SKH
  • HOME
    • About Us
  • English Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Online Groups
  • Search
  • Contact Us
  • HOME
    • About Us
  • English Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Online Groups
  • Search
  • Contact Us
SKH

ಅವತಾರವೆಂಬೆ ಅಧಃಪಾತವನ್ನೇ! ನವ ನಿರ್ಮಾಣಕ್ಕೆ ಒಂದು ಮುನ್ನುಡಿ

7/18/2017

0 Comments

 
Picture
ಬಳ್ಳಾರಿ ಜಿಲ್ಲೆಯ ಇಂದಿನ ಸ್ಥಿತಿಯನ್ನು ಗಮನಿಸಿದಾಗ (ಈ ಜಿಲ್ಲೆಗೆ ಚಿತ್ರದುರ್ಗ, ತುಮಕೂರು ಜಿಲ್ಲೆಗಳನ್ನೂ ಸೇರಿಸಬಹುದು) ವರಕವಿ ಬೇಂದ್ರೆ ಅವರ ಗಂಗಾವತರಣ ಪದ್ಯದ ಈ ಅಭಿವ್ಯಕ್ತಿಯ ನೆನಪಾಗುತ್ತದೆ: ಅವತಾರವೆಂಬೆ ಅಧಃಪಾತವನ್ನೆ! ಸ್ವರ್ಗದ ಗಂಗೆಯು ತಪ್ಪು ಮಾಡಿ, ಶಾಪಗ್ರಸ್ತಳಾಗಿ ಭೂಮಿಗೆ ಕುಸಿದು ಬೀಳುತ್ತಾಳೆ. ಇದು ಆಕೆಗೆ ಆದ ಅಧಃಪಾತ. ಆದರೆ, ಗಂಗೆಯು ಭೂಮಿಗೆ ಇಳಿದು ಬಂದದ್ದು ಭೂಮಿಗೆ ಒಂದು ವರದಾನ ಒಂದು ಅವತಾರ. ಭಗೀರತನ ಪ್ರಯತ್ನವೂ ಇದರಲ್ಲಿ ಇದೆ ಎಂದು ಪೌರಾಣಿಕ ನಂಬುಗೆ. ತುಂಗಭದ್ರಾ ನದಿಯು ಹಂಪಿಯ ಹೊಳೆಯಾಗಿ ಹರಿಯುತ್ತಿದ್ದಾಳೆ. ಅನೇಕ ಚಿಕ್ಕ ದೊಡ್ಡ ಹಳ್ಳಗಳೂ ಹರಿಯುತ್ತವೆ. ಮಳೆಯು ಯಥೇಚ್ಛವಾಗಿಲ್ಲದಿದ್ದರೂ, ಭೂಮಿಯು ಫಲವತ್ತಾಗಿರುವುದರಿಂದ, ಸುರಿದ ನೀರನ್ನು ಜಾಣ್ಮೆಯಿಂದ ಬಳಸಿಕೊಂಡರೆ ಸಮೃದ್ಧ ಬೆಳೆ ತೆಗೆಯಬಹುದು. ಸೊಂಡೂರು-ಕೂಡ್ಲಿಗಿ ತಾಲ್ಲೂಕುಗಳಲ್ಲಿ ಅರಣ್ಯ ವಿಶಾಲವಾಗಿ ಹರಡಿಕೊಂಡಿದೆ. ಮೇಲ್ಭಾಗದ ಮಣ್ಣು ಫಲವತ್ತಾಗಿದ್ದರೆ, ಭೂಮಿಯ ಆಳದಲ್ಲಿ ಕಬ್ಬಿಣದಂಥ ಖನಿಜ ಸಂಪತ್ತು ಹೇರಳವಾಗಿದೆ. ಇತಿಹಾಸ ಪೂರ್ವದಲ್ಲಿಯೇ ಜನವಸತಿಗೆ ಹೆಸರಾಗಿದ್ದ ಈ ಭೂಪ್ರದೇಶದಲ್ಲಿ ವಿಜಯನಗರದಂಥ ಮಹಾಸಾಮ್ರಜ್ಯವು ಸ್ಥಾಪನೆಯಾಗಿ ಜಗತ್ತಿಗೇ ಪ್ರಸಿದ್ಧವಾಯ್ತು. ಹಂಪಿ, ಬಾಗಳಿ, ಕೋಗಳಿ ಮುಂತಾದ ಕಡೆ ವಾಸ್ತುಶಿಲ್ಪ, ನವುರು ಕೆತ್ತನೆಗಳ ಸುಪ್ರಸಿದ್ಧ ದರ್ಶನೀಯ ಸ್ಥಳಗಳು ವಿಜೃಂಭಿಸಿದವು. ವಿರೂಪಾಕ್ಷ ದೇವನಂತೂ ಜಗತ್ತಿನ ಬೆಳಕೇ ಆಗಿದೆ. ಹರಿಹರ ರಾಘವಾಂಕರಂಥ ಮೇರು ಕವಿಗಳ, ನೂರೊಂದು ವಿರಕ್ತರ ಬೀಡು ಈ ಪ್ರದೇಶವಾಗಿತ್ತು.
ವಿಕೃತ ಗಣಿಗಾರಿಕೆ
ಇಂಥ ಪ್ರದೇಶದಲ್ಲಿ ಹಲವು ದಶಕಗಳ ಹಿಂದೆಯೇ ಖನಿಜವನ್ನು ಮೇಲೆತ್ತುವ ಗಣಿಗಾರಿಕೆಯು ಆರಂಭವಾಗಿ ಇತ್ತೀಚಿನ ದಿನಗಳಲ್ಲಿ ಸೋಜಿಗದ ರೀತಿಯಲ್ಲಿ ಧರಣಿಯ ಗರ್ಭವು ತೆರೆದುಕೊಂಡಿತು; ಅಲ್ಲಿನ ಖನಿಜ ಸಂಪತ್ತು ಎಗ್ಗಿಲ್ಲದೆ ಲೂಟಿಯಾಗಿ ಚೀನಾದಂಥ ದೇಶಗಳಿಗೆ ಲಕ್ಷಾಂತರ ಟನ್ನು ಅದಿರು ರಪ್ತಾಗಿ ಅಲ್ಲಿ ಬೆಟ್ಟಗಳಾಗಿ ಶ್ರೇಣಿಗಟ್ಟಿತು. ಬರಡು ಭೂಮಿ ಮಾತ್ರವಲ್ಲ ಫಲವತ್ತಾದ ಭೂಮಿ, ದಟ್ಟವಾದ ಅಪೂರ್ವವಾದ ಸಸ್ಯಗಳ ತಾಣಗಳನ್ನು ಬಿಡದೆ ಸರಕಾರದ ಪರವಾನಗಿ ಇಲ್ಲದೆಯೂ ಗಣಿಗಾರಿಕೆಯು ನಡೆದು ಮಾನವಕೃತ ಕೊಳ್ಳಗಳ ನಿರ್ಮಾಣವಾಯ್ತು. ನಿಬಿಡವಾಗಿ ಸಾವಿರಸಾವಿರ ಲಾರಿಗಳು ಅದಿರನ್ನು ತುಂಬಿಕೊಂಡು ಭೂಮಿಯ ಮೇಲೆ ಉರುಳಿ ಹಳ್ಳಗಳ ನಿರ್ಮಾಣವಾಯ್ತು. ಕೆಂಪು ಧೂಳು ವಾತಾವರಣವನ್ನು ದಟ್ಟರಕ್ತ ಮೋಡಗಳಾಗಿ ತುಂಬಿಕೊಂಡಿತು. ನೀರು ಆವಿಯಾಯಿತು, ಲಕ್ಷಾಂತರ ಜನರು ಗಣಿಗಾರಿಕೆಯಲ್ಲಿ ಬೆವರು ಸುರಿಸಿದರಾದರೂ ಭೂಮಿ ತಣಿಯಲಿಲ್ಲ. ಒಕ್ಕಲುತನ ಕುಸಿದುಬಿತ್ತು. ಜನರ ಆರೋಗ್ಯ ನಾಶವಾಯ್ತು. ಯಾವ ರಸ್ತೆಗಳೂ ಸುಸ್ಥಿತಿಯಲ್ಲಿ ಉಳಿಯಲು ಸಾಧ್ಯವೇ ಇಲ್ಲದಂತಾಯ್ತು. ಖನಿಜ ಸಂಪತ್ತು ಕೆಲವರ ಖಜಾನೆಯನ್ನು ತುಂಬಿಕೊಂಡಿತು; ಬಹುಸಂಖ್ಯೆಯ ಜನರು ದರಿದ್ರರಾಗಿ ಬೀದಿಪಾಲಾದರು. ಕರ್ನಾಟಕದ ರಾಜಕೀಯವು ವಿಕೃತ ರೂಪವನ್ನು ತಳೆಯಿತು. ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಸಿಕ್ಕು ಜನರ ನೈತಿಕ ಅಧಃಪತನವಾಯ್ತು; ಜೀವನ ಪದ್ಧತಿಯು ವಿಸಂಘಟಿತವಾಯ್ತು.
 
ನ್ಯಾಯಾಲಯದ ತೀರ್ಪು-ಆನಂತರ
ಇಂಥ ದುರಂತದ ವಿರುದ್ಧ ಹೋರಾಟ ನಡೆದು ಇತ್ತೀಚೆಗೆ ಲೋಕಾಯುಕ್ತ ಸಂಸ್ಥೆಯ ಮತ್ತು ನ್ಯಾಯಾಲಯಗಳ ಪ್ರವೇಶದಿಂದ ಕೊಳ್ಳೆಗೆ ಕೊನೆ ಕಾಣುವಂತಾಯ್ತು. ರಾಷ್ಟ್ರದ ಉಚ್ಚನ್ಯಾಯಾಲಯವು ಗಣಿಗಳನ್ನು ಮುಚ್ಚಲು ಆಜ್ಞೆ ಮಾಡಿತು. ಧಾರಾಕಾರ ಮಳೆಯು ಇದ್ದಕ್ಕಿದ್ದಂತೆ ನಿಂತಹಾಗೆ ಗಣಿಗಾರಿಕೆಯಲ್ಲಿ ನಿರತವಾಗಿದ್ದ ಸಾವಿರಾರು ಟ್ರಕ್ಕೂ-ಲಾರಿಗಳು ಇದ್ದಲ್ಲಿಯೇ ಸಾಲುಗಟ್ಟಿ ನಿಂತುಬಿಟ್ಟವು; ಲಕ್ಷಾಂತರ ಗಣಿಕಾರ್ಮಿಕರು ನಿರುದ್ಯೋಗಿಗಳಾದರು; ಕೆಮ್ಮುಗಿಲು ಕರಗತೊಡಗಿತು; ಜನರ ಶ್ವಾಸಕೋಶಗಳಿಗೆ ನವೀನಗಾಳಿಯು ತುಂಬತೊಡಗಿತು. ಈಗ ಮತ್ತೊಂದು ಆಘಾತದ ಅನಾವರಣವಾಯ್ತು. ಉದ್ಯೋಗವಿಲ್ಲದೆ ಕೈಚೆಲ್ಲಿ ಕುಳಿತ ಲಕ್ಷಾಂತರ ಜನರ ಹೊಟ್ಟೆ ಹಸಿಯತೊಡಗಿತು. ಇದರ ಪರಿಣಾಮ ಏನಾಗಬಹುದು? ಕಳ್ಳತನ, ಕೊಳ್ಳೆ-ದರೋಡೆಗಳು ವ್ಯಾಪಕವಾಗುವ ಆತಂಕವು ಜನರನ್ನು ಕಾಡತೊಡಗಿದೆ. ಬಳ್ಳಾರಿ ಮತ್ತಿತರ ಪ್ರದೇಶಗಳಲ್ಲಿ ಆದ ನೈಸರ್ಗಿಕ ಸಂಪತ್ತಿನ ಲೂಟಿಯಿಂದ ಬರಡಾದ ಜೀವನವು ಇಡೀ ಜನಜೀವನವನ್ನು ಅಲ್ಲೋಲಕಲ್ಲೋಲಗೊಳಿಸುತ್ತಲಿದೆ. ಗಣಿಗಾರಿಕೆಯ ಸಮಯದಲ್ಲಿ, ಗಣಿ ಸ್ಥಗಿತದ ಆನಂತರವೂ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಹೊಸ ತೆರನ ಸುನಾಮಿ ಎಂದೆನಿಸಿಸುತ್ತದೆ. ಇತ್ತೀಚೆಗೆ ಜಪಾನ್ ಕಂಡ ಸುನಾಮಿಯನ್ನು ನಾವು ಗಮನಿಸಿಬೇಕೆನ್ನಿಸುತ್ತದೆ. ಅದು ನೈಸರ್ಗಿಕ ವಿಪತ್ತು. ಅಣುವಿದ್ಯುತ್ ಸ್ಥಾವರಗಳ ನಿರ್ಮಾಣ, ರಾಸಾಯನಿಕ ದ್ರವ್ಯಗಳ ಉತ್ಪಾದನೆ ಮುಂತಾದ ಮಾನವ ವಿಕೃತ ಕ್ರಿಯೆಗಳ ಸಾಲೂ ಈ ದುರಂತದಲ್ಲಿ ಇದೆ ಎಂಬುದು ಸಾಬೀತಾಗಿದೆ. ಜಪಾನಿನ ದುರಂತವು, ಹೀಗಾಗಿ, ನೈಸರ್ಗಿಕ ಮತ್ತು ಮಾನವ ಕೃತ, ಆದರೆ, ಬಳ್ಳಾರಿ ಪ್ರದೇಶದಲ್ಲಿ ಆದ ದುರಂತ ಕೇವಲ ಮಾನವನ ದುರಾಸೆಯ, ವಿಕೃತ ಮನಸ್ಸಿನ, ಅದೂರ ದೃಷ್ಟಿಯ, ಕೊಳಕು ವ್ಯವಸ್ಥೆಯ ಪರಿಣಾಮ ಎಂಬುದರಲ್ಲಿ ಸಂಶಯವಿಲ್ಲ. ಇಂಥ ದುರಂತ ಸಮಯದಲ್ಲಿ ಜಪಾನೀಯರ ದೃಢಸಂಕಲ್ಪದ, ಸ್ಥೈರ್ಯದ ಕಾರ್ಯವು ನಮಗೆ ಮಾದರಿಯಾಗಬೇಕಾಗಿದೆ. ಇಲ್ಲಿ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳು ಸಂಯುಕ್ತವಾಗಿ ದಿಟ್ಟತನದಿಂದ ರಚನಾತ್ಮಕ ಕ್ರಿಯೆಯಲ್ಲಿ ತೊಡಗಬೇಕಾಗಿದೆ. ಈ ಪ್ರಕ್ರಿಯೆಯಲ್ಲಿ ನವಮಾನವನ ನಿರ್ಮಾಣವೂ ಆಗಬೇಕಾಗಿದೆ. ಇಲ್ಲಿ ಹಣವೂ ಅಪಾರವಾಗಿದೆ, ಮಾನವ ಸಂಪನ್ಮೂಲಕ್ಕೂ ಕೊರತೆಯಿಲ್ಲ. ತಿರುಪತಿ ತಿಮ್ಮಪ್ಪನ ಕಿರೀಟಕ್ಕೆ, ರಾಜಕೀಯ ದೊಂಬರಾಟಕ್ಕೆ ಅನ್ಯಾಯವಾಗಿ ದುರುಪಯೋಗವಾಗುವ ಸಂಪತ್ತು ಈಗ ಸದ್ವ್ವಿನಿಯೋಗವಾಗಬೇಕಾಗಿದೆ. ಗಾಂಧೀಯ ಆಶಯದ ವಿಶ್ವಸ್ಥನಿಧಿಯ (Trusteeship) ಪರಿಕಲ್ಪನೆಯು ಅನುಷ್ಠಾನಗೊಳ್ಳಬೇಕಾಗಿದೆ.
 
ಇಚ್ಛಾಶಕ್ತಿಯ ಅಗತ್ಯ: ರಚನಾತ್ಮಕ ಕ್ರಿಯೆ
ದೃಢ ಸಂಕಲ್ಪ, ಇಚ್ಛಾಶಕ್ತಿಯು ರಚನಾತ್ಮಕ ಕ್ರಿಯೆಯಲ್ಲಿ ಸ್ವಯಂಸೇವಾ ಕಾರ್ಯಕರ್ತರು, ಸರಕಾರದ ನೌಕರರು ಮತ್ತು ಪ್ರಜ್ಞಾವಂತ ರಾಷ್ಟ್ರಕರು ಒಗ್ಗೂಡಬೇಕು. ಗಣಿಲೂಟಿಯಿಂದ ಗಳಿಸಿದ ಸಂಪತ್ತು ನಿರುದ್ಯೋಗಿಗಳಾಗಿರುವ ಲಕ್ಷಾಂತರ ಜನರ ಪುನಾವಸತಿಗೆ ವಿನಿಯೋಗವಾಗಬೇಕು. ಖನಿಜವನ್ನು ಸೋಸಿಕೊಂಡು ಚರಟವಾಗಿ ರಾಶಿಯಾಗಿ ಬಿದ್ದಿರುವ ಮಣ್ಣನ್ನು ಮತ್ತೆ ನಿರ್ಮಾಣವಾದ ಪ್ರಪಾತಕ್ಕೆ ತಳ್ಳಬೇಕು. ಈ ಕೆಲಸದಲ್ಲಿ ಕಾರ್ಮಿಕರು ಮತ್ತು ಲಾರಿಗಳು ತೊಡಗಿಕೊಳ್ಳಬೇಕು. ಇವರೇ ಅರಣ್ಯೀಕರಣ ಮತ್ತು ಹಸುರೀಕರಣದಲ್ಲಿ ನಿರತವಾಗಬೇಕು. ನೈತಿಕ ಅಧಃಪತನ, ಭ್ರಷ್ಟರಾಜಕೀಯ ಹಾಗೂ ಅಸಡ್ಡೆಯ ಕಾರಣದಿಂದ ಕೃಷಿಯಲ್ಲಿ ಜನರು ನಿಷ್ಠೆಯಿಂದ ದುಡಿಯುತ್ತಿಲ್ಲ. ಹೊಲಗಳಲ್ಲಿ ಕೆಲಸ ಮಾಡಲು ಜನರು ಲಭ್ಯವಿಲ್ಲ. ಈಗ ಕೆಲಸವಿಲ್ಲದೆ ಕುಳಿತಿರುವ ಕಾರ್ಮಿಕರು ಕೃಷಿಯಲ್ಲಿ ತೊಡಗಿಕೊಳ್ಳಬೇಕು. ವಿನಾಶಗೊಂಡಿರುವ ಗ್ರಾಮೀಣ ಕೈಗಾರಿಕೆಗಳಿಗೆ ಪುನಃಶ್ಚೇತನ ನೀಡಿ ಅವನ್ನು ಪುನರುತ್ಥಾನಗೊಳಿಸಬೇಕು. ಇದಕ್ಕಾಗಿ ಜನರನ್ನು ತರಬೇತಿಗೊಳಿಸುವ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಹಳ್ಳಿಹಳ್ಳಿಗಳಲ್ಲಿ ಅನಾಥವಾಗಿ ಪಾಳುಬಿದ್ದ ಭೂಮಿಯನ್ನು ಹದಗೊಳಿಸಲು ಲಾರಿಗಳನ್ನು, ನಿರುದ್ಯೋಗಿಗಳಾದ ಕಾರ್ಮಿಕರನ್ನು ಬಳಸಿಕೊಳ್ಳಬೇಕು. ಇಂಥ ರಚನಾತ್ಮಕ ಕಾರ್ಯಗಳಿಗೆ ಆರ್ಥಿಕ ಮತ್ತು ಮಾನವ ಸಂಪನ್ಮೂಲಕ್ಕೆ ಕೊರತೆಯಿಲ್ಲ. ಲೂಟಿಯಾದ ಸಂಪತ್ತು ಇದೆ, ನಿರುದ್ಯೋಗಿಗಳಾದ ಮಾನವ ಸಂಪನ್ಮೂಲವಿದೆ, ತುಂಗಭದ್ರಾ ಜಲಾಶಯದಲ್ಲಿ ಸಾಕಷ್ಟು ನೀರಿದೆ. ಸರಕಾರದ ಗೋದಾಮುಗಳಲ್ಲಿ (ಇಲಿ ಹೆಗ್ಗಣಗಳಿಗೆ ಹೋಗುವ) ಟನ್‍ಗಟ್ಟಲೆಯ ದವಸ ಧಾನ್ಯವಿದೆ. ಇವೆಲ್ಲವೂ ಈಗ ಸದುಪಯೋಗವಾಗಬೇಕು. ಆದರೆ, ಒಂದು ಎಚ್ಚರಿಕೆಯನ್ನು ಮನದಲ್ಲಿರಿಸಿಕೊಳ್ಳಬೇಕು. ಕಾರ್ಮಿಕರು ನವೀನ ಜೀತಪದ್ಧತಿಗೆ ಒಳಗಾಗಬಾರದು. ಅವರು ಶಾಶ್ವತವಾಗಿ ಪುನಾವಸತಿಯನ್ನು ಪಡೆಯುವಂತಾಗಬೇಕು. ಈ ಕಾರ್ಯದಿಂದ ಗ್ರಾಮೋನ್ನತಿಯಾಗುತ್ತದೆ, ನೈಸರ್ಗಿಕ ಸಂಪತ್ತು ಸಂಪೋಷಿತವಾಗುತ್ತದೆ. ಇದಕ್ಕಾಗಿ ಗ್ರಾಮಪಂಚಾಯತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳು ಹೊಸ ರೀತಿಯ ಕಾರ್ಯ ವೈಖರಿಯನ್ನು ಅಳವಡಿಸಿಕೊಳ್ಳಬೇಕು.
 
ಸಮಾಜಕಾರ್ಯಕ್ಕೆ-ಅವಕಾಶ
ಭ್ರಷ್ಟ ವ್ಯವಸ್ಥೆಯನ್ನು ಪರಿವರ್ತಿಸಿ ಶಿಷ್ಟ ವ್ಯವಸ್ಥೆಯನ್ನು ಸ್ಥಾಪಿಸುವ ಸದಾವಕಾಶವು ಸರ್ಕಾರಕ್ಕೂ, ಸರ್ಕಾರೇತರ ಸಂಸ್ಥೆಗೂ, ಸಾರ್ವಜನಿಕರಿಗೂ ದೊರೆತಿದೆ. ನೂರಾರು ಸಂಖ್ಯೆಯಲ್ಲಿರುವ ಸಮಾಜಕಾರ್ಯ ಶಾಲೆಗಳು ಈ ಬಗ್ಗೆ ಕಾರ್ಯತಂತ್ರವನ್ನು ರೂಪಿಸಬೇಕು, ಸಹಸ್ರ ಸಂಖ್ಯೆಯಲ್ಲಿರುವ ವೃತ್ತಿತರಬೇತಿ ಪಡೆದ ಸಮಾಜಕಾರ್ಯಕರ್ತರು ಇಚ್ಛಾ ಶಕ್ತಿಯಿಂದ ತಂಡತಂಡಗಳಲ್ಲಿ ಕ್ರಿಯಾಶೀಲರಾಗಬೇಕು. ಬರಿಯ ಸಿದ್ಧಾಂತದ ಬಾಯಿಪಾಠ ಮಾಡುವುದರಿಂದ ಪ್ರಯೋಜನವಿಲ್ಲ; ನೇರವಾಗಿ ಅನುಷ್ಠಾನ ಪರ್ವದಲ್ಲಿ ಭಾಗಗಳಾಗಬೇಕಾಗಿದೆ.
 
-ಎಚ್.ಎಂ.ಮರುಳಸಿದ್ಧಯ್ಯ
ನಿವೃತ್ತ ಮುಖ್ಯಸ್ಥರು, ಸಮಾಜಕಾರ್ಯವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ
0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)