SKH
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
SKH

ಶಂಕರ ಎಚ್. ಪಾಠಕ - ಬಹುಮುಖ ಪ್ರತಿಭೆಯ ಸಮಾಜಕಾರ್ಯ ಪ್ರಾಧ್ಯಾಪಕರು

12/19/2017

0 Comments

 
Picture
ಹಿನ್ನೆಲೆ :- ಶಂಕರ ಪಾಠಕರ ಹುಟ್ಟೂರು ಬನವಾಸಿ. (ಕದಂಬ ವಂಶ ಸ್ಥಾಪಕ ಮಯೂರವರ್ಮನ ರಾಜಧಾನಿ) ಬನವಾಸಿಯಲ್ಲಿ ಮಧುಕೇಶ್ವರ ದೇವಸ್ಥಾನವಿದೆ. ಊರಿನ ಮೂರು ದಿಕ್ಕಿನಲ್ಲಿ ಹರಿಯುತ್ತಿದೆ ವರದಾ ನದಿ. ವೈಶಾಖ ಮಾಸದಲ್ಲಿ ವಾರ್ಷಿಕ ರಥೋತ್ಸವ - ಜಾತ್ರೆ ಆಗುತ್ತವೆ. ಬನವಾಸಿ ಶಂಕರ ಪಾಠಕರ ಬಾಲ್ಯದಲ್ಲಿ ಆಗಿನ ಬ್ರಿಟಿಷ್ ಆಡಳಿತದ ಮುಂಬಯಿ ಪ್ರಾಂತ್ಯದಲ್ಲಿ ಸೇರಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಒಂದು ದೊಡ್ಡ ಹಳ್ಳಿ. 1941ರಲ್ಲಿ ಜನಸಂಖ್ಯೆ ಸುಮಾರು 1000 ವಿರಬಹುದು. ಕಳೆದ 2001ರ ಜನಗಣತಿಯಲ್ಲಿ ಜನಸಂಖ್ಯೆ 7000. ಈಗ ಸುಮಾರು 9000 ಇರಬಹುದು. ಒಂದು ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಏಳನೇ ತರಗತಿಯವರೆಗೆ, ಹೆಣ್ಣು ಮಕ್ಕಳ ಶಾಲೆ ನಾಲ್ಕನೇ ತರಗತಿಯವರೆಗೆ, ಒಂದು ಉರ್ದು ಪ್ರಾಥಮಿಕ ಶಾಲೆಗಳಿದ್ದವು. ಒಟ್ಟು (4+2+1) 7 ಜನ ಮಾಸ್ತರರು, ಮಾಸ್ತರಿಣಿಯರು. ಇದಲ್ಲದೆ ಒಂದು ಪೊಲೀಸ್ ಸ್ಟೇಶನ್ - 3 ಪೇದೆಗಳು. ಅಗ್ರಿಕಲ್ಚರಲ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಅದರ ಅಂಗವಾಗಿ ಒಂದು ಚಿಕ್ಕ ಲೈಬ್ರರಿ. ಒಬ್ಬ ವ್ಯಕ್ತಿಯ ಮನೆಯಲ್ಲಿ ನಡೆಯುವ ಪೋಸ್ಟ್ ಆಫೀಸು, ಪೋಸ್ಟ್ ಮಾಸ್ತರರಿಗೆ ಗೌರವಧನ, ಗ್ರಾಮ ಪಂಚಾಯಿತಿ ಆಫೀಸು. ಬೆಳಿಗ್ಗೆ ಬನವಾಸಿಯಿಂದ ಹೊರಟು ಸಿರ್ಸಿಗೆ ಹೋಗಿ, ವಾಪಸ್ಸು ರಾತ್ರಿ ಮರಳಿ ಬರುವ ಒಂದು ಖಾಸಗಿ ಬಸ್ ಸರ್ವೀಸ್, ಆರೋಗ್ಯ ಸೇವೆ ಊರಿನ ಇಬ್ಬರು ವೈದ್ಯರಿಂದ. ಕಳೆದ 50 ವರ್ಷಗಳಲ್ಲಿ ಆದ ಮುಖ್ಯ ಬದಲಾವಣೆಗಳು ಜಯಂತಿ ಹೈಸ್ಕೂಲು, ರೆಗ್ಯೂಲರ್ ಪೋಸ್ಟ್ ಆಫೀಸು, ಪ್ರಾಥಮಿಕ ಆರೋಗ್ಯ ಕೇಂದ್ರ - ಅಲ್ಲಿ ಒಬ್ಬರು ಎಂ.ಬಿ.ಬಿ.ಎಸ್. ಡಾಕ್ಟರರು, ಒಬ್ಬಳು ನರ್ಸ್, ಸರಕಾರೀ ಬಸ್ ಸ್ಟಾಂಡ್ ಮತ್ತು ಬನವಾಸಿಗೆ ಬಂದು ಹೋಗುವ ಪ್ರವಾಸಿಗರು.
ಶಂಕರ ಪಾಠಕರ ತಂದೆ 1943ರಲ್ಲಿ ಕನ್ನಡ ಗಂಡು ಮಕ್ಕಳ ಶಾಲೆಯ ಹೆಡ್ಮಾಸ್ತರರಾಗಿ ನಿವೃತ್ತರಾದರು. ಬನವಾಸಿಯಲ್ಲಿ ವಿದ್ಯಾಭ್ಯಾಸಕ್ಕಿದ್ದ ಒಂದೇ ಅನುಕೂಲತೆ, ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆ ಏಳನೇ ತರಗತಿಯವರೆಗೆ. ಏಳನೇ ತರಗತಿ ಮುಗಿದ ನಂತರ ಸಾರ್ವಜನಿಕ ಪರೀಕ್ಷೆ Primary School Leaving Certificate Examination, ಕನ್ನಡದಲ್ಲಿ ``ಮುಲ್ಕಿ'' ಪರೀಕ್ಷೆ ಎನ್ನುತ್ತಿದ್ದರು. ಅದನ್ನು ಪಾಸಾದರೆ ಕನ್ನಡ ಶಾಲೆಯಲ್ಲಿ ಮಾಸ್ತರರಾಗಿ, ಇಲ್ಲವೇ ಶಾನುಭೋಗರಾಗಿ ನೌಕರಿ ಮಾಡುವುದು ಸಾಧ್ಯವಿತ್ತು. ಆ ಪರೀಕ್ಷೆಗಾಗಿ ಜಿಲ್ಲಾ ಕೇಂದ್ರ ಕಾರವಾರಕ್ಕೆ ಕಾಲ್ನಡಿಗೆಯಲ್ಲಿ ಹೋಗಬೇಕಾಗಿತ್ತು. ಸುಮಾರು 50 ಮೈಲು ದೂರ, ಅಡವಿ ಘಟ್ಟ ಇಳಿದು, ವನ್ಯ ಪ್ರಾಣಿಗಳ ಭಯ ಎದುರಿಸಿ. ಬನವಾಸಿಯ ಹಲವಾರು ಹವ್ಯಕ ಬ್ರಾಹ್ಮಣ ಕುಟುಂಬಗಳಿಂದ ಒಬ್ಬರಾದರೂ ಮಾಸ್ತರರಾಗಿ ಕೆಲಸ ಮಾಡಿದ್ದರು, ಮಾಡುತ್ತಿದ್ದರು.

ಶಂಕರ ಪಾಠಕರು `ಆದರ್ಶ' ಮಗನಾಗಿ (ಅಂದರೆ ಯಾರಿಂದಲೂ ಅವರ ಬಗ್ಗೆ ದೂರು ಬರಬಾರದು) ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ ಕೊಟ್ಟು, ಆಟ ಪಾಠಗಳಲ್ಲಿ ಸಮಯ ಹಾಳು ಮಾಡದೇ, ಬೆಳೆಯಬೇಕು ಎನ್ನುವುದು ತಂದೆಯ ಇಚ್ಛೆ. ಶಂಕರ ಪಾಠಕರು ಪ್ರಬುದ್ಧಕ್ಕೆ ಬಂದ ಮೇಲೆ, ಅಪ್ಪ ಹೇರಂಬ ಪಾಠಕರು ತಮ್ಮ ಜೀವನದ ಅಡಿಗಲ್ಲು ಭದ್ರವಾಗಿ ಹಾಕಿದ್ದರ ಅರಿವಾಯಿತು.

ಭಾರತದಲ್ಲಿ ಸಮಾಜಕಾರ್ಯ ಪ್ರಶಿಕ್ಷಣ ಆರಂಭವಾದದ್ದು ಕಳೆದ ಶತಮಾನದ ನಾಲ್ಕನೆಯ ದಶಕದಲ್ಲಿ (1936). ಅದು ಸ್ನಾತಕೋತ್ತರ ಪ್ರಶಿಕ್ಷಕ ಶಾಲೆ (ಸರ್. ದೊರಾಬ್ಜಿ ಗ್ರಾಜುಯೇಟ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್, ಮುಂಬಯಿ). ಇದೇ ಮುಂದೆ 1944 ರಲ್ಲಿ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ಆಗಿ ಮರುನಾಮಕರಣಗೊಂಡಿತು. ಆ ಶಾಲೆಯ ಉಪಕ್ರಮವು ಅಮೇರಿಕೆಯ ಕ್ಲಿಫರ್ಡ್ ಮ್ಯಾನ್‍ಶರ್ಟ್ಡ್ (Clifford Manshardt). ಪ್ರಯತ್ನದಿಂದ ಪ್ರಾರಂಭವಾಯಿತು. ಈ ಕಾರಣದಿಂದ ಸಮಾಜಕಾರ್ಯ ಪಠ್ಯಕ್ರಮವು ಅಮೇರಿಕೆಯ ಸಮಾಜಕಾರ್ಯ ಪಠ್ಯಕ್ರಮದ ಪ್ರಭಾವಕ್ಕೆ ಸಂಪೂರ್ಣ ಒಳಗಾಗಿತ್ತು. ಆರಂಭದ ಕಾಲದಲ್ಲಿ ಸಮಾಜಕಾರ್ಯದಲ್ಲಿಯೇ ಪ್ರಶಿಕ್ಷಣ ಪಡೆದ ವಿದ್ವಾಂಸರು ಲಭ್ಯವಿಲ್ಲವಾದುದರಿಂದ ಸಮಾಜ ವಿಜ್ಞಾನಗಳಲ್ಲಿ ಪರಿಣಿತರಾದ ವಿದ್ವಾಂಸರಿಂದ ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ಪಾಠ ಪ್ರವಚನಗಳು ನಡೆಯುತ್ತಿತ್ತು. ಪ್ರೊ. ಶಂಕರ ಎಚ್. ಪಾಠಕರವರು ಲಖನೌ ವಿ.ವಿ. ಯಿಂದ ಸ್ನಾತಕೋತ್ತರ ಪದವೀ ಪಡೆದ ಮೇಲೆ (1951-53) ಮುಂಬಯಿಯ ಈ ಶಾಲೆಯಲ್ಲಿ ಸಮಾಜಕಾರ್ಯ ತರಬೇತಿಯನ್ನು ಪಡೆದರು (1953-55). ಇವರಿಗೆ ಪ್ರೊ. ಎಂ. ವಾಸುದೇವಮೂರ್ತಿ, ಆಗ ಪಾಠ ಹೇಳಿದವರಲ್ಲಿ ಡಾ. ಬಿ.ಎಚ್. ಮೆಹತಾ, ಡಾ. ಪಿ.ಎನ್. ಪ್ರಭು ಹಾಗೂ MPSW ಪ್ರಾರಂಭಿಸಿ ಬೆಳೆಸಿದ ಡಾ. ಗೌರಿರಾಣಿ ಬ್ಯಾನರ್ಜಿ (G R Bannerji) ಮುಂತಾದವರು ಗುರುಗಳಾಗಿದ್ದರು.

ಸಮಾಜಕಾರ್ಯದ ಪ್ರಶಿಕ್ಷಣಾನಂತರ ದಿಲ್ಲಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್‍ನಲ್ಲಿ ಅಧ್ಯಾಪನ ವೃತ್ತಿಯನ್ನು ಆರಂಭಿಸಿದರು. 2 ವರ್ಷಗಳ ಅಧ್ಯಾಪನದ ನಂತರ ಅಮೇರಿಕೆಯ ಇಂಡಿಯಾನಾ ವಿ ವಿ ಯಿಂದ ಸಮಾಜಕಾರ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ದಿಲ್ಲಿಗೆ ಹಿಂದಿರುಗಿ, ತಮ್ಮ ಅಧ್ಯಾಪನ ಕಾರ್ಯವನ್ನು ಮುಂದುವರೆಸಿ 1990ರಲ್ಲಿ ನಿವೃತ್ತಿ ಹೊಂದಿದರು. ದಿಲ್ಲಿಯಲ್ಲಿ ಅಧ್ಯಾಪನದಲ್ಲಿ ನಿರತರಾಗಿದ್ದಾಗಲೇ ಫಿಲಿಪೀನ್ಸ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್‍ (ಮನಿಲಾ), ಬ್ಯಾಂಕಾಕ್‍ನ ಥಮ್ಮಸಾತ್ ವಿ.ವಿ.ದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು (1973-1974).

ಸಮಾಜಕಾರ್ಯದ ಪ್ರಶಿಕ್ಷಣದ ಆರಂಭ ಕಾಲದ ಮತ್ತು ಅದರಲ್ಲಾದ ಅನೇಕ ಬದಲಾವಣೆಗಳನ್ನು ಇವರು ಸ್ವತಃ ಅನುಭವಿಸಿದವರು ಮತ್ತು ಸಮಾಜಕಾರ್ಯ ಪಠ್ಯಕ್ರಮದ ಬದಲಾವಣೆಯ ಬಗ್ಗೆ ಚಿಂತಿಸಿದವರು. ಇವರು ವೈದ್ಯಕೀಯ ಮತ್ತು ಸಾಮಾಜಿಕ ಮನೋಚಿಕಿತ್ಸೆಯ ಕ್ಷೇತ್ರದಲ್ಲಿ (MPSW) ವಿಶೇಷ ತರಬೇತಿಯನ್ನು ಪಡೆದುದಲ್ಲದೆ ಇದರಲ್ಲಿ ಗಾಢವಾದ ಆಸಕ್ತಿಯನ್ನು ಹೊಂದಿದ್ದರು. ಇವರೇ ಆ ಕ್ಷೇತ್ರಕ್ಕೆ ಸಂಬಂಧಿಸಿದ ಮೊದಲ ಗ್ರಂಥವನ್ನು ಪ್ರಕಟಿಸಿದರು `` Medical Social Work in India'' (1961).

ಸಮಾಜಕಾರ್ಯ ಸಾಹಿತ್ಯಕ್ಕೆ ಅವರ ಕೊಡುಗೆ ಗಣನೀಯವಾಗಿದೆ. ಸಮಾಜಕಾರ್ಯ, ಸಮಾಜಕಲ್ಯಾಣ, ಸಾಮಾಜಿಕ ಅಭಿವೃದ್ಧಿ ಕಡೆಗಿನ ಇವರ ಒಲವು ಅವಿಸ್ಮರಣೀಯ. ಈ ಬಗೆಗಿನ ಚಿಂತನೆಗಳೇ ಇವರು ಬರೆದ ಪುಸ್ತಕಗಳಿಗೆ ತಳಹದಿಯಾದವು.
 
ಇವರ ಪುಸ್ತಕಗಳು:
  1. Medical Social Work in India, 1961.
  2. Records in Social Case Work (Ed), 1966.
  3. Social Welfare, Health and Family Planning in India (collection of Articles/Papers), 1979.
  4. Social Welfare : An Evolutionary and Developmental Perspective 1981.
  5. Social Welfare Manpower – A Regional Study, 1983.
 
ಇದಲ್ಲದೆ, ಸಂಪಾದಿತ ಪುಸ್ತಕಗಳಲ್ಲಿ, ಎನ್‍ಸೈಕ್ಲೋಪೀಡಿಯಾ ಆಫ್ ಸೋಶಿಯಲ್ ವರ್ಕ್‍ ಸಂಪುಟಗಳಲ್ಲಿ, ಹಾಗೂ ವೃತ್ತಿಯ `ಜರ್ನಲ್'ಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಶಂಕರ ಪಾಠಕರು ಕನ್ನಡದಲ್ಲಿ ಬರೆದ ``ಭಾರತದ ಭಕ್ತಿ ಪಂಥದ ಪರಂಪರೆಯಲ್ಲಿ ಸಮಾಜಕಾರ್ಯದ ಬೇರುಗಳು'' ಎಂದು ಸುದೀರ್ಘ, ವಿದ್ವತ್ಪೂರ್ಣ ಲೇಖನ (1992).

ಪ್ರೊ. ಎಚ್.ಎಂ. ಮರುಳಸಿದ್ಧಯ್ಯ ಸಂಪಾದಿತ ಪುಸ್ತಕದಲ್ಲಿ ಪ್ರಕಟವಾಗಿದೆ.

ಸಮಾಜಕಾರ್ಯ ಶಿಕ್ಷಣ ಮತ್ತು ಅಧ್ಯಾಪನ ವೃತ್ತಿ ಶಂಕರ ಪಾಠಕರ ಆಕಸ್ಮಿಕ ಮತ್ತು ಆಯ್ಕೆಗಳಾಗಿದ್ದವು. ಇಂಟರ್ ಮೀಡಿಯಟ್‍ನ 2ನೇ ವರ್ಷದಲ್ಲಿ ಓದುತ್ತಿದ್ದಾಗಲೇ ಪಾಠಕರ ತಂದೆ ತೀರಿಕೊಂಡಿದ್ದರು. ಮಗನ ವಿದ್ಯಾಭ್ಯಾಸಕ್ಕೆಂದು ತಂದೆ ಕೂಡಿಟ್ಟಿದ್ದ ಹಣ ಶಂಕರ ಪಾಠಕರು ಪದವಿ ಪಡೆಯಲು ನೆರವಾಯಿತು. ನಂತರ ಎಂ.ಎ. ಮಾಡುವ ಉದ್ದೇಶದಿಂದ ಲಖನೌಗೆ ತೆರಳಿದ ಶಂಕರ ಪಾಠಕರಿಗೆ ತನ್ನ ಶೈಕ್ಷಣಿಕ ಅವಶ್ಯಕತೆಗಳಿಗೆ ನೆರವಾದದ್ದು ಸಾಲದ ಹಣ. ಹೇಗೋ ಈ ಎಲ್ಲಾ ಮುಗಿಸಿ ತಮ್ಮೂರಿಗೆ ಮರಳಿದ ಶಂಕರ ಪಾಠಕರಿಗೆ ಮುಂದಿನ ದಿನಗಳಲ್ಲಿ ತನ್ನ ತುತ್ತಿನ ಚೀಲವನ್ನು ತುಂಬಿಸಿಕೊಳ್ಳುವ ಬಗ್ಗೆ ಗಂಭೀರವಾಗಿ ಚಿಂತಿಸುವುದು ಅನಿವಾರ್ಯವಾಯಿತು. ಇದೇ ಚಿಂತನೆಯಲ್ಲಿದ್ದ ಶಂಕರ ಪಾಠಕರಿಗೆ ತಾವು ವಾರಕ್ಕೊಮ್ಮೆ 20 ಮೈಲಿ ದೂರದವರೆಗೂ ನಡೆದು ಹೋಗಿ ತನ್ನ ಪರಿಚಯದವರ ಜವಳಿ ಅಂಗಡಿಯಲ್ಲಿ ಓದುತ್ತಿದ್ದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ Application invited for TB Social worker ಎಂದು ಬರೆದಿದ್ದ ಜಾಹೀರಾತು ಕಣ್ಣಿಗೆ ಬಿತ್ತು. ಅದರಲ್ಲಿ ಎಂ.ಎ. ಪದವಿ ಪಡೆದವರು ಈ ನೌಕರಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆಂದು ನಮೂದಿಸಿತ್ತು. ಅದನ್ನು ಕಂಡು ಸಂತೋಷದಿಂದ ಪಾಠಕರು ತಮ್ಮ ಶಿಕ್ಷಣ ಮತ್ತು ವೃತ್ತಿಗೆ ಸಂಬಂಧಿಸಿದ ಪರಿಚಯ ಪತ್ರವನ್ನು ಜಾಹೀರಾತಿನಲ್ಲಿ ತೋರಿಸಿದ್ದ ವಿಳಾಸಕ್ಕೆ ಕಳುಹಿಸಿದರು. ನಂತರ ಅದರ ಸಂದರ್ಶನಕ್ಕೆ ಮುಂಬಯಿಗೆ ಹೋಗಿ ಬಂದ ಶಂಕರ ಪಾಠಕರಿಗೆ ಒಂದು ಪತ್ರ ಬಂದೀತು. ಅದರಲ್ಲಿ ನೀವು ಹುದ್ದೆಗೆ ಆಯ್ಕೆಯಾಗಿದ್ದೀರಿ, ಆದರೆ ಈ ಹುದ್ದೆಗೆ ಸೇರುವ ಮುನ್ನ ನೀವು TATA INSTITUTE OF SOCIAL SCIENCES ನಲ್ಲಿ 2 ವರ್ಷ ಸಮಾಜಕಾರ್ಯ ತರಬೇತಿಯನ್ನು ಪಡೆಯತಕ್ಕದ್ದು. ನಮ್ಮ ಕಚೇರಿಯಿಂದ ನಿಮ್ಮ ತರಬೇತಿಗೆ ಬೇಕಾದ ಹಣಕಾಸಿನ ವ್ಯವಸ್ಥೆ ಮಾಡಿಕೊಡಲಾಗುವುದು (Scholarship) ಎಂದು ಬರೆದಿತ್ತು. ಇದನ್ನು ಓದಿದ ಶಂಕರ ಪಾಠಕರು ಗೊಂದಲಕ್ಕೀಡಾದರೂ ಕೊನೆಗೆ ಕನಿಷ್ಟ 2 ವರ್ಷ ತನ್ನ ಊಟ ಮತ್ತು ವಸತಿಯ ವ್ಯವಸ್ಥೆಯಾಗುವುದೆಂಬ ತೃಪ್ತಿಯಿಂದ ಮುಂಬಯಿಯ TATA INSTITUTE OF SOCIAL SCIENCES ನ ಸಮಾಜಕಾರ್ಯ ವಿಭಾಗಕ್ಕೆ ತಮ್ಮನ್ನು ನೋಂದಾಯಿಸಿಕೊಂಡರು. ಹೀಗೆ ಪಾಠಕರು ಸಮಾಜಕಾರ್ಯ ಅಧ್ಯಯನ ಮಾಡುವ ಉದ್ದೇಶವಿಲ್ಲದಿದ್ದರೂ ಆಕಸ್ಮಿಕವಾಗಿ ಸಮಾಜಕಾರ್ಯ ಕ್ಷೇತ್ರಕ್ಕೆ ಅಡಿಯಿಡುವಂತಾಯಿತು; ಯಾವುದೇ ವಿಷಯವನ್ನು ತಾರ್ಕಿಕವಾಗಿ ಮತ್ತು ದೀರ್ಘವಾಗಿ ಯೋಚಿಸುವ ಶಂಕರ ಪಾಠಕರ ಪ್ರವೃತ್ತಿ ಅವರನ್ನು ಸಮಾಜಕಾರ್ಯ ವಿಷಯದಲ್ಲಿ ಆಳವಾದ ಜ್ಞಾನವನ್ನು ಪಡೆಯಲು ಸಹಕಾರಿಯಾಯಿತು.

2 ವರ್ಷದ ಸಮಾಜಕಾರ್ಯ ಕೋರ್ಸನ್ನು ಮುಗಿಸಿದ ಪಾಠಕರು ಮುಂಬಯಿಯ ಹೋಟೆಲ್‍ವೊಂದರಲ್ಲಿ ಕೊಠಡಿಯೊಂದನ್ನು ಬಾಡಿಗೆ ಪಡೆದು ನೌಕರಿಯ ಆದೇಶ ಪತ್ರಕ್ಕಾಗಿ ಎದುರು ನೋಡುತ್ತಿದ್ದರು. ಮೂರು, ನಾಲ್ಕು ತಿಂಗಳುಗಳು ಕಳೆದರೂ ಆದೇಶ ಪತ್ರ ಬರದಿದ್ದಾಗ ಉಪ ಆರೋಗ್ಯ ಸಚಿವರ ಕಛೇರಿಗೆ ಹಲವಾರು ಭಾರೀ ತಿರುಗಿದ ಮೇಲೆ ಅವರಿಗೆ ದೊರೆತ ಉತ್ತರ ಇನ್ನೂ ಎರಡು, ಮೂರು ತಿಂಗಳವರೆಗೆ ಕಾಯಬೇಕಾಗುವುದು ಎಂದು. ಇದರಿಂದ ಬೇಸತ್ತ ಪಾಠಕರಿಗೆ ಮತ್ತದೇ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ Application invited foir Lecturer wioth Medical and Psychiatric Social work ಎಂಬ TATA INSTITUTE OF SOCIAL SCIENCES ನ ಜಾಹೀರಾತು ನೋಡಿದ ಪಾಠಕರು ಈ ಹುದ್ದೆಗೆ ತಮ್ಮ ವ್ಯಕ್ತಿ ವಿಷಯ ಮತ್ತು ವೃತ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಕಳುಹಿಸಿಕೊಟ್ಟರು. ನಂತರ ಸಂದರ್ಶನದಲ್ಲಿ ಆಯ್ಕೆಗೊಂಡು ತಾವು ಕಲಿತ ಅದೇ ಶಾಲೆಯಲ್ಲಿ ಅಧ್ಯಾಪನ ವೃತ್ತಿಯನ್ನು ಪ್ರಾರಂಭಿಸಿದ ಶಂಕರ ಪಾಠಕರು ಮುಂದೆ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿ ಸಮಾಜಕಾರ್ಯ ವೃತ್ತಿಯಲ್ಲಿ ಸುಮಾರು ಮೂರು ದಶಕಗಳನ್ನು ಕಳೆದರು.
 
IATSWs ಮತ್ತು ಪಾಠಕರ ಪಾತ್ರ:
ಶಂಕರ ಪಾಠಕರು Indian Association for Trained Social Workers ಎಂಬ ಸಂಸ್ಥೆಯ ಸ್ಥಾಪಕರಲ್ಲೊಬ್ಬರು. ಸ್ಥಾಪನೆಯಾದ ಎರಡೇ ವರ್ಷದಲ್ಲಿ Social Work Forum ಎಂಬ ತ್ರೈಮಾಸಿಕವನ್ನು ಹೊರತಂದರು. ಇದು ಒಂದು ಅಧೀಕೃತ ತ್ರೈಮಾಸಿಕ ಪತ್ರಿಕೆಯಾಗಿತ್ತು. ಡಾ. ಕೆ.ವಿ. ಶ್ರೀಧರನ್ ಇದರ ಮೊದಲ ಸಂಪಾದಕರಾಗಿದ್ದು, ಶಂಕರ ಪಾಠಕರು ಇದರ ಮೂರನೇ ಸಂಪಾದಕರು. ಸುಮಾರು 5 ವರ್ಷಗಳ ಕಾಲ ಈ ಪತ್ರಿಕೆ ಚಾಲ್ತಿಯಲ್ಲಿತ್ತು.
 
ಪ್ರೊ. ಪಾಠಕರ ಸಾಹಿತ್ಯಾಸಕ್ತಿ :-
ಹೈಸ್ಕೂಲ್ ವಿದ್ಯಾಭ್ಯಾಸದ ಸಮಯದಲ್ಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಪಾಠಕರು ತನಗೆ ಮತ್ತು ತನ್ನಂತೆ ಇತರ ಹಲವು ಸಹಪಾಠಿಗಳಲ್ಲಿ ಈ ರೀತಿಯ ಸಾಹಿತ್ಯಾಸಕ್ತಿಯನ್ನು ಬೆಳೆಸಿದ ತನ್ನ ಕನ್ನಡ ಮಾಸ್ತರರನ್ನು (ಎಲ್ಲರೂ ಕರೆಯುತ್ತಿದ್ದಂತೆ ಜಿ.ಕೆ. ಮಾಸ್ತರರ) ಮನತುಂಬಿ ನೆನೆಯುತ್ತಾರೆ. ಅಂದು ಪಾಠಕರೂ ಸೇರಿದಂತೆ ಹಲವು ಮಂದಿ ಜೀ.ಕೆ. ಮಾಸ್ತರರ ಪ್ರಭಾವಕ್ಕೊಳಗಾಗಿದ್ದರು. ಅವರಲ್ಲಿ ರಾಮಕೃಷ್ಣ ಹೆಗಡೆ (1983-88 ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು), ಗಿರೀಶ್ ಕಾರ್ನಾಡ್ (ಜನಪ್ರಿಯ ಬರಹಗಾರ ಮತ್ತು ನಾಟಕಕಾರ), ವಿ.ಲೆ. ಶೀಗೇಹಳ್ಳಿ (``ತಲೆಗಳು'' ಕಾದಂಬರಿಯ ಲೇಖಕ) ಇವರು ಪ್ರಮುಖರು. (ಕಾರ್ನಾಡರನ್ನು ಬಿಟ್ಟು) ಇವರೆಲ್ಲಾ ಒಂದೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದವರು. ಜೀ.ಕೆ. ಮಾಸ್ತರರಿಂದ ಪ್ರಭಾವಿತರಾದ ಇವರೆಲ್ಲರೂ ಮುಂದೆ ತಮ್ಮ ಈ ಆಸಕ್ತಿಯನ್ನು ಹೆಚ್ಚಿಸಿಕೊಂಡು ಹೆಚ್ಚಿನ ಸಾಹಿತ್ಯ ಜ್ಞಾನಾರ್ಜನೆಗೆ ಅವಕಾಶವಾಗಲೆಂದು ``ಕಿರಿಯರ ಕೂಟ'' ಎಂಬ ಸಂಘವನ್ನು ಸ್ಥಾಪಿಸಿಕೊಂಡರು. ಅದಕ್ಕೆ ರಾಮಕೃಷ್ಣ ಹೆಗಡೆಯವರು ಅಧ್ಯಕ್ಷರಾಗಿಯು, ಪಾಠಕರು ಕಾರ್ಯಾಧ್ಯಕ್ಷರಾಗಿಯು ನೇಮಕಗೊಂಡರು. ನಂತರ `ಹೂವಿನ ಸರ' ಎಂಬ ಕೈಬರಹದ ತ್ರೈಮಾಸಿಕ ನಿಯತಕಾಲಿಕೆಯನ್ನು ಹೊರ ತಂದರು ಮತ್ತು ಪಾಠಕರು ಅದರ ಸಂಪಾದಕರಾದರು. ಅವರ ಈ ಕಾರ್ಯ ಜೀ.ಕೆ. ಮಾಸ್ತರರ ಪ್ರಶಂಸೆಗೂ ಪಾತ್ರವಾಯಿತು.

ಪ್ರೊ. ಪಾಠಕರು ಮೊದಲು ಬರೆಯಲು ಆರಂಭಿಸಿದ್ದು ಕನ್ನಡದಲ್ಲಿ. ಹೈಸ್ಕೂಲಿನ ದಿನಗಳಲ್ಲಿ ``ಅಶೋಕ'' ಎಂಬ ಹೆಸರಿನಲ್ಲಿ ಒಂದು ಸಣ್ಣ ಕತೆಯನ್ನು ಮತ್ತು ``ವೈಜಯಂತಿ'' ಎಂಬ ಹೆಸರಿನ ಒಂದು ಕವನವನ್ನು ಬರೆದರು. ಅವು ಶಿರಸಿಯ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಇವುಗಳ ಜೊತೆಗೆ ಕಾಲೇಜಿನ ಸಮಯದಲ್ಲಿ ``ಗೋವಾದಿಂದ ಚಲೇಜಾವ್'' ಎಂಬ ರಾಜಕೀಯ ಕಿರುಪುಸ್ತಕವನ್ನು ಬರೆದರು. ಈ ಅನುಭವವೇ ಸಮಾಜಕಾರ್ಯದಲ್ಲಿ ಮುಂದೆ ಹಲವಾರು ಕೃತಿಗಳನ್ನು ಬರೆಯಲು ಸಹಕಾರಿಯಾಯಿತು.
 
ಪ್ರೊ. ಶಂಕರ ಪಾಠಕರ ರಾಜಕೀಯಾಸಕ್ತಿ :-
1951ರಲ್ಲಿ ತನ್ನ ಕಾಲೇಜು ಶಿಕ್ಷಣಕ್ಕಾಗಿ ಅಂದಿನ ಪ್ರಸಿದ್ಧ ಸರಕಾರಿ ಕಾಲೇಜು; ಕರ್ನಾಟಕ ಕಾಲೇಜು, ಧಾರವಾಡದಲ್ಲಿ (ಮುಂದೆ ಅದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಿಲೀನಗೊಂಡಿತು) ಪಾಠಕರಿಗೆ ಓದುವ ಸಮಯದಲ್ಲಿ ಪತ್ರಿಕೋದ್ಯೋಗಿ, ಜನಪ್ರಿಯ ಸಾಹಿತ್ಯ ಅಂಕಣಕಾರ ಕುಳುಕುಂದ ಶಿವರಾಯರ ಸಂಪರ್ಕವಾಯಿತು. ನಂತರ ಆ ಸ್ನೇಹ ಪ್ರಭಾವದಿಂದ ಅಂದಿನ ಭಾರತೀಯ ಕಮ್ಯೂನಿಸ್ಟ್ ಪಕ್ಷದ ರಾಜಕೀಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

1948ರಲ್ಲಿ ಪಕ್ಷದ ಬದಲಾದ ರಾಜಕೀಯ ನೀತಿಯಿಂದ ಕಮ್ಯೂನಿಸ್ಟ್ ಪಕ್ಷದ ಮೇಲೆ ನಿರ್ಬಂಧವನ್ನು ಹೇರಲಾಯಿತು. ಇದರಿಂದ ಪಾರ್ಟಿಯ ಹಲವು ಮುಖಂಡರು ಭೂಗತರಾದರು, ಕೆಲವರು ಬಂಧಿತರಾಗಿ ಜೈಲುವಾಸ ಅನುಭವಿಸಿದರು. ಕುಳುಕುಂದ ಶಿವರಾಯರು ಸಹ ಅಂದಿನ ಭೂಗತರಾದವರಲ್ಲಿ ಒಬ್ಬರು. ಇವರು ಗುಪ್ತಯ ನಾಮದಲ್ಲಿ ಪಾಠಕರ ವಿಳಾಸದಲ್ಲಿ ಪಕ್ಷದೊಂದಿಗೆ ಪತ್ರ ಸಂಬಂಧ ಹೊಂದಿದ್ದರು. ಇದು ಪೋಲೀಸರಿಗೆ ಹೇಗೊ ತಿಳಿದು CID ದಾಖಲೆಗಳಲ್ಲಿ ``ಭಯಂಕರ ಕಮ್ಯುನಿಸ್ಟ್'' ಎಂದು ಪಾಠಕರ ಹೆಸರನ್ನು ನಮೂದಿಸಲಾಗಿತ್ತು. ಇದಕ್ಕೂ ಮೊದಲು 1942ರಲ್ಲಿ ನಡೆದ ಆಗಸ್ಟ್ ಕ್ರಾಂತಿಯಲ್ಲೂ ಭಾಗವಹಿಸಿದ್ದರು. ಅಂದು ಬೆಳೆದ ರಾಜಕೀಯಾ ಆಸಕ್ತಿ ಇಂದಿಗೂ ಪಾಠಕರನ್ನು ಪ್ರಸ್ತುತ ರಾಜಕೀಯ ವಿದ್ಯಮಾನಗಳಲ್ಲಿ ಗಂಭೀರ ಆಸಕ್ತಿ ಮುಂದುವರೆಸುವಂತೆ ಮಾಡಿದೆ.
 
ಪ್ರೊ. ಪಾಠಕರ ಕಲಾಸಕ್ತಿ :-
ಇದಲ್ಲದೆ ಪಾಠಕರು ಭರತನಾಟ್ಯ, ಕುಚೀಪುಡಿ, ಯಕ್ಷಗಾನ, ಕಥಕ್ಕಳಿ, ಹೀಗೆ ಹಲವಾರು ಶಾಸ್ತ್ರೀಯ ನೃತ್ಯ ಕಲೆಗಳಲ್ಲಿ ಗಂಭೀರ ಆಸಕ್ತಿಯನ್ನು ಹೊಂದಿದ್ದಾರೆ. ಭೀಮಸೇನ ಜೋಶಿ, ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್‍ರಂತಹ ಸುಪ್ರಸಿದ್ಧ ಹಿಂದೂಸ್ತಾನಿ ಗಾಯಕರ ಗಾಯನಗಳು ಪಾಠಕರಿಗೆ ಹೆಚ್ಚು ಪ್ರಿಯ.
​
ಪ್ರೊ. ಪಾಠಕರು ಹಲವಾರು ಕ್ಷೇತ್ರಗಳಲ್ಲಿ ತಮ್ಮ ವಿಭಿನ್ನ ಅಭಿರುಚಿ ಮತ್ತು ಕಾರ್ಯಶೈಲಿಯಿಂದ ಕೆಲಸ ಮಾಡಿದವರು. ತಮ್ಮ ನೇರ ನುಡಿ, ವಿಶಿಷ್ಟ ದೃಷ್ಟಿಕೋನ ಮತ್ತು ವಿಭಿನ್ನ ಕಾರ್ಯವೈಖರಿಯಿಂದ ತನ್ನೊಂದಿಗೆ ಬೆರೆತ ಎಲ್ಲರ ಮನದಲ್ಲಿ ಗೌರವಾನ್ವಿತ ಸ್ಥಾನವನ್ನು ಪಡೆದುಕೊಳ್ಳುವಂತೆ ಮಾಡಿದೆ. ಕನ್ನಡ ಸಾಹಿತ್ಯದಲ್ಲಿನ ಇವರ ಜ್ಞಾನ ಮತ್ತು ಕಿರಿಯರನ್ನು ಸಾಹಿತ್ಯದೆಡೆಗೆ ಪ್ರೋತ್ಸಾಹಿಸುವ ರೀತಿ ಇವರ ಘನತೆಯ ಜೀವನಕ್ಕೆ ಸಾಕ್ಷಿ. ಈ ಗುಣಗಳನ್ನು ಕಂಡೇ ಇರಬೇಕು ಅಂದು 64ನೇ ವಾರ್ಷಿಕೋತ್ಸವದಲ್ಲಿ ದಿಲ್ಲಿ ಸ್ಕೂಲ್ ಆಫ್ ಸೋಷಿಯಲ್ ವರ್ಕ್‍ನ ಪ್ರೊ. ಸುಷ್ಮಾ ಭಾತ್ರಾ (ಭಾವೀ ಮುಖ್ಯಸ್ಥರು), ಸಮಾಜಕಾರ್ಯ ವಿಭಾಗ, ದೆಹಲಿ ರವರು ಇವರನ್ನು ` Multi Talented Professor of Social Work ' ಎಂದು ಕರೆದದ್ದು.
 
ಸಮಾಜಕಾರ್ಯ ವಿದ್ಯಾರ್ಥಿಗಳಿಗೆ ಪಾಠಕರ ಕಿವಿಮಾತು
  • ಸಮಾಜಕಾರ್ಯವನ್ನು ನೀವು ಯಾವ ಉದ್ದೇಶದಿಂದ ತೆಗೆದುಕೊಂಡಿರುವಿರೊ ಅದು ನಿಮಗೆ ಬಿಟ್ಟದ್ದು. ಆದರೆ ಅದನ್ನು ಆಯ್ಕೆ ಮಾಡಿಕೊಂಡ ಮೇಲೆ ಅದರ ಸಂಪೂರ್ಣ ಜ್ಞಾನ ಪಡೆದುಕೊಳ್ಳುವುದು ನಿಮ್ಮ ಗುರಿಯಾಗಬೇಕು.
  • ಹೆಚ್ಚು ಹೆಚ್ಚು ಉಪಯುಕ್ತ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ.
  • ಸಮಾಜಕಾರ್ಯ ನಿಮಗೆ ಸಮಾಜದ ಬಗ್ಗೆ ಮತ್ತು ಸಮಾಜದ ಜನರ ಬಗ್ಗೆ ತಿಳಿಸಿಕೊಡುವುದರ ಜೊತೆಗೆ ನಿಮ್ಮ ಜೀವನ ಶೈಲಿ, ಅದರಲ್ಲಿ ಬರುವ ತೊಡಕುಗಳನ್ನು ನಿವಾರಿಸಿಕೊಳ್ಳಲು ಮಾರ್ಗದರ್ಶನ ನೀಡುವುದು.
  • ಭಾರತೀಯ ಪರಂಪರೆ, ಸಂಸ್ಕೃತಿ ಇದರ ಅಂಗವಾಗಿ ಸಮಾಜಕಾರ್ಯವನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿ. ಈ ಅರಿವಿನ ಆಧಾರದ ಮೇಲೆ ಸಮಾಜಕಾರ್ಯದ ಅನುಷ್ಠಾನ ಕಾರ್ಯವನ್ನು ಮಾಡಿ.
  • ಚಿಕಿತ್ಸಕ ಮನೋವೃತ್ತಿಯನ್ನು ಬೆಳೆಸಿಕೊಳ್ಳಿ. ಯಾವುದೇ ವಿಷಯವನ್ನು ಯಾರೇ ಹೇಳಿರಲಿ, ಬರೆದಿರಲಿ ನಿಮ್ಮ ತರ್ಕದ ಜರಡಿಗೆ ಹಾಕಿ ಜೊಳ್ಳನ್ನು ಬಿಟ್ಟು ಗಟ್ಟಿಯಾದ ಕಾಳನ್ನು ಹಾರಿಸಿಕೊಳ್ಳಿ.
0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)