SKH
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
SKH

ಅನಿವಾರ್ಯತೆಯಿಂದ ಅಕ್ಕಸಾಲಿಗರಾದ ಮಹಿಳಾ ಉದ್ದಿಮೆದಾರರು: ಮಹಿಳಾ ಸಬಲೀಕರಣಕ್ಕೆ ಒಂದು ಮಾದರಿ

10/12/2017

0 Comments

 
Picture
ಪ್ರಪಂಚದ ಎಲ್ಲಾ ಪಿತೃಪ್ರಧಾನ ವ್ಯವಸ್ಥೆಗಳಲ್ಲಿ ಪುರುಷನ ಮೇಲೆ ಸ್ತ್ರೀಯ ಅವಲಂಬನೆಯು ಅನಿವಾರ್ಯವಾಗಿರುತ್ತದೆ. ಗಂಡನಿಲ್ಲದಿದ್ದರೆ ಜೀವನವೇ ಇಲ್ಲವೆಂದು ಸತಿ-ಸಹಗಮನ ಪದ್ಧತಿ ರೂಢಿಗೆ ಬಂದಂತಹ ನಮ್ಮದೇ ದೇಶದಲ್ಲಿ ಈ ಅನಿವಾರ್ಯತೆಯ ಸ್ವರೂಪ ಇನ್ನಷ್ಟು ಗಂಭೀರವಾಗಿದೆ. ಪ್ರತೀ ಕುಟುಂಬದಲ್ಲೂ ಸ್ತ್ರೀಯರ ಪಾತ್ರ ಎಷ್ಟೇ ಪ್ರಾಮುಖ್ಯವಾಗಿದ್ದರೂ ಅವಳ ಅಂತಸ್ತು ಮಾತ್ರ ಪುರುಷನ ಅಂತಸ್ತಿಗಿಂತಲೂ ಕಡಿಮೆಯೇ ಇರುತ್ತದೆ. ಪತಿಯನ್ನು ಕಳೆದುಕೊಂಡ ಜೀವನ ಸಾಮಾಜಿಕವಾಗಿ ಅವಹೇಳನಕಾರಿಯಲ್ಲದೆ ಆರ್ಥಿಕವಾಗಿ ದುಸ್ತರವೂ ಆಗಿರುವುದರಿಂದ ಸ್ತ್ರೀಯರು ಸಾಮಾನ್ಯವಾಗಿ ಮುತ್ತೈದೆಯ ಸಾವನ್ನು ಬೇಡುತ್ತಾರೆ. ಹೀಗಿದ್ದಾಗಲೂ ಆಕಸ್ಮಿಕವಾಗಿ ಪತಿಯೇ ಮರಣಹೊಂದಿದಾಗ, ಮರುಮದುವೆಗೆ ಅವಕಾಶವಿಲ್ಲದಿದ್ದಾಗ ಎರಡು ಹೊತ್ತು ಊಟಕ್ಕಾದರೂ ತನ್ನ ಕಾಲಮೇಲೆ ತಾನು ನಿಲ್ಲುವ ಅನಿವಾರ್ಯತೆ ಸ್ತ್ರೀಗೆ ಬರುತ್ತದೆ. ಕೆಲವು ಸಲ ಮಕ್ಕಳ ಹಾಗೂ ಇಡೀ ಕುಟುಂಬದ ಭಾರವನ್ನು ಅವರು ಹೊರಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ಸ್ತ್ರೀಯರು ಮೊರೆಹೋಗುವ ಉದ್ಯೋಗವೆಂದರೆ ತಮ್ಮ ಗಂಡಂದಿರು ಮಾಡುತ್ತಿದ್ದ ಉದ್ಯೋಗ. ಉದಾಹರಣೆಗೆ, ಒಕ್ಕಲುತನ ಮಾಡುತ್ತಿದ್ದವನ ವಿಧವೆ ಒಕ್ಕಲುತನವನ್ನೇ ಮಾಡುತ್ತಾಳೆ. ನೇಕಾರಿಕೆಯನ್ನು ಮಾಡುತ್ತಿದ್ದವನ ವಿಧವೆ ನೇಕಾರಿಕೆಯನ್ನೆ ಮಾಡುತ್ತಾಳೆ. ಈ ಬಗೆಯ ಪರಿಸ್ಥಿತಿ ಕುಶಲಕರ್ಮಿಗಳಿಗೂ ಅನ್ವಯಿಸುತ್ತದೆ. ಇಂತಹ ಕುಶಲಕರ್ಮಿಗಳಲ್ಲಿ ಒಂದು ಅಕ್ಕಸಾಲಿಗ ವೃತ್ತಿ. ಪ್ರಸ್ತುತ ಲೇಖನದಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಅಕ್ಕಸಾಲಿಗ ಮಹಿಳೆಯರು ಅಕ್ಕಸಾಲಿಗ ವೃತ್ತಿಯನ್ನು ಅವಲಂಬಿಸಿ, ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳುವ ಸಾಧ್ಯತೆಯನ್ನು ಸಮಾಜಶಾಸ್ತ್ರೀಯ ದೃಷ್ಟಿಕೋನದಿಂದ ವಿಶ್ಲೇಷಿಸಲಾಗಿದೆ. 
ಪ್ರತಿ ಮಗುವಿಗೂ ಅದರ ತಾಯಿಯ ಮಡಿಲೇ ಮೊದಲ ಪಾಠಶಾಲೆಯಾಗಿದೆ. ಸುಶಿಕ್ಷಿತ ತಾಯಂದಿರು ತಮ್ಮ ಮಕ್ಕಳನ್ನು ಸಾಕ್ಷರರನ್ನಾಗಿ ಮಾಡುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ತಾಯಿ ಓದು-ಬರಹ ಬಲ್ಲವಳಾಗಿರದಿದ್ದರೆ ಆ ಸಂಸಾರದಲ್ಲಿ ಅನಕ್ಷರತೆ ತಾಂಡವಾಡುತ್ತಿರುತ್ತದೆ. ಹೆಣ್ಣು ಮಕ್ಕಳು ಸುಶಿಕ್ಷಿತರಾಗಿದ್ದರೆ ಅವರ ಜೀವನ ಹೆಚ್ಚು ಮನ್ನಣೆ ಪಡೆಯುತ್ತದೆಯೆಂದು ಹೇಳಬಹುದು. ಆದರೆ, ಕೆಲ ಹೆಣ್ಣುಮಕ್ಕಳು ಶಿಕ್ಷಿತರಾಗಿದ್ದರೂ ಅವರ ಜೀವನದಲ್ಲೂ  ತೊಂದರೆಗಳು ಹೆಚ್ಚಾಗುತ್ತವೆ. ಅದರಲ್ಲಿ ಅಕ್ಕಸಾಲಿಗ ಕುಟುಂಬದಲ್ಲಿ ಬೆಳೆದ ಮಹಿಳೆಯರು ತಮ್ಮ ತಂದೆ ಅಥವಾ ಗಂಡನ ಅಕಾಲಿಕ ಮರಣದ ಕಾರಣದಿಂದ ಅನಿವಾರ್ಯವಾಗಿ ಒತ್ತಡಕ್ಕೆ ಮಣಿದು ಅಕ್ಕಸಾಲಿಗ ವೃತ್ತಿಯನ್ನು ಅಥವಾ ವ್ಯಾಪಾರವನ್ನು ಮುಂದುವರೆಸಿಕೊಂಡು ಹೋಗುವ ಪರಿಸ್ಥಿತಿ ಉಂಟಾಗುತ್ತಿದೆ. ಇದಕ್ಕೆ ಕಾರಣ ಪುರುಷ ಅಕ್ಕಸಾಲಿಗರು ಯೋಜಿತವಾದ ಕ್ರಮಬದ್ಧ ಜೀವನ ನಡೆಸದೆ ಶೋಕಿ ಜೀವನದಕಡೆಗೆ ವಾಲಿಕೊಂಡು ತಮ್ಮ ಗಳಿಕೆಯಲ್ಲಿ ಉಳಿತಾಯಕ್ಕಿಂತ ಖರ್ಚನ್ನೇ ಹೆಚ್ಚಾಗಿ ಮಾಡಿ ಯಾವುದೇ ಇನ್ಸೂರೆನ್ಸ್ ಮಾಡಿಸದೆ, ಅನಾರೋಗ್ಯದಿಂದ ದಿಢೀರ್ ಸಾವು ಸಂಭವಿಸಿದಾಗ ಇವರನ್ನು ನಂಬಿ ಬದುಕುತ್ತಿರುವ ಕುಟುಂಬದ ಇತರ ಸದಸ್ಯರು, ಅದರಲ್ಲೂ ಹೆಣ್ಣು ಮಕ್ಕಳು, ಅತಂತ್ರ ಸ್ಥಿತಿಯಲ್ಲಿ ಬದುಕುವ ಪರಿಸ್ಥಿತಿ ಬಂದಾಗ ಇಡೀ ಕುಟುಂಬಕ್ಕೆ ಚಿನ್ನದ ಕೆಲಸ ಹೊರತಾಗಿ ಪರ್ಯಾಯ ಜೀವನೋಪಾಯವೇ ಗೊತ್ತಿಲ್ಲದ ಸಂದರ್ಭದಲ್ಲಿ ತಮ್ಮ ತಂದೆ ಅಥವಾ ಗಂಡನ ವೃತ್ತಿ ಮತ್ತು ವ್ಯಾಪಾರದಲ್ಲಿ ಸಹಾಯಕರಾಗಿದ್ದ ಮಹಿಳೆಯರು ಅನಿವಾರ್ಯವಾಗಿ ಈ ವೃತ್ತಿಯಲ್ಲಿ ತೊಡಗಿಸಿಕೊಂಡು ತಾಳ್ಮೆ ಮತ್ತು ಸಹನೆಯಿಂದ ಗ್ರಾಹಕರ ಮನೋಯಿಚ್ಛೆಗನುಗುಣವಾಗಿ ಆಭರಣ ತಯಾರಿಸುವ ಕಲೆಯನ್ನು ರೂಪಿಸಿಕೊಂಡಿರುವುದು ಅಕ್ಕಸಾಲಿಗ ಮಹಿಳೆಯರ ವೃತ್ತಿ ಆಸಕ್ತಿಯನ್ನು, ಸ್ವಾವಲಂಬನೆಯ ಬದುಕನ್ನು ನಡೆಸಬೇಕೆಂಬ ಮನಃಸ್ಥಿತಿಯನ್ನು ತೋರಿಸುತ್ತದೆ. ಜೊತೆಗೆ, ಈ ವೃತ್ತಿಯು ರಕ್ತಗತವಾದ ಕುಶಲ ಕಲೆಯಾದ್ದರಿಂದ ತಮ್ಮ ಬಾಲ್ಯದಿಂದಲೇ ಈ ವೃತ್ತಿಯ ಎಲ್ಲಾ ಒಳ ಮತ್ತು ಹೊರ ಸುಳಿಹುಗಳನ್ನು ಅರಿತಿದ್ದರಿಂದ ಇತರೆ ಯಾವುದೇ ಪುರುಷರಿಗೆ ಈ ವೃತ್ತಿಯಲ್ಲಿ ಪೈಪೋಟಿ ಮಾಡುವ ಸಾಮಥ್ರ್ಯವನ್ನು ಬೆಳೆಸಿಕೊಂಡಿರುತ್ತಾರೆ.
  
​ಈ ಅಧ್ಯಯನಕ್ಕೆ ಆಯ್ದುಕೊಂಡ ಕ್ಷೇತ್ರವು ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕು. ಈ ತಾಲ್ಲೂಕಿನಲ್ಲಿ ಬಹುಪಾಲು ಮಹಿಳೆಯರು ತಮ್ಮ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಕುಟುಂಬದ ಇತರೆ ಸದಸ್ಯರಿಂದ ಆಭರಣ ತಯಾರಿಕಾ ಮತ್ತು ಮಾರಾಟ ವೃತ್ತಿಯನ್ನು ಕಲಿತು ಮುಂದೆ ತಾವು ವಿವಾಹವಾದ ನಂತರದಲ್ಲೂ ತಮ್ಮ ಪತಿಗಳೊಂದಿಗೆ ಈ ವೃತ್ತಿಯಲ್ಲಿ ಸಹಭಾಗಿತ್ವವನ್ನು ಹೊಂದಿ ಉದ್ದಿಮೆದಾರರಾಗಿರುವ ಅನೇಕ ಉದಾಹರಣೆಗಳನ್ನು ನಾವು ನೋಡಬಹುದಾಗಿದೆ. ಇವರಲ್ಲಿ ಮೋಲ್ಡಿಂಗ್ ಆಭರಣ ತಯಾರಿಕೆ ಮತ್ತು ಜುವೆಲರಿ ಡಿಜೈನ್ನಲ್ಲಿ ಹೆಚ್ಚು ಪ್ರಾವೀಣ್ಯತೆಯನ್ನು ಪಡೆದಿರುವುದನ್ನು ನಾವು ಕಾಣಬಹುದು.
Picture
ಮೇಲ್ಕಂಡ ಕೋಷ್ಟಕವನ್ನು ಗಮನಿಸಿದಾಗ ಒಟ್ಟು ಮಹಿಳಾ ಆಭರಣ ತಯಾರಕರ ಸಂಖ್ಯೆ ತಾಲ್ಲೂಕಿನಲ್ಲಿ 2220 ಇರುವುದು ಕಂಡುಬರುತ್ತದೆ. ಇದರಲ್ಲಿ ಸಾದಾ ಆಭರಣ ತಯಾರಿಸುವವ ಸಂಖ್ಯೆ ಕಡಿಮೆಯಾಗಿರುತ್ತದೆ. ಏಕೆಂದರೆ ಸಾದಾ ಆಭರಣವನ್ನು ತಯಾರಿಸಲು ಹೆಚ್ಚು ದೈಹಿಕ ಶ್ರಮ ಅಗತ್ಯವಿದ್ದು ಇದರೊಂದಿಗೆ ಆದಾಯವೂ ಸಹ ಕಡಿಮೆಯಾಗಿರುತ್ತದೆ. ಆದರೆ ಹರಳು ಸಹಿತ ಆಭರಣ ತಯಾರಿಕೆಯು ಸುಲಭವೂ ಮತ್ತು ಹೆಚ್ಚು ಲಾಭಾಂಶವೂ ಇರುವುದರಿಂದ ಹರಳು ಸಹಿತ ಆಭರಣ ತಯಾರಿಕಾ ಮಹಿಳೆಯರು ಹೆಚ್ಚು ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಗಮನಿಸಬಹುದು. ಅದರಂತೆ ಮೌಲ್ಡಿಂಗ್ ಆಭರಣ ಎರಡನೆಯ ಪ್ರಮಾಣದ ಆದಾಯ ತರುವ ಪ್ರಕಾರವಾಗಿದ್ದು ಇದನ್ನು ಅವಲಂಬಿಸುವವರ ಮಹಿಳೆಯರ ಸಂಖ್ಯೆಯೂ ಸರಾಸರಿ ಪ್ರಮಾಣದಲ್ಲಿರುತ್ತದೆ.

ಹಳೆ ಮೈಸೂರು ಭಾಗದ ಕೆಲವು ಮಹಿಳಾ ಉದ್ದಿಮೆದಾರರು ಅತ್ಯಂತ ಕಷ್ಟಕರವಾದ ಮತ್ತು ಸೃಜನಾತ್ಮಕವಾದ ನಕಾಸು ಕಲೆಯಲ್ಲಿ ಪ್ರಾವೀಣ್ಯತೆಯನ್ನು ಹೊಂದಿದ್ದು ತಮ್ಮ ದಿನನಿತ್ಯದ ಕುಟುಂಬದ ಕೆಲಸಗಳ ನಂತರ ಉಪಕಸುಬಾಗಿ ಬಂಗಾರದಲ್ಲಿ ನಕಾಸು ಕಲೆಯನ್ನು ರೂಪಿಸುತ್ತಿರುವುದು ಮತ್ತು ಪುರುಷರಷ್ಟೇ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡುವ ಮಟ್ಟಕ್ಕೆ ಬೆಳೆದಿರುವುದು ಇಂದಿನ ಅಕ್ಕಸಾಲಿಗ ಮಹಿಳೆಯ ಮನೋಧೈರ್ಯಕ್ಕೆ ಸಾಕ್ಷಿಯಾಗಿದೆ. ಮೈಸೂರು ಮತ್ತು ಮಣಿಪಾಲಗಳಲ್ಲಿ ಇರುವ ಆಭರಣ ತರಬೇತು ಕಾಲೇಜುಗಳಲ್ಲಿ ಪುರುಷ ವಿದ್ಯಾರ್ಥಿಗಳಿಗಿಂತ ಮಹಿಳಾ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಭರ್ತಿಯಾಗಿರುವುದನ್ನು ನಾವು ನೋಡಬಹುದಾಗಿದೆ.
  
​ಹಿಂದಿನಿಂದಲೂ ಆಭರಣಗಳಿಗೆ ಹೆಚ್ಚು ಮಹಿಳಾಗ್ರಾಹಕರೇ ಆಕರ್ಷಿತರಾಗುತ್ತಿದ್ದುದು ಈಗಲೂ ಹೆಚ್ಚು ಜನ ಆಭರಣ ಗ್ರಾಹಕರು ಮಹಿಳೆಯರೇ ಆಗಿರುವುದರಿಂದ ಮಹಿಳಾ ಆಭರಣ ಉದ್ದಿಮೆದಾರರಿಗೆ ಇದೂ ಒಂದು ವರವಾಗಿ ಪರಿಣಮಿಸಿದೆ. ಏಕೆಂದರೆ, ಮಹಿಳಾ ಉದ್ಯಮಿಗಳೊಂದಿಗೆ ಮಹಿಳಾ ಗ್ರಾಹಕರು ಮನಸೋಯಿಚ್ಛೆ ತಮ್ಮ ನೆಚ್ಚಿನ ಆಭರಣ ಶೈಲಿಗಳ ಬಗ್ಗೆ ಮತ್ತು ಹಣಕಾಸಿನ ಬಗ್ಗೆ ಮುಕ್ತವಾಗಿ ಚರ್ಚಿಸುವ ಸಲುಗೆಯನ್ನು ಹೊಂದಿದ್ದಾರೆ. ಇದು ಮಹಿಳಾ ಉದ್ದಿಮೆದಾರರಲ್ಲಿ ತಮ್ಮ ಉದ್ದಿಮೆಯನ್ನು ವಿಸ್ತರಿಸಲು ಮತ್ತು ಎಲ್ಲಾ ವರ್ಗದ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಸಹಾಯಕವಾಗಿದೆ. ಆದರೂ ಗ್ರಾಮೀಣ ಭಾಗದ ಮಹಿಳಾ ಅಕ್ಕಸಾಲಿಗರು ಇನ್ನೂ ತರಬೇತಿಯ ಕೊರತೆಯನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಮಾರುಕಟ್ಟೆ ನಿರ್ವಹಣೆಯ ಬಗ್ಗೆ ಮತ್ತು ಆಧುನಿಕ ಹಸ್ತಬಳಕೆಯ ಯಂತ್ರಗಳ ನಿರ್ವಹಣೆಯ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯದೆ, ಹಳೆಯ ಸಾಂಪ್ರದಾಯಿಕ ಶೈಲಿಗೆ ಜೋತುಬಿದ್ದು ನಗರದ ಅಕ್ಕಸಾಲಿಗ ಮಹಿಳೆಯೊಂದಿಗೆ ಪೈಪೋಟಿ ನಡೆಸುವಲ್ಲಿ ಹಿಂದುಳಿದಿದ್ದಾರೆ. 
Picture
ಇಂತಹ ಮಹಿಳೆಯರಿಗೆ ಸೂಕ್ತ ತರಬೇತಿಯನ್ನು ಮತ್ತು ಮಾರ್ಗದರ್ಶನವನ್ನು ನೀಡಿದರೆ ನಗರ ಮಟ್ಟದ ಮಹಿಳಾ ಅಕ್ಕಸಾಲಿಗರು ಅಥವಾ ಉದ್ದಿಮೆದಾರರಂತೆ ಗ್ರಾಮೀಣ ಮಹಿಳೆಯರೂ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಹಣಕಾಸು ನಿಗಮವು ಮಹಿಳೆಯರಿಗೆ ಉದ್ದಿಮೆಗಳನ್ನು ಸ್ಥಾಪಿಸಲು ವಿಶೇಷ ಪ್ರೋತ್ಸಾಹವನ್ನು ನೀಡುತ್ತಿದೆ. ನಿಗಮವು ವಿಶೇಷ ಯೋಜನೆಗಳನ್ನು ರೂಪಿಸಿಕೊಂಡು ಆರ್ಥಿಕ ನೆರವನ್ನು ನೀಡುತ್ತಿದೆ. ತರಬೇತಿ ಹೊಂದಿರುವ ಹಾಗೂ ಉದ್ಯಮವನ್ನು ಸ್ಥಾಪಿಸಲು ಮುಂದಾಗುವ ಉತ್ಸಾಹಿ ಮಹಿಳೆಯರಿಗೆ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಕಡಿಮೆ ಬಡ್ಡಿಯನ್ನು ಆಕರಿಸಿ ಸುಲಭ ಷರತ್ತುಗಳನ್ನು ಹಾಕಿ ಹಣಕಾಸನ್ನು ನಿಗಮವು ಒದಗಿಸುವುದು. ಗೃಹ, ಗ್ರಾಮೀಣ, ಸಣ್ಣ ಉದ್ದಿಮೆಗಳ ಮತ್ತು ಅತಿಸಣ್ಣ ಉದ್ದಿಮೆಗಳಿಗೆ ನಿಗಮವು ಹಣಕಾಸಿನ ನೆರವು ನೀಡುವುದು.
  
ಆಯಾ ಪ್ರದೇಶಗಳಿಗಳಿಗನುಗುಣವಾಗಿ ಬಡ್ಡಿಯನ್ನು ಬೇರೆ ಬೇರೆ ದರಗಳಲ್ಲಿ ವಿಧಿಸಲಾಗುವುದು. ಈ ಬಡ್ಡಿದರ ಶೇ.12 ರಿಂದ ಶೇ 13.5 ರಷ್ಟಿರುವುದು ಎಂದು ತಿಳಿದುಬಂದಿದೆ. ಹಿಂದುಳಿದ ಜಿಲ್ಲೆಗಳಲ್ಲಿ ಬಡ್ಡಿದರ ಕಡಿಮೆಯಿದ್ದರೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅದು ಹೆಚ್ಚಿರುವುದು ಎಂದು ತಿಳಿದುಬಂದಿದೆ. ಬಡ್ಡಿ ಮತ್ತು ಅಸಲನ್ನು ನಿಗದಿತ ಸಮಯದಲ್ಲಿ ಪಾವತಿ ಮಾಡಿದರೆ ನಿಗಮವು ಶೇ.1ರಷ್ಟು ರಿಯಾಯಿತಿಯನ್ನು ಕೂಡಾ ನೀಡುವುದು. ಕ್ಲುಪ್ತ ಸಮಯದಲ್ಲಿ ಸಾಲವನ್ನು ಮರುಪಾವತಿ ಮಾಡದಿದ್ದರೆ ಶೇ.1.5 ರಷ್ಟು ಹೆಚ್ಚು ಬಡ್ಡಿಯನ್ನು ಕೊಡಬೇಕಾಗುವುದು. ಪರಿಶಿಷ್ಟ ಜಾತಿ ಮತ್ತು ಪಂಗಡಗಳು, ಹಿಂದುಳಿದ ಪಂಗಡಗಳಿಗೆ ಸೇರಿದ ಮಹಿಳೆಯರು ಉದ್ಯಮಗಳನ್ನು ಸ್ಥಾಪಿಸಲು ಮುಂದೆ ಬಂದರೆ ಅವರಿಗೆ ವಿಧಿಸಲಾಗುವ ಬಡ್ಡಿದರದಲ್ಲಿ ಶೇ.1 ರಷ್ಟು ರಿಯಾಯಿತಿಗಳನ್ನು ನೀಡಲಾಗುವುದು. ಪ್ರವರ್ತಕರು ಆಯಾ ಪ್ರದೇಶಕ್ಕನುಗುಣವಾಗಿ ಶೇ.12.50 ರಿಂದ ಶೇ.15 ರಷ್ಟು ಬಂಡವಾಳವನ್ನು ತೊಡಗಿಸಿಕೊಳ್ಳಬೇಕಾಗುವುದು. ಹಾಗಿದ್ದರೂ ಯೋಜನೆಯ ವೆಚ್ಚ, ನಗದು ಕ್ರೋಢೀಕರಣ, ಯೋಜನೆಯ ಸಾಧ್ಯತೆ, ಮುಂತಾದ ಅಂಶಗಳನ್ನು ಗಮನಿಸಿ ಪ್ರವರ್ತಕರ ಪಾಲಿನ ಬಂಡವಾಳವನ್ನು ನಿರ್ಧರಿಸಲಾಗುವುದು. ಯೋಜನೆ, ಉದ್ಯಮಿಯ ಅರ್ಹತೆ ಮುಂತಾದವನ್ನು ಗಮನಿಸಿ ಭದ್ರತಾ ಮಿತಿಯನ್ನು ನಿರ್ಧರಿಸಲಾಗುವುದು ಮತ್ತು ಸಾಲದ ಮರುಪಾವತಿಗೆ ಎರಡರಿಂದ ಎಂಟು ವರ್ಷಗಳ ಕಾಲಾವಕಾಶವನ್ನು ಕೊಡಲಾಗುವುದೆಂದು ತಿಳಿದುಬಂದಿದೆ.
  
ಕರ್ನಾಟಕ ಸರಕಾರ ಉದ್ದಿಮೆಯನ್ನು ಆರಂಭಿಸುವ ಮಹಿಳೆಯರಿಗೆ ವಿಶೇಷ ಸಹಾಯಧನದ ಜೊತೆಯಲ್ಲಿ ಇತರ ರೀತಿಯ ಪ್ರೋತ್ಸಾಹ ನೀಡುತ್ತಿದೆ. ಮಹಿಳೆಯರು ಏಕಾಕಿಯಾಗಿ ಇಲ್ಲವೇ ಕೂಡಿಕೊಂಡು ಅತಿಸಣ್ಣ ಅಥವಾ ಸಣ್ಣ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಿದರೆ ಮತ್ತು ಆ ಘಟಕಗಳಲ್ಲಿ ಶೇ.50ಕ್ಕೂ ಹೆಚ್ಚು ಉದ್ಯೋಗಗಳನ್ನು ಮಹಿಳೆಯರಿಗೆ ಒದಗಿಸಿದರೆ ಶೇ.5 ರಷ್ಟು ಹೆಚ್ಚುವರಿಯಾಗಿ ಬಂಡವಾಳ ಹೂಡಿಕೆ ಸಹಾಯಧನವನ್ನು ನೀಡಲಾಗುವುದು ಎಂದು ತಿಳಿದುಬಂದಿದೆ. ಆದರೆ ಈ ಮೊತ್ತ ಒಂದು ಲಕ್ಷ ರೂಪಾಯಿ ಮೀರುವಂತಿಲ್ಲ. ವಲಯ 2ರಲ್ಲಿ ಬಂಡವಾಳ ಹೂಡಿಕೆ ಸಹಾಯ ಧನ ಶೇ.15 ರಷ್ಟಿದ್ದರೆ. ವಲಯ 3ರಲ್ಲಿ ಈ ಸಹಾಯಧನದ ಮೊತ್ತ ಶೇ.20ರಷ್ಟಿರುತ್ತದೆ. ಮಹಿಳಾ ಉದ್ಯಮಿಗಳಿಗೆ ಕೊಡಲಾಗುವ ಹೆಚ್ಚುವರಿ ಬಂಡವಾಳ ಹೂಡಿಕೆ ಸಹಾಯಧನವನ್ನು ಸಾಮಾನ್ಯ ಸಹಾಯಧನದ ಜತೆಗೆ ನೀಡಲಾಗುವುದು ಎಂದು ತಿಳಿದುಬಂದಿದೆ.
  
ಇತರ ಉದ್ಯಮಿಗಳಿಗೆ ದೊರೆಯುವ ಎಲ್ಲಾ ರಿಯಾಯಿತಿಗಳು, ವಿನಾಯಿತಿಗಳು ಮತ್ತು ಸಹಾಯಧನವು ಮಹಿಳಾ ಉದ್ಯಮಿಗಳಿಗೂ ದೊರೆಯುವುದು. ಅತಿ ಸಣ್ಣ ಉದ್ದಿಮೆಯ ಘಟಕಗಳಿಗೆ ಉತ್ಪಾದನೆ ಪ್ರಾರಂಭಿಸಿದ ದಿನಾಂಕದಿಂದ ಏಳು ವರ್ಷಗಳವರೆಗೆ ಘಟಕದ ಸ್ಥಿರ ಸ್ವತ್ತುಗಳ ಮೌಲ್ಯದ ಶೇ.100 ರಷ್ಟು ಮೊಬಲಿಗಿಗೆ ಅನುಗುಣವಾಗಿ ಮಾರಾಟ ತೆರಿಗೆ ವಿನಾಯಿತಿ ದೊರೆಯುವುದು. ಈ ವಿನಾಯಿತಿಯನ್ನು ಎರಡು ಲಕ್ಷ ರೂ.ಗೆ ಮಿತಿಗೊಳಿಸಲಾಗಿದೆ. ಹಾಗೆಯೇ ಸಣ್ಣ ಉದ್ದಿಮೆ ಘಟಕಗಳಿಗೆ ಉತ್ಪಾದನೆ ಪ್ರಾರಂಭಿಸಿದ ದಿನಾಂಕದಿಂದ ಏಳು ವರ್ಷಗಳವರೆಗೆ ಘಟಕದ ಸ್ಥಿರ ಸ್ವತ್ತುಗಳ ಮೌಲ್ಯದ ಶೇ.50 ರಷ್ಟು ಮೊಬಲಿಗಿಗೆ ಮಾರಾಟ ತೆರಿಗೆ ವಿನಾಯಿತಿ ದೊರೆಯುವುದು. ಉತ್ಪಾದನೆ ಪ್ರಾರಂಭವಾದ ಎಂಟನೆಯ ವರ್ಷದಿಂದ ಮರುಪಾವತಿ ಆರಂಭವಾಗುವುದು. ಕೆಲವು ವಿಶೇಷ ಸಂದರ್ಭಗಳಲ್ಲಿ ಮುಂದೂಡಿಕೆ ಸೌಲಭ್ಯ ದೊರೆಯುವುದು. ಮಹಿಳಾ ಉದ್ಯಮಿಗಳು ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಬಹುದು.
  
ಅಭಾವವುಳ್ಳ ಕಚ್ಚಾ ಸಾಮಗ್ರಿಗಳನ್ನು ದೊರಕಿಸಿಕೊಳ್ಳುವಾಗ, ಕೈಗಾರಿಕೆ ಶೆಡ್ಡುಗಳನ್ನು ಪಡೆಯುವಾಗ ಮತ್ತು ಉದ್ದಿಮೆಗೆ ಭೂಮಿಯನ್ನು ಹಂಚುವಾಗ ಹಾಗೂ ಸರಕಾರ ಸಣ್ಣ ಘಟಕಗಳು ಉತ್ಪಾದಿಸಿದ ಸರಕುಗಳನ್ನು ಕೊಳ್ಳುವಾಗ ಮಹಿಳಾ ಉದ್ಯಮಿಗಳಿಗೆ ಆದ್ಯತೆ ಕೊಡಲಾಗುವುದು.
  
ಮಹಿಳಾ ಉದ್ಯಮಿಗಳು ಸ್ಥಾಪಿಸುವ ಕೈಗಾರಿಕಾ ಘಟಕಗಳಿಗೆ ರಾಜ್ಯ ಹಣಕಾಸು ಸಂಸ್ಥೆ, ಅಥವಾ ಇತರ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳು ಸಾಲ ನೀಡುವುವು. ಈ ಸಂಸ್ಥೆಗಳಿಂದ ಪಡೆದ ಸಾಲಕ್ಕೆ ಉದ್ಯಮಿಯು ನೀಡಬೇಕಾಗಿರುವ ಒಂದು ವರ್ಷದ ಬಡ್ಡಿಯನ್ನು ಭಾರತೀಯ ಕೈಗಾರಿಕಾ ಹಣಕಾಸು ನಿಗಮವು ಪಾವತಿ ಮಾಡುವುದು. ಒಂದು ಬಾರಿ ಮಾತ್ರ ನೀಡಲಾಗುವ ಈ ಬಡ್ಡಿ ಸಹಾಯಧನದ ಮಿತಿಯು 20 ಸಾವಿರ ರೂ. ಎಂದು ನಿಗದಿಪಡಿಸಲಾಗಿದೆ.
  
ಈಗಾಗಲೇ ಅಲ್ಲಲ್ಲಿ ಪ್ರಾಸ್ತಾಪಿಸಿರುವಂತೆ ಹಣಕಾಸು ಸಂಸ್ಥೆಗಳು ಮತ್ತು ಉದ್ದಿಮೆಯ ಅಭಿವೃದ್ಧಿಯಲ್ಲಿ ತೊಡಗಿರುವ ಸಂಸ್ಥೆಗಳು ಕಾಲಕಾಲಕ್ಕೆ ತಮ್ಮ ನೀತಿಗಳನ್ನು ಬದಲಿಸಿಕೊಳ್ಳುತ್ತಿರುತ್ತವೆ. ಆಯಾ ಕಾಲ ಮತ್ತು ಪರಿಸ್ಥಿತಿಗನುಗುಣವಾಗಿ ಮತ್ತು ಸರ್ಕಾರದ ನೀತಿಗಳಿಗನುಸಾರವಾಗಿ ಹೊಸ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿರುತ್ತವೆ ಹಾಗೂ ಹಳೆಯ ಕಾರ್ಯಕ್ರಮಗಳಲ್ಲಿ ತಿದ್ದುಪಡಿ ಮಾಡಿಕೊಳ್ಳುತ್ತಿರುತ್ತವೆ. ಆದ್ದರಿಂದ ಸಣ್ಣ ಉದ್ದಿಮೆ ಘಟಕವನ್ನು ಸ್ಥಾಪಿಸಬೇಕೆಂದಿರುವವರು ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿಮಾಡಿ ಇಲ್ಲವೇ ಅವರೊಂದಿಗೆ ಪತ್ರಗಳ ಮೂಲಕ ವ್ಯವಹರಿಸಿ ಸದ್ಯ ಜಾರಿಯಲ್ಲಿರುವ ಕಾರ್ಯಸೂಚಿಯನ್ನು, ಹಣಕಾಸಿನ ನೆರವನ್ನು ಮತ್ತು ರಿಯಾಯಿತಿಗಳು, ವಿನಾಯಿತಿಗಳು, ಸಹಾಯಧನ, ಮುಂತಾದವುಗಳ ಬಗ್ಗೆ ವಿವರಗಳನ್ನು ಪಡೆದುಕೊಳ್ಳಬೇಕು. ಮೇಲೆ ನೀಡಲಾಗಿರುವ ವಿವರಗಳನ್ನು ಲಭ್ಯವಿರುವ ಮೂಲಗಳಿಂದ ಸಂಗ್ರಹಿಸಿಕೊಡಲಾಗಿದೆ. ಅವುಗಳಲ್ಲಿ ಕೆಲವು ಮಾರ್ಪಾಟುಗಳಾಗಿರುವ ಸಾಧ್ಯತೆಯಿರುತ್ತವೆ.
  
​ಇತರೆ ಕ್ಷೇತ್ರದ ಮಹಿಳಾ ಉದ್ದಿಮೆದಾರರಂತೆ ಅಕ್ಕಸಾಲಿಗ ವೃತ್ತಿಯ ಮಹಿಳೆಯರೂ ಸರ್ಕಾರದ ಮೇಲ್ಕಂಡ ವಿಶೇಷ ಸವಲತ್ತುಗಳ ಸಹಾಯವನ್ನು ಪಡೆದುಕೊಂಡು ಸ್ವಾವಲಂಬಿಗಳಾಗಬೇಕಾಗಿದೆ. ಅದರಲ್ಲೂ ಅಕ್ಕಸಾಲಿಗ ಕುಟುಂಬದ ವಿಧವೆಯರು, ಅಂಗವಿಕಲ ಮಹಿಳೆಯರು ನಿಸ್ಸಹಾಯಕರಂತೆ ಮನೆಯಲ್ಲಿ ಕೂತು ಮರುಗಬೇಕಾಗಿಲ್ಲ. ತಾವು ಎಲ್ಲರಿಗೂ ಭಾರವಾಗಿದ್ದೇವೆಂದು ರೋಧಿಸುತ್ತಾ ಜೀವನ ಕಳೆಯಬೇಕಾಗಿಲ್ಲ. ಅಕ್ಕಸಾಲಿಗ ವೃತ್ತಿಯಲ್ಲಿ ಮತ್ತು ವ್ಯಾಪಾರದಲ್ಲಿ ಯಶಸ್ವೀ ಸಾಧನೆಯನ್ನು ಪ್ರದರ್ಶಿಸುತ್ತಿರುವ ಅನೇಕ ಮಹಿಳಾ ಉದ್ದಿಮೆದಾರರು ನಮ್ಮ ಮಧ್ಯದಲ್ಲೇ ಇದ್ದಾರೆ. ಇಂತಹವರ ಜೀವನವನ್ನು ಸ್ಫೂರ್ತಿಯಾಗಿ ಪಡೆದು, ಇತರೆ ಎಲ್ಲಾ ಅಕ್ಕಸಾಲಿಗ ಕುಟುಂಬದ ಮಹಿಳೆಯರೂ ಸ್ವಾವಲಂಬಿಗಳಾಗಬಹುದು.
 
ಬಿ. ರಾಮಾಚಾರಿ
ಸಂಶೋಧನಾ ವಿದ್ಯಾರ್ಥಿ, ಸಮಾಜಶಾಸ್ತ್ರ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ.
0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
+91-9980066890
+91-8310241136
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)