SKH
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
SKH

ಸಮುದಾಯ ಸಂಘಟನೆ

6/20/2017

0 Comments

 
Picture
ಸಮಾಜಶಾಸ್ತ್ರದಲ್ಲಿ ಪ್ರಸ್ತಾಪವಾಗುವ ಅನೇಕ ಮೂಲ ಕಲ್ಪನೆಗಳಲ್ಲಿ ಸಮುದಾಯವೂ ಒಂದು. ಸಮಾಜಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು, ಅರ್ಥಶಾಸ್ತ್ರಜ್ಞರು, ಸಮಾಜಕಾರ್ಯಕರ್ತರು, ರಾಜಕಾರಣಿಗಳು, ಯೋಜಕರು, ಯೋಜನೆಗಳ ಅನುಷ್ಟಾನ ನಿಪುಣರು, ಹೀಗೆ ಹಲವು ಹತ್ತು ಜನ ಸಮುದಾಯವೆಂಬ ಶಬ್ದವನ್ನು ಉಪಯೋಗಿಸುತ್ತಾರೆ. ಹಾಗಾಗಿ ಒಂದೊಂದು ಗುಂಪಿನವರೂ ಸಮುದಾಯ ಶಬ್ದಕ್ಕೆ ಒಂದೊಂದು ಅರ್ಥವನ್ನು ಕಲ್ಪಿಸುತ್ತಾರೆ. ನಾವಿಲ್ಲಿ ಸಮುದಾಯ ಸಂಘಟನೆಯ ಹಿನ್ನೆಲೆಯಲ್ಲಿ ಸಮುದಾಯ ಶಬ್ದವನ್ನು ಅರ್ಥಮಾಡಿಕೊಳ್ಳಬೇಕಾಗಿದೆ.
ಸಾಮಾನ್ಯ ಅರ್ಥದಲ್ಲಿ ಒಂದು ಭೌಗೋಲಿಕ ಪ್ರದೇಶದಲ್ಲಿದ್ದು, ಒಂದೇ ರೀತಿಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಒಂದು ಜನಸಮೂಹಕ್ಕೆ ಸಮುದಾಯ ಎಂದು ಕರೆಯುವುದು ವಾಡಿಕೆ. ಸಮಾಜಶಾಸ್ತ್ರಜ್ಞ ಹಾಗೂ ಸಮಾಜಕಾರ್ಯಕರ್ತರಲ್ಲಿ ಈ ಶಬ್ದಕ್ಕೆ ಇದಕ್ಕಿಂತ ಹೆಚ್ಚಿನ ಅರ್ಥವನ್ನು ಆರೋಪಿಸುವುದುಂಟು. ಈ ಹಿನ್ನೆಲೆಯಲ್ಲಿ ಪಾಶ್ಚಾತ್ಯ ಹಾಗೂ ಪೌರಾತ್ಯ ಕೆಲವು ವಿದ್ವಾಂಸರು ಪ್ರತಿಪಾದಿಸಿದ ಹಲವು ವ್ಯಾಖ್ಯೆಗಳು ಹಾಗೂ ವಿವರಣೆಗಳನ್ನು ನಾವು ನೋಡಬೇಕಾಗುತ್ತದೆ.

ಕೆನಡಾ ದೇಶದ ಸಮುದಾಯ ಸಂಘಟನೆಯ ಆದ್ಯ ಪ್ರವರ್ತಕರಲ್ಲಿ ಒಬ್ಬರಾದ ಡಾ. ಮುರ್ರೇ ಜಿ. ರೋಸ್ ಅವರು “ಒಂದು ಭೌಗೋಲಿಕ ಪ್ರದೇಶದಲ್ಲಿರುವ ಜನರನ್ನು ಸಮುದಾಯ ಎಂದು ಕರೆಯಬಹುದಾಗಿದೆ ಎಂದು ಹೇಳುತ್ತಾರೆ. ಒಂದು ಗ್ರಾಮ, ಒಂದು ಪಟ್ಟಣ, ಒಂದು ನಗರ, ಒಂದು ನೆರೆಹೊರೆ ಅಥವಾ ಶಹರದ ಒಂದು ವಲಯ (ವಾರ್ಡ್‍)ವನ್ನು ಇದಕ್ಕೆ ಉದಾಹರಿಸುತ್ತಾರೆ. ಅದರಂತೆಯೇ, ಒಂದು ಪ್ರಾಂತ್ಯ, ಒಂದು ರಾಜ್ಯ, ಒಂದು ದೇಶ ಹಾಗೂ ಇಡೀ ಪ್ರಪಂಚವೇ ಒಂದು ಸಮುದಾಯ ಎಂದೂ ಹೇಳುತ್ತಾರೆ. ಹಾಗಾಗಿ ಸಮಯ ಹಾಗೂ ಸಂದರ್ಭಕ್ಕೆ ತಕ್ಕಂತೆ ಸಮುದಾಯದ ಅರ್ಥಗ್ರಹಿಕೆ ಬೇರೆ ಬೇರೆ ಆಗಿರುತ್ತದೆ. ವಿಶ್ವಸಂಸ್ಥೆಯು ಸಮುದಾಯ ಸಂಘಟನೆಯ ಯೋಜನೆಗಳನ್ನು ಬೇರೆ ಬೇರೆ ಸದಸ್ಯ ರಾಷ್ಟ್ರಗಳಲ್ಲಿ ಅನುಷ್ಟಾನ ಮಾಡುವಾಗ, ಇಡೀ ವಿಶ್ವವನ್ನೇ ಅಂತರಾಷ್ಟ್ರೀಯ ಸಮುದಾಯ ಎಂದು ಹೇಳುವುದುಂಟು.

ಡಾ. ರೋಸ್ ಅವರು ‘ಕ್ರಿಯಾತ್ಮಕ ಗುಂಪುಗಳನ್ನೂ ಸಮುದಾಯ ಎಂದು ಕರೆಯುತ್ತಾರೆ ! ಇಂತಹ ಸಂದರ್ಭಗಳಲ್ಲಿ ಸಮುದಾಯ ಒಂದು ಭೌಗೋಲಿಕ ಪ್ರದೇಶದ ಜನರನ್ನಷ್ಟೇ ಒಳಗೊಳ್ಳದೆ, ಕ್ರಿಯಾತ್ಮಕ ಸಂಬಂಧವಿರುವ ಇತರೆ ಸಮುದಾಯಗಳ ಸದಸ್ಯರನ್ನೂ ‘ಸಮುದಾಯ ಒಳಗೊಳ್ಳುತ್ತದೆ. ರೈತ ಸಮುದಾಯ, ಶಿಕ್ಷಕ ಸಮುದಾಯ, ಸ್ತ್ರೀ ಸಮುದಾಯ ಮುಂತಾದ ಗುಂಪುಗಳ ಬಗ್ಗೆ ಮಾತನಾಡುವಾಗ ಒಂದೇ ಭೌಗೋಲಿಕ ಸಮುದಾಯದ ಸದಸ್ಯರಷ್ಟೇ ಒಳಗೊಳ್ಳದೆ, ಇತರೆ ಭೌಗೋಲಿಕ ಸಮುದಾಯಕ್ಕೆ ಸೇರಿದ, ಆದರೆ ಇತರೆ ಅಂತಹ ಸಮುದಾಯಗಳೊಂದಿಗೆ ಕ್ರಿಯಾತ್ಮಕ ಸಂಬಂಧಹೊಂದಿದ ಸದಸ್ಯರೂ ‘ಸಮುದಾಯದ ಪರಿಕಲ್ಪನೆಯಲ್ಲಿ ಒಳಗೊಳ್ಳುತ್ತಾರೆ. ಒಂದು ಭೌಗೋಲಿಕ ಸಮುದಾಯದಲ್ಲಿ ಅನೇಕ ಕ್ರಿಯಾತ್ಮಕ ಸಮುದಾಯಗಳಿರಬಹುದು. ಒಂದು ಗ್ರಾಮ ಭೌಗೋಲಿಕ ಸಮುದಾಯವಾದರೆ, ಅಲ್ಲಿರುವ ರೈತರು, ಬಡಗಿಗಳು, ಕುಂಬಾರರು, ಕಮ್ಮಾರರು ಕ್ಷೌರಿಕರು, ವ್ಯಾಪಾರಿಗಳು ಹೀಗೆ ಬೇರೆ ಬೇರೆ ವೃತ್ತಿಗಳನ್ನಾಧರಿಸಿದ ಬೇರೆ ಬೇರೆ ಸಮುದಾಯಗಳ ಸದಸ್ಯರು ಇರಲು ಅವಕಾಶವಿದೆ. ಅದರಂತೆಯೇ ಒಂದು ಕ್ರಿಯಾತ್ಮಕ ಸಮುದಾಯದಲ್ಲಿ ಬೇರೆ ಬೇರೆ ಭೌಗೋಲಿಕ ಸಮುದಾಯಕ್ಕೆ ಸೇರಿದವರೂ ಇರುತ್ತಾರೆ. ರೈತ ಸಮುದಾಯವನ್ನು ಒಂದು ಕ್ರಿಯಾತ್ಮಕ ಸಮುದಾಯವೆಂದಾಗ, ಆ ಸಮುದಾಯದಲ್ಲಿ ಒಂದೇ ಗ್ರಾಮದ ರೈತರು ಇರಬಹುದು ಅಥವಾ ಬೇರೆ ಬೇರೆ ಗ್ರಾಮಗಳಿಂದ ಬಂದಿರುವ ರೈತರು ಆ ಕ್ರಿಯಾತ್ಮಕ ಸಮುದಾಯವನ್ನು ಪ್ರತಿನಿಧಿಸಿರಬಹುದು. ಹಾಗಾಗಿ ಸಮುದಾಯ ಶಬ್ದ ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಅರ್ಥವ್ಯಾಪ್ತಿಯನ್ನು ಪಡೆಯುತ್ತದೆ.

ಅಮೇರಿಕಾ ದೇಶದ ಪ್ರೊ. ಆರ್ಥರ್ ಡನ್ಹ್ಯಾಮ್ ಅವರ ಪ್ರಕಾರ ``ಒಂದು ಜಾಗ ಅಥವಾ ಒಂದು ಪ್ರದೇಶದಲ್ಲಿರುವ ಜನ ಸಮೂಹವನ್ನು ಸಮುದಾಯ ಒಳಗೊಳ್ಳುತ್ತದೆ. ``ಒಂದು ಭೌಗೋಲಿಕ ಪ್ರದೇಶದಲ್ಲಿ, ತಕ್ಕಮಟ್ಟಿಗೆ ಒಟ್ಟಿಗಿರುವ ಹಾಗೂ ಒಬ್ಬರಿಗೊಬ್ಬರು ಹೊಂದಿಕೊಂಡಿರುವ ಮತ್ತು ನಡವಳಿಕೆ, ಸಂಪ್ರದಾಯ ಪದ್ಧತಿ, ಆಚಾರ ವಿಚಾರಗಳು, ಭಾಷಾ ವೈವಿಧ್ಯತೆ ಮುಂತಾದ ಅಂಶಗಳನ್ನೊಳಗೊಂಡ ಒಂದು ಸಾಮಾನ್ಯ ಜೀವನಪದ್ಧತಿಯನ್ನು ಹೊಂದಿರುವ ಮನುಷ್ಯನ ಒಂದು ಗುಂಪೇ ಸಮುದಾಯವಾಗಿರುತ್ತದೆ.
ಪ್ರೊ. ಡನ್ಹ್ಯಾಮ್ ಅವರು ಒಂದು ವಿಸ್ತಾರವಾದ ವ್ಯಾಖ್ಯೆಯನ್ನೇ ಕೊಟ್ಟಿದ್ದಾರೆ. ಈ ವ್ಯಾಖ್ಯೆಯು ಅನೇಕ ಅಂಶಗಳನ್ನು ಒಳಗೊಂಡಿದೆ. ಮೊದಲನೆಯದಾಗಿ ಸಮುದಾಯ ಒಂದು ಜನರ ಗುಂಪು. ಅವರೆಲ್ಲಾ ಒಂದೇ ಭೌಗೋಲಿಕ ಪ್ರದೇಶದಲ್ಲಿ ವಾಸವಾಗಿರುತ್ತಾರೆ. ತಮ್ಮ ದೈನಂದಿನ ವ್ಯವಹಾರಗಳಲ್ಲಿ ಒಬ್ಬರೊನ್ನೊಬ್ಬರು ಹೊಂದಿಕೊಂಡು ಹೋಗುತ್ತಾರೆ. ಅವರೆಲ್ಲರ ಸಂಪ್ರದಾಯ, ಪದ್ಧತಿಗಳು, ಆಚಾರ ವಿಚಾರಗಳು, ನಡವಳಿಕೆಗಳು ಒಂದೇ ತರವಾಗಿರುತ್ತವೆ. ಅವರು ಮಾತನಾಡುವ ಭಾಷೆ-ಶೈಲಿ ಒಂದೇ ರೀತಿ ಇರುತ್ತದೆ. ಅವರೆಲ್ಲರೂ ತಮ್ಮದೇ ಆದ ಒಂದು ಜೀವನ ಪದ್ಧತಿಯನ್ನು ಅಳವಡಿಸಿಕೊಂಡಿರುತ್ತಾರೆ. ಇಂತಹ ಒಂದು ಗುಂಪು ಸಮುದಾಯ ಎಂದೆನಿಸಿಕೊಳ್ಳುತ್ತದೆ.
ಈ ವ್ಯಾಖ್ಯೆಯ ಪ್ರಕಾರ ಸಮುದಾಯ ಒಂದು ನಿರ್ಜೀವ ಯಾಂತ್ರಿಕ ವ್ಯವಸ್ಥೆಯಲ್ಲ, ಆದರೆ ಬೆಳವಣಿಗೆ ಕಾಣುತ್ತಿರುವ ಒಂದು ಚೈತನ್ಯಪೂರ್ವಕ ಘಟಕ. ಇದೊಂದು ಪರ್ಯಾಯ ರಾಜಕೀಯ ಸಂಸ್ಥೆ ಅಥವಾ ಘಟಕವಲ್ಲ. ಒಂದು ಸಮುದಾಯದಲ್ಲಿ ಅನೇಕ ಚಿಕ್ಕ ಚಿಕ್ಕ ಸಮುದಾಯಗಳಿರಬಹುದು. ಸಮುದಾಯ ಹತ್ತಾರು ಮನೆಗಳಿಂದ ಕೂಡಿದ್ದಾಗಿರಬಹುದು ಅಥವಾ ಒಂದು ದೊಡ್ಡ ಶಹರ ಅಥವಾ ಒಂದು ವಿಶಾಲ ಭೂ ಪ್ರದೇಶವಾಗಿರಬಹುದು. ಆದರೆ ಅವರು ಒಟ್ಟಿಗಿರಬೇಕು ಮತ್ತು ಸಹಬಾಳ್ವೆ ನಡೆಸಬೇಕಷ್ಟೆ. ಇದು ಪ್ರೊ. ಡನ್ಹ್ಯಾಮ್ ಅವರು ಸಮುದಾಯಕ್ಕೆ ಕೊಡುವ ವಿವರ.

ಜಾಗತಿಕ ಆರೋಗ್ಯ ಸಂಸ್ಥೆ ಸಮುದಾಯವನ್ನು ಹೀಗೆ ವ್ಯಾಖ್ಯಾನಿಸುತ್ತದೆ. ``ಒಂದು ಖಚಿತ ಭೌಗೋಲಿಕ ವ್ಯಾಪ್ತಿಯಲ್ಲಿ ಜೀವಿಸುವ, ಒಂದು ಸಾಮಾನ್ಯ ಸಂಸ್ಕೃತಿ, ಮೌಲ್ಯಗಳು, ಪದ್ಧತಿಗಳನ್ನು ಹಂಚಿಕೊಂಡು, ಅನೂಚಾನವಾಗಿ ಬೆಳೆಸಿಕೊಂಡು ಬಂದಂತಹ ಸಂಬಂಧಗಳಿಂದ ಒಂದು ಸಾಮಾಜಿಕ ರಚನೆಯನ್ನು ರೂಪಿಸಿಕೊಂಡಿರುವ ನಿರ್ದಿಷ್ಟ ಜನರ ಗುಂಪನ್ನು ಸಮುದಾಯ ಎಂದು ಪರಿಭಾವಿಸಲಾಗುತ್ತದೆ. ಸಮುದಾಯದ ಸದಸ್ಯರು ಹಿಂದಿನಿಂದ ರೂಢಿಸಿಕೊಂಡು ಬಂದಂತಹ ಮತ್ತು ಮುಂದಿನ ದಿನಗಳಲ್ಲಿ ಮಾರ್ಪಾಟನ್ನು ಕಾಣಬಹುದಾದ, ಸಾಮಾನ್ಯ ನಂಬಿಕೆಗಳು, ಮೌಲ್ಯಗಳು ಹಾಗೂ ಪದ್ಧತಿಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಅಸ್ತಿತ್ವವನ್ನು ಗಳಿಸಿಕೊಳ್ಳುತ್ತಾರೆ. ಸಮುದಾಯದ ಸದಸ್ಯರು ತಾವು ಒಂದು ಗುಂಪು ಎಂದೂ ಹಾಗೂ ಸಾಮಾನ್ಯ ಸಮಸ್ಯೆಗಳನ್ನು ಮತ್ತು ಆ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಒಂದು ಬದ್ಧತೆಯನ್ನೂ ಪ್ರದರ್ಶಿಸುತ್ತಾರೆ.

ಈ ವ್ಯಾಖ್ಯೆಯಲ್ಲಿ ಅನೇಕ ಅಂಶಗಳನ್ನು ಕ್ರೋಢೀಕರಿಸಲಾಗಿದೆ.
  1. ಜನರು ಒಂದು ಭೌಗೋಲಿಕ ವ್ಯಾಪ್ತಿಯಲ್ಲಿ ಜೀವಿಸುತ್ತಾರೆ.
  2. ಹಿಂದಿನಿಂದ ಬೆಳೆದು ಬಂದಂತಹ ಸಂಬಂಧಗಳಿಂದ ಒಡಗೂಡಿದ ಒಂದು ಸಾಮಾಜಿಕ ರಚನೆಯನ್ನು ರೂಪಿಸಿಕೊಂಡಿರುತ್ತಾರೆ.
  3. ಒಂದು ಸಾಮಾನ್ಯ ಸಂಸ್ಕೃತಿ, ಮೌಲ್ಯಗಳು ಮತ್ತು ಪದ್ಧತಿಗಳನ್ನು ಹೊಂದಿದವರಾಗಿರುತ್ತಾರೆ.
  4. ಅನೂಚಾನವಾದ ಸಂಸ್ಕೃತಿಯ ಅಂಶಗಳೊಂದಿಗೆ, ಮುಂಬರುವ ದಿನಗಳಲ್ಲಿ ಕಾಣಬಹುದಾದ ಸಾಮುದಾಯಿಕ ಮಾರ್ಪಾಟುಗಳನ್ನೂ, ಮೌಲ್ಯಗಳು, ಹಾಗೂ ಸಾಮಾನ್ಯ ನಂಬಿಕೆಗಳನ್ನೂ ಹಂಚಿಕೊಳ್ಳುತ್ತಾರೆ.
  5. ಸಮುದಾಯದ ಸದಸ್ಯರು ತಾವೆಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರು ಎಂದು ಭಾವಿಸಿರುತ್ತಾರೆ.
  6. ಸಮುದಾಯದ ಯಾವುದೇ ಸದಸ್ಯರು, ಸಾಮೂಹಿಕ ಜೀವನಕ್ಕೆ ಸಂಬಂಧಿಸಿದಂತೆ, ಸಮಸ್ಯೆಗಳನ್ನು ಎದುರಿಸಿದರೂ, ಅವು ತಮ್ಮ ಇಡೀ ಸಮುದಾಯದ ಸಮಸ್ಯೆಗಳೆಂದು ಅರ್ಥೈಸಿಕೊಳ್ಳುತ್ತಾರೆ.
  7. ಆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಲ್ಲಿ ಒಗ್ಗಟ್ಟನ್ನೂ ಹಾಗೂ ಬದ್ಧತೆಯನ್ನು ಪ್ರದರ್ಶಿಸುತ್ತಾರೆ.
  8. ಮೇಲೆ ತಿಳಿಸಿದ ಸಾಮುದಾಯಿಕ ಅಂಶಗಳಿಂದ ಒಡಗೂಡಿದ ವೈಯಕ್ತಿಕ ಹಾಗೂ ಸಾಮಾಜಿಕ ಅಸ್ತಿತ್ವವನ್ನು ಗಳಿಸಿಕೊಂಡಿರುತ್ತಾರೆ.
 
ಸಮುದಾಯದ ಇತರೆ ವ್ಯಾಖ್ಯೆಗಳು
ಮ್ಯಾಕ್ ಐವರ್ ಮತ್ತು ಪೇಜ್ ತಮ್ಮ `ಸಮಾಜ-ಒಂದು ಪ್ರಾರಂಭಿಕ ವಿಶ್ಲೇಷಣೆ ಎಂಬ ಪುಸ್ತಕದಲ್ಲಿ ಸಮುದಾಯವನ್ನು, ``ಕೆಲ ಪ್ರಮಾಣದ ಸಾಮಾಜಿಕ ಸಂಸಕ್ತತೆಯಿಂದ ಗುರುತಿಸಲ್ಪಟ್ಟು ಸಾಮಾಜಿಕ ಜೀವನದ ಕ್ಷೇತ್ರವಾಗಿದೆ ಎಂದು ವ್ಯಾಖ್ಯಾನಿಸುತ್ತಾರೆ. ಮುಂದುವರೆದು, ``ಯಾವಾಗ ಯಾವುದೇ ಒಂದು ಗುಂಪು, ಅದು ಚಿಕ್ಕದಾಗಿರಲಿ ಇಲ್ಲವೇ ದೊಡ್ಡದಾಗಿರಲಿ, ಯಾವುದೇ ನಿಗದಿತ ಆಸಕ್ತಿ ಇಲ್ಲದೆ, ಸಾಮಾನ್ಯ ಜೀವನದ ಮೂಲಭೂತ ಪರಿಸ್ಥಿತಿಗಳನ್ನು ಹಂಚಿಕೊಂಡು, ಒಟ್ಟಾಗಿ ಜೀವಿಸುತ್ತಾರೊ ಅಂತಹ ಗುಂಪಿಗೆ ನಾವು ಸಮುದಾಯ ಎಂದು ಕರೆಯುತ್ತೇವೆ ಎಂದು ಹೇಳುತ್ತಾರೆ.

ಕಿಂಗಸ್ಲೆ ಡೇವಿಸ್ ಅವರು ``ಸಾಮಾಜಿಕ ಬದುಕಿನ ಎಲ್ಲಾ ಅಂಶಗಳೂ ಒಳಗೊಳ್ಳುವಂತೆ ಒಂದು ಅತಿಚಿಕ್ಕದಾದ ಭೌಗೋಲಿಕ ಪ್ರದೇಶದಲ್ಲಿ ಬದುಕುವ ಗುಂಪಿಗೆ ಸಮುದಾಯ ಎಂದು ಕರೆಯುತ್ತಾರೆ.

ಆಗ್ಬರ್ನ್‍ ಮತ್ತು ನಿಮ್ಕಾಫ್ ಅವರ ಪ್ರಕಾರ, ``ಒಂದು ಪ್ರದೇಶದಲ್ಲಿ ವಾಸಿಸುವ ಒಂದು ಸಮೂಹ ಅಥವಾ ಜನ ಸಮೂಹಗಳ ಸಂಗ್ರಹಣೆಯೇ ಸಮುದಾಯ.

ಈ ಎಲ್ಲಾ ವ್ಯಾಖ್ಯೆಗಳನ್ನು ನೋಡಿದಾಗ, ಎಲ್ಲಾ ಸಮಾಜಶಾಸ್ತ್ರಜ್ಞರೂ ವಿಸ್ತಾರವಾಗಿ ಇಲ್ಲವೇ ಸಂಕ್ಷಿಪ್ತವಾಗಿ ಸಾಮುದಾಯಿಕ ಬದುಕಿಗೆ ಬೇಕಾಗುವ ಅಂಶಗಳನ್ನೇ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಮುದಾಯದ ವೈಲಕ್ಷಣಗಳನ್ನು ಹೀಗೆ ಗುರುತಿಸಬಹುದು.

1. ಜನ :- ಸಮುದಾಯದ ಮೊದಲನೆ ಅಂಶ ಸಮುದಾಯದ ಸದಸ್ಯರು. ಸದಸ್ಯರಿಲ್ಲದೆ ಸಮುದಾಯವಿಲ್ಲ. ಸದಸ್ಯರಲ್ಲಿ ಮಹಿಳೆಯರು, ಪುರುಷರು, ಯುವಕರು, ಯುವತಿಯರು, ಮಕ್ಕಳು, ವೃದ್ಧರು ಮುಂತಾದ ಅನೇಕ ಗುಂಪಿನವರು ಇರಬಹುದು. ಒಂದೇ ವೃತ್ತಿಯವರಿರಬಹುದು. ಬೇರೆ ಬೇರೆ ವೃತ್ತಿಯವರಿರಬಹುದು. ಒಂದೇ ಪ್ರವೃತ್ತಿಯವರಿರಬಹುದು ಇಲ್ಲವೇ ಬೇರೆ ಬೇರೆ ಪ್ರವೃತ್ತಿಯವರಿರಬಹುದು. ಆದರೆ ಅವರಲ್ಲಿ ಸಾಮಾನ್ಯ ಆಸಕ್ತಿಗಳಿರುತ್ತವೆ. ಒಂದೇ ಜಾಗದಲ್ಲಿ ವಾಸಿಸುತ್ತಿರುತ್ತಾರೆ. ಮಾನವ ಜನಾಂಗ ಹುಟ್ಟಿ ಬೆಳೆದಿರುವುದು ಸಮುದಾಯಗಳಲ್ಲಿಯೇ. ಅದರಂತೆಯೇ ಅವರ ವಿಕಾಸವೂ ಸಮುದಾಯದಲ್ಲಿಯೇ. ಹಾಗಾಗಿ ಸಮುದಾಯ ಜನರಿಂದ ಕೂಡಿದ ಗುಂಪು.

2. ಭೌಗೋಲಿಕ ವ್ಯಾಪ್ತಿ :- ಸಾಮಾನ್ಯವಾಗಿ ಸಮುದಾಯ ಒಂದು ಭೌಗೋಲಿಕ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಒಂದು ಹಟ್ಟಿ, ಒಂದು ಹಳ್ಳಿ, ಒಂದು ಗ್ರಾಮ/ಊರು, ಒಂದು ವಲಯ (ವಾರ್ಡ್‍), ಒಂದು ಪಟ್ಟಣ, ಒಂದು ಶಹರ ಮುಂತಾದವುಗಳನ್ನು ಇದಕ್ಕೆ ಉದಾಹರಿಸಬಹುದು. ಸಮುದಾಯ ಒಂದು ಸಣ್ಣ ಬುಡಕಟ್ಟು ಸಮುದಾಯದ ಹಟ್ಟಿಯಾಗಿರಬಹುದು. ಒಂದು ಚಿಕ್ಕ ಹಳ್ಳಿಯಾಗಿರಬಹುದು. ಒಂದು ಊರಾಗಿರಬಹುದು. ಪಟ್ಟಣದ ಒಂದು ವಲಯ (ವಾರ್ಡ್‍) ಆಗಿರಬಹುದು ಇಲ್ಲವೇ ಇಡೀ ಪಟ್ಟಣವಾಗಿರಬಹುದು. ಒಂದು ಶಹರವಾಗಿರಬಹುದು. ಇಲ್ಲವೇ ಶಹರದ ಒಂದು ವಿಭಾಗವಾಗಿರಬಹುದು. ಜನರ ಒಂದು ಗುಂಪು ಸಮುದಾಯ ಎಂದು ಗುರುತಿಸಿಕೊಳ್ಳಬೇಕಾದರೆ ಅದು ಒಂದು ಭೌಗೋಲಿಕ ವ್ಯಾಪ್ತಿಗೆ ಒಳಪಟ್ಟಿರುತ್ತದೆ.

ಇದಕ್ಕೆ ಅಪವಾದಗಳು ಇರಬಹುದು. ಅಂತರಾಷ್ಟ್ರೀಯ ಸಮುದಾಯದ ಬಗ್ಗೆ ಮಾತನಾಡುವಾಗ, ಆ ಸಮುದಾಯದ ವ್ಯಾಪ್ತಿ ಒಂದು ಚಿಕ್ಕ ಭೌಗೋಲಿಕ ಪ್ರದೇಶಕ್ಕೆ ಸೀಮಿತವಾಗಿರದೆ, ಇಡೀ ವಿಶ್ವಕ್ಕೇ ಆವರಿಸಲ್ಪಟ್ಟಿರುತ್ತದೆ. ಅದರಂತೆಯೇ ಒಂದು ದೇಶದ ಬಗ್ಗೆ ಮಾತನಾಡುವಾಗಲೂ ಅದರ ವ್ಯಾಪ್ತಿ ಇಡೀ ದೇಶವನ್ನು ಒಳಗೊಂಡಿರುತ್ತದೆ.

ದೇಶದ ಒಳನಾಡಿನಲ್ಲಿ ಹಟ್ಟಿ, ಹಳ್ಳಿ, ಗ್ರಾಮ, ಊರು ಹಾಗೂ ಪಟ್ಟಣಗಳಲ್ಲಿ, ಆಯಾ ಸಂದರ್ಭಕ್ಕೆ ತಕ್ಕಂತೆ, ಮನೆಗಳು ಗುಂಪು ಗುಂಪಾಗಿ ಇರುತ್ತವೆ. ಗುಂಪು ಮನೆಗಳು ಓಣಿಗಳಾಗಿ, ಓಣಿಗಳು ವಲಯಗಳಾಗಿ, ವಲಯಗಳು ಹಳ್ಳಿ, ಗ್ರಾಮ, ಊರುಗಳಾಗಿರುತ್ತವೆ. ಗುಂಪು ಮನೆಗಳು, ಓಣಿಗಳು, ವಲಯಗಳು, ಪಟ್ಟಣ ಹಾಗೂ ಶಹರಗಳಲ್ಲಿ ವಲಯಗಳಾಗಿರುತ್ತವೆ. ಇಂತಹ ವಲಯಗಳ ಗುಂಪೇ, ಒಕ್ಕೂಟವೇ ಪಟ್ಟಣಗಳಾಗಿ ರೂಪಗೊಳ್ಳುತ್ತವೆ. ಇವುಗಳ ವಿಸ್ತೃತ ರೂಪಗಳೇ ನಗರಗಳು ಹಾಗೂ ಮಹಾನಗರಗಳು.

ಕರಾವಳಿ ಪ್ರದೇಶಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ ಮನೆಗಳು ಈ ರೀತಿ ಒಟ್ಟೊಟ್ಟಾಗಿ ಇರುವುದಿಲ್ಲ. ಒಂದೊ, ಎರಡೂ ಇಲ್ಲವೇ ನಾಲ್ಕಾರು ಮನೆಗಳು ಒಂದು ಕಡೆ ಇರುತ್ತವೆ. ಅವರಿಗೆ ಸೇರಿದ ಭೂಮಿ, ಹೊಲ, ಗದ್ದೆ, ತೋಟ ಹತ್ತಿರದಲ್ಲೇ ಇರುತ್ತವೆ. ಆ ನಂತರ ಒಂದು ಗುಡ್ಡ, ಒಂದು ಹಳ್ಳ, ಅದರ ಹತ್ತಿರ ಮತ್ತು ನಾಲ್ಕಾರು ಮನೆಗಳು. ಅವರಿಗೆ ಸೇರಿದ ಭೂಮಿ, ಹೀಗೆ ಅಲ್ಲಿನ ಭೌಗೋಲಿಕ ರಚನೆ ಭಿನ್ನವಾಗಿರುತ್ತದೆ. ಮನೆಗಳು ಒಳನಾಡಿನಲ್ಲಿ ಇದ್ದ ಹಾಗೆ ಒಟ್ಟೊಟ್ಟಿಗಿರದೆ ವಿರಳ ವಿರಳವಾಗಿ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ಒಂದೊಂದು ಭೌಗೋಲಿಕ ಸಮುದಾಯಕ್ಕೆ ಒಂದೊಂದು ಗಡಿಯನ್ನು ನಿಗದಿಪಡಿಸುತ್ತಾರೆ. ಹಾಗಾಗಿ ಸಾಮಾನ್ಯವಾಗಿ, ಕೆಲವು ಅಪವಾದಗಳನ್ನು ಹೊರತುಪಡಿಸಿ, ಒಂದು ಸಮುದಾಯ ಒಂದು ನಿರ್ದಿಷ್ಟ ಭೌಗೋಲಿಕ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ.

3. ಸಮುದಾಯದಲ್ಲಿ ಸದಸ್ಯರ ಬದುಕು-ಜೀವನ ಸಾಮಾನ್ಯವಾಗಿರುತ್ತದೆ, ಏಕರೂಪತೆಯಿಂದ ಕೂಡಿರುತ್ತದೆ. ಅಂತಹ ಸದಸ್ಯರ ಮನೆಗಳು ಬೇರೆ ಬೇರೆ, ವೃತ್ತಿಗಳು ಬೇರೆ ಬೇರೆ, ಪ್ರವೃತ್ತಿಗಳು ಬೇರೆ ಬೇರೆ, ವಯೋಮಾನ, ಲಿಂಗ ಇತ್ಯಾದಿ ಅಂಶಗಳು ಬೇರೆ ಬೇರೆ ಇದ್ದರೂ, ಆ ಎಲ್ಲರೂ ಒಂದೇ ಸಮುದಾಯದ ಸದಸ್ಯರಾದ್ದರಿಂದ, ಎಲ್ಲರಿಗೂ ಅನ್ವಯವಾಗುವಂತೆ ತಮಗೆ ಬೇಕಾದ ಒಂದು ಜೀವನ ಶೈಲಿಯನ್ನು ರೂಪಿಸಿಕೊಂಡಿರುತ್ತಾರೆ ಹಾಗೂ ಇಂತಹ ಜೀವನ ಶೈಲಿಯನ್ನು ತುಂಬಾ ಮಹತ್ತರವಾದ ಕಾರಣಗಳಿಲ್ಲದಿದ್ದರೆ, ಪುನಃ ಪುನಃ ಬದಲಿಸಿಕೊಳ್ಳುವುದಿಲ್ಲ.

4. ನೈಜ ಜೀವನ :- ಸಮುದಾಯದ ಸದಸ್ಯರು ಒಂದು ತಮ್ಮದೇ ಆದ ನೈಜ ಜೀವನವನ್ನು ರೂಢಿಸಿಕೊಂಡಿರುವುದರಿಂದ, ಅದು ಅವರ ಸ್ವಭಾವಿಕ ಜೀವನವಾಗಿರುತ್ತದೆ. ಅವರಿಗೆ ತಮ್ಮದೇ ಆದ ಒಂದು ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯ, ಪದ್ಧತಿಗಳನ್ನು ರೂಪಿಸಿ, ಅಳವಡಿಸಿಕೊಂಡಿರುತ್ತಾರೆ. ಅವರ ಈ ಜೀವನ ಕ್ರಮ ಸಹಜವಾಗಿರುತ್ತದೆ ಮತ್ತು ಯಾವ ಕೃತ್ರಿಮತೆಯಿಂದಲೂ ಕೂಡಿರುವುದಿಲ್ಲ.

5. ಸಮುದಾಯ ಭಾವನೆ :- ಸಮುದಾಯದಲ್ಲಿ ದೃಢವಾದ ಸಮುದಾಯ ಭಾವನೆ ಇರುತ್ತದೆ. ನಾವೆಲ್ಲರೂ ಒಂದೇ ಸಮುದಾಯದವರು ಎಂಬ ಒಗ್ಗಟ್ಟಿನ ಮನೋಭೂಮಿಕೆ ಅವರಲ್ಲಿರುತ್ತದೆ. ಸಮುದಾಯದವರು ಕಷ್ಟದಲ್ಲಿದ್ದಾಗ ಒಗ್ಗಟ್ಟಾಗಿ ಎದುರಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾನೆ. ಅದರಂತೆಯೇ ಜಾತ್ರೆ, ಉತ್ಸವ, ಹಬ್ಬ, ಹರಿದಿನಗಳಂತಹ ಸಂತೋಷದ ಸಮಯಗಳಲ್ಲಿ ಒಟ್ಟಾಗಿ ಕಲೆತು ಆಚರಿಸುತ್ತಾರೆ, ನಲಿಯುತ್ತಾರೆ. ತಮ್ಮ ಸಮುದಾಯದ ಭಾವೈಕ್ಯತೆಯನ್ನು ಮೆರೆಯುತ್ತಾರೆ.

ಭಾವನಾತ್ಮಕ ಸಂಬಂಧಗಳು :- ಸಮುದಾಯದಲ್ಲಿ ಭಾವನಾತ್ಮಕ ಸಂಬಂಧಗಳು ಬಹಳ ಗಟ್ಟಿಯಾಗಿರುತ್ತವೆ. ಸಮುದಾಯದ ಸದಸ್ಯರಲ್ಲಿ ಪರಸ್ಪರ ಪ್ರೀತಿ, ಆದರ, ಗೌರವ, ಸಹಬಾಳ್ವೆ ಇತ್ಯಾದಿಗಳಿರುತ್ತವೆ. ಸದಸ್ಯರು ತಮ್ಮ ತಮ್ಮಲ್ಲಿ ಅಣ್ಣ-ತಮ್ಮ, ಚಿಕ್ಕಪ್ಪ-ದೊಡ್ಡಪ್ಪ, ಮಾವ-ಅಳಿಯ, ಅಕ್ಕ-ತಂಗಿ, ಅತ್ತೆ-ಸೊಸೆ, ಕಳ್ಳು-ಬಳ್ಳಿ, ನೆಂಟರು-ಇಷ್ಟರು, ಮುಂತಾದ ಭಾವನೆಗಳಿಂದ ಕೂಡಿ ಜೀವಿಸುತ್ತಾರೆ. ರಕ್ತ ಸಂಬಂಧದ ಹೊರಗೂ ಈ ಬಾಂಧವ್ಯವನ್ನು ರೂಪಿಸಿಕೊಂಡಿರುತ್ತಾರೆ. ಇಂತಹ ಸಂಬಂಧಗಳು ಅವರ ಸಾಮುದಾಯಿಕ ಬದುಕಿನ ಜೀವಾಳವಾಗಿರುತ್ತವೆ.

6. ಶಾಸ್ವತತೆ-ಸ್ಥಿರತೆ :- ಸಮುದಾಯ ಪ್ರಾಸಂಗಿಕವಾಗಿ ರೂಪಗೊಂಡಂತಹ ಒಂದು ಜನಸಮೂಹವಲ್ಲ. ಸಮುದಾಯದ ಸದಸ್ಯರು ಒಂದು ನಿರ್ದಿಷ್ಟ ಭೌಗೋಲಿಕ ಪ್ರದೇಶದಲ್ಲಿ ಶಾಶ್ವತವಾಗಿ ಜೀವಿಸುತ್ತಾರೆ. ತಮ್ಮ ಜೀವನದ ಎಲ್ಲಾ ಆಗು-ಹೋಗುಗಳನ್ನು ತಮ್ಮ ಸಮುದಾಯದಲ್ಲೇ ಕಂಡುಕೊಳ್ಳುತ್ತಾರೆ. ಇದಕ್ಕೆ ಅಪವಾದಗಳೂ ಇವೆ. ಇದರ ಜೊತೆಗೆ ಸಮುದಾಯದಲ್ಲಿ ಒಂದು ಸ್ಥಿರತೆ ಇರುತ್ತದೆ, ಒಂದು ರಕ್ಷಣೆ ಇರುತ್ತದೆ. ಸಮುದಾಯದಲ್ಲಿನ ಈ ಸ್ಥಿರತೆ ಅವರ ಜೀವನದ ಬೇರೆ ಬೇರೆ ಅಂಶಗಳಲ್ಲಿ ಕಾಣಬಹುದಾಗಿದೆ.

7. ಗಾತ್ರ :- ಸಮುದಾಯದ ಪರಿಕಲ್ಪನೆಯನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಲು ಸಮುದಾಯದ ಗಾತ್ರವೂ ಒಂದು ಅಂಶ. ಇದೊಂದು ಪ್ರಮುಖವಾದ ಅಂಶವಲ್ಲದಿದ್ದರೂ ಅದನ್ನು ಕಡೆಗಣಿಸುವಂತಿಲ್ಲ. ಸಮುದಾಯಗಳು ಚಿಕ್ಕವಿರಬಹುದು. ಹಟ್ಟಿ, ಹಳ್ಳಿ, ಗ್ರಾಮ, ಊರು ಮುಂತಾದವುಗಳನ್ನು ಉದಾಹರಿಸಬಹುದು. ಅದರಂತೆಯೇ ಸಮುದಾಯಗಳು ದೊಡ್ಡವಿರಬಹುದು. ಪಟ್ಟಣ, ನಗರ, ಮಹಾನಗರ, ಜಿಲ್ಲೆ, ಪ್ರಾಂತ್ಯ, ರಾಜ್ಯ, ದೇಶ ಮುಂತಾದವುಗಳನ್ನು ಈ ಗುಂಪಿಗೆ ಸೇರಿಸಬಹುದು. ಒಂದು ದೊಡ್ಡ ಸಮುದಾಯದಲ್ಲಿ ಚಿಕ್ಕ ಚಿಕ್ಕ ಸಮುದಾಯಗಳಿರಬಹುದು. ಒಂದು ಗ್ರಾಮದಲ್ಲಿ ಅನೇಕ ಸಮುದಾಯಕ್ಕೆ ಸೇರಿರುವ ಜನರು ಇರುತ್ತಾರೆ. ಅದರಂತೆಯೇ ಒಂದು ಪಟ್ಟಣದಲ್ಲಿ, ಒಂದು ನಗರದಲ್ಲಿ, ಒಂದು ತಾಲೂಕು ಇಲ್ಲವೇ ಒಂದು ಜಿಲ್ಲೆಯಲ್ಲಿ ಅನೇಕ ನಗರಗಳು, ಪಟ್ಟಣಗಳು, ಸಮುದಾಯಗಳು, ವಾರ್ಡ್‍ಗಳು, ವಲಯಗಳು, ಗ್ರಾಮಗಳು ಇತ್ಯಾದಿಗಳು ಇರಬಹುದು. ಇಲ್ಲಿ ಮುಖ್ಯವಾಗಿ ಗಣನೆಗೆ ಬರುವುದು ಸಮುದಾಯದ ಗಾತ್ರವಾಗಿರದೆ, ಸದಸ್ಯರ ಸಾಂಘಿಕ ಜೀವನ, ಸಮುದಾಯದ ಭಾವನೆ ಮುಂದಾವುಗಳನ್ನು ಪರಿಗಣಿಸಬೇಕಾಗುತ್ತದೆ. ಆದರೆ ಸಮುದಾಯದ ಅಭಿವೃದ್ಧಿಗೆ ಯೋಜನೆ-ಕಾರ್ಯಕ್ರಮಗಳನ್ನು ರೂಪಿಸುವಾಗ ಸಮುದಾಯದ ಗಾತ್ರ ಪ್ರಾಮುಖ್ಯತೆಯನ್ನು ಪಡೆಯುತ್ತದೆ.

8. ಸಮುದಾಯದ ಹೆಸರು :- ಸಾಮಾನ್ಯವಾಗಿ ಸಮುದಾಯಗಳಿಗೆ ಹೆಸರುಗಳು ಇರುತ್ತವೆ. ಬುಡಕಟ್ಟು ಸಮುದಾಯಗಳಲ್ಲಿ ಇರುವಂತೆ, ಆಯಾ ಬುಡಕಟ್ಟುಗಳಿಗೆ, ಆಯಾ ಬುಡಕಟ್ಟುಗಳ ನಾಯಕರ ಹೆಸರುಗಳು ಇರುತ್ತವೆ. ಉದಾ :- ಭೀಮಾ ನಾಯಕನ ತಾಂಡ, ಗಾದ್ರಿ ಪಾಲಯ್ಯನ ಹಟ್ಟಿ, ಇತ್ಯಾದಿ. ಅದರಂತೆಯೇ ಕೆಲವು ಸಮುದಾಯಗಳನ್ನು, ಹಳ್ಳಿಗಳನ್ನು, ಊರುಗಳನ್ನು, ಪಟ್ಟಣಗಳನ್ನು, ನಗರಗಳನ್ನು ಅವುಗಳಿಗಿರುವ ಹೆಸರುಗಳ ಮುಖಾಂತರ ಗುರುತಿಸುತ್ತಾರೆ. ಒಂದು ವಿಶಾಲವಾದ ಭೌಗೋಲಿಕ ಪ್ರದೇಶಗಳನ್ನು ಗುರುತಿಸುವಾಗಲೂ ಹೋಬಳಿ, ತಾಲ್ಲೂಕು, ಜಿಲ್ಲಾ, ರಾಜ್ಯ ಇತ್ಯಾದಿ ಹೆಸರುಗಳಿಂದ ಗುರುತಿಸುತ್ತಾರೆ. ಕೆಲವು ಸಮುದಾಯಗಳನ್ನು ಅವರ ಪ್ರತಿನಿಧಿಸುವ ಜಾತಿ, ವೃತ್ತಿ, ವಯೋಮಾನ, ಲಿಂಗ, ಪ್ರವೃತ್ತಿ ಇತ್ಯಾದಿ ಅಂಶಗಳ ಮೇಲೆ ಹೆಸರಿಸುವುದುಂಟು.

9. ಸಾಮಾಜಿಕ ನಿಯಂತ್ರಣ :- ಪ್ರತಿಯೊಂದು ಸಮುದಾಯ ತನ್ನದೇ ಆದ ಹಿನ್ನೆಲೆ, ಸಂಸ್ಕೃತಿ, ಆಚಾರ-ವಿಚಾರ, ಪದ್ಧತಿಗಳು ಇತ್ಯಾದಿ ಅಂಶಗಳನ್ನು ಹೊಂದಿರುವಂತೆ, ಆ ಸಮುದಾಯ ತನ್ನ ಸದಸ್ಯರ ಮೇಲೆ ಒಂದು ರೀತಿಯ ನಿಯಂತ್ರಣವನ್ನೂ ಸಾಧಿಸಿರುತ್ತದೆ. ಹಾಗಾಗಿ ಪ್ರತಿಯೊಬ್ಬ ಸದಸ್ಯನೂ ತಮ್ಮ ಸಮುದಾಯದ ರೀತಿನೀತಿಗಳನ್ನು ಅನುಸರಿಸುತ್ತಾನೆ. ಸಮುದಾಯ ನಿಗದಿಪಡಿಸಿದ ಕಟ್ಟುಪಾಡುಗಳನ್ನು ಮೀರಿದರೆ, ಮುಂದೆ ಅವನು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆಯೆಂದು ಅವನಿಗೆ ಗೊತ್ತಿರುತ್ತದೆ. ಹೀಗೆ ಸಮುದಾಯದ ಒಟ್ಟಾಭಿಪ್ರಾಯವನ್ನು, ನಿರ್ಣಯಗಳನ್ನು ಎದುರಿಸಿದ ಸದಸ್ಯರಿಗೆ ಶಿಕ್ಷೆ ಕಾದಿರುತ್ತದೆ. ಪ್ರತಿಯೊಂದು ಸಮುದಾಯದಲ್ಲಿಯೂ ಒಂದು ನಿಯಂತ್ರಣ ಪದ್ಧತಿ ಕೆಲಸ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ, ಹಲವು ಕಾರಣಗಳಿಂದ, ಅಂತಹ ನಿಯಂತ್ರಣ ಸಡಿಲಗೊಳ್ಳುತ್ತಿರುವುದೂ ಅಷ್ಟೇ ಸತ್ಯ.
 
ಸಮುದಾಯದ ಬಗ್ಗೆ ಸ್ವಾಭಿಮಾನ
ಜನರ ಒಂದು ಗುಂಪು ಒಂದು ಭೌಗೋಲಿಕ ಪ್ರದೇಶದಲ್ಲಿ ವಾಸವಾಗಿದ್ದು, ತಮ್ಮದೇ ಆದ ಒಂದು ಸಂಸ್ಕೃತಿ, ಸಂಪ್ರದಾಯ, ಪದ್ಧತಿಗಳನ್ನು ರೂಢಿಸಿಕೊಂಡಿದ್ದು, ಅವರ ಜೀವನ ಪರಸ್ಪರ ಅವಲಂಬಿತವಾಗಿದ್ದರೂ, ವೈಜ್ಞಾನಿಕವಾಗಿ ಅದನ್ನು ಒಂದು ಸಮುದಾಯ ಎಂದು ಕರೆಯಲಾಗದು. ಅವುಗಳು ಸಮುದಾಯದ ರಾಚನಿಕ ಅಂಶಗಳಾಗಿ ಪರಿಣಮಿಸುತ್ತವೆ ಅಷ್ಟೆ. ಒಂದು ದೇಹದಲ್ಲಿ ರುಂಡ, ಮುಂಡ, ಕೈಕಾಲುಗಳು, ಇತರೆ ಅಂಗಗಳಿದ್ದರೂ, ಅವುಗಳು ಮನುಷ್ಯ ಶರೀರಕ್ಕೆ ಅವಶ್ಯವಾದರೂ, ಅವುಗಳ ಒಟ್ಟು ಸಮೂಹವನ್ನು ಮನುಷ್ಯ ಎಂದು ಕರೆಯಲಾಗುವುದಿಲ್ಲ. ಈ ಅಂಗಾಂಗಗಳ ಸಮೂಹವನ್ನು ಸ್ಥೂಲಶರೀರ ಎಂದು ಕರೆಯಬಹುದಷ್ಟೆ. ಇಂತಹ ಸಮೂಹವೊಂದು ಮನುಷ್ಯ ಎಂದು ಕರೆಸಿಕೊಳ್ಳಬೇಕಾದರೆ ಇಂದ್ರಿಯಗಳು, ಮನಸ್ಸು, ಆತ್ಮ ಇತ್ಯಾದಿಗಳು ಇರಬೇಕಾಗುತ್ತದೆ. ಈ ಆತ್ಮ, ಹೃದಯ ಭಾಗ ಒಂದು ಶರೀರಕ್ಕೆ ಪೂರ್ಣತೆಯನ್ನು ತಂದುಕೊಡುತ್ತವೆ. ಅದರಂತೆಯೇ ಒಂದು ಜನಸಮೂಹ `ಸಮುದಾಯ ಎಂದು ಕರೆಸಿಕೊಳ್ಳಬೇಕಾದರೆ, ಸಮುದಾಯದ ಸದಸ್ಯರಲ್ಲಿ ಭಾವನಾತ್ಮಕ ಸಂಬಂಧ ಇರಬೇಕಾಗುತ್ತದೆ. ಈ ಸಂಬಂಧ ವ್ಯಕ್ತಿ-ವ್ಯಕ್ತಿಗಳ ನಡುವೆ, ವ್ಯಕ್ತಿ-ಕುಟುಂಬದ ನಡುವೆ, ವ್ಯಕ್ತಿ-ಇತರೆ ಗುಂಪುಗಳ ನಡುವೆ, ವ್ಯಕ್ತಿ-ಸಮುದಾಯದ ನಡುವೆ, ಗುಂಪು-ಗುಂಪುಗಳ ನಡುವೆ ಇರಬೇಕಾಗುತ್ತದೆ. ಇರುತ್ತದೆ ಕೂಡಾ. ಅದರಲ್ಲಿ ತಾರತಮ್ಯ ಇರಬಹುದು. ಗ್ರಾಮೀಣ, ಬುಡಕಟ್ಟು, ಜಾತಿ ಮುಂತಾದ ಸಮುದಾಯಗಳಲ್ಲಿ ಈ ಭಾವನಾತ್ಮಕ ಅಂಶವನ್ನು ಈಗಲೂ ನೋಡಬಹುದು ತಾಯಿ-ತಂದೆ, ಅತ್ತೆ-ಮಾವ, ದೊಡ್ಡಪ್ಪ-ಚಿಕ್ಕಪ್ಪ, ಅಣ್ಣ-ತಮ್ಮ, ಅಕ್ಕ-ತಂಗಿ, ಅತ್ತಿಗೆ-ನಾದಿನಿ, ಗೆಳತಿ-ಗೆಳೆಯ, ಬಂಧು-ಇಷ್ಟರು, ಕಳ್ಳು-ಬಳ್ಳಿ, ಹಿರಿಯರು-ಆತ್ಮೀಯರು, ಸ್ನೇಹಿತರು-ನೆರೆಹೊರೆಯವರು, ಹೀಗೆ ಹಲವು ಹತ್ತು ರೂಪಗಳಲ್ಲಿ ಈ ಭಾವನಾತ್ಮಕ ಸಂಬಂಧ ರೂಪುಗೊಂಡಿರುತ್ತದೆ. ಇಂತಹ ಸಮುದಾಯಗಳಲ್ಲಿ ರಕ್ತ ಸಂಬಂಧ ಇಲ್ಲದೆ ಇರುವವರನ್ನೂ ಅಣ್ಣ, ಮಾವ, ತಾತ, ತಾಯಿ, ತಂಗಿ ಇತ್ಯಾದಿ ಸಂಬಂಧ ಹಚ್ಚಿ ಕರೆಯುವ ವಾಡಿಕೆ ಈಗಲೂ ಇದೆ.

ಸಮುದಾಯದ ಈ ಎಲ್ಲಾ ಸದಸ್ಯರು ಸಮಾನ ಮನಸ್ಸುಳ್ಳವರಾಗಿರುತ್ತಾರೆ. ಅವರು ಸ್ವಲ್ಪ ಹೆಚ್ಚು ಕಡಿಮೆ ಒಂದೇ ರೀತಿ ಆಲೋಚಿಸುತ್ತಾರೆ. ನಿರ್ಣಯಿಸುವಾಗ, ಅದನ್ನು ಕಾರ್ಯರೂಪಕ್ಕೆ ತರುವಾಗ ಒಕ್ಕಟ್ಟನ್ನು ಪ್ರದರ್ಶಿಸುತ್ತಾರೆ. ಪ್ರತಿಯೊಬ್ಬ ಸದಸ್ಯನೂ ಸಮಷ್ಟಿಹಿತವನ್ನು ಗೌರವಿಸುತ್ತಾನೆ ಮತ್ತು ಅದರಂತೆ ನಡೆದುಕೊಳ್ಳುತ್ತಾನೆ. ಅದರಂತೆ ಸಮುದಾಯವೂ ತನ್ನ ಸದಸ್ಯರ ಹಿತವನ್ನು ಕಾಯುವಲ್ಲಿ ಶ್ರಮಿಸುತ್ತದೆ. ಈ ಪ್ರಕ್ರಿಯೆ ಪರಸ್ಪರವಾಗಿರುತ್ತದೆ. ಇದು ಸಮುದಾಯದ ಬಗ್ಗೆ ಇರುವ ಸ್ವಾಭಿಮಾನವನ್ನು ತೋರಿಸುತ್ತದೆ. ಇದೇ ಸಮುದಾಯದ ಭಾವೈಕ್ಯತೆ.

ಪ್ರೊ. ಮೆಕೈವರ್ ಮತ್ತು ಪ್ರೊ. ಪೇಜ್ ಅವರು, ಸಮುದಾಯದ ಸದಸ್ಯರು ತಮ್ಮ ಸಮುದಾಯದ ಬಗ್ಗೆ ತೋರುವ ಈ ಅಭಿಮಾನಕ್ಕೆ ಮೂರು ಕಾರಣಗಳನ್ನು ಗುರುತಿಸಿದ್ದಾರೆ.
  1. ಐಕ್ಯಭಾವ (We Feeling),
  2. ಪರಾವಲಂಬನಾ ಭಾವ (Sens of Dependence),
  3. ಪಾತ್ರ ನಿರ್ವಹಣಾ ಭಾವ (Role Feeling).
 
ಐಕ್ಯಭಾವ
ಸಮುದಾಯದ ಪರಿಕಲ್ಪನೆ ಇಂದು ನಿನ್ನೆಯದಲ್ಲ, ತುಂಬಾ ಪ್ರಾಚೀನವಾದುದು. ಮನುಷ್ಯ ಎಂದಿನಿಂದ ಗುಂಪುಗಳಲ್ಲಿ ಜೀವಿಸಲು ಪ್ರಾರಂಭಿಸಿದನೋ ಅಂದಿನಿಂದಲೇ ಸಮುದಾಯ ಅಸ್ತಿತ್ವಕ್ಕೆ ಬಂದಿದೆ. ಒಂದು ಸಮುದಾಯದ ಜನರು ಒಂದು ಭೌಗೋಲಿಕ ಪ್ರದೇಶದಲ್ಲಿ ವಾಸಿಸುತ್ತಾರೆ. ಬೇರೆ ಬೇರೆ ವೃತ್ತಿಗಳನ್ನು ಅವಲಂಬಿಸಿದರೂ, ಒಂದೇ ತರಹದ ಜೀವನಶೈಲಿಯನ್ನು ರೂಢಿಸಿಕೊಂಡಿರುತ್ತಾರೆ. ಅವರ ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯ, ಪದ್ಧತಿಗಳು ಒಂದೇ ತೆರನಾಗಿರುತ್ತವೆ. ಹಾಗಾಗಿ ಅವರು ಒಟ್ಟಾಗಿ ಜೀವಿಸುತ್ತಾರೆ. ಸಮುದಾಯದ ಒಬ್ಬ ಸದಸ್ಯರಿಗೆ, ಒಂದು ಕುಟುಂಬಕ್ಕೆ, ಇಲ್ಲವೇ ಒಂದು ಗುಂಪಿಗೆ ಯಾವುದಾದರೂ ಸಮಸ್ಯೆ ಎದುರಾದಾಗ, ಸಮುದಾಯದ ಎಲ್ಲಾ ಸದಸ್ಯರೂ ಒಂದಾಗುತ್ತಾರೆ. ಸದ್ರಿ ಸಮಸ್ಯೆ ಒಂದು ಗುಂಪಿನ, ಒಂದು ಕುಟುಂಬದ ಅಥವಾ ಒಬ್ಬ ಸದಸ್ಯನ ಸಮಸ್ಯೆಯಾಗದೆ ಇಡೀ ಸಮುದಾಯದ ಸಮಸ್ಯೆಯಾಗಿ ಪರಿವರ್ತನೆಗೊಳ್ಳುತ್ತದೆ. ಸಮುದಾಯದ ಸದಸ್ಯರು ಒಂದೆಡೆ ಸೇರಿ, ಚರ್ಚಿಸಿ, ನಿರ್ಣಯಿಸಿ, ಅದನ್ನು ಒಟ್ಟಾಗಿ ಕಾರ್ಯರೂಪಕ್ಕೆ ತರುತ್ತಾರೆ. ಅದರಂತೆಯೇ ಹಬ್ಬ-ಹುಣ್ಣಿಮೆ, ತೇರು-ಜಾತ್ರೆ, ಉತ್ಸವ-ಸಮಾರಂಭ ಮುಂತಾದ ಸಮಯ-ಸಂದರ್ಭಗಳಲ್ಲಿಯೂ ಒಟ್ಟಾಗಿ ಸೇರಿ ಆಚರಿಸುತ್ತಾರೆ. ಒಟ್ಟಾಗಿ ಅಡಿಗೆ ಮಾಡಿ ಉಂಡು ನಲಿಯುತ್ತಾರೆ. ಹಾಡಿ-ಕುಣಿದು ದಣಿಯುತ್ತಾರೆ. ಅವರನ್ನೆಲ್ಲಾ ಈ ರೀತಿ ಒಟ್ಟುಗೂಡಿಸುವುದು `ನಾವು, `ನಮ್ಮ ಸಮುದಾಯ, `ನಾವೆಲ್ಲಾ ಒಂದು, `ಇವರೆಲ್ಲಾ ನಮ್ಮವರು ಎಂಬ ಐಕ್ಯತಾ ಭಾವ. ಈ ಐಕ್ಯತಾಭಾವ ಅವರನ್ನು ಕಷ್ಟದ ಪ್ರಸಂಗಗಳಲ್ಲಿಯೂ ಹಾಗೂ ಸಂತಸದ ಸಮಯಗಳಲ್ಲಿಯೂ ಒಟ್ಟಾಗಿ ಹಿಡಿದಿಟ್ಟುಕೊಂಡಿರುತ್ತದೆ. ಇದು ಸಮುದಾಯ ಬದುಕಿನ ಜೀವಾಳ.
 
ಅಡಿಟಿಪ್ಪಣಿಗಳು :
  1. ಡಾ. ಮುರ್ರೆ ಜಿ. ರೋಸ್ - `ಕಮ್ಯೂನಿಟಿ ಆರ್ಗನೈಜೇಷನ್ : ಥೀರಿ ಅಂಡ್ ಪ್ರಾಕ್ಟೀಸ್ ಪಿ.ಡಿ.ಎಫ್-ಅಂತಜಾಲದಿಂದ ತೆಗೆದದ್ದು, 1955, ಪು. 23-24.
  2. ಪ್ರೊ. ಆರ್ಥರ್ ಡನ್ಹ್ಯಾಮ್ - `ಕಮ್ಯೂನಿಟಿ ವೆಲ್ಫೇರ್ ಆರ್ಗನೈಜೇಷನ್, ಥಾಮಸ್ ವೈ. ಕ್ರೊವೆಲ್ ಕಂಪನಿ,  ನ್ಯೂಯಾರ್ಕ್‍, 1962, ಪು. 14-15.
  3. ಪ್ರೊ. ಡನ್ಹ್ಯಾಮ್ - ಪು. 15.
  4. ಜಾಗತಿಕ ಆರೋಗ್ಯ ಸಂಸ್ಥೆ (ಉ) ಡಾ. ಆಶ ರಾಮಗೊಂಡ ಪಾಟೀಲ್-ಕಮ್ಯೂನಿಟಿ ಆರ್ಗನೈಜೇಷನ್-ಎನ್ ಇಂಡಿಯನ್ ಪ್ರಾಸ್ಪಕ್ಟ್ಯೂ, ಪಿಹೆಚ್‍ಡಿ ಲರ್ನಿಂಗ್ ಪೈ.ಲಿ., ದೆಲ್ಲಿ-110092, 2013, ಪು. 19.
  5. ಪ್ರೊ. ಮಾಕ್ ಐವರ್ ಅಂಡ್ ಪ್ರೊ. ಪೇಜ್ - `ಸೋಷಿಆಲಜಿ, ಎನ್ ಇಂಟ್ರೊಡೊಕ್ಟರಿ ಅನ್ಯಾಲಿಸಿಸ್,  (ಉ) ಪ್ರೊ. ಜಿ. ಸುಬ್ರಮಣ್ಯ-`ಸಮಕಾಲೀನ ಸಮಾಜಶಾಸ್ತ್ರ, ಸಪ್ನ ಬುಕ್ ಹೌಸ್, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-560009, 2015, ಪು. 131.
  6. ಪ್ರೊ. ಕೆ. ಭೈರಪ್ಪ (ಉ) - `ಕಂಪ್ಲೀಟ್ ಸೊಷಿಆಲಜಿ, ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು, 2014, ಪು. 417.
  7. ಅದೇ ಪು. 417.
  8. ವಿವರಗಳಿಗೆ ನೋಡಿ : 1. ಪ್ರೊ. ಭೈರಪ್ಪ-ಸಮಗ್ರ ಸಮಾಜಶಾಸ್ತ್ರ, ಪು. 418-420. 2. ಪ್ರೊ. ಎಂ. ಲಕ್ಷ್ಮೀಪತಿರಾಜು, ಕಮ್ಯೂನಿಟಿ ಆರ್ಗನೈಜೇಷನ್ ಅಂಡ್ ಸೋಸಿಯಲ್ ಯಾಕ್ಷನ್ ರೀಗಲ್ ಪ. ನ್ಯೂ ಡೆಲ್ಲಿ-110027, 2012, ಪು. 4-6.
  9. (ಉ) ಪ್ರೊ. ಜಿ.ಎಚ್.ಎಂ. ಮರುಳಸಿದ್ಧಯ್ಯ-`ಸಮುದಾಯ ಸಂಘಟನೆ, ಐಬಿಹೆಚ್ ಪ್ರಕಾಶನ, 77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್ಕೆ 3ನೇ ಹಂತ, ಬೆಂಗಳೂರು-85, 2004, ಪು.5.
 
----------- ಮುಂದುವರಿದ ಭಾಗ ಮುಂದಿನ ಸಂಚಿಕೆಯಲ್ಲಿ -----------
 
ಡಾ. ಸಿ.ಆರ್. ಗೋಪಾಲ್
ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕರು,
ಸ್ಮಯೋರ್ (SMIORE)
0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)