SKH
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
SKH

ಮಕ್ಕಳ ಅಪೌಷ್ಟಿಕತೆಯ ವಿರುದ್ಧ ಹೋರಾಟದ ಹೆಜ್ಜೆಗಳು

5/27/2018

0 Comments

 
ಕೈ ಕಾಲು ಸಣ್ಣ, ಹೊಟ್ಟೆ ಡುಮ್ಮ ಇರುವ ಮಕ್ಕಳನ್ನು, ಸಂಪೂರ್ಣ ದೇಹ ಊದಿಸಿಕೊಂಡು, ಚರ್ಮ ಬಿರುಕು ಬಿಟ್ಟಂತೆ ಕಾಣುವ ಮಕ್ಕಳನ್ನು, ಮೂಳೆಗೆ ಸುಕ್ಕುಗಟ್ಟಿದ ಚರ್ಮವನ್ನು ಹೊದ್ದುಕೊಂಡು ತೊಗಲಿನ ಬೊಂಬೆಗಳಂತೆ ಇರುವ ಮಕ್ಕಳನ್ನು, ಕಣ್ಣಲ್ಲೇ ಜೀವ ಹಿಡಿದುಕೊಂಡು ಕೋತಿ ಮರಿಯಂತೆ ತಾಯಿಯನ್ನು ಬಿಗಿದಪ್ಪಿಕೊಂಡಿರುವ ಮಕ್ಕಳನ್ನು, ಗೂನು ಬೆನ್ನು, ದೃಷ್ಟಿ ಹೀನ ಹಾಗೂ ವಿವಿಧ ಅಂಗವೈಕಲ್ಯತೆಗೆ ಒಳಗಾದ ಮಕ್ಕಳನ್ನು ನೋಡುತ್ತಾ ಬಾಲ್ಯ ಕಳೆದವರು ನಾವು, ಅನೇಕರು. ಆದರೆ, ಈ ಮಕ್ಕಳ ಕರುಣಾಜನಕ ಕಥೆಯ ಹಿಂದೆ ನಮ್ಮ ಸಮಾಜದಲ್ಲಿ ಹಾಸು ಹೊಕ್ಕಾಗಿರುವ ಜಾತಿಪದ್ಧತಿ, ಆರ್ಥಿಕ ಅಸಮಾನತೆ, ಹಸಿವಿನ ಆಕ್ರಂದನ ಮತ್ತು ಸರ್ಕಾರದ ಯೋಜನೆಗಳ ವೈಫಲ್ಯತೆಯೇ ಅಡಗಿ ಕುಳಿತಿವೆ ಎಂದು ಆಗ ತೋಚಿರಲಿಲ್ಲ. 
ಮುಂದಿನ ದಿನಗಳಲ್ಲಿ ಸಮಾಜಕಾರ್ಯವನ್ನು ಮೈಗೂಡಿಸಿಕೊಂಡು ಬಂದ ನಾವು ಕೆಲವರು ಸೇರಿ ಆರಂಭಿಸಿದ್ದು ಸಾಮಾಜಿಕ ಪರಿವರ್ತನಾ ಜನಾಂದೋಲನ. ನಮ್ಮ ಕ್ಷೇತ್ರ ಕಾರ್ಯದ ಸಮಯದಲ್ಲಿ ನಮ್ಮರಿವಿಗೆ ಬಂದದ್ದು ದಲಿತ, ಆದಿವಾಸ ಮತ್ತು ಇನ್ನಿತರೆ ತಳಸಮುದಾಯಗಳಲ್ಲಿ, ಬಡ ಸಮುದಾಯಗಳಲ್ಲಿ ದೈಹಿಕವಾಗಿ ಮತ್ತು ಮಾನಸಿಕ ಸದೃಢವಾಗಿ ಬೆಳೆಯದ ಆರು ವರ್ಷದೊಳಗಿನ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು. ಇದನ್ನು ಸಮಗ್ರವಾಗಿ ಗ್ರಹಿಸಲು ಅನೇಕ ಕಾರ್ಯಾಗಾರಗಳನ್ನು, ಕ್ಷೇತ್ರ ಮಟ್ಟದ ಭೇಟಿ, ಅಧ್ಯಯನಗಳನ್ನು ಸಮಾಜ ಪರಿವರ್ತನಾ ಜನಾಂದೋಲನ (ಎಸ್.ಪಿ.ಜೆ) ಆಯೋಜಿಸಿತು (2009). ಪೌಷ್ಟಿಕ ಆಹಾರ ತಜ್ಞರಾದ ಡಾ.ಕೆ.ಸಿ.ರಘು, ಡಾ.ಆಶಾ ಕಿಲಾರೋ, ಡಾ.ಅಖಿಲಾ ವಾಸನ್ ಮತ್ತು ಡಾ.ವೇದಾ ಜಕಾರಿಯಸ್‍ರವರು ಎಸ್.ಪಿ.ಜೆ. ಕಾರ್ಯಕರ್ತರಿಗೆ 'ಮಕ್ಕಳ ಅಪೌಷ್ಟಿಕತೆಯ ಮೂಲ ಕಾರಣ ಮತ್ತು ಅಪೌಷ್ಟಿಕತೆಯ ಮೂಲ ಕಾರಣ ನಿರ್ಮೂಲನೆಗಾಗಿ ಇರುವ ಪರ್ಯಾಯ ಮಾರ್ಗ'ಗಳನ್ನು ಕುರಿತು ಕಾರ್ಯಾಗಾರಗಳಲ್ಲಿ ತಮ್ಮ ಅನುಭವ ಮತ್ತು ಸಲಹೆಗಳನ್ನು ಹಂಚಿಕೊಂಡರು. ಅಪೌಷ್ಟಿಕ ಮಕ್ಕಳನ್ನು ವೈಜ್ಞಾನಿಕವಾಗಿ ಗುರುತಿಸುವ ವಿಧಾನವನ್ನು ವಿವರಿಸಿದರು.

ಸಮಾಜದ ಮತ್ತು ಒಟ್ಟಾರೆಯಾಗಿ ರಾಷ್ಟ್ರದ ಸಂಪತ್ತನ್ನು ಹೆಚ್ಚಿಸಲು ಅತ್ಯಗತ್ಯವಾಗಿ ಬೇಕಾಗಿರುವ ಮಾನವ ಸಂಪನ್ಮೂಲ, ಅಪೌಷ್ಟಿಕತೆಯಿಂದ ಬಾಲ್ಯದ ಹಂತದಲ್ಲೇ ಕಮರಿ ಹೋಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಎಸ್.ಪಿ.ಜೆ, ಈ ಸಮಸ್ಯೆಯೆಡೆಗೆ ಸಮಾಜದ ಮತ್ತು ಸರ್ಕಾರದ ಗಮನವನ್ನು ಸೆಳೆಯಲು ಅಧ್ಯಯನ, ಮಾಹಿತಿ ಸಂಗ್ರಹ ಮತ್ತು ಅಂಕಿ-ಅಂಶಗಳ ಕ್ರೋಡೀಕರಣದಲ್ಲಿ ತಲ್ಲೀನವಾಯಿತು. ತದನಂತರ 2009-10ರ ಅವಧಿಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ದಾವಣೆಗೆರೆ, ಬಿಜಾಪುರ, ಗುಲ್ಬರ್ಗಾ, ರಾಯಚೂರು ಮತ್ತು ಕೆ.ಜಿ.ಎಫ್. ನಗರಗಳಲ್ಲಿ ಸಾರ್ವಜನಿಕ ಅಹವಾಲುಗಳನ್ನು ಸಂಘಟಿಸುವುದರ ಮೂಲಕ ಮಕ್ಕಳ ಅಪೌಷ್ಟಿಕತೆಯ ಸಮಸ್ಯೆಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸಿತು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಹಿಂದಿನ ಅಧ್ಯಕ್ಷರಾದ ಶ್ರೀಮತಿ ನೀನಾ ನಾಯಕ್, ಸದಸ್ಯರುಗಳಾಗಿದ್ದ ಶ್ರೀ ವಾಸುದೇವ ಶರ್ಮಾ ಮತ್ತು ಡಾ. ಮಧು ಹಾಗೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿಗಳಾದ ಡಾ.ಎಸ್.ಆರ್.ನಾಯಕ್; ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಡಾ.ಸಿ.ಎಸ್. ದ್ವಾರಕನಾಥ್, ನ್ಯಾಯಾಧೀಶ ಸದಾಶಿವ ಆಯೋಗದ ಅಧ್ಯಕ್ಷರಾದ ನ್ಯಾಯಾಧೀಶ ಎ.ಜೆ.ಸದಾಶಿವ ಮುಂತಾದವರು ಸಾರ್ವಜನಿಕ ಅಹವಾಲುಗಳಲ್ಲಿ ಭಾಗವಹಿಸುವುದರ ಮೂಲಕ ಎಸ್.ಪಿ.ಜಿ.ಯ ಪ್ರಯತ್ನಗಳಿಗೆ ಬಲ ತುಂಬಿದರು. 2008-09 ಮತ್ತು 2009-10ನೇ ಸಾಲಿನಲ್ಲಿ ರಾಯಚೂರು ಜಿಲ್ಲೆಯೊಂದರಲ್ಲೇ 4,531 ಮಕ್ಕಳು ಅಪೌಷ್ಟಿಕತೆಯಿಂದ ಅಸುನೀಗಿದ್ದು; ರಾಜ್ಯದಲ್ಲಿ 71,608 ಮಕ್ಕಳು ತೀವ್ರ ಅಪೌಷ್ಟಿಕತೆಗೆ ಗುರಿಯಾಗಿದ್ದು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆನ್ನುವ ಅಂಕಿ-ಅಂಶಗಳನ್ನು ಎಸ್.ಪಿ.ಜೆ. ಮಾಧ್ಯಮಗಳಿಗೆ ಬಿಡುಗಡೆ ಮಾಡಿ, ರಾಜ್ಯದಲ್ಲಿ ಒಂದು ದೊಡ್ಡ ಸಂಚಲನವೇ ನಿರ್ಮಾಣವಾಗುವಂತೆ ಮಾಡಿತು. ಅನೇಕ ಮಠಾಧೀಶರೂ, ಸಾಮಾಜಿಕ ಸಂಘಟನೆಗಳ ಮುಖಂಡರು, ಮಕ್ಕಳ ಹಕ್ಕುಗಳ ಸಂಘಟನೆಗಳು, ಮಕ್ಕಳ ತಜ್ಞರು, ಪೌಷ್ಟಿಕ ಆಹಾರ ತಜ್ಞರು ಅಪೌಷ್ಟಿಕ ಮಕ್ಕಳ ವಿಷಯದಲ್ಲಿ ಸರ್ಕಾರ ಅಸಡ್ಡೆ ತೋರಿರುವುದರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅದರಲ್ಲಿ ಬಹಳ ಮುಖ್ಯವಾಗಿ 22 ಸೆಪ್ಟಂಬರ್ 2001ರಂದು ಟಿ.ವಿ.9 'ಅನ್ನಾ ಅನ್ನಾ..' ಎನ್ನುವ ಕಾರ್ಯಕ್ರಮದ ಮೂಲಕ ರಾಯಚೂರು ಜಿಲ್ಲೆಯ ಅಪೌಷ್ಟಿಕ ಮಕ್ಕಳ ಹೃದಯ ತಲ್ಲಣಿಸುವ ವರದಿಯನ್ನು ಪ್ರಸಾರ ಮಾಡಿದಾಗ, ಅಪೌಷ್ಟಿಕ ಮಕ್ಕಳ ಸಮಸ್ಯೆಗೆ ರಾಜ್ಯವ್ಯಾಪಿ ಪ್ರಚಾರ ದೊರೆಯಿತು. ಆದರೂ, ಅಷ್ಟೇನೂ ಸೂಕ್ಷ್ಮತೆಯಿಲ್ಲದ ಸರ್ಕಾರ ಆರಂಭದಲ್ಲಿ ಅಪೌಷ್ಟಿಕತೆಯ ವಾಸ್ತವವನ್ನು ಒಪ್ಪಲು ನಿರಾಕರಿಸಿತು. ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಯಾವುದೇ ಮಗು ಸತ್ತಿಲ್ಲ ಎಂದು ಅಧಿಕಾರಿಗಳು ಜನತೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರು. ರಕ್ತಹೀನತೆ, ಡಯೇರಿಯಾ, ಬೇಧಿ ಮೊದಲಾದ ಕಾರಣಗಳಿಂದ ಮತ್ತು ಬಾಲ್ಯವಿವಾಹ ಹಾಗಾ ರಕ್ತ ಸಂಬಂಧಗಳಲ್ಲಿನ ಮದುವೆಗಳಿಂದಾಗಿ ಅಪೌಷ್ಟಿಕ ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂಬುದು ಅವರ ಸಿದ್ಧ ಉತ್ತರಗಳಾಗಿತ್ತು.

ಅಂಗನವಾಡಿಗಳಲ್ಲಿ ದಾಖಲಾಗಿರುವ 0-6 ವರ್ಷದೊಳಗಿನ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವನ್ನು ಒದಗಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಬಾಲವಿಕಾಸ ಯೋಜನೆಯಡಿ ಕಾರ್ಯಕ್ರಮವನ್ನು ಹೊಂದಿದೆ. ಈ ಆಹಾರವನ್ನು ಸ್ಥಳೀಯವಾಗಿಯೇ ಉತ್ಪಾದಿಸಿ ಮಕ್ಕಳಿಗೆ ಕೊಡಬೇಕೆಂಬುದು ಮೊದಲಿನಿಂದಲೂ ಇರುವ ಕಲ್ಪನೆ. ಆದರೆ, ಮಕ್ಕಳಿಗೆ ಸರಬರಾಜು ಆಗುತ್ತಿದ್ದ ಆಹಾರ ಕಳಪೆಯಾಗಿರುತ್ತದೆ ಎಂಬುದು ಬಹುತೇಕ ಪೋಷಕರು ಆಪಾದಿಸುತ್ತಿದ್ದರು. ಅದನ್ನು ತಿನ್ನುವುದರಿಂದ ಮಕ್ಕಳಲ್ಲಿ ವಾಂತಿ, ಬೇಧಿ, ಹೊಟ್ಟೆನೋವು ಮೊದಲಾದವು ಆಗಿರುವ ಕುರಿತು ಜನ ಅಧಿಕಾರಿಗಳ ಬಳಿ, ಸ್ವಯಂ ಸೇವಾ ಸಂಘಟನೆಗಳ ಬಳಿ, ವೈದ್ಯರ ಬಳಿ ಅವಲತ್ತಿಸಿಕೊಳ್ಳುತ್ತಿದ್ದರು. ಇವುಗಳನ್ನು ಎಸ್.ಪಿ.ಜೆ. ತನ್ನ ಅಧ್ಯಯನದಲ್ಲಿ ತೋರಿಸಿತ್ತು. ಇದನ್ನೇ ಆಧರಿಸಿ ಸಾರ್ವಜನಿಕ ಅಹವಾಲುಗಳನ್ನೂ ನಡೆಸಿತ್ತು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸ್ಥಳೀಯವಾಗಿ ತಯಾರಿಸಿದ ತಾಜಾ ಆಹಾರವನ್ನೇ ಕೊಡಬೇಕೆಂದು ಸರ್ವೋಚ್ಛ ನ್ಯಾಯಾಲಯ 2004ರಲ್ಲಿ ಆದೇಶವೊಂದನ್ನು ನೀಡಿತ್ತು. ಆದರೆ, ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇಂತಹ ನಿರ್ದೇಶನವನ್ನು ದಿಕ್ಕರಿಸುವಂತೆ ತನ್ನದೇ(?) ಹೊಸ ಯೋಜನೆಯಲ್ಲಿ ತಾಲೂಕು ಮಟ್ಟದ ಮಹಿಳಾ ಗುಂಪುಗಳೊಂದಿಗೆ ಒಪ್ಪಂದ ಮಾಡಿಕೊಂಡು ಅವರಿಂದ ಸಿದ್ಧ ಆಹಾರವನ್ನು ಪಡೆಯತೊಡಗಿತು. ತೊಂದರೆ ಕಂಡದ್ದು ಇಲ್ಲೇ. ಈ ವಿಚಾರವನ್ನು ಕುರಿತು ತನಿಖೆ, ಅಧ್ಯಯನ ನಡೆಸಿದ ಸ್ವತಂತ್ರ ತಂಡಗಳು ಮತ್ತು ಮಾಧ್ಯಮಗಳಿಗೆ ಕಂಡದ್ದು, ಇಡೀ ವ್ಯವಹಾರದಲ್ಲಿ ಕ್ರಿಸ್ಟಿ ಫ್ರೈಡ್ ಗ್ರಾಂ ಇಂಡಸ್ಟ್ರೀಸ್ ಎನ್ನುವ ಖಾಸಗೀ ಕಂಪನಿಯ ಕೈವಾಡ. ಅನೇಕರು ನಡೆಸಿರುವ ಪರಿಶೀಲನೆಯಿಂದ ತಿಳಿದು ಬಂದದ್ದು: ಈ ಆಹಾರ ಮಕ್ಕಳಿಗೆ ತಿನ್ನಲು ಯೋಗ್ಯವಲ್ಲ, ಅದರಲ್ಲಿ ನ್ಯೂನತೆಗಳಿವೆ ಮತ್ತು ಹಲವಾರು ಬಾರಿ ಅವಧಿ ಮೀರಿದ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತಿದೆ, ಹಲವು ಕಡೆ ಅಂಗನವಾಡಿ ಕಾರ್ಯಕರ್ತೆಯರಿಗಾಗಲೀ ಅವರ ಸಹಾಯಕರಿಗಾಗಲೀ ಈ ಆಹಾರವನ್ನು ಕೊಡಬೇಕೋ ಕೊಡಬಾರದೋ ಎನ್ನುವ ತಿಳುವಳಿಕೆ ಇಲ್ಲ. ತಾಲೂಕು ಮಟ್ಟದಲ್ಲಿ ಮಹಿಳಾ ಸಂಘಗಳು ಸ್ಥಳೀಯವಾಗಿ ಆಹಾರ ತಯಾರಿಸುತ್ತಿದ್ದೇವೆಂದು ಹೇಳಿಕೊಂಡರೂ (ಇದು ಸಹ ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ಅನುರೂಪವಾಗಿರುಲಿಲ್ಲ) ವಾಸ್ತವವಾಗಿ ಕ್ರಿಸ್ಟಿಯವರು ನೀಡುತ್ತಿದ್ದ ಸಿದ್ಧ ಪದಾರ್ಥಗಳನ್ನು ಅವರು ಮರು ಪೊಟ್ಟಣ ಕಟ್ಟಿ ಕಳುಹಿಸುತ್ತಿದ್ದುದು ತನಿಖೆ ನಡೆಸಿದವರಿಗೆ ಕಂಡುಬಂದಿತ್ತು. ಆದರೆ ಇದಾವುದನ್ನೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಒಪ್ಪಿಕೊಂಡಿರಲಿಲ್ಲ. ಕ್ರಿಸ್ಟಿ ಕಂಪನಿ, ಮಹಿಳಾ ಸಂಘಗಳು ಮತ್ತು ಅಂಗನವಾಡಿಗಳ ನಡುವಿನ ಆಹಾರ ಸರಬರಾಜು ವ್ಯವಸ್ಥೆ ಅತ್ಯುತ್ತಮವಾದುದೆಂದು 2012ರ ಮಾರ್ಚ್ ತಿಂಗಳವರೆಗೂ ಹೇಳಿಕೊಂಡೇ ಬಂದಿತ್ತು. ಈ ಎಲ್ಲ ವಿಚಾರಗಳನ್ನು ಮಾಧ್ಯಮಗಳು ವಿವರವಾದ ವರದಿಗಳಲ್ಲಿ ಪ್ರಕಟಿಸಿ ಸರ್ಕಾರ ಇದಕ್ಕೆ ಪ್ರತಿಕ್ರಿಯಿಸಬೇಕೆಂದು ಒತ್ತಾಯಿಸುತ್ತಲೇ ಇದ್ದವು. ಆಗೆಲ್ಲಾ ಸರ್ಕಾರ ಹೇಳುತ್ತಿದ್ದದ್ದು, 'ಅಂಗನವಾಡಿ ಆಹಾರ ಕೇವಲ ಪೂರಕ ಪೌಷ್ಟಿಕ ಆಹಾರವಷ್ಟೆ. ಮಕ್ಕಳು ಕೇವಲ ಅಂಗನವಾಡಿ ಆಹಾರವಷ್ಟೆ ನಂಬಿಕೊಂಡಿಲ್ಲ. ಅವರ ಮನೆಯ ಆಹಾರವೇ ಮುಖ್ಯ ಆಹಾರ'. ಇದು ಹೀಗಿದ್ದೂ, ಅಪೌಷ್ಟಿಕತೆಯಿಂದಿರುವ ಮಕ್ಕಳು ಅಂಗನವಾಡಿಗಳಿಗೆ ಬರುತ್ತಿರುವುದು ಅಥವಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಕಾರ್ಯಕರ್ತೆಯರು ಮನೆ ಭೇಟಿಗೆ ಹೋದಾಗ ಅಪೌಷ್ಟಿಕತೆ ಇರುವ ಮಕ್ಕಳನ್ನು ಕಂಡಾಗ ಅವರ ಚೈತನ್ಯಕ್ಕಾಗಿ ಏನು ನಡೆಯುತ್ತಿದೆ ಎಂಬ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಗುತ್ತಿರಲಿಲ್ಲ.

ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಕ್ರಿಸ್ಟಿಯೊಡನೆ ಮಾಡಿಕೊಂಡಿದ್ದ ಕರಾರನ್ನು (!) ರದ್ದುಪಡಿಸಿ ನೆರೆಯ ರಾಜ್ಯಗಳಲ್ಲಿ ಜಾರಿಯಲಿರುವ, ಸ್ಥಳೀಯ ಆಹಾರ ಪದ್ಧತಿಗನುಗುಣವಾಗಿ ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ಪೂರೈಸಬೇಕೆಂದು ಆಗ್ರಹಿಸಿ ಎಸ್.ಪಿ.ಜೆ. ಮುಖ್ಯಮಂತ್ರಿಗಳಿಗೆ, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಶಾಸಕರಿಗೆ, ಮಹಿಳ ಮತ್ತು ಕುಟುಂಬ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಹಾಗೂ ನಿರ್ದೇಶಕರಿಗೆ ಮನವಿಗಳನ್ನು ಸಲ್ಲಿಸಿತು. ಈ ಮಧ್ಯೆ, ಟಿವಿ 9 ಪ್ರಸಾರ ಮಾಡಿದ 'ಅನ್ನಾ ಅನ್ನಾ' ಕಾರ್ಯಕ್ರಮದಿಂದ ಕನಲಿಹೋದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ವಿಮೋಚನಾ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಬಿ.ಎಲ್. ಪಾಟೀಲ್‍ರವರು ಅಪೌಷ್ಟಿಕ ಮಕ್ಕಳ ಅಮೂಲ್ಯ ಪ್ರಾಣ ರಕ್ಷಿಸಲು ನ್ಯಾಯಾಂಗ ವ್ಯವಸ್ಥೆ ಮಧ್ಯ ಪ್ರವೇಶಿಸಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದರು. ಅವರ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಉಚ್ಚನ್ಯಾಯಾಲಯ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಿಕೊಂಡಿತು. ಪರ್ಯಾಯ ಕಾನೂನು ವೇದಿಕೆಯ ವಕೀಲರಾದ ಕ್ಲಿಫ್ಟನ್ ಡಿ'ರಿಜಾರಿಯೋರವರು ಈ ಮೊಕದ್ದಮ್ಮೆಯಲ್ಲಿ ಸ್ವಯಂಪ್ರೇರಿತವಾಗಿ ತೊಡಗಿಸಿಕೊಳ್ಳುವ ಮೂಲಕ ಅಪೌಷ್ಟಿಕ ಮಕ್ಕಳ ಹಕ್ಕುಗಳ ಹೋರಾಟಕ್ಕೆ ಬಲ ತುಂಬಿದರು.

ಶಿಶು ಮರಣ ಹಾಗೂ ಮಕ್ಕಳ ಅಪೌಷ್ಟಿಕತೆಯನ್ನು ತಡೆಯಲು ಸರ್ಕಾರ ಕೈಗೊಳ್ಳಬೇಕಾದ ಕಾರ್ಯಯೋಜನೆ ಕುರಿತು ಕ್ರಿಯಾ ಯೋಜನೆ ತಯಾರಿಸಲು ಸಮಿತಿಯನ್ನು ರಚಿಸುವಂತೆ ಉಚ್ಚ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಆದೇಶಿಸಿತು. ಈ ಸಮಿತಿಯು: 1. ಆರೋಗ್ಯ ಮತ್ತು ಪೌಷ್ಟಿಕ ಆಹಾರ ಸಮಿತಿ; 2. ಶೋಷಿತ ಸಮುದಾಯಗಳು, ಎಚ್.ಐ.ವಿ. ಬಾಧಿತ ಹಾಗೂ ವಿಕಲಚೇತನ ಮಕ್ಕಳ ಸಮಿತಿ ಮತ್ತು 3. ಸಂಯೋಜನೆ ಹಾಗೂ ಮೇಲ್ವಿಚಾರಣೆ ಸಮಿತಿ ಎನ್ನುವ ಮೂರು ಉಪಸಮಿತಿಗಳನ್ನು ಒಳಗೊಂಡಿತ್ತು. ಈ ಮೂರು ಉಪಸಮಿತಿಗಳು ಹಲವಾರು ಸರಣಿ ಸಭೆಗಳನ್ನು ನಡೆಸಿ ನೀಡಿದ ಸಲಹೆಗಳ ವರದಿ ನೀಡಿತ್ತು. ಅದರಲ್ಲಿದ್ದ ಶಿಫಾರಸ್ಸುಗಳನ್ನು ಜಾರಿಗೊಳಿಸಲು ತಾನು ಬದ್ಧವಿರುವುದಾಗಿಯೂ ಮತ್ತು ಕ್ರಿಯಾಯೋಜನೆ ಜಾರಿಗೊಳಿಸಲು ಅಗತ್ಯವಿರುವ ಹಣಕಾಸಿನ ಸಂಪನ್ಮೂಲವನ್ನು ಒದಗಿಸಲು ಯಾವುದೇ ಅಡಚಣೆಯಿಲ್ಲದಂತೆ ನೋಡಿಕೊಳ್ಳುವುದಾಗಿ ಸರ್ಕಾರ ತನ್ನ ಅಫಿಡವಿಟ್‍ನಲ್ಲಿ ಉಚ್ಚನ್ಯಾಯಾಲಯದಲ್ಲಿ ಹೇಳಿಕೆ ನೀಡಿ ದಾಖಲಿಸಿ ಬದ್ಧವಾಯಿತು. ಮಕ್ಕಳ ಪೌಷ್ಟಿಕತೆಯ ಹಕ್ಕು ಖಾತರಿಯಾಯಿತು, ನಮ್ಮ ಹೋರಾಟ ಸಫಲವಾಯಿತೆಂದು ನಾವು ಭಾವಿಸಿದೆವು. ಆದರೆ, ವಾಸ್ತವಿಕ ನೆಲೆಯಲ್ಲಿ ಯಾವುದೇ ಬದಲಾವಣೆಗಳು ಗಮನಾರ್ಹವಾಗಿ ಕಂಡುಬರಲಿಲಲ್ಲ. 2012-13ರ ಆಯವ್ಯಯದಲ್ಲಿ ಅಂಗನವಾಡಿಗಳನ್ನು ಸಶಕ್ತಗೊಳಿಸಲು ಮತ್ತು ಮಕ್ಕಳ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಹೆಚ್ಚಿನ ಅನುದಾನ ಮೀಸಲಿಡುವಂತೆ ಆಗ್ರಹಿಸಿ ಎಸ್.ಪಿ.ಜೆ ಬೆಂಗಳೂರು ಪುರಭವನದ ಎದುರು 2012ರ ಮಾರ್ಚ್ 3ರಂದು ಪ್ರತಿಭಟನೆ ನಡೆಸಿತು. ಆದರೂ, ಇದಾವುದನ್ನೂ ಸಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಬದಲಿಗೆ ಈ ಹಿಂದೆ ನಿಗಧಿ ಪಡಿಸಿದ್ದ ಅಂಗನವಾಡಿಗೆ ಬರುವ ಪ್ರತಿ ಮಗುವಿಗೆ ಒಂದು ದಿನಕ್ಕೆ ನಾಲ್ಕು ರೂಪಾಯಿಗಳ ಆಹಾರದ ವೆಚ್ಚಕ್ಕೆ ಕೇವಲ 60 ಪೈಸೆಗಳನ್ನು ಸೇರಿಸಿ ಕೈತೊಳೆದುಕೊಂಡಿತು!

ಶಿಶುಮರಣ ಮತ್ತು ಅಪೌಷ್ಟಿಕತೆಯ ವಿರುದ್ಧ ಆಂದೋಲನವನ್ನು ತೀರ್ವಗೊಳಿಸಿದ ಎಸ್.ಪಿ.ಜೆ, ಸಮಾನ ಮನಸ್ಕ ಸಂಸ್ಥೆಗಳು ಮತ್ತು ಆಂದೋಲನಗಳನ್ನು ಒಡಗೂಡಿಸಿಕೊಂಡು 'ಮಕ್ಕಳ ಅಪೌಷ್ಟಿಕತೆ ನಿರ್ಮೂಲನಾ ವೇದಿಕೆ'ಯನ್ನು ರೂಪಿಸಿ, ಅಪೌಷ್ಟಿಕತೆಗೆ ಸಂಬಂಧಿಸಿದಂತೆ ತಳಮಟ್ಟದಲ್ಲಿ ಸರ್ಕಾರ ಕೈಗೊಳ್ಳುತ್ತಿರುವ ಪ್ರಕ್ರಿಯೆಗಳ ಮೇಲೆ ನಿಗಾ ಇಟ್ಟು ದಾಖಲೆಗಳನ್ನು ಸಂಗ್ರಹಿಸಲಾರಂಭಿಸಿತು. ಮಕ್ಕಳ ದಾಖಲಾತಿ, ಮಕ್ಕಳಿಗೆ ನೀಡುವ ಆಹಾರದ ಪ್ರಮಾಣ, ಮಕ್ಕಳ ವೈದ್ಯಕೀಯ ಪರೀಕ್ಷೆಯ ಅವಧಿಗಳು, ಅಪೌಷ್ಟಿಕತೆ ಇರುವ ಮಕ್ಕಳಿಗೆ ನೀಡುವ ಗಮನ ಇತ್ಯಾದಿ ಕುರಿತು ಎಸ್.ಪಿ.ಜೆ. ಸ್ವಯಂಸೇವಕರು ಕ್ಷೇತ್ರಧಾರಿತ ಅಂಕಿಸಂಖ್ಯೆಗಳು ಮತ್ತು ವರದಿಗಳನ್ನು ಸಂಗ್ರಹಿಸಿದರು. ಸರ್ಕಾರದ ನಿರ್ಲಕ್ಷ್ಯ ಮತ್ತು ನಿಷ್ಕಾಳಜಿಯ ಧೋರಣೆಯನ್ನು ರಾಜ್ಯದ ಉಚ್ಚ ನ್ಯಾಯಾಲಯದ ಮುಂದೆ ಪುರಾವೆಗಳೊಡನೆ ಮಂಡಿಸಲಾಯಿತು. ನ್ಯಾಯಾಲಯ ಇವುಗಳನ್ನೆಲ್ಲಾ ಗಣನೆಗೆ ತೆಗೆದುಕೊಂಡು ಸರ್ಕಾರಕ್ಕೆ ಹಲವು ಬಾರಿ ಛೀಮಾರಿ ಹಾಕಿತು. ಅಪೌಷ್ಟಿಕ ಮಕ್ಕಳ ಬದುಕುವ ಹಕ್ಕಿನ ಜೊತೆ ಚಲ್ಲಾಟವಾಡುತ್ತಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ 2012ರ ಏಪ್ರಿಲ್ 12ರಂದು ಸ್ವತಃ ರಾಜ್ಯ ಉಚ್ಚ ನ್ಯಾಯಾಲಯವೇ ಮುಂದೆ ನಿಂತು ಹೊಸತೊಂದು ಸಮಿತಿಯನ್ನು ರಚಿಸಿತು. ರಾಜ್ಯದ ಮಕ್ಕಳಲ್ಲಿನ ಅಪೌಷ್ಟಿಕತೆ ನಿರ್ಮೂಲನೆಗೆ ಸಂಬಂಧಿಸಿದಂತೆ ಸರ್ಕಾರದ ಕಾರ್ಯಯೋಜನೆಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ಪ್ರಸ್ತುತ ಚಾಲ್ತಿಯಲ್ಲಿರುವ ಯೋಜನೆಗಳನ್ನು ಪರಿಶೀಲಿಸುವುದರ ಜೊತೆಗೆ ಸಮಗ್ರ ಕ್ರಿಯಾ ಯೋಜನೆಯನ್ನು ರೂಪಿಸುವ ಜವಾಬ್ದಾರಿಯನ್ನು ಈ ಹೊಸ ಸಮಿತಿಗೆ ವಹಿಸಿತು.

ನ್ಯಾಯಾಧೀಶ ಎನ್.ಕೆ.ಪಾಟೀಲ್ ನೇತೃತ್ವದ ಈ ಉನ್ನತಾಧಿಕಾರ ಸಮಿತಿಯು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ, ಅಂಗನವಾಡಿ ಕೇಂದ್ರಗಳು ಮತ್ತು ಅಪೌಷ್ಟಿಕ ಮಕ್ಕಳ ಸ್ಥಿತಿಗತಿಗಳ ಅಧ್ಯಯನ ನಡೆಸಿತು. ಗುಲ್ಬರ್ಗಾ, ಬೆಳಗಾವಿ, ಬೆಂಗಳೂರು ಮತ್ತು ಮೈಸೂರುಗಳಲ್ಲಿ ವಲಯವಾರು ಸಭೆಗಳನ್ನು ನಡೆಸಿತು. ಈ ಸಭೆಗಳಲ್ಲಿ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು, ಜಿಲ್ಲಾ ಆರೋಗ್ಯ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಮುಖವಾಗಿ ಭಾಗವಹಿಸಿದ್ದರು. ಇಷ್ಟು ಜನರ ಭಾಗವಹಿಸುವಿಕೆ ಕಾರಣ ಆಯಾ ಜಿಲ್ಲೆಗಳ ಮಕ್ಕಳ ಸಮಸ್ಯೆಗಳಿಗೆ ಸಂಬಂಧಿಸಿದ ವಿವಿಧ ಆಯಾಮ ಮತ್ತು ಸ್ಥಿತಿಗತಿಗಳನ್ನು ಎಲ್ಲರಿಗೂ ಹಂಚಿಕೊಳ್ಳಲು ಅವಕಾಶ ಕೊಡುವುದಾಗಿತ್ತು. ಈ ಎಲ್ಲಾ ವಲಯವಾರು ಸಭೆಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಹೆಚ್ಚುವರಿ ಅಡ್ವೋಕೇಟ್ ಜನರಲ್‍ನವರು ಉಪಸ್ಥಿತರಿರುತ್ತಿದ್ದರು. ಸೆಪ್ಟಂಬರ್ 6, 2012ರಂದು ಉಚ್ಚನ್ಯಾಯಾಲಯದ ಸಮಿತಿಯು ಮಕ್ಕಳ ಅಪೌಷ್ಟಿಕತೆ ನಿರ್ಮೂಲನೆ ಮತ್ತು ಅಂಗನವಾಡಿಗಳ ಸಶಕ್ತೀಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ಕ್ರಿಯಾ ಯೋಜನೆಯನ್ನು ಸಲ್ಲಿಸಿದ್ದು, ಅದನ್ನು ಜಾರಿಗೊಳಿಸಲು ಬದ್ಧವಿರುವುದಾಗಿ ಸರ್ಕಾರ ಒಪ್ಪಿಕೊಂಡಿದೆ. ಈ ಎಲ್ಲ ಪ್ರಕ್ರಿಯೆಗಳ ನಡುವೆ ಕೆಲವು ಬದಲಾವಣೆಗಳಾಗಿವೆ. ಅವುಗಳಲ್ಲಿ ಕೆಲವನ್ನು ಈ ಮುಂದಿನಂತೆ ಪಟ್ಟಿ ಮಾಡಬಹುದು:   
  • ಬಹಳ ಮುಖ್ಯವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಇಲಾಖೆಗಳ ನಡುವೆ ಸಂಯೋಜನೆ ಮೂಡಿದೆ.
  • ಆರೋಗ್ಯ ಇಳಾಖೆಯ ನಿರ್ದೇಶನ ಮತ್ತು ನ್ಯಾಯಾಲಯದ ಮಧ್ಯ ಪ್ರವೇಶಿಸುವಂತಿಕೆಯಿಂದಾಗಿ ಹೊರಬಿದ್ದ ಹೊಸ ನಿರ್ದೇಶನದಂತೆ, ತೀವ್ರ ಅಪೌಷ್ಟಿಕತೆ ಇದ್ದ ಮಕ್ಕಳಿಗೆ ಹಾಲು ಮತ್ತು ಮೊಟ್ಟೆ ವಿತರಿಸಲಾಗುತ್ತಿದೆ.     
  • ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲ ಮಕ್ಕಳ ಆರೋಗ್ಯ ತಪಾಸಣೆ ನಡೆಯುತ್ತಿದೆ.
  • ಸ್ಥಳೀಯ ಆಹಾರ ಪದ್ಧತಿಗನುಗುಣವಾಗಿ ಅಂಗನವಾಡಿ ಮಕ್ಕಳಿಗೆ ಆಹಾರ ಒದಗಿಸುವ ಪ್ರಯತ್ನಗಳಾಗುತ್ತಿವೆ.      
  • ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್, ಅಡುಗೆ ಅನಿಲ, ಒಲೆ, ಫ್ಯಾನ್, ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.
  • ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪೌಷ್ಟಿಕ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
  • ಕ್ರಿಸ್ಟಿಫ್ರೈಡ್ ಗ್ರಾಂ ಇಂಡಸ್ಟ್ರೀಸ್‍ನೊಂದಿಗಿದ್ದ ಸರ್ಕಾರದ ಕರಾರು ಕೊನೆಗೊಂಡಿದೆ.
  • ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಸರಬರಾಜಲ್ಲಿ ಕಂಡುಬಂದಿದೆಯೆಂದು ಹೇಳಲಾಗಿರುವ ಭ್ರಷ್ಟಾಚಾರ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೆಲವು ಪ್ರಮುಖ ಅಧಿಕಾರಿಗಳನ್ನು ಹೆಸರಿಸಿ ಲೋಕಾಯುಕ್ತ ಕಛೇರಿ ತನಿಖೆ ಆರಂಭಿಸಿದೆ.
ಈ ಧನಾತ್ಮಕ ಬೆಳವಣಿಗೆಗಳನ್ನು ಅವಲೋಕಿಸಿದಾಗ, ತೃಪ್ತಿ ಪಟ್ಟುಕೊಳ್ಳುವುದಕ್ಕಿಂತಲೂ ಇನ್ನೂ ಸಾಧಿಸಬೇಕಾಗಿರುವುದು ಸಾಕಷ್ಟಿದೆ ಎನ್ನಿಸದಿರದು. ಮಕ್ಕಳ ಅಪೌಷ್ಟಿಕತೆ ವಿರುದ್ಧ ಎಸ್.ಪಿ.ಜೆ. ನಡೆಸುತ್ತಿರುವ ಆಂದೋಲನದಲ್ಲಿ ಪರ್ಯಾಯ ಕಾನೂನು ವೇದಿಕೆ, ಸಿಕ್ರಂ, ಚೈಲ್ಡ್ ರೈಟ್ಸ್ ಟ್ರಸ್ಟ್, ಆಹಾರದ ಹಕ್ಕಿಗಾಗಿ ಜನಾಂದೋಲನ, ಸಿವಿಕ್, ದಲಿತ ಬಹುಜನ ಚಳವಳಿ, ಸಮತಾ ಸೈನಿಕ ದಳ, ದಲಿತ ಸಂಘರ್ಷ ಸಮಿತಿ ಮುಂತಾದ ಅನೇಕ ಸಮಾನ ಮನಸ್ಕ ಸಂಘಸಂಸ್ಥೆಗಳು ಸಕ್ರಿಯವಾಗಿ ತೊಡಗಿಸಿಕೊಂಡದ್ದು ಪ್ರಶಂಸನೀಯ. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಬೆಂಬಲ ಕೂಡಾ ಮಹತ್ತರವಾದದ್ದಾಗಿದೆ.
​
ಮುಂಬರುವ ದಿನಗಳಲ್ಲಿ ಉಚ್ಚ ನ್ಯಾಯಾಲಯದ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ಶಿಫಾರಸ್ಸುಗಳನ್ನು ಮತ್ತು ಕ್ರಿಯಾ ಯೋಜನೆಯನ್ನು ಸರ್ಕಾರ ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನಮ್ಮೆಲ್ಲರ ಹೋರಾಟ ತೀವ್ರಗೊಳ್ಳಬೇಕಿದೆ. ಇದಕ್ಕಾಗಿ ಪ್ರತಿಯೊಂದು ಸ್ವಯಂಸೇವಾ ಸಂಘಟನೆ ತನ್ನ ಕಾರ್ಯಕ್ಷೇತ್ರದಲ್ಲಿ ಅಂಗನವಾಡಿಗಳು, ಆರೋಗ್ಯ ಕೇಂದ್ರಗಳು ಮತ್ತು ಆರೋಗ್ಯ ಕಾರ್ಯಕರ್ತೆಯರ ಕೆಲಸಗಳನ್ನು ಬಹಳ ಹತ್ತಿರದಿಂದ ಉಸ್ತುವಾರಿ ಮಾಡಬೇಕಿದೆ. ಪ್ರತಿಯೊಂದು ಸಮುದಾಯದ ಕುಟುಂಬಗಳಲ್ಲಿ ಮಕ್ಕಳ ಪೌಷ್ಟಿಕ ಮಟ್ಟ ಕುರಿತು ತೀವ್ರ ನಿಗಾವಹಿಸಬೇಕಿದೆ. ಇದಕ್ಕಾಗಿ ಅಪೌಷ್ಟಿಕತೆಯ ವಿರುದ್ಧದ ಹೋರಾಟ ಮತ್ತು ನಿಗಾವಹಿಸುವ ಹಲವಾರು ಕ್ರಮಗಳು ಇವೆ. ಆಸಕ್ತರು ಎಸ್.ಪಿ.ಜೆಯನ್ನು ಸಂಪರ್ಕಿಸಬಹುದು.
 
ವೈ. ಮರಿಸ್ವಾಮಿ
ರಾಜ್ಯ ಸಂಯೋಜಕರು, ಸಮಾಜ ಪರಿವರ್ತನ ಜನಾಂದೋಲನ 

0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
+91-9980066890
+91-8310241136
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)