ಸಾಂಪ್ರದಾಯಿಕ, ಸ್ಥಳೀಯ ಮತ್ತು ಅನೌಪಚಾರಿಕವಾಗಿದ್ದು, ಪ್ರಪಂಚದ ಬಡವರಿಗೆ ಹೆಚ್ಚಿನ ಉದ್ಯೋಗ ಹಾಗೂ ಸಣ್ಣ ಪ್ರಮಾಣದ ವ್ಯಾಪಾರಗಳನ್ನು ಸೃಷ್ಟಿಸುತ್ತದೆ. ಹೈನುಗಾರಿಕೆಯು ಗ್ರಾಮೀಣ ಬಡತನ, ಪೋಷಕಾಂಶಗಳ ಕೊರತೆ, ಇನ್ನಿತರ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸುವ ಪ್ರಧಾನ ಸಾಧನಗಳಲ್ಲೊಂದಾಗಿದೆ. ಎಮ್.ಎನ್. ಉದ್ದಿನ್ ಹಾಗೂ ಅಲ್ ಮಮೂನ್ ಎಮ್. (2012) ಅವರುಗಳು ಬಾಂಗ್ಲಾದೇಶ್ ಮತ್ತು ಇತರ ಹಲವಾರು ದೇಶಗಳಿಂದ `ನಗರ, ಉಪನಗರ ಮತ್ತು ಗ್ರಾಮೀಣ ಭಾಗದ ಜನರ ಜೀವನೋಪಾಯದ ಸುಧಾರಣೆಗೆ ಸಣ್ಣ ಪ್ರಮಾಣದ ಹೈನುಗಾರಿಕೆ ಮೇಲೆ ಕೇಂದ್ರೀಕರಿಸಿ ಸಂಶೋಧಿಸಿದ್ದಾರೆ. ಹೈನುಗಾರಿಕೆಯು ಒಂದು ಪ್ರಮುಖ ಆದಾಯದ ದ್ವಿತೀಯ ಮೂಲವಾಗಿದ್ದು, ಭಾರತದ ಮಳೆಯಾಶ್ರಿತ, ಬರಪೀಡಿತ ಪ್ರದೇಶಗಳ ಅತಿ ಸಣ್ಣ ಮತ್ತು ಮಹಿಳಾ ರೈತರ ವಿಶೇಷವಾಗಿ ಗ್ರಾಮೀಣ ಪ್ರದೇಶ ಜನರ ಬಡತನ ಮತ್ತು ನಿರುದ್ಯೋಗಗಳ ನಿವಾರಣೆಯ ಗುರಿ ಹೊಂದಿರುವ ಚಟುವಟಿಕೆಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಂರಕ್ಷಣೆಯಲ್ಲಿ ಸುಧಾರಣೆ, ಉದ್ಯಮದ ಅಭಿವೃದ್ಧಿ, ಹೈನುಗಾರಿಕೆಯಿಂದ ಜ್ಞಾನಾಭಿವೃದ್ಧಿ, ಪಶುಸಂಗೋಪಣಾ ವಲಯದಿಂದ ಹೇಗೆ ಹೈನುಗಾರಿಕೆಯು ಬೆಳೆಯುತ್ತಿದೆ ಮತ್ತು ಗ್ರಾಮೀಣ ಜನರ ಆರ್ಥಿಕ ಸ್ಥಿತಿಯ ಬೆಳವಣಿಗೆಗಳನ್ನು ನೋಡಬಹುದಾಗಿದೆ (ವೆಂಕಟಾದ್ರಿ 2008).

ಈಗ ಕ್ಷೀರೋತ್ಪಾದನಾ ಕ್ಷೇತ್ರವು ಭೂರಹಿತ ಕೃಷಿ ಕಾರ್ಮಿಕರನ್ನೊಳಗೊಂಡು ಸಣ್ಣ ರೈತರಿಂದ ತುಂಬಿದೆ, ಅವರು ಪ್ರಾಥಮಿಕವಾಗಿ ಹಾಲು ಸಂಗ್ರಹಿಸಲು ಮತ್ತು ಗ್ರಾಹಕರಿಗೆ ಒದಗಿಸಲು ಕೌಟುಂಬಿಕ ಕಾರ್ಮಿಕರನ್ನೇ ಅವಲಂಬಿಸಿದ್ದಾರೆ. ಶೇ.80 ರಷ್ಟು ಹಾಲು ಕೇವಲ 2 ರಿಂದ 5 ಹಸುಗಳುಳ್ಳ ಫಾರ್ಮ್‍ನಿಂದ ಸರಬರಾಜಾಗುತ್ತದೆ. ಭಾರತವು ಅಭಿವೃದ್ಧಿ ಹೊಂದುತ್ತಿರುವ ಒಂದು ರಾಷ್ಟ್ರ. ಕೃಷಿ ಪ್ರಧಾನವಾಗಿರುವ ಇಲ್ಲಿ ಹೈನುಗಾರಿಕೆಯು ಅಭಿವೃದ್ಧಿಯ ಮೇಲೆ ಪ್ರಭಾವ ಬೀರುವ ಇನ್ನೊಂದು ಪ್ರಮುಖವಾದ ಔದ್ಯೋಗಿಕ ಸಂಗತಿಯಾಗಿದೆ. ಹೈನುಗಾರಿಕೆಯ ಮೂಲಕ ಜೀವನ ಬದಲಾವಣೆ, ಪ್ರಸ್ತುತ ಈ ಉದ್ದಿಮೆಯಲ್ಲಿ ಜನರು ಹೇಗೆ ತೊಡಗಿದ್ದಾರೆ, ಸ್ವಯಂ ಸಏವಾ ಸಂಸ್ಥೆಯ ಪಾತ್ರ, ಇವೇ ಮೊದಲಾದ ಸಂಗತಿಗಳು ಹೇಗೆ ಜನರ ಆರ್ಥಿಕ ಸ್ಥಿತಿ ಸುಧಾರಣೆಗೆ ಸಹಕರಿಸಿದವು ಹಾಗೂ ಅವರ ದೈನಂದಿನ ಜೀವನ ಶೈಲಿಯಲ್ಲಾದ ಬದಲಾವಣೆ ಇವೇ ಅಂಶಗಳನ್ನು ತಿಳಿದುಕೊಳ್ಳಲು ಅಧ್ಯಯನಕಾರ (ಸಂಶೋಧಕ)ರು ಅತೀವ ಆಸಕ್ತಿ ಹೊಂದಿದ್ದರು.

ರೈತರಿಂದ ಪ್ರಶ್ನಾವಳಿ ಮತ್ತು ಸಂದರ್ಶನಗಳ ಮೂಲಕ ಸಂಗ್ರಹಿಸಿದ್ದ ದತ್ತಾಂಶಗಳ ವಿಶ್ಲೇಷಣೆ, ಉಪ ಸಂಹಾರ ಮತ್ತು ಸಾರಾಂಶಗಳನ್ನು ಈ ಲೇಖನವು ಒಳಗೊಂಡಿದೆ. ವರ್ಕೋಡು ಗ್ರಾಮದ ಆಯ್ದ ಸ್ಯಾಂಪಲ್ ರೈತರುಗಳಿಂದ ಪ್ರಶ್ನಾವಳಿಗಳ ಮೂಲಕ ಸಂಗ್ರಹಿಸಿರುವ ಪ್ರತಿಕ್ರಿಯೆ/ಉತ್ತರಗಳನ್ನು ಅಂಶಗಳ ವಿಶ್ಲೇಷಣೆಗೆ ಬಳಸಲಾಗಿದೆ. ಸುಮಾರು 5420 ಜನಸಂಖ್ಯೆಯನ್ನು ಹೊಂದಿರುವ, ಇಲ್ಲಿನ ಬಹಳಷ್ಟು ಜನರ ಜೀವನೋಪಾಯವು ಕೃಷಿ ಮೇಲೆ ಅವಲಂಬಿತ ಮತ್ತು ಮೈಸೂರು ಮಹಾ ನಗರಕ್ಕೆ ಹತ್ತಿರದಲ್ಲಿರುವ ಪುಟ್ಟ ಗ್ರಾಮವೇ ವರ್ಕೋಡು. ಸ್ವಯಂ ಸೇವಾ ಸಂಸ್ಥೆಯ ಆಶ್ರಯದ ಸಹಕಾರ ಮತ್ತು ಜನರ ಆಸಕ್ತಿಯೊಂದಿಗೆ ಗಮನಾರ್ಹ ಬದಲಾವಣೆ ಇಲ್ಲಿ ಕಂಡುಬರುತ್ತಿದೆ ಮತ್ತು ಹೈನುಗಾರಿಕೆಯು ಅತ್ಯಂತ ಪ್ರಗತಿಪರವಾಗಿರುವುದರಿಂದ ಗ್ರಾಮಸ್ಥರ ಜೀವನೋಪಾಯ ಸುಧಾರಿಸಲ್ಪಟ್ಟಿದೆ.

ವಿಧಾನ ಮತ್ತು ಸಾಮಗ್ರಿಗಳು :
ಪ್ರಸ್ತುತ ಅಧ್ಯಯನವು ಸಂಖ್ಯಾತ್ಮಕ ವಿಧಾನ ಬೆಂಬಲಿತ ಗುಣಾತ್ಮಕ ಪ್ರಕಾರದ್ದಾಗಿದೆ. ಸಮಾಜದ ವಿವಿಧ ವರ್ಗಗಳ ಮಾದರಿಗಳನ್ನಾಧರಿಸಿದ ಸ್ಯಾಂಪಲಿಂಗ್ ವಿಧಾನವನ್ನು ದತ್ತಾಂಶ ಸಂಗ್ರಹಿಸುವ ಮುಖ್ಯ ವಿಧಾನವಾಗಿ ಬಳಸಲಾಗಿದೆ. ವರ್ಕೋಡು ಗ್ರಾಮದಲ್ಲಿನ ಪ್ರತಿಸ್ಪಂಧಿಗಳ ಮನೆಯಲ್ಲಿನ ಹಾಗೂ ಸುತ್ತಮುತ್ತಲ ಸಂಗತಿಗಳಾದ ಜಾನುವಾರು ನಿರ್ವಹಣೆ, ದನಗಳ ಕೊಟ್ಟಿಗೆ, ಜೀವಿತ ಪರಿಸ್ಥಿತಿಗಳ ಕುರಿತು ಮಾಹಿತಿ ಸಂಗ್ರಹಿಸಲು ಸಂಶೋಧಕರು `ವೀಕ್ಷಣಾ ವಿಧಾನವನ್ನೂ ಬಳಸಿದ್ದಾರೆ. ಹೈನುಗಾರಿಕೆಯಿಂದಾದ ಅವರ ಜೀವನ ಶೈಲಿಯ ಬದಲಾವಣೆ ಕುರಿತು ಮಾಹಿತಿ ಸಂಗ್ರಹಿಸಲು `ಮನೆ-ಮನೆ ಸಮೀಕ್ಷೆ ಕೈಗೊಳ್ಳಲಾಗಿದೆ. ವರ್ಕೋಡು ರೈತರ ಅಭಿಪ್ರಾಯ, ಅನಿಸಿಕೆ, ಅನುಭವ, ಭಾವನೆ ಮೊದಲಾದ ಪ್ರಾಥಮಿಕ ಮೂಲದ ದತ್ತಾಂಶಗಳನ್ನು ಸಂಗ್ರಹಿಸಲು `ಚರ್ಚಾ ವಿಧಾನವನ್ನು ಬಳಸಲಾಗಿದೆ. ಸ್ವ-ಸಹಾಯ ಸಂಘದಿಂದ ಆಯ್ಕೆ ಮಾಡಲ್ಪಟ್ಟಿದ್ದ 10 ಜನ ಫಲಾನುಭವಿಗಳೊಂದಿಗೆ ಸಂಶೋಧಕರು ಚರ್ಚಿಸಿದರು. ಹಸುಗಳನ್ನು ಪಡೆದಿರುವ ಆಗೂ ಹೈನುಗಾರಿಕೆ ಮಾಡುತ್ತಿರುವ 100 ಜನ ರೈತರ ಪೈಕಿ 10 ಜನರನ್ನು ಸಂಶೋಧಕರು ಚರ್ಚೆಗೆ ಆಯ್ಕೆ ಮಾಡಿಕೊಂಡಿದ್ದರು.

ಅಧ್ಯಯನದ ಪ್ರದೇಶ :
ಪ್ರಸ್ತುತ ಅಧ್ಯಯನ ಪ್ರದೇಶವಾದ ವರ್ಕೋಡು ಗ್ರಾಮವು 120 28 ಉತ್ತರ ಅಕ್ಷಾಂಶ 760 76 ಪೂರ್ವ ರೇಖಾಂಶಗಳು ಸಂಧಿಸುವ ಸ್ಥಳದಲ್ಲಿ ಕಂಡು ಬರುತ್ತಿದ್ದು, ಸಮುದ್ರ ಮಟ್ಟದಿಂದ 721 ಮೀಟರ್ ಎತ್ತರದಲ್ಲಿ ಇದೆ. ಜಿಲ್ಲಾ ಸ್ಥಳವಾದ ಮೈಸೂರಿನಿಂದ ಕೇವಲ 15 ಕಿ.ಮೀ. ಅಂತರದಲ್ಲಿದ್ದರೆ, ರಾಜ್ಯದ ರಾಜಧಾನಿ ಬೆಂಗಳೂರಿನಿಂದ 148 ಕಿ.ಮೀ. ದೂರದಲ್ಲಿದೆ. ವರ್ಕೋಡು ಗ್ರಾಮವು ವರುಣಾ ಹೋಬಳಿಯ ವಾಜಮಂಗಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಂದಾಯ ಗ್ರಾಮವಾಗಿದ್ದು, ಉತ್ತರದಲ್ಲಿ ಶ್ರೀರಂಗಪಟ್ಟಣ, ದಕ್ಷಿಣದಲ್ಲಿ ನಂಜನಗೂಡು, ಈಶಾನ್ಯದಲ್ಲಿ ಪಾಂಡವಪುರ ಮತ್ತು ಪೂರ್ವದಲ್ಲಿ ಟಿ. ನರಸೀಪುರ ತಾಲೂಕುಗಳಿಂದ ಸುತ್ತುವರಿಯಲ್ಪಟ್ಟಿದೆ. ಸದರೀ ಗ್ರಾಮದ ಉಪ ಗ್ರಾಮಗಳಾದ ಬಡಗಲ ಹುಂಡಿ, ಮೂಡಲ ಹುಂಡಿ, ಕೆಂಪೇಗೌಡನ ಹುಂಡಿ ಹಾಗೂ ಹೊಸಹುಂಡಿಗಳು ಇದರ ವ್ಯಾಪ್ತಿಯಲ್ಲಿ ಸೇರಿವೆ.

ವರ್ಕೋಡು ಸುಮಾರು 1133 ಕುಟುಂಬಗಳನ್ನು ಹೊಂದಿರುವ ಗ್ರಾಮ ಸಮುಚ್ಛಯವಾಗಿದ್ದು, 2011 ರ ಜನಗಣತಿ ಪ್ರಕಾರ ಇದರ ಒಟ್ಟು ಜನಸಂಖ್ಯೆಯು 5420 ಇದೆ. ಇದರಲ್ಲಿ 2782 ಪುರುಷರು ಮತ್ತು 2638 ಜನ ಮಹಿಳೆಯರಿದ್ದಾರೆ. ಈ ಗ್ರಾಮ ಸಮುಚ್ಛಯದ ಸರಾಸರಿ ಲಿಂಗಾನುಪಾತವು ಕರ್ನಾಟಕದ ಲಿಂಗಾನುಪಾತಕ್ಕಿಂತ ಕಡಿಮೆಯಿದೆ. ಅಂದರೆ ವರ್ಕೋಡು ಗ್ರಾಮದಲ್ಲಿ 1000 ಪುರುಷರಿಗೆ 948 ಮಹಿಳೆಯರಿದ್ದಾರೆ, ಕರ್ನಾಟಕದ ಸರಾಸರಿ ಲಿಂಗಾನುಪಾತ 973 ಇದೆ. ಅಷ್ಟೇ ಅಲ್ಲ ಮಕ್ಕಳ ಲಿಂಗಾನುಪಾತವೂ ರಾಜ್ಯದ ಸರಾಸರಿಗಿಂತ ಕಡಿಮೆಯಿದೆ. ಅಂದರೆ ಕರ್ನಾಟಕದ್ದು 897 ಇದ್ದರೆ ವರ್ಕೋಡು ಗ್ರಾಮದ್ದು 948 ಇದೆ. ಹಾಗೆಯೇ ಇಲ್ಲಿನ ಸಾಕ್ಷರತಾ ಪ್ರಮಾಣವೂ ರಾಜ್ಯದ ಸರಾಸರಿ ಸಾಕ್ಷರತೆಗಿಂತ ಕಡಿಮೆಯೇ ಇದೆ. ಕರ್ನಾಟಕದ್ದು ಶೇ. 75.36 ಇದ್ದರೆ, ವರ್ಕೋಡು ಗ್ರಾಮದ್ದು ಶೇ. 63.26 ರಷ್ಟಿದೆ. ಇಲ್ಲಿ ಪುರುಷರ ಸಾಕ್ಷರತೆಯು ಶೇ. 69.64 ರಷ್ಟಿದ್ದರೆ ಮಹಿಳೆಯರದ್ದೇ ಶೇ. 56.58 ರಷ್ಟಿದೆ.

ಗ್ರಾಮದ ಒಟ್ಟು ಜನಸಂಖ್ಯೆಯ ಪರಿಶಿಷ್ಟ ಜಾತಿಯ ಜನ ಶೇ. 6.22 ಇದ್ದರೆ, ಪರಿಶಿಷ್ಟ ಪಂಗಡದ ಜನ ಶೇ. 0.72 ವರ್ಕೋಡು ಗ್ರಾಮದ ಒಟ್ಟು ಜನಸಂಖ್ಯೆಯಲ್ಲಿ 1951 ಜನರು ಒಂದಿಲ್ಲೊಂದು ಔದ್ಯೋಗಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಶೇ. 89.70 ರಷ್ಟು ಕೆಲಸಗಾರರು ತಮ್ಮ ಉದ್ಯೋಗವನ್ನು ಮುಖ್ಯ ಉದ್ಯೋಗವೆಂದು ವರ್ಣಿಸಿದ್ದಾರೆ. ಅದ್ಹೇಗೆಂದರೆ ವರ್ಷದಲ್ಲಿ 6 ತಿಂಗಳಿಗೂ ಅಧಿಕ ಕಾಲ ತಾವು ಪೂರ್ಣಾವಧಿ ಆದಾಯ ಗಳಿಕೆಯಲ್ಲಿ ತೊಡಗಿರುತ್ತಾರೆ. ಇನ್ನುಳಿದ ಶೇ. 10.30 ಜನರು ಜೀವನೋಪಾಯವನ್ನೊದಗಿಸುವ ಸಣ್ಣ-ಪುಟ್ಟ ಔದ್ಯೋಗಿಕ ಚಟುವಟಿಕೆಗಳ ಮೂಲಕ ತಮ್ಮ ಆದಾಯ ಗಳಿಸುತ್ತಿದ್ದಾರೆ. ಮುಖ್ಯ ಉದ್ಯೋಗದಲ್ಲಿ ತೊಡಗಿರುವ 1951 ಜನರ ಪೈಕಿ, 719 ಜನ ಉಳುವವರೇ (ಸ್ವಂತ ಅಥವಾ ಸಹಾಯಕ) ಮಿಕ್ಕ 454 ಜನರು ಕೃಷಿ ಕಾರ್ಮಿಕರಾಗಿದ್ದಾರೆ.

ಪ್ರಸಕ್ತ ಚಿತ್ರವು ವಿವರಿಸುವಂತೆ ವರ್ಕೋಡು ಗ್ರಾಮದಲ್ಲಿ ಶೇ. 35 ರಷ್ಟಿರುವ ಒಕ್ಕಲಿಗ ಜನಾಂಗವು ಪ್ರಧಾನ ಸಮುದಾಯವಾಗಿದ್ದು, ಶೇ. 30 ರಷ್ಟಿರುವ ಎರಡನೇ ಪ್ರಮುಖ ಜನಸಮುದಾಯವು ಕುಂಬಾರರು. ಈ ಗ್ರಾಮದಲ್ಲಿ ಇತರ ಸಮುದಾಯಗಳಾದ ಮಡಿವಾಳ ಶೆಟ್ಟರು, ಕ್ಷತ್ರಿಯ ನಾಯರ್, ಆಚಾರ್ಯರು, ಬ್ರಾಹ್ಮಣರು, ಲಿಂಗಾಯತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಎಲ್ಲರೂ ಸೇರಿ ಶೇ. 35 ರಷ್ಟಿದ್ದಾರೆ.

ಈ ಗ್ರಾಮದ ಬಹುಪಾಲು ಜನರು ಸಣ್ಣ ಹಿಡುವಳಿದಾರರು ಅದರಲ್ಲೂ 2 ಎಕರೆಗಿಂತಲೂ ಕಡಿಮೆ ಜಮೀನಿರುವವರು. ಕೇವಲ 1 ಅಥವಾ 2 ರೈತರು ಮಾತ್ರ 2 ಎಕರೆಗಿಂತ ಅಧಿಕ ಜಮೀನು ಹೊಂದಿರಬಹುದು. ಅಷ್ಟು ಚಿಕ್ಕ ಭೂಮಿಯು (2 ಎಕರೆಗಿಂತ ಕಡಿಮೆ ಜಮೀನು) ಕುಟುಂಬದ ಎಲ್ಲ ಸದಸ್ಯರಿಗೆ ವರ್ಷಪೂರ್ತಿ ಉದ್ಯೋಗವನ್ನು ಒದಗಿಸಲಾರದು; ಹಾಗಾಗಿ ಗ್ರಾಮಸ್ಥರು ಸಾಮಾನ್ಯವಾಗಿ ಹತ್ತಿರದ ನಗರ ಪ್ರದೇಶಗಳಿಗೆ ತಮ್ಮ ಜೀವನೋಪಾಯಕ್ಕಾಗಿ ಪರ್ಯಾಯ ಕೆಲಸಗಳನ್ನು ಅರಸಿ ವಲಸೆ ಹೋಗುತ್ತಾರೆ, ಏಕೆಂದರೆ ಗ್ರಾಮದಲ್ಲೇ ಸಂಪಾದನೆ ಮಾಡಲು ಬೇರೆ ಯಾವುದೇ ಕೆಲಸವಿಲ್ಲ. ಆದರೆ ವರ್ಕೋಡು ಗ್ರಾಮಸ್ಥರಿಗೆ ವ್ಯವಸಾಯದೊಂದಿಗೆ ಹಣ ಸಂಪಾದನೆ ಮಾಡಲು ಗ್ರಾಮದಲ್ಲಿಯೇ ಹೈನುಗಾರಿಕೆಯಿಂದ ಬೇರೊಂದು ಸುಲಭದ ಮಾರ್ಗವಿದೆ.

ನಿವೃತ್ತ್ ಟ್ರಸ್ಟ್ :
ಮಹಾತ್ಮಾ ಗಾಂಧೀಜಿಯವರ ವಿಚಾರವಾದದಲ್ಲಿ ಅದರಲ್ಲೂ ವಿಶೇಷವಾಗಿ `ದೇವರ ನಂತರ ಮುಖ್ಯವಾದದ್ದು ನೈರ್ಮಲ್ಯವೇ ಎಂಬ ನಿಲುವಿನಲ್ಲಿ ದೃಢ ನಂಬಿಕೆಯುಳ್ಳ ಶ್ರೀ ಪಿ.ಎಸ್. ಚಂದ್ರಣ್ಣ ಎಂಬರ ನಾಯಕತ್ವದಲ್ಲಿ ನಿವೃತ್ತ್ (ನೈರ್ಮಲ್ಯ ಮತ್ತು ವೃಕ್ಷಾಭಿವೃದ್ಧಿ) ಟ್ರಸ್ಟ್ ಸಂಸ್ಥೆಯು 1995 ರಲ್ಲಿ ನೋಂದಾಯಿಸಲ್ಪಟ್ಟಿದೆ. ಆರಂಭದಲ್ಲಿ ಚಂದ್ರಣ್ಣನವರೊಂದಿಗೆ ಕೆಲ ಸಮಾನ ಮನಸ್ಕ ಗ್ರಾಮಸ್ಥರು ಗ್ರಾಮ ನೈರ್ಮಲ್ಯದಲ್ಲಿ ಕೈಜೋಡಿಸಿದ್ದರು. ಸ್ವಲ್ಪ ಸಮಯದ ನಂತರ ಟ್ರಸ್ಟ್ ಮೈಸೂರು ವರ್ಕೋಡು ಗ್ರಾಮನದ ಮುಖ್ಯರಸ್ತೆ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಮುಖ್ಯವಾಗಿ ಸದರಿ ಕಾರ್ಯಕ್ರಮವನ್ನು ಆ ಬಡಾವಣೆಯಲ್ಲಿ ಗೃಹ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬೇಕಾಬಿಟ್ಟಿ ಬಿಸಾಡುತ್ತಿದ್ದರಿಂದ ಜನರಿಗೆ ಅರಿವಿನ ಅವಶ್ಯಕತೆಯಿದ್ದುದರಿಂದ ಏರ್ಪಡಿಸಲಾಗಿತ್ತು. ತದನಂತರ ನಗರ ಪಾಲಿಕೆ ಅದರ ಜವಾಬ್ದಾರಿಯನ್ನು ವಹಿಸಿಕೊಂಡ ಮೇಲೆ, ಟ್ರಸ್ಟ್ ಗ್ರಾಮದ ರೈತರ ಸಮಸ್ಯೆಗಳ ಕಡೆಗೆ ತನ್ನ ಕಾರ್ಯವನ್ನು ಕೇಂದ್ರೀಕರಿಸಿತು. ವ್ಯವಸಾಯದೊಂದಿಗೆ ಹೆಚ್ಚಿನ ಆದಾಯವನ್ನು ಒದಗಿಸುವ ಹೈನುಗಾರಿಕೆಗೆ ಟ್ರಸ್ಟ್ ಸಹಾಯ ಹಸ್ತ ಒದಗಿಸಿತು. 2010 ರ ಸುಮಾರಿಗೆ ಕೆಲವು ವ್ಯಕ್ತಿಗಳು ಸಂಸ್ಥೆಗೆ ಮೋಸ ಮಾಡುವ/ವಂಚಿಸುವ ಸುಳಿವು ದೊರೆತಾಗ ಸದರಿ ಸಹಾಯವನ್ನು ಸಂಘಗಳ ಮೂಲಕ ಅದರಲ್ಲೂ ವಿಶೇಷವಾಗಿ ಮಹಿಳಾ ಸಂಘಗಳ ಮೂಲ ಕಾರ್ಯಕ್ರಮವನ್ನು ವಿಸ್ತರಿಸಲು ತೀರ್ಮಾನಿಸಲಾಯ್ತು. ಆ ಅವಧಿಯ ನಂತರ ಮೈಸೂರು ತಾಲೂಕಿನಲ್ಲಿ `ಕ್ಷೀರ ಯೋಜನೆಯು ಪ್ರಾರಂಭವಾಯ್ತು. 2013 ವರೆಗೆ 75 ರಷ್ಟಿದ್ದು ಫಲಾನುಭವಿಗಳು, 2014ರ ಕೊನೆ-ಕೊನೆಗೆ 100 ನ್ನು ತಲುಪಿದೆ. 2015 ರಲ್ಲಿ ಇನ್ನೂ ಹೆಚ್ಚಾಗುವ ಆಶಯ ಟ್ರಸ್ಟ್‍ಗಿದೆ. ಈಗ ವರ್ಕೋಡು ಗ್ರಾಮವೊಂದರಲ್ಲೇ ತಿಂಗಳಿಗೆ ಅಂದಾಜು 1.5 ರಿಂದ 2 ಲಕ್ಷ ಲೀಟರ್ ಹಾಲು ಉತ್ಪಾದನೆ ಮತ್ತು ಸರಬರಾಜಾಗುತ್ತದೆ.

ಮಾಹಿತಿಗಳ ವಿಶ್ಲೇಷಣೆ :
ಹೈನುಗಾರಿಕೆಗೂ ಪೂರ್ವ ಪರಿಸ್ಥಿತಿ :

ಸಂಶೋಧನಾ ವಿಧಾನದಲ್ಲಿಯೇ ಈಗಾಗಲೇ ವಿವರಿಸಿರುವಂತೆ ಹಸುಗಳನ್ನು ಖರೀದಿಸಿ ಹೈನುಗಾರಿಕೆಯನ್ನು ಕೈಗೊಂಡಿರುವ 100 ರೈತರ ಪೈಕಿ 10 ರೈತರನ್ನು ಸ್ಯಾಂಪಲ್ ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ.
Picture
ಪಟ್ಟಿ 1ರಲ್ಲಿ ತೋರಿಸಿದಂತೆ ಮೂಲತಃ ಶೇ. 50 ರಷ್ಟು ಜನ ರೈತರಾಗಿದ್ದು, ಶೇ. 20 ರಷ್ಟು ಜನರು ಸಣ್ಣ ಪ್ರಮಾಣದಲ್ಲಿ ವ್ಯಾಪಾರವನ್ನು ಮಾಡುತ್ತಿದ್ದಾರೆ. ಇನ್ನುಳಿದ ಶೇ. 30 ರಷ್ಟು ಜನರು ಇನ್ನಿತರ ಸೇವೆಗಳು, ದಿನಗೂಲಿ, ಕಟ್ಟಡ ಕಾಮಗಾರಿ ಮತ್ತು ಮನೆ ಕೆಲಸಗಳಂತಹ ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ.
Picture
ವರ್ಕೋಡು ಗ್ರಾಮಕ್ಕೆ ನೀರಿನ ಸೌಲಭ್ಯವು ಹೇರಳವಾಗಿರುವುದರಿಂದ ಭತ್ತ ಇಲ್ಲಿನ ಪ್ರಧಾನ ಬೆಳೆಯಾಗಿದೆ. ಪಟ್ಟಿ 2 ರಲ್ಲಿ ಇದು ಬಹಳ ಸ್ಪಷ್ಟವಾಗಿ ಗೋಚರಿಸುತ್ತದೆ. ಶೇ. ರಷ್ಟು ಸ್ಯಾಂಪಲ್ ರೈತರು ಭತ್ತವನ್ನೂ ಇನ್ನುಳಿದ ಶೇ. 50 ರಷ್ಟು ರೈತರು ತರಕಾರಿ ಬೆಳೆಗಳೊಂದಿಗೆ ಮೇವನ್ನು ಬೆಳೆಯುತ್ತಾರೆ.
Picture
ಪ್ರಸಕ್ತ ಪಟ್ಟಿ 3 ರಲ್ಲಿರುವ ಹಾಗೆ ಹೈನುಗಾರಿಕೆಯನ್ನು ಕೈಗೊಳ್ಳುವುದಕ್ಕೂ ಮುಂಚೆ ಯಾರೊಬ್ಬರ ಆರ್ಥಿಕ ಪರಿಸ್ಥಿತಿಯೂ ಅತಿ ಉತ್ತಮ ಅಥವಾ ಉತ್ತಮವಾಗಿರಲಿಲ್ಲ. ಶೇ. 60 ರಷ್ಟು ಜನರ ಆರ್ಥಿಕ ಸ್ಥಿತಿಯ ಮಧ್ಯಮ ಸ್ಥಿತಿಯಲ್ಲಿದ್ದು, ಇನ್ನುಳಿದ ಶೇ. 40 ರಷ್ಟು ಜನರದ್ದು ಸಮಾಧಾನಕರ ಸ್ಥಿತಿಯಲ್ಲಿದೆ. ಯಾರೂ ಕೂಡಾ ಕಡಿಮೆ ಆದಾಯದಿಂದಾಗಿ ಶೋಚನೀಯ ಆರ್ಥಿಕ ಸ್ಥಿತಿಯಲ್ಲಿರಲಿಲ್ಲವೆಂಬುದೇ ಸಂತೋಷದ ಸಂಗತಿ. ಅದಕ್ಕೂ ಮೂಲ ಕಾರಣವೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಯೊಬ್ಬರೂ ಕೃಷಿಯೊಂದಿಗೆ ಅದಕ್ಕೇ ಸಂಬಂಧಿತ ಇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆ. ಅದರಲ್ಲೂ ವಿಶೇಷವಾಗಿ ವರ್ಕೋಡು ಗ್ರಾಮದಲ್ಲಿ ಈ ಸಂಪ್ರದಾಯವನ್ನು ಕಾಣಬಹುದಾಗಿದೆ.

ಹೈನುಗಾರಿಕೆಯಲ್ಲಿ ಹೂಡಿಕೆ ಮತ್ತು ಸಂಪಾದನೆ :
Picture
ಮೇಲಿನ ಪಟ್ಟಿಯು ವಿವರಿಸುವಂತೆ ಮೂರ್ನಾಲ್ಕು ವರ್ಷಗಳಲ್ಲಿಯಷ್ಟೇ ಅಧಿಕ ಜನರು ಹೈನುಗಾರಿಕೆಯಲ್ಲಿ ಹಸುಗಳನ್ನು ಖರೀದಿಸಿ ಹೈನುಗಾರಿಕೆಯಲ್ಲಿ ಗಂಭೀರವಾಗಿ ತೊಡಗಿಕೊಂಡಿದ್ದಾರೆ, ಎರಡು ವರ್ಷದಿಂದಿತ್ತೀಚೆಗೆ ಹಸುಗಳನ್ನು ಖರೀದಿಸಿ ಹೈನುಗಾರಿಕೆಯಲ್ಲಿ ತೊಡಗಿಕೊಂಡವರು ಶೇ. 30 ರಷ್ಟು ಜನಮಾತ್ರ, ಶೇ. 60 ಕ್ಕೂ ಹೆಚ್ಚಿನ ಜನರು ಎರಡರಿಂದ ನಾಲ್ಕು ವರ್ಷಗಳ ಅವಧಿಯಲ್ಲಿಯೇ ಹೈನುಗಾರಿಕೆ ಮಹತ್ವ ತಿಳಿದು ಅದರಲ್ಲಿ ತೊಡಗಿಕೊಂಡಿದ್ದಾರೆ. ಕೆಳಗಿನ ಎರಡೂ ಪಟ್ಟಿಗಳ ಪೈಕಿ ಮೊದಲನೇಯದರಿಂದ ಬಹಳಷ್ಟು ಜನರು ಹೆಚ್ಚು ಬಂಡವಾಳ ಹೂಡಿ ಗುಣಮಟ್ಟದ ಹಸುಗಳನ್ನು ಕೊಂಡುಕೊಂಡಿದ್ದಾರೆ. ಶೇ. 70 ರಷ್ಟು ಜನ ರೂ. 40,000/- ಮೌಲ್ಯದ ಹಸುಗಳನ್ನು ಖರೀದಿಸಿದರೆ, ಶೇ. 10 ರಷ್ಟು ಜನ ರೂ. 35,000/- ಮೌಲ್ಯದ ಹಸುಗಳನ್ನು ಖರೀದಿಸಿದ್ದಾರೆ. ಇನ್ನುಳಿದ ಶೇ. 20 ರಷ್ಟು ಜನರು ರೂ. 25,000/- ಮೌಲ್ಯದ ಹಸುಗಳನ್ನು ಪಡೆದಿದ್ದಾರೆ. ಕಡಿಮೆ ಬೆಲೆಯ ಅಂದರೆ ರೂ. 20,000/- ಮೌಲ್ಯದ ಹಸುವನ್ನು ಯಾರೂ ಖರೀದಿಸಿಲ್ಲ. ಇದರಿಂದ ರೈತರು ಗುಣಮಟ್ಟಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿರುವುದು ಸ್ಪಷ್ಟವಾಗುತ್ತದೆ. ಹೀಗಿದ್ದಾಗ ಕೋಷ್ಟಕ ಸಂಖ್ಯೆ 6 ನ್ನು ನೋಡಿದರೆ ಆಶ್ಚರ್ಯವುಂಟಾಗುತ್ತದೆ. ಅದೇನೆಂದರೆ ಶೇ. 60 ರಷ್ಟು ರೈತರ ಹಸುಗಳು ಕಡಿಮೆ ಹಾಲಿನ ಇಳುವರಿ ಕೊಡುತ್ತಿರುವುದು ತಿಳಿದುಬರುತ್ತದೆ. ಅದರಲ್ಲೂ ಶೇ. 60 ರಷ್ಟು ರೈತರ ಹಸುಗಳು ದಿನದಲ್ಲಿ ಕೇವಲ 10 ಲೀಟರ್ ಹಾಲು ಕೊಟ್ಟರೆ, ಶೇ. 20 ರೈತರು 20 ಲೀಟರ್ ಹಾಲು ಪಡೆಯುತ್ತಿದ್ದಾರೆ. ಉತ್ತಮ ಅಥವಾ ಅಧಿಕ ಇಳುವರಿ ಪಡೆಯುವ ರೈತರು ಕೇವಲ ಶೇ. 20 ಮಾತ್ರ, ಅವರು ದಿನವೊಂದಕ್ಕೆ ಒಂದು ಹಸುವಿನಿಂದ 32 ಲೀಟರ್ ಹಾಲು ಪಡೆಯುತ್ತಿದ್ದಾರೆ.
Picture
ನೀ ನನಗಿದ್ದರೆ, ನಾ ನಿನಗೆ...
ಇದೇ ಗ್ರಾಮದ ರೈತ ಶ್ರೀ ವ್ಹಿ.ಸಿ. ನಾಗರಾಜ ಎಂಬುವವರ ಒಂದು ಹಸು ದಿನವೊಂದಕ್ಕೆ ಅತ್ಯಧಿಕ 36 ಲೀಟರ್ ಹಾಲಿನ ಇಳುವರಿ ನೀಡುತ್ತಿದೆ. ಕಾರಣ ಹುಡುಕಲಾಗಿ ಸದರೀ ಹಸುವಿನ ರೈತರು ಉತ್ತಮ ಮೇವು, ಆಹಾರ, ಸಾಕಷ್ಟು ನೀರು ಪೂರೈಸುವುದಲ್ಲದೇ ಅದರ ನಿರ್ವಹಣೆಗಾಗಿ ಸ್ವಲ್ಪ ಹೆಚ್ಚಿಗೆ ಹಣ ವಿನಿಯೋಗಿಸುತ್ತಾರೆ ಅದರ ಫಲವಾಗಿ ಉತ್ತಮ ಪ್ರತಿಫಲ.

ಆದರೆ ಪಟ್ಟಿ 7 ರಲ್ಲಿನ ಹಸುಗಳ ನಿರ್ವಹಣಾ ವೆಚ್ಚದ ಕಡೆಗೆ ಕಣ್ಣು ಹಾಯಿಸಿದರೆ ಅರ್ಧದಷ್ಟು ಜನ ರೈತರು ಹೆಚ್ಚಿನ ಹಣವನ್ನು ವಿನಿಯೋಗಿಸುತ್ತಿದ್ದಾರೆ. ಶೇ. 50 ರಷ್ಟು ಜನ ರೈತರು ತಿಂಗಳಿಗೆ 3500 ರಿಂದ 5000 ರೂ.ಗಳವರೆಗೆ ಹಸುಗಳ ನಿರ್ವಹಣೆಗೆ ಖರ್ಚು ಮಾಡುತ್ತಿದ್ದಾರೆ. ಇದರಲ್ಲಿ ಬಹಳಷ್ಟು ಹಣವನ್ನು ಮೇವು ಕೊಳ್ಳುವುದಕ್ಕಾಗಿಯೇ ಬಳಸುತ್ತಿದ್ದಾರೆ ಮತ್ತು ಸ್ವಲ್ಪ ಹಣವನ್ನು ಪಶು ವೈದ್ಯಕೀಯ ಮತ್ತು ಔಷಧಗಳಿಗಾಗಿ ವಿನಿಯೋಗಿಸುತ್ತಿದ್ದಾರೆ. ಇನ್ನುಳಿದ ಶೇ. 50 ರಷ್ಟು ರೈತರು ಕಡಿಮೆ ಖರ್ಚಿ(ಹಣ)ನಲ್ಲಿಯೇ ನಿರ್ವಹಿಸುತ್ತಿದ್ದಾರೆ. 5 ಮತ್ತು 6ನೇ ಪಟ್ಟಿಗಳನ್ನು ತುಲನೆ ಮಾಡಿ ನೋಡಿದರೆ ಉತ್ತಮ ಗುಣಮಟ್ಟದ ಹಸುಗಳಿದ್ದು, ಕಡಿಮೆ ಹಾಲಿನ ಇಳುವರಿ ಹಾಗೂ ಇಲ್ಲಿ ಹೆಚ್ಚಿನ ನಿರ್ವಹಣಾ ವೆಚ್ಚವೇನೋ ಸರಿ ಆದರೆ ಹಸುಗಳಿಗೆ ಆಹಾರ ವಿಶೇಷವಾಗಿ ಹಸಿಮೇವು ಸಾಕಾಗುತ್ತಿಲ್ಲವೆನ್ನುವುದು ಸ್ಪಷ್ಟವಾಗುತ್ತದೆ.
Picture
ಹೈನುಗಾರಿಕೆಯಿಂದ ಆದಾಯಕ್ಕೆ ಪ್ರಮುಖ ಮೂಲವಾದ ಹಾಲು ಉತ್ಪಾದನೆಯ ಜೊತೆಗೇ ಇತರ ಉಪ-ಉತ್ಪನ್ನಗಳು ಹೈನುಗಾರಿಕೆಯಿಂದ ದೊರೆಯುತ್ತವೆ. ಅವುಗಳು ಆದಾಯ ತರದೇ ಇದ್ದರೂ, ಕೌಟುಂಬಿಕ ಮತ್ತು ಸಾಮಾಜಿಕ ಬೇಡಿಕೆಗಳನ್ನು ಈಡೇರಿಸಿ ರೈತರಿಗೆ ಒಂದು ರೀತಿ ಸಾಮಾಜಿಕ ಮೌಲ್ಯ/ಘನತೆಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. 8ನೇ ಅ ಮತ್ತು ಬ ಪಟ್ಟಿಗಳ ಪ್ರಕಾರ ಎಲ್ಲಾ ರೈತರೂ ಹಾಲೊಂದಷ್ಟನ್ನು ಉಳಿಸಿಕೊಂಡು ಅದರ ಉಪ-ಉತ್ಪನ್ನಗಳನ್ನು ತಯಾರಿಸಿಕೊಂಡು ಬಳಸಿಕೊಳ್ಳುತ್ತಾರೆ. ಶೇ. 20 ರಷ್ಟು ಮೊಸರು ತಯಾರಿಸಿಕೊಂಡರೆ, ಶೇ. 20 ರಷ್ಟು ಮಜ್ಜಿಗೆ ತಯಾರಿಸಿ ಬಳಸಿಕೊಳ್ಳುತ್ತಾರೆ. ಉಳಿದ ಶೇ. 60ರಷ್ಟು ರೈತರು ಗಿಣ್ಣು ಮುಂತಾದ ವಸ್ತುಗಳನ್ನು ತಯಾರಿಸಿ ಕುಟುಂಬದ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಾರೆ.

ಗೋ-ಸಗಣಿಯ ವಿಷಯಕ್ಕೆ ಬಂದರೆ ವರ್ಕೋಡು ಗ್ರಾಮವು ರೈತ ಪ್ರಧಾನ ಊರಾಗಿರುವುದರಿಂದ ತಮ್ಮ ತಮ್ಮ ಜಮೀನುಗಳಿಗೆ ಬಳಸಿಕೊಳ್ಳಲು ಗೊಬ್ಬರವಾಗಿ ಬಳಸಿಕೊಳ್ಳುವವರೇ ಜಾಸ್ತಿ, ಶೇ. 80 ರಷ್ಟು ಜನ ಸಗಣಿಯನ್ನು ಗೊಬ್ಬರಕ್ಕೋಸ್ಕರ ಬಳಸಿಕೊಂಡರೆ, ಮಿಕ್ಕ ಶೇ. 20 ರಷ್ಟು ಜನರು ಅದನ್ನು ಮಾರಿಕೊಳ್ಳುತ್ತಾರೆ. ದನಗಳ ಸಗಣಿಯು ಬೆಳೆಗಳಿಗೆ ಉತ್ಕೃಷ್ಟವಾದ ಗೊಬ್ಬರವಾಗಿದ್ದು ಇಳುವರಿ ಹೆಚ್ಚಿಸಲು ತುಂಬಾ ಸಹಕಾರಿಯಾಗುತ್ತದೆ.

ಈ ಮಾಹಿತಿಗಳೊಂದಿಗೆ ರೈತರು ತಮ್ಮ ದಿನನಿತ್ಯದ ಕಾಯಕದಲ್ಲಿ ನಿರತರಾಗಿರುವಾಗ ಸಂಶೋಧಕರುಗಳು ಕೊಟ್ಟಿಗೆಯೊಳಗಿನ ಮುದ್ದಾದ ಕರುಗಳ ಮೈ ನೇವರಿಸುತ್ತಾ ಅವರೊಂದಿಗೆ ಮಾತನಾಡುತ್ತಾ ಮಾಹಿತಿ ಕಲೆಹಾಕಲಾಯ್ತು.
Picture
ಪ್ರಸ್ತುತ ಪಟ್ಟಿ ಸಂಖ್ಯೆ 9 ರಿಂದ ತಿಳಿದುಕೊಳ್ಳುವುದೇನೆಂದರೆ ಬಹುಪಾಲು ಜನ ರೈತರು ಈ ಉದ್ದಿಮೆಯಲ್ಲಿ ಪ್ರತೀ ತಿಂಗಳು ಒಂದು ಹಸುವಿನಿಂದ ಕನಿಷ್ಟ ರೂ. 2700/- ಆದಾಯವನ್ನು ಪಡೆಯುತ್ತಿದ್ದಾರೆ. ಸ್ಯಾಂಪಲ್ ರೈತರ ಪೈಕಿ ಶೇ. 30 ರಷ್ಟು ರೈತರು ಪ್ರತೀ ಹಸುವಿನಿಂದ ತಿಂಗಳಿಗೆ 2700 ರೂಪಾಯಿ ಕೇವಲ ಹಾಲಿನಿಂದ ಸಂಪಾದಿಸಿದರೆ, ಶೇ. 30 ರಷ್ಟು ರೈತರು ರೂ. 5400/- ಗಳನ್ನು ಸಂಪಾದಿಸುತ್ತಾರೆ. ಇನ್ನುಳಿದ ಶೇ. 40 ರಷ್ಟು ರೈತರು ಉತ್ತಮ ಆದಾಯ ಪಡೆಯುತ್ತಿದ್ದಾರೆ. ಶೇ. 30 ರಷ್ಟು ಜನ ಪ್ರತೀ ಹಸುವಿನ ಹಾಲಿನಿಂದ ತಿಂಗಳಿಗೆ ರೂ. 8600/- ಆದಾಯ ಗಳಿಸಿದರೆ, ಶೇ. 10 ರಷ್ಟು ಜನ ರೈತರು ಅತ್ಯುತ್ತಮ ಸಂಪಾದನೆ ಮಾಡುತ್ತಾರೆ, ಅಂದರೆ ತಿಂಗಳಿಗೆ ಪ್ರತೀ ಹಸುವಿನ ಹಾಲಿನಿಂದ ರೂ. 10,800/- ಆದಾಯ ಗಳಿಸುತ್ತಿದ್ದಾರೆ.
Picture
Picture
ಸದರಿ ಪಟ್ಟಿಗಳನ್ನು ಅವಲೋಕಿಸಿದರೆ ಶೇ. 60 ಜನರು ದನಗಳಿಗೆ ಕಾಯಿಲೆಯ ಬಾಧೆ ಇಲ್ಲವೆಂದು ಹೇಳಿದರೆ ಶೇ. 40 ರಷ್ಟು ಜನರು ಇದೆಯೆಂದು ಹೇಳಿದ್ದಾರೆ. ಪಶುಗಳಿಗೆ ಬರುವ ಕಾಯಿಲೆಗಳ ಬಗ್ಗೆ ಜ್ಞಾನ ಅಥವಾ ಅರಿವಿನ ಬಗ್ಗೆ ವಿಚಾರಿಸಲಾಗಿ ಶೇ. 50 ಜನರಿಗೆ ತಿಳುವಳಿಕೆಯಿದ್ದರೆ ಇನ್ನುಳಿದ ಶೇ. 50 ಜನರಿಗೆ ಅರಿವೇ ಇಲ್ಲವೆಂಬುದು ತಿಳಿದು ಬಂದಿದೆ. ಈ ಕಾರಣಕ್ಕಾಗಿಯೇ ಅವರು ರಾಸುಗಳ ನಿರ್ವಹಣೆಯಲ್ಲಿ ತೋರಿದ ನಿಷ್ಕಾಳಜಿಯ ಪರಿಣಾಮದಿಂದ ಇಳುವೆರಿ ಮತ್ತು ಆದಾಯದಲ್ಲಿ ತುಂಬಾ ವ್ಯತ್ಯಾಸವು ಕಂಡು ಬರುತ್ತಿದೆ.

ಅಧ್ಯಯನದ ಆವಿಷ್ಕಾರಗಳು :
ಹೈನುಗಾರಿಕೆಯಿಂದ ಫಲಾನುಭವಿಗಳ ಕೌಟುಂಬಿಕ ಆದಾಯ ವೃದ್ಧಿಸದೆ, ಮಹಿಳೆಯರ ಸಂಪಾದನಾ ಸಾಮರ್ಥ್ಯ ಮತ್ತು ಉಳಿತಾಯದ ಸಾಮರ್ಥ್ಯಗಳೆರಡೂ ಹೆಚ್ಚಾಗಿವೆ. ಪ್ರಾರಂಭದಲ್ಲಿ ಕೇವಲ ರೂ. 10/- ಗಳ ಉಳಿತಾಯ ಮಾಡುತ್ತಿದ್ದ ಸ್ವ-ಸಹಾಯ ಸಂಘಗಳ ಸದಸ್ಯರುಗಳ ಈಗಿನ ವಾರದ ಉಳಿತಾಯ ರೂ. 50 ಕ್ಕೇರಿದೆ.

ಎಲ್ಲಾ ಫಲಾನುಭವಿಗಳು ನಿವೃತ್ತ್ ಟ್ರಸ್ಟ್‍ನ ಸದಸ್ಯರುಗಳಾಗಿದ್ದು, ಅವರೆಲ್ಲರೂ ಸಂಸ್ಥೆಯಿಂದ ಸಾಲ ಪಡೆದು, ಹೈನುಗಾರಿಕೆಯಲ್ಲಿ ಹೂಡಿಕೆ ಮಾಡಿದ್ದಾರೆ, ಅಷ್ಟೇ ಪ್ರಾಮಾಣಿಕತೆಯಿಂದ ಹಣ ಹಿಂತಿರುಗಿಸುತ್ತಿದ್ದಾರೆ.
​
ಸಂಸ್ಥೆ (ಟ್ರಸ್ಟ್)ಯು ಸಾಲ ಕೊಡುವುದು ಹಸುಗಳನ್ನು ಕೊಂಡುಕೊಳ್ಳಲು ಮಾತ್ರ, ಬೇರೆ ಯಾವ ಉದ್ದೇಶಕ್ಕೂ ಬಳಸುವಂತಿಲ್ಲ.

ಫಲಾನುಭವಿಗಳ ಮಧ್ಯದಲ್ಲೇ ಒಳ್ಳೆಯ ಸಂಬಂಧವಿದೆ, ಪರಸ್ಪರರಲ್ಲಿ ಸಹಾಯ-ಸಹಕಾರಗಳು ನಡೆಯುತ್ತಿದ್ದು, ಮಾಹಿತಿಗಳ ಹಂಚಿಕೆಯೂ ಆಗುತ್ತಿದೆ.

ಹೈನುಗಾರಿಕೆ ಕೈಗೊಂಡಿರುವ ಎಲ್ಲಾ ರೈತರೂ ಹಸುವಿನ ಸಗಣಿಯನ್ನು ತಮ್ಮ ಜಮೀನುಗಳಿಗೆ ಗೊಬ್ಬರವಾಗಿ ಬಳಸುತ್ತಿದ್ದಾರೆ, ಅದು ಉತ್ಕೃಷ್ಟ ಸಾವಯವ ಪದಾರ್ಥಗಳ ಮೂಲವಾಗಿದ್ದು, ಮಣ್ಣಿನ ಫಲವತ್ತತೆ ಹೆಚ್ಚಿಸುವುದಲ್ಲದೇ ಬೆಳೆಗಳ ಇಳುವರಿಯನ್ನು ವೃದ್ಧಿಸುತ್ತದೆ.

ಅತೀ ಸಣ್ಣ ಪ್ರಮಾಣದ ಹೈನುಗಾರಿಕೆಯೆಂದರೆ ಒಂದೇ ಹಸುವನ್ನು ಸಾಕಾಣಿಕೆ ಮಾಡಿಕೊಂಡಿರುವ ಚಿಕ್ಕ ಕುಟುಂಬದಿಂದ 8 ಹಸುಗಳನ್ನು ನಿರ್ವಹಣೆ ಮಾಡುತ್ತಿರುವ ದೊಡ್ಡ ರೈತ ಕುಟುಂಬಗಳೂ ಇಲ್ಲಿವೆ.

ಕಂಡು ಬಂದ ಸವಾಲುಗಳು :
ಬಡಜನರು ರಾಸುಗಳಿಗಾಗಿಯೇ ವಿಶೇಷ ಕೊಟ್ಟಿಗೆಗಳನ್ನು ಕಟ್ಟಿಕೊಳ್ಳುತ್ತಿಲ್ಲ ಮತ್ತು ರಾಸುಗಳ ನಿರ್ವಹಣೆ ಕಷ್ಟವೆನಿಸುತ್ತಿದೆ.

ಕೆಲವು ಫಲಾನುಭವಿಗಳಿಗೆ ತಮ್ಮ ಹಸುಗಳಿಗೆ ಬೇಕಾಗುವ ಮೇವು ಬೆಳೆಯಲು ಸ್ವಂತ ಜಮೀನು ಇಲ್ಲವಾದ್ದರಿಂದ, ರೈತರಿಂದ ಮೇವನ್ನು ಖರೀದಿಸಬೇಕಾಗಿದೆ.

ಗ್ರಾಮೀಣ ಜನತೆ ತಮ್ಮ ಹಸುಗಳನ್ನು ರಕ್ಷಿಸಲಾಗದೇ ಕಳೆದುಕೊಳ್ಳುತ್ತಿದ್ದಾರೆ, ಕೆಲವು ಹಸುಗಳು ಕಾಲು-ಬಾಯಿ ಬೇನೆ ರೋಗದಿಂದ ಸತ್ತಿವೆ.

ಉಪಸಂಹಾರ :
ವರ್ಕೋಡು ಗ್ರಾಮದಲ್ಲಿ ಸತತ ಮೂರ್ನಾಲ್ಕು ವರ್ಷಗಳಿಂದ ಹೆಚ್.ಎಫ್. ಹಸುಗಳ ಸಾಕಾಣಿಕೆ ಮಾಡಿ ಕೈಗೊಂಡ ಹೈನುಗಾರಿಕೆಯಿಂದ ಹಾಲು ಉತ್ಪಾದನೆಯ ಮೂಲಕ ಅಶಕ್ತತೆಯನ್ನು ನಿರ್ಮೂಲನ ಮಾಡುವ ಮತ್ತು ಸುಸ್ಥಿರ ಗ್ರಾಮೀಣ ಜೀವನೋಪಾಯ ನಿಖರಪಡಿಸಿದೆ. ಇತ್ತೀಚೆಗೆ ಇಲ್ಲಿ ಜನರು ಹೈನುಗಾರಿಕೆಯನ್ನು ಮಾಡುತ್ತಿದ್ದು ಆ ಮುಖೇನ ತಮ್ಮ ಕುಟುಂಬದ ಆದಾಯ ಹೆಚ್ಚಿಸಿಕೊಳ್ಳುತ್ತಿದ್ದಾರೆ ಅಷ್ಟೇ ಅಲ್ಲ, ಸಂಪಾದನೆ ಹಾಗೂ ಉಳಿತಾಯದ ಸಾಮರ್ಥ್ಯವು ಹೆಚ್ಚುತ್ತಿದೆ. ಕೃಷಿಯೊಂದಿಗೆ ಹೈನುಗಾರಿಕೆಯು ಗ್ರಾಮೀಣ ಜನತೆಯ ಜೀವನೋಪಾಯ ಪ್ರಧಾನ ಪಾತ್ರ ವಹಿಸುತ್ತಿದೆ.

ಬಹಳಷ್ಟು ಜನ ವ್ಯವಸಾಯದೊಂದಿಗೆ ತಮ್ಮ ಜಮೀನಿನಲ್ಲಿ ಮೇವನ್ನು ಬೆಳೆದು ತಮ್ಮ ಹಸುಗಳಿಗೆ ಬಳಸುತ್ತಾರೆ ಇದರಿಂದ ಹಾಲಿನ ಇಳುವರಿ ಹೆಚ್ಚಾಗುತ್ತದೆ. ಕೆಲ ಜನರು ಪಶು ವೈದ್ಯಕೀಯ ಸೇವೆಯೊಂದಿಗೆ ಉತ್ಕೃಷ್ಟ ಆಹಾರವನ್ನು ಒದಗಿಸುತ್ತಿರುವುದರಿಂದ ತಮ್ಮ ಹಸುಗಳಿಗಾಗಿ ಹೆಚ್ಚು ಹಣ ಖರ್ಚು ಮಾಡುತ್ತಿದ್ದಾರೆ. ಜನರು ತಮ್ಮ ಜಮೀನಿನ ಸ್ವಲ್ಪ ಭಾಗದಲ್ಲಿ ಮೇವನ್ನು ಬೆಳೆದುಕೊಂಡು ಹೈನುಗಾರಿಕೆಯನ್ನು ಮಾಡಿದರೆ ಇನ್ನೂ ಉತ್ತಮ ಜೀವನ ಸಾಗಿಸಲು ಸಾಧ್ಯವಿದೆ. ಆದರೆ ಕೆಲವು ಜನರಿಗೆ ಜಮೀನು ಇರುವುದಿಲ್ಲ, ಆದರೂ ಕೂಡಾ ಹೈನುಗಾರಿಕೆ ಮಾಡುತ್ತಿದ್ದಾರೆ. ಹೈನುಗಾರಿಕೆಯು ವರ್ಕೋಡು ಗ್ರಾಮಸ್ಥರ ಜೀವನಕ್ಕೆ ಜೀವಕಳೆ ತುಂಬಿದೆ.


ಸಿದ್ದಪ್ಪಾ ಎಸ್. ಮಡಿವಾಳರ
ದೇವರಾಜ ಆರ್.
0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)