SKH
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
SKH

ಗ್ರಾಮೀಣ ಮಕ್ಕಳ ಹಕ್ಕುಗಳ ರಕ್ಷಣೆಗೆ ಆಪ್ತ ಸಮಾಲೋಚನೆಯ ಆವಶ್ಯಕತೆ

10/20/2017

0 Comments

 
Picture
ಭಾರತದ ಗ್ರಾಮೀಣ ಪ್ರದೇಶಗಳು ವೈವಿಧ್ಯಮಯವಾದ ಸವಾಲುಗಳು, ಸಮಸ್ಯೆಗಳನ್ನು ಬಹಳ ಹಿಂದಿನಿಂದಲೂ ಎದುರಿಸುತ್ತಿವೆ. ಗ್ರಾಮೀಣರ ಸಮಸ್ಯೆ ಎಂದ ಕೂಡಲೇ ಬಹುತೇಕರು ಹೇಳುವುದು ಬಡತನ, ಅನಕ್ಷರತೆ, ಹೆಚ್ಚು ಮಕ್ಕಳಿರುವ ದೊಡ್ಡ ಕುಟುಂಬಗಳು ಮತ್ತು ಆವಶ್ಯಕ ಸೌಲಭ್ಯಗಳಿಲ್ಲದಿರುವುದು.
ಮಂಡ್ಯ ಜಿಲ್ಲೆಯ ಕೃಷ್ಣರಾಜನಗರದಲ್ಲಿನ ಇಬ್ಬರು ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರು ತಮ್ಮ ಗ್ರಾಮೀಣ ವಿದ್ಯಾರ್ಥಿ ನಿಲಯದ ಕೋಣೆಯಲ್ಲಿ ಜೊತೆಯಾಗಿ ನೇಣು ಬಿಗಿದುಕೊಂಡು ಸತ್ತು ಹೋದರು. ಅವರ ಸಾವಿಗೆ ಏನು ಕಾರಣ ಎಂದು ಹುಡುಕಿಕೊಂಡು ಹೋಗಿದ್ದ ನಮ್ಮ ತನಿಖಾ ತಂಡಕ್ಕೆ ಯಾವುದೇ ಸಮರ್ಪಕ ಉತ್ತರ ಸಿಗಲಿಲ್ಲ. ಈ ಮಕ್ಕಳು ಸಾವಿನತ್ತ ಮೊಗ ಮಾಡುವಂತೆ ತಳ್ಳಿದ ಕಾರಣವೇನಿರಬಹುದು? ಶಾಲೆಯಲ್ಲಿ ತೊಂದರೆಯೆ, ಕುಟುಂಬದಲ್ಲಿ ಏನಾದರೂ ಒತ್ತಡವೇ, ಹೊರಗಿನವರು ಯಾರಾದರೂ ಕಾರಣವೇ? ಒಂದೂ ಅರಿವಾಗಲಿಲ್ಲ. ಈ ಮಕ್ಕಳು ಖಿನ್ನತೆಗೆ ಗುರಿಯಾಗಿದ್ದರೆ ಎಂಬುದಕ್ಕೆ ಮಕ್ಕಳ  ಸಂಬಂಧಿಗಳಿಂದ ಅಥವಾ ಶಿಕ್ಷಕ ವರ್ಗದಿಂದಲೂ ಅಷ್ಟೇನೂ ಗುರುತಿಸಬಹುದಾದ ಲಕ್ಷಣಗಳು ಸಿಗಲಿಲ್ಲ. ಅನೇಕರ ಅಭಿಪ್ರಾಯ, 'ಅವರಿಗೇನಾಗಿತ್ತು ಕಡಿಮೆ. ಎಲ್ಲ ಚೆನ್ನಾಗಿತ್ತು. ಉಣ್ಣಕ್ಕಿತ್ತು, ತಿನ್ನಕ್ಕಿತ್ತು. ಕೈಮೈಗೆ ಚೆನ್ನಾಗಿ ಇಕ್ಕಿಕೊಳ್ಳೋದಕ್ಕೆ ಬಟ್ಟೆ ಗಿಟ್ಟೆ ಇತ್ತು. ಏನ್ಕಷ್ಟ ಅವರಿಗೆ. ಈಗ ಅವರು ಸತ್ತು ಮನೆಯವರ ಪ್ರಾಣ ಹೋಗ್ತಿದೆ ಅಷ್ಟೆ!'
  
ಇದು ಅಷ್ಟು ಸರಳವಾದ ವಿಚಾರವಲ್ಲ ಎಂದು ನಮ್ಮೊಡನಿದ್ದ ಮನೋವೈದ್ಯರು ಮತ್ತು ತಜ್ಞರ ಅಭಿಪ್ರಾಯವಾಗಿತ್ತು. ಅಲ್ಲಿ ಬಹಳ ಸ್ಪಷ್ಟವಾಗಿ ತಿಳಿಯುತ್ತಿದ್ದುದು ಆ ಮಕ್ಕಳು ಎದುರಿಸುತ್ತಿದ್ದ ಸಮಸ್ಯೆಗಳನ್ನು ಪ್ರಾಯಶಃ ಅವರು ಯಾರಿಗೂ ಹೇಳಿಕೊಂಡಿಲ್ಲ, ಹೇಳಿಕೊಂಡಿದ್ದರೂ ಅವನ್ನು ಸಮಸ್ಯೆಗಳೆಂದು ದೊಡ್ಡವರಾರೂ ಒಪ್ಪಿಲ್ಲದಿರಬಹುದು, ಈ ಮಕ್ಕಳು ಖಿನ್ನತೆಯ ಲಕ್ಷಣಗಳನ್ನು ತೋರಿದ್ದರು ಯಾರೂ ಗುರುತಿಸಿಲ್ಲದಿರಬಹುದು. ಒಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳ ಮಕ್ಕಳ ಸಮಸ್ಯೆಗಳನ್ನು ತಿಳಿದು ಪರಿಹಾರಗಳನ್ನು ಸೂಚಿಸುವ ಅಥವಾ ಕಂಡುಕೊಳ್ಳುವ ಪ್ರಯತ್ನಗಳು ಇಲ್ಲ ಎನ್ನುವ ಸಾಮಾನ್ಯ ಜ್ಞಾನಕ್ಕೆ ಇದು ಇನ್ನೊಂದು ಉದಾಹರಣೆಯಾಯಿತಷ್ಟೆ.

ಭಾರತದ ಗ್ರಾಮೀಣ ಪ್ರದೇಶಗಳು ವೈವಿಧ್ಯಮಯವಾದ ಸವಾಲುಗಳು, ಸಮಸ್ಯೆಗಳನ್ನು ಬಹಳ ಹಿಂದಿನಿಂದಲೂ ಎದುರಿಸುತ್ತಿವೆ. ಗ್ರಾಮೀಣರ ಸಮಸ್ಯೆ ಎಂದ ಕೂಡಲೇ ಬಹುತೇಕರು ಹೇಳುವುದು ಬಡತನ, ಅನಕ್ಷರತೆ, ಹೆಚ್ಚು ಮಕ್ಕಳಿರುವ ದೊಡ್ಡ ಕುಟುಂಬಗಳು ಮತ್ತು ಆವಶ್ಯಕ ಸೌಲಭ್ಯಗಳಿಲ್ಲದಿರುವುದು. 

ಇವುಗಳ ನೆರಳಲ್ಲೇ ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳಾವುವು ಎಂದು ವಿಚಾರ ಮಾಡುತ್ತಾ ಹೋದರೂ ನೂರಾರು ಸಮಸ್ಯೆಗಳನ್ನು ಗುರುತಿಸಬಹುದು: ಆಹಾರದ ಕೊರತೆ, ಆಹಾರದಲ್ಲಿ ಪೌಷ್ಟಿಕತೆಯ ಕೊರತೆ, ವೈದ್ಯಕೀಯ ಸೌಲಭ್ಯಗಳ ಅಸಮರ್ಪಕತೆ, ಶಿಶು ಮರಣ, ಅಂಗವಿಕಲತೆ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಜೀತ, ಮಕ್ಕಳು ಓಡಿಹೋಗುವುದು/ ಕಾಣೆಯಾಗುವುದು, ಸಂಚಾರ ಸಾರಿಗೆಗಳ ಅವ್ಯವಸ್ಥೆ, ಶಾಲೆಗಳಲ್ಲಿನ ಕೊರತೆಗಳು, ನೀರು, ಉರುವಲು ಸಂಗ್ರಹಿಸಲು ಮಕ್ಕಳು ತೊಡಗುವುದು, ಧರ್ಮ/ಜಾತಿ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಮಕ್ಕಳೂ ಅತಿಯಾದ ಮಾದಕ ವಸ್ತುಗಳ ಬಳಕೆಗೆ ಬಲಿಯಾಗುತ್ತಿರುವುದು, ಬಹಳ ಸುಲಭವಾಗಿ ಮಕ್ಕಳು ಶೋಷಣೆ, ದೌರ್ಜನ್ಯ, ಅತ್ಯಾಚಾರಗಳಿಗೆ ಬಲಿಯಾಗುವುದು, ಇತ್ಯಾದಿ.

ಇಂತಹ ಸಮಸ್ಯೆಗಳನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೂರಾರು ಯೋಜನೆಗಳನ್ನು, ಕಾರ್ಯಕ್ರಮಗಳನ್ನು ನಿರ್ಮಿಸಿರುವುದು, ಅವುಗಳಿಗೆ ಆಯವ್ಯಯದಲ್ಲಿ ಹಣಕಾಸನ್ನು ಮೀಸಲಿಡುವುದು ಅವ್ಯಾಹತವಾಗಿ ನಡೆದುಬಂದಿದೆ. ಆದಾಗ್ಯೂ ಮಕ್ಕಳ ಸಾಮಾಜಿಕ, ಆರೋಗ್ಯ, ಶೈಕ್ಷಣಿಕ, ರಕ್ಷಣೆ ಮತ್ತು ಮಾನಸಿಕ ಸ್ವಾಸ್ತ್ಯಕ್ಕಾಗಿ ಇರುವ ಕಾರ್ಯಕ್ರಮಗಳು ಸಮರ್ಪಕವಾಗಿಲ್ಲದಿರುವ ಬಗ್ಗೆ ಅಲ್ಲಲ್ಲಿ ಕೇಳಿಬರುತ್ತವೆ. ಇದರಲ್ಲಿ ಬಹಳ ಪ್ರಮುಖವಾದ ಅಂಶ, ಗ್ರಾಮೀಣ ಮಕ್ಕಳನ್ನು ಕುರಿತು ನಿರ್ಧಾರಗಳೆಲ್ಲವೂ ನಗರಗಳಲ್ಲಿ ಆಗುತ್ತವೆ, ನಿರ್ಧಾರ ಮಾಡುವವರಿಗೆ ಗ್ರಾಮೀಣ ಬದುಕಿನ ಬಗ್ಗೆ ತಿಳಿದಿರುವುದಿಲ್ಲ ಮತ್ತು ಗ್ರಾಮೀಣ ಮಕ್ಕಳ ಆಶೆ ಆಶೋತ್ತರಗಳನ್ನು ಅರಿತುಕೊಳ್ಳುವ ಯತ್ನಗಳನ್ನು ಅಷ್ಟಾಗಿ ಯಾರೂ ಮಾಡುವುದಿಲ್ಲ, ಅದಕ್ಕೆ ತಕ್ಕುದಾದ ಯೋಜನೆಗಳನ್ನು ರೂಪಿಸುವುದಿಲ್ಲ ಎಂಬುದೂ ಒಂದು ವಿಚಾರ.

ನಾವಿಲ್ಲಿ ಗಮನಿಸಬೇಕಾಗಿರುವ ಒಂದು ಪ್ರಮುಖ ವಿಚಾರ, ಈಗಲೂ ಭಾರತದಲ್ಲಿ ಗ್ರಾಮೀಣ ವಾಸಿಗಳ ಸಂಖ್ಯೆಯೇ ಅತ್ಯಧಿಕವಾಗಿರುವುದು (ಗ್ರಾಮೀಣ 83.3 ಕೋಟಿ ಮತ್ತು ನಗರ 37.7 ಕೋಟಿ, 2011 ಜನಗಣತಿ).2 ಹೀಗಿದ್ದಾಗ್ಯೂ ಗ್ರಾಮೀಣ ಮಕ್ಕಳಿಗೆ ಸಿಗುವ ಸೌಲಭ್ಯಗಳಲ್ಲಿ ಕೊರತೆ ಸದಾ ಕಾಲಕ್ಕೂ ಇದ್ದದ್ದೇ. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ಸ್ಪಷ್ಟಪಡಿಸಿರುವಂತೆ ಯಾವುದೇ ಮಕ್ಕಳ ನಡುವೆ ತಾರತಮ್ಯವಿರಬಾರದು.3 ನಗರ ಗ್ರಾಮೀಣ ಮಕ್ಕಳಿಗೆ ಇರುವ ಸೌಲಭ್ಯಗಳು, ವ್ಯವಸ್ಥೆಗಳಲ್ಲಿನ ಲಭ್ಯತೆ ಮತ್ತು ಗುಣಮಟ್ಟದಲ್ಲಿರುವ ತಾರತಮ್ಯವೇ ಗ್ರಾಮೀಣ ಮಕ್ಕಳನ್ನು ಹೆಚ್ಚು ಹೆಚ್ಚು ಸಮಸ್ಯೆಗಳತ್ತ ದೂಡುವಂತಾಗಿದೆ. ಗ್ರಾಮೀಣ ಮಕ್ಕಳ ಅನಾರೋಗ್ಯ, ಮಾನಸಿಕ ಸಮಸ್ಯೆಗಳ ಹೆಚ್ಚಿನಂಶ ಬೆಳಕಿಗೆ ಬರುವುದೇ ಇಲ್ಲ. ಇವೇ ಕಾಣದಿರುವಾಗ, ಇನ್ನು ಮಕ್ಕಳ ಮೇಲಾಗುವ ಅಪರಾಧಗಳು (ತಾರತಮ್ಯ, ದೈಹಿಕ, ಮಾನಸಿಕ, ಲೈಂಗಿಕ, ಆರ್ಥಿಕ ಶೋಷಣೆಗಳು), ಬಾಲ್ಯ ವಿವಾಹ, ದೇವದಾಸಿ ಪದ್ಧತಿ ದೊಡ್ಡ ವಿಚಾರಗಳೇ ಅಲ್ಲವಾಗಿವೆ. ಇಷ್ಟರ ಮೇಲೆ ಯಾವುದಾದರೂ ಮಗು ಕಾನೂನು ಮುರಿದು 'ಕಾನೂನಿನೊಡನೆ ಸಂಘರ್ಷಕ್ಕೊಳಗಾದ ಮಗು' ಎಂದು ಗುರುತಿಸಲ್ಪಟ್ಟರೆ ಅಂತಹ ಮಕ್ಕಳನ್ನು ಮಕ್ಕಳ ನ್ಯಾಯ ಕಾನೂನಿನ ವ್ಯವಸ್ಥೆಯಡಿ ತಂದು ಸುಧಾರಣೆಗೆ ಚಿಂತಿಸುವ ಕ್ರಮಗಳು ಜರಗುತ್ತವೇನು? ಅವರಿಗೆ ಮಕ್ಕಳ ಕಲ್ಯಾಣ ಕಾರ್ಯಕ್ರಮಗಳ ಸೌಲಭ್ಯ ಸಿಗುತ್ತದೇನು?4 ಇದೆಲ್ಲದರ ನಡುವೆ ದೇಶದ ಚಿಂತಕರನ್ನು ಬಾಧಿಸುತ್ತಿರುವ ಮುಖ್ಯ ವಿಚಾರ ಗ್ರಾಮೀಣ ಪ್ರದೇಶಗಳಿಂದ ಕುಟುಂಬಗಳು ಕೆಲಸ, ಬದುಕು ಹುಡುಕಿಕೊಂಡು ನಗರಗಳಿಗೆ ವಲಸೆ ಹೋಗುತ್ತಿರುವುದು ಮತ್ತು ಮಕ್ಕಳೊಡನೆ ನಗರಗಳ ಕೊಳೆಗೇರಿಗಳಲ್ಲಿ ವಾಸಿಸುತ್ತಿರುವುದು.5 ಇಲ್ಲಿಯೂ ಗ್ರಾಮೀಣ ಮಕ್ಕಳಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಅತೀವವಾದ ಆರ್ಥಿಕ ಒತ್ತಡಗಳು, ಸಾಮಾಜಿಕ ಪಲ್ಲಟಗಳು ಆಗುತ್ತಿರುವ ಇಂದಿನ ದಿನಗಳಲ್ಲಿ ಮಕ್ಕಳ ಹಕ್ಕುಗಳ ದೃಷ್ಟಿಕೋನದಲ್ಲಿ ಗ್ರಾಮೀಣ ಮಕ್ಕಳಿಗೆ ಸಿಗಬೇಕಿರುವ ಸೇವಾ ಸೌಲಭ್ಯಗಳು ಮತ್ತು ರಕ್ಷಣೆಗಳನ್ನು ವಿಮರ್ಶಿಸಿ, ಅವುಗಳನ್ನು ಉತ್ತಮಗೊಳಿಸುವ ಕೆಲಸ ಈಗಿನ ತುರ್ತಾಗಿದೆ.

ನಮ್ಮ ನಮ್ಮ ಮಕ್ಕಳನ್ನು ಕಾಪಾಡಬೇಕು, ರಕ್ಷಿಸಬೇಕು, ಅವರ ಬೇಕು ಬೇಡಗಳನ್ನು ಗಮನಿಸಬೇಕು ಎನ್ನುವುದು ಎಲ್ಲ ಪೋಷಕರ ಸಾಮಾನ್ಯ ಜ್ಞಾನ. ಇದನ್ನು ತಮ್ಮ ಕೈಲಾದ ಮಟ್ಟಿಗೆ ಮಾಡುತ್ತಾರೆ ಎಂದೂ ನಂಬೋಣ. ಆದರೆ, ಈ ದೃಷ್ಟಿ ಸಾಮೂಹಿಕವಾಗಿ ಇನ್ನೂ ಬೆಳೆದಿಲ್ಲ ಎನ್ನುವುದಕ್ಕೆ ನಮ್ಮ ಸುತ್ತಮುತ್ತಲಿರುವ ಮಕ್ಕಳಿಗೆ ಸಂಬಂಧಿಸಿದ ಸಾಮಾಜಿಕ ಸಮಸ್ಯೆಗಳೇ ಸಾಕ್ಷಿ. ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸಿ ಕಾನೂನಿದೆ, ಬಾಲ್ಯ ವಿವಾಹ ನಿಷೇಧಕ್ಕೂ ಕಾನೂನಿದೆ. ಅಂತೆಯೇ ಮಕ್ಕಳನ್ನು ಮಾರುವುದು, ಸಾಗಿಸುವುದನ್ನು ಸ್ಪಷ್ಟವಾಗಿ ಅಪರಾಧಗಳೆಂದು ಘೋಷಿಸಲಾಗಿದೆ. ಮಕ್ಕಳ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದೆಂದು ಸಂವಿಧಾನವೂ ಹೇಳುತ್ತದೆ. ಹೀಗಿದ್ದಾಗ್ಯೂ, ಮಕ್ಕಳು ಅದರಲ್ಲೂ ಗ್ರಾಮೀಣ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು ಅವರಿಗೆ ತಮ್ಮ ಪರಿಸರದಲ್ಲಿ ಸಮರ್ಪಕ ಸಲಹೆ ಸೂಚನೆಗಳನ್ನು ಕೊಡುವ ವ್ಯವಸ್ಥೆಯಲ್ಲಿ ಕೊರತೆ ಕಂಡುಬರುತ್ತದೆ.

ಮಕ್ಕಳು ತಾಯ ಗರ್ಭದಲ್ಲಿರುವಾಗಲೇ ಮಕ್ಕಳ ಪರವಾದ ಚಿಂತನೆಗಳು ಆರಂಭವಾಗಬೇಕಿದೆ. ಇಲ್ಲಿನ ಆವಶ್ಯಕತೆ, ತಾಯಿಗೆ ಬೇಕಾದ ಆರೈಕೆ, ಉತ್ತಮವಾದ ಪೌಷ್ಟಿಕ ಆಹಾರ, ರೋಗನಿರೋಧಕಗಳು, ಹೆರಿಗೆಗೆ ಮೊದಲು ಕನಿಷ್ಠ ಮೂರು ಬಾರಿಯಾದರೂ ನುರಿತ ವೈದ್ಯರಿಂದ ತಪಾಸಣೆ ಮತ್ತು ಸುಲಲಿತವಾದ ಹೆರಿಗೆಗೆ ತರಬೇತಿ ಹೊಂದಿದವರ ಸಹಾಯ. ಭಾರತದಲ್ಲಿ ಈಗಲೂ ಪ್ರತಿ ಲಕ್ಷ ಹೆರಿಗೆಗಳಾದಾಗ 212 ತಾಯಂದಿರು ತಡೆಗಟ್ಟಬಹುದಾದ ಕಾರಣಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.6 ಎಷ್ಟೋ ಬಾರಿ ಸತ್ತ ತಾಯ ಗರ್ಭದಲ್ಲೇ ಮಕ್ಕಳೂ ಸಾವನಪ್ಪುತ್ತಿದ್ದಾರೆ. ಇವುಗಳಿಗೆ ಬಹಳ ಮುಖ್ಯವಾದ ಕಾರಣ ತಾಯಿ ಗರ್ಭವತಿಯಾಗುವುದಕ್ಕೆ ಮುನ್ನ ಮತ್ತು ಗರ್ಭಾವಸ್ಥೆಯಲ್ಲಿದ್ದಾಗ ಆಕೆಗೆ ಮತ್ತು ಆಕೆಯ ಪತಿಯನ್ನೂ ಒಳಗೊಂಡಂತೆ ಕುಟುಂಬದ ಎಲ್ಲ ಸದಸ್ಯರಿಗೆ ಅತ್ಯಾವಶ್ಯಕವಾಗಿ ಸಿಗಲೇಬೇಕಾದ ಆಪ್ತಸಮಾಲೋಚನೆ ಇಲ್ಲದಿರುವುದು. ಅದರಲ್ಲೂ ನಮ್ಮ ಗ್ರಾಮೀಣ ಸಮುದಾಯಗಳಲ್ಲಿ ಅಷ್ಟೇನೂ ಶಿಕ್ಷಣವಿಲ್ಲದ,7 ಸಮಸ್ಯೆಗೆ ಕಾರಣವಾಗಿದೆ. ಇದರೊಂದಿಗೆ ತಳಕುಹಾಕಿಕೊಂಡಿರುವ ಇತರ ಸಮಸ್ಯೆಗಳು, ಗ್ರಾಮೀಣ ಪ್ರದೇಶಗಳಲ್ಲಿಯೂ ಆರಂಭವಾಗಿರುವ ಭ್ರೂಣಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಮತ್ತು ಹೆಣ್ಣು ಮಕ್ಕಳ ಹತ್ಯೆಯಂತಹ ಪ್ರಕರಣಗಳು.

ಎಲ್ಲ ಹದಿವಯಸ್ಸಿನವರಿಗೆ ವಿವಾಹಪೂರ್ವ ಆಪ್ತಸಮಾಲೋಚನೆ ಮತ್ತು ವಿವಾಹದ ನಂತರ ಕುಟುಂಬಗಳಿಗೆ ಮಕ್ಕಳ ಜನನ, ತಾಯಿ ಮಕ್ಕಳ ಆರೋಗ್ಯ, ಶಿಶುಗಳು ಮತ್ತು ಮಕ್ಕಳ ಮರಣ ತಡೆ, ಮಕ್ಕಳ ಪೌಷ್ಟಿಕಾಂಶ ಮತ್ತು ರೋಗ ನಿರೋಧಕಗಳನ್ನು ಕೊಡಿಸುವುದೇ ಮೊದಲಾದವುಗಳನ್ನು ಕುರಿತು ಆಪ್ತ ಸಮಾಲೋಚನೆ ಸಹಾಯ ನೀಡುವವರ ಆವಶ್ಯಕತೆ ಇದೆ. ನಮ್ಮ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದೊಡನೆ ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತೆಯರು ಇಲ್ಲಿ ಪ್ರಮುಖ ಪಾತ್ರವಹಿಸಬೇಕಿದೆ. ಈ ಮೂವರ ವೃತ್ತಿ ಜವಾಬ್ದಾರಿ ಪಟ್ಟಿ ನೋಡಿದರೆ ಈ ಮೇಲೆ ವಿವರಿಸಿರುವ ಎಲ್ಲ ಜವಾಬ್ದಾರಿಗಳು ಕಂಡು ಬರುತ್ತವೆ. ಆದರೂ 18ರೊಳಗಿನ ವಿವಾಹಗಳು, 18ರೊಳಗಿನವರು ಗರ್ಭಿಣಿಯರಾಗುವುದು, ಮುಂದೆ ಎಲ್ಲ ಗರ್ಭಿಣಿಯರೂ ವೈದ್ಯರ ಪರೀಕ್ಷೆಗೆ ಒಳಗಾಗದಿರುವುದು, ಭ್ರೂಣಲಿಂಗ ಪತ್ತೆ ನಡೆಯುವುದು, ಹೆರಿಗೆ ಸಮಯದಲ್ಲಿ ತೊಂದರೆಗಳಾಗಿ ತಾಯಿ ಮಕ್ಕಳು ನಿಧನ ಹೊಂದುವುದು ನಡೆಯುತ್ತಲೇ ಇದೆ.

ಭಾರತದ ಲಿಂಗಾನುಪಾತವನ್ನು ನೋಡಿದರೆ (ಲಿಂಗಾನುಪಾತ 2011ರಲ್ಲಿ 940 ಸ್ತ್ರೀಯರಿಗೆ 1000 ಪುರುಷರು) ನಾವು ಇನ್ನೂ ಎಂತಹ ಅಪಾಯಕರ ಸ್ಥಿತಿಯಲ್ಲಿದ್ದೇವೆ ಎಂಬುದು ಗೋಚರವಾಗುತ್ತದೆ  ಪ್ರಾಯಶಃ ಕಳೆದ ದಶಕದಲ್ಲಿ ಆದ ದೊಡ್ಡ ಪ್ರಮಾಣದ ಪ್ರಚಾರ, ಹಳ್ಳಿ ಪಟ್ಟಣಗಳಲ್ಲಿ ಆದ ಸಮಾಲೋಚನೆಗಳ ಫಲ ಈಗೀಗ ಕಂಡುಬರುತ್ತಿರಬಹುದು (2001ರಲ್ಲಿ 933 ಇತ್ತು). ಜೊತೆಗೆ ವಿವಿಧ ಹಂತಗಳಲ್ಲಿ ಗರ್ಭಿಣಿಯರು ಮತ್ತು ಅವರ ಕುಟುಂಬಳೊಂದಿಗೆ ನಡೆದಿರಬಹುದಾದ ಆಪ್ತ ಸಮಾಲೋಚನೆಗಳು, ಕಾನೂನು ಅರಿವು, ಶಾಲಾ ಕಾಲೇಜುಗಳ ಮಟ್ಟದಲ್ಲಿ ನಡೆದ ಜಾಗೃತಿ ಶಿಬಿರಗಳು ಕೂಡಾ ಇದಕ್ಕೆ ಸ್ವಲ್ಪ ಮಟ್ಟಿಗೆ ಪೂರಕವಾಗಿದೆ ಎನ್ನಬಹುದು.

ಮಕ್ಕಳು ಬೆಳೆಯುವ ಹಂತದಲ್ಲಿ ಎದುರಿಸುವ ದೊಡ್ಡ ಸಮಸ್ಯೆ ನಮ್ಮ ದೇಶದಲ್ಲಿ ಈಗಲೂ ಬೇರುಬಿಟ್ಟುಕೊಂಡಿರುವ ಜಾತಿ, ಧರ್ಮ ಮತ್ತು ಅಂತಸ್ತಿನ ತಾರತಮ್ಯ. ಇದರೊಂದಿಗೆ ತಳಕು ಹಾಕಿಕೊಂಡಿರುವುದು ಕಲಿಕೆಯ ಮಟ್ಟವನ್ನು ನಿರ್ಧರಿಸುವ ಪರೀಕ್ಷೆಗಳು, ಅಂಕಗಳು, ಶ್ರೇಣಿಗಳು, ಮೇಲ್ಮಟ್ಟದ ಕಲಿಕೆಗೆ ಅವಕಾಶಗಳು, ಬೋಧನಾ ಭಾಷೆ (ಇಂಗ್ಲಿಷ್ ಅಥವಾ ಕನ್ನಡ) ಇತ್ಯಾದಿ. ಗೃಹಕೃತ್ಯಗಳು, ಶಾಲೆಗೆ ಹೋಗಿ ಬರುವುದು, ಶೈಕ್ಷಣಿಕ ಜವಾಬ್ದಾರಿಗಳನ್ನು ನಿರ್ವಹಿಸುವುದು ಗ್ರಾಮೀಣ ಮತ್ತು ನಗರಗಳ ಮಕ್ಕಳಿಗೆ ವ್ಯತ್ಯಾಸವಿದೆ. ಆದರೆ, ಅವರು ಏನು ಕಲಿಯಬೇಕು ಮತ್ತು ಯಾವುದರಲ್ಲಿ ಸ್ಪರ್ಧಿಸಬೇಕು ಎನ್ನುವುದಕ್ಕೆ ಮಾತ್ರ ವ್ಯತ್ಯಾಸವಿಲ್ಲ. ಜೊತೆಗೆ, ಈಗಿನ ನಗರವಾಸಿ ಮಕ್ಕಳಿಗೆ ಸೌಲಭ್ಯಗಳೊಡನೆ ಎಂತೆಂತಹ ಆಸೆ ಆಶೋತ್ತರಗಳನ್ನು ಸೃಷ್ಟಿಸಲಾಗುತ್ತಿದೆಯೋ, ಅಂತಹದೇ ಬೆಟ್ಟದಂತಹ ಗುರಿಗಳನ್ನು ಗ್ರಾಮೀಣ ಮಕ್ಕಳೆದುರೂ ನಾವು ಇಡುತ್ತಿದ್ದೇವೆ. ಆದರೆ, ಅದಕ್ಕೆ ಪೂರಕವಾಗಿರುವ ಸೌಲಭ್ಯಗಳು ಮತ್ತು ವ್ಯವಸ್ಥೆಗಳನ್ನು ಮಾತ್ರ ನೀಡುತ್ತಿಲ್ಲ. ಉದಾಹರಣೆಗೆ, ಶಾಲಾ ಕಟ್ಟಡಗಳು, ಶಾಲಾ ಸೌಲಭ್ಯಗಳಾದ ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ, ತರಬೇತಿ ಹೊಂದಿದ ಮತ್ತು ನುರಿತ ಶಿಕ್ಷಕ ವರ್ಗ, ಇತ್ಯಾದಿ. ಬರಿಯ ಮಧ್ಯಾಹ್ನದ ಊಟ, ಶಾಲಾ ಪುಸ್ತಕಗಳನ್ನು ಕೊಟ್ಟುಬಿಟ್ಟರೆ ಶಾಲಾಮಕ್ಕಳ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗದು. ಇಲ್ಲಿ ಗಮನಕ್ಕೆ ತೆಗೆದುಕೊಳ್ಳಬೇಕಿರುವುದು ಗ್ರಾಮೀಣ ಮಕ್ಕಳ ಮಾನಸಿಕ ಆರೋಗ್ಯವನ್ನು ಕಾಪಾಡಲು ಮತ್ತು ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳುವುದು.

ಶಾಲಾ ವಯಸ್ಸಿನ ಗ್ರಾಮೀಣ ಮಕ್ಕಳಿಗೂ ಈಗ ದೂರದರ್ಶನ, ಪತ್ರಿಕೆ ಮತ್ತು ಸಾಕಷ್ಟು ಕಡೆಗಳಲ್ಲಿ ಲಭ್ಯವಿರುವ ಅಂತರ್ಜಾಲದಿಂದ ಸಾಕಷ್ಟು ಮಾಹಿತಿ ತಲುಪುತ್ತಿದೆ. ಇವೆಲ್ಲವೂ ಶೈಕ್ಷಣಿಕ ಪೂರಕ ಮಾಹಿತಿ ಅಷ್ಟೇ ಎಂದು ಯಾರೂ ಮಿತಿ ಹಾಕಿಕೊಳ್ಳಬೇಕಿಲ್ಲ. ಮಕ್ಕಳ ಆಶೆಗಳು, ಬೇಡಿಕೆಗಳ ಪಟ್ಟಿ ಏರುತ್ತಲೇ ಇರುತ್ತದೆ. ಆದರೆ, ವಾಸ್ತವ ಸ್ಥಿತಿಗಳು (ಕುಟುಂಬದ ಆರ್ಥಿಕ ಪರಿಸ್ಥಿತಿ, ಸುತ್ತಮುತ್ತಲಿನ ಸಾಮಾಜಿಕ ಕಡಿವಾಣಗಳು) ಗ್ರಾಮೀಣ ಪ್ರದೇಶಗಳಲ್ಲಿ ಬದಲಾಗಿಲ್ಲ. ನಗರಗಳಲ್ಲಿ ಅದೆಂತಹದೋ ವಿಶೇಷ ಆಕರ್ಷಣೆಯಿದೆ, ಅಲ್ಲಿ ಎಲ್ಲವೂ ಇದೆ, ಒಮ್ಮೆ ನಗರಕ್ಕೆ ಹೋಗಿಬಿಟ್ಟರೆ ಎಲ್ಲ ವೈಭೋಗಗಳನ್ನು ಅನುಭವಿಸಬಹುದು ಎಂದು ಅನೇಕ ಮಕ್ಕಳು ನಗರಗಳಿಗೆ (ಓಡಿ) ಹೋಗುವುದು ಸಾಮಾನ್ಯವಾಗಿದೆ.8

ಗುಟ್ಕಾ, ಪಾನ್ನಂತಹ ಚೋದಕಗಳನ್ನು ಅಗಿಯುವುದರಿಂದ ಹಿಡಿದು ಆರಂಭವಾಗುವ ದುಶ್ಚಟಗಳಿಗೆ ಬಲಿಯಾಗುತ್ತಿರುವ ಮಕ್ಕಳ ಸಂಖ್ಯೆ ತ್ವರಿತವಾಗಿ ಏರುತ್ತಿರುವುದನ್ನು ಅನೇಕರು ಗಮನಿಸುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆತಂಕವನ್ನು ಮಕ್ಕಳೊಡನೆ ಕೆಲಸ ಮಾಡುತ್ತಿರುವ ಸ್ವಯಂಸೇವಾ ಸಂಘಟನೆಗಳು ದಾಖಲಿಸಿವೆ.9 ಇದರೊಂದಿಗೆ ತಳಕು ಹಾಕಿಕೊಂಡಿರುವ ಇನ್ನೊಂದು ಅಂಶ ಗ್ರಾಮೀಣ ಮಕ್ಕಳು ಶಾಲೆಗಳಿಗೆ ತಪ್ಪಿಸುವುದು, ಶಾಲೆ ಬಿಡುವುದು ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವುದು (ಬಹಳ ಮುಖ್ಯವಾಗಿ ಕಳ್ಳತನ, ದೈಹಿಕ ಹಲ್ಲೆ, ಹದಿ ವಯಸ್ಸಿನ ಗಂಡು ಹೆಣ್ಣುಗಳು ಪೋಷಕರಿಗೆ ತಿಳಿಸದೆ ಜೊತೆಯಾಗಿ ಓಡಿಹೋಗುವುದು, ಇತ್ಯಾದಿ). ಗ್ರಾಮೀಣ ಹದಿಹರೆಯದ ಹೆಣ್ಣುಮಕ್ಕಳು ಎದುರಿಸುವ ಇನ್ನೊಂದು ಪ್ರಮುಖ ಸಮಸ್ಯೆಗಳ ಗುಂಪು: ಬಾಲ್ಯವಿವಾಹ, ಈಗಲೂ ಜೀವಂತವಾಗಿರುವ ದೇವದಾಸಿ ಅಥವಾ ಅದರ ಇನ್ನಾವುದೋ ರೂಪ ಮತ್ತು ಯಾವುದೋ ಆಕರ್ಷಣೆಗೆ ಬಲಿಯಾಗಿ ಮಾರಾಟ ಮತ್ತು ಸಾಗಣೆಗೆ ಗುರಿಯಾಗುವುದು.  ಈ ಎಲ್ಲ ಸಮಸ್ಯೆಗಳಿಗೆ ಸಂಬಂಧಿಸಿದ ಮತ್ತೊಂದು ಅಂಶ ಹೀಗೆ ತೊಂದರೆಗಳಿಗೆ ಸಿಲುಕಿಕೊಳ್ಳುವ ಮಕ್ಕಳು ಖಿನ್ನತೆಯಿಂದ ಬಳಲುವುದು, ಒಂಟಿಯಾಗಿರಲು ಯತ್ನಿಸುವುದು, ಆತ್ಮಹತ್ಯೆಗೆ ಈಡಾಗುವುದು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗಳು ಮತ್ತು ಜಿಲ್ಲಾ ಮಕ್ಕಳ ನ್ಯಾಯ ಮಂಡಳಿಗಳೆದುರು ಬರುವ ಪ್ರಕರಣಗಳನ್ನು ಗಮನಿಸಿದಾಗ ಇದು ಬೆಳಕಿಗೆ ಬರುತ್ತದೆ.10
 
ಗ್ರಾಮೀಣ ಮಕ್ಕಳ ಇಂತಹ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಕುರಿತು ಆಳವಾದ ಅಧ್ಯಯನ, ದಾಖಲೆಯ ಆವಶ್ಯಕತೆಯಿದೆ. ಬಹುಮುಖ್ಯವಾಗಿ ಆಗಬೇಕಿರುವುದು, ಮಕ್ಕಳು ತೊಂದರೆಗಳಿಗೆ ಸಿಲುಕಿಕೊಳ್ಳುವ ಮೊದಲೇ ಗುರುತಿಸುವ, ತಡೆಗಟ್ಟುವ ಮತ್ತು ಅಕಸ್ಮಾತ್ ತೊಂದರೆಗಳಿಗೆ ಸಿಲುಕಿಕೊಂಡದ್ದೇ ಆದಲ್ಲಿ ಅವರನ್ನು ರಕ್ಷಿಸುವ ಮತ್ತು ಆವಶ್ಯಕ ಚಿಕಿತ್ಸೆ, ಕಾನೂನು ನೆರವು ನೀಡುವುದು ಮತ್ತು ಪುನರ್ವಸತಿಗೆ ಸಹಾಯ ಮಾಡುವುದು ಅತ್ಯಾವಶ್ಯಕವಾಗಿದೆ.
  
ನಗರಗಳಲ್ಲಿನ ಪೋಷಕರು ತಮ್ಮ ಮಕ್ಕಳ ಆವಶ್ಯಕತೆಗಳಿಗೆ ಸ್ಪಂದಿಸಲು ಹಲವಾರು ಸಾಧ್ಯತೆಗಳಿವೆ. ಅವರಿಗಿರುವ ಮಾಹಿತಿ, ಆರ್ಥಿಕ ಶಕ್ತಿ, ಬೇಕಾದ ಸೇವೆ, ಸೌಲಭ್ಯಗಳು, ವಸ್ತುಗಳ ಲಭ್ಯತೆಯೇ ಮೊದಲಾದವು ಇದಕ್ಕೆ ಕಾರಣ ಎನ್ನಬಹುದು. ಜೊತೆಗೆ ತಮ್ಮ ಮಕ್ಕಳಿಗೆ ಏನಾದರೂ ದೈಹಿಕ, ಮಾನಸಿಕ ಏರುಪೇರಾದಲ್ಲಿ ಪೋಷಕರು ತಕ್ಷಣವೇ ಗಮನ ಕೊಡುವುದು ಖಂಡಿತಾ. ಆದರೆ, ಇಂತಹದೊಂದು ಸ್ಪಂದನೆ ಎಲ್ಲ ಗ್ರಾಮೀಣ ಮಕ್ಕಳಿಗೆ ಅವರ ಪೋಷಕರಿಂದ ಸಿಗುವ ಸಾಧ್ಯತೆ ಬಹಳ ಕಡಿಮೆ. ಈಗಲೂ ಮಕ್ಕಳ ಮಾನಸಿಕ ಸಮಸ್ಯೆಗಳನ್ನು ಗ್ರಾಮೀಣರು ದೇವರು, ದೆವ್ವ, ಗಾಳಿ ಎಂದೇ ಭಾವಿಸಿ ಮಾಟಮಂತ್ರಗಳಿಗೆ ಹೋಗುತ್ತಿದ್ದಾರೆ. ಚಿಕಿತ್ಸೆಯ ಆವಶ್ಯಕತೆ ಕುರಿತು ಇನ್ನೂ ಅರಿವು ಹೆಚ್ಚಿಲ್ಲದಿರುವುದು ಕಂಡುಬರುತ್ತದೆ.  ಗ್ರಾಮೀಣ ಪ್ರದೇಶಗಳಲ್ಲಿ ಮೊದಲು ಕಂಡುಬರುತ್ತಿದ್ದ ಸಾಂಸ್ಕೃತಿಕ ಚಟುವಟಿಕೆಗಳು, ಗ್ರಾಮೀಣ ಕ್ರೀಡೆಗಳು, ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳು, ಕೌಟುಂಬಿಕ ಚಟುವಟಿಕೆಗಳು ವಿವಿಧ ಕಾರಣಗಳಿಂದ ಕಣ್ಮರೆಯಾಗುತ್ತಿರುವುದೂ, ಗ್ರಾಮೀಣ ಮಕ್ಕಳು ಏಕತಾನತೆಯತ್ತ ಸಾಗುವುದಕ್ಕೆ, ಅನಾದರಣ ಮತ್ತು ಅವಕಾಶ ವಂಚನೆಯಿಂದಾಗಿ ಖಿನ್ನತೆಗೆ ಗುರಿಯಾಗುವುದಕ್ಕೆ ಕಾರಣವಾಗುತ್ತಿದೆ ಎನ್ನಬಹುದು.
 
ಸಾಧ್ಯತೆಗಳು
ಗ್ರಾಮೀಣ ಪ್ರದೇಶದ ಮಕ್ಕಳನ್ನು ಮತ್ತು ಅವರ ಸ್ಥಿತಿಗತಿಗಳನ್ನು ಹತ್ತಿರದಿಂದ ಗಮನಿಸುವಾಗ ಕಂಡುಬರುವ ಪ್ರಮುಖ ಅಂಶ ಪರಿಸ್ಥಿತಿಯನ್ನು ಹೀಗೆಯೇ ಬಿಟ್ಟುಬಿಟ್ಟರೆ ಇನ್ನು ಕೆಲವೇ ವರ್ಷಗಳಲ್ಲಿ ಗ್ರಾಮೀಣ ಮಕ್ಕಳ ಸಮಸ್ಯೆಗಳು ಇನ್ನೂ ಹೆಚ್ಚಾಗಿ ಅವುಗಳನ್ನು ನಿರ್ವಹಿಸಲಾಗದಿರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮಕ್ಕಳ ಮನಸ್ಸು ಆರೋಗ್ಯಕರವಾಗಿದ್ದಾಗ ಮಾತ್ರ ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳ ಆರ್ಥಿಕ, ಸಾಮಾಜಿಕ, ನೈತಿಕ ಬದುಕು ನೆಮ್ಮದಿಯಿಂದಿರುತ್ತದೆ. ಹೀಗಾಗಿ, ಗ್ರಾಮೀಣ ಮಕ್ಕಳ ಬದುಕನ್ನು ಧನಾತ್ಮಕವಾಗಿ ಕಟ್ಟಿಕೊಡಲು ಮತ್ತು ಅವಕಾಶಗಳನ್ನು ಸೃಷ್ಟಿಸಲು ನಮ್ಮ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಯೋಜನೆಗಳನ್ನು ನಿರ್ಮಿಸುವವರು ಚಿಂತಿಸಬೇಕಿದೆ. ಅದರ ಆರಂಭವಿರುವುದು ಪ್ರತಿಯೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಸ್ವರೂಪದ ಆಪ್ತಸಮಾಲೋಚಕರ ಆವಶ್ಯಕತೆಯನ್ನು ಸಂಬಧಿಸಿದ ಇಲಾಖೆಗಳು ಕಂಡುಕೊಳ್ಳುವುದರಲ್ಲಿ. ಹಾಗೆಂದು ಆಪ್ತಸಮಾಲೋಚಕರ ದೊಡ್ಡ ಪಡೆಯನ್ನೇ ಸರ್ಕಾರ ನೇಮಿಸಿಕೊಳ್ಳಬೇಕೆಂದೇನೂ ಇಲ್ಲ. ತಾಲೂಕು ಮಟ್ಟದಲ್ಲಿ ಸರ್ಕಾರ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ), ಸ್ವಯಂಸೇವಾ ಸಂಘಟನೆಗಳ ಸಹಯೋಗದೊಂದಿಗೆ ಮಕ್ಕಳನ್ನು ಅರ್ಥಮಾಡಿಕೊಳ್ಳುವುದು ಹೇಗೆ, ಮಕ್ಕಳ ಹಕ್ಕುಗಳು ಮತ್ತು ಕಾನೂನುಗಳು, ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಅವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದು ಹೇಗೆ ಎಂಬ ಕುರಿತು ಸತತವಾಗಿ ತರಬೇತಿಗಳನ್ನು ನಡೆಸಬೇಕು.  ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಅಭಿವೃದ್ಧಿ ಆಧಿಕಾರಿಗಳು, ಆರೋಗ್ಯ ಕಾರ್ಯಕರ್ತೆಯರು, ವಿವಿಧ ರೀತಿಯ ವಿದ್ಯಾರ್ಥಿ ನಿಲಯಗಳ ಅಧಿಕಾರಿಗಳು, ಪೊಲೀಸರು, ಇತ್ಯಾದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳನ್ನು ಅರಿತುಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಬೇಕು.

ಇಂತಹದೊದು ಸಾಧ್ಯತೆ ಕರ್ನಾಟಕದಲ್ಲಿ ಆರಂಭವಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೊಡನೆ ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆ ಆರಭಿಸಿದ ಮಾತುಕತೆ ಮತ್ತು ಕ್ಷೇತ್ರಾಧಾರಿತ ಪ್ರಯೋಗಗಳ ಫಲವಾಗಿ ಕರ್ನಾಟಕದ ಎಲ್ಲ ಗ್ರಾಮಪಂಚಾಯಿತಿಗಳು 'ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ'ಗಳನ್ನು ನಡೆಸುವುದು ಕಡ್ಡಾಯವಾಗಿದೆ.11 ಇಲ್ಲಿ ಮಕ್ಕಳು ತಮ್ಮ ಆವಶ್ಯಕತೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವ, ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸೌಲಭ್ಯಗಳು ಬೇಕೇಬೇಕೆಂದು ಆಗ್ರಹಿಸುವ ಅವಕಾಶ ಸೃಷ್ಟಿಯಾಗಿದೆ. ಇದೊಂದು ರೀತಿಯಲ್ಲಿ ಸಾರ್ವಜನಿಕವಾಗಿ ನಡೆಯುವ ಪ್ರಕ್ರಿಯೆ. ಈ ಪ್ರಕ್ರಿಯೆಯೇ ಸಾಮೂಹಿಕ ಆಪ್ತಸಮಾಲೋಚನಾ ಶಿಬಿರಗಳಾಗಿ ಎಷ್ಟೋ ಕಡೆ ಆಗಿದೆ. ಹಲವು ಮಕ್ಕಳ ವಯಕ್ತಿಕ ಸಮಸ್ಯೆಗಳಿಗೂ ಇಲ್ಲಿ ಪರಿಹಾರ ದೊರಕಿವೆ.12  

ಭಾರತದ ಉದ್ದಗಲಕ್ಕೂ, ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಹರಡಿಕೊಂಡಿರುವ ಲಕ್ಷಾಂತರ ಸ್ವಯಂಸೇವಾ ಸಂಘಟನೆಗಳು ಕಳೆದ ನಾಲ್ಕೈದು ದಶಕಗಳಲ್ಲಿ ಸಮುದಾಯಗಳ ಮೂಲ ಆವಶ್ಯಕತೆಗಳನ್ನು ಕುರಿತು ಸಾಕಷ್ಟು ಹೋರಾಟ, ವಕೀಲಿ ನಡೆಸಿ ಸೌಲಭ್ಯಗಳನ್ನು ಒದಗಿಸುವುದರಲ್ಲಿ ಕೊಂಚಮಟ್ಟಿಗೆ ಯಶಸ್ವಿಯಾಗಿವೆ. ಮಕ್ಕಳಿಗೆ ಸಂಬಂಧಿಸಿದಂತೆ ಬಾಲಕಾರ್ಮಿಕ ಪದ್ಧತಿ ಮತ್ತು ಮಕ್ಕಳ ಸಾಗಣೆ, ಮಾರಾಟದ ವಿರುದ್ಧ ದನಿ ಎತ್ತಿ, ಮಕ್ಕಳ ಆರೋಗ್ಯ ಮತ್ತು ಮಕ್ಕಳ ಶಿಕ್ಷಣ ಸೌಲಭ್ಯಗಳನ್ನು ಒದಗಿಸುವಲ್ಲೂ ಯಶಸ್ವಿಯಾಗುತ್ತಿವೆ. ಈಗ ಸ್ವಯಂಸೇವಾ ಸಂಘಟನೆಗಳೆದುರು ಹೊಸ ಸವಾಲಿರುವುದು, ಲಭ್ಯವಿರುವ ಸೇವಾಸೌಲಭ್ಯಗಳು ಮಕ್ಕಳಿಗೆ ಸಮರ್ಪಕವಾಗಿ ದೊರಕುವಂತೆ ಮಾಡುವುದು ಮತ್ತು ಅವುಗಳ ಉಸ್ತುವಾರಿಯನ್ನು ನಡೆಸುವುದು. ಇದರಲ್ಲಿ ಪ್ರಮುಖವಾಗಿ ಆಗಬೇಕಿರುವುದು ಮಕ್ಕಳೊಡನೆ ಸತತವಾದ ಆಪ್ತ ಸಮಾಲೋಚನೆಗಳು. ಇಂತಹದೊಂದು ಸವಾಲಿಗೆ ಸ್ವಯಂಸೇವಾ ಸಂಘಟನೆಗಳು ತಡಮಾಡದೆ ಸಿದ್ಧವಾಗಬೇಕಿದೆ. 

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 43 ಮಕ್ಕಳು.13 ಭಾರತದ 121 ಕೋಟಿ ಜನರಲ್ಲಿ ಬಹುತೇಕ ಮಕ್ಕಳು ಗ್ರಾಮೀಣ ಪ್ರದೇಶಗಳಲ್ಲೇ ಇರುವುದು: ಸುಮಾರು 35 ಕೋಟಿ (ನಗರಗಳಲ್ಲಿ 15 ಕೋಟಿ ಮಕ್ಕಳು). ಆದರೆ, ಮಕ್ಕಳಿಗೆ ಸಂಬಂಧಿಸಿದ ವ್ಯವಸ್ಥೆಗಳನ್ನು ಗಮನಿಸಿದಾಗ ಕಂಡುಬರುವುದು ಅತ್ಯಧಿಕ ಸಂಖ್ಯೆಯಲ್ಲಿ ಶಾಲೆಗಳು, ಆಟದ ಮೈದಾನಗಳು, ಮನೋರಂಜನೆ ಸ್ಥಳಗಳು, ಮಕ್ಕಳ ವೈದ್ಯರು, ತಜ್ಞರು, ಆಪ್ತಸಮಾಲೋಚಕರು ಇತ್ಯಾದಿ ಇರುವುದು ನಗರಗಳಲ್ಲೇ! ಮಕ್ಕಳಿಗೆಂದು ಸರ್ಕಾರಗಳು ಮೀಸಲಿಡುವ ಹಣ ಸಮರ್ಪಕವಾಗಿ ವೆಚ್ಚವಾಗಿ ಸೌಲಭ್ಯಗಳು ಸ್ವಾಭಾವಿಕವಾಗಿ ಸಿಗಬೇಕಿರುವುದು ಅತಿಹೆಚ್ಚು ಸಂಖ್ಯೆಯಲ್ಲಿರುವ ಗ್ರಾಮೀಣ ಪ್ರದೇಶಗಳ ಮಕ್ಕಳಿಗೇ ಆಗಿದೆ. ಹೀಗಾಗಿ ಗ್ರಾಮೀಣ ಪ್ರದೇಶಗಳ ಮಕ್ಕಳ ಬದುಕು, ರಕ್ಷಣೆ, ಶಿಕ್ಷಣ, ಆರೋಗ್ಯ, ಭವಿಷ್ಯದ ನಿರ್ಮಾಣ ಈ ಎಲ್ಲಕ್ಕೂ ನೆರವಾಗಬಹುದಾದ ಮಕ್ಕಳಿಗೆ ಆಪ್ತ ಸಮಾಲೋಚನೆ ನೀಡಬಲ್ಲವರು ಈಗ ಬೇಕಾಗಿದೆ.
 
ಟಿಪ್ಪಣಿಗಳು
  1. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಪ್ರಕರಣಾಧ್ಯಯನ, ಫೆಬ್ರವರಿ, 2012
  2. Source: Census 2011 – Provisional Population Totals - India
  3. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ 1989, ಪರಿಚ್ಛೇದ 2
  4. ನೋಡಿ: ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ 2000/2006
  5. Satyarthi, Kailash; Zutshi, Bupinder : Globalisation, Development and Child Rights, Shipra Publications, NewDelhi, 2006
  6. Registrar General of India.
  7. ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸರ್ವೇಕ್ಷಣೆ 3 -2005-06. (ಪ್ರತಿಶತ 31 ಯುವತಿಯರು ಮತ್ತು ಪ್ರತಿಶತ 14 ಯುವಕರ ಅನಕ್ಷರಸ್ಥರು.)
  8. Annual Report of Saathi, 2010-11
  9. ಕ್ಷೇತ್ರಾಧ್ಯಯನ, ಸ್ನೇಹ, ಕೂಡ್ಲಿಗಿ ತಾಲೂಕು, ಬಳ್ಳಾರಿ ಜಿಲ್ಲೆ ಕರ್ನಾಟಕ, 2012 ಮಾರ್ಚ್‍
  10. 2003ರಿಂದ 2009ರವರೆಗೆ ಮಕ್ಕಳ ಕಲ್ಯಾಣ ಸಮಿತಿ, ಬೆಂಗಳೂರು ಇಲ್ಲಿ ನನ್ನ ಸ್ವಂತ ಅನುಭವ.
  11. ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ'ಗಳನ್ನು ಗ್ರಾಮಪಂಚಾಯಿತಿಗಳು ಕಡ್ಡಾಯವಾಗಿ ನಡೆಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸುತ್ತೋಲೆ 2006
  12. ಶರ್ಮಾ, ವಾಸುದೇವ ಇತ್ಯಾದಿ, `ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ-ಯಶೋಗಾಥೆಗಳು', ಚೈಲ್ಡ್ ರೈಟ್ಸ್ ಟ್ರಸ್ಟ್, ಬೆಂಗಳೂರು 2012
  13. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ 1989, ಪರಿಚ್ಛೇದ 1ರಂತೆ 18 ವರ್ಷದೊಳಗಿನವರೆಲ್ಲರೂ ಮಕ್ಕಳು
 
ವಾಸುದೇವ ಶರ್ಮಾ
ಸದಸ್ಯ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ನಿರ್ದೇಶಕ, ಚೈಲ್ಡ್ ರೈಟ್ಸ್ ಟ್ರಸ್ಟ್.
0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
+91-9980066890
+91-8310241136
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)