SKH
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
SKH

ಅಂತರವಲೋಕನ-ಪ್ರಸ್ತುತ ಸಮಾಜ - ಸಮಾಜಕಾರ್ಯ - ಸಮಾಜಕಾರ್ಯಕರ್ತ

7/16/2017

0 Comments

 
ಆರೋಗ್ಯಕರ ಸಮಾಜದ ಕನಸನ್ನು ಕಾಣುವ ನಾವು, ಈ ವಿಚಾರಕ್ಕೆ ಹೇಗೆ ಸ್ಪಂದಿಸಿದ್ದೇವೆ? ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ,ವ್ಯವಸ್ಥೆಯನ್ನು ಸರಿಪಡಿಸಲು ಅಗತ್ಯವಾದ ಸಾಮಾಜಿಕ ನೀತಿಗಳ ಬಗ್ಗೆ, ಅದರಲ್ಲಿ ಪಾಲ್ಗೊಳ್ಳುವುದರ ಬಗ್ಗೆ ಚಿಂತಿಸಿದ್ದೇವೆಯೇ? ರಾಜಕೀಯ  ದೊಂಬರಾಟದಲ್ಲಿ ತಲ್ಲೀನರಾಗಿರುವ ರಾಜಕಾರಣಿಗಳಿಗೆ ಅಭಿವೃದ್ಧಿಯೆಡೆಗಿನ ದೃಷ್ಟಿಕೋನವನ್ನು ನೀಡಲು ಎಂದಾದರೂಪ್ರಯತ್ನಿಸಿದ್ದೇವೆಯೇ? ಸಮಾಜಕಾರ್ಯವನ್ನು ಅಧ್ಯಯನ ಮಾಡಿಕೊಂಡು, ಉನ್ನತ ಸ್ಥಾನಕ್ಕೆ ಹೋದವರು ವ್ಯವಸ್ಥೆಯಲ್ಲಿಪಾಲುದಾರರಾಗುತ್ತಿರುವುದು ದುರಾದೃಷ್ಟವಲ್ಲವೇ?
ಅದೊಂದು ದಿನ ಸಮಾನಮನಸ್ಕರೆಲ್ಲಾ ಕೂಡಿ ನಡೆಸುತ್ತಿದ್ದ ಚರ್ಚೆಯಲ್ಲಿಂದು ಪ್ರಶ್ನೆ ಹುಟ್ಟಿತು. ರಾಜಸ್ಥಾನದಂತಹ ಮರುಭೂಮಿಯಲ್ಲಿ ಜಲಸಾಕ್ಷರತೆಯನ್ನು ಹರಡಿ, ಜನರ ಸಹಭಾಗಿತ್ವದಲ್ಲಿ ನೀರಿನ ಒರತೆಗಳಿಗೆ ಪುನರ್ಜೀವ ನೀಡಿರುವ ಜಲಗಾಂಧಿ ರಾಜೇಂದ್ರ ಸಿಂಗ್; ಅದೇ ರಾಜಸ್ಥಾನದ ಉದಯಪುರ ಜಿಲ್ಲೆಯ ಕೋಟಡಾ ಬ್ಲಾಕ್‍ನಲ್ಲಿನ ಓರ್ವ ಪತ್ರಕರ್ತ ಪ್ರಪುಲ್ಲಾ ಮಹಾಂತ, ಮತ್ತೊಬ್ಬ ಜನಸಾಮಾನ್ಯ ಲಾಡೂರಾಮರು ದಶಕಗಳಿಂದ ಅಲ್ಲಿನ ಆದಿವಾಸಿ ಹಕ್ಕುಗಳ ಪರವಾಗಿ ಹೋರಾಡುತ್ತಿದ್ದಾರಲ್ಲಾ? ತನಗೆ ಎರಡೂ ಕೈ ಇಲ್ಲದಿದ್ದರೂ, ಅಂಗವಿಕಲರ ಹಕ್ಕುಗಳಿಗೆ ಹೋರಾಡಿ, ಅವರ ಕೈ ಬಲಪಡಿಸಲು ಶ್ರಮಿಸುತ್ತಿರುವ ಜಾವೆದ್ ಅಖ್ತರ್ ರಂತಹವರ ಹೋರಾಟ, ಸಂಕಲ್ಪ, ಸಮಾಜದೆಡೆಗಿನ ನೈಜಕಾಳಜಿ, ದೃಷ್ಟಿಕೋನ, ಜನರೆಡೆಗಿನ ಒಲವು ನಮ್ಮ ವೃತ್ತಿಪರ ಸಮಾಜಕರ್ತರಲ್ಲೇಕಿಲ್ಲ? ಎಂಬುದು.

ಈ ಪ್ರಶ್ನೆ ಬಹುಶಃ ನಿಮ್ಮಲ್ಲೂ ಹುಟ್ಟಿರಬಹುದು. ನೀವೂ ಚಿಂತಿಸಿರಬಹುದು. ವೃತ್ತಿಪರ ಸಮಾಜಕಾರ್ಯವೆಂಬುದು 1936ರಿಂದ ಇಲ್ಲಿಯವರೆಗೂ ಸಾವಿರಾರು ವೃತ್ತಿಪರರನ್ನು ಸಮಾಜಕ್ಕೆ ಕೊಟ್ಟಿದ್ದರೂ, ಸಮಾಜದಲ್ಲಿ ತಮ್ಮದೇ ಆದ ಹೆಜ್ಜೆಗುರುತನ್ನು ಮೂಡಿಸಿದವರು ಕೆಲವೇ ಕೆಲವರು. ನೀವೊಮ್ಮೆ ಕಣ್ಣು ಮುಚ್ಚಿ ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ (ಮುಖ್ಯವಾಗಿ ಸಾಮಾಜಿಕ ಜೀವನದಲ್ಲಿ) ಬದಲಾವಣೆ ತಂದವರನ್ನು ಸ್ವಲ್ಪ ಗುರ್ತಿಸಿ. ನಮ್ಮ ಕರ್ನಾಟಕದಲ್ಲಿ ಗಿರಿಜನರ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಡಾ|| ಹೆಚ್. ಸುದರ್ಶನ್, ಡಾ|| ಬಾಲಸುಬ್ರಹ್ಮಣ್ಯರು ಮೂಲತಃ ವೈದ್ಯವೃತ್ತಿಯವರು; ಸಾಲು ಮರಗಳನ್ನು ನೆಟ್ಟು ಮಕ್ಕಳಂತೆ ಪೋಷಣೆಗೈದ ವೃಕ್ಷಮಾತೆ ತಿಮ್ಮಕ್ಕ ಅನಕ್ಷರಸ್ಥೆ; ಬೇಡರ ಜನಾಂಗದ ಹಕ್ಕುಗಳಿಗಾಗಿ ಮೂರು ದಶಕಗಳಿಂದ ಹೋರಾಟ ನಡೆಸುತ್ತಿರುವ ಡಾ|| ಭೀಮರಾವ್ ಗಸ್ತಿ ಇವರೊಬ್ಬ ವಿಜ್ಞಾನಿ. ಸಾವಯವ ಕೃಷಿಯನ್ನು ಎಲ್ಲರ ಹೊಲಗಳಲ್ಲಿ ಹರಡಿ, ರೈತರ ಕಣ್ಣೀರೊರೆಸಲು ಪ್ರಯತ್ನಿಸುತ್ತಿರುವ ಎರಾ ಆರ್ಗಾನಿಕ್ ನ ಜಯರಾಂ ಒಬ್ಬ ವಕೀಲರು. ಇವರ್ಯಾರೂ ವೃತ್ತಿಪರ ಸಮಾಜಕಾರ್ಯವನ್ನು ಓದಿಕೊಂಡವರಲ್ಲ. ಹಲವರಿಗೆ ಎಂ.ಎಸ್.ಡಬ್ಲ್ಯು ಪದವಿಯೊಂದಿದೆ ಎಂಬುದೇ ತಿಳಿದಿಲ್ಲ! ಆದರೂ, ಇವರ ಸಾಮಾಜಿಕ ಕಾಳಜಿ, ದೂರದೃಷ್ಟಿಯನ್ನು ಯಾರೂ ಪ್ರಶ್ನಿಸಲಾಗದು. ಇವರಿಗೆ ಸಾಧ್ಯವಾದದ್ದು ನಮಗೇಕೆ ಸಾಧ್ಯವಾಗುತ್ತಿಲ್ಲ?

ಎಲ್ಲಾ ನಮ್ಮ ನೆಚ್ಚಿನ ಹಿರಿ-ಕಿರಿಯ ಸಮಾಜಕಾರ್ಯಕರ್ತರಿಗೆ ಕೆಲವು ಪ್ರಶ್ನೆಗಳಿವೆ. ಇವುಗಳ್ಯಾವುವೂ ಬಾಹ್ಯವಾಗಿ ಉತ್ತರವನ್ನು ಬಯಸದಿದ್ದರೂ, ನಾವೆಲ್ಲರೂ ಅಂತರವಲೋಕನವನ್ನಂತೂ ಮಾಡಿಕೊಳ್ಳಬೇಕು.

ಇತ್ತೀಚಿಗೆ ಹಿರಿಯ ಜೀವ ಸಾಲುಮರದ ತಿಮ್ಮಕ್ಕ ತನ್ನ ಸಾಕುಮಗನ ಜೊತೆ ಗಾಂಧಿ ಪ್ರತಿಮೆ ಬಳಿ ತಮ್ಮ ಗ್ರಾಮದಲ್ಲೊಂದು ಹೆರಿಗೆ ಆಸ್ಪತ್ರೆ ಕಟ್ಟಿಸಿಕೊಡಿ ಎಂದು ನಿರಶನ ಕುಳಿತಾಗ ವೃತ್ತಿಪರರಾಗಿ ನಮ್ಮ ಸ್ಪಂದನೆಯೇನು ?

ನಮ್ಮದೇ ರಾಜ್ಯದ ಕಾಸರಗೋಡು, ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಾರಕ ಎಂಡೋಸಲ್ಫಾನ್ ಕೀಟನಾಶಕದಿಂದ ಅಂಗವೈಕಲ್ಯ, ಮುಗ್ಧರ ಮಾರಣಹೋಮ ನಡೆಯುತ್ತಿರುವಾಗ ಸಮಾಜಕಾರ್ಯಕರ್ತರಾಗಿ ನಾವೇನು ಮಾಡುತ್ತಿದ್ದೇವೆ? ಸಾಮಾಜಿಕ ಕ್ರಿಯೆ, ಸುಧಾರಣೆಯೆಂಬ ವಿಚಾರಗಳನ್ನು ಓದಿಕೊಂಡ ನಾವು ಈ ನಿಟ್ಟಿನಲ್ಲಿ ಮಾಡಿದ್ದಾದರೂ ಏನು ?

ಇಡೀ ದೇಶವೇ ಭ್ರಷ್ಟಾಚಾರದ ವಿರುದ್ಧ ಟೊಂಕ ಕಟ್ಟಿ ನಿಂತು ಅಣ್ಣಾ ಹಜಾರೆ ಯ ನಾಯಕತ್ವದಲ್ಲಿ ಹೋರಾಟ ಮಾಡುತ್ತಿರುವಾಗ, ಸಮಾಜವನ್ನು ಆರೋಗ್ಯಗೊಳಿಸುವ ಗುರುತರ ಜವಾಬ್ದಾರಿಯನ್ನು ಹೆಗಲಮೇಲಿರಿಸಿಕೊಂಡಿರುವ ನಾವು ಏನು ಮಾಡುತ್ತಿದ್ದೇವೆ?

ನಮ್ಮದು ಕೃಷಿ ಪ್ರಧಾನ ರಾಷ್ಟ್ರ; ರೈತ ದೇಶದ ಬೆನ್ನೆಲುಬು ಇವೇ ಮೊದಲಾದ ವಾಕ್ಯಗಳನ್ನು ರಾಜಕೀಯದವರೊಂದಿಗೆ ಸೇರಿ, ಗಾಯತ್ರಿ ಮಂತ್ರದಂತೆ ಹೇಳುತ್ತಿರುವ ನಾವು, ಅದೇ ರೈತರು ಗೋಲಿಬಾರ್ ಲಾಟಿಚಾರ್ಜ್‍ಗಳಿಗೆ ತುತ್ತಾಗಿ, ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ಒದ್ದಾಡಿ ವಿಧಿಯಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಲ್ಲಿ ಮೂಕ ಪ್ರೇಕ್ಷಕರಾಗಿದ್ದೇವಲ್ಲಾ! ಎಂದಾದರು ಅವರ ಕಷ್ಟಗಳಿಗೆ ಸ್ಪಂದಿಸಿ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಿದ ಉದಾಹರಣೆಗಳಿವೆಯೋ?

ವೃತ್ತಿಪರ ಸಮಾಜಕಾರ್ಯಕರ್ತರಾಗಿ ನಾವು ಯಾವಾಗಲೂ Relief, Rehabilitation, Therapy  ಎಂದು ಮಾತನಾಡುತ್ತಾ ಈ ನಿಟ್ಟಿನಲ್ಲಿ ಸಮಾಜ ಕಾರ್ಯಕರ್ತರು (ವಿಶೇಷವಾಗಿ ಮಾನವ ಸಂಪನ್ಮೂಲ ಪರಿಣಿತರು) ಸಂಘಟಿತರಾದ ಕೆಲವೇ  ಜನರಿಗೆ ಮಾತ್ರ ತನ್ನ ಸೇವೆಯನ್ನು ಸಲ್ಲಿಸುತ್ತಿದ್ದೇವೆ. ಸಮಾಜದಲ್ಲಿ ಉಳಿದ ಬಹುಸಂಖ್ಯಾತ ಅಸಂಘಟಿತ ಕಾರ್ಮಿಕರ ಗತಿಯೇನು? ಅವರಲ್ಲವೇ  ಹೆಚ್ಚು ಸಮಸ್ಯೆ ಪೀಡಿತರಾದವರು? ನಮ್ಮ ಆವಶ್ಯಕತೆ ಅವರಿಗೆ ತಾನೇ ಹೆಚ್ಚಿರುವುದು?

ದಿನ ಬೆಳಗಾದರೆ ದೇಶ/ರಾಜ್ಯದಲ್ಲಿ ಮಾನವ ಹಕ್ಕುಗಳ ಬಗ್ಗೆ ಹೋರಾಟ ಮಾಡುತ್ತಿರುವ ನೂರಾರು ಕಾರ್ಯಕರ್ತರು ಸ್ಥಿತಿವಂತರ ದೌರ್ಜನ್ಯಕ್ಕೆ, ಗುಂಡಿಗೆ ಬಲಿಯಾಗುತ್ತಿದ್ದಾರೆ. ಈ ಪೈಶಾಚಿಕ ಕೃತ್ಯಕ್ಕೆ ನಾವೇನು ಪ್ರತಿಕ್ರಿಯೆ ಕೊಟ್ಟಿದ್ದೇವೆ? ಸಮಾಜದ ಸಕಲರಿಗೂ ಮಾನವ ಹಕ್ಕುಗಳನ್ನು ದೊರಕಿಸಿಕೊಡಬೇಕೆಂಬುದು ಸಮಾಜಕಾರ್ಯದ ಮೂಲಭೂತ ಉದ್ದೇಶಗಳಲ್ಲೊಂದಾಗಿದ್ದರೂ, ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನವೇನು ? ಕನಿಷ್ಠ ಅಂತಹ ನೊಂದ ಕುಟುಂಬಗಳಿಗಾದರೂ ತೆರಳಿ ಸಾಂತ್ವನ ಹೇಳುವ ಕಾಳಜಿಯನ್ನಾದರೂ ತೋರಿದ್ದೇವೆಯೇ ?

ಸರ್ಕಾರಗಳು ದೇಶವನ್ನು ಅಭಿವೃದ್ಧಿ(?)ಗೊಳಿಸುತ್ತೇವೆಂಬ ನೆಪದಲ್ಲಿ ರೈತರ ಜಮೀನುಗಳನ್ನು ಕಿತ್ತುಕೊಂಡು ಬಲಿಷ್ಠರ ಕೈಗಿತ್ತು, ವಿಶೇಷ ವಿತ್ತವಲಯ (SEZ) ಕೈಗಾರಿಕೀಕರಣವೆಂಬ ಭೂತಗಳನ್ನು ಸೃಷ್ಟಿಸಿ, ಗ್ರಾಮೀಣರ ಬದುಕನ್ನು ಮೂರಾಬಟ್ಟೆ ಮಾಡುತ್ತಿರುವಾಗ, ನಾವೆಂದಾದರೂ ರೈತರ ನೋವಿಗೆ ಧ್ವನಿಯಾಗಿದ್ದೇವೆಯೇ?

ಇತ್ತೀಚೆಗೆ ಯೋಗಗುರು ಬಾಬಾ ರಾಮದೇವ್ & ಬೆಂಬಲಿಗರು ದೇಶದ ಕಪ್ಪು ಹಣದ ವಿರುದ್ಧ ಹೋರಾಟ ಮತ್ತು ಉಪವಾಸ  ಸತ್ಯಾಗ್ರಹದಲ್ಲಿ ನಮ್ಮ ಪಾಲುದಾರಿಕೆಯೇನು? ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಧೋರಣೆಗೆ ನಮ್ಮ ಪ್ರತಿಕ್ರಿಯೆಯೇನು? ನಮ್ಮಲ್ಲಿ ಎಷ್ಟು ಜನ ದಿಲ್ಲಿಯ ಜಂತರ್ಮಂತರ್, ರಾಮಲೀಲಾ ಮೈದಾನ ಮತ್ತು ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ಹೋರಾಟದಲ್ಲಿ ಭಾಗಿಯಾಗಿ ನಮ್ಮ ಬೆಂಬಲ ನೀಡಿದ್ದೇವೆ?

ಇತ್ತೀಚೆಗೆ, ನಮ್ಮ ಉತ್ತರ ಕರ್ನಾಟಕದಲ್ಲಿ ಸಂಬಂಧಿಸಿದ ನೆರೆ ಹಾವಳಿಯ ಸಂತ್ರಸ್ತರಿಗೆ ನಮ್ಮ ಸಹಾಯಹಸ್ತ ಚಾಚಿದ್ದೇವೆಯೇ (ಕಳೆದ ವರ್ಷದ, ಕೊಂಗವಾಡ ಗ್ರಾಮದಲ್ಲಿ ಆಯೋಜಿಸಿದ್ದ ಸಮಾಜಕಾರ್ಯ ಕಲಿಕಾ ಶಿಬಿರವನ್ನು ಬಿಟ್ಟು?) ಈ ನಿಟ್ಟಿನಲ್ಲಿ ಸಂತ್ರಸ್ತರಿಗೆ ನೆರವು ಕೊಡಿಸುವುದರಲ್ಲಿ ನಾವು ನಮ್ಮ ಸಮಾಜ ಕಾರ್ಯ ವಿಧಾನಗಳಾದ ವ್ಯಕ್ತಿಗತಕಾರ್ಯ, ವೃಂದಕಾರ್ಯ, ಸಮುದಾಯ ಸಂಘಟನೆ, ಸಮಾಜಕಾರ್ಯ ಸಂಶೋಧನೆ, ಸಮಾಜ ಕಲ್ಯಾಣ ಆಡಳಿತ, ಸಾಮಾಜಿಕ ಕ್ರಿಯೆ ಮುಂತಾದವುಗಳನ್ನು ಜನರೊಂದಿಗೆ, ಸರ್ಕಾರ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳೊಂದಿಗೆ ಸೇರಿ ಅನುಷ್ಠಾನಗೊಳಿಸಿದ್ದೇವೆ?

ಸಮಾಜಕಾರ್ಯ ಶಿಕ್ಷಣ ಸಂಸ್ಥೆಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳನ್ನು ಈ ಮೇಲ್ಕಂಡ ಎಲ್ಲಾ ವಿಚಾರಗಳಿಗೆ ಜಾಗೃತಿಗೊಳಿಸಿದ್ದೇವೆಯೇ? ಅವರನ್ನು ಸರಿದಾರಿಯಲ್ಲಿ ನಡೆಯಲು ಕಾರಣಕರ್ತರಾಗಿದ್ದೇವೆಯೇ? ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಘಸಂಸ್ಥೆಗಳು ನಮ್ಮ ಕ್ಷೇತ್ರ ಕಾರ್ಯಸಂಸ್ಥೆಗಳ ಪಾತ್ರಗಳ ಕುರಿತು ಆತ್ಮಾವಲೋಕನ ಮಾಡಿಕೊಂಡಿದ್ದೇವೆಯೇ ?

ಇನ್ನು, ಸಮಾಜದಲ್ಲಿ ಭಯೋತ್ಪಾದನೆಯೆಂಬುದು, ರಾಜ್ಯದ/ದೇಶದ ಎಲ್ಲೆ ಮೀರಿದೆ. ಇದು ಇಂದಿನ ಜ್ವಲಂತ ಸಮಸ್ಯೆಗಳಲ್ಲಿ ಬಹುಮುಖ್ಯವಾದದ್ದು. ಒಂದಲ್ಲಾ ಒಂದು ರೀತಿಯಲ್ಲಿ ಇದೂ ಸಾಮಾಜಿಕ ಪಿಡುಗು, ಇದನ್ನು ಸಮಾಜದಿಂದ ಹೊರಹಾಕುವಲ್ಲಿ ನಾವೇನು ಮಾಡುತ್ತಿದ್ದೇವೆ?

ಭಾರತದಂತಹ ರಾಷ್ಟ್ರಗಳಲ್ಲಿ ಸಮಾಜಕಾರ್ಯದ ಬೇರು ಇರುವುದು ಹಳ್ಳಿಗಳಲ್ಲಿ. ಇವುಗಳ ಉದ್ಧಾರವೇ ನಿಜವಾದ ಅಭಿವೃದ್ಧಿ. ಇಳಂಗೋ ರಾಮಸ್ವಾಮಿಯವರಂತಹ ಇಂಜಿನಿಯರ್ ಪದವೀಧರ ತಮ್ಮ ಹಳ್ಳಿಯನ್ನು ಇಡೀ ದೇಶದಲ್ಲೇ ಮಾದರಿಯನ್ನಾಗಿ ಮಾಡಬೇಕೆಂದು ಹುಟ್ಟೂರಿಗೆ ಹಿಂದಿರುಗಿ, ಜನರನ್ನು ಒಗ್ಗೂಡಿಸಿ, ತನ್ನ ಗುರಿ ಮುಟ್ಟಿರುವಾಗ, ಸ್ವಾವಲಂಬನೆಯ ಪಾಠ ಹೇಳಿಕೊಡುವ ನಾವೇಕೆ ಈ ನಿಟ್ಟಿನಲ್ಲಿ ಉದಾಹರಣೆಯಾಗಬಾರದು? ನಾವು ಹುಟ್ಟಿ ಬೆಳೆದ ಹಳ್ಳಿಯ ಅಭಿವೃದ್ಧಿಯಲ್ಲಿ ಎಂದಾದರೂ ಪಾಲುದಾರರಾಗಬೇಕೆಂದು ಅನಿಸಿದೆಯೇ ?

ಜಗತ್ತಿಗೆ ಒಗ್ಗಟ್ಟು, ಜಾತ್ಯಾತೀತತೆ, ಸಹಬಾಳ್ವೆ, ಸಂಘಟನೆಯನ್ನು ಹೇಳಿಕೊಡುವ ನಾವು ನಮ್ಮಲ್ಲೇ ಈ ಗುಣಗಳನ್ನು ಅಂತರ್ಗತ ಮಾಡಿಕೊಂಡಿದ್ದೇವೆಯೇ? ಇತರರ ಸಾಧನೆ, ಯಶಸ್ಸುಗಳನ್ನು ಸಹಿಸದ ನಾವು, ಇತರರಿಂದ ಈ ಗುಣಗಳನ್ನು ಬಯಸುವುದು ಸಮಂಜಸವೇ ?

ನಮ್ಮೊಳಗಿನ ನಮ್ಮನ್ನೇ ಸಮಾಜಮುಖಿಯನ್ನಾಗಿ ಮಾಡಿಕೊಳ್ಳಲಾರದ ನಾವು ಬೇರೆಯವರಿಂದ ಹೇಗೆ ತಾನೇ ಈ ಗುಣವನ್ನು ಬಯಸೋಣ?

ಇನ್ನು ನಮ್ಮ ರಾಜ್ಯದಲ್ಲಿ ರಾಜಕೀಯವು ದಿನಕ್ಕೊಂದು ಹಗರಣಗಳಿಂದ ಜನಪ್ರಿಯವಾಗುತ್ತಿದೆ. ಸಮಾಜವನ್ನು ಅಸ್ಥಿರಗೊಳಿಸಿ, ಅನೈತಿಕ ವಾತಾವರಣ ನಿರ್ಮಾಣವಾಗುತ್ತಿದೆ. ಆರೋಗ್ಯಕರ ಸಮಾಜದ ಕನಸನ್ನು ಕಾಣುವ ನಾವು, ಈ ವಿಚಾರಕ್ಕೆ ಹೇಗೆ ಸ್ಪಂದಿಸಿದ್ದೇವೆ? ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ, ವ್ಯವಸ್ಥೆಯನ್ನು ಸರಿಪಡಿಸಲು ಅಗತ್ಯವಾದ ಸಾಮಾಜಿಕ ನೀತಿಗಳ ಬಗ್ಗೆ, ಅದರಲ್ಲಿ ಪಾಲ್ಗೊಳ್ಳುವುದರ ಬಗ್ಗೆ ಚಿಂತಿಸಿದ್ದೇವೆಯೇ? ರಾಜಕೀಯ ದೊಂಬರಾಟದಲ್ಲಿ ತಲ್ಲೀನರಾಗಿರುವ ರಾಜಕಾರಣಿಗಳಿಗೆ ಅಭಿವೃದ್ಧಿಯೆಡೆಗಿನ ದೃಷ್ಟಿಕೋನವನ್ನು ನೀಡಲು ಎಂದಾದರೂ ಪ್ರಯತ್ನಿಸಿದ್ದೇವೆಯೇ? ಸಮಾಜಕಾರ್ಯವನ್ನು ಅಧ್ಯಯನ ಮಾಡಿಕೊಂಡು, ಉನ್ನತ ಸ್ಥಾನಕ್ಕೆ ಹೋದವರು ವ್ಯವಸ್ಥೆಯಲ್ಲಿ ಪಾಲುದಾರರಾಗುತ್ತಿರುವುದು ದುರಾದೃಷ್ಟವಲ್ಲವೇ ?

ಹೀಗೆ ಪ್ರಶ್ನೆಗಳನ್ನು ಕೆದಕುತ್ತಿದ್ದರೆ, ನೂರಾರು ಹೊರಬರುತ್ತವೆ. ಆದರೆ ನಮ್ಮ ಉದ್ದೇಶ ಪ್ರಶ್ನೆ ಕೇಳುವುದಲ್ಲ; ಪ್ರಶ್ನೆಯ ಜೊತೆ ಜೊತೆಗೆ ಪರಿಹಾರ ಕಂಡುಕೊಳ್ಳುವುದು. ಈ ನಿಟ್ಟಿನಲ್ಲಿ, ಪರಿಹಾರಗಳ ಕಡೆ ಕಣ್ಣ್ಣು ಆಯಿಸುವುಕ್ಕಿಂತ ಮುಂಚೆ, ಸಾಧಕರ ಕೆಲವು ಗುಣ ವಿಶೇಷಗಳನ್ನು ಅರಿಯುವುದು ಒಳಿತು.

ಎ)        ಸ್ಪಷ್ಟಗುರಿ  ಅಛಲ ನಿಲುವು: ಸಮಾಜದಲ್ಲಿ ಅಪ್ರತಿಮ ಸಾಧನೆ ಮಾಡಿದವರಿಗೆಲ್ಲಾ ತಮ್ಮ ಹೋರಾಟ, ಕಾರ್ಯಗಳ ಬಗ್ಗೆ ಸ್ಪಷ್ಟ ಗುರಿ ಇತ್ತು. ಆ ಗುರಿಯೆಡೆಗೆ ಸಾಗುವ, ನಡುವೆ ಯಾವುದೇ ಕಷ್ಟನಷ್ಟಗಳು ಬಂದರೂ ಎದೆಗುಂದದೇ ಮುನ್ನಡೆವ ಛಲಗಾರಿಕೆಯಿತ್ತು.
ಉದಾ: ಇಂದು ಮಕ್ಕಳ ನೋವಿಗೆ ಕ್ಷಣಾರ್ಧದಲ್ಲಿ ಸ್ಪಂದಿಸುವ 1098 (ಮಕ್ಕಳ ಸಹಾಯವಾಣಿ) ಯ ಕನಸನ್ನು ಕಂಡ ಬಾಂಬೆಯ ಜೆರ್ರೋ ಬಿಲಿಮೋರಿಯಾ ಈ ಕಲ್ಪನೆಯನ್ನು ದೂರವಾಣಿ ಕಂಪೆನಿಗಳ ಮುಂದೆ ಮೊದಲು ಪ್ರಸ್ತಾಪಿಸಿದಾಗ, ಕುಚೋದ್ಯ ಮಾಡಿದರೂ ಆಕೆ ಧೃತಿಗೆಡಲಿಲ್ಲ. ಮರಳಿ ಯತ್ನಗಳನ್ನು ಮಾಡುತ್ತಲೇ ಇದ್ದಳು. ಕೊನೆಗೆ ತನ್ನ ಕನಸು ನನಸಾಯಿತು, ಇಂದು ಈ ಕಲ್ಪನೆಯಿಂದ ಪ್ರಪಂಚದ ವಿವಿಧ ದೇಶಗಳು ಲಾಭ ಪಡೆದಿವೆ. ಅಂತೂ ನೊಂದ ಮಕ್ಕಳಿಗೆ ಇದು ಸಂಜೀವಿನಿಯಾಗಿದೆ.

ಬಿ)        ಹಣ - ಪ್ರಶಸ್ತಿಯ ಹಿಂದೆ ಬೀಳದವರು:- ಸಮಾಜದ ಸೇವಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮಾಡಿಸಿದವರ್ಯಾರೂ ಹಣ - ಪ್ರಶಸ್ತಿಗಳ ಹಿಂದೆ ಬಿದ್ದವರಲ್ಲ. ನಿಷ್ಕಾಮಕರ್ಮಯೋಗದಲ್ಲಿ ತೊಡಗಿದವರು ಹಣ ಪ್ರಶಸ್ತಿಗಳು ತಡವಾಗಿಯೇ ಅರಸಿ ಬಂದವು. ತನ್ನ ಘನತೆಯನ್ನು ಹೆಚ್ಚಿಸಿಕೊಂಡವು.

ಸಿ)        ಜನರ ಮೇಲಿನ ಕಾಳಜಿ, ಕೆಲಸದ ಮೇಲಿನ ಪ್ರೀತಿ:- ಇವರೆಲ್ಲರೂ ತಾನು ಸೇವೆ ಸಲ್ಲಿಸುವ ಜನರ ಮೇಲೆ ನೈಜ ಕಾಳಜಿ ಹೊಂದಿದ್ದರು. ಅವರ ಸಮಸ್ಯೆಗಳನ್ನು ಬಗೆಹರಿಸಲು ಏನೆಲ್ಲಾ ಬೇಕೋ ಎಲ್ಲಾವನ್ನೂ ನಿಃಸ್ವಾರ್ಥದಿಂದ ಮಾಡಿದರು. (ಕೆಲವು ಬಾರಿ ಸಂಸಾರಗಳನ್ನು ಕೂಡ) ಅಗ ಯಶಸ್ಸು ಎನ್ನುವುದು ತಾನಾಗಿಯೇ ಬಂತು. ಅವರಲ್ಲಿ ತಾನು ನಿರ್ವಹಿಸುವ ಕೆಲಸದ ಮೇಲೆ ಶ್ರದ್ಧೆ ಪ್ರೀತಿಯಿತ್ತು. ಪ್ರತಿಯೊಂದನ್ನು ಇಷ್ಟಪಟ್ಟು ನಿಃಸ್ವಾರ್ಥದಿಂದ ಮಾಡುವುದರಿಂದ ಯಶಸ್ಸು ಸಿಗುತ್ತದೆ ಎಂಬ ಸತ್ಯ ಅರಿತಿದ್ದರು.

ಡಿ)        ಆದರ್ಶ ಬಿಡಲಿಲ್ಲ:- ಸಾಧಕರು ಏನೇ ಕಷ್ಟ ಬಂದರೂ ತಮ್ಮ ನೈತಿಕತೆಯನ್ನು ಮೌಲ್ಯ ಆದರ್ಶಗಳನ್ನು ಬಿಡಲಿಲ್ಲ. ಅವುಗಳೇ ಅವರನ್ನು ಯಶಸ್ಸಿನ ಕಡೆ ಕೊಂಡೊಯ್ದವು. ಸತ್ಯ, ಅಹಿಂಸೆ, ತ್ಯಾಗಗಳನ್ನು ಹೋರಾಟಗಳಲ್ಲಿ ತೊಡಗಿಸಿದ್ದರಿಂದಲೇ ಸಮಾಜದಲ್ಲಿ ಗುರುತರ ಬದಲಾವಣೆ ತರುವುದರ ಜೊತೆಗೆ ಇತರರನ್ನು ಸಜ್ಜುಗೊಳಿಸಲು ಸಾಧ್ಯವಾಯಿತು. ಗಾಂಧಿ ಹೋದರು, ಗಾಂಧಿತ್ವ ಉಳಿಯಿತು ಅದೇ ಶಾಶ್ವತ.

ಮೇಲಿನ ಗುಣಗಳಾವುವೂ ನಮ್ಮಲ್ಲಿಲ್ಲವೆಂದು ನಾವು ಹೇಳುವುದಿಲ್ಲ. ಆದರೆ ಅದು ಸಾಕಷ್ಟಿಲ್ಲ ಮತ್ತು ಸದ್ಬಳಕ್ಕೆಯಾಗುತ್ತಿಲ್ಲವೆಂಬುದೇ ನಮ್ಮ ದೂರು, ನೋವು. ಅವುಗಳೆಲ್ಲಾ ಅತ್ಯುನ್ನತ ಮಟ್ಟದಲ್ಲಿದ್ದರೆ ನಮ್ಮವೇ ಕಾಡುಗಳನ್ನು, ಗಣಿ ಸಂತ್ರಸ್ತರ ಪರ ಹೋರಾಟ ಮಾಡಲು ಮೇಧಾ ಪಾಟ್ಕರ್ ಇಲ್ಲಿಗೆ ಬರುವ ಆವಶ್ಯಕತೆಯೇ ಇರುತ್ತಿರಲಿಲ್ಲ. ಪಶ್ಚಿಮ ಘಟ್ಟಗಳನ್ನು ಉಳಿಸಿ ಎಂದು ಸುಂದರ್ ಲಾಲ್ ಬಹುಗುಣರಂತಹ ಹಿರಿಯ ಜೀವಿಗಳು ಕರೆಕೊಡುವ ಜರೂರತ್ತೇ ಇರಲಿಲ್ಲ. ನಮ್ಮ ಸಮಸ್ಯೆಗಳನ್ನು ಬಗೆಹರಿಸಿ ಎಂದು ದಾರಿಕಾಣದೇ ಸಾವಿರಾರು ಯುವಕರು ದಾರಿತಪ್ಪುತ್ತಲೂ ಇರಲಿಲ್ಲ. ಸವಣೂರಿನಲ್ಲಿ ದಲಿತರು ತಮ್ಮ ಹಕ್ಕುಗಳು ಮತ್ತು ಆವಶ್ಯಕತೆಗಳಿಗಾಗಿ ಮಲಾಭಿಷೇಕ ಮಾಡಿಕೊಳ್ಳುವ ಸಂದರ್ಭವೂ ಬರುತ್ತಿರಲಿಲ್ಲ.

ಪರಿಹಾರಗಳು:- ನಮ್ಮ ಚರ್ಚೆಯ ಫಲ; ಇರುವ ಅಲ್ಪ ಅನುಭವದಿಂದ ಕಂಡುಕೊಂಡು ಕೆಲವು ಪರಿಹಾರೋಪಾಯಗಳನ್ನು ನಿಮ್ಮ ಮುಂದೆ ಇಡಲು ಇಚ್ಛಿಸುತ್ತೇವೆ. ಇವಕ್ಕಿಂತ ಪರಿಣಾಮಕಾರಿ ಮಾರ್ಗಗಗಳಿದ್ದರೆ, ಬರೆಯಿರಿ ಎಲ್ಲರೂ ಓದಿ ಅರ್ಥಮಾಡಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಸಮಾಜದ ಒಳಿತಿಗಾಗಿ ಅನುಷ್ಠಾನಗೊಳಿಸೋಣ.

ಸಮಾಜಕಾರ್ಯ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆಮಾಡಿಕೊಳ್ಳುವಾಗ ಕೆಲವಾರು ಮಾನದಂಡಗಳನ್ನು ಅನುಸರಿಸಬೇಕಾದ್ದು ಕಡ್ಡಾಯವಾಗಬೇಕು. ಮುಖ್ಯವಾಗಿ, ಆ ವ್ಯಕ್ತಿಯಲ್ಲಿನ ಸಮಾಜದೆಡೆಗಿನ ದೃಷ್ಟಿಕೋನ, ಮನೋಭಾವನೆಗಳು, ಸೇವಾ ಪ್ರವೃತ್ತಿ ಇವೇ ಮೊದಲಾದವನ್ನು ಗುರುತಿಸಿ ಪ್ರವೇಶ ಕೊಟ್ಟರೆ ಉತ್ತಮ. ಡಿಗ್ರಿ ಓದಿದ್ದೇನೆ ಎಂಬ ಒಂದೇ ಮಾನದಂಡ ಸರಿಯಲ್ಲ.

ಸಮಾಜಕಾರ್ಯದ ವಿಧ್ಯಾರ್ಥಿಗಳಲ್ಲಿ ಉನ್ನತ ಆದರ್ಶಗಳನ್ನು ಮೂಡಿಸಬೇಕು; ನಾನು ನನ್ನ ಮನೆ, ನನ್ನ ಕೆಲಸವೆಂಬ 30ಥ40 ರ ಕಲ್ಪನೆಯಿಂದ ಹೊರಬಂದು ಎಲ್ಲರ ಒಳಿತಿನಲ್ಲಿ ನನ್ನ ಒಳಿತಿದೆ ನಾನು ಎಲ್ಲರಿಗಾಗಿ ಎಂಬ ವಿಶಾಲ ಮನೋಭಾವ ಬೆಳೆಸಬೇಕಾದ್ದು ಅಗತ್ಯ. ಇತರರೊಂದಿಗೆ ಸಂಬಳ, ಸೇವೆಗಳನ್ನು ಹೋಲಿಸಿ ನೋಡುವ ಕಾರ್ಪೊರೇಟ್ ಬುದ್ದಿ ಬಿಡಬೇಕು. ಈ ನಿಟ್ಟಿನಲ್ಲಿ ಪಠ್ಯಕ್ರಮದ ಅಮೂಲಾಗ್ರ ಬದಲಾವಣೆ ಅತ್ಯಗತ್ಯ.

ಮತ್ತೊಂದು ಗಮನಾರ್ಹ ಬದಲಾವಣೆಯಾಗಬೇಕಾದ ಅಂಶವೆಂದರೆ, ನಮ್ಮಲ್ಲೇ ಹುಟ್ಟಿ ಬೆಳೆದು, ಸಮಾಜದ ಹುಲ್ಲುಬೇರುಗಳನ್ನು ಅರ್ಥೈಸಿಕೊಂಡು ಸಮಾಜದ ಡೊಂಕನ್ನು ತಿದ್ದಲು ಪ್ರಯತ್ನಿಸಿ, ತಕ್ಕಷ್ಟು ಯಶಸ್ವಿಯಾದ ಬಸವ, ಕನಕ, ಸರ್ವಜ್ಞ, ಅಂಬೇಡ್ಕರ್‍ರಂತವರು ನಮಗೆ ಆದರ್ಶರಾಗಬೇಕು. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು. ಆದರ್ಶಗಳನ್ನು ಆತ್ಮಾರ್ಪಿತ  ಮಾಡಿಕೊಳ್ಳಬೇಕು. ಆಗ ಮಾತ್ರ ಸಮಾಜದೆಡೆಗೆ ಖಚಿತ ನಿಲುವು ದೊರಕುತ್ತದೆ.

ಸಮಾಜಕಾರ್ಯ ಶಿಕ್ಷಣ ಪಡೆದು, ಕ್ಷೇತ್ರದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಮಂದಿ ತಾನು ಕಲಿತ ಶಿಕ್ಷಣ ಸಂಸ್ಥೆಗಳಿಗೆ ಹಿಂದಿರುಗಬೇಕು. ಈಗಿನ ಯುವಕರನ್ನು (ಶಿಕ್ಷಕರನ್ನು ಸೇರಿಸಿ) ಸಮಾಜಕಾರ್ಯಕ್ಕೆ ತರಭೇತಿಗೊಳಿಸುವ ಕಾರ್ಯದಲ್ಲಿ ತೊಡಗಬೇಕು. ಸದ್ಯದ ಸಮಾಜದ ಸವಾಲುಗಳನ್ನು ಅರ್ಥೈಸಬೇಕು. ಉನ್ನತ ಆದರ್ಶಗಳ ಕಲ್ಪನೆ ಮೂಡಿಸಬೇಕು. ತನ್ನ ಅನುಭವಗಳನ್ನು ಸಾಹಿತ್ಯೀಕರಿಸುವಲ್ಲಿ ಮುಂದಡಿ ಇಟ್ಟರೆ, ನೆನಪುಗಳು ಶಾಶ್ವತವಾಗುತ್ತವೆ.

ಸಮಾಜಕಾರ್ಯವನ್ನು ನಾಲ್ಕು ಗೋಡೆಗಳ ಮಧ್ಯೆ ಕಲಿಸುತ್ತೇವೆಂಬ ಬಾಲಿಷತನವನ್ನು ಶಿಕ್ಷಕರು ತೊರೆಯಬೇಕು. ಹಲವು ಸಂಘ ಸಂಸ್ಥೆಗಳು, ಹೋರಾಟ, ಚಳುವಳಿಗಳಲ್ಲಿ ತಾವೂ ಗುರ್ತಿಸಿಕೊಂಡು, ವಿದ್ಯಾರ್ಥಿಗಳನ್ನು ತೊಡಗಿಸುವ ಮನೋಭಾವ ಬೆಳೆಯಬೇಕು. ನಮ್ಮ ಕೆಲಸ ಬೆಳಿಗ್ಗೆ 10 ರಿಂದ ಸಂಜೆ 4 ಘಂಟೆ,  ಪಠ್ಯಕ್ರಮ ಮುಗಿಸುವುದು (?) ಎಂಬ ನಿಲುವನ್ನು ಬಿಟ್ಟು ವಿಶಾಲ ದೃಷ್ಠಿಕೋನ ಬೆಳಸಿಕೊಳ್ಳುವುದು ತುರ್ತಾಗಿ ಆಗಬೇಕಿರುವ ಕೆಲಸ.

ನಮ್ಮ ಪ್ರಕಾರ, ಮನೆಯೇ ಮೊದಲ ಸಮಾಜಕಾರ್ಯ ಶಾಲೆಯಾಗಬೇಕು; ಮೂಲಭೂತ ಮೌಲ್ಯಗಳನ್ನು ಕಲಿಯುವುದು ಮನೆಯಲ್ಲಲ್ಲವೇ?  ಹಿಂದೂ ಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ಎಂದು ಮಕ್ಕಳಿಗೆ ಹುರಿದುಂಬಿಸುವ ತಂದೆ ತಾಯಂದಿರು ಗುರುಗಳಾದಾಗ ಮಾತ್ರ ಸಮಾಜಕಾರ್ಯದಲ್ಲಿ ಆದರ್ಶ ವ್ಯಕ್ತಿಗಳು ಹುಟ್ಟಲು ಸಾಧ್ಯ.

ನಾಯಿಕೊಡೆಗಳಂತೆ ಹೆಚ್ಚುತ್ತಿರುವ ಸಮಾಜಕಾರ್ಯ ಶಿಕ್ಷಣ ಶಾಲೆಗಳಿಗೆ ಕಡಿವಾಣ ಅಗತ್ಯ, ಉತ್ಕೃಷ್ಟತೆ, ಸಮಾಜಮುಖಿ ಕಾಲೇಜುಗಳನ್ನು ಮಾತ್ರ ಉಳಿಸಿ, ಉಳಿದವುಗಳನ್ನು ಮುಚ್ಚುವುದು ಒಳಿತು. ಇದಕ್ಕೆ ಉನ್ನತ ಮಟ್ಟದ ಸಮಾಜ ಕಾರ್ಯ ಗುಣಾತ್ಮಕ ಸಮಿತಿಯ ಆವಶ್ಯಕತೆಯಿದೆ.

ಇವೆಲ್ಲವುಗಳ ಜೊತೆಗೆ ನಾವೆಲ್ಲಾ ಒಗ್ಗೂಡಲೇಬೇಕು, ಒಗ್ಗಟ್ಟಿನಲ್ಲಿ ಬಲವಿದೆಯೆಂದು ಹೇಳುವ ನಾವು ಸಂಘಟಿತರಾಗಬೇಕು. ಒಬ್ಬರು ಎಲ್ಲರಿಗಾಗಿ ಎಲ್ಲರು ಒಬ್ಬರಿಗಾಗಿ ಎಂಬ ಸಹಕಾರ ತತ್ತ್ವ ಬೆಳೆಸಿಕೊಳ್ಳಬೇಕು. ನಮ್ಮೆಲ್ಲರ ಗುರಿ ಸಮಾಜದ ಸಮಸ್ಯೆ ಪೀಡಿತ ಜನರಿಗೆ ಸ್ಪಂದಿಸುವುದು ಎಂಬುದನ್ನು ಅರಿತು, ಭಿನ್ನಾಭಿಪ್ರಾಯ ಮರೆತು ಮುನ್ನಡೆಯಬೇಕು.

ಬಹುಶಃ, ಇಂದು ನಾವೆಲ್ಲರೂ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಆವಶ್ಯಕತೆ ಜರೂರಾಗಿದೆ. ಇದಕ್ಕಾಗಿ ಸಮಾಜಕಾರ್ಯಸೇನೆ ಕಾರ್ಯಪಡೆ ರಚಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಈ ಸೇವೆಯಲ್ಲಿ ನಮ್ಮೆಲ್ಲಾ ವೃತ್ತಿಪರ, ಸಮಾಜಕಾರ್ಯಕರ್ತರೆಲ್ಲರೂ ಒಟ್ಟಾಗಿ ಮುನ್ನಡೆಯಬೇಕಾಗಿದೆ. ಇದರಲ್ಲಿ ಶೈಕ್ಷಣಿಕ ಸಮಾಜ ಕಾರ್ಯಸೇನೆ, ಸಂಶೋಧನಾ ಸಮಾಜಕಾರ್ಯ ಸೇನೆ ಯುವ ಸಮಾಜ ಕಾರ್ಯಸೇನೆ ಅಭಿವೃದ್ಧಿ ಸಮಾಜಕಾರ್ಯಸೇನೆ ಹೀಗೆ ಮುಂತಾದ ವಿಭಾಗಗಳನ್ನು ತೆರೆಯುವುದರ ಸಾಮಾಜಿಕ ಚಿಂತನೆಗಳು, ಸಮಸ್ಯೆಗಳು ಮತ್ತು ಪರಿಹಾರಗಳು, ಮಾರ್ಗದರ್ಶನಗಳನ್ನು ಕೊಡುವುದರ ಮೂಲಕ ನಾವೆಲ್ಲಾ ಕೊಡುಗೆ ಸಲ್ಲಿಸಬಹುದು (ಈ ನಿಟ್ಟಿನಲ್ಲಿ  ನಿರಾತಂಕ ವತಿಯಿಂದ ಸಮಾಜಕಾರ್ಯದ ಹೆಜ್ಜೆಗಳು ಮಾಸಿಕ ಪತ್ರಿಕೆ ಹೊರತಂದಿರುವುದು ಶ್ಲಾಘನೀಯ).

ಅಣ್ಣಾ ಹಜಾರೆಯವರು ರೈತರೊಂದಿಗೆ ಸಂವಾದ ಮಡುತ್ತಾ, ಒಂದು ಮರ ಹೆಮ್ಮರವಾಗಿ ಬೆಳೆದು, ಹಣ್ಣು ಹಂಪಲುಗಳನ್ನು, ನೆಲೆಯನ್ನು ಒದಗಿಸಲು ಬೀಜವೊಂದು ನೆಲಸೇರುವುದು ಅನಿವಾರ್ಯ. ಬೀಜವಾಗಿ ಮುಂದಿನ ಉಜ್ಜಲ ಭವಿಷ್ಯಕ್ಕೆ ನೆಲ ಸೇರಿ ಬೀಜವಾಗಿ ಸಮಾಜದ ಉನ್ನತಿಗೆ ಕಾರಣವಾಗಲು ನಾವೆಲ್ಲಾ ತಯಾರಿದ್ದೇವೆಯೇ?

ಒಟ್ಟಾರೆ, ಸಮಾಜ ಕಾರ್ಯಕರ್ತರು ಇತರರಿಗೆ ಆದರ್ಶವಾಗಬೇಕು. ಅದಕ್ಕೆ ಸವಿಸ್ತಾರವಾದ ಮಾರ್ಗಗಳು (Comprehensive Strategies) ಅಗತ್ಯ. ಗಾಂಧೀಜಿಯವರ ದೂರದರ್ಶಿತ್ವ, ನೆಹರೂರವರ ಯೋಜನಾಪರತೆ, ಮೇಧಾ ಪಾಟ್ಕರ್‍ರ ದಿಟ್ಟತನ; ಸುಂದರ್‍ಲಾಲ್ ಬಹುಗುಣರ ಚಿರ ಉತ್ಸಾಹ; ಅಶೋಕ ಫೆಲೋಗಳ ಕ್ರಿಯಾಶೀಲತೆ; ಇಳಂಗೋ ರಾಮಸ್ವಾಮಿಯವರ ಸಂಕಲ್ಪತೆ; ಹರೀಶ್ ಮಹಂದರ್‍ರ ನಿಸ್ವಾರ್ಥ ಸೇವೆ; ಪಾಪಮ್ಮ, ತಿಮ್ಮಕ್ಕರಂತಹವರ ನಿಷ್ಕಾಮಕರ್ಮಗಳೆಲ್ಲಾ ಸಮನಾಗಿ ಮಿಳಿತಗೊಂಡು ಸಮಾಜ ಕಾರ್ಯಕರ್ತರು ತಯಾರಾಗಬೇಕು. ಈ ನಿಟ್ಟಿನಲ್ಲಿ ಎಲ್ಲರ ಮೇಲೂ ಗುರುತರ ಜವಾಬ್ದಾರಿಯಿದೆ. ಮುಖ್ಯವಾಗಿ ಸಮಾಜ ಕಾರ್ಯ ಶಿಕ್ಷಕರ ಮೇಲೆ!
​
ನೆನಪಿಡಿ: ಪ್ರತಿಯೊಂದು ಬದಲಾವಣೆಯೂ ನಮ್ಮ ದೃಷ್ಠಿ ಮತ್ತು ಕಾರ್ಯ ನಿರ್ವಹಿಸಲು ತೆಗೆದುಕೊಳ್ಳುವ ನಿರ್ಣಯದ ಜೊತೆ ಪ್ರಾರಂಭವಾಗುತ್ತದೆ.
 
ಆನಂದ ಎನ್.ಎಲ್
ಉಪನ್ಯಾಸಕರು, ಸಮಾಜಕಾರ್ಯ ವಿಭಾಗ, ಸಿ.ಎಂ.ಆರ್. ಕಾಲೇಜು (ಸ್ವಾಯತ್ತ), ಬೆಂಗಳೂರು.
 
ವೆಂಕಟೇಶಮೂರ್ತಿ ಎಸ್.
ಮುಖ್ಯಸ್ಥರು, ಸಮಾಜಕಾರ್ಯ ವಿಭಾಗ ಸಿ.ಎಂ.ಆರ್ ಕಾಲೇಜು (ಸ್ವಾಯತ್ತ), ಬೆಂಗಳೂರು.
 
ಗುಂಡಪ್ಪ
ಅತಿಥಿ ಉಪನ್ಯಾಸಕರು, ಸಮಾಜಕಾರ್ಯ ವಿಭಾಗ, ಸ್ನಾತಕೋತ್ತರ ಕೇಂದ್ರ, ಕೋಲಾರ.
0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)