SKH
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
SKH

ಡಾ.ಎಚ್.ಎಂ. ಮರುಳಸಿದ್ಧಯ್ಯ ಅವರನ್ನು ಕುರಿತ ಸಮಾಜಕಾರ್ಯದ ಕಣಸುಗಾರ ಕೃತಿಯ ಬಿಡುಗಡೆ ಸಮಾರಂಭ

7/17/2017

0 Comments

 
ಈ ವಿಶಿಷ್ಟ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿರುವ ತಮ್ಮ ವೃತ್ತಿಪರತೆಯನ್ನು ಮಾದರಿ ಹಿನ್ನೆಲೆಯುಳ್ಳವರಾಗಿರುವ ಬೆಂಗಳೂರು ವಿಶ್ವವಿದ್ಯಾಲಯದ ದಕ್ಷ ಹಾಗೂ ಕ್ರಿಯಾಶೀಲ ಕುಲಸಚಿವ ಡಾ.ರಂಗನಾಥ್ ಅವರೆ, ಡಾ.ಎಚ್.ಎಂ. ಮರುಳಸಿದ್ಧಯ್ಯ ಅವರನ್ನು ಕುರಿತಾದ 'ಸಮಾಜಕಾರ್ಯದ ಕಣಸುಗಾರ' ಕೃತಿಯನ್ನು ಬಿಡುಗಡೆ ಮಾಡಿ, ಈಗಾಗಲೇ ಮೌಲ್ಯಯುತ ಮಾತುಗಳನ್ನಾಡಿದ ಗಾಂಧೀವಾದಿಗಳು, ಗಾಂಧಿ ವಿಚಾರಗಳು, ಮೌಲ್ಯಗಳು ಹಾಗೂ ಆಚರಣೆಗೆ ಬದ್ಧರಾಗಿರುವ ಹಿರಿಯ ಸರ್ವೋದಯ ನಾಯಕರೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿರುವ ಸನ್ಮಾನ್ಯ ಎಚ್.ಎಸ್. ದೊರೆಸ್ವಾಮಿ ಅವರೇ, ಈ ಸಮಾರಂಭದ ಪ್ರಮುಖ ಕೇಂದ್ರ ಬಿಂದುವಾಗಿರುವ, ಯೋಗ ಕೂಡಿಬಂದಿದ್ದರೆ ಯಾವುದಾದರೂ ಒಂದು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆಸಲ್ಲಿಸುವ ಎಲ್ಲ ಅರ್ಹತೆ, ಸಾಮರ್ಥ್ಯ ಹಾಗೂ ಯೋಗ್ಯತೆವುಳ್ಳರಾಗಿರುವ ನಾಡಿನ ಹೆಸರಾಂತ ಸಮಾಜಶಾಸ್ತ್ರಜ್ಞರೂ ಸಮಾಜಕಾರ್ಯ ಜೀವಂತ ದಂತಕತೆಯೂ ಆಗಿರುವ ಸನ್ಮಾನ್ಯ ಡಾ.ಎಚ್.ಎಂ.ಮರುಳಸಿದ್ಧಯ್ಯನವರೇ, ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬಳು ಮಹಿಳೆ ಇರುತ್ತಾಳೆ ಎಂಬುದರ ದ್ಯೋತಕವಾಗಿ ಎಚ್.ಎಂ.ಎಂ.ಅವರ ಬೆನ್ನೆಲುಬಾಗಿರುವ ಹಿರಿಯ ಸಹೋದರಿ ಶ್ರೀಮತಿ ಶಾಂತವೀರಮ್ಮನವರೇ. 
ಈ ಸಮಾರಂಭವನ್ನು ಇಷ್ಟು ಅಚ್ಚುಕಟ್ಟಾಗಿ ಅರ್ಥಪೂರ್ಣವಾಗಿ ಆಯೋಜಿಸಿ ಅನುಷ್ಠಾನಗೊಳಿಸುತ್ತಿರುವ, ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ವಿಶೇಷ ಕಾರ್ಯಕ್ರಮಗಳ ಸಂಯೋಜಕರಾದ ಸನ್ಮಾನ್ಯ ರಾಜೇಂದ್ರಕುಮಾರ್ರವರೇ, ಇತರ ಸಿಬ್ಬಂದಿ ವರ್ಗದ ಬಂಧುಭಗಿನಿಯರೇ.

ಇಂದು ಬಿಡುಗಡೆಯಾದ ಕೃತಿಯನ್ನು ಒಳಗೊಂಡಂತೆ, ಡಾ.ಎಚ್.ಎಂ.ಎಂ.ರವರ ಮೌಲ್ಯಯುತ ಕೃತಿಗಳನ್ನು ಅಪಾರ ಆಸ್ಥೆಯಿಂದ ಪ್ರಕಟಿಸುತ್ತಿರುವ, ಈಗಾಗಲೇ 91 ಕೃತಿಗಳನ್ನು ಪ್ರಕಟಿಸಿರುವ ನಾಡಿನ ಪ್ರಖ್ಯಾತ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾಗಿರುವ ಪ್ರಗತಿ ಗ್ರಾಫಿಕ್ಸ್ನ ಮಾಲೀಕರೂ ಸನ್ಮಿತ್ರರೂ ಆಗಿರುವ ಸನ್ಮಾನ್ಯ ಎಂ.ಭೈರೇಗೌಡರವರೇ.

ಎಚ್.ಎಂ.ಎಂ.ರವರ ಕನಸಿನ ಕೂಸಾಗಿರುವ ಸಮಾಜಕಾರ್ಯದ ಹೆಜ್ಜೆಗಳು ಮಾದರಿ ಮಾಸಿಕ ಪತ್ರಿಕೆಯನ್ನು ನಿರಾತಂಕವಾಗಿ, ಅರ್ಥಪೂರ್ಣವಾಗಿ ಮತ್ತು ಮೌಲ್ಯಯುತವಾಗಿ, ಇತರ ವಿಭಾಗಗಳಿಗೆ ಮೇಲ್ಪಂಕ್ತಿಯುತವಾಗಿ ನಡೆಸಿಕೊಂಡು ಬರುತ್ತಿರುವ ಸಂಪಾದಕ ಸಹೋದರ ಎಂ.ಎಚ್. ರಮೇಶ್ರವರೇ, ಅವರ ಎಲ್ಲ ಸಮಾನ ಮನಸ್ಕ ಮಿತ್ರರೇ.

ಇಂದು ಬಿಡುಗಡೆಯಾದ ಉತ್ತಮ ಕೃತಿಯ ಲೇಖಕ ಮಿತ್ರರುಗಳಾದ ಎನ್.ವಿ. ವಾಸುದೇವಶರ್ಮಾರವರೇ ಮತ್ತು ಎನ್.ಎಲ್. ಆನಂದ್‍ರವರೇ.

ಇಲ್ಲಿ ಉಪಸ್ಥಿತರಿರುವ ಸಮಸ್ತ ಆತ್ಮೀಯ ಬಂಧುಗಳೇ, ಪತ್ರಿಕಾ ಪ್ರತಿನಿಧಿ ಮಿತ್ರರೇ ಮಾಧ್ಯಮಗಳ ಬಂಧುಗಳೇ.

ಶಿಕ್ಷಣ ಮತ್ತು ಸಾಹಿತ್ಯ ವಲಯಗಳಲ್ಲಿ ಮೇರುಸದೃಶ ವ್ಯಕ್ತಿತ್ವ ಹಾಗೂ ಸಾಧನೆಯನ್ನು ಸಾಬೀತುಪಡಿಸಿರುವ ದಾರ್ಶನಿಕ ಎಸ್. ರಾಧಾಕೃಷ್ಣನ್ ಒಂದು ಕಡೆ ಹೀಗೆ ಹೇಳಿದ್ದಾರೆ. “Not gold but men can make Nation great and strong” ಒಂದು ರಾಷ್ಟ್ರವನ್ನು ಶಕ್ತಿಶಾಲಿಯಾದುದನ್ನಾಗಿ ಮಾಡುವ ಶಕ್ತಿ ಆ ರಾಷ್ಟ್ರದಲ್ಲಿ ಸಿಗುವ ಬಂಗಾರಕ್ಕಿಲ್ಲ. ಆದರೆ, ಆ ರಾಷ್ಟ್ರದಲ್ಲಿರುವ ಜನರಿಗೆ ಇರುತ್ತದೆ. ನಾವು ಇಷ್ಟನ್ನೇ ಯೋಚನೆ ಮಾಡೋಣ. ಸ್ವಾತಂತ್ರ್ಯ ನಂತರದ ರಾಷ್ಟ್ರದ ಎಲ್ಲ ವಿಶ್ವವಿದ್ಯಾಲಯಗಳ, ಕಾಲೇಜುಗಳ ಪ್ರತಿಯೊಬ್ಬ ಪ್ರಾಧ್ಯಾಪಕ, ಪ್ರಾಧ್ಯಾಪಕಿ, ತಮ್ಮತಮ್ಮ ವಿಷಯವನ್ನು ಎಚ್.ಎಂ.ಎಂ.ರವರಷ್ಟು ಪ್ರೀತಿಸುತ್ತಾ, ಅದರ ಬೋಧನೆ, ಸಂಶೋಧನೆ, ಪ್ರಯೋಗದಲ್ಲಿ ಅಪಾರವಾಗಿ ಮಗ್ನವಾಗುತ್ತಾ, ಆ ಬಗ್ಗೆ 1961ರಲ್ಲಿ ಕೃತಿ ರಚನೆಮಾಡಲು ಪ್ರಾರಂಭಿಸಿ, ಈ ಐವತ್ತು ವರ್ಷಗಳೂ ನಿರಂತರವಾಗಿ ಈ ಕಾಯಕವನ್ನು ನಿವೃತ್ತಿಯಾದ ನಂತರವೂ ಕಾಯಾ ವಾಚಾ ಮನಸಾ ನಡೆಸಿಕೊಂಡು ಬರುತ್ತಿರುವಂತೆ ನಡೆಸಿಕೊಂಡು ಬಂದಿದ್ದೇ ಆಗಿದ್ದರೆ, ಅವರಂತೆ ನುಡಿದಂತೆ ನಡೆಯುತ್ತಾ ತಮ್ಮ ಶಿಷ್ಯರ ಮೇಲೆ ಅಪಾರವಾಗಿ ಪ್ರಭಾವ ಬೀರುವುದನ್ನು ಕಾಪಾಡಿಕೊಂಡು ಬಂದಿದ್ದೇ ಆಗಿದ್ದರೆ, ನಮ್ಮ ಶಿಕ್ಷಣ ವಲಯ ಇನ್ನೆಷ್ಟು ಔನ್ನತ್ಯವನ್ನು ಕಾಣುತ್ತಿತ್ತು!

ಭಾರತೀಯ ಸಂಸ್ಕೃತಿಯ ಆಚರಣೆಯ ಅಂಶಗಳಲ್ಲಿ ಒಂದು ಪ್ರಮುಖವಾದ ದೋಷವಿದೆ. ಅದೇನೆಂದರೆ, ವ್ಯಕ್ತಿ ಬದುಕಿದ್ದಾಗ ಕೊಡಬಾರದ ಕಾಟ ಕೊಟ್ಟು, ಎರಡೂ ಕಾಲುಗಳನ್ನು ಹಿಡಿದು ಕೆಳಕ್ಕೆಳೆದು, ಮುಖಮುರಿದು, ತೇಜೋವಧೆಮಾಡಿ, ಹಿತಶತ್ರುಗಳಾಗಿ ಕಾಡಿ, ಅವುಗಳ ನಡುವೆಯೂ ಆ ವ್ಯಕ್ತಿ ಅಪ್ಪೀತಪ್ಪಿ ಒಂದಷ್ಟು ಸಾಧನೆಮಾಡಿ, ಸತ್ತ ನಂತರ, ಆತನ, ಆಕೆಯ ಶವದ ಮೇಲೆ ದೊಡ್ಡ ಗಾತ್ರದ ಹೂವಿನ ಹಾರ ಹಾಕಿ, ಅವನು ಇಂದ್ರ, ಚಂದ್ರ, ಹಾಗೆ ಹೀಗೆ ಎಂಬುದಾಗಿ ಬಗೆಬಗೆಯಾಗಿ ಬಣ್ಣಿಸುವುದು. ಆದರೆ ನಡವಳಿಕೆಗೆ ಅಪವಾದವಾಗಿ ಇವತ್ತಿನ ಈ ಸಮಾರಂಭದ ವ್ಯವಸ್ಥಾಪಕರು ಈ ಸಮಾರಂಭವನ್ನು ಇಷ್ಟು ಅರ್ಥಪೂರ್ಣವಾಗಿ ನಡೆಸುತ್ತಿರುವುದು, ಎಚ್ಎಂಎಂರವರ ಬಗೆಗೆ ಕೃತಿಯನ್ನು ಬರೆದು ಪ್ರಕಟಿಸುತ್ತಿರುವುದು, ಅವರು ಬರೆದ ಕೃತಿಗಳನ್ನು ವಿವಿಧ ಸಂಪುಟಗಳಲ್ಲಿ ಪ್ರಕಟಿಸಿ ಒಂದು ಮಾದರಿ ಪ್ರಯತ್ನ ಮಾಡಿರುವುದಕ್ಕಾಗಿ ಈ ಮಹಾತ್ಕಾರ್ಯದ ಹಿಂದಿರುವ ಎಲ್ಲ ಗೌರವಾನ್ವಿತ ಮನಸ್ಸುಗಳನ್ನು ನಾನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.

ಈ ಬಗೆಯ ಸಮಾರಂಭ, ಸತ್ಕಾರ, ಸನ್ಮಾನ ಪ್ರೊ|| ಎಚ್ಎಂಎಂರವರಿಗೆ, ಅವರಂಥವರಿಗೆ ಬೇಕಿರಲಿ, ಇಲ್ಲದಿರಲಿ ಸಮಾಜಕ್ಕೆ ಬೇಕೇ ಬೇಕು. ಏಕೆಂದರೆ ಇಂತಹ ಸಮಾರಂಭಗಳು ಸಮಾಜದಲ್ಲಿ ಒಂದು ಬಗೆಯ ಧನಾತ್ಮಕ ಸಂದೇಶಗಳನ್ನು ರವಾನಿಸುತ್ತವೆ. ಈ ರೀತಿ ನಡೆದರೆ ಇದುವರೆಗೆ ತಪಸ್ಸಿನೋಪಾದಿಯಲ್ಲಿ ಶ್ರಮವಹಿಸಿ ಸಾಧನೆ ಮಾಡಿದ ವ್ಯಕ್ತಿಯ ಆತ್ಮಕ್ಕೆ ಸಂತೋಷವಾಗುತ್ತದೆ. ಅಂಥವರಿಗೆ ಸಮಾಜ ಅರ್ಹ ಕೃತಜ್ಞತೆಯನ್ನು ಅರ್ಪಿಸಿದಂತಾಗುತ್ತದೆ. ಅವರು ಇನ್ನೂ ಹೆಚ್ಚು ಕೃಷಿ ಮಾಡಲು ಬೆನ್ನುತಟ್ಟಿ ಬೆಂಬಲಿಸಿದಂತಾಗುತ್ತದೆ. ಪ್ರೋತ್ಸಾಹ ನೀಡಿದಂತಾಗುತ್ತದೆ. ಮೇಲಾಗಿ ಇದನ್ನು ಸೂಕ್ಷ್ಮವಾಗಿ ಅರ್ಥಪೂರ್ಣವಾಗಿ ಗಮನಿಸುವ ಕಿರಿಯ ಪೀಳಿಗೆಯವರಿಗೆ, ಹೌದು ನಾನೂ ಎಚ್ಎಂಎಂರವರಂತೆ ಈ ಬಗೆಯ ಕಾರ್ಯಗಳನ್ನು ಮಾಡಿದ್ದೇ ಆದರೆ ನನಗೂ ಒಂದಲ್ಲಾ ಒಂದು ದಿನ ಈ ಬಗೆಯ ಗೌರವ ದೊರಕುತ್ತದೆ ಎಂಬ ಪರಿಕಲ್ಪನೆ ದೊರಕುತ್ತದೆ. ಅವರನ್ನು ಅನುಸರಿಸುವ ಮನಸ್ಸುಗಳು ಹೆಚ್ಚು ಹೆಚ್ಚು ಬೆಳವಣಿಗೆಯಾಗುತ್ತವೆ. ತನ್ಮೂಲಕ ಸಮಾಜದಲ್ಲಿ ಸಜ್ಜನರು, ಸನ್ಮಾರ್ಗಿಗಳು, ಸಾಧಕರು ಅಧಿಕ ಸಂಖ್ಯೆಯಲ್ಲಿ ಲಭ್ಯವಾಗುತ್ತಾರೆ.

ಭಾರತೀಯ ಸಮಾಜಕ್ಕೆ ಒಂದು ಭವ್ಯ ಪರಂಪರೆ ಇದೆ. ಜಗತ್ತಿನ ಇವತ್ತಿನ ಬಹುತೇಕ ಮುಂದುವರಿದ ರಾಷ್ಟ್ರಗಳ ಜನ ಇನ್ನೂ ಬೆತ್ತಲೆ ತಿರುಗುತ್ತಿದ್ದಾಗ, ನಮ್ಮ ರಾಷ್ಟ್ರದ ಜನ ಬೆಂಕಿಕಡ್ಡಿ ಪೊಟ್ಟಣದಲ್ಲಿ ಪಂಚೆ ಇಲ್ಲವೇ ಸೀರೆಯನ್ನು ಮಡಿಚಿ ಇಡುವ ಗುಣಮಟ್ಟದ ಮಸ್ಲಿನ್ ಬಟ್ಟೆಗಳನ್ನು ತಯಾರಿಸುತ್ತಿದ್ದರು. ಜಗತ್ತಿನ ಇವತ್ತಿನ ಬಹುತೇಕ ಮುಂದುವರಿದ ರಾಷ್ಟ್ರಗಳ ಜನ ಇನ್ನೂ ಮರದ ಪೊಟರೆಗಳಲ್ಲಿ, ಕಲ್ಲುಬಂಡೆಗಳ ಗುಹೆಗಳಲ್ಲಿ ವಾಸಮಾಡುತ್ತಿದ್ದಾಗ, ನಮ್ಮ ರಾಷ್ಟ್ರದ ಜನ ಶೌಚಾಲಯ, ಒಳಚರಂಡಿ ಏರ್ಪಾಟಿದ್ದ ಅಂತಸ್ತುಗಳ ಮನೆಗಳಲ್ಲಿ ವಾಸಮಾಡುತ್ತಿದ್ದರು. ಜಗತ್ತಿನ ಇವತ್ತಿನ ಬಹುತೇಕ ಮುಂದುವರಿದ ರಾಷ್ಟ್ರಗಳ ಜನ ಇನ್ನೂ ಅಜ್ಞಾನ, ಅನಕ್ಷರತೆಯಲ್ಲಿ ತೊಳಲಾಡುತ್ತಿದ್ದಾಗ ನಮ್ಮ ರಾಷ್ಟ್ರದ ಜನ ಭಗವದ್ಗೀತೆಯಂತಹ ಅಮೂಲ್ಯ ಸಂಸ್ಕೃತ ಸಾಹಿತ್ಯ ನಿಧಿಯನ್ನು ಸೃಜಿಸಿಕೊಂಡಿದ್ದರು. ನಳಂದ, ತಕ್ಷಶಿಲೆ ಮುಂತಾದ ವಿಶ್ವವಿದ್ಯಾಲಯಗಳನ್ನು ನಡೆಸುತ್ತಿದ್ದರು. ಜಗತ್ತಿನ ಇವತ್ತಿನ ಬಹತೇಕ ಮುಂದುವರಿದ ರಾಷ್ಟ್ರಗಳ ಜನ ಇನ್ನೂ ವೈದ್ಯಕೀಯ ವಿಜ್ಞಾನದ ಹೆಸರು ಕೇಳದೇ ಇದ್ದಾಗ, ನಮ್ಮ ರಾಷ್ಟ್ರದ ಜನ ಚರಕ, ಸುಶ್ರುತ ಮುಂತಾದ ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರುಗಳನ್ನು ಉಳ್ಳವರಾಗಿದ್ದರು.

ಆ ಉತ್ಕೃಷ್ಟ ಭವ್ಯ ಪರಂಪರೆ ಅಂದಿನಿಂದಲೂ ನಿರಂತರವಾಗಿ ಮುಂದುವರಿದಿದ್ದೇ ಆಗಿದ್ದರೆ, ಭಾರತೀಯ ಸಮಾಜದಲ್ಲಿ ಯಾವ ಸಮಾಜಕಾರ್ಯದ ಔಚಿತ್ಯ ಹಾಗೂ ಅಗತ್ಯ ಇರುತ್ತಿರಲೇ ಇಲ್ಲ. ಆದರೆ ದುರದೃಷ್ಟವಶಾತ್ ಪರಿಸ್ಥಿತಿ ಹಾಗಾಗಲಿಲ್ಲ. ಭಾರತ ಒಂದು ಹಿಂದುಳಿದ ರಾಷ್ಟ್ರವಾಯಿತು. ಸಮಾಜಕಾರ್ಯ ವ್ಯಕ್ತಿ ವ್ಯಕ್ತಿಗೆ, ಕುಟುಂಬ ಕುಟುಂಬಕ್ಕೆ, ಸಮುದಾಯ ಸಮುದಾಯಕ್ಕೆ ಅವಶ್ಯಕ ಎಂಬ ಪರಿಸ್ಥಿತಿ ನಿರ್ಮಾಣವಾಯಿತು. ಅದಕ್ಕೆ ಏನು ಕಾರಣ ಎಂಬ ಪ್ರಶ್ನೆಗೆ ಸ್ವಾಮಿ ವಿವೇಕಾನಂದರವರ ಎರಡು ಪ್ರಮುಖ ಕಾರಣಗಳನ್ನು ನೀಡಿದ್ದಾರೆ. ಅವುಗಳೆಂದರೆ ಮೇಲು ಸ್ತರಗಳವರ ದುರಹಂಕಾರ ಮತ್ತು ಕೆಳಸ್ತರಗಳವರ ಕ್ಲೈಬು ಅಥವಾ ಹೇಡಿತನ. ಇವು ಇಂದಿಗೂ ಗಣನೀಯವಾಗಿ ಮುಂದುವರಿಯುತ್ತಿರುವುದು ಭಾರತದ ಒಂದು ದೊಡ್ಡ ದುರಂತವಾಗಿದೆ.

ನಿರ್ಮಲ ಕರ್ನಾಟಕ ಪರಿಕಲ್ಪನೆಯ ರೂವಾರಿ, ಅಂತರಂಗಶುದ್ಧಿ ಬಹಿರಂಗಶುದ್ಧಿಯಾಗಿ ತುಡಿಯುತ್ತಿರುವ ಜೀವ, ಕರ್ನಾಟಕದಲ್ಲಿ ಸಮಾಜಕಾರ್ಯ ಪ್ರಶಿಕ್ಷಣವನ್ನು ಸ್ನಾತಕೋತ್ತರ ಮಟ್ಟದಲ್ಲಿ ಆರಂಭವಾಗಲು ಪ್ರವರ್ತಕಕಾರರಾದ ಎಚ್ಎಂಎಂರವರು ತಾವು ರಚಿಸಿರುವ ದಿಗ್ಭ್ರಾಂತ ಸಮಾಜಕ್ಕೆ ಬೆಳಕಿನ ದಾರಿ: ಸಮಾಜಕಾರ್ಯ ಎಂಬ ಅಪೂರ್ವ ಬೃಹತ್ ಗ್ರಂಥವನ್ನು ಎರಡು ಸಂಪುಗಳಲ್ಲಿ ಪ್ರಕಟಿಸಿ, ಸಮಾಜಕಾರ್ಯ ವಿಷಯದ ಅಧ್ಯಯನ, ಬೋಧನೆ, ಸಂಶೋಧನೆ, ಪ್ರಯೋಗ ಮೊದಲಾದವುಗಳಲ್ಲಿ ತೊಡಗಿರುವವರಿಗೆ, ಆ ನಿಟ್ಟಿನಲ್ಲಿ ತಿಳಿಯ ಬಯಸುವ ಆಸಕ್ತ ಓದುಗರಿಗೆ ಮಹದುಪಕಾರ ಮಾಡಿದ್ದಾರೆ. ಸಮಾಜಕಾರ್ಯ ಯುವ ಬರಹಗಾರರಿಗೆ ಆದರ್ಶಪ್ರಾಯರಾದವರೂ ಮೇಲ್ಪಂಕ್ತಿಯುತರಾದವರೂ ಆಗಿದ್ದಾರೆ.

ಅದನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿ ಒಂದನೇ ಸಂಪುಟಕ್ಕೆ ಅರಿವಿನ ಆಳ ಮತ್ತು ಎರಡನೇ ಸಂಪುಟಕ್ಕೆ ಅನುಷ್ಠಾನದ ಹರವು ಎಂಬುದಾಗಿ ನಾಮಂಕಿತ ಮಾಡಿದ್ದಾರೆ. ಅರಿವಿನ ಆಳ ಸಂಪುಟವು ಸಿದ್ಧಾಂತ ಪ್ರಧಾನವಾಗಿದ್ದು, ಸಮಾಜಕಾರ್ಯ, ಸಮಾಜಕಾರ್ಯದ ಬೆಳವಣಿಗೆಯ ಹಂತಗಳು, ಭಾರತದಲ್ಲಿ ಸಮಾಜಕಾರ್ಯದ ಪರಂಪರೆ, ಸಮುದಾಯ ಸಂಘಟನೆ, ಸಂಶೋಧನೆಯ ಹೆಜ್ಜೆಗಳು, ಅರಿವು-ಆಚರಣೆ, ಅಂತರಂಗ ಬಹಿರಂತ ಶುದ್ಧಿ ಮತ್ತು ಗಾಂಧೀಯ ಅರ್ಥಶಾಸ್ತ್ರ ವಿಭಾಗಗಳನ್ನು ಒಳಗೊಂಡಿದೆ.

ಅನುಷ್ಠಾನದ ಹರವು ಸಂಪುಟವು ಅನುಷ್ಠಾನ ಪ್ರಧಾನವಾಗಿದ್ದು ಕಪ್ಪು ಮೋಡದಲ್ಲೊಂದು ಬೆಳ್ಳಿ ರೇಖೆ, ಕುಟುಂಬ ಯೋಜನೆ ಮತ್ತು ಸುರಕ್ಷಿತ ಮಾತೃತ್ವ ಉಪಕ್ರಮ, ಹುಲ್ಲು-ಬೇರುಗಳ ನಡುವೆ, ಗ್ರಾಮೋನ್ನತಿ, ನಿರ್ಮಲ ಕರ್ನಾಟಕ, ಪಂಚಮುಖಿ ಅಭ್ಯುದಯಮಾರ್ಗ, ಮಾನವ ಸಂಪನ್ಮೂಲ ಸಂವರ್ಧನೆ, ಹೊತ್ತು ಹೋಗದ ಮುನ್ನ ವಿಭಾಗಗಳನ್ನು ಒಳಗೊಂಡಿದೆ.

ಈ ಒಂದೊಂದು ವಿಭಾಗದಲ್ಲಿಯೂ, ಸಮಾಜಕಾರ್ಯವು ಭಾರತದಲ್ಲಿ ನೆಲೆಯಾಗಿ ಉಳಿಯಬೇಕಾದರೆ, ಅದಕ್ಕೆ ಸಂಬಂಧಪಟ್ಟ ತತ್ತ್ವಗಳನ್ನು ಯಾವ ವಿಧವಾಗಿ ಕಾರ್ಯರೂಪಕ್ಕೆ ತರಬಹುದು, ಯಾವ ಯಾವ ಕ್ಷೇತ್ರಗಳಲ್ಲಿ ಸಮಾಜಕಾರ್ಯವನ್ನು ಯಶಸ್ವಿಗೊಳಿಸಬಹುದು ಎಂಬುದನ್ನು ಸೃಜನಶೀಲ ಸಾಹಿತ್ಯದೋಪಾದಿಯಲ್ಲಿ ಆಕರ್ಷಕವಾಗಿ ಚಿತ್ರಿಸಿದ್ದಾರೆ. ಬೇರೆಯ ವೃತ್ತಿಗಳಿಗೆ ಸಮಗ್ರತೆ ಎಂಬುದು ಹಿನ್ನೆಲೆಯಾಗಿದ್ದರೆ, ಸಮಾಜಕಾರ್ಯಕ್ಕೆ ಸಮಗ್ರತೆಯೇ ಪ್ರಧಾನವಾಗಿರುತ್ತದೆ ಎಂಬುದನ್ನು ಪ್ರಬಲವಾಗಿ ಪ್ರತಿಪಾದಿಸಿ ಕಟ್ಟುತ್ತಿರುವ ಈ ಕಾಲದಲ್ಲಿ, ಅವುಗಳಿಗಿಂತಲೂ ಮಿಗಿಲಾದ ಮನಸ್ಸು ಕಟ್ಟುವ ಕೈಂಕರ್ಯ ಮಾಡಲು ಕರೆಕೊಟ್ಟಿರುವುದು, ನಿಜವಾದ ನೆಲೆಗಟ್ಟಿನಲ್ಲಿ ಮಾನವ ಸಂಪನ್ಮೂಲ ಸಂರ್ವರ್ಧನೆಗಾಗಿ ಸಾಹಿತ್ಯ ರಚಿಸಿರುವುದು ತುಂಬಾ ಅರ್ಥಪೂರ್ಣವಾಗಿದೆ. ತನ್ಮೂಲಕ ಸಮಾಜದಲ್ಲಿ ದಿಗ್ಭ್ರಾಂತಿ ಉಂಟುಮಾಡುತ್ತಿರುವ ರೀತಿ ಬಹಳವಾಗಿ ಕಂಡುಬರುತ್ತಿರುವ ಭ್ರಷ್ಟಾಚಾರ, ಭಯೋತ್ಪಾದನೆ ಮೊದಲಾದ ಸಾಮಾಜಿಕ ಸಮಸ್ಯೆಗಳನ್ನು ಹೋಗಲಾಡಿಸಲು, ಮಕ್ಕಳ ಕಲ್ಯಾಣ, ಮಹಿಳಾ ಕಲ್ಯಾಣ, ಹಿಂದುಳಿದವರ ಕಲ್ಯಾಣ, ವಿಕಲಚೇತನರ ಕಲ್ಯಾಣ, ವೃದ್ಧರ ಕಲ್ಯಾಣ, ಬುಡಕಟ್ಟುಗಳರವರ ಕಲ್ಯಾಣ ಮೊದಲಾದವುಗಳನ್ನು ಆದಷ್ಟು ಬೇಗ ಸಾಧಿಸಲು, ದರಿದ್ರ ದೇವೋಭವ, ದೀನ ದೇವೋಭವ, ಪಾಪಿ ದೇವೋಭವ ಮುಂತಾದವುಗಳನ್ನು ಅನುಷ್ಠಾನಗೊಳಿಸಲು ಕರೆಕೊಟ್ಟಿರುವುದು ತುಂಬಾ ಮೌಲ್ಯಯುತವಾದುದಾಗಿದೆ.

ಈ ವಿಶಿಷ್ಟ ಸಂದರ್ಭದಲ್ಲಿ ನಾನು ಈ ವೇದಿಕೆಯಿಂದ ವಿನಂತಿ ಮಾಡಲು ಅಪೇಕ್ಷಿಸುವುದೇನೆಂದರೆ, ಎಚ್ಎಂಎಂರವರ ಬಗೆಗಿನ ಕೃತಿ ಮತ್ತು ಅವರ ದಿಗ್ಭ್ರಾಂತ ಸಮಾಜಕ್ಕೆ ಬೆಳಕಿನ ದಾರಿ: ಸಮಾಜಕಾರ್ಯ ಬೃಹತ್ ಸಂಪುಟಗಳನ್ನು ಆಸಕ್ತರು ಕೊಂಡು ಓದಬೇಕಾಗಿ, ಅವಕಾಶವಿರುವವರು ವಿವಿಧ ಹಂತಗಳ ಸಾರ್ವಜನಿಕ ಗ್ರಂಥಾಲಯಗಳಿಗೆ, ಕಾಲೇಜುಗಳ, ವಿಶ್ವವಿದ್ಯಾಲಯ ಗ್ರಂಥಾಲಯಗಳಿಗೆ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಕೊಂಡು ಹಾಕಿಸಿ, ತನ್ಮೂಲಕ ಇವು ಆದಷ್ಟು ಬೇಗ ಸಹಸ್ರಾರು ಸಂಖ್ಯೆಯಲ್ಲಿ ಪುನರ್ಮುದ್ರಣಗೊಂಡು ಕೃತಿಗಳ ಸದುಪಯೋಗವಾಗಲಿ ಎಂಬುದಾಗಿ ಆಶಿಸುತ್ತೇನೆ.

ಸದ್ದುಗದ್ದಲವಿಲ್ಲದೆ, ಪ್ರದರ್ಶನ, ಪ್ರಚಾರಗಳ ಆಮಿಷಕ್ಕೊಳಗಾಗದೆ, ಕೀರ್ತಿ ಶನಿಯ ಬೆನ್ನು ಹತ್ತದೆ. ಆತ್ಮ ಗೌರವವನ್ನು ಉಳಿಸಿಕೊಂಡು, ತಮ್ಮ ಪಾಲಿಗೆ ಬಂದದನ್ನು ಪಂಚಾಮೃತವೆಂದು ಸ್ವೀಕರಿಸುತ್ತಾ, ಕಾಯಕ ಮತ್ತು ಜನಸೇವೆಯೇ ಲಿಂಗಾಂಗ ಸಾಮರಸ್ಯಕ್ಕೆ ಸೇತುವೆಯೆಂದು ಬಗೆಯುತ್ತಾ, ಪರೋಪಕಾರ ಬುದ್ಧಿ, ಸಮಾಜಸೇವೆ, ಗ್ರಾಮೋದ್ಧಾರ ಕಾತರತೆ, ವಿನಯ, ಸಜ್ಜನಿಕೆ ನಿಷ್ಕಪಟ ಮನೋಭಾವವುಳ್ಳ ಒಬ್ಬ ಮಾದರಿ ಹಿರಿಯ ಅಣ್ಣನಾಗಿ ನಡೆದುಕೊಳ್ಳುತ್ತಿರುವ ಎಚ್ಎಂಎಂರವರು ಅನುಗಾಲ ಇದೇ ರೀತಿ, ಇನ್ನೂ ಅತಿಶಯವಾಗಿ  ನಾಡಿಗೆ  ಸೇವೆಸಲ್ಲಿಸುತ್ತಾ ಇನ್ನೂ ಮಿಗಿಲಾದ ಪದವಿ ಪ್ರಶಸ್ತಿಗಳನ್ನು ಯಶಸ್ಸುಗಳನ್ನು ಪಡೆಯುತ್ತಾ ನೂರ್ಕಾಲ ಸಕಲ ಸನ್ಮಂಗಳೊಡನೆ ಬಾಳುವಂತಾಗಲಿ ಎಂಬುದಾಗಿ ತುಂಬು ಹೃದಯದಿಂದ ಹಾರೈಸುತ್ತೇನೆ.
​
ಅಪೂರ್ವ ಸಂದರ್ಭದಲ್ಲಿ ನನ್ನನ್ನು ಬರಮಾಡಿಕೊಂಡು, ಇಷ್ಟು ಮಾತುಗಳನ್ನಾಡಲು ಅವಕಾಶ ಮಾಡಿಕೊಟ್ಟ ಎಲ್ಲ ವ್ಯವಸ್ಥಾಪಕ ಬಂಧುಗಳಿಗೆ, ವೇದಿಕೆಯಲ್ಲಿರುವ ಗಣ್ಯರಿಗೆ, ಇಲ್ಲಿ ಸೇರಿರುವ ಸಮಸ್ತ ಆತ್ಮೀಯ ಬಂಧುಭಗಿನಿಯರಿಗೆ ನನ್ನ ಅನಂತ ಧನ್ಯವಾದಗಳನ್ನು ಅರ್ಪಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ. ಜೈ ಜಗತ್.
 
(ಸ್ಥಳ: ಸೆಂಟ್ರಲ್ ಕಾಲೇಜು, ಸೆನೆಟ್ ಹಾಲ್, ಬೆಂಗಳೂರು ದಿನಾಂಕ: 10.07.201)
-ಪ್ರೊ||ಕೆ.ಭೈರಪ್ಪ
ಖ್ಯಾತ ಸಮಾಜಶಾಸ್ತ್ರಜ್ಞ
0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
+91-9980066890
+91-8310241136
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)