SKH
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
SKH

ಅಪಾರ್ಥ

12/20/2019

0 Comments

 
Picture
ಕಣ್ಣಾರೆ ಕಂಡರೂ ಪ್ರಮಾಣಿಸಿ ನೋಡು ಎಂಬ ನಾಣ್ಣುಡಿ ಸರ್ವಕಾಲಕ್ಕೂ ಪ್ರಸ್ತುತ. ಆದರೆ ನಮ್ಮ ತಿಳಿವಳಿಕೆಯ ಚೌಕಟ್ಟಿನಲ್ಲಿ ಅದೆಷ್ಟೋ ವಿಚಾರಗಳನ್ನು ಗಮನಿಸಿದ ಕೂಡಲೇ ಅದನ್ನೇ ವಾಸ್ತವವೆಂದು ತಿಳಿದು ವಿವೇಚನಾರಹಿತವಾಗಿ ಒಂದು ನಿರ್ದಿಷ್ಟ ತೀರ್ಮಾನಕ್ಕೆ ಬಂದುಬಿಡುತ್ತೇವೆ. ಇದು ತಪ್ಪು ಎಂಬ ಅರಿವು ನಮಗೆ ಇರುವುದೇ ಇಲ್ಲ. ಕಾಲಾನಂತರ ನಮ್ಮ ತೀರ್ಮಾನ ತಪ್ಪು ಎಂದು ಅರಿತಾಗ ಪಶ್ಚಾತ್ತಾಪ ಪಡುತ್ತೇವೆ. ಕಣ್ಮುಂದೆ ಕಾಣುವುದೇ ವಾಸ್ತವ ಹಾಗೂ ನಮಗೆ ತಿಳಿದಿರುವುದೇ ಸತ್ಯ ಎಂಬುದನ್ನು ಬಲವಾಗಿ ನಂಬುವ ಮನುಷ್ಯ ಪೂರ್ವಾಗ್ರಹ ಪೀಡನೆಗೆ ಒಳಗಾಗಿ ಹಲವಾರು ಸೂಕ್ಷ್ಮ ವಿಚಾರಗಳನ್ನು ಕಡೆಗಣಿಸುತ್ತಾನೆ. ನಾಗರಿಕ ಎಂದು ಬಿಂಬಿಸಿಕೊಳ್ಳುವ ಅಕ್ಷರಸ್ಥ ಮಾನವ ತನ್ನನ್ನು ತಾನು ವಿದ್ಯಾವಂತನೆಂದು ಬಿಂಬಿಸಿಕೊಳ್ಳುವ ಭರದಲ್ಲಿ ವಾಸ್ತವಾಂಶಗಳನ್ನು ವಿಶ್ಲೇಷಿಸುವ ಗೋಜಿಗೆ ಹೋಗುತ್ತಿಲ್ಲ. ಇದರ ಪ್ರತಿಫಲವೇ ತಪ್ಪುಗ್ರಹಿಕೆ. ಅಂತಹ ಒಂದು ಸಂದರ್ಭವನ್ನು ನಿಮ್ಮ ಮುಂದಿಡುವ ಸಣ್ಣ ಪ್ರಯತ್ನವೇ ಅಪಾರ್ಥ. 
ಪ್ರತಿಷ್ಠಿತ ಕಾಲೇಜೊಂದರಲ್ಲಿ ಸಮಯ ನಿರ್ವಹಣೆಯ ವಿಷಯವಾಗಿ ಉಪನ್ಯಾಸ ನೀಡುವ ಅವಕಾಶ ಕೆಲವು ದಿನಗಳ ಹಿಂದೆ ನನಗೆ ಒದಗಿಬಂದಿತ್ತು. ಇದೇ ವಿಷಯವಾಗಿ ಹಲವಾರು ಬಾರಿ ಉಪನ್ಯಾಸ ನೀಡಿ ಅನುಭವವಿದ್ದರೂ ಸಹ ಉಪನ್ಯಾಸ ನೀಡಲು ತೆರಳುವ ಪ್ರತೀ ಬಾರಿ ನನ್ನನ್ನು ನಾನು ಸಜ್ಜುಗೊಳಿಸಿಕೊಳ್ಳುವುದು ವಾಡಿಕೆ. ಆದ ಕಾರಣ, ಕನ್ನಡಿ ಮುಂದೆ ನಿಂತು ನನ್ನ ಉಪನ್ಯಾಸದ ವಿಷಯಕ್ಕೆ ಸಂಬಂಧಿಸಿದಂತೆ ಪ್ರಸ್ತಾಪಿಸಲೇಬೇಕಿರುವ ಪ್ರಮುಖ ವಿಚಾರಗಳು, ಅವುಗಳನ್ನು ಅಭಿವ್ಯಕ್ತಪಡಿಸುವಾಗ ಪ್ರದರ್ಶಿಸಬೇಕಾದ ನನ್ನ ಅಂಗಿಕ ಭಾಷೆ ಹಾಗೂ ಮುಖಚರ್ಯೆ ಇವೇ ಮೊದಲಾದ ವಿಚಾರಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿಕೊಂಡೆ. ಹೀಗೆ ನಾಲ್ಕಾರು ಬಾರಿ ತಾಲೀಮು ನಡೆಸಿದ ಬಳಿಕ ಉಪನ್ಯಾಸ ನೀಡಲು ಕಾಲೇಜಿಗೆ ಹೊರಟೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಉಪನ್ಯಾಸ ನೀಡಲು ಹೊರಟ ನನಗೆ ಸಾಮಾನ್ಯವಾಗಿ ಅಲ್ಲಿನ ವಿದ್ಯಾರ್ಥಿಗಳ ಮನೋಧೋರಣೆಯ ಬಗ್ಗೆ ಕುತೂಹಲವಿತ್ತು. ಜೊತೆಗೆ ಅವರ ನೀರೀಕ್ಷೆಗೆ ಅನುಗುಣವಾಗಿ ಉಪನ್ಯಾಸ ನೀಡಲು ಪೂರ್ವ ತಯಾರಿ ನಡೆಸಿಕೊಂಡು ಕಾಲೇಜಿಗೆ ತೆರಳಿದ್ದೆ. ಕಾಲೇಜಿಗೆ ಭೇಟಿ ನೀಡಿದ ತಕ್ಷಣ ಪ್ರಾಂಶುಪಾಲರೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳ ಮನೋಭಾವನೆ ಹಾಗೂ ನಿರೀಕ್ಷೆಗಳ ಬಗ್ಗೆ ಕೊಂಚ ಮಾಹಿತಿ ಕಲೆ ಹಾಕಿ ತುಸು ಸಮಯದ ಬಳಿಕ ಪ್ರಾಂಶುಪಾಲರನ್ನೊಳಗೊಂಡಂತೆ ಇತರ ಇಬ್ಬರು ಶಿಕ್ಷಕರೊಡನೆ ಉಪನ್ಯಾಸ ಜರುಗುವ ಸಭಾಂಗಣಕ್ಕೆ ತೆರಳಿದೆ.

ಸುಮಾರು ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಸಭಾಂಗಣದಲ್ಲಿ ತುಂಬಿದ್ದರು. ಹತ್ತೊಂಬತ್ತರಿಂದ ಇಪ್ಪತ್ತೆರಡು ವಯೋಮಾನದ ಆಸುಪಾಸಿನಲ್ಲಿದ್ದ ವಿದ್ಯಾರ್ಥಿಗಳು ವಯೋಸಹಜವಾಗಿ ಗದ್ದಲ ಮಾಡುತ್ತಿದ್ದರು. ಬಾಲಕ ಬಾಲಕಿಯರು ಒಂದೇ ಸಭಾಂಗಣದಲ್ಲಿದ್ದರಿಂದ ಗದ್ದಲ ಸಾಮಾನ್ಯವಾಗಿ ತುಸು ಹೆಚ್ಚಾಗಿ ಕೇಳಿಬರುತ್ತಿತ್ತು. ನಾವು ಸಭಾಂಗಣಕ್ಕೆ ಹೊಕ್ಕಿದ ಕೂಡಲೇ ಕೇಳಿಬರುತ್ತಿದ್ದ ಗದ್ದಲ ಸಂಪೂರ್ಣವಾಗಿ ಮಾಯವಾಗಿ  ಸಭಾಂಗಣದಲ್ಲಿದ್ದ ಪ್ರತಿಯೊಬ್ಬರೂ ಎದ್ದು ನಿಂತು ಗೌರವ ಸೂಚಿಸಿದರು. ಇಡೀ ಸಭಾಂಗಣದಲ್ಲಿ ಮನೆ ಮಾಡಿದ್ದ ನಿಶ್ಯಬ್ದವನ್ನು ಛೇಧಿಸುವ ಹಾಗೆ ಪ್ರಾಂಶುಪಾಲರು ಸಂಪನ್ಮೂಲ ವ್ಯಕ್ತಿಯಾಗಿ ತೆರಳಿದ್ದ ನನ್ನನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಹೆಚ್ಚು - ಕಡಿಮೆ ಬಾಲಕನಂತೆಯೇ ಕಾಣುತ್ತಿದ್ದ ನನ್ನನ್ನು ಸ್ವಾಗತಿಸಿದ ಕೂಡಲೇ ಓ..ಹೋ.. ಎನ್ನುವ ಉದ್ಘಾರ ಸಭಾಂಗಣದಿಂದ ಹೊರಗೊಮ್ಮಿತು. ಕೊಂಚ ಕಸಿವಿಸಿಗೊಳಗಾದರೂ ಸಾವರಿಸಿಕೊಂಡು ಉಪನ್ಯಾಸ ನೀಡಲು ಆರಂಭಿಸಲು ಅಣಿಯಾಗುತ್ತಿದ್ದಂತೆ ಪ್ರಾಂಶುಪಾಲರು ಮತ್ತು ಶಿಕ್ಷಕರು ನನ್ನ ಬಗ್ಗೆ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟು ವೇದಿಕೆಯನ್ನು ಬಿಟ್ಟುಕೊಟ್ಟರು. ಇಡೀ ಸಭಾ-ಭವನ ನಿಶ್ಯಬ್ದವಾಗಿತ್ತು. ಮೈಕನ್ನು ಕೈಗೆತ್ತಿಕೊಂಡು ಪ್ರಿಯರೇ.., ನಮಸ್ಕಾರ ಎಂದೆ, ಪುನಃ ಓ..ಹೋ.. ಎಂಬ ಹರ್ಷೋದ್ಘಾರ ಹೊರಹೊಮ್ಮಿತು. ಯುವಜನರ ಮನಸ್ಥಿತಿಗಳ ಬಗ್ಗೆ ಸೂಕ್ಷ್ಮ ಅರಿವಿದ್ದ ನನಗೆ ಈ ರೀತಿಯ ಹರ್ಷೋದ್ಘಾರಗಳು ತೀರಾ ಸಾಮಾನ್ಯವೆಂಬಂತೆ ಕಂಡುಬಂದವು.

ಉಪನ್ಯಾಸವನ್ನು ಮುಂದುವರೆಸುತ್ತಾ, ಆತ್ಮೀಯ ವಿದ್ಯಾರ್ಥಿ ಮಿತ್ರರೇ ಮಾನವ ಸಾಮಾಜಿಕ ಪ್ರಾಣಿಯಾದರೂ ಇತರೆ ಪ್ರಾಣಿಗಳಿಗಿಂತ ತೀರಾ ಭಿನ್ನನಾಗಿ ಕಂಡುಬರುತ್ತಾನೆ. ಮನುಷ್ಯನಾದವನಿಗೆ ಸ್ವಂತವಾಗಿ ಆಲೋಚಿಸುವ, ತನ್ನ ಸಮಯವನ್ನು ಸಮರ್ಥವಾಗಿ ಬಳಸಿಕೊಳ್ಳುವ, ತನಗೆ ಬೇಕಾದ ರೀತಿಯಲ್ಲಿ ಇತರೆ ಜೀವರಾಶಿಗಳನ್ನು ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುವ, ಹೊಸ ಹೊಸ ಆವಿಷ್ಕಾರಗಳನ್ನು ಮಾಡುವ ವೈಶಿಷ್ಠ್ಯಪೂರ್ಣ ಜೀವಿಯಾಗಿದ್ದಾನೆ. ಅಂಬರದಲ್ಲಿ ಹಾರುವ ಹಕ್ಕಿಯನ್ನು ಕಂಡು ಪಕ್ಷಿಗಳಿಗಿಂತಲೂ ವೇಗವಾಗಿ ಹಾರುವ ವಿಮಾನವನ್ನು ಕಂಡು ಹಿಡಿದ, ನೀರಿನಲ್ಲಿ ಈಜಾಡುವ ಮೀನನ್ನು ಕಂಡು ಜಲಚರಗಳಿಗಿಂತಲೂ ವೇಗವಾಗಿ ಈಜುವ ಹಡಗನ್ನು ಆವಿಷ್ಕರಿಸಿದ, ಭೂಗ್ರಹದಲ್ಲಿ ವಾಸಿಸುವ ಮನುಷ್ಯ ಇತರ ಗ್ರಹಗಳಿಗೂ ಭೇಟಿ ನೀಡಿ ಬಂದ, ಆದರೂ ತೃಪ್ತಗೊಳ್ಳದ ಮನುಷ್ಯ ತನ್ನನ್ನೂ ಮೀರಿಸುವ ಸಾಮರ್ಥ್ಯ ಹೊಂದಿರುವ ಯಂತ್ರಗಳನ್ನು ಆವಿಷ್ಕರಿಸಿ ಅವುಗಳನ್ನು ನಿಯಂತ್ರಿಸುವ ಚಾಕಚಕ್ಯತೆ ಮೆರೆದನು. ಮನರಂಜನೆಗಾಗಿ ಸಂಗೀತ ವಾದ್ಯಗಳು, ರೇಡಿಯೋ ಮತ್ತು ದೂರದರ್ಶನ ಕಂಡು ಹಿಡಿದ ಮಾನವ ತ್ವರಿತಗತಿಯಲ್ಲಿ ಸಂವಹನ ನಡೆಸಲು ದೂರವಾಣಿಯನ್ನು ಹಾಗೂ ಕ್ಷಣಾರ್ಧದಲ್ಲಿ ಮಾಹಿತಿಯನ್ನು ಪಸರಿಸಲು ಅಂತರ್ಜಾಲ ಹಾಗೂ ಪೂರಕ ಪರಿಕರಗಳನ್ನು ಆವಿಷ್ಕರಿಸಿದ. ಇದರ ಫಲವಾಗಿ ಕಂಪ್ಯೂಟರ್, ಲ್ಯಾಪ್-ಟಾಪ್, ಮೊಬೈಲ್ ಫೋನ್, ಐಫೋನ್, ಟ್ಯಾಬ್ಲೆಟ್, ಸ್ಮಾರ್ಟ್ ಫೋನ್ ಇತ್ಯಾದಿ ಇತ್ಯಾದಿಗಳು ಉಗಮವಾದವು. ಬಹುಶಃ ಪ್ರಸ್ತುತ ಸನ್ನಿವೇಶದಲ್ಲಿ  ಸ್ಮಾರ್ಟ್ ಫೋನ್ ಹಾಗೂ ಐಫೋನ್ಗಳು ಇಲ್ಲದಿರುವ ಮನೆಗಳನ್ನು ಹುಡುಕುವುದು ಕಷ್ಟಸಾಧ್ಯ. ಆಧುನಿಕ ಜೀವನಕ್ಕೆ ಒಗ್ಗಿಕೊಳ್ಳುವ ಭರದಲ್ಲಿ ನಾಗರಿಕ ಎನಿಸಿಕೊಳ್ಳುವ ಅಕ್ಷರಸ್ಥ ಮಾನವನಲ್ಲಿ ವಸ್ತುಪ್ರೇ(ಕಾ)ಮ ಅಧಿಕವಾಗುತ್ತಿದ್ದು, ಇದರ ಪರಿಣಾಮ ಕೊಳ್ಳುಬಾಕ ಸಂಸ್ಕೃತಿ ಅಧಿಕವಾಗುತ್ತಿದೆ. ಮಾರುಕಟ್ಟೆಗೆ ಲಗ್ಗೆಯಿಟ್ಟ ಪ್ರತಿಯೊಂದು ವಸ್ತುವನ್ನೂ ವಿವೇಚನೆಯಿಲ್ಲದೆ ಖರೀದಿಸುವ ಅಥವಾ ಇ.ಎಂ.ಐ ಮೂಲಕ ತನ್ನದಾಗಿಸಿಕೊಳ್ಳುವ ಗೀಳು ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಅಕ್ಷರಸ್ಥರಲ್ಲಿ ಅಧಿಕವಾಗಿದೆ. ಇಂತಹ ಅಸ್ವಾಭಾವಿಕ ಗೀಳಿಗೆ ತುತ್ತಾಗುವ ಪ್ರತಿ ವ್ಯಕ್ತಿಯಲ್ಲಿ ಹೊಸದಾಗಿ ಮಾರುಕಟ್ಟೆಗೆ ಲಗ್ಗೆಯಿಡುವ ವಸ್ತುಗಳನ್ನು ಖರೀದಿಸುವ ಚಾಳಿ ಅಧಿಕವಾಗುತ್ತಿದೆ. ಇಂತಹ ಚಾಳಿಯನ್ನು ಹತ್ತಿಸಿಕೊಂಡ ಅಕ್ಷರಸ್ಥರ ದೃಷ್ಟಿಯಲ್ಲಿ ಹೊಸದಾಗಿ ಮಾರುಕಟ್ಟೆಗೆ ಲಗ್ಗೆಯಿಡುವ ವಸ್ತುಗಳು ಮಾತ್ರ ಬಳಸಲು ಯೋಗ್ಯ ಹಾಗೂ ಈ ಹಿಂದೆ ಖರೀದಿಸಿದ ವಸ್ತುಗಳೆಲ್ಲವೂ ಅಪ್ರಸ್ತುತ ಎಂದು ಬಗೆಯುವುದು ಸರ್ವೇಸಾಮಾನ್ಯ. ಹೀಗೆ ಉಪಯೋಗಿಸಿ ಬಿಸಾಡುವ ಮಾನವನ ಪ್ರವೃತ್ತಿ ವಸ್ತುಗಳಿಗೆ ಮಾತ್ರ ಸೀಮಿತವಾಗಿರದೆ ಮಾನವ ಸಂಬಂಧಗಳಿಗೂ ವಿಸ್ತರಿಸಿರುವುದು ದುರದೃಷ್ಟಕರ. ಇದರ ಪರಿಣಾಮ ಮಾನವನ ನೈಜ ಸಂಬಂಧಗಳು ಜಟಿಲಗೊಳ್ಳುತ್ತಿವೆ.

ವಸ್ತು ಪ್ರೇಮವೆಂಬ ಭೂತವನ್ನು ಮೈಮೇಲೇರಿಸಿಕೊಂಡ ಮನುಷ್ಯ ತನ್ನ ಬಹುಪಾಲು ಸಮಯವನ್ನು ವಸ್ತುಗಳೊಂದಿಗೆ ಕಳೆಯುತ್ತಿದ್ದು, ಅಸ್ತಿತ್ವದಲ್ಲಿರುವ ಸಾಮಾಜಿಕ ಸಂಬಂಧಗಳನ್ನು ಕಡೆಗಣಿಸುತ್ತಿದ್ದಾನೆ. ಇದರ ಪರಿಣಾಮ ಸಾಮಾಜಿಕ ಸಂಬಂಧಗಳು ಕ್ರಮೇಣವಾಗಿ ತನ್ನ ಮಹತ್ವವನ್ನು ಕಳೆದುಕೊಂಡು ಜಟಿಲವಾಗುತ್ತಿವೆ. ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ನಂತರ ಏಕ ಪೋಷಕ ಕುಟುಂಬಗಳಾಗಿ ರೂಪುಗೊಳ್ಳುತ್ತಿವೆ. ಸಮಾಜದಲ್ಲಾಗುತ್ತಿರುವ ಕೌಟುಂಬಿಕ ವಿಘಟನೆಯಂತಹ ವಿದ್ಯಮಾನಗಳು ಮಕ್ಕಳು, ವಯೋವೃದ್ಧರಾಧಿಯಾಗಿ ಯುವಜನರ, ವಿಶೇಷ ಚೇತನರ, ವಿಧವೆಯರ, ಅನಾಥರ ಸಮಸ್ಯೆಗಳಿಗೆ ಮೂಲ ಕಾರಣಗಳಾಗುತ್ತಿವೆ. ಎದುರಾಗಿರುವ ಈ ವಿಷಮ ಪರಿಸ್ಥಿತಿಗೆ ಯಾರೊಬ್ಬರನ್ನೂ ಹೊಣೆಮಾಡಲಾಗದು. ಆದರೆ ಪ್ರತಿಯೊಬ್ಬರೂ ಇದಕ್ಕೆ ಕಾರಣಕರ್ತರು ಮತ್ತು ಫಲಾನುಭವಿಗಳೆಂದಷ್ಟೇ ಹೇಳಬಹುದು. ಹಾಗಿದ್ದರೆ ಪರಿಸ್ಥಿತಿಯನ್ನು ಬದಲಾಯಿಸಲಾಗುವುದಿಲ್ಲವೇ? ಖಂಡಿತಾ ಸಾಧ್ಯವಿದೆ. ಆದರೆ ನಮಗ್ಯಾರಿಗೂ ಸಮಯವಿಲ್ಲ. ಒಂದು ವೇಳೆ ಸಮಯವಿದ್ದರೂ ನಮ್ಮಲ್ಲಿ ಇಚ್ಛಾಶಕ್ತಿಯಿಲ್ಲ. ಇರುವ ಸಮಯವನ್ನು ಸರಿಯಾಗಿ ಬಳಸಿಕೊಳ್ಳುವುದು ನಮಗೆ ಗೊತ್ತಿಲ್ಲ. ದಿನದ ಇಪ್ಪತ್ನಾಲ್ಕು ಘಂಟೆಗಳಲ್ಲಿ ಎಂಟರಿಂದ ಹತ್ತು ಘಂಟೆಗಳ ಕಾಲ ಮೊಬೈಲಿನಲ್ಲಿ ಕಾಲಹರಣ ಮಾಡಲು ಸಮಯವಿದೆ, ಮಿತ್ರರ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಲು ನಮ್ಮಲ್ಲಿ ಸಮಯವಿದೆ, ಸೋಮಾರಿ ಕಟ್ಟೆಯಲ್ಲಿ ಕುಳಿತು ಕೆಲಸಕ್ಕೆ ಬಾರದ ವಿಚಾರಗಳ ಬಗ್ಗೆ ಚರ್ಚಿಸಲು ನಮ್ಮಲ್ಲಿ ಸಮಯವಿದೆ, ಆದರೆ ಸಮಾಜದ ಒಳಿತಿಗೆ ಒಂದಷ್ಟು ಕಾರ್ಯಗಳನ್ನು ಕೈಗೊಳ್ಳಲು ನಮ್ಮ ಬಳಿ ಸಮಯವಿಲ್ಲ ಅಲ್ಲವೇ..? ಹೀಗೆ ವಸ್ತು ವಿಷಯಕ್ಕೆ ಪೂರಕವಾದ ಪೀಠಿಕೆ ಹಾಕುವ ವೇಳೆಗೆ ಇಡೀ ತರಗತಿಯಲ್ಲಿ ನೀರವ ಮೌನ ಮನೆ ಮಾಡಿತ್ತು.

ಉಪನ್ಯಾಸ ಆರಂಭವಾಗುವುದಕ್ಕೂ ಮುನ್ನ ಸಭಾಂಗಣದಿಂದ ಹೊರಹೊಮ್ಮುತ್ತಿದ್ದ ಗದ್ದಲ ವಿದ್ಯಾರ್ಥಿಗಳ ಬಗ್ಗೆ ನನ್ನಲ್ಲಿ ಅಸಹನೆ ಮೂಡುವಂತೆ ಮಾಡಿದ್ದು ದಿಟ. ಆದರೆ ಕಾರ್ಯಕ್ರಮ ಆರಂಭವಾದ ಕ್ಷಣದಿಂದ ವಿದ್ಯಾರ್ಥಿಗಳು ಸಾವಧಾನದಿಂದ ಕುಳಿತು ತದೇಕಚಿತ್ತದಿಂದ ಆಲಿಸುತ್ತಿರುವುದನ್ನು ಗಮನಿಸಿದ ನನಗೆ ಆಶ್ವರ್ಯದ ಜೊತೆಗೆ ಸಂತೋಷವೂ ಆಯಿತು. ಬಹುಶಃ ನಾನು ಪ್ರಸ್ತಾಪಿಸುತ್ತಿರುವ ವಿಚಾರಗಳು ವಿದ್ಯಾರ್ಥಿಗಳ ಮನಮುಟ್ಟುತ್ತಿದೆ ಎಂದು ನಾನು ಭಾವಿಸುತ್ತಾ  ಸಭಾಂಗಣದಲ್ಲಿ ಕುಳಿತಿದ್ದ ವಿದ್ಯಾರ್ಥಿಗಳತ್ತ ದೃಷ್ಟಿ ಹಾಯಿಸಿದೆ. ಸಭಾಂಗಣದಲ್ಲಿ ಕುಳಿತಿದ್ದ ಬಹುಪಾಲು ವಿದ್ಯಾರ್ಥಿಗಳು ನನ್ನನ್ನೇ ತದೇಕಚಿತ್ತದಿಂದ ಕಣ್ಣರಳಿಸಿ ದಿಟ್ಟಿಸಿ ನೋಡುತ್ತಿದ್ದರು. ಇವರೆಲ್ಲರೂ ಉಪನ್ಯಾಸವನ್ನು ಗಂಭೀರವಾಗಿ ಆಲಿಸುತ್ತಿದ್ದಾರೆಂದು ಭಾವಿಸಿ ಉಪನ್ಯಾಸವನ್ನು ಮುಂದುವರೆಸುವ ವೇಳೆಗೆ ಗೊರ್... ಎನ್ನುವ ಗೊರಕೆ ಶಬ್ದ ನನ್ನ ಕಿವಿಗೆ ಬಡಿಯಿತು. ಕಸಿವಿಸಿಗೊಂಡರೂ ಉಪನ್ಯಾಸವನ್ನು ಮುಂದುವರೆಸುತ್ತಾ ನಿದ್ರಿಸುತ್ತಿರುವ ಮಹಾನುಭಾವನನ್ನು ಹುಡುಕಲಾರಂಭಿಸಿದೆ. ಸಭಾಂಗಣದಲ್ಲಿರುವ ಎಲ್ಲರೂ ಎಚ್ಚರದಿಂದ ಆಲಿಸುತ್ತಿದ್ದರೂ ಮುಂದಿನಿಂದ ಎರಡನೇ ಸಾಲಿನಲ್ಲಿ ಕೆಂಪು ಬಣ್ಣದ ಟೋಪಿ ಧರಿಸಿದ ವಿದ್ಯಾರ್ಥಿಯೊಬ್ಬ ಮುಖವನ್ನು ಕೆಳಗೆ ಮಾಡಿ ನಿದ್ರಿಸುತ್ತಿರುವುದು ಖಾತರಿಯಾಯಿತು. ಆತನ ಅಕ್ಕಪಕ್ಕದಲ್ಲಿದ್ದವರಿಗೆ ಕಣ್ಸನ್ನೆ ಮಾಡಿ ಅವನನ್ನು ಎಚ್ಚರಿಸಲು ತಿಳಿಸಿದೆ. ಎಚ್ಚೆತ್ತುಕೊಂಡ ಪುಣ್ಯಾತ್ಮ ನಂತರದ ಕೆಲವೆ ಕ್ಷಣಗಳಲ್ಲಿ ಮತ್ತೆ ನಿದ್ರೆಗೆ ಜಾರಿ ಅದೇ ರೀತಿ ಗೊರಕೆ ಹೊಡೆಯಲಾರಂಭಿಸಿದ. ಆತನ ನೆರೆಹೊರೆಯಲ್ಲಿ ಕುಳಿತಿದ್ದ ವಿದ್ಯಾರ್ಥಿಗಳು ಮತ್ತೆ ಎಬ್ಬಿಸಿದರೂ ಪ್ರಯೋಜನವಾಗಲಿಲ್ಲ ಮತ್ತೆ ಮತ್ತೆ ನಿದ್ರೆಗೆ ಜಾರಿ ಆತನ ಗೊರಕೆ ಶಬ್ದದಿಂದ ನನಗಷ್ಟೇ ಅಲ್ಲದೇ ಉಪನ್ಯಾಸವನ್ನು ಆಲಿಸುತ್ತಿದ್ದ ವಿದ್ಯಾರ್ಥಿಗಳಿಗೂ ಕಿರಿಕಿರಿಯನ್ನುಂಟು ಮಾಡುತ್ತಿದ್ದ. ಉಪನ್ಯಾಸಕ್ಕೆ ಪದೇ ಪದೇ ಅಡ್ಡಿಪಡಿಸುತ್ತಿದ್ದ ಆತನ ಮೇಲೆ ನನಗೆ ಸಹಜವಾಗಿಯೇ ಸಿಟ್ಟು ಬಂತು. ಆದರೆ ತೋರ್ಪಡಿಸಿಕೊಳ್ಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಅಕ್ಕಪಕ್ಕ ಕುಳಿತವರು ಆತನನ್ನು ಎಚ್ಚರವಾಗಿರಿಸಲು ಶತಪ್ರಯತ್ನ ಪಟ್ಟರೂ ಉಪಯೋಗವಾಗಲಿಲ್ಲ. ನನ್ನ ಉಪನ್ಯಾಸದೊಂದಿಗೆ ಆತನ ಗೊರಕೆ ಶಬ್ದವನ್ನೂ ವಿದ್ಯಾರ್ಥಿಗಳು ಆಲಿಸುತ್ತಿದ್ದರು. ಅಂತೂ ಗೊರಕೆಯ ಕಿರಿಕಿರಿಯ ನಡುವೆ ಸರಿಸುಮಾರು ಒಂದು ತಾಸಿನಲ್ಲಿ ಉಪನ್ಯಾಸ ಮುಕ್ತಾಯವಾಯಿತು.

ಉಪನ್ಯಾಸದ ಬಗ್ಗೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಮೆಚ್ಚುಗೆ ವ್ಯಕ್ತಪಡಿಸಿದರೂ ಸಹ ನನಗೆ ಸಮಾಧಾನವಾಗಲಿಲ್ಲ. ಸಭಾಂಗಣದಿಂದ ಬೀಳ್ಕೊಟ್ಟಿದ್ದೇ ತಡ ಸರಸರನೆ ನೇರವಾಗಿ ಪ್ರಾಂಶುಪಾಲರ ಕೊಠಡಿಗೆ ತೆರಳಿದೆ. ಇದಾಗಲೇ ಮಾಹಿತಿ ಪಡೆದಿದ್ದ ಪ್ರಾಂಶುಪಾಲರು ಉಪನ್ಯಾಸ ಕಾರ್ಯಕ್ರಮ ಅದ್ಬುತವಾಗಿತ್ತೆಂದು ಹೊಗಳಲಾರಂಭಿಸಿದರು. ಅವರ ಮಾತುಗಳನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಾ ಇನ್ನೊಮ್ಮೆ ನನ್ನನ್ನು ಇಂತಹ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲು ಆಹ್ವಾನಿಸಬೇಡಿರೆಂದೂ, ಒಂದು ವೇಳೆ ನೀವು ಆಹ್ವಾನಿಸಿದರೂ ನಾನು ಬರುವುದಿಲ್ಲವೆಂದೆ. ಕೊಂಚ ಕಸಿವಿಸಿಗೊಂಡವರಂತೆ ಕಂಡ ಪ್ರಾಂಶುಪಾಲರು, ಅರೆ ಏನಾಯಿತು ನಿಮಗೆ ಉಪನ್ಯಾಸಕರನ್ನೊಳಗೊಂಡಂತೆ  ಇಡೀ ವಿದ್ಯಾರ್ಥಿ ಸಮೂಹ ನಿಮ್ಮ ಉಪನ್ಯಾಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರಬೇಕಾದರೆ ನೀವು ಮಾತ್ರ ಅಸಮಾಧಾನಗೊಂಡಿರುವಿರಿ. ಏನಾಯಿತು ಎಂದು ಪ್ರಶ್ನಿಸಿದರು. ಸಭಾಂಗಣದಲ್ಲಿ ಜರುಗಿದ ಗೊರಕೆಯ ಕರ್ಮಕಾಂಡವನ್ನು ವಿವರಿಸಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪ್ರಾಂಶುಪಾಲರು ನಡೆದ ಘಟನೆಯ ಬಗ್ಗೆ ಮಾಹಿತಿ ಕಲೆಹಾಕಲು ಸಭಾಂಗಣದಲ್ಲಿದ್ದ ಶಿಕ್ಷಕರು ಮತ್ತು ಕೆಲ ವಿದ್ಯಾರ್ಥಿಗಳನ್ನು ಕೊಠಡಿಗೆ ಬರಲು ತಿಳಿಸಿದರು.

ತುಸು ಸಮಯದ ನಂತರ ನಾನು ವಿರಮಿಸುತ್ತಿದ್ದ ಕೊಠಡಿಗೆ ಧಾವಿಸಿದ ಪ್ರಾಂಶುಪಾಲರು, ನನ್ನ ಅಸಮಾಧಾನಕ್ಕೆ ಕಾರಣವಾದ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿ ಕ್ಷಮೆಯಾಚಿಸುತ್ತಾ, ಘಟನೆಯ ಹಿಂದಿನ ನೈಜ ವೃತ್ತಾಂತವನ್ನು ಬಿಚ್ಚಿಟ್ಟರು. ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಒಂದು ವಾರದ ಹಿಂದೆಯೇ ಎಲ್ಲ ತರಗತಿಗಳಿಗೆ ಮಾಹಿತಿ ಒದಗಿಸಲಾಗಿದ್ದು, ನೀವು ಉಪನ್ಯಾಸ ನೀಡಲು ಬರುತ್ತಿರುವ ವಿಚಾರವನ್ನು ಕೇಳಿ ಬಹುಪಾಲು ವಿದ್ಯಾರ್ಥಿಗಳು ಹರ್ಷಗೊಂಡಿದ್ದರು. ಹೀಗೆ ಸಂತಸಗೊಂಡ ವಿದ್ಯಾರ್ಥಿಗಳಲ್ಲಿ ನಿಮ್ಮ ಉಪನ್ಯಾಸ ಕಾರ್ಯಕ್ರಮ ಜರುಗುವಾಗ ಕಿರಿಕಿರಿಯನ್ನು ಉಂಟುಮಾಡಿದ ವಿದ್ಯಾರ್ಥಿಯೂ ಒಬ್ಬನಾಗಿದ್ದ. ಆ ವಿದ್ಯಾರ್ಥಿಯ ಹೆಸರನ್ನು ಪ್ರಸ್ತಾಪಿಸದೆಯೇ, ಇವನೊಬ್ಬ ಬುದ್ಧಿವಂತ ಹಾಗೂ ಕ್ರಿಯಾಶೀಲ ವಿದ್ಯಾರ್ಥಿ. ಮೂಲತಃ ಗ್ರಾಮೀಣ ಭಾಗದವನಾಗಿದ್ದು, ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಇವನು ಕನ್ನಡ ಮಾದ್ಯಮದಲ್ಲಿ ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದು ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದಿದ್ದಾನೆ. ಸದಾ ಲವಲವಿಕೆಯಿಂದ ಇರುವ ಇವನನ್ನು ಕಂಡರೆ ಉಪನ್ಯಾಸಕರ ಆದಿಯಾಗಿ ಸಹಪಾಠಿಗಳಿಗೂ ಅಚ್ಚುಮೆಚ್ಚು. ಎಲ್ಲರಿಗೂ ಪ್ರಿಯವಾಗುವ ಗುಣವನ್ನು ಹೊಂದಿರುವ ಇವನು ನೂರಾರು ಸಂಖ್ಯೆಯ ಸ್ನೇಹಿತರನ್ನು ಸಂಪಾದಿಸಿದ್ದಾನೆ. ಮಿಗಿಲಾಗಿ ಇವನೊಬ್ಬ ಭಾವಜೀವಿ ಹಾಗೂ ಸನ್ನಡತೆಯನ್ನು ಹೊಂದಿರುವ ಸ್ನೇಹಜೀವಿ. ಹೀಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಕಿರಿಕಿರಿಯನ್ನುಂಟು ಮಾಡಿದ ವಿದ್ಯಾರ್ಥಿಯನ್ನು ಬಣ್ಣಿಸುತ್ತಿರುವುದನ್ನು ಕಂಡು ವಾಸ್ತವವಾಗಿ ನನಗೆ ಮೈಯೆಲ್ಲಾ ಉರಿದುಹೋಗುತ್ತಿತ್ತು. ಅದ್ಬುತವಾಗಿ ಮೂಡಿಬರುತ್ತಿದ್ದ ಉಪನ್ಯಾಸಕ್ಕೆ ಅಡಚಣೆ ಉಂಟುಮಾಡಿದ ವಿದ್ಯಾರ್ಥಿಯನ್ನು ಕರೆದು ತಕ್ಕ ಶಾಸ್ತಿ ಮಾಡುವ ಬದಲು ನಡೆದ ಘಟನೆಗೆ ಪ್ರಾಂಶುಪಾಲರು ಕ್ಷಮೆಯಾಚಿಸಿ ಅದೇ ವಿದ್ಯಾರ್ಥಿಯ ಗುಣಗಾನ ಮಾಡುತ್ತಿರುವುದು ನನಗೆ ಮಾಡುತ್ತಿರುವ ಅವಮಾನವೆಂದೇ ಭಾವಿಸತೊಡಗಿದೆ. ಏಕೆಂದರೆ ಸಭಾಂಗಣದಲ್ಲಿ ವಿದ್ಯಾರ್ಥಿ ನಡೆದುಕೊಂಡ ರೀತಿಯಿಂದ ನನ್ನನ್ನೂ ಒಳಗೊಂಡಂತೆ ನೂರಾರು ಜನ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಹಾಗಿದ್ದರೂ ವಿದ್ಯಾರ್ಥಿಯ ಬಗ್ಗೆ ಮೃಧು ಧೋರಣೆ ಹೊಂದಿರುವ ಪ್ರಾಂಶುಪಾಲರ ನಡವಳಿಕೆ ನನಗೆ ಇಷ್ಟವಾಗಲಿಲ್ಲ. ಬಹುಶಃ ಅಂತಹ ಪರಿಸ್ಥಿತಿಯಲ್ಲಿ ನಾನಲ್ಲದೆ ಬೇರೆ ಯಾರೇ ಆಗಿದ್ದರೂ ಸಹ ಇದೇ ರೀತಿಯ ಮನಸ್ಥಿತಿಯನ್ನು ಹೊಂದಿರುತ್ತಿದ್ದರು. ತಮ್ಮ ಅಹಂಗೆ ಭಂಗವಾದಾಗ ಬಹುಪಾಲು ಜನರ ವರ್ತನೆ ಹೀಗೆಯೇ ಇರುತ್ತದೆ ಎಂಬುದಕ್ಕೆ ಅಂದಿನ ಆ ಘಟನೆಯೇ ಜೀವಂತ ಸಾಕ್ಷಿ.
​
ಮಾತು ಮುಂದುವರೆಸುತ್ತಾ, ಉಪನ್ಯಾಸ ನೀಡಲು ನೀವು ಬರುತ್ತಿರುವ ವಿಷಯವನ್ನು ತಿಳಿದ ಆ ವಿದ್ಯಾರ್ಥಿ ಕುಣಿದು ಕುಪ್ಪಳಿಸಿದ್ದನ್ನು ನಾನೇ ನನ್ನ ಕಣ್ಣಾರೆ ಕಂಡಿರುವೆ. ಅನಾರೋಗ್ಯದ ನಡುವೆಯೂ ನಿನ್ನೆ ಸಂಜೆಯಿಂದಲೇ ಸಭಾಂಗಣವನ್ನು ಶುಚಿಗೊಳಿಸುವ ಹಾಗೂ ಸಿಂಗರಿಸುವ ಕಾರ್ಯದಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ತಾನೂ ಶ್ರಮಿಸಿದ್ದ. ಆದರೂ ಆ ವಿದ್ಯಾರ್ಥಿ ಹಾಗೆ ವರ್ತಿಸಿದ ಎಂದರೆ ಮೊದಮೊದಲು ನನಗೆ ಊಹಿಸಲಾಗಲಿಲ್ಲ. ಆದರೆ ವಾಸ್ತವ ಈಗಷ್ಟೇ ತಿಳಿಯಿತು. ನಿಮ್ಮ ಉಪನ್ಯಾಸ ಮುಗಿಸಿಕೊಂಡು ಹೊರಬಂದ ವಿದ್ಯಾರ್ಥಿ ಮೂರ್ಛೆಬಿದ್ದ. ಕೂಡಲೇ ಪೋಷಕರಿಗೆ ಕರೆಮಾಡಿ ವಿಚಾರ ಮುಟ್ಟಿಸಿದಾಗ ವಾಸ್ತವ ಅರಿಯಿತು. ಅವನೊಬ್ಬ ಕ್ಯಾನ್ಸರ್ ಭಾದಿತ ವ್ಯಕ್ತಿ. ಎರಡು ದಿನಗಳ ಹಿಂದಷ್ಟೇ ಕೆಮೋ-ಚಿಕಿತ್ಸೆ (ಕೆಮೋಥೆರಪಿ) ಪಡೆದಿದ್ದನು. ಹೇಗಾದರೂ ಮಾಡಿ ನಿಮ್ಮ ಉಪನ್ಯಾಸವನ್ನು ಕೇಳಲೇಬೇಕೆಂದು ಕೆಮೋಥೆರಪಿ ಪಡೆದ ನಂತರದ ದಿನವೇ ಕಾಲೇಜಿಗೆ ಬಂದು ಉಪನ್ಯಾಸಕ್ಕೆ ಸಭಾಂಗಣವನ್ನು ಸಿದ್ಧಗೊಳಿಸಿದ. ತನ್ನ ದೇಹದಲ್ಲಿ ನೋವಿದ್ದರೂ ಅದನ್ನು ತೋರ್ಪಡಿಸಿಕೊಳ್ಳದೆ ತನ್ನಿಂದಾಗಬಹುದಾದ ಎಲ್ಲಾ ಕೆಲಸವನ್ನು ಮಾಡಿದ. ಮನಸ್ಸಿನಲ್ಲಿ ಹೇಳಿಕೊಳ್ಳಲಾಗದ ಸಂಕಟವಿದ್ದರೂ ಅದನ್ನು ಯಾರೊಂದಿಗೂ ಹೇಳಿಕೊಳ್ಳಲಿಲ್ಲ. ಲವಲವಿಕೆಯಿಂದ ಇರುತ್ತಿದ್ದ ಹುಡುಗ ಮಂಕಾಗಿರುವುದನ್ನು ಕಂಡು ಪ್ರಶ್ನಿಸಿದಾಗ ನಗುನಗುತ್ತಲೇ ಏನೂ ಇಲ್ಲವೆಂದು ಉತ್ತರಿಸಿದ. ನಿಮ್ಮ ಉಪನ್ಯಾಸ ಕಾರ್ಯಕ್ರಮದಲ್ಲಿ ಲವಲವಿಕೆಯಿಂದ ಭಾಗವಹಿಸಬೇಕೆಂಬ ಕಾರಣಕ್ಕೆ ಸಾಮಾನ್ಯಕ್ಕಿಂತ ಕೊಂಚ ಹೆಚ್ಚಾಗಿ ಮಾತ್ರೆಗಳನ್ನು ಸೇವಿಸಿ ಬಂದಿದ್ದ ಎಂಬ ಸತ್ಯ ಅವರ ಪೋಷಕರಿಂದಲೇ ನಮಗೂ ತಿಳಿದದ್ದು. ತುಂಬಾ ಅಡ್ವಾನ್ಸ್ಡ್ ಕ್ಯಾನ್ಸರ್ ರೋಗಿಯಾದ ಇವನು ಹೆಚ್ಚು ಮಾತ್ರೆಗಳನ್ನು ಸೇವಿಸಿದ್ದರಿಂದ ರಾಸಾಯನಿಕ ಪ್ರತಿಕ್ರಿಯೆಯಿಂದ ಸಭಾಂಗಣದಲ್ಲಿ ಆ ರೀತಿ ವರ್ತಿಸಿರಬಹುದು ಎನ್ನುತ್ತಾ ಮಾತು ಮುಗಿಸಿದರು. ಕೋಪ - ಆವೇಶದಿಂದ ಕುದಿಯುತ್ತಿದ್ದ ನನ್ನ ಕಣ್ಣಂಚಿನಿಂದ ನೀರು ಧಾರಾಕಾರವಾಗಿ ಸುರಿಯಲಾರಂಭಿಸಿವು. ಪ್ರತಿಕ್ರಿಯಿಸಲು ಮಾತು ಹೊರಡಲಿಲ್ಲ. ತಕ್ಷಣ ಮೇಲೆದ್ದು ನೇರವಾಗಿ ಸಭಾಂಗಣದತ್ತ ಹೆಜ್ಜೆಹಾಕಿದೆ, ಎಲ್ಲೂ ಕೆಂಪುಬಣ್ಣದ ಟೋಪಿ ಧರಿಸಿದ ವಿದ್ಯಾರ್ಥಿ ಕಣ್ಣಿಗೆ ಬೀಳಲಿಲ್ಲ. ನನ್ನನ್ನು ಸಭಾಂಗಣದ ಮುಂದೆ ಕಂಡ ಕೂಡಲೇ ಆಟೋಗ್ರಾಫಿಗಾಗಿ ಮುತ್ತಿಕೊಂಡ ವಿದ್ಯಾರ್ಥಿಗಳನ್ನು ಆ ಕೆಂಪು ಟೋಪಿ ವಿದ್ಯಾರ್ಥಿಯ ಬಗ್ಗೆ ವಿಚಾರಿಸಿದೆ. ಸೂರ್ಯನ ತಾಪಮಾನಕ್ಕೆ ತಲೆಸುತ್ತಿ ಬಿದ್ದಿದ್ದ ವಿದ್ಯಾರ್ಥಿಯನ್ನು ಉಪಚರಿಸಿ, ಪ್ರಥಮ ಚಿಕಿತ್ಸೆ ನೀಡಿ ನಂತರ ಆತನ ಮನೆಗೆ ತಂದೆಯ ಜೊತೆ ಕಳುಹಿಸಿರುವುದಾಗಿ ತಿಳಿಸಿದರು. ಇಲ್ಲದ ಮನಸ್ಸಿನಿಂದ ಆಟೋಗ್ರಾಫ್ ನೀಡಿ ಕಾಲೇಜಿನಿಂದ ತೆರಳಿದೆ.

0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)