SKH
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
SKH

ಕೃತಿ ವಿಮರ್ಶೆ - ವ್ಯಕ್ತಿ ಹಾಗೂ ಕುಟುಂಬಗಳೊಡನೆ ಸಮಾಜಕಾರ್ಯ

12/20/2019

0 Comments

 
Picture
ಲೇಖಕರು :
ಡಾ|| ಶೇಖರ.ಎಸ್.ಪೂಜಾರ
ವಿಶ್ರಾಂತ ಪ್ರಾಧ್ಯಾಪಕರು, ಸಮಾಜಕಾರ್ಯ ವಿಭಾಗ,
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ.
ಪ್ರಕಾಶನ :
ನವೀನ ಪ್ರಕಾಶನ, ಕಲ್ಯಾಣ ನಗರ, ಧಾರವಾಡ.
ಪುಟಗಳು : 10+150             
ಮುದ್ರಣ : 2012                         
ಕೃತಿ ವಿಮರ್ಶನಾಕಾರರು
ಕು.ದೇವಿಂದ್ರಪ್ಪ ಎಂ., ರಶ್ಮೀ ಜಿ.ಎಂ,
ಸಂಶೋಧನಾರ್ಥಿಗಳು ಮತ್ತು
ಡಾ|| ರವೀಂದ್ರ ಡಿ ಗಡ್ಕರ್,
​ಪ್ರಾದ್ಯಾಪಕರು ಮತ್ತು ಮಾರ್ಗದರ್ಶಕರು, ಸಮಾಜಕಾರ್ಯ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ, ಶಿವಮೊಗ್ಗ.

ವೃತ್ತಿ ಸಮಾಜಕಾರ್ಯದ ಆರಂಭವು, ವಿದೇಶದಿಂದ ಪ್ರಾರಂಭವಾಗಿ ನಮ್ಮ ದೇಶಕ್ಕೆ ಬರಲು ಸುಮಾರು 38 ವರ್ಷಗಳೇ ಬೇಕಾಯಿತು. ಪದವಿ ಹಂತದಿಂದ ಆರಂಭಿಸಿದ ಶಿಕ್ಷಣ ಸಂಶೋಧನೆವರೆಗೂ ತಲುಪಿತು. ದಶಕಗಳು ಕಳೆದಂತೆ, ಸಮಾಜಕಾರ್ಯದ ಶಿಕ್ಷಣ ಕೇಂದ್ರಗಳ ವ್ಯಾಪ್ತಿ ವಿಸ್ತರಿಸುತ್ತ ಅದರ ಬೇಡಿಕೆ ಕೂಡ ಹೆಚ್ಚಿಸಿಕೊಂಡಿತು. ಈ ಕೃತಿಯ ಲೇಖಕರು ವ್ಯಕ್ತಿ ಹಾಗೂ ಕುಟುಂಬಗಳೊಡನೆ ಕಾರ್ಯನಿರ್ವಹಿಸುವಾಗ ಸಮಾಜಕಾರ್ಯಕರ್ತರ ಕಾರ್ಯದಕ್ಷತೆಯನ್ನು ಹಾಗೂ ಈ ಕೃತಿಯ ಮುಖ್ಯ ಶೀರ್ಷಿಕೆಯ ಪರಿಕಲ್ಪನೆಗಳನ್ನು ಹಂತ ಹಂತವಾಗಿ ಓದುಗರಿಗೆ ಅರ್ಥೈಸಲು ಹಲವಾರು ಸಮಾಜಕಾರ್ಯ ವಿದ್ವಾಂಸರ ವ್ಯಾಖ್ಯಾನವನ್ನು ಮತ್ತು ವ್ಯಕ್ತಿ ಹಾಗೂ ಕುಟುಂಬಗಳ ಸಮಾಜಕಾರ್ಯ ಸಾಹಿತ್ಯವನ್ನು ಮತ್ತು ವಚನ ಸಾಹಿತ್ಯ, ದಾಸ ಸಾಹಿತ್ಯ, ಜಾನಪದ ಸಾಹಿತ್ಯ ಹಾಗೂ ಕಾವ್ಯಗಳೂಂದಿಗೆ ಅನುಸಂಧಾನಿಸುತ್ತಾ ವ್ಯಕ್ತಿ ಹಾಗೂ ಕುಟುಂಬಗಳೊಡನೆ ಸಮಾಜಕಾರ್ಯ ಎಂಬ ಶೀರ್ಷಿಕೆಯಡಿ ಈ ಕೃತಿ ರಚಿಸಿದ್ದಾರೆ.
ಈ ಕೃತಿಯಲ್ಲಿ ಲೇಖಕರು 3 ಮುಖ್ಯ ಅಧ್ಯಾಯಗಳನ್ನು ಮಾಡಿದ್ದಾರೆ. ಮೊದಲನೆಯ ಅದ್ಯಾಯದಲ್ಲಿ ಸಮಾಜಕಾರ್ಯ ಎಂಬ ಶೀರ್ಷಿಕೆಯಡಿ 15 ಉಪ ಅಧ್ಯಾಯಗಳನ್ನು ವಿಭಾಗಿಸಿದ್ದಾರೆ. ಹಾಗೆಯೇ ಎರಡನೆಯ ಅಧ್ಯಾಯದ ವ್ಯಕ್ತಿಗತ ಸಮಾಜಕಾರ್ಯ ಎಂಬ ಶೀರ್ಷಿಕೆಯಡಿಯಲ್ಲಿಯು ಕೂಡ 15 ಉಪ ಅಧ್ಯಾಯಗಳನ್ನಾಗಿ ವಿಭಾಗಿಸಿದ್ದಾರೆ. ಮೂರನೆಯ ಅಧ್ಯಾಯದ ವ್ಯಕ್ತಿಗತ ಸಮಾಜಕಾರ್ಯ ವಿಧಾನದ ಅನ್ವಯಿಕೆ ಎಂಬ ಶೀರ್ಷಿಕೆಯಡಿಯು 2 ಉಪ ಅಧ್ಯಾಯಗಳನ್ನು ರೂಪಿಸಲಾಗಿದೆ ಮತ್ತು ಆಧಾರ ಗ್ರಂಥಗಳ ಉಲ್ಲೇಖಗಳೂಂದಿಗೆ ಈ ಕೃತಿ ಮುಕ್ತಾಯಗೂಳ್ಳುತ್ತದೆ.

ಮೊದಲನೆಯ ಅಧ್ಯಾಯದಲ್ಲಿ ಸಮಾಜಕಾರ್ಯದ ಸಂಕ್ಷಿಪ್ತ ಸಾರವನ್ನು, ಸಮಾಜ ಕಾರ್ಯ ಗೀತೆಯ ಮೂಲಕ ಪರಿಚಯಿಸುವ ಲೇಖಕರು ಪುಸ್ತಕದ ಪೀಠಿಕೆಯಲ್ಲಿ ವೃತ್ತಿ ತರಬೇತಿ ಪಡೆಯದ ಸಮಾಜಕಾರ್ಯಕರ್ತರು/ಸೇವಕರು ಎಂದು ಹೇಳಿಕೊಳ್ಳುವವರ ಮತ್ತು ವೃತ್ತಿಪರ ಸಮಾಜಕಾರ್ಯಕರ್ತರಿಗೂ ಇರುವ ಭಿನ್ನತೆಗಳನ್ನು ವಿವರಿಸುತ್ತ, ಭಾರತದ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ವೃತ್ತಿಪರ ಸಮಾಜಕಾರ್ಯಕರ್ತರ ಅವಶ್ಯಕತೆ ಮತ್ತು ಅವರ ಕಾರ್ಯ ಮಹತ್ವದ ಮೇಲೆ ಬೆಳಕು ಚೆಲ್ಲುವ ಪ್ರಯತ್ನಮಾಡಿದ್ದಾರೆ.

ಲೇಖಕರು ಈ ಕೃತಿಯಲ್ಲಿ ಪ್ರೊ|| ಹೆಚ್.ಸ್ಟ್ರೂಪ ಅವರ ವ್ಯಾಖ್ಯಾನವನ್ನು ಉಲ್ಲೇಖಿಸುತ್ತ ತಮಗೆ ತಾವೇ ನೆರವಾಗುವಲ್ಲಿ ಉಪಯೋಗಿಸುವ ವೈಜ್ಞಾನಿಕ ಜ್ಞಾನದ ಮೂಲಕ ವ್ಯಕ್ತಿಯ, ಗುಂಪಿನ ಮತ್ತು ಸಮುದಾಯದ ಅವಶ್ಯಕತೆಗಳ ಮೇಲೆ ಪ್ರಭಾವ ಬೀರುವಂತ ನಾನಾ ಸಂಪನ್ಮೂಲಗಳನ್ನು ಉಪಯೋಗಿಸುವ ಕಲೆಯೇ ಸಮಾಜಕಾರ್ಯ ಎಂದು ಈ ಕೃತಿಯಲ್ಲಿ ತಿಳಿಸಿದ್ದಾರೆ. ಮುಂದುವರೆದ ಭಾಗದಲ್ಲಿ ಲೇಖಕರು ವೃತ್ತಿ ಸಮಾಜಕಾರ್ಯದ ಲಕ್ಷಣಗಳು ಎಂಬ ಉಪ ಶೀರ್ಷಿಕೆಯಡಿ ವೃತ್ತಿ ಸೇವೆ, ವೈಜ್ಞಾನಿಕ ಜ್ಞಾನ, ಮಾನವೀಯತೆ ತತ್ವ ಇವುಗಳ ಆಧಾರದ ಮೇಲೆ ಮನೋ-ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಾಗಿದೆ ಎಂದು ವಿವರಿಸಿದ್ದಾರೆ.

ಸಮಾಜಕಾರ್ಯದ ಮೌಲ್ಯಗಳು ಎಂಬ ಉಪ ಶೀರ್ಷಿಕೆಯಡಿ ಮೌಲ್ಯಗಳ ಮಹತ್ವವನ್ನು ತಿಳಿಸುತ್ತ, ಸಮಾಜಕಾರ್ಯ ತಜ್ಞರಾದ ವೆರ್ನರ್ ಡಬ್ಲ್ಯು.ಬೋಹ್ಮ ಅವರ ಆರು ಪ್ರಕಾರದ ಮೌಲ್ಯಗಳನ್ನು ಓದುಗರಿಗೆ ಪರಿಚಯಿಸಿದ್ದಾರೆ ಮತ್ತು ಸಮಾಜಕಾರ್ಯದ ವಿಧಾನಗಳು ಎಂಬ ಉಪ ಶೀರ್ಷಿಕೆಯಡಿ ಆರು ವಿಧಾನಗಳಾದ ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ, ಸಮುದಾಯ ಸಂಘಟನೆ, ಸಮಾಜಕಾರ್ಯ ಆಡಳಿತ, ಸಮಾಜಕಾರ್ಯ ಸಂಶೋಧನೆ ಮತ್ತು ಸಾಮಾಜಿಕ ಕ್ರಿಯೆ ಈ ವಿಧಾನಗಳನ್ನು ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸಿರುವುದರ ಜೊತೆಗೆ ಸಮಾಜಕಾರ್ಯಕರ್ತರಿಗೆ ನೀತಿ-ಸಂಹಿತೆಗಳು ಎಂಬ ಉಪ ಶೀರ್ಷಿಕೆಯಡಿ ರಾಷ್ಟ್ರೀಯ ಸಮಾಜಕಾರ್ಯಕರ್ತರ ಸಂಘ ಘೋಷಿಸಿರುವ ಸಮಾಜಕಾರ್ಯಕರ್ತರಿಗೆ ಅವಶ್ಯವಿರುವ 14 ನೀತಿ-ಸಂಹಿತೆಗಳನ್ನು ಈ ಉಪ ಶೀರ್ಷಿಕೆಯಲ್ಲಿ ಅಳವಡಿಸಿದ್ದಾರೆ.

ಸಮಾಜಕಾರ್ಯಕರ್ತರ ಸಂಬಂಧಗಳು ಎಂಬ ಉಪ ಶೀರ್ಷಿಕೆಯಡಿ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತರು ಹಾಗೂ ಸಂಸ್ಥೆಯ ಜೊತೆಗಿನ ಸಂಬಂಧಗಳು, ಸಹಕಾರ್ಯಕರ್ತರ ಜೊತೆಗಿನ ಸಂಬಂಧಗಳು, ಸಮುದಾಯದ ಜೊತೆಗಿನ ಸಂಬಂಧಗಳು, ಸಮಾಜಕಾರ್ಯ ವೃತ್ತಿ ಜೊತೆಗಿನ ಸಂಬಂಧಗಳು ಮತ್ತು ಆರ್ಥಿಕತೆ ಜೊತೆಗಿನ ಸಂಬಂಧಗಳನ್ನು ತುಲನಾತ್ಮಕವಾಗಿ ನೋಡಿದ್ದಾರೆ.
ಸಾರ್ವಜನಿಕ ಸೇವೆ ಮತ್ತು ಸಮಾಜಕಾರ್ಯದ ವೃತ್ತಿ ಬದ್ಧತೆ ಎಂಬ ಈ ಉಪ ಶೀರ್ಷಿಕೆಗಳನ್ನು ಓದುಗರಿಗೆ ಅರ್ಥೈಸಲು ಲೇಖಕರು, ವಚನಗಳನ್ನು ಉಲ್ಲೇಖಿಸುತ್ತಾ ಸಮಾಜಕಾರ್ಯದ ವೃತ್ತಿಬದ್ಧತೆಯನ್ನು ಶರಣರ ಬದ್ಧತೆಯ ಜೊತೆಗೆ ಹೋಲಿಕೆ ಮಾಡುತ್ತಾರೆ. ಮೇದಾರ ಕೇತಯ್ಯ ಶರಣರ ಕುರಿತು ಹಾಡಿದ ಜಾನಪದ ಗೀತೆಯಾದ ಮರಣ ಬಂದರು ಕೂಡ ಶರಣ ಕಾಯಕ ಮುಗಿಸಿ ಹರುಷದಲಿ ಹರಣ ನೀಗಿದನು| ಕೇತಯ್ಯ ಹರನಿತ್ತ ಕರುಣೆಯಲಿ|| ಎಂಬ ಗೀತೆಯೊಂದಿಗೆ ಮೊದಲ ಅಧ್ಯಾಯಕ್ಕೆ ವಿರಾಮ ಹಾಕಿದ್ದಾರೆ.

ಭಾರತೀಯ ಸಮಾಜವು ಸಂಸ್ಕೃತಿ, ಸಂಪ್ರದಾಯಗಳ ಹೆಸರಿನಲ್ಲಿ ಹಲವಾರು ಅನಿಷ್ಟ ಪದ್ಧತಿಗಳನ್ನು ಮೈಗೂಡಿಸಿಕೊಂಡು ಅವುಗಳನ್ನು ಸಾವಿರಾರು ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ ಜನರಿಗೆ ಸತ್ಯವನ್ನು ಅರ್ಥೈಸಿ, ಮೌಢ್ಯವನ್ನು ವಿರೋಧಿಸಿ, ಸನ್ಮಾರ್ಗದಲ್ಲಿ ಜನರಿಗೆ ಸರಳ ಹಾದಿ ರೂಪಿಸಿಕೊಂಡ ಅನೇಕ ಶರಣರು, ದಾಸರು ಬಂಡಾಯವೆದ್ದು, ಈ ಭಾರತೀಯ ಸಮಾಜದ ಅನಿಷ್ಟ ಪದ್ಧತಿಗಳನ್ನು ತಿದ್ದುವ ಕಾಯಕದಲ್ಲಿ ಅವರು ಹೇಳಿರುವ ಹೇಳಿಕೆಗಳು ಅಥವಾ ವಚನಗಳೇ ವಚನ ಸಾಹಿತ್ಯ, ದಾಸ ಸಾಹಿತ್ಯ, ಹೀಗೆ ಜಾನಪದ ಸಾಹಿತ್ಯ ಉದಯಿಸಿದವು ಈ ಸಾಹಿತ್ಯಗಳು ವಿಮರ್ಶಾತ್ಮಕ ಸಮಾಜಕಾರ್ಯಕ್ಕೆ ಸಹಾಯಕವಾಗಿವೆ.

ವ್ಯಕ್ತಿಗತ ಸಮಾಜಕಾರ್ಯ ಎಂಬ ಮುಖ್ಯ ಶೀರ್ಷಿಕೆಯಡಿ ಆರಂಭವಾಗುವ ಈ ಎರಡನೆಯ ಅಧ್ಯಾಯದಲ್ಲಿ, ಮುಖ್ಯವಾಗಿ ಹೇಳಲೊರಟಿರುವ ವಿಷಯ ವ್ಯಕ್ತಿಗಳೊಂದಿಗೆ ಹಾಗೂ ಕುಟುಂಬದ ಘಟಕಗಳೂಂದಿಗೆ ಸಮಾಜಕಾರ್ಯ ಹೇಗೆ ನಿರ್ವಹಿಸಬೇಕೆಂಬುದರ ಕುರಿತಾಗಿರುತ್ತದೆ. ಇದನ್ನು ಓದುಗರಿಗೆ ಅರ್ಥೈಸಲು ಸಮಾಜಕಾರ್ಯ ತಜ್ಞರಾದ ಮೇರಿ ರಿಚ್ಮಂಡ್, ಸ್ವಿಥಾನ್ ಬೌವರ್ಸ್, ಆರ್ಥರ್ ಫಿಂಕ್, ಸ್ಯಾನ್ಫೋರ್ಡ್ ಮತ್ತು ಸ್ಮಾಲಿ ಅವರು ವ್ಯಾಖ್ಯಾನಗಳನ್ನು ಉಲ್ಲೇಖಿಸಿದ್ದಾರೆ. ಜೊತೆಗೆ ವ್ಯಕ್ತಿಗತ ಸಮಾಜಕಾರ್ಯದ ಐತಿಹಾಸಿಕ ಹಿನ್ನೆಲೆ ಮತ್ತು ಅದರ ಮೂಲ ಪರಿಕಲ್ಪನೆಗಳನ್ನು ಹೇಳಲು ಪ್ರಯತ್ನಿಸಿದ್ದಾರೆ.

ವ್ಯಕ್ತಿಗತ ಸಮಾಜಕಾರ್ಯದ ಸಿದ್ಧಾಂತಗಳು ಎಂಬ ಉಪ ಶೀರ್ಷಿಕೆಯಡಿ ಲೇಖಕರು ಸಮಸ್ಯೆಗಳ ನಿವಾರಣೆಗೆ ಸಂಬಂಧಿಸಿದ ಸಿದ್ಧಾಂತಗಳಾದ ಗೋರ್ಡನ್ ಹ್ಯಾಮಿಲ್ಟನ್ ಅವರ ಮನೋ-ಸಾಮಾಜಿಕ ಸಿದ್ಧಾಂತ, 1930 ರಲ್ಲಿ ಪೆನ್ಲಿಲ್ವೇನಿಯಾ ವಿಶ್ವವಿದ್ಯಾಲಯದ ಸಮಾಜಕಾರ್ಯ ಶಿಕ್ಷಣ ಸಂಸ್ಥೆಯಿಂದ ಅಭಿವೃದ್ದಿಪಡಿಸಿದ - ಕಾರ್ಯಾತ್ಮಕ ಸಂಬಂಧ ಸಿದ್ಧಾಂತ, ಪೊಲ್ವೋವ್ ಹಾಗೂ ಥಾರ್ನ್ಡಿಕೆ ಅವರ ನಡತೆ ಮಾರ್ಪಡಿಸುವ ಅಥವಾ ನಡತೆಯನ್ನು ತಿದ್ದುವ ಸಿದ್ಧಾಂತ ಮತ್ತು ಪರ್ಲೆಮನ್ ಅವರ ಸಮಸ್ಯಾ ಪರಿಹಾರ ಪ್ರಕ್ರಿಯೆ ಅಥವಾ ತಿಳುವಳಿಕೆ ಸಿದ್ಧಾಂತಗಳನ್ನು ವಿವರಿಸಿದ್ದಾರೆ.  ವ್ಯಕ್ತಿಗತ ಸಮಾಜಕಾರ್ಯದ ಅಂಗಗಳು ಎಂಬ ಉಪ ಶೀರ್ಷಿಕೆಯಡಿ ವ್ಯಕ್ತಿ, ಸಮಸ್ಯೆ, ಸ್ಥಳ ಮತ್ತು ಪ್ರಕ್ರಿಯೆಗಳು ಸಮಸ್ಯೆ ನಿವಾರಿಸುವಲ್ಲಿ ಇವುಗಳ ಮಹತ್ವವನ್ನು ಲೇಖಕರು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.
ಸಮಾಜಕಾರ್ಯಕರ್ತನು ಹಾಗೂ ಆರ್ಥಿಕತೆಯ ಸಂಬಂಧದ ಕುರಿತು ಅನೇಕ ಸೂತ್ರಗಳು ಅಥವಾ ತತ್ವಗಳು ಇವೆ, ಅದರಂತೆ ಲೇಖಕರು ಸಮಾಜಕಾರ್ಯ ಪ್ರಯೋಗದ ಸೂತ್ರಗಳು ಅಥವಾ ತತ್ವಗಳು ಎಂಬ ಉಪ ಶೀರ್ಷಿಕೆಯಡಿ ಸ್ವೀಕಾರ ಅಥವಾ ಅಂಗೀಕಾರ ಸೂತ್ರ, ಸಂವಹನ ಅಥವಾ ಸಂಪರ್ಕ ಸೂತ್ರ, ವೈಯಕ್ತೀಕರಣ ಸೂತ್ರ, ಸಹಭಾಗಿತ್ವ ಸೂತ್ರ, ಸ್ವ-ನಿರ್ಧಾರ ಸೂತ್ರ, ಸ್ವ-ಸಹಾಯ ಸೂತ್ರ, ಗೌಪ್ಯತೆ ಕಾಯುವ ಸೂತ್ರ ಮತ್ತು ಸ್ವಜ್ಞಾನ ಅಥವಾ ಸ್ವಪ್ರಜ್ಞಾ ಸೂತ್ರ ಹೀಗೆ ಸೂತ್ರಗಳು ಅಥವಾ ತತ್ವಗಳನ್ನು ಓದುಗರಿಗೆ ಅರ್ಥೈಸಲು ಪ್ರಯತ್ನಿಸಿದ್ಧಾರೆ. ಆದರೆ ಆರ್ಥಿಕ ಸಮಸ್ಯೆಯ ಆಳ ಹಾಗೂ ಕಾರ್ಯಕರ್ತನ ದಕ್ಷತೆ ಅರಿಯಲು ಸಾಹಿತ್ಯದೊಂದಿಗೆ ತುಲನೆ ಮಾಡಿರುವುದು  ವಿಶೇಷವಾಗಿದೆ.
ವ್ಯಕ್ತಿಗತ ಅಧ್ಯಯನ ಎಂಬ ಉಪ ಶೀರ್ಷಿಕೆಯಡಿ ಲೇಖಕರು ಹೇಳಿರುವಂತೆ ವ್ಯಕ್ತಿಗತ ಅಧ್ಯಯನ ಅಂದರೆ ಒಂದು ಸಾಮಾಜಿಕ ಘಟಕ, ಒಬ್ಬ ವ್ಯಕ್ತಿ, ಒಂದು ಕುಟುಂಬ, ಒಂದು ಸಂಸ್ಥೆ ಅಥವಾ ಒಂದು ಸಮುದಾಯವನ್ನು ಪರಿಶೋಧಿಸುವ ಹಾಗೂ ವಿಶ್ಲೇಷಿಸುವ ವಿಧಾನವೇ ವ್ಯಕ್ತಿಗತ ಅಧ್ಯಯನವಾಗಿದೆ. ಲೇಖಕರು ಈ ಅಧ್ಯಾಯದ ಕೂನೆಯ ಉಪ ಶೀರ್ಷಿಕೆಯಾದ ಕುಟುಂಬಗತ ಸಮಾಜಕಾರ್ಯದ  ಅಡಿಯಲ್ಲಿ ಮನೋ-ಸಾಮಾಜಿಕ ಅಂಶಗಳು ಕುಟುಂಬದಲ್ಲಿ ಒಗ್ಗಟ್ಟನ್ನು ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿರುವ ಮ್ಯೂರ್ಹೆಡ್ ಅವರ ವ್ಯಾಖ್ಯಾನವನ್ನು ಉಲ್ಲೇಖಿಸಿದ್ದಾರೆ. ಕುಟುಂಬದ ಸಮಸ್ಯೆಗಳನ್ನು ನಿವಾರಿಸುವಲ್ಲಿ ನೆರವಾಗುವ ಕುಟುಂಬ ಚಿಕಿತ್ಸೆ, ಕುಟುಂಬ ಚಿಕಿತ್ಸೆಯ ಮೂಲ ಊಹೆಗಳು, ಕುಟುಂಬ ಚಿಕಿತ್ಸೆಯ ಮೂಲ ಪರಿಕಲ್ಪನೆಗಳು, ರೋಗ ಪರೀಕ್ಷೆ ಹಾಗೂ ಮೌಲ್ಯಮಾಪನ ಮತ್ತು ಚಿಕಿತ್ಸಾ ಕ್ರಮ ಹೀಗೆ ಹಂತ ಹಂತವಾಗಿ ಕುಟುಂಬಗತ ಕಾರ್ಯವನ್ನು ವಿವರಿಸುತ್ತಾ ಎರಡನೆಯ ಅಧ್ಯಾಯ ಮುಕ್ತಾಯಗೂಳಿಸಿದ್ದಾರೆ.

ಈ ಕೃತಿಯ ಮೂರನೆಯ ಅಧ್ಯಾಯದ ಆರಂಭದ ಮುಖ್ಯ ಶೀರ್ಷಿಕೆಯಾದ ವ್ಯಕ್ತಿಗತ ಸಮಾಜಕಾರ್ಯ ವಿಧಾನದ ಅನ್ವಯಿಕೆ ವ್ಯಕ್ತಿಗತ ಸಮಾಜಕಾರ್ಯಕರ್ತರು ಯಾವ ಯಾವ ಕ್ಷೇತ್ರಗಳಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸಬಹುದು ಎಂಬುದನ್ನು ಲೇಖಕರು ತಿಳಿಸಿದ್ದಾರೆ, ಶಾಲಾ ಕಾರ್ಯಕ್ಷೇತ್ರ, ಕಾಲೇಜು ಕಾರ್ಯಕ್ಷೇತ್ರ, ವಾಣಿಜ್ಯ ಕ್ಷೇತ್ರದಲ್ಲಿ ವ್ಯಕ್ತಿಗತಕಾರ್ಯ, ಸರಕಾರಿ ಅಧೀನದಲ್ಲಿ ಬರುವ ಎಲ್ಲಾ ನಿಗಮಗಳಲ್ಲಿ ವ್ಯಕ್ತಿಗತ ಸಮಾಜಕಾರ್ಯ ನಿರ್ವಹಿಸಬುಹುದಾಗಿದೆ ಎಂದು ತಿಳಿಸಿದ್ದಾರೆ. ಈ ಅಧ್ಯಾಯದ ಕೂನೆಯ ಉಪ ಶೀರ್ಷಿಕೆ ಕುಟುಂಬಗತ ಸಮಾಜಕಾರ್ಯದಡಿ ಕುಟುಂಬದ ಸಮಸ್ಯೆಗಳಾದ ಆತ್ಮಹತ್ಯೆ, ಅತ್ತೆ-ಸೊಸೆ ನಡುವೆ  ಹೊಂದಾಣಿಕೆ ಸಮಸ್ಯೆ, ಮದ್ಯಪಾನ ಸಮಸ್ಯೆ, ಕಠೋರ ಕಟ್ಟುನಿಟ್ಟಿನ ವಾತಾವರಣದ ಸಮಸ್ಯೆ, ಸತಿ-ಪತಿಯರ ಮಧ್ಯೆ ಹೊಂದಾಣಿಕೆ ಸಮಸ್ಯೆ, ವರದಕ್ಷಿಣೆ ಸಮಸ್ಯೆ, ಹೀಗೆ ಹಲವಾರು ಕೌಟಂಬಿಕ ಸಮಸ್ಯೆಗಳನ್ನು, ಕುಟುಂಬದವರು ನಿವಾರಿಸಿಕೊಳ್ಳುವಲ್ಲಿ ಸಮಾಜಕಾರ್ಯಕರ್ತನು ಸಹಾಯ ಮಾಡುವ ಪರಿಯನ್ನು ಲೇಖಕರು ಓದುಗರಿಗೆ ಪರಿಚಯಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಈ ಎಲ್ಲಾ ಸಾಮಾಜಿಕ ಸಮಸ್ಯೆಯ ಅಳ, ಅವುಗಳ ತೀವ್ರತೆ, ಅವುಗಳ ಪರಿಣಾಮ ಅರಿಯಲು ಹಾಗೂ ಸಮಸ್ಯೆಗಳನ್ನು ಆರಂಭದಲ್ಲೇ  ನಿಯಂತ್ರಿಸಲು ಸಹಕಾರಿಯಾಗುವಂತೆ ಜಾನಪದ ಗೀತೆಗಳು, ಕವನ ಸಂಕಲನಗಳು, ಆಕಾಶವಾಣಿಯಲ್ಲಿ ಪ್ರಸಾರವಾದ ಕಿರು ನಾಟಕಗಳು ಮತ್ತು ವಚನಗಳನ್ನು ಉಲ್ಲೇಖಿಸಿರುವ ಲೇಖಕರ ಪ್ರಯತ್ನ ಶ್ಲಾಘನೀಯ.
 
ಉಪಸಂಹಾರ
ವೃತ್ತಿಪರ ಸಮಾಜಕಾರ್ಯದ ಸಾಹಿತ್ಯವನ್ನು ಅವಲೋಕಿಸಿದಾಗ ಇದು ಒಂದು ಒಳ್ಳೆಯ ಪ್ರಯತ್ನವಾಗಿದೆ. ಬಹುತೇಕ ಸಮಾಜಕಾರ್ಯ ಸಾಹಿತ್ಯ ಆಂಗ್ಲ ಮಾಧ್ಯಮದಲ್ಲಿರುವುದರಿಂದ ಕನ್ನಡ ಮಾದ್ಯಮದಲ್ಲಿ ಸಮಾಜಕಾರ್ಯ ಸಾಹಿತ್ಯ ದೊರೆಯದು. ಆದ್ದರಿಂದ ಈ ಕೃತಿ ಕನ್ನಡ ಮಾಧ್ಯಮದವರಿಗೆ ತುಂಬಾ ಉಪಯುಕ್ತವಾಗಿದೆ. ಈ ವಿಶೇಷ ಪ್ರಯತ್ನ ಮಾಡಿದ ಲೇಖಕರ ಕಾರ್ಯ ಶ್ಲಾಘನೀಯ. ಆದರೆ ಈ ಕೃತಿಯನ್ನು ನಾವು ಸಂಶೋಧನೆಯ ದೃಷ್ಟಿಕೋನದಲ್ಲಿ ಅವಲೋಕನ ಮಾಡುವುದಾದರೆ ಈ ಕೃತಿಗೆ ಕೆಲವು ಮಿತಿಗಳಿವೆ. ಅವುಗಳೆಂದರೆ ಪುಟ ಸಂಖ್ಯೆ 4 ರಲ್ಲಿ  ಪ್ರೊ|| ಹೆಚ್.ಸ್ಟ್ರೂಪ ಅವರ ವ್ಯಾಖ್ಯಾನವನ್ನು ಹೇಳಿ (ಡಾ||.ಎಚ್.ಎಂ.ಮರುಳಸಿದ್ಧಯ್ಯ 1993:35) ಎಂದು ಉಲ್ಲೇಖಿಸಿದ್ದಾರೆ. ಹೀಗೆ ಹಲವಾರು ಸಮಾಜಕಾರ್ಯ ತಜ್ಞರ ವ್ಯಾಖ್ಯಾನಗಳನ್ನು ತೆಗೆದುಕೊಂಡಿರುವ ಲೇಖಕರು ಯಾವ ಪುಸ್ತಕದಿಂದ ತೆಗೆದುಕೂಂಡಿದ್ದಾರೆಂಬುದುರ ಉಲ್ಲೇಖಗಳು ಲಭ್ಯವಿರುವುದಿಲ್ಲ. ಇದೇ ಮಾತು ಸಾಹಿತ್ಯದ ಉಲ್ಲೇಖಗಳಿಗೂ ಅನ್ವಯಿಸುತ್ತದೆ. ಈ ನೂನ್ಯತೆಗಳನ್ನು ಸರಿಪಡಿಸಿಕೊಂಡರೆ ಈ ಕೃತಿಯ ಗುಣಮಟ್ಟ ಇನ್ನೂ ಹೆಚ್ಚಾಗಬಹುದು.
​
ಈ ಕೃತಿಯಲ್ಲಿ ಲೇಖಕರು ವ್ಯಕ್ತಿ ಹಾಗೂ ಕುಟುಂಬಗಳೊಡನೆ ಸಮಾಜಕಾರ್ಯ ಸಾಹಿತ್ಯಕ್ಕೆ ವಚನ ಸಾಹಿತ್ಯ, ದಾಸ ಸಾಹಿತ್ಯ, ಜಾನಪದ ಸಾಹಿತ್ಯ ಹಾಗೂ ಕಾವ್ಯಗಳನ್ನು  ಈ ಕೃತಿಯಲ್ಲಿ ಅಳವಡಿಸಿ ಈ ಎಲ್ಲಾ ಸಾಹಿತ್ಯವನ್ನು ಸಮಾಜಕಾರ್ಯ ಸಾಹಿತ್ಯವನ್ನಾಗಿಸಿದ್ದಾರೆ. ಆದರೆ ಬೇರೆ ಬೇರೆ ಸಾಹಿತ್ಯವನ್ನು ಸೇರಿಸಿ ಒಂದು ಸಾಹಿತ್ಯವನ್ನು ರಚಿಸಬೇಕಾದರೆ ಆ ಸಾಹಿತ್ಯಗಳು ಸಂಶೋಧನಾ ಕಾರ್ಯದ ಫಲಿತಾಂಶವಾಗಿ ಬಂದ ಸಿದ್ಧಾಂತಗಳಾಗಲಿ, ತತ್ವಗಳಾಗಲಿ, ಮಾದರಿಗಳಾಗಲಿ ಮತ್ತು ವಿಧಾನಗಳ ರೂಪದಲ್ಲಿ ಸಮಾಜಕಾರ್ಯ ಸಾಹಿತ್ಯಕ್ಕೆ ಹೋಲಿಕೆಯಾಗುವಂತಿದ್ದರೆ ಮಾತ್ರ ಈ ವಚನ ಸಾಹಿತ್ಯ, ದಾಸ ಸಾಹಿತ್ಯ, ಜಾನಪದ ಸಾಹಿತ್ಯ ಹಾಗೂ ಕಾವ್ಯಗಳನ್ನು ವ್ಯಕ್ತಿ ಹಾಗೂ ಕುಟುಂಬಗಳೊಡನೆ ಸಮಾಜಕಾರ್ಯ ಸಾಹಿತ್ಯಕ್ಕೆ  ಸೇರಿಸಬಹುದು.

0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
+91-9980066890
+91-8310241136
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)