SKH
  • HOME
    • About Us
  • English Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Online Groups
  • Search
  • Contact Us
  • HOME
    • About Us
  • English Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Online Groups
  • Search
  • Contact Us
SKH

ಸ್ಥಳೀಯ ಭಾಷೆಗಳಲ್ಲಿ ಸಾಹಿತ್ಯ ಸೃಷ್ಟಿಯಾಗದ ಹೊರತು ಸಮಾಜಕಾರ್ಯಕ್ಕೆ ಉಳಿಗಾಲವಿಲ್ಲ

7/6/2017

0 Comments

 
ಕನ್ನಡ ಭಾಷೆಯಲ್ಲಿ ಸಮಾಜಕಾರ್ಯಕ್ಕೆ ಸಂಬಂಧಿಸಿದ ಸಾಹಿತ್ಯ ಸೃಷ್ಟಿಯಾಗುತ್ತಿಲ್ಲವೆಂಬ ಕೂಗು ಬಹಳ ಹಿಂದಿನಿಂದಲೂ ಕೇಳಿ ಬರುತ್ತಿದೆ. ಆದರೆ ಇತ್ತೀಚೆಗೆ ಹೆಚ್ಚಾಗಿ ಮಾರ್ಧ್ವನಿಸುತ್ತಿದೆ ಅಷ್ಟೇ. ಸಮಾಜಕಾರ್ಯವನ್ನು ಅಧ್ಯಯನ ವಿಷಯವನ್ನಾಗಿ ಆರಿಸಿಕೊಂಡ ಪ್ರತಿಯೊಬ್ಬ ವಿದ್ಯಾರ್ಥಿಗೂ ಹೊಸದೆನಿಸುವ ಸಮಾಜಕಾರ್ಯ ಪರಿಕಲ್ಪನೆಗಳನ್ನು ಆಂಗ್ಲ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವುದು ಕೊಂಚ ಕಷ್ಟದ ಸಂಗತಿ ಎಂದರೆ ತಪ್ಪಾಗುವುದಿಲ್ಲ. ಇಲ್ಲಿ ಸಮಸ್ಯೆಯಿರುವುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾತ್ರವೆಂಬುದು ಬಹುಪಾಲು ಸಮಾಜಕಾರ್ಯಕರ್ತರ ಧೋರಣೆ. ಆದರೆ ಅವರ ಧೋರಣೆ ಸತ್ಯಕ್ಕೆ ಸಮೀಪವಾದುದ್ದಲ್ಲ. ನಗರ ಭಾಗದಿಂದ ಬಂದಂತಹ ಬಹುಪಾಲು ವಿದ್ಯಾರ್ಥಿಗಳಿಗೂ ಸಹ ಸಮಾಜಕಾರ್ಯ ಹೊಸ ವಿಷಯವೇ ಆಗಿದ್ದು, ಇಲ್ಲಿನ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ಬಹುಶಃ ನಗರ ಭಾಗಗಳಿಂದ ಬಂದ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿರಬಹುದು ಮತ್ತು ಅದೇ ಭಾಷೆಯಲ್ಲಿ ವ್ಯವಹರಿಸಲು ತಿಳಿದಿರಲೂಬಹುದು. ಆದರೆ ಅವರ ಮಾತೃಭಾಷೆ ಇಂಗ್ಲೀಷ್ ಅಲ್ಲವಲ್ಲ. ಆಂಗ್ಲ ಅಥವಾ ಕನ್ನಡ ಹೀಗೇ ಯಾವುದೇ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಪೂರೈಸಿದ್ದರೂ ಸಮಾಜಕಾರ್ಯದ ಪರಿಕಲ್ಪನೆಗಳು ಹೊಸ ವಿಚಾರಗಳೇ ಆಗಿದ್ದು, ಅವುಗಳನ್ನು ತಮ್ಮ ಮಾತೃಭಾಷೆಯಲ್ಲಿ ಕಲಿತಷ್ಟು ವೇಗವಾಗಿ ಇತರೆ ಭಾಷೆಗಳಲ್ಲಿ ಕಲಿಯುವುದು ಕಷ್ಟಸಾಧ್ಯವೆಂಬ ವಿಚಾರ ಬುದ್ದಿವಂತರೆನ್ನಿಸಿಕೊಂಡ ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ.
ಆದಾಗ್ಯೂ, ಸಮಾಜಕಾರ್ಯ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಬಹುಪಾಲು ಸಮಾಜಕಾರ್ಯ ಶಿಕ್ಷಕರು ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಲೇ ಇಲ್ಲ. ಇದರ ಫಲವಾಗಿ ಇಂದು ಸಮಾಜಕಾರ್ಯ ಕ್ಷೇತ್ರದಲ್ಲಿ ಕೇವಲ ಬೆರಳೆಣಿಕೆಯಷ್ಟು ಪುಸ್ತಕಗಳು ಮಾತ್ರ ಲಭ್ಯವಿವೆ. ರಾಷ್ಟ್ರ ಹಾಗೂ ಅಂತರತಾಷ್ಟ್ರೀಯ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸುವ ಹಾಗೂ ಸೆಮಿನಾರ್‍ಗಳಲ್ಲಿ ಭಾಗವಹಿಸಿ ದೊಡ್ಡ ದೊಡ್ಡ ಹೆಸರುಗಳಿಸಿರುವ ಪ್ರೊಪೆಸರ್‍ಗಳಿಗೆ ಸಮಾಜಕಾರ್ಯ ಕ್ಷೇತ್ರದಲ್ಲಿ ಬರವಿಲ್ಲ. ಆದರೂ ತಮ್ಮ ಪಾಠ-ಪ್ರವಚನಗಳನ್ನು ಆಲಿಸುವ ವಿದ್ಯಾರ್ಥಿಗಳ ಸಂಕಟ ಅವರಿಗೆ ಅರ್ಥವಾಗಲಿಲ್ಲ. ಕರ್ನಾಟಕದ ಬಹುಪಾಲು ಸರ್ಕಾರಿ, ಅರೆಸಕಾರಿ ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯಗಳ ಸಮಾಜಕಾರ್ಯ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ಶೇಖಡಾ 80 ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಹಿನ್ನೆಲೆ ಹೊಂದಿದವರೆಂಬ ಸತ್ಯ, ಬೋಧಿಸುವ ಶಿಕ್ಷಕರಿಗೆ ತಿಳಿದಿಲ್ಲವೇ? ಹಾಗಿದ್ದರೂ ಸಹ ಕನ್ನಡ ಭಾಷೆಯಲ್ಲಿ ಸಮಾಜಕಾರ್ಯ ಸಾಹಿತ್ಯವನ್ನು ಏಕೆ ಸೃಷ್ಟಿಸಲಿಲ್ಲ? ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸೆಮಿನಾರ್, ಕಾನ್ಫರೆನ್ಸ್‍ಗಳಲ್ಲಿ ಭಾಗವಹಿಸಿ, ತಮ್ಮ ವಿಚಾರದಾರೆಗಳನ್ನು ಹಂಚಿಕೊಳ್ಳುವ ಮತ್ತು ಅವುಗಳನ್ನು ಪ್ರಕಟಿಸುವ ಶಿಕ್ಷಕರಿಗೆ ತಮ್ಮ ವಿಭಾಗಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕೆ ಕನ್ನಡ ಭಾಷೆಯಲ್ಲಿ ಸಾಹಿತ್ಯವನ್ನು ಸೃಷ್ಟಿಸುವತ್ತ ಗಮನಹರಿಸಲಿಲ್ಲವೇಕೆ? ಸಮಾಜಕಾರ್ಯದ ಉಳಿವಿನ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ಇವರು ಸಮಾಜಕಾರ್ಯ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳಾದರೂ ಏನು? ಹಾಗಾದರೆ ಸಮಾಜಕಾರ್ಯ ವ್ಯಾಸಂಗ ಮಾಡಿದ್ದು, ಕೇವಲ ಸೆಮಿನಾರ್, ಕಾನ್ಫೆರೆನ್ಸ್‍ಗಳಲ್ಲಿ ತಮ್ಮ ವಿಚಾರಧಾರೆಗಳನ್ನು ಹಂಚಿಕೊಂಡು ಅವುಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟಿಸಿ ತಮ್ಮ ಎ.ಪಿ.ಎ ಸ್ಕೋರ್ ನ್ನು ಹೆಚ್ಚಿಸಿಕೊಂಡು, ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡು ಬಡ್ತಿ ಪಡೆಯುವ ಸ್ವಾರ್ಥಕ್ಕೋ ಅಥವಾ ಸಮಾಜದ ಸಮಸ್ಯೆಗಳನ್ನು ಬಗೆಹರಿಸುವುದಕ್ಕೋ? ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸುತ್ತಿದ್ದರೆ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುಪಾಲು ಸಮಾಜಕಾರ್ಯಕರ್ತರು ತಮ್ಮ ತಮ್ಮ ಸ್ವಾರ್ಥಕ್ಕಾಗಿ ಸಮಾಜಕಾರ್ಯವನ್ನು ಉಪಯೋಗಿಸಿಕೊಂಡು ಸಮಾಜಕಾರ್ಯವನ್ನೇ ಅನಾಥವನ್ನಾಗಿಸುತ್ತಿದ್ದಾರೆ ಎಂದೆನಿಸದಿರದು.

ಬಹುಶಃ ಇಂದು ಸಮಾಜಕಾರ್ಯ ಶಿಕ್ಷಣಪಡೆದು ಹೊರಬರುತ್ತಿರುವ ವಿದ್ಯಾರ್ಥಿಗಳು ಯಾವುದನ್ನೂ ಪೂರ್ಣವಾಗಿ ಅರ್ಥಮಾಡಿಕೊಳ್ಳದೆ ಎಡಬಿಡಂಗಿಗಳಾಗಿ ಹೊರಬರುತ್ತಿರುವುದಕ್ಕೆ ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಲ್ಲಿರುವ ಲೋಪದೋಷಗಳೊಟ್ಟಿಗೆ ಕನ್ನಡ ಭಾಷೆಯಲ್ಲಿ ಸಾಹಿತ್ಯ ಸೃಷ್ಠಿಯಾಗದಿರುವುದೂ ಪ್ರಮುಖ ಕಾರಣವಾಗಿ ಗೋಚರಿಸುತ್ತದೆ. ಇದಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಮತ್ತು ಸಲ್ಲಿಸುತ್ತಿರುವವರೇ ನೇರ ಹೊಣೆಗಾರರು. ನಿಜ, ಸಮಾಜಕಾರ್ಯ ಸಿದ್ಧಾಂತಕ್ಕಿಂತ ಕ್ಷೇತ್ರಕಾರ್ಯಕ್ಕೇ ಹೆಚ್ಚು ಒತ್ತು ಕೊಟ್ಟು ಆಚರಣೆಯ ಮೂಲಕ ಕಲಿಯುವುದಾದರೂ, ಸಿದ್ದಾಂತ ಮತ್ತು ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಸಾಹಿತ್ಯ ಅತ್ಯಾವಶ್ಯಕವೆಂಬ ವಿಚಾರವನ್ನು ಅಲ್ಲಗಳೆಯುವಂತಿಲ್ಲ. ವಿದ್ಯಾರ್ಥಿಗಳೊಂದಿಗೆ ನೇರ ಸಂಬಂಧ ಹೊಂದಿರುವ ಬೋಧಕರಿಗೆ ಮಾತ್ರ ವಿದ್ಯಾರ್ಥಿಗಳ ಗ್ರಹಣ ಸಾಮಥ್ರ್ಯವನ್ನು ಅರಿಯಲು ಸಾಧ್ಯವಿದ್ದು, ವಿದ್ಯಾರ್ಥಿಗಳ ಬೌದ್ಧಿಕ ಮಟ್ಟಕ್ಕೆ ಸರಿಹೊಂದುವ ರೀತಿಯಲ್ಲಿ ಸಾಹಿತ್ಯವನ್ನು ರಚಿಸುವ ಗುರುತರವಾದ ಜವಾಬ್ದಾರಿ ಶಿಕ್ಷಕರದ್ದು ಎಂದರೆ ತಪ್ಪಾಗದು. ಬಹುಶಃ ಶಿಕ್ಷಕರಲ್ಲದವರಿಂದ ರಚನೆಯಾದ ಸಾಹಿತ್ಯ ವಿದ್ಯಾರ್ಥಿಗಳಿಗೆ ಹಿತವೆನಿಸದಿರಲೂಬಹುದು. ಹೀಗಿರುವಾಗ ಶಿಕ್ಷಣ ಕ್ಷೇತ್ರವನ್ನು ಹೊರತುಪಡಿಸಿದ ಸಮಾಜಕಾರ್ಯಕರ್ತರಿಂದ ರಚಿಸಲ್ಪಟ್ಟ ಸಾಹಿತ್ಯ ಸಮಾಜಕಾರ್ಯ ಕ್ಷೇತ್ರಕ್ಕೆ ಕೊಡುಗೆಯಾಗುವುದೇ ಹೊರತು ವಿದ್ಯಾರ್ಥಿಗಳ ಮತ್ತು ಶಿಕ್ಷಣ ಕ್ಷೇತ್ರದ ಬೆಳವಣಿಗೆಯ ಹಿತದೃಷ್ಟಿಯಿಂದ ಪೂರಕವಾಗಲಾರದು. ಅದು ಏನೇ ಇರಲಿ, ಪ್ರಸ್ತುತ ಸಂದರ್ಭದವರೆಗೂ ಸಮಾಜಕಾರ್ಯ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಸ್ಥಳೀಯ ಭಾಷೆಗಳಲ್ಲಿ ರಚನೆಯಾದ ಸಾಹಿತ್ಯ ತೀರಾ ಕಡಿಮೆ. ಭಾರತದ ವಿವಿಧ ವಿಶ್ವವಿದ್ಯಾನಿಲಯಗಳ ಸಮಾಜಕಾರ್ಯ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಜಕಾರ್ಯಕರ್ತರೂ ಸಹ ಸ್ಥಳೀಯ ಭಾಷೆಗಳಲ್ಲಿ ತಮ್ಮ ತಮ್ಮ ಪ್ರಬಂಧಗಳನ್ನು ಮಂಡಿಸದೇ ಇಂಗ್ಲೀಷ್ ಭಾಷೆಗೆ ಜೋತು ಬಿದ್ದು, ಅದೇ ಭಾಷೆಯಲ್ಲಿ ತಮ್ಮ ಪ್ರಬಂಧಗಳನ್ನು ಮಂಡಿಸುವುದರ ಹಿಂದೆ ಸ್ವಾರ್ಥವೂ ತುಂಬಿದೆ (ಈ ಬಗ್ಗೆ ಹೆಚ್ಚಿಗೆ ವಿವರಿಸುವ ಅವಶ್ಯಕತೆ ಇಲ್ಲವೆಂದು ಭಾವಿಸುವೆ). ಕಾರಣ ತಮ್ಮ ಸಾಮರ್ಥ್ಯವನ್ನು ವಿಶ್ವದ ವಿವಿಧ ಭಾಗಗಳಿಗೆ ಪಸರಿಸುವುದರೊಟ್ಟಿಗೆ ತಮ್ಮ ಛಾಪನ್ನು ಇತರೆಡೆಯೂ ಮೂಡಿಸುವುದೇ ಆಗಿದೆ. ಇರಲಿ, ಬಹಳ ಸಂತೋಷ. ಆದರೆ ತಮಗೆ ಉದ್ಯೋಗವನ್ನು ದಯಪಾಲಿಸಿದ ವಿಶ್ವವಿದ್ಯಾನಿಲಯಗಳಲ್ಲಿ ಓದುತ್ತಿರುವ ಸ್ಥಳೀಯ ಭಾಷೆಗಳಲ್ಲಿ ಪದವಿಪಡೆದು ಸ್ನಾತಕೋತ್ತರ ಪದವಿ ಪಡೆಯಲು ಸಮಾಜಕಾರ್ಯ ವಿಷಯವನ್ನು ಆರಿಸಿಕೊಂಡ ವಿದ್ಯಾರ್ಥಿಗಳಿಗೆ ಪ್ರೊಪೆಸರ್‍ಗಳು ಎನ್ನಿಸಿಕೊಂಡವರ ಕೊಡುಗೆಯಾದರೂ ಏನು ಎಂಬುದೇ ಬಗೆಹರಿಯದ ಬಿಲಿಯನ್‍ಡಾಲರ್ ಪ್ರಶ್ನೆ.

ಗ್ರಾಮೀಣ ಭಾಗಗಳಿಂದ ಬರುವ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ತೀರಾ ಕಡಿಮೆಯೆಂದು ಬಡಾಯಿಸುವ ಶಿಕ್ಷಕರು, ಅದೇ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಒಂದು ಸಣ್ಣ ಪುಸ್ತಕವನ್ನಾದರೂ ಬರೆದಿರುವರೇ? ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿ ಜ್ಞಾನದ ಜೊತೆಗೆ ಕೌಶಲ್ಯಗಳೂ ಬಹಳ ಮುಖ್ಯ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಹಾಗಿದ್ದರೂ ಜ್ಞಾನವನ್ನು ವೃದ್ಧಿಸಿಕೊಳ್ಳಲು ಸ್ಥಳೀಯ ಭಾಷೆಗಳಲ್ಲಿ ಏಕೆ ಸಾಹಿತ್ಯವನ್ನು ಸೃಷ್ಟಿಸುತ್ತಿಲ್ಲ? ಈ ಬಗ್ಗೆ ಶಿಕ್ಷಕರೆನಿಸಿಕೊಂಡವರಿಗೆ ತಿಳಿದಿಲ್ಲವೇ? ನಿಜ, ಸಮಾಜಕಾರ್ಯ ವಿಷಯಕ್ಕೆ ಸಂಬಂಧಿಸಿದ ಸಾಹಿತ್ಯ ಇಂಗ್ಲಿಷ್ ಬಾಷೆಯಲ್ಲಿ ಹೇರಳವಾಗಿದೆ. ಆದರೆ ಆ ಸಾಹಿತ್ಯವನ್ನು ಸೃಷ್ಟಿಸಿರುವ ಬಹುಪಾಲು ಲೇಖಕರು ಭಾರತದವರಲ್ಲದವರೆಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. ಒಂದು ವೇಳೆ ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿರುವ ಸ್ಪರ್ಧೆಯನ್ನು ಮೆಟ್ಟಿನಿಲ್ಲಲು ಇಂಗ್ಲೀಷ ಭಾಷೆ ಅನಿವಾರ್ಯವೆಂದಾದರೆ ಇಂಗ್ಲೀಷ್ ಭಾಷಾ ಸಂವಹನ ಕೌಶಲ್ಯವನ್ನು ಕಲಿಸಲು ಮುಂದಾಗಬೇಕೇ ಹೊರತು ಬೋಧಿಸಲು ಇಂಗ್ಲೀಷ್ ಭಾಷೆಯನ್ನು ಉಪಯೋಗಿಸುವುದು ಅಥವಾ ಇಂಗ್ಲೀಷ್ ಭಾಷೆಯಲ್ಲಿ ರಚನೆಯಾದ ಪುಸ್ತಕಗಳನ್ನೇ ಪರಾಮರ್ಶಿಸಲು ತಿಳಿಸುವುದು ಎಷ್ಟು ಮಾತ್ರ ಸರಿ? ಇಲ್ಲಿ ನಾನೇನೂ ಸ್ಥಳೀಯ ಭಾಷೆಗಳಲ್ಲಿಯೇ ಬೋಧಿಸಬೇಕು ಎಂದು ಖಡಾಖಂಡಿತವಾಗಿ ಹೇಳುತ್ತಿಲ್ಲ. ಬದಲಿಗೆ ಸಮಾಜಕಾರ್ಯದ ಪರಿಕಲ್ಪನೆಗಳನ್ನು ಮತ್ತು ಸಿದ್ಧಾಂತಗಳನ್ನು ಅರ್ಥಮಾಡಿಕೊಳ್ಳುವವರೆಗಾದರೂ ಸ್ಥಳೀಯ ಭಾಷೆಗಳಲ್ಲಿ ಬೋಧಿಸಿದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಳಿತೆಂದು ಭಾವಿಸುತ್ತೇನೆ. ಇಂಗ್ಲೀಷನ್ನೂ ಬಳಸಿ ಆದರೆ ಸ್ಥಳೀಯ ಭಾಷೆಗಳನ್ನು ಹೆಚ್ಚು ಉಪಯೋಗಿಸಿ, ಆಗ ವಿದ್ಯಾರ್ಥಿಗಳಿಗೂ ಸಮಾಜಕಾರ್ಯವೆಂಬ ಹೊಸ ವಿಚಾರದ ಮೂಲ ಆಶಯ ಅರಿವಾಗುತ್ತದೆ. ಜೊತೆಗೆ ಸಮಾಜಕಾರ್ಯಕ್ಕೆ ಸಂಬಂಧಿಸಿದ ಮೂಲಭೂತ ಪರಿಕಲ್ಪನೆಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಅದನ್ನು ಹೊರತುಪಡಿಸಿ ಎಲ್ಲವನ್ನೂ ಇಂಗ್ಲೀಷ್‍ಮಯವನ್ನಾಗಿಸಿದರೆ, ಬಾಲ್ಯದಿಂದ ಕಲಿತ ಮಾತೃ ಅಥವಾ ಸ್ಥಳೀಯ ಭಾಷೆಗಳ ಅವಶ್ಯಕತೆಯಾದರೂ ಏನಿದೆ? ಶಿಕ್ಷಣ ಪಡೆದು ಕೆಲಸ ಗಿಟ್ಟಿಸಿಕೊಳ್ಳುವ ಏಕೈಕ ಕಾರಣಕ್ಕೆ ಮಾತ್ರ ಇಂದು ಇಂಗ್ಲೀಷ್ ಬಾಷಾ ಶಿಕ್ಷಣಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡಲಾಗುತ್ತಿದೆಯೇ ವಿನಃ ನೆಮ್ಮದಿಯ ಜೀವನಕ್ಕಲ್ಲ ಎಂಬ ಕಟುಸತ್ಯವನ್ನು ಶಿಕ್ಷಣ ಕ್ಷೇತ್ರದಲ್ಲಿರುವವರೂ ಅರಿಯಬೇಕಿದೆ. ಕೆಲಸ ಗಿಟ್ಟಿಸಿಕೊಳ್ಳುವ ಏಕೈಕ ಕಾರಣಕ್ಕಾಗಿ ಶಿಕ್ಷಣ ನೀಡುವುದಾದರೆ ಅಂತಹ ಶಿಕ್ಷಣ ಸಮಾಜಕಾರ್ಯದಂತಹ ವಿಶಿಷ್ಟ ಕೋರ್ಸುಗಳಿಗೆ ಅನಿವಾರ್ಯವಲ್ಲವೆನ್ನುವುದೇ ನನ್ನ ವಾದ. ಸಮಾಜಕಾರ್ಯ ಎಂಬುದು ಮಾನವನ ಜೀವನಶೈಲಿಯಾಗಿರಬೇಕಿತ್ತು. ಆದರೆ, ದುರದೃಷ್ಟವಶಾತ್ ಇಂದು ಸಮಾಜಕಾರ್ಯವನ್ನು ವೃತ್ತಿಗೆ ಮಾತ್ರ ಸೀಮಿತಗೊಳಿಸಲಾಗಿದೆ.

ಬಹುಶಃ ಭಾರತದ ಎಲ್ಲ ವಿಶ್ವವಿದ್ಯಾನಿಲಯಗಳು ಇಂಗ್ಲೀಷ್ ಭಾಷೆಯಲ್ಲಿ ರಚನೆಯಾದ ಸಾಹಿತ್ಯದ ಮೇಲೆ ಅಪಾರವಾಗಿ ಅವಲಂಭನೆಯಾಗಿವೆ. ಇದಕ್ಕೆ ಪ್ರಮುಖ ಕಾರಣ ಸಮಾಜಕಾರ್ಯವೆಂಬ ಸಿದ್ಧ ಸರಕನ್ನು ಪಾಶ್ಚ್ಯಾತ್ಯ ರಾಷ್ಟ್ರಗಳಿಂದ ಆಮದುಮಾಡಿಕೊಂಡು ಭಾರತೀಯ ವಿದ್ಯಾರ್ಥಿಗಳಿಗೆ ಬೋಧಿಸತೊಡಗಿದ್ದಾಗಿದೆ. ಒಂದು ವೇಳೆ ಎರವಲು ಪಡೆದ ಸಮಾಜಕಾರ್ಯ ಎಂಬ ಹೊಸ ವಿಷಯವನ್ನು ಭಾರತೀಯ ಸಮಾಜದ ಹಿನ್ನೆಲೆ ಹಾಗೂ ಪರಿಸ್ಥಿತಿಗೆ ತಕ್ಕಂತೆ ಬದಲಾವಣೆ ಮಾಡಿಕೊಂಡಿದ್ದಿದ್ದರೆ ಇಂದು ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಲ್ಲಿ ಉದ್ಭವಿಸಿರುವ ಸಮಸ್ಯೆಯ ತೀವ್ರತೆ ಕಡಿಮೆಯಾಗಿರುತ್ತಿತ್ತೇನೋ. ಇಲ್ಲಿ ಸಮಾಜಕಾರ್ಯದ ಸಿದ್ಧಾಂತಗಳನ್ನು ಬದಲಾವಣೆ ಮಾಡಿಕೊಳ್ಳಬೇಕಿತ್ತು ಎಂದು ವಾದಿಸುತ್ತಿಲ್ಲ ಬದಲಿಗೆ ಭಾರತೀಯ ಸಮಾಜಕ್ಕೆ ಒಪ್ಪುವಂತಹ ಸಮಾಜಕಾರ್ಯ ವಿಧಾನಗಳ ಬಗ್ಗೆ ಹೆಚ್ಚು ಒತ್ತುಕೊಡಬೇಕಿತ್ತು ಮತ್ತು ಆ ವಿಷಯಗಳ ಬಗ್ಗೆ ಸ್ಥಳೀಯ ಭಾಷೆಗಳಲ್ಲಿ ಸಾಹಿತ್ಯವನ್ನು ಸೃಷ್ಟಿಸಬೇಕಿತ್ತು ಎಂದು ಮಾತ್ರ ಹೇಳುತ್ತಿರುವೆ. ಆದರೆ ಈ ವಿಚಾರಗಳನ್ನು ಗಮನಕ್ಕೆ ತೆಗೆದುಕೊಳ್ಳದೇ ನಿರ್ಲಕ್ಷಿಸುತ್ತಾ ಬಂದವರ ಸಂಖ್ಯೆಯೇ ಸಮಾಜಕಾರ್ಯ ಕ್ಷೇತ್ರದಲ್ಲಿ ಅಧಿಕವಾಗಿದೆ. ಇದರ ಪರಿಣಾಮ ಇಂದು ಸಮಾಜಕಾರ್ಯವನ್ನು ಅಭ್ಯಸಿಸಲು ಬರುವ ಎಲ್ಲ ವಿದ್ಯಾರ್ಥಿಗಳಿಗೆ ಸಮಾಜಕಾರ್ಯವೆಂಬ ವಿಷಯವನ್ನು ಹಾಗೂ ಅಭ್ಯಸಿಸುವ ಬಹುಪಾಲು ಸಿದ್ಧಾಂತಗಳನ್ನು ಅರ್ಥಮಾಡಿಕೊಳ್ಳುವುದೇ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಒಂದು ವೇಳೆ ಸಮಾಜಕಾರ್ಯಕ್ಕೆ ಸಂಬಂಧಿಸಿದ ಸಾಹಿತ್ಯ ಸ್ಥಳೀಯ ಭಾಷೆಗಳಲ್ಲಿ ಸೃಷ್ಟಿಯಾಗಿದ್ದಿದ್ದರೆ, ಅಭ್ಯಸಿಸಿದ ಕೆಲವರಾದರೂ ನಿಜವಾದ ಸಮಾಜಕಾರ್ಯವನ್ನು ಆಚರಿಸುತ್ತಿದ್ದರು. ದುರದೃಷ್ಟವಶಾತ್, ಪಾಶ್ಚಾತ್ಯ ರಾಷ್ಟ್ರಗಳ ಲೇಖಕರಿಂದ ಸೃಷ್ಟಿಯಾದ ಸಮಾಜಕಾರ್ಯ ಸಾಹಿತ್ಯವನ್ನು ಅಭ್ಯಸಿಸಿದ ಬಹುಪಾಲು ಸಮಾಜಕಾರ್ಯಕರ್ತರು ತಮ್ಮ ಸ್ವಾರ್ಥಕ್ಕೆ ಸಮಾಜಕಾರ್ಯವನ್ನು ಬಳಸಿಕೊಳ್ಳುತ್ತಿದ್ದಾರೆಯೇ ಹೊರತು ಸಮಾಜದ ಒಳಿತಿಗಾಗಿ ಅಲ್ಲವೆಂಬುದು ನೋವಿನ ಸಂಗತಿ.

ಸಾಹಿತ್ಯ ಕೃಷಿಯಲ್ಲಿ ತೊಡಗುವ ಯಾವುದೇ ಲೇಖಕನಿಂದ ಸೃಷ್ಟಿಸಲ್ಪಡುವ ಸಾಹಿತ್ಯ ತಾನು ಜೀವಿಸಿರುವ ಪ್ರದೇಶದ ಹಿನ್ನೆಲೆಯನ್ನು ಅವಲಂಭಿಸಿರುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಇದೇ ರೀತಿ ಪ್ರಸ್ತುತ ಸಮಾಜಕಾರ್ಯ ಕ್ಷೇತ್ರದಲ್ಲಿ ಹೇರಳವಾಗಿ ದೊರೆಯುವ ಆಂಗ್ಲ ಸಾಹಿತ್ಯವೂ ಸಹ ಪಾಶ್ಚಾತ್ಯ ಲೇಖಕರಿಂದ ಸೃಷ್ಟಿಸಲ್ಪಡುತ್ತಿದ್ದು, ಈ ಸಾಹಿತ್ಯ ಲೇಖಕರ ಸ್ವಂತ ದೇಶಗಳ ಪರಿಸ್ಥಿತಿಗೆ ಅನುಗಣವಾಗಿ ಸೃಷ್ಟಿಯಾಗಿರುತ್ತದೆಯೇ ಹೊರತು ಭಾರತ ಸಮಾಜದ ಹಿನ್ನೆಲೆಯಂತಲ್ಲ. ಉದಾಹರಣೆಗೆ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಹೊರತುಪಡಿಸಿ ಬಹುಪಾಲು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ವ್ಯಕ್ತಿಗತ ಸಮಾಜಕಾರ್ಯ ಮತ್ತು ವೃಂದಗತ ಸಮಾಜಕಾರ್ಯಗಳು ಹೆಚ್ಚು ಮಹತ್ವ ಪಡೆದಿವೆ. ಅಲ್ಲಿನ ಪರಿಸ್ಥಿತಿ, ಶಿಕ್ಷಣ ಮಟ್ಟ, ಕಾನೂನು ವ್ಯವಸ್ಥೆ, ಸಮಾಜ ಮತ್ತು ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗೆ ಮತ್ತು ತೀವ್ರತೆ ಇವೇ ಮೊದಲಾದ ವಿಚಾರಗಳು ವ್ಯಕ್ತಿಗತ ಮತ್ತು ವೃಂದಗತ ಸಮಾಜಕಾರ್ಯದ ಆಚರಣೆಗೆ ಪೂರಕ ವಾತಾವರಣವನ್ನು ಸೃಷ್ಟಿಸಿವೆ. ಆದ್ದರಿಂದ ಅಲ್ಲಿ ಸೃಷ್ಟಿಯಾಗುವ ಬಹುಪಾಲು ಸಾಹಿತ್ಯ ವ್ಯಕ್ತಿಗತ ಮತ್ತು ವೃಂದಗತ ಸಮಾಜಕಾರ್ಯಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಆದರೆ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಮುದಾಯ ಸಂಘಟನೆ ಹೆಚ್ಚು ಒಪ್ಪಿತವಾದ ಸಮಾಜಕಾರ್ಯದ ವಿಧಾನವಾಗಿದ್ದು, ವ್ಯಕ್ತಿಗತ ಮತ್ತು ವೃಂದಗತ ಸಮಾಜಕಾರ್ಯ ವಿಧಾನಗಳ ಆಚರಣೆ ಸಮರ್ಪಕವಾಗಿ ಸಾಗುತ್ತಿಲ್ಲ. ಮಾನಸಿಕ ಸಮಾಜಕಾರ್ಯ, ಶಾಲಾ ಸಮಾಜಕಾರ್ಯ, ವ್ಯಸನಮುಕ್ತ ಸಮಾಜಕಾರ್ಯ ಕ್ಷೇತ್ರಗಳಲ್ಲಿ ವ್ಯಕ್ತಿಗತ ಮತ್ತು ವೃಂದಗತ ಸಮಾಜಕಾರ್ಯಗಳ ಆಚರಣೆಗೆ ಅವಕಾಶಗಳಿದ್ದರೂ ಅವುಗಳನ್ನು ಸಮರ್ಪಕವಾಗಿ ಆಚರಿಸಲು ಪೂರಕವಾದ ವಾತಾವರಣ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇಲ್ಲ. ಒಂದು ವೇಳೆ ಇದ್ದರೂ ಅವು ಸೀಮಿತವಾಗಿವೆ ಮತ್ತು ಭಾರತದಲ್ಲಿ ಶಾಲಾ ಸಮಾಜಕಾರ್ಯ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ಸಮಾಜಕಾರ್ಯ ವಿಭಾಗಗಳನ್ನು ಹೊಂದಿರುವ ಭಾರತದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಇಂದು ವ್ಯಕ್ತಿಗತ ಮತ್ತು ವೃಂದಗತ ಸಮಾಜಕಾರ್ಯ ವಿಧಾನಗಳು ಬೋಧಿಸಲ್ಪಡುತ್ತಿವೆಯೇ ಹೊರತು ಕ್ಷೇತ್ರದಲ್ಲಿ ಅವುಗಳು ಸಮರ್ಪಕವಾಗಿ ಆಚರಿಸಲ್ಪಡುತ್ತಿಲ್ಲ. ಹೀಗೆ ಬೋಧಿಸಲ್ಪಡುತ್ತಿರುವ ವಿಷಯಗಳಿಗೆ ಸಂಬಂಧಿಸಿದ ಸಾಹಿತ್ಯದ ಬಹುಭಾಗ ಸೃಷ್ಟಿಯಾಗಿರುವುದು ಪಾಶ್ಚಾತ್ಯ ಲೇಖಕರಿಂದ ಎಂಬ ಅಂಶವನ್ನು ಕಡೆಗಣಿಸುವಂತಿಲ್ಲ. ಭಾರತದ ಕೆಲವು ಲೇಖಕರೂ ಸಹ ಆಂಗ್ಲಭಾಷೆಯಲ್ಲಿ ಈ ವಿಷಯಗಳಿಗೆ ಸಂಬಂಧಿಸಿದ ಸಾಹಿತ್ಯವನ್ನು ಸೃಷ್ಟಿಸಿದ್ದಾರಾದರೂ ಅದು ಸಿದ್ದಾಂತಗಳಿಗೆ ಮಾತ್ರ ಸೀಮಿತವಾಗಿದೆ. ಒಂದು ವೇಳೆ ಭಾರತೀಯ ಲೇಖಕರಿಂದ ಸೃಷ್ಟಿಯಾದ ಸಾಹಿತ್ಯ ಸ್ಥಳೀಯ ಭಾಷೆಗಳಲ್ಲಿ ಇದ್ದಿದ್ದರೆ, ಕನಿಷ್ಟಪಕ್ಷ ಸಿದ್ದಾಂತಗಳನ್ನಾದರೂ ಅರ್ಥಮಾಡಿಕೊಳ್ಳಲು ಅನುಕೂಲವಾಗಿರುತ್ತಿತ್ತು. ಆದರೆ ಅದೂ ಸಹ ಸಾಧ್ಯವಾಗಲಿಲ್ಲ.

ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಇನ್ನೂ ಹಿಂದುಳಿದಿರುವುಕ್ಕೆ ಅನಕ್ಷರತೆಯೂ ಒಂದು ಪ್ರಮುಖ ಕಾರಣವೆಂಬ ಸತ್ಯದ ಅರಿವು ನಮಗೆಲ್ಲರಿಗೂ ಇದೆ. ಅಭಿವೃದ್ಧಿಪಥದತ್ತ ನಡೆಯಬೇಕಾದರೆ ಎಲ್ಲರೂ ಸುಶಿಕ್ಷಿತರಾಗಬೇಕು ಮತ್ತು ಒದಗಿಸುವ ಶಿಕ್ಷಣ ಗುಣಮಟ್ಟದ್ದಾಗಿರಬೇಕು ಹಾಗೂ ಅಭ್ಯಾಸಮಾಡುವವರಿಗೆ ಅರ್ಥಮಾಡಿಕೊಳ್ಳುವ ಹಾಗಿರಬೇಕು. ಆದರೆ ಭಾರತದಲ್ಲಿ ಬೋಧಿಸಲ್ಪಡುತ್ತಿರುವ ಸಮಾಜಕಾರ್ಯ ಶಿಕ್ಷಣ ಇವುಗಳಿಗೆ ಅಪವಾದದಂತಿದೆ. ಪ್ರಥಮವಾಗಿ ಸಮಾಜಕಾರ್ಯವೆಂಬ ಸಿದ್ಧವಸ್ತುವನ್ನು ಪಾಶ್ಚಾತ್ಯ ರಾಷ್ಟಗಳಿಂದ ಎರವಲು ಪಡೆದುಕೊಂಡು ಬೋಧಿಸುತ್ತಿರುವ ಕಾರಣ ಸಮಾಜಕಾರ್ಯ ವಿಷಯವನ್ನು ಅಧ್ಯಯನ ವಿಷಯವನ್ನಾಗಿ ಆರಿಸಿಕೊಂಡ ಎಲ್ಲರಿಗೆ ಒಂದು ಹೊಸ ವಿಷಯವಾಗಿದೆ. ಈ ವಿಷಯದಲ್ಲಿ ಬೋಧಿಸಲ್ಪಡುವ ಬಹುಪಾಲು ಸಿದ್ಧಾಂತಗಳು ಭಾರತೀಯರಿಗೆ ಹೊಸವಿಚಾರಗಳಾಗಿದ್ದು, ಇವುಗಳನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ಇನ್ನು ವಿದ್ಯಾರ್ಥಿಗಳಿಗೆ ಅರ್ಥಮಾಡಿಸುವಷ್ಟು ಸಮಯ ಮತ್ತು ವ್ಯವದಾನ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುಪಾಲು ಸಮಾಜಕಾರ್ಯಕರ್ತರಿಗೂ ಇಲ್ಲ. ಮೊದಲೇ ದೇಶದ ಬಹುಪಾಲು ವಿಶ್ವವಿದ್ಯಾನಿಲಯಗಳು ಕೇವಲ ಅತಿಥಿ ಉಪನ್ಯಾಸಕರಿಂದ ಮುನ್ನೆಡೆಸಲ್ಪಡುತ್ತಿದ್ದು, ಖಾಯಂ ಉದ್ಯೋಗದ ಖಾತರಿಗಾಗಿ ಕೆಲಸ ಮಾಡುವ ಇವರುಗಳಿಂದ ಯಾವ ರೀತಿಯ ಕೊಡುಗೆಗಳನ್ನು ನಿರೀಕ್ಷಿಸಲು ಸಾಧ್ಯ. ಇವರ ಪದನಾಮವೇ ಅತಿಥಿ ಉಪನ್ಯಾಸಕರಾದ ಕಾರಣ ಇವರನ್ನು ವಿದ್ಯಾರ್ಥಿಗಳು ಅತಿಥಿಗಳನ್ನಾಗಿ ಸ್ವೀಕರಿಸುತ್ತಾರೆಯೇ ವಿನಃ ಖಾಯಂ ಉಪನ್ಯಾಸಕರಂತೆ ಅಲ್ಲ ಜೊತೆಗೆ ವಿಶ್ವವಿದ್ಯಾಲಯಗಳಲ್ಲಿ ಇವರಿಗೆ ಸಿಗುವ ಗೌರವ ಮತ್ತು ಮಾನ್ಯತೆಯೂ ಸಹ ಕಡಿಮೆ. ಪರಿಸ್ಥಿತಿಗಳು ಹೀಗಿರುವಾಗ ಇವರು ಇನ್ನು ಎಷ್ಟು ಪರಿಣಾಮಕಾರಿಯಾಗಿ ತಮ್ಮ ಉದ್ಯೋಗವನ್ನು ನಿಭಾಯಿಸಲು ಸಾಧ್ಯ ಹಾಗೂ ಶಿಕ್ಷಣದಲ್ಲಿ ಗುಣಮಟ್ಟವನ್ನು ತರಲು ಸಾಧ್ಯವೆಂಬುದನ್ನು ನೀವೇ ಊಹಿಸಿ. ಶಿಕ್ಷಕರು ತರಗತಿಗಳಲ್ಲಿ ಬೋಧಿಸಿದ ಪಾಠಗಳು / ಸಿದ್ಧಾಂತಗಳು ಅರ್ಥವಾಗದಿದ್ದರೆ ಪುಸ್ತಕಗಳನ್ನು ಪರಿಶೀಲಿಸಿ ಅರಿತುಕೊಳ್ಳುವುದು ಸಾಮಾನ್ಯ. ಆದರೆ ಸಮಾಜಕಾರ್ಯಕ್ಕೆ ಸಂಬಂಧಿಸಿದ ಪುಸ್ತಕಗಳೇ ಇಲ್ಲದ ಪಕ್ಷದಲ್ಲಿ ವಿದ್ಯಾರ್ಥಿಗಳಾದರೂ ಎಲ್ಲಿ ಪರಿಶೀಲಿಸಬೇಕು? ಒಂದು ವೇಳೆ ಸಮಾಜಕಾರ್ಯಕ್ಕೆ ಸಂಬಂಧಿಸಿದ ಪುಸ್ತಕಗಳು ಇದ್ದರೂ ಸಹ ಅವು ಇಂಗ್ಲೀಷ್ ಭಾಷೆಯಲ್ಲಿ ಇವೆ. ಭಾರತದಂತಹ ಹಿಂದುಳಿದ ರಾಷ್ಟ್ರಗಳಲ್ಲಿ ಶಿಕ್ಷಣ ಪಡೆಯುವ ಬಹುಪಾಲು ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಬಹುಭಾಗವನ್ನು ಸ್ಥಳೀಯ ಭಾಷೆಯಲ್ಲಿ ಪೂರೈಸಿರುತ್ತಾರೆ. ಒಂದು ವೇಳೆ ಇಂಗ್ಲೀಷ್ ಭಾಷೆಯನ್ನು ಕಲಿತಿದ್ದರೂ ಅದು ದ್ವಿತೀಯ ಅಥವಾ ತೃತೀಯ ಭಾಷೆಯನ್ನಾಗಿ ಅಭ್ಯಸಿಸುತ್ತಾರೆ. ಆದ ಕಾರಣ ಅವರು ಇಂಗ್ಲೀಷ್ ಭಾಷೆಯನ್ನು ಓದಲು ಮತ್ತು ಬರೆಯಲು ಕಲಿತಿರುತ್ತಾರೆ, ಕೆಲವೊಮ್ಮೆ ಮಾತನಾಡಲೂ ಬರಬಹುದು. ಆದರೆ ಅದೇ ಭಾಷೆಯಲ್ಲಿ ಆಲೋಚಿಸಲು ಮತ್ತು ಓದಿದ್ದನ್ನು ಅರ್ಥಮಾಡಿಕೊಳ್ಳುವಷ್ಟು ಪ್ರಬುದ್ಧಾರಾಗಿರುತ್ತಾರೆ ಎಂದು ತಿಳಿಯುವುದು ಮೂರ್ಖತನವಲ್ಲದೆ ಬೇರೇನೂ ಅಲ್ಲ. ಇಂತಹ ಪರಿಸ್ಥಿತಯಲ್ಲಿ ಪದವಿ ಹಂತಕ್ಕೆ ಆಗ ತಾನೇ ಕಾಲಿಟ್ಟ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷೆಯಲ್ಲಿ ರಚನೆಯಾದ ಸಾಹಿತ್ಯವನ್ನು ಓದಿ ಅರ್ಥಮಾಡಿಕೊಳ್ಳಿರೆಂದರೆ ಅವರು ಹೇಗೆ ತಾನೇ ಅರ್ಥಮಾಡಿಕೊಳ್ಳುವರು? ಈ ವಿಚಾರಗಳು ಶಿಕ್ಷಣವಲಯದಲ್ಲಿರುವ ಪ್ರೊಫೆಸರ್ರುಗಳಿಗೆ ಏಕೆ ಅರ್ಥವಾಗುವುದಿಲ್ಲ? ಎಂಬುದೊಂದು ಸದಾ ಕಾಡುವ ಪ್ರಶ್ನೆ.

ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣ ಆರಂಭವಾಗಿ ಎಂಟು ದಶಕಗಳು ಕಳೆದರೂ ಸ್ಥಳೀಯ ಭಾಷೆಗಳಲ್ಲಿ ಸಮಾಜಕಾರ್ಯಕ್ಕೆ ಸಂಬಂಧಿಸಿದ ಸಾಹಿತ್ಯ ಸೃಷ್ಟಿಯಾಗಿಲ್ಲವೆಂಬುದು ದುರಂತ. ಪರಿಸ್ಥಿತಿಗೆ ತಕ್ಕಂತೆ ಸಮಾಜಕಾರ್ಯದ ಪಠ್ಯಕ್ರಮವನ್ನು ಬದಲಿಸಬೇಕೆಂಬ ಕೂಗು ಸಮಾಜಕಾರ್ಯ ಆಚರಣಾ ಕ್ಷೇತ್ರಗಳಿಂದ ಕೇಳಿಬರುತ್ತಿದ್ದರೂ ಅದನ್ನು ಪರಾಮರ್ಶಿಸಿ ಮಾರ್ಪಡಿಸುವಂತಹ ಕಾರ್ಯ ಶಿಕ್ಷಣ ಕ್ಷೇತ್ರದಲ್ಲಿ ಆಗಲಿಲ್ಲ. ಸಮಾಜಕಾರ್ಯ ತರಬೇತಿ ಪಡೆದು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲು ಸಿದ್ಧರಾಗಿರುವ ಸಮಾಜಕಾರ್ಯಕರ್ತರಲ್ಲಿರುವ ಕೊರತೆಗಳ ಬಗ್ಗೆ ಮಾತಾಡುವವರೂ ಸಹ ಪಠ್ಯಕ್ರಮ ಬದಲಾವಣೆಗೆ ಸಂಬಂಧಿಸಿದ ಪ್ರಾಧಿಕಾರಗಳ ಮೇಲೆ ಒತ್ತಡ ಹಾಕುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಇನ್ನು ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳಾಗುವುದಾದರೂ ಹೇಗೆ? ವಿಶ್ವವಿದ್ಯಾಲಗಳಲ್ಲಿ ಬೋಧಕರ ಕೊರತೆ ಒಂದೆಡೆಯಾದರೆ ಸಾಹಿತ್ಯದ ಕೊರತೆ ಮತ್ತೊಂದೆಡೆ. ಇನ್ನು ತರಬೇತಿ ಪಡೆದ ಸಮಾಜಕಾರ್ಯಕರ್ತರಲ್ಲಿ ಗುಣಮಟ್ಟ ನಿರೀಕ್ಷಿಸಲು ಸಾಧ್ಯವೇ?
​
ಪರಿಸ್ಥಿತಿಗಳು ಏನೇ ಇರಲಿ, ಒಂದು ವೇಳೆ ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿರುವ ಮತ್ತು ಕಾರ್ಯನಿರ್ವಹಿಸುತ್ತಿರುವ ಸಮಾಜಕಾರ್ಯಕರ್ತರು ಸ್ಥಳೀಯ ಭಾಷೆಗಳಲ್ಲಿ ಸಾಹಿತ್ಯವನ್ನು ಸೃಷ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ ಕೊಂಚ ಮಟ್ಟಿಗಾದರೂ ಬದಲಾವಣೆಯನ್ನು ನಿರೀಕ್ಷಿಸಬಹುದಿತ್ತು. ಆದರೆ ಯಾರೂ ಸಹ ಈ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಕೇವಲ ಗುಣಮಟ್ಟ ಕಡಿಮೆಯಾಗಿದೆ ಎಂದು ಹಾರಾಡುತ್ತಾ ಸಮಾಜಕಾರ್ಯದ ಘನತೆಯನ್ನು ಹಾಳು ಮಾಡುತ್ತಿರುವರೇ ವಿನಃ ಸಾಹಿತ್ಯ ಸೃಷ್ಟಿಗಾಗಲೀ ಅಥವಾ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿಲ್ಲ. ಇದರ ಫಲವೇ ಇಂದು ಸಮಾಜಕಾರ್ಯ ಅನಾಥವಾಗಿದೆ. ಆದರೂ ಸಮಾಜಕಾರ್ಯವನ್ನು ಬೋಧಿಸುವ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಹಾಗೂ ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳ ಸಂಖ್ಯೆಯೂ ಬೆಳೆಯುತ್ತಿದೆ. ಆದರೆ ಗುಣಮಟ್ಟ ಮಾತ್ರ ಸುಧಾರಣೆಯಾಗಲಿಲ್ಲ. ಇದಕ್ಕೆ ಶಿಕ್ಷಣಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಿರುವ ಸಮಾಜಕಾರ್ಯಕರ್ತರೇ ನೇರ ಹೊಣೆಗಾರರು. ಆಂಗ್ಲಭಾಷೆಯಲ್ಲಿರುವ ಸಮಾಜಕಾರ್ಯಕ್ಕೆ ಸಂಬಂಧಿಸಿದ ಸಿದ್ಧಾಂತಗಳನ್ನು ತರ್ಜುಮೆ ಮಾಡಿದ್ದರೂ ಈ ವೇಳೆಗಾಗಲೆ ವಿಫುಲ ಸಾಹಿತ್ಯ ಸ್ಥಳೀಯ ಭಾಷೆಗಳಲ್ಲಿ ಸೃಷ್ಟಿಯಾಗಿರುತ್ತಿತ್ತು. ಪ್ರೊಫೆಸರ್ರುಗಳೆಂದೆನಿಸಿಕೊಂಡವರು ಕನಿಷ್ಟ ಪಕ್ಷ ತಾವು ಸೆಮಿನಾರ್ ಮತ್ತು ಕಾನ್ಫರೆನ್ಸ್‍ಗಳಲ್ಲಿ ಆಂಗ್ಲ ಭಾಷೆಗಳಲ್ಲಿ ಮಂಡಿಸಿದ ವಿಚಾರಗಳನ್ನು ಸ್ಥಳೀಯ ಭಾಷೆಗಳಲ್ಲಿ ಹೊರತಂದಿದ್ದರೂ ಇಂದು ಕೊಂಚ ಮಟ್ಟಿಗಾದರೂ ಪರಿಸ್ಥಿತಿ ತಿಳಿಯಾಗಿರುತ್ತಿತ್ತು. ಕೊನೇ ಪಕ್ಷ ಆಚರಣಾ ಕ್ಷೇತ್ರದಲ್ಲಿರುವ ಸಮಾಜಕಾರ್ಯಕರ್ತರು ತಮ್ಮ ಅನುಭವಗಳನ್ನು ಬರವಣೆಗೆಯ ರೂಪದಲ್ಲಿ ಬರೆದು ಅವುಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದರೂ ಇಂದು ವಿದ್ಯಾರ್ಥಿಗಳು ಈ ಪರಿ ಪರಿತಪಿಸಬೇಕಾಗಿರಲಿಲ್ಲ. ಆದರೆ ಶಿಕ್ಷಣ ಕ್ಷೇತ್ರವನ್ನೂ ಒಳಗೊಂಡಂತೆ ಆಚರಣಾ ಕ್ಷೇತ್ರದಲ್ಲಿರುವ ಸಮಾಜಕಾರ್ಯಕರ್ತರೂ ಸಹ ಈ ಪ್ರಯತ್ನಕ್ಕೆ ಮನಸ್ಸು ಮಾಡಲಿಲ್ಲ. ಪರಿಣಾಮ ಇಂದು ಸಿದ್ಧಾಂತಗಳನ್ನೇ ಅರ್ಥಮಾಡಿಕೊಳ್ಳದ ಸಮಾಜಕಾರ್ಯಕರ್ತರು ವಿಶ್ವವಿದ್ಯಾಲಯಗಳಿಂದ ಹೊರಬಂದು ಸಮಾಜಕಾರ್ಯದ ಆಚರಣೆಯಲ್ಲಿ ತೊಡಗಿದ್ದಾರೆ. ಇದು ಸಮಾಜಕಾರ್ಯದ ಅವಸಾನದ ಧ್ಯೋತಕವೇ ಹೊರತು ಉನ್ನತಿಯಲ್ಲ. ಕಲಿಕೆಗೆ ಅವಕಾಶವೇ ಇಲ್ಲದ ವಾತಾವರಣದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಂದ ಯಾವ ರೀತಿಯ ಗುಣಮಟ್ಟವನ್ನು ನಿರೀಕ್ಷಿಸಲು ಸಾಧ್ಯ. ಶಿಕ್ಷಣ ಗುಣಮಟ್ಟ ಸುಧಾರಣೆಯಾಗಬೇಕಿದೆ ಎಂದು ಬೊಬ್ಬೆಹಾಕುವ ವೃತ್ತಿನಿರತ ಸಮಾಜಕಾರ್ಯಕರ್ತರೇ, ಶಿಕ್ಷಣದ ಗುಣಮಟ್ಟ ಮತ್ತಷ್ಟು ಹಾಳಾಗುವುದಕ್ಕಿಂತ ಮುಂಚೆ ಸಾಹಿತ್ಯ ಸೃಷ್ಟಿಯ ಕಡೆ ಗಮನಹರಿಸಿ. ಸಮಾಜಕಾರ್ಯದಿಂದಲೇ ಜೀವನವನ್ನು ರೂಪಿಸಿಕೊಂಡಿರುವ ವೃತ್ತಿನಿರತ ಸಮಾಜಕಾರ್ಯಕರ್ತರೇ, ತಮಗೆ ಅನ್ನ ನೀಡಿದ ವೃತ್ತಿಗೆ ಏನಾದರೂ ಕೊಡುಗೆ ನೀಡಬೇಕೆಂದಿದ್ದರೆ ಕನಿಷ್ಟ ಪಕ್ಷ ನಿಮ್ಮ ಅನುಭವಗಳನ್ನಾದರೂ ಬರೆಯಲು ಪ್ರಯತ್ನಿಸಿ. ಕೇವಲ ಮಾತನಾಡುವುದರಿಂದ ಅಥವಾ ಬೊಬ್ಬೆಹಾಕುವುದರಿಂದ ಪರಿಸ್ಥಿತಿಯನ್ನು ತಿಳಿಗೊಳಿಸಲು ಸಾಧ್ಯವಿಲ್ಲ. ಕನಿಷ್ಟಪಕ್ಷ ಈ ಲೇಖನವನ್ನು ಓದಿದ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನಾದರೂ ಬರವಣೆಗೆಯ ರೂಪದಲ್ಲಿ ಹಂಚಿಕೊಳ್ಳಿ, ಆಗ ಸಮಾಜಕಾರ್ಯಕ್ಷೇತ್ರದಲ್ಲಿ ಜೀವನರೂಪಿಸಿಕೊಂಡಿದ್ದಕ್ಕಾದರೂ ಸಾರ್ಥಕವಾಗುತ್ತದೆ.
 

ಅನಾಮಿಕ
0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)