SKH
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
SKH

ಮಾದರಿ ಗ್ರಾಮಕ್ಕೆ ಸ್ಥಳೀಯ ಸರ್ಕಾರಗಳು

7/17/2017

0 Comments

 
ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಪರಿಕಲ್ಪನೆಯು ದೂರದೃಷ್ಟಿಯ ಪ್ರತೀಕ. ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಆಡಳಿತದಲ್ಲಿ ಪಾಲ್ಗೊಳ್ಳುತ್ತಾ, ತಮ್ಮ ಅಗತ್ಯಗಳನ್ನು ತಾವೇ ಒಟ್ಟಾಗಿ ಪೂರೈಸಿಕೊಳ್ಳಬೇಕೆಂಬ ಉದ್ದೇಶದಿಂದ, ಸ್ಥಳೀಯ ಸರ್ಕಾರಗಳೆಡೆ ಹೆಚ್ಚು ಒಲವನ್ನು ತೋರಿದರು. ಜನರ ಸಹಭಾಗಿತ್ವವೇ ನಿಜವಾದ ಅಭಿವೃದ್ಧಿಯೆಂಬುದನ್ನು ನಂಬಿ, ವಿದ್ಯಾವಂತರನ್ನು ಈ ಕೆಲಸಕ್ಕೆ ತೊಡಗಿಸುವ ಕಾರ್ಯವನ್ನು ಗಾಂಧೀಜಿಯೋಪಾದಿಯಾಗಿ ವಿವೇಕಾನಂದ, ಜೆ.ಪಿ.ವಿನೋಬಾ, ಅಂಬೇಡ್ಕರ್ರೆಲ್ಲರೂ ಒಮ್ಮತದಿಂದ ಪ್ರಯತ್ನಿಸಿದರು. ಈ ನಿಟ್ಟಿನಲ್ಲಿ ಹಲವು ಪ್ರಯೋಗಗಳನ್ನು ತಾವೂ ನಡೆಸಿ, ಇತರರಿಗೂ ಪ್ರೋತ್ಸಾಹಿಸಿರುವುದು ಆ ಹಿರಿಯರ ಹಿರಿಮೆಯನ್ನು ಸಾರುತ್ತದೆ. ಇವರ ನಡೆ ನುಡಿಗಳಿಂದ ಪ್ರೇರಣೆ ಹೊಂದಿ, ತಮ್ಮ ಗ್ರಾಮ ಪಂಚಾಯ್ತಿಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಹಲವು ಉದಾಹರಣೆಗಳಲ್ಲಿ, ಪಂಚಾಯ್ತಿ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಂಡು, ಹಳ್ಳಿಯನ್ನು ಒಗ್ಗೂಡಿಸಿ, ಸಾಮಾಜಿಕ ಬದಲಾವಣೆಯನ್ನು ತಂದ, ತಮಿಳುನಾಡಿನ ಇಳಂಗೋ ರಾಮಸ್ವಾಮಿಯವರ ಕುತುಂಬಾಕಂ ಗ್ರಾಮ ವಿಶೇಷ. ಅಲ್ಲಿನ ಪ್ರಯೋಗಗಳ ಬಗೆಗಿನ ಪಕ್ಷಿನೋಟ ಇಲ್ಲಿದೆ.
ಅದು ಜನವರಿ 3, 2010 ರ ಭಾನುವಾರ, ದಕ್ಷಿಣ ಭಾರತದ ಮಾದರಿ ಗ್ರಾಮ ಕುತುಂಬಾಕಂನನ್ನು ಅಧ್ಯಯನ ಮಾಡಲು ಅಲ್ಲಿಗೆ ತೆರಳಿದ್ದೆ. ಅಲ್ಲಿಂದ ಕಲಿತು ನಮ್ಮಲ್ಲಿ ಮಾದರಿ ವೃತ್ತಿಪರ ಸಮಾಜಕಾರ್ಯಕರ್ತರನ್ನು ತಯಾರು ಮಾಡುವುದು ನನ್ನ ಕನಸಾಗಿತ್ತು. ಚೆನ್ನೈನಿಂದ 30 ಕಿ.ಮೀ. ದೂರದಲ್ಲಿನ ಕುತುಂಬಾಕಂ ನೋಡಲಿಕ್ಕೆ ಹೋದೆ. ಪುಟ್ಟ ಗ್ರಾಮವಾದರೂ ಗ್ರಾಮೀಣ ಅಭಿವೃದ್ಧಿಯೆಡೆಗೆ ನಡೆದಿರುವ ಪ್ರಯೋಗಗಳು; ಅದರಲ್ಲೂ ಮುಖ್ಯವಾಗಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಳಸಿಕೊಂಡು, ಇಡೀ ಗ್ರಾಮವನ್ನು ಕುಡಿತಮುಕ್ತ, ಸ್ವಚ್ಛ, ವಿದ್ಯಾವಂತ, ಸಹಬಾಳ್ವೆ ಮಾಡಿರುವುದು ಸಾಧನೆಯೇ ಸರಿ. ಒಂದು ಪಂಚಾಯ್ತಿ, ಅಲ್ಲಿನ ಸದಸ್ಯರು ಮನಸ್ಸು ಮಾಡಿದರೆ, ಏನೆಲ್ಲಾ ಮಾಡಬಹುದೆಂಬುದಕ್ಕೆ ಇಲ್ಲೊಂದು ಒಳ್ಳೆಯ ಉದಾಹರಣೆಯಿದೆ.

ಈ ಎಲ್ಲಾ ಬೆಳವಣಿಗೆಗಳಿಗೆ ಪ್ರಮುಖ ಕಾರಣಕರ್ತ ಶ್ರೀ.ರಾಮಸ್ವಾಮಿ ಇಳಂಗೋ ಅವರು. ಮೂಲತಃ ಇದೇ ಗ್ರಾಮದವರಾದ ಇಳಂಗೋರವರು ಊರಿನಲ್ಲೆಲ್ಲಾ ತಲೈವರ್ (ಅಧ್ಯಕ್ಷರು) ಎಂತಲೇ ಪ್ರಸಿದ್ಧಿ. ಸರಳ, ಸಜ್ಜನ ಹಿಂದುಳಿದ ಕುಟುಂಬಕ್ಕೆ ಸೇರಿದ್ದರೂ ತಾನು ಪಡೆದ ಶಿಕ್ಷಣದಿಂದ ಸಂಸ್ಕಾರ ಹೊಂದಿ ಇತರರಿಗೆ ಮಾದರಿಯಾದದ್ದು, ಈ ನಿಟ್ಟಿನಲ್ಲಿ ಅವರು ಅನುಭವಿಸಿದ ಕಷ್ಟ ನಷ್ಟಗಳು ಬರವಣಿಗೆಗೆ ನಿಲುಕದ್ದು.

ಕೆಮಿಕಲ್ ಇಂಜಿನಿಯರಿಂಗ್ ಪದವೀಧರರಾದ ಇಳಂಗೋರವರು ಪ್ರತಿಷ್ಠಿತ ಕೇಂದ್ರೀಯ ಎಲೆಕ್ಟ್ರೋ ರಾಸಾಯನಿಕ ಸಂಶೋಧನಾ ಕೇಂದ್ರ (CECRI) ದಲ್ಲಿ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದವರು. ಒಳ್ಳೆಯ ಸಂಬಳ, ಹೆಂಡತಿ, ಮಗಳ ಜೊತೆ ನೆಮ್ಮದಿಯಾಗಿ ಜೀವನ ನಿರ್ವಹಿಸಬೇಕಿದ್ದ ಇಳಂಗೋರವರಿಗೆ ಪ್ರತಿನಿತ್ಯ ರಾತ್ರಿ ಮಲಗುವಾಗ ತನ್ನ ಹುಟ್ಟೂರಿನ ಗ್ರಾಮಸ್ಥರಲ್ಲಿದ್ದ ಕುಡಿತ, ಅಸ್ಪೃಶ್ಯತೆ, ಮಹಿಳಾ ಶೋಷಣೆ, ಜಾತಿ ಆಧಾರಿತ ಹಿಂಸೆ, ಬಾಲ್ಯವಿವಾಹ, ನಿರುದ್ಯೋಗ, ಹಸಿವು ಇವೇ ಮೊದಲಾದ ಸಮಸ್ಯೆಗಳು ಮನಸ್ಸಿನಲ್ಲಿ ಸುನಾಮಿಯನ್ನೆಬ್ಬಿಸುತ್ತಿದ್ದವು. ನಮ್ಮ ಜನರು ಇಷ್ಟೆಲ್ಲಾ ಕಷ್ಟಪಡುತ್ತಿರುವಾಗ, ಅಲ್ಲಿಯೇ ಬಾಲ್ಯ ಕಳೆದು, ಅವರೊಂದಿಗೆ ಕೂಡಿಬಾಳಿ, ಕಲಿತು ಈಗ ವಿದ್ಯಾವಂತನೆಂಬ ಒಂದೇ ಕಾರಣದಿಂದ ಅಲ್ಲಿಂದ ಹೊರಬಂದಿರುವುದು ಸರಿಯೇ? ನನ್ನಿಂದ ಅವರ ಜೀವನದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲವೇ? ಇವೇ ಮೊದಲಾದ ಗೊಂದಲಗಳಿಗೆಲ್ಲಾ ಒಂದು ದಿನ ಉತ್ತರ ಸಿಕ್ಕಿತು.

ನನ್ನ ಹಳ್ಳಿಗೆ ಹಿಂದಿರುಗಬೇಕು. ಅವರ ಜೊತೆಯಲ್ಲಿರಬೇಕು. ಅವರ ಕಣ್ಣೀರೊರೆಸಬೇಕು.

ಅದು 1994, ‘ONGC’ (Oil and Natural Gas Corporation) ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಮಡದಿ, ಶಾಲೆಯಲ್ಲಿ ಓದುತ್ತಿದ್ದ ಮಗಳನ್ನು ಚೆನ್ನೈನಲ್ಲೇ ಬಿಟ್ಟು ಇಳಂಗೋ ನೇರವಾಗಿ ತನ್ನ ಹಳ್ಳಿ ಕುತುಂಬಾಕಂಗೆ ಬಂದರು. ಅಲ್ಲಿಂದ ಅವರ ಜೀವನದ ನಿಜವಾದ ಸವಾಲುಗಳು ಪ್ರಾರಂಭವಾಗುತ್ತವೆ. ಹಳ್ಳಿ ತಾನು ಅಂದುಕೊಂಡಷ್ಟು ಸುಲಭವಲ್ಲವೆಂದು ಬಹುಬೇಗನೆ ಮನದಟ್ಟಾಯಿತು. ಆದರೆ, ಅಂದುಕೊಂಡದ್ದು ಮಾಡದೇ ಹೊರಹೋಗುವುದಿಲ್ಲವೆಂಬ ಪ್ರತಿಜ್ಞೆ ಅವರನ್ನು ಹಳ್ಳಿಯಲ್ಲಿ ಹಿಡಿದು ಕೂರಿಸಿತು. ಹಳ್ಳಿಯಲ್ಲಿ ಹೇಗೆ ಜನರೊಂದಿಗೆ ಬೆರೆಯುವುದು, ಅಭಿವೃದ್ಧಿಯ ಕಿಚ್ಚನ್ನು ಹೇಗೆ ಹಚ್ಚುವುದು, ಜನರನ್ನು ಒಗ್ಗೂಡಿಸುವುದಾರೂ ಹೇಗೆ ಎಂಬ ಪ್ರಶ್ನೆಗಳಿಗೆಲ್ಲ ಪ್ರತಿನಿತ್ಯದ ಅನುಭವದ ಪಾಠ ಉತ್ತರವಾಗಿತ್ತು. ಅವರೊಂದಿಗೆ ಅವರಾಗಿರಬೇಕು ಎಂಬ ನಿಜ ಅತಿ ಬೇಗ ಮನದಟ್ಟಾಯಿತು.

ಇದೇ ಸಂದರ್ಭಕ್ಕೆ ಸಂಜೀವಿನಿಯಾಗಿ ಅವರ ಕೈಗೆ ಸಿಕ್ಕಿದ್ದೆಂದರೆ ಆಗತಾನೆ ಶಿಶುವಸ್ಥೆಯಲ್ಲಿ ರಾಜ್ಯ ಪ್ರವೇಶಿಸಿದ ಪಂಚಾಯತ್ ರಾಜ್ ಅಧಿನಿಯಮ-1994. ಸ್ಥಳೀಯ ಸಂಸ್ಥೆಗಳಿಗೆ ಸಂವಿಧಾನದ ನೆಲೆಯನ್ನು ಕಲ್ಪಿಸಿ, ಸಬಲೀಕರಣಗೊಳಿಸುವ ಸದುದ್ದೇಶ ಹೊಂದಿ ಹಲವು ರಾಜ್ಯಗಳು ಪಂಚಾಯತಿ ವ್ಯವಸ್ಥೆಗೆ ಸೂಕ್ತ ತಿದ್ದುಪಡಿ ಮಾಡಿ ಅಳವಡಿಸಿಕೊಂಡು, ತಮಿಳುನಾಡು ಕೂಡ ಹಿಂದೆ ಬೀಳದೆ ತ್ವರಿತವಾಗಿ ಪರಿಣಾಮಕಾರಿಯಾಗಿ ಅಳವಡಿಸುವ ಸಂಕಲ್ಪ ಮಾಡಿತು.

ಇದೇ ಆಯುಧವನ್ನು ಬಳಸಿಕೊಂಡು ಏಕೆ ಅಭಿವೃದ್ಧಿಗೆ ಅಡಿಗಲ್ಲು ಹಾಕಬಾರದೆಂಬ ಯೋಚನೆ ಇಳಂಗೋರಲ್ಲಿ ಮೊಳೆಯಿತು. ಹೌದು. ಪಂಚಾಯತಿ ವ್ಯವಸ್ಥೆಯಿಂದಲೇ ಅಭಿವೃದ್ಧಿ ಸಾಧ್ಯ, ಎಂದು ದೃಢವಾಗಿ ನಂಬಿ 1996ರಲ್ಲಿ ಕುತುಂಬಾಕಂ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿದರು. ಸ್ಪರ್ಧೆ ಸಿದ್ಧರಾದರೂ, ಪ್ರಚಾರ ಮಾಡಬೇಡವೇ? ತನ್ನ ವಿರುದ್ಧವಾಗಿ ನಿಂತಿದ್ದವರೆಲ್ಲ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಜನರಿಗೆ ಆಸೆ, ಆಮಿಷ ತೋರಿಸಿ ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದರು. ಆದರೆ, ಇಳಂಗೋ ಮಾತ್ರ ಜನರೊಂದಿಗೆ ಹಳ್ಳಿಯ ಸಮಸ್ಯೆಗಳ ಬಗ್ಗೆ, ಮುಂದಿನ ಅಭಿವೃದ್ಧಿಯ ರೂಪುರೇಷೆಗಳ ಬಗ್ಗೆ ಚರ್ಚಿಸುತ್ತಿದ್ದರು. ಹಲವು ಯುವಕರು ಇವರ ವ್ಯಕ್ತಿತ್ವಕ್ಕೆ ನಿಃಸ್ವಾರ್ಥತೆಗೆ ಸೋತು ಶಿಷ್ಯರಾಗಿದ್ದರು. ಮಹಿಳೆ, ವೃದ್ಧರಾದಿಯಾಗಿ ಪ್ರತಿಯೊಬ್ಬರೂ ತಮ್ಮ ಸಮಸ್ಯೆಗಳನ್ನು ಇವರ ಬಳಿ ಹೇಳಿಕೊಂಡು ಪರಿಹರಿಸಿಕೊಳ್ಳುತ್ತಿದ್ದುದರಿಂದ ಸಹಜವಾಗಿಯೇ ಅವರು ಇವರೇ ನಮ್ಮ ನಾಯಕ ಎಂದು ನಿರ್ಧರಿಸಿದರು. ಕೊನೆಗೂ ಪಂಚಾಯಿತಿ ಚುನಾವಣೆಯ ಫಲಿಂತಾಂಶ ಬಂತು.

ಇಳಂಗೋ ರಾಮಸ್ವಾಮಿ ಜಯಶೀಲರಾದರು. ಅವರು ಸ್ವಾಭಾವಿಕವಾಗಿ ಪಂಚಾಯಿತಿ ಅಧ್ಯಕ್ಷರೇ ಆದರು. ಮುಂದೆ? ಸಮಸ್ಯೆ ಇದ್ದದ್ದೇ ಅಲ್ಲಿ. ಹಿಂದಿನಿಂದ ಬಂದಿದ್ದ ಜಾತಿ, ಪಾರಂಪರಿಕ ರಾಜಕಾರಣ, ಕೊಳಕು ರಾಜಕೀಯ, ಅನಕ್ಷರಸ್ಥ, ತಿಳುವಳಿಕೆ ಇಲ್ಲದ ಸದಸ್ಯರು, ಜಿಗಟು ವ್ಯವಸ್ಥೆ ಇವೆಲ್ಲವುಗಳ ಮಧ್ಯೆ ಅಭಿವೃದ್ಧಿ ಎಂಬ ಕನಸನ್ನು ಹೇಗೆ ನನಸು ಮಾಡುವುದು? ಧೃತಿಗೆಡದ ಇಳಂಗೋ, ದೂರದೃಷ್ಟಿಯಿಂದ ಜನರೊಂದಿಗೆ ಕೂಡಿ ಗ್ರಾಮಸಭೆಯ ಮುಖೇನ ಐದು ವರ್ಷದ ಅಭಿವೃದ್ಧಿ ಯೋಜನೆ (1996-2001)ಯೊಂದನ್ನು ತಯಾರಿಸಿದರು. ಇದರಲ್ಲಿ ಹಳ್ಳಿಯ ಮೂಲಭೂತ ಸೌಲಭ್ಯಗಳು- ರಸ್ತೆ, ಚರಂಡಿ, ವಿದ್ಯುದೀಕರಣ, ಶೌಚಾಲಯ ಇವೇ ಮೊದಲಾದ ಅಂಶಗಳೆಡೆಗೆ ಹೆಚ್ಚು ಗಮನವಿತ್ತರು. ಈ ನಿಟ್ಟಿನಲ್ಲಿ ಅವರ ಇಂಜಿನಿಯರಿಂಗ್ ಪದವಿ ಬಳಕೆ ಬಂದದ್ದೆಂದರೆ, ಮಾಡುವ ಕೆಲಸವನ್ನು ಚೊಕ್ಕಟವಾಗಿ, ಲಭ್ಯವಿರುವ ಸ್ಥಳೀಯ ಸಂಪನ್ಮೂಲ ಬಳಸಿ, ಜನರೇ ನಾಯಕತ್ವ ವಹಿಸಿ ಮಾಡುವಂತೆ ಮಾಡಿದ್ದು. ಉದಾ: ಅದುವರೆಗೆ ಹಳ್ಳಿಯ ರಸ್ತೆ ಕಾಮಗಾರಿಯನ್ನು ಯಾವುದೋ ಗ್ರಾಮದ ವ್ಯಕ್ತಿಗೆ ಗುತ್ತಿಗೆ ನೀಡುತ್ತಿದ್ದರು. ಆತ ಕೆಲಸದ ಉತ್ಕೃಷ್ಟತೆಗೆ ಗಮನ ನೀಡದೆ, ತನಗೆ ಸಿಗುವ ಹಣದ ಕಡೆಗೆ ಗಮನ ನೀಡಿ ಶ್ರಮಿಕರನ್ನು ಹೊರಗಡೆಯಿಂದ ಕರೆತಂದು, ಕಚ್ಚಾ ಕೆಲಸ ಮಾಡಿ ಹೋಗುತ್ತಿದ್ದ. ಜನರು ಇದಕ್ಕೂ ನಮಗೂ ಸಂಬಂಧವಿಲ್ಲವೆಂದು ಸುಮ್ಮನಿರುತ್ತಿದ್ದರು. ಆದರೆ, ಇಳಂಗೋರವರು ಹಾಗಲ್ಲ, ಊರಿಗೆ ಸಂಬಂಧಿಸಿದ ಕಾಮಗಾರಿಯನ್ನು ಊರಿನಲ್ಲೇ ಉತ್ತಮ ಜನರಿಗೆ ನೀಡುತ್ತಿದ್ದರು. ಶ್ರಮಿಕರೂ ಹಳ್ಳಿಯವರೇ. ಊರಿನ ಹಿರಿಯರೆಲ್ಲರೂ ನಿಂತು ಎಷ್ಟು ಮರಳು, ಜೆಲ್ಲಿ, ಸಿಮೆಂಟ್ ಹಾಕಬೇಕು, ಅಕಸ್ಮಾತ್ ಸಾಲದಾದರೆ, ತಮ್ಮದೇ ಮನೆಯ ಕಚ್ಚಾ ವಸ್ತುಗಳನ್ನು ಕೊಡುತ್ತಾರೆ. ಎಲ್ಲವೂ ಗ್ರಾಮಮಯ. ಕಣ್ಣಾಮುಚ್ಚಾಲೆ ಆಟಗಳೆಲ್ಲ ನಡೆಯುವುದಿಲ್ಲ.

ಅಧಿಕಾರ ವಹಿಸಿಕೊಂಡ ಎರಡು ವರ್ಷದಲ್ಲೇ ಪ್ರತಿ ಮನೆಗೆ ವಿದ್ಯುದೀಕರಣದ ವ್ಯವಸ್ಥೆ ಮಾಡಿದರು, ಕಚ್ಚಾ ರಸ್ತೆಗಳನ್ನು ಸಿಮೆಂಟ್ ರಸ್ತೆಗಳನ್ನಾಗಿ ಪರಿವರ್ತಿಸಿದರು, ಚರಂಡಿಗಳನ್ನೇ ಕಾಣದಿದ್ದ ಕೊಳಕು ಗ್ರಾಮಕ್ಕೆ ಅತಿ ವ್ಯವಸ್ಥಿತ ಚರಂಡಿ ವ್ಯವಸ್ಥೆ ಮಾಡಿದ್ದು ಇವರ ಹಿರಿಮೆ.

ಈ ಮೇಲಿನ ಕೆಲಸಕಾರ್ಯಗಳೆನ್ನೆಲ್ಲ ಎಲ್ಲ ಪಂಚಾಯಿತಿ ಸದಸ್ಯರನ್ನು ಸೇರಿಸಿಕೊಂಡು ಒಟ್ಟಾಗಿ ಮಾಡಿದ ಕೆಲಸ, ಇವರ ಮುಂದಿದ್ದ ಮುಖ್ಯ ಸವಾಲೆಂದರೆ, ಪಂಚಾಯ್ತಿ ಸದಸ್ಯರನ್ನು ಸಬಲೀಕರಣಗೊಳಿಸುವುದು ಹೇಗೆ? ಅದಕ್ಕಾಗಿ ಅವರು ಹಾಕಿಕೊಂಡ ಮೊದಲ ಯೋಜನೆಯೆಂದರೆ, ದೇಶದ ವಿವಿಧ ಮಾದರಿ ಗ್ರಾಮಗಳ ಭೇಟಿ. ರಿಲಿಗನ್ ಸಿಧಿ-ಮಹಾರಾಷ್ಟ್ರ, ಚಿತ್ರಕೂಟ-ಮಧ್ಯಪ್ರದೇಶ, ಆಲ್ಫಾರ್-ರಾಜಸ್ಥಾನ, ವಾರ್ದಾ-ಗುಜರಾತ್ ಹೀಗೆ ಹಲವು ಮಾದರಿ ಗ್ರಾಮಗಳನ್ನು ಅಧ್ಯಯನ ನಡೆಸಿ, ಸದಸ್ಯರಲ್ಲಿ ನಮ್ಮ ಗ್ರಾಮವೂ ಹೀಗೆ ಕಾಣಬಾರದೇಕೆ ಎಂಬ ಕನಸನ್ನು ಬಿತ್ತಿದರು. ಸದಸ್ಯರೆಲ್ಲರೂ, ಸಹಕಾರ ನೀಡಲು ನಿರ್ಧರಿಸಿದರು.

ತಮ್ಮ ಗ್ರಾಮಗಳಲ್ಲಿ ಕುಡಿತವನ್ನು ಜನರ ಮುಂದಾಳತ್ವದಲ್ಲಿ ನಿಲ್ಲಿಸಿದ್ದು, ಭ್ರಷ್ಟಾಚಾರವೆಂಬ ಭೂತವನ್ನು ಸುಡಲು ಜನರನ್ನು ಸಶಕ್ತೀಕರಣಗೊಳಿಸಿದ್ದು, ಎಲ್ಲ ಮಕ್ಕಳನ್ನು ಶಾಲೆಗೆ ಕರೆತಂದರು. ಈ ನಿಟ್ಟಿನಲ್ಲಿ ಕೈಗೊಂಡ ಬಹುಮುಖ್ಯ ಕ್ರಮಗಳು. ಜನಜಾಗೃತಿ ಎಂಬುದು ಈ ಹಂತದಲ್ಲಿ ಬಹುಮುಖ್ಯ ಪಾತ್ರವಹಿಸಿದ್ದನ್ನು ಇಳಂಗೋ ಸ್ಮರಿಸುತ್ತಾರೆ.

ಮಾದರಿ ಗ್ರಾಮಗಳ ಭೇಟಿಯಿಂದ ಹಲವು ಪಂಚಾಯಿತಿ ಸದಸ್ಯರು ತಮ್ಮ ಗಮನ ಇತ್ತ ಹರಿಸಿದರಷ್ಟೆ. ಆದರೆ, ಅವರಲ್ಲಿ ಸಾಕಷ್ಟು ಗೊಂದಲ, ಅಶಕ್ತತೆಗಳು ಎದ್ದು ಕಾಣುತ್ತಿದ್ದವು. ಇವುಗಳನ್ನು ಮನಗಂಡ ಇಳಂಗೋ ಪಂಚಾಯಿತಿ ಸದಸ್ಯರ ಸಾಮಥ್ರ್ಯ ಅಭಿವೃದ್ಧಿಗಾಗಿ Trust for Village Self Governance (TVSG) ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಇಲ್ಲಿ ಹಲವು ಪಂಚಾಯಿತಿಗಳಿಂದ ಬರುವ ಸದಸ್ಯರು ತಮ್ಮ ಅನುಭವ ಹಂಚಿಕೊಂಡು, ಕಲಿಯಲು, ಕಲಿಸಲು ಮತ್ತು ವಿವಿಧ ತಜ್ಞರು ಅವರಿಗೆ ತರಬೇತಿ ನೀಡಲು ಇದು ವೇದಿಕೆ ಆಯಿತು. ಆಗ ನಿಜವಾದ ಅಭಿವೃದ್ಧಿಯ ಮಂತ್ರ ಸದಸ್ಯರಿಗೆ ಅರಿವಾಯಿತು.

ಇವುಗಳ ಜೊತೆಜೊತೆಯಲ್ಲೇ ಇಳಂಗೋರವರಿಗೆ ಇಂಗ್ಲೆಂಡ್ನಿಂದ ಸ್ಥಳೀಯ ಸಂಸ್ಥೆಗಳ ಅಧ್ಯಯನಕ್ಕೆ ಕರೆಬಂತು. ಜರ್ಮನಿಯಲ್ಲಿ- ತ್ಯಾಜ್ಯ ನಿರ್ವಹಣೆ (Solid Waste Management) ಇವೇ ಮೊದಲಾದೆಡೆ ಭೇಟಿ ನೀಡಿ ತಮ್ಮ ಹಳ್ಳಿಯ ಅಭಿವೃದ್ಧಿಯ ಕಾರ್ಯಕ್ರಮಗಳಿಗೆ ಅಗತ್ಯವಾದ ಕಚ್ಚಾ ವಸ್ತುಗಳನ್ನು ಸ್ಥಳೀಯವಾಗೇ ತಯಾರಿಸಿಕೊಳ್ಳುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದರು. ಇದರಿಂದ ಸ್ವಸಹಾಯ ಸಂಘದ ಹಲವು ಮಹಿಳೆಯರಿಗೆ ಆದಾಯ ನಿರ್ಮಿತಿ ಘಟಕ (Network Growth Economy Model) ಗಳನ್ನು  ಸ್ಥಾಪಿಸಿದರು. ಇದರ ಮುಖಾಂತರ ಹಳ್ಳಿಯು ಸ್ವಾವಲಂಬನೆಯೆಡೆ ಸಾಗಿತು.

ಸಮತಾಪುರಂ: ಇಷ್ಟೆಲ್ಲ ಅಭಿವೃದ್ಧಿಯು ಒಂದೆಡೆ ಸಾಗುತ್ತಿದ್ದರೆ, ಇಳಂಗೋರವರ ಬಹುದಿನದ ಕೊರಗು ಹಳ್ಳಿಯಲ್ಲಿರುವ ಅಸ್ಪೃಶ್ಯತೆ, ಜಾತಿ ವ್ಯವಸ್ಥೆಗೆ ಕೊಡಲಿ ಪೆಟ್ಟು ಕೊಡಬೇಕೆಂಬುದು. ಆದರೆ, ಹೇಗೆ?

ಆಗ ಹೊಳೆದದ್ದೆ ನಮ್ಮಕ್ಕು ನಮ್ಮೇ ತಿಟ್ಟಮ್ ಯೋಜನೆ. ಈ ಯೋಜನೆಯಡಿ 50 ಜೋಡಿ ಮನೆಗಳನ್ನು ಕಟ್ಟಿದರು. 100 ಕುಟುಂಬಗಳನ್ನು ಅಲ್ಲಿ ಇರಿಸುವ ಯೋಜನೆ ಅವರದು. ಆದರೆ, ಅವರು ಒಂದೇ ಜಾತಿಗೆ ಸೇರಿರಬಾರದು. ಒಂದು ಕುಟುಂಬ ಹರಿಜನರಾದರೆ ಅದಕ್ಕೆ ಹೊಂದಿಕೊಂಡ ಮತ್ತೊಂದು ಮನೆ ಮೇಲುಜಾತಿಯವರದ್ದಾಗಿರಬೇಕು. ಹೀಗೆ ಎಲ್ಲ ಜಾತಿಯವರನ್ನು ಒಂದೆಡೆ ಕೂಡಿ ಬಾಳಿ  ನಿಜ ಜಾತ್ಯಾತೀತ ಸಮುದಾಯವನ್ನು ಕಟ್ಟಲು ಪ್ರಯತ್ನಿಸಿ ಯಶಸ್ವಿಯಾದುದ್ದು ನಿಜವಾಗಿಯೂ ದೇಶದಲ್ಲೇ ಮಾದರಿ. ಸರ್ವಜಾತಿ ಸಹಿಷ್ಣತ ಭಾವನೆ ಉಂಟುಮಾಡಿ ಜನರ ಮನೋಭಾವಗಳನ್ನು ಬದಲಾಯಿಸಲು ಇದೊಂದು ಉತ್ತಮ ಅವಕಾಶವಾಯಿತು. ಇಂದು ಇದೇ ಮಾದರಿಯನ್ನು ಹಲವು ಪಂಚಾಯಿತಿಗಳಲ್ಲಿ ತಮಿಳುನಾಡು ಸಕರ್ಾರ ನಿರ್ಮಾಣ ಮಾಡುತ್ತಿರುವುದು ಇದರ ಯಶಸ್ಸಿಗೆ ಸಿಕ್ಕ ಮನ್ನಣೆ.  (ಮೊದಲು ಸಾರಾಯಿ ಅಂಗಡಿಗಳ ಮುಂದೆ ಕುಡಿದು ಬಿದ್ದಿರುತ್ತಿದ್ದ ಎಷ್ಟೋ ಜನ, ಸ್ವ-ಉದ್ಯೋಗಗಳನ್ನು ಪಡೆದು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ವಿದ್ಯಾವಂತರನ್ನಾಗಿ ಮಾಡುತ್ತಿದ್ದಾರೆ.) ಇವರ ಸಾಧನೆಯನ್ನು ಗುರುತಿಸಿ ಅಶೋಕ ಸಂಸ್ಥೆ ಫೆಲೋಷಿಪ್ ಅನ್ನು ನೀಡಿದೆ.

ಸಮಾಜಕಾರ್ಯಕರ್ತರು- ಪಂಚಾಯಿತಿ ವ್ಯವಸ್ಥೆ; ಇಷ್ಟೆಲ್ಲ ಓದಿದ ಯಾರೇ ಆದರೂ ಪಂಚಾಯಿತಿಗಳನ್ನು ಸರಿಯಾಗಿ ಬಳಸಿಕೊಂಡರೆ, ಹೇಗೆ ಹಳ್ಳ್ಳಿಗಳನ್ನು ಮಾದರಿ ಗ್ರಾಮಗಳನ್ನಾಗಿ ಮಾಡಬಹುದೆಂಬುದರ ಬಗ್ಗೆ ಒಂದು ಕಲ್ಪನೆ ಬಂದಿರಬಹುದು. ಸಮಾಜಕಾರ್ಯವನ್ನು ಅಧ್ಯಯನ ಮಾಡದಿದ್ದ ಇಳಂಗೋರಂಥವರು ತಮ್ಮ ಹಳ್ಳಿಯನ್ನು ಅಭಿವೃದ್ಧಿಪಡಿಸಬೇಕು, ಇಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂಬ ನಿಜವಾದ ಕಾಳಜಿ ಹೊಂದಿ, ಉನ್ನತ ಹುದ್ದೆ ಮತ್ತು ಸಂಸಾರವನ್ನು ತೊರೆದು ಹಳ್ಳಿಯಲ್ಲೇ ನೆಲೆಸಿ, ಹಳ್ಳಿಯ ಬದಲಾವಣೆಗೆ ಶ್ರಮಿಸುತ್ತಿರುವಾಗ, ಸಮಾಜವನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡಿ, ಸಮಸ್ಯೆಗಳೆಡೆಗೆ ವಿವಿಧ ದೃಷ್ಟಿಕೋನ ಬೆಳೆಸಿಕೊಂಡು, ಸಮಾಜದ ಹುಲ್ಲು-ಬೇರುಗಳನ್ನು ಅರ್ಥೈಸಿಕೊಂಡಿರುವ ನಾವೇಕೆ ಪಂಚಾಯಿತಿ ವ್ಯವಸ್ಥೆಯನ್ನು ಮೈಲಿಗೆಯಂತೆ ಕಾಣುತ್ತಿದ್ದೇವೆ!

ನಮ್ಮ ಪಂಚಾಯಿತಿಗಳಿಗೆ ಎಂದಾದರೂ ಭೇಟಿ ನೀಡಿದ್ದೇವೆಯೇ? ಅಲ್ಲಿನ ಕ್ರಿಯಾಯೋಜನೆಯಲ್ಲಿ ಏನಿದೆ, ಏನಿಲ್ಲವೆಂಬುದು ನಮಗೆ ತಿಳಿದಿದೆಯೇ? ಗ್ರಾಮ ಸಭೆಗಳಲ್ಲೆಂದಾದರೂ ಭಾಗವಹಿಸಿದ್ದೇವೆಯೇ? ಜನರ ಸಮಸ್ಯೆಗಳಿಗೆ ಧ್ವನಿಯಾಗಿದ್ದೇವೆಯೇ? ಜನರನ್ನು ಈ ನಿಟ್ಟಿನಲ್ಲಿ ಜಾಗೃತಗೊಳಿಸಲು ಪ್ರಯತ್ನಿಸುತ್ತಿದ್ದೇವೆಯೇ? ನಮ್ಮ ಊರಿನವರೇ ಆದ ಪಂಚಾಯಿತಿ ಸದಸ್ಯರ ಜೊತೆ ಎಂದಾದರೂ ಅಭಿವೃದ್ಧಿಯೆಡೆಗೆ ಚರ್ಚೆ ನಡೆಸಿದ್ದೇವೆಯೇ? ಮಹಿಳಾ ಚುನಾಯಿತ ಸದಸ್ಯರಿಗೆ ನಮ್ಮ ಜ್ಞಾನವನ್ನೇನಾದರೂ ನೀಡಿದ್ದೇವೆಯೇ? ಪಂಚಾಯಿತಿ ಕಾರ್ಯಕ್ರಮಗಳಲ್ಲಿ ಜನರ ಪಾಲ್ಗೊಳ್ಳುವಿಕೆಗೆ ಎಂದಾದರೂ ಪ್ರೋತ್ಸಾಹಿಸಿದ್ದೇವೆಯೇ? ಅವ್ಯವಸ್ಥೆಯ ವಿರುದ್ಧ ಎಂದಾದರೂ ಹೋರಾಡಿದ್ದೇವೆಯೇ? ಇವೇ ಮೊದಲಾದ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಕ್ಷಣಾರ್ಧದಲ್ಲಿ ಗಿರಕಿ ಹೊಡೆಯುತ್ತಿದ್ದರೆ, ಕುರ್ಚಿ ಮೇಲೆ ಕುಳಿತಿದ್ದ ಇಳಂಗೋ ರಸ್ತೆ ಕಾಮಗಾರಿ ನಿರ್ವಹಿಸುತ್ತಿದ್ದ ಕೂಲಿಗಾರ ಇಳಿಜಾರು ಕೊಡದಿದ್ದನ್ನು ಸರಿಪಡಿಸುತ್ತಿದ್ದರು.
 
ಆನಂದ್ ಎನ್.ಎಲ್.
ಉಪನ್ಯಾಸಕರು, ಸಮಾಜಕಾರ್ಯ ವಿಭಾಗ,
ಸಿ.ಎಂ.ಆರ್. ಕಾಲೇಜು (ಸ್ವಾಯತ್ತ), ಬೆಂಗಳೂರು
0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
+91-9980066890
+91-8310241136
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)