SKH
  • HOME
    • About Us
  • English Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Online Groups
  • Search
  • Contact Us
  • HOME
    • About Us
  • English Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Online Groups
  • Search
  • Contact Us
SKH

ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು....

7/6/2017

0 Comments

 
Picture
ಸ್ವಾಮಿ ವಿವೇಕಾನಂದರು ಒಬ್ಬ `ದಡ್ಡ` ವಿದ್ಯಾರ್ಥಿಯಾಗಿದ್ದರು. `ವಿದ್ಯಾರ್ಥಿಗಳಿಗೆ ಬೋಧಿಸಲು ಬರುವುದಿಲ್ಲ` ಎಂಬ ಕಾರಣಕ್ಕೆ ಶಿಕ್ಷಕನ ಉದ್ಯೋಗ ಕಳೆದುಕೊಂಡಿದ್ದರು.

ಹುಟ್ಟಿನಿಂದಲೇ ರೋಗಿಷ್ಠರಾಗಿದ್ದ ಅವರು ಸಾಯುವ ಹೊತ್ತಿಗೆ ಒಂದೆರಡಲ್ಲ, ಮೂವತ್ತೊಂದು ಬಗೆಯ ರೋಗಗಳಿಂದ ಬಳಲಿ ಹೋಗಿದ್ದರು. ಎಲ್ಲ ಬಂಗಾಳಿಗಳಂತೆ ಅವರೊಬ್ಬ ಮಹಾ ತಿಂಡಿಪೋತರಾಗಿದ್ದರು.
​
ಜೀವನದ ಕೊನೆಯ ದಿನದವರೆಗೂ ಅವರು ಮಾಂಸಾಹಾರಿ ಆಗಿದ್ದರು. ಜತೆಗೆ ದೇಶ-ವಿದೇಶದ ಮಾಂಸಾಹಾರಿ ಅಡುಗೆಯನ್ನು ಮಾಡುವ ಪಾಕಪ್ರಾವೀಣ್ಯತೆ ಹೊಂದಿದ್ದರು. ವ್ಯಸನಿಯಂತೆ ಸಿಗರೇಟ್-ಹುಕ್ಕಾ ಸೇದುವ ಧೂಮಪಾನಿಯಾಗಿದ್ದರು. ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎಲ್ಲರ ಮನೆಯಲ್ಲಿ ಭೇದ ಇಲ್ಲದೆ ಊಟ ಮಾಡುತ್ತಿದ್ದರು.
ಸನ್ಯಾಸಿಯಾಗಿದ್ದುಕೊಂಡೇ ಅವರು ಅಮೆರಿಕದ ಪ್ರಖ್ಯಾತ ಹೋಟೆಲ್‌ಗಳಲ್ಲಿ ರಾತ್ರಿಯಿಂದ ಬೆಳಗಿನ ಜಾವದವರೆಗೆ ನಡೆಯುವ ಔತಣಕೂಟಗಳಲ್ಲಿ ಭಾಗವಹಿಸುತ್ತಿದ್ದರು....ಹೀಗೆ ಹೇಳುತ್ತಾ ಹೋದರೆ ಸ್ವಾಮಿ ವಿವೇಕಾನಂದರನ್ನು `ಹಿಂದೂ ಧರ್ಮದ ವೀರ ಸನ್ಯಾಸಿ` ಎಂದು ಕೊಂಡಾಡುತ್ತಾ ಅವರ 150ನೇ ಜಯಂತಿ ಆಚರಣೆಯ ಸಂಭ್ರಮದಲ್ಲಿ ಮುಳುಗಿರುವವರಿಗೆ ಆಘಾತವಾದೀತು! ಆದರೆ ಇದು ಸತ್ಯ.
Picture
ಒಬ್ಬ ಶೂದ್ರನಾಗಿ ಹಿಂದೂ ಧರ್ಮದ ಪರಂಪರೆಗೆ ವಿರುದ್ಧವಾಗಿ ಸನ್ಯಾಸಿ ದೀಕ್ಷೆ ಪಡೆದ ವಿವೇಕಾನಂದರು, ಅದೇ ಪರಂಪರೆಯನ್ನು ಧಿಕ್ಕರಿಸಿ ಸಮುದ್ರ ಲಂಘನ ಮಾಡಿದ್ದರು.
 
ಸನಾತನಿಗಳು ದ್ವೇಷಿಸುತ್ತಿದ್ದ `ಮ್ಲೇಚ್ಛರ` ಮನೆಗಳಲ್ಲಿಯೇ ಉಳಿದು ಉಂಡು ದಿನ ಕಳೆದಿದ್ದರು. ಇದಕ್ಕಾಗಿಯೇ ಚಿಕಾಗೋ ಧರ್ಮ ಸಮ್ಮೇಳನಕ್ಕೆ ಹೋಗಿ ಹಿಂದಿರುಗಿದ ಅವರನ್ನು ಸ್ವಾಗತಿಸಲು ರಚಿಸಿದ ಸಮಿತಿಗೆ ಅಧ್ಯಕ್ಷರಾಗಲು ಹೈಕೋರ್ಟ್ ನ್ಯಾಯಮೂರ್ತಿ ಗುರುದಾಸ್ ಮುಖರ್ಜಿ ನಿರಾಕರಿಸಿದ್ದರು.

ಸನ್ಯಾಸಿಯಾದ ನಂತರವೂ ಬಹಳಷ್ಟು ಮೇಲ್ಜಾತಿ ಗಣ್ಯರು ಅವರನ್ನು `ಸೋದರ`ನೆಂದು ಕರೆಯುತ್ತಿದ್ದರೇ ಹೊರತು `ಸ್ವಾಮಿ` ಎನ್ನುತ್ತಿರಲಿಲ್ಲ. ಹಿಂದೂ ಧರ್ಮದ ಜಾತೀಯತೆ, ಅಸ್ಪೃಶ್ಯತೆ, ಅಂಧ ಸಂಪ್ರದಾಯಗಳು, ದೇವಾಲಯಗಳಲ್ಲಿ ನಡೆಯುತ್ತಿರುವ ಡಾಂಭಿಕತನ, ಮತಾಂತರದ ಬಗ್ಗೆ ಅವರು ಬರೆದುದನ್ನು ಓದಿದರೆ ಅವರೊಬ್ಬ ಹಿಂದು ವಿರೋಧಿ ಎಂದು ಹಿಂದುತ್ವದ ಉಗ್ರ ಪ್ರತಿಪಾದಕರು ಸುಲಭದಲ್ಲಿ ಆರೋಪಿಸಬಹುದು.

`ತಲೆ ಮೇಲು, ಕಾಲು ಕೀಳು` ಎಂದೆಲ್ಲ ಮನುಷ್ಯನ ಅಂಗಾಂಗಳಲ್ಲಿಯೇ ತಾರತಮ್ಯ ಕಾಣುತ್ತಿದ್ದ ಹಿಂದುಗಳ ನಡವಳಿಕೆಯಿಂದ ರೋಸಿಹೋಗಿದ್ದ ಅವರು, ಮನುಷ್ಯನಿಗೆ `ಮುಸ್ಲಿಂ ದೇಹ ಮತ್ತು ವೇದಾಂತದ ಮೆದುಳು` ಇರಬೇಕೆಂದು ಹೇಳುತ್ತಿದ್ದರು.

ಮುಸ್ಲಿಂ ಮನೆಯಲ್ಲಿ ಊಟಮಾಡಿದ್ದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿದ್ದ ಅವರ ಅಭಿಮಾನಿ ಖೇತ್ರಿಯ ಮಹಾರಾಜನಿಗೆ ವಿವೇಕಾನಂದರು `ನಾನು ಭಂಗಿಗಳ ಜತೆ ಕೂತು ಕೂಡಾ ಊಟಮಾಡಬಲ್ಲೆ. ನಿಮ್ಮಂತಹವರ ಬಗ್ಗೆ ನಾನು ಹೆದರಲಾರೆ. ನಿಮಗೆ ದೇವರು ಇಲ್ಲವೇ ಧರ್ಮದ ಬಗ್ಗೆ ಗೊತ್ತಿಲ್ಲ` ಎಂದು ತಿರುಗೇಟು ನೀಡಿದ್ದರು.

`ಜೀಸಸ್ ಬದುಕಿದ್ದ ದಿನಗಳಲ್ಲಿ ನಾನೇನಾದರೂ ಪ್ಯಾಲೆಸ್ತೀನ್‌ನಲ್ಲಿದ್ದಿದ್ದರೆ ಕಣ್ಣಿರಿನಿಂದಲ್ಲ, ನನ್ನ ಹೃದಯದಿಂದ ರಕ್ತಬಸಿದು ಆತನ ಪಾದ ತೊಳೆಯುತ್ತಿದ್ದೆ..` ಎಂದು ಭಾವುಕರಾಗಿ ಅವರು ಬರೆದುಕೊಂಡಿದ್ದಾರೆ.

ಹಿಂದೂಗಳು ಮುಸ್ಲಿಂ ದೊರೆಗಳ ಪ್ರಭಾವ ಮತ್ತು ಬಲವಂತದಿಂದಾಗಿ ಮತಾಂತರಗೊಂಡರು ಎನ್ನುವುದನ್ನು ಅವರು ಒಪ್ಪುತ್ತಿರಲಿಲ್ಲ.

ಹಿಂದೂ ಧರ್ಮದ ಒಳಗಿನ ಜಾತೀಯತೆ, ಅಸ್ಪೃಶ್ಯತೆ, ಶೋಷಣೆ ಇದಕ್ಕೆ ಕಾರಣ. ಮೂಲಭೂತವಾದ ಮಾನವಹಕ್ಕುಗಳು ಮತ್ತು ವ್ಯಕ್ತಿ ಘನತೆಯನ್ನು ಗೌರವಿಸದೆ ಇರುವ ಧರ್ಮ ಅಲ್ಲವೇ ಅಲ್ಲ, ಅದು `ಪ್ರೇತ ನೃತ್ಯ`, ಅದು ನಡೆಯುವ ಸ್ಥಳ ನರಕ` ಎಂದು ಹೇಳಿದ್ದರು.

`ಧರ್ಮ-ಧರ್ಮಗಳ ನಡುವೆ ಸಹನೆಯಷ್ಟೇ ಇದ್ದರಷ್ಟೇ ಸಲ್ಲದು, ಅವುಗಳನ್ನು ಸತ್ಯ ಎಂದು ಒಪ್ಪಿಕೊಳ್ಳಬೇಕು, ಗುರು ರಾಮಕೃಷ್ಣ ಪರಮಹಂಸರಿಂದ ನಾನು ಇದನ್ನೇ ಕಲಿತದ್ದು` ಎಂದು ಅವರು ಬರೆದಿದ್ದಾರೆ.

ವಿವೇಕಾನಂದರ ಬಗ್ಗೆ ನಮ್ಮಲ್ಲಿ ಇನ್ನಷ್ಟು ಗೌರವ-ಅಭಿಮಾನ ಹುಟ್ಟಿಸುವ ಈ `ಮನುಷ್ಯ ಮುಖ`ವನ್ನು ಅವರ 150ನೇ ಜಯಂತಿ ಆಚರಣೆಯಲ್ಲಿ ಬಿಂಬಿಸಲಾಗುತ್ತಿರುವ `ಉತ್ಸವಮೂರ್ತಿ`ಯಲ್ಲಿ ಕಾಣಲು ಹೋದರೆ ನಿರಾಶೆಯಾಗುತ್ತದೆ.

ಕೇವಲ 39 ವರ್ಷ, ಐದು ತಿಂಗಳು ಮತ್ತು 24 ದಿನ ಬದುಕಿದ್ದ ಮತ್ತು 24ರ ಹರಯದಲ್ಲಿಯೇ ಸನ್ಯಾಸ ಸ್ವೀಕರಿಸಿದ್ದ ವಿವೇಕಾನಂದರನ್ನು ಅವರ ಸಾವಿನ 110 ವರ್ಷಗಳ ನಂತರವೂ ನಮಗೆ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲವೇನೋ ಎಂದು ಅನಿಸತೊಡಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ವಿವೇಕಾನಂದರನ್ನು ಹಿಂದೂ ಧರ್ಮದ `ಬ್ರಾಂಡ್ ಅಂಬಾಸಿಡರ್` ಆಗಿ ಬಿಂಬಿಸುವ ಭರದಲ್ಲಿ ಅವರ ಮೇಲೆ ಇಲ್ಲಸಲ್ಲದ ಗುಣ-ವಿಶೇಷ, ಶಕ್ತಿ -ಸಾಮರ್ಥ್ಯಗಳನ್ನು ಆರೋಪಿಸಿ ದೇವರ ಪಟ್ಟಕ್ಕೆ ಏರಿಸಲಾಗುತ್ತಿದೆ.

ಇದೇನು ಹೊಸದಲ್ಲ. ಧಾರ್ಮಿಕ ಸುಧಾರಣೆಯ ಮೂಲಕವೇ ಸಮಾಜವನ್ನು ಸುಧಾರಿಸಲು ಹೊರಟವರನ್ನೆಲ್ಲ ನಾವು `ದೇವರು` ಮಾಡಿ ನಮ್ಮ ಕೈಗೆ ಎಟುಕದಷ್ಟು ದೂರದಲ್ಲಿರಿಸಿದ್ದೇವೆ.

ದೇವರ ಅವತಾರವಾಗದೆ ಕೇವಲ ಮನುಷ್ಯನಾಗಿ ಹುಟ್ಟಿ ಅಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯ ಇಲ್ಲ ಎಂಬ ನಂಬಿಕೆಯನ್ನು ನಮ್ಮ ಅನೇಕ ಧಾರ್ಮಿಕ ನಾಯಕರು ಮತ್ತು ಧಾರ್ಮಿಕ ನಾಯಕರ ಸೋಗಿನ ರಾಜಕಾರಣಿಗಳು ಬಿತ್ತುತ್ತಾ, ಬೆಳೆಸುತ್ತಾ ಸಾಗಿದ್ದಾರೆ.

ಬುದ್ಧ-ಬಸವನಿಂದ ಹಿಡಿದು ವಿವೇಕಾನಂದ-ನಾರಾಯಣ ಗುರುಗಳವರೆಗೆ ಎಲ್ಲರನ್ನೂ ಅವರವರ ಭಕ್ತ ಸಮೂಹ ದೇವರುಗಳಾಗಿ ಮಾಡಿ ಪೂಜೆ-ಭಜನೆಗಳಲ್ಲಿ ಮುಳುಗಿಸಿ ಬಿಟ್ಟಿದ್ದಾರೆ. ಈ ಆರಾಧನೆಯ ಭರದಲ್ಲಿ ಆ ಮಹನೀಯರ ನಿಜವಾದ ಬದುಕು ಮತ್ತು ಚಿಂತನೆಯ ವಿವರಗಳೆಲ್ಲ ಇತಿಹಾಸದ ಪುಟಗಳಲ್ಲಿ ಎಲ್ಲೋ ಹೂತುಹೋಗಿರುತ್ತವೆ.

ಪ್ರಖ್ಯಾತ ಬಂಗಾಳಿ ಸಾಹಿತಿ ಮಣಿ ಸಂಕರ್ ಮುಖರ್ಜಿ ಅವರ `ದಿ ಮಾಂಕ್ ಆ್ಯಸ್ ಮ್ಯಾನ್` ಎನ್ನುವ ಪುಸ್ತಕವನ್ನು ಕಳೆದ ವರ್ಷ ಪೆಂಗ್ವಿನ್ ಪ್ರಕಾಶನ ಪ್ರಕಟಿಸಿದೆ. ಇದು ಎಂಟು ವರ್ಷಗಳ ಹಿಂದೆ ಪ್ರಕಟವಾದ ಸಂಶೋಧನೆ ಆಧಾರಿತ ಬಂಗಾಳಿ ಭಾಷೆಯ ಪುಸ್ತಕದ ಇಂಗ್ಲಿಷ್ ಅನುವಾದ (ಸಂಕರ್ ಅವರ `ಸೀಮಾಬದ್ದ` ಮತ್ತು `ಜನ ಅರಣ್ಯ` ಕಾದಂಬರಿಗಳನ್ನು ಸತ್ಯಜಿತ್ ರೇ ಚಲನಚಿತ್ರ ಮಾಡಿದ್ದರು).

ವಿವೇಕಾನಂದರ ತತ್ವ-ಸಿದ್ಧಾಂತಗಳ ಜತೆ ಅವರ ಖಾಸಗಿ ಬದುಕಿನ ಅಪರಿಚಿತ ಮುಖವನ್ನು ಸಂಕರ್ ಅವರ ಪುಸ್ತಕ, ತಮ್ಮಂದಿರಾದ ಮಹೇಂದ್ರನಾಥ ದತ್ತಾ ಮತ್ತು ಡಾ. ಭೂಪೇಂದ್ರನಾಥ ದತ್ತಾ ಅವರು ಅಣ್ಣನ ಬಗ್ಗೆ ಬರೆದ ಪುಸ್ತಕಗಳು ಹಾಗೂ ಸೋದರಿ ನಿವೇದಿತಾ ಅವರ ಲೇಖನಗಳು ತೆರೆದಿಡುತ್ತದೆ.

ಮುಂದೊಂದು ದಿನ ವಿದೇಶಿ ನೆಲದಲ್ಲಿ ನಿಂತು ತನ್ನಲ್ಲಿರುವ ಜ್ಞಾನ ಮತ್ತು ಇಂಗ್ಲಿಷ್ ಭಾಷಾ ಪಾಂಡಿತ್ಯದಿಂದ ಅಲ್ಲಿನ ಇಂಗ್ಲಿಷ್ ಭಾಷಿಕರ ಮಂತ್ರಮುಗ್ಧಗೊಳಿಸಿದ್ದ ವಿವೇಕಾನಂದರು ಇಂಟರ್‌ಮಿಡಿಯೇಟ್ ಮತ್ತು ಬಿಎ ಪದವಿಯ ಇಂಗ್ಲಿಷ್ ಪರೀಕ್ಷೆಗಳಲ್ಲಿ ಗಳಿಸಿದ್ದ ಅಂಕ ಕ್ರಮವಾಗಿ ಶೇಕಡಾ 46 ಮತ್ತು ಶೇಕಡಾ 56. ಬಿಎ ಪರೀಕ್ಷೆಯ ಒಟ್ಟು 500 ಅಂಕಗಳಲ್ಲಿ ಗಳಿಸಿದ್ದು ಕೇವಲ 261. (ಸಂಸ್ಕೃತದಲ್ಲಿ 43 ಮತ್ತು ತತ್ವಶಾಸ್ತ್ರದಲ್ಲಿ 45).

ತಂದೆಯ ಸಾವಿನ ನಂತರ ಅನಿವಾರ್ಯವಾಗಿ ಉದ್ಯೋಗ ಮಾಡಬೇಕಾಗಿ ಬಂದ ವಿವೇಕಾನಂದರು ಮೊದಲು ಕೆಲಸಕ್ಕೆ ಸೇರಿದ್ದು ಈಶ್ವರಚಂದ್ರ ವಿದ್ಯಾಸಾಗರ ಅವರು ನಡೆಸುತ್ತಿದ್ದ ಶಿಕ್ಷಣ ಸಂಸ್ಥೆಯಲ್ಲಿ. ಅಲ್ಲಿ ಇವರನ್ನು ಮಕ್ಕಳಿಗೆ ಪಾಠ ಹೇಳಲು ಬರುವುದಿಲ್ಲ ಎನ್ನುವ ಕಾರಣ ನೀಡಿ ಸ್ವತಃ ಈಶ್ವರಚಂದ್ರರೇ ಕೆಲಸದಿಂದ ವಜಾಗೊಳಿಸಿದ್ದರು.

ಭುವನೇಶ್ವರಿ ದೇವಿ ಎಂಬ ತಾಯಿ ಇಲ್ಲದೆ ಹೋಗಿದ್ದರೆ ಜಗತ್ತಿಗೆ ವಿವೇಕಾನಂದರು ಸಿಗುತ್ತಿರಲಿಲ್ಲವೇನೋ? ಕೋಲ್ಕತ್ತಾದ ಸಾವಿರಾರು ನರೇಂದ್ರನಾಥರಲ್ಲಿ ಒಬ್ಬರಾಗಿ ಅವರು ಹುಟ್ಟಿ ಸಾಯುತ್ತಿದ್ದರು.

ವಿವೇಕಾನಂದರು ಮೂಲತಃ ಶ್ರಿಮಂತ ಕುಟುಂಬಕ್ಕೆ ಸೇರಿದವರಾಗಿದ್ದರೂ ತಂದೆಯ ಅಕಾಲಮೃತ್ಯುವಿನ ನಂತರ ಆಸ್ತಿಯನ್ನೆಲ್ಲ ದಾಯಾದಿಗಳು ಕಬಳಿಸಿದ ಕಾರಣ ಇಡೀ ಕುಟುಂಬ ಬೀದಿ ಪಾಲಾಗುತ್ತದೆ. ಹನ್ನೊಂದು ಮಕ್ಕಳಲ್ಲಿ ಇವರೇ ದೊಡ್ಡ ಗಂಡುಮಗನಾದ ಕಾರಣ ಸಂಸಾರ ನಿರ್ವಹಣೆ ನರೇಂದ್ರನಾಥನ ಪುಟ್ಟ ಹೆಗಲಮೇಲೆ ಬೀಳುತ್ತದೆ.

ನಿರುದ್ಯೋಗಿಯಾಗಿ ಹರಕಲು ಅಂಗಿ-ಪೈಜಾಮ ಹಾಕಿ ಬೀದಿ ಸುತ್ತುತ್ತಿದ್ದ ಅವರು ಎಷ್ಟೋ ಬಾರಿ ಉಪವಾಸ ಇರುತ್ತಿದ್ದರಂತೆ. ಕುಟುಂಬದ ಆಸ್ತಿಗಾಗಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಹೋರಾಟ ಸತತ ಹದಿನೇಳು ವರ್ಷ ನಡೆದು ವಿವೇಕಾನಂದರ ಸಾವಿನ ಹಿಂದಿನ ತಿಂಗಳಷ್ಟೇ ಇತ್ಯರ್ಥವಾಗಿತ್ತು.

ಕುಟುಂಬದ ಕಷ್ಟಗಳನ್ನು ತಾಯಿಯ ಹೆಗಲ ಮೇಲೆ ಹಾಕಿ ವಿವೇಕಾನಂದರು ಸಂಸಾರ ತೊರೆದು ಸನ್ಯಾಸಿಯಾಗುತ್ತಾರೆ. ಕಷ್ಟ ಕಾಲದಲ್ಲಿ ಕೈಬಿಟ್ಟು ಹೋದ ಎಂದು ಮಗನನ್ನು ತಾಯಿ ಭುವನೇಶ್ವರಿದೇವಿ ದ್ವೇಷಿಸಲಿಲ್ಲ, `ನನ್ನ ಮಗ 24ನೇ ವರ್ಷಕ್ಕೆ ಸನ್ಯಾಸಿಯಾದ` ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಇದ್ದರು.

ಮಗ ಸತ್ತನಂತರ ಎಂಟು ವರ್ಷ ಬದುಕಿದ್ದ ತಾಯಿ ಖೇತ್ರಿ ಮಹಾರಾಜ ಕೊಡುತ್ತಿದ್ದ ಮಾಸಿಕ ನೂರು ರೂಪಾಯಿಯಲ್ಲಿ ಕಡು ಕಷ್ಟದಲ್ಲಿಯೇ ಜೀವನ ಸಾಗಿಸಿದ್ದರು.

ಈಗ ವಿವೇಕಾನಂದರನ್ನು ತಲೆಮೇಲಿಟ್ಟು ಮೆರೆದಾಡಲಾಗುತ್ತಿದ್ದರೂ ಬದುಕಿದ್ದಾಗ ಭಾರತೀಯರು ಅವರಿಗೆ ಹೆಚ್ಚು ನೆರವಾಗಿರಲಿಲ್ಲ. `ಪ್ರತಿ ಬಾರಿ ವಿದೇಶಿಯರಲ್ಲಿಯೇ ಭಿಕ್ಷೆ ಕೇಳಲೇನು` ಎಂದು ಅವರೊಮ್ಮೆ ಬೇಸರದಿಂದ ಪ್ರಶ್ನಿಸಿದ್ದರು.

`ವಿಶಾಲವಾದ ಎದೆ, ಬಲಿಷ್ಠವಾದ ತೋಳುಗಳು, ಕಾಂತಿಯುತ ಕಣ್ಣುಗಳು...` ಎಂದೆಲ್ಲ ವಿವೇಕಾನಂದರನ್ನು ಹಿಂದೂ ಧರ್ಮದ `ಹೀ ಮ್ಯಾನ್` ಎಂಬಂತೆ ಬಣ್ಣಿಸುವವರಿಗೆ ಅವರು ಹುಟ್ಟುರೋಗಿಯಾಗಿದ್ದರೆಂದು ಗೊತ್ತಿದೆಯೋ ಇಲ್ಲವೋ? ತೀವ್ರ ತಲೆನೋವಿನಿಂದ ಹಿಡಿದು ಹೃದಯದ ಕಾಯಿಲೆವರೆಗೆ ಅವರಿಗೆ 31 ಬಗೆಯ ರೋಗಗಳಿದ್ದವು.

ಮೂತ್ರಕೋಶ, ಲಿವರ್, ಗಂಟಲು ಸಂಬಂಧಿ ರೋಗಗಳಲ್ಲದೆ ರಕ್ತದೊತ್ತಡ, ಮಧುಮೇಹ, ಆಸ್ತಮಾ, ಅಜೀರ್ಣ, ಮಲಬದ್ಧತೆ, ಭೇದಿ, ನರದೌರ್ಬಲ್ಯ, ಮಂಡಿನೋವು, ಕಾಲುಬಾವು ಎಲ್ಲವೂ ಅವರನ್ನು ಕಾಡುತ್ತಿತ್ತು. ಪ್ರಾರಂಭದಿಂದಲೇ ನಿದ್ರಾಹೀನತೆಯಿಂದ ಬಳಲುತ್ತಿದ್ದ ಅವರು ಕೊನೆಯ ದಿನಗಳಲ್ಲಿ, ದಿನದಲ್ಲಿ ಒಂದೆರಡು ಗಂಟೆಗಳ ಕಾಲವೂ ನಿದ್ದೆ ಮಾಡಲಾಗುತ್ತಿರಲಿಲ್ಲ.

ಯಾರಾದರೂ ಮುಟ್ಟಿದರೆ ಮೈಯೆಲ್ಲ ನೋಯುತ್ತಿತ್ತು. `ನನ್ನ ಕೂದಲು-ಗಡ್ಡಗಳೆಲ್ಲ ವಯಸ್ಸಿಗೆ ಮೊದಲೇ ಬೆಳ್ಳಗಾಗಿ ಹೋಗಿದೆ, ಮುಖದ ಚರ್ಮ ಸುಕ್ಕುಗಟ್ಟಿ ನೆರಿಗೆಗಳು ಮೂಡಿವೆ` ಎಂದು ತನ್ನ 34ನೇ ವಯಸ್ಸಿನಲ್ಲಿ ಶಿಷ್ಯೆ ಮೇರಿ ಹೇಲ್‌ಗೆ ಬರೆದ ಪತ್ರದಲ್ಲಿ ಅವರು ಹೇಳಿಕೊಂಡಿದ್ದಾರೆ.

ಅನಾರೋಗ್ಯದಿಂದ ಬೇಸತ್ತು ಹೋಗಿದ್ದ ಅವರು, ಒಂದು ದಿನ `ದಯಾಮರಣದ ಮೂಲಕವಾದರೂ ನನಗೆ ಸಾವು ನೀಡಿ, ರೇಸ್‌ನಲ್ಲಿ ಓಡಲಾಗದ ಕುಂಟು ಕುದುರೆಯಂತಾಗಿದ್ದೇನೆ ನಾನು. ಈ ನೋವು-ಸಂಕಟ ಸಹಿಸಲಾರೆ` ಎಂದು ಹತಾಶೆಯಿಂದ ಹೇಳಿದ್ದನ್ನು ಸೋದರಿ ನಿವೇದಿತಾ ದಾಖಲಿಸಿದ್ದಾರೆ..

ಈ ಎಲ್ಲ ರೋಗಗಳ ನಡುವೆಯೂ ಅವರ ನಾಲಗೆಯ ಚಪಲ ಮಾತ್ರ ಕಡಿಮೆಯಾಗಿರಲಿಲ್ಲ. ಎಲ್ಲ ಬಂಗಾಳಿಗಳಂತೆ ಅವರೊಬ್ಬ ತಿಂಡಿಪೋತರಾಗಿದ್ದರು. `ನಾನು ಠಾಕೂರ್ (ಪರಮಹಂಸ) ಅವರಿಗೆ ಬಿಸಿನೀರಿನಲ್ಲಿ ಮಸಾಲೆಯ ಜತೆ ಮಾಂಸದ ತುಂಡುಗಳನ್ನು ಹಾಕಿ ಬೇಯಿಸಿ ಪಲ್ಯ ಮಾಡಿಕೊಡುತ್ತಿದ್ದೆ. ಆದರೆ ನರೇನ್ (ವಿವೇಕಾನಂದ) ಮಾತ್ರ ಮಾಂಸದ ಅಡುಗೆಯನ್ನು ಬಗೆಬಗೆಯಲ್ಲಿ ಮಾಡುತ್ತಿದ್ದ` ಎಂದು ಶಾರದಾದೇವಿ ಬರೆದಿದ್ದಾರೆ.

ದೇಶ-ವಿದೇಶಗಳ ಮಾಂಸಾಹಾರಿ ಅಡುಗೆಯನ್ನು ಮಾಡುವ ಅವರ ಪಾಕಪ್ರಾವೀಣ್ಯತೆ ಬಗ್ಗೆ ಸೋದರಿ ನಿವೇದಿತಾ ವಿವರವಾಗಿ ದಾಖಲಿಸಿದ್ದಾರೆ. ಅವರ ಸಾವಿನ ದಿನವೇ ಮಳೆಗಾಲದ ಮೊದಲ ಅತಿಥಿಗಳಾಗಿ `ಹಿಲ್ಸಾ` ಮೀನುಗಳು ಹೂಗ್ಲಿ ನದಿ ಪ್ರವೇಶಿಸಿದ್ದವು. ಅದನ್ನು ತಂದು ಪಲ್ಯಮಾಡಿ ಮಧ್ಯಾಹ್ಮ ಊಟ ಮಾಡಿ ವಿರಮಿಸಿದ್ದ ಅವರು ರಾತ್ರಿ ಕೊನೆಯುಸಿರೆಳೆದಿದ್ದರು.

ಅಕಾಡೆಮಿಕ್ ಮಾನದಂಡಗಳ ಪ್ರಕಾರ ದಡ್ಡರಾಗಿರುವ, ಹತ್ತಾರು ಬಗೆಯ ಕಾಯಿಲೆಗಳಿಂದ ನರಳುತ್ತಿರುವ, ಕುಟುಂಬದ ಕಷ್ಟಗಳಿಂದ ಜರ್ಝರಿತರಾಗಿರುವ, ತಿಂಡಿಪೋತರಾಗಿರುವ ಸಾಮಾನ್ಯ ವ್ಯಕ್ತಿಗಳು ಕೂಡಾ `ವಿವೇಕಾನಂದ`ನಾಗಿ ಬೆಳೆಯಲು ಸಾಧ್ಯ ಎಂಬುದನ್ನು ನರೇಂದ್ರನಾಥ ತನ್ನ ಸಾಧನೆ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

ಇಷ್ಟೆಲ್ಲ ಕಷ್ಟ-ಕಾಯಿಲೆಗಳ ನಡುವೆಯೂ ಹಿಂದೂ ಧರ್ಮವೂ ಸೇರಿದಂತೆ ಜಗತ್ತಿನ ಎಲ್ಲ ಧರ್ಮಗಳ ಗ್ರಂಥಗಳು ಮತ್ತು ತತ್ವಜ್ಞಾನವನ್ನು ಅವರು ಅಧ್ಯಯನ ಮಾಡಿದ್ದರು. ದೇಶ-ವಿದೇಶಗಳಿಗೆ ಭೇಟಿ ನೀಡಿ ಭಾಷಣ ಮಾಡುತ್ತಿದ್ದರು, ನಿರಂತರವಾಗಿ ಪುಸ್ತಕ ಮತ್ತು ಪತ್ರಗಳನ್ನು ಬರೆಯುತ್ತಿದ್ದರು.

ಸಾವಿರಾರು ಶಿಷ್ಯರನ್ನು, ಕೋಟ್ಯಂತರ ಅನುಯಾಯಿಗಳನ್ನು ಹೊಂದಿದ್ದರು. ತಮ್ಮ ಗುರುವಿನ ಹೆಸರಲ್ಲಿ ಜಗತ್ತಿನಾದ್ಯಂತ ರಾಮಕೃಷ್ಣ ಮಿಷನ್ ಹೆಸರಿನ ಸಂಘಟನೆಯನ್ನು ಕಟ್ಟಿ ಬೆಳೆಸಿದ್ದರು.

ಇವೆಲ್ಲವನ್ನು ಅವರು ಮಾಡಿದ್ದು ಕೇವಲ ಹದಿನೈದು ವರ್ಷಗಳ ಅವಧಿಯಲ್ಲಿ. ಯಃಕಶ್ಚಿತ್ ಮನುಷ್ಯನೊಬ್ಬ ಇಂತಹ ಸಾಧನೆ ಮಾಡಲು ಸಾಧ್ಯವೇ? ಖಂಡಿತ ಸಾಧ್ಯ, ಅದಕ್ಕಾಗಿ ಆತ `ವಿವೇಕಾನಂದ` ಆಗಿರಬೇಕು.

ದಿನೇಶ್ ಅಮೀನ್ ಮಟ್ಟು
 
ಕೃಪೆ
ಪ್ರಜಾವಾಣಿ
0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)