SKH
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
SKH

ಧೀರ ದೊರೆಸ್ವಾಮಿ

7/16/2017

0 Comments

 
ಡಾ.ಎಚ್.ಎಸ್. ದೊರೆಸ್ವಾಮಿಯಂಥವರನ್ನು ನೆನೆದಾಗಲೆಲ್ಲಾ ನನಗೆ ವಿ.ಸೀ. ಅವರ ಕವಿತೆಯೊಂದರ ಈ ಐದು ಸಾಲುಗಳು ನೆನಪಾಗುತ್ತವೆ.

ಮಣಿಯದಿಹ ಮನವೊಂದು
ಸಾಧಿಸುವ ಹಟವೊಂದು
ನಿಜದ ನೇರಕೆ ನಡೆವ ನಿಶ್ಚಲತೆಯೊಂದು
ಅನ್ಯಾಕೆಂದೆಂದು ಬಾಗದೆಚ್ಚರವೊಂದು
ಮರುಕಕ್ಕೆ, ಪ್ರೇಮಕ್ಕೆ ಚಿರ ತೆರೆದ ಎದೆಯೊಂದು
​

ಈ ಸಾಲುಗಳ ಸಾರಸತ್ತ್ವದ ಸಾಕಾರವೆಂದರೆ ದೊರೆಸ್ವಾಮಿಯವರು. ನೀಳವಾದ ದೇಹ, ಆಜಾನು ಬಾಹು, ಗಿಣಿ ಮೂಗಿನಂತೆ ಕೊಂಚ ಬಾಗಿದ ಮೂಗು, ಅಗಲ ಮುಖ, ವಯಸ್ಸನ್ನು ಅಲ್ಲಗಳೆವ ಹೊಳಪಿನ ಕಣ್ಣುಗಳು, ಧೀರ ಹೆಜ್ಜೆ, ಕಂಚಿನ ಕಂಠ, ಸದೃಢವಾದ ನಂಬುಗೆ, ಖಚಿತಪಡಿಸಿಕೊಂಡಾದ ಮೇಲೆ ಆಡುವ ದಿಟ್ಟ ನುಡಿ, ಯಾರಿಗೂ ಯಾವುದಕ್ಕೂ ಅಂಜದ ಧೈರ್ಯ, ಕಿರಿಯರಿರಲಿ-ಹಿರಿಯರಿರಲಿ ಎಲ್ಲರೊಡನೆಯೂ ಸಸ್ನೇಹವಾದ ಸಂವಾದ, ಶೋಷಣೆ-ಅಪಚಾರ- ಅಸತ್ಯದ ನಡತೆಯ ವಿರುದ್ಧ ಸಿಡಿದೇಳುವ, ಮುನ್ನಡೆಯುವ ಛಲ, ಇತ್ಯಾದಿ, ಸಮ್ಮಿಲನಗೊಂಡ ಮೈ-ಮನದ ಮಾನವಾಕೃತಿಯೇ ದೊರೆಸ್ವಾಮಿ. ಇವರಿಗೆ ತೊಂಬತ್ತು ಸಂವತ್ಸರಗಳು ತುಂಬಿ ಮುನ್‍ಚಾಚಿದ ವಯಸ್ಸು ಎಂದು ತಿಳಿದ, ಅವರಿಗಿಂತ ಹದಿಮೂರು ವರ್ಷ ಕಿರಿಯನಾದ, ನನಗೆ ಅಗಾಧವಾದ ಈರ್ಷ್ಯೆ. ಅವರ ಸತ್ತ್ವದಲ್ಲಿ ಒಂದಿನಿತು ನನ್ನಂಥವರಿಗೆ ಇವರು ಕೊಡಬಹುದಿತ್ತಲ್ಲವೆ ಅನ್ನಿಸುತ್ತದೆ. ಇವರನ್ನು ಹೋಗಿ ಕಾಣಲು ನಾನು ಹಿಂದು-ಮುಂದು ನೋಡುತ್ತೇನೆ; ನಾಚುತ್ತೇನೆ. ಅವರ ಕಡೆ ಕೋಲೂರಿಕೊಂಡು ಹೋಗುವುದು ಕನಿಕರದ ಕಷ್ಟವಲ್ಲವೆ?
ದೊರೆಸ್ವಾಮಿಯವರು ಅನ್ಯಾಯದ ವಿರುದ್ಧ ಸಿಡಿದೇಳುತ್ತಾರೆ, ಅದನ್ನು ತೊಡೆದು ಹಾಕಲು ಮುಂದುವರಿಯುತ್ತಾರೆ. ಸ್ವಾತಂತ್ರ್ಯ ಹೋರಾಟದಿಂದಲೂ, ಕರ್ನಾಟಕ ಏಕೀಕರಣದ ಆಂದೋಲನದಲ್ಲೂ ಇವರದ್ದು ಇದೇ ನಿಲುವು, ಇದೇ ನಡೆ. ಕೆಲವು ಅನ್ಯ ದೇಶಭಕ್ತರ ಹಾಗೆ `ದೇಶಭುಕ್ತರು' ಆಗಲಿಲ್ಲ. ಈ ಸಂದರ್ಭದಲ್ಲಿ ವಿಲ್ ಡ್ಯೂರಾಂಟ್ ತಮ್ಮ ಒಂದು ಕೃತಿಯಲ್ಲಿ, ಫ್ರೆಂಚ್‍ಕ್ರಾಂತಿಯಲ್ಲಿ ಪಾಲ್ಗೊಂಡವರ ಬಗೆಗೆ ಹೇಳಿದ್ದುದರ ನೆನಪಾಗುತ್ತದೆ: `ಕ್ರಾಂತಿಯ ಮಗಂದಿರು ಪ್ರತಿಗಾಮಿ ಅಳಿಯಂದಿರಾದರು.' ಅಂಥ ಅಳಿಯ ಇವರಾಗಲಿಲ್ಲ; ಕ್ರಾಂತಿಯ ಮಗನಾಗಿಯೇ ಉಳಿದಿದ್ದಾರೆ. ಇವರ ದಿಟ್ಟ ನುಡಿಗಳ ಒಂದು ತುಣುಕು ಇದೊ: ಭೂದಾನ ಚಳುವಳಿಯ ಸಂದರ್ಭದಲ್ಲಿ ಒಬ್ಬ ಶ್ರೀಮಂತನ ಮನೆಯಲ್ಲಿ ಇವರು ಊಟ ಮಾಡುವ ಏರ್ಪಾಟಾಗಿತ್ತು. ಊಟದ ಸಂದರ್ಭದಲ್ಲಿ `ಬಡವರ ಕೆಲಸಕ್ಕೆ ಬಂದ ನಿಮ್ಮನ್ನು ಬಡವರಾರೂ ಊಟಕ್ಕೆ ಕರೆಯಲಿಲ್ಲ, ನಮ್ಮಲ್ಲಿಗೇ ಬರಬೇಕಾಯ್ತು!' ಎಂಬ ಮಾತು ಆ ಶ್ರೀಮಂತನಿಂದ ಬಂತು. ಇದರಿಂದ ಇವರ ಮನಸ್ಸಿಗೆ ನೋವಾಯಿತು. ಸುಧಾರಿಸಿಕೊಂಡು ನಿರ್ಭಿಡೆಯಿಂದ ಆ ಸಿರಿವಂತನಿಗೆ ಇವರು ಹೀಗೆ ಹೇಳಿದರು, ``...ಇಂದಿನ ಸಮಾಜದ ಸ್ಥಿತಿ ಹೇಗಿದೆಯೆಂದರೆ, ಕೆಲವರ ಕೈಯಲ್ಲೇ ಎಲ್ಲ ಭೂಮಿ, ಎಲ್ಲ ಸಂಪತ್ತು, ಎಲ್ಲ ಜ್ಞಾನ ಹೋಗಿ ಸೇರಿಬಿಟ್ಟಿದೆ. ಇದರಿಂದ ಸಮಾಜದಲ್ಲಿ ಉಳ್ಳವರು, ಬರಿಗೈಯವರು; ಬಲ್ಲಿದರು, ಬಡವರು; ಬಲಿಷ್ಠರು, ದುರ್ಬಲರು; ಮಾಲಿಕರು, ಆಳುಗಳು, ಎಂಬ ಎಲ್ಲ ಭೇದ ಬೆಳೆದು ನಿಂತಿದೆ... ಈಗ ಪಾಪದ ಗುತ್ತಿಗೆ ಹೇಗೆ ಉಳ್ಳವರದೇ ಆಗಿದೆಯೋ ಹಾಗೆಯೇ ಪುಣ್ಯದ ಗುತ್ತಿಗೆಯು ಅವರದೇ ಆಗಿದೆ. ಈ ಪರಿಸ್ಥಿತಿ ತೊಲಗಿ, ಎಲ್ಲರ ಕೈಲೂ ದುಡಿಮೆಯ ಸಾಧನ ಇರುವಂತೆ ಮಾಡಿ, ಎಲ್ಲರನ್ನೂ ದುಡಿಮೆಗೆ ಹಚ್ಚಬೇಕೆಂಬುದು ಸರ್ವೋದಯ ಸಮಾಜ ರಚನೆಯ ಗುರಿ. ಎಲ್ಲರೂ ದುಡಿಯುವವರಾದ ಮೇಲೆ, ನನ್ನಂಥ ಕಾರ್ಯಕರ್ತ ಊರಿಗೆ ಬಂದರೆ, ನಿಮ್ಮಂಥ ಕೆಲವರ ಮನೆಗೇ ಊಟ ಹುಡುಕಿಕೊಂಡು ಬರುವ ಪರಿಸ್ಥಿತಿ ಇರುವುದಿಲ್ಲ...''

ದೊರೆಸ್ವಾಮಿಯವರು ಕನ್ನಡ-ಕನ್ನಡಿಗ-ಕರ್ನಾಟಕದ ಬಗೆಗೆ ಅತುಳ ಅಭಿಮಾನ, ಹೆಮ್ಮೆ, ಕಳಕಳಿ, ಕಾಳಜಿ ಉಳ್ಳವರು. ಕನ್ನಡಕ್ಕೆ, ಕರ್ನಾಟಕದ ನೆಲ-ಜಲಕ್ಕೆ, ಸ್ಥಳೀಯರ ಉದ್ಯೋಗಕ್ಕೆ ಕುತ್ತು ಬರುತ್ತದೆ, ಅನ್ಯಾಯವಾಗುತ್ತದೆ ಎಂದು ಕಂಡ ಕೂಡಲೇ ಅದರ ವಿರುದ್ಧ ಹೋರಾಟಕ್ಕೆ ಇವರು ಇಳಿಯುವವರೇ. ಧರ್ಮಶ್ರದ್ಧೆ ಇದ್ದರೂ ಮತಾಂಧತೆ ಇವರ ಕಡೆ ಸುಳಿಯುವುದಿಲ್ಲ. ಅಧಿಕಾರ ಲಾಲಸೆಯಿಂದ ರಾಜಿಸೂತ್ರಕ್ಕೆ ಬಲಿಬೀಳುವುದಿಲ್ಲ. ಇದಕ್ಕೊಂದು ಉದಾಹರಣೆ: ಕೆಂಗಲ್ ಹನುಮಂತಯ್ಯನವರು ಇವರನ್ನು ಕರೆದು, ತಮ್ಮ ಅಭಿಪ್ರಾಯಕ್ಕೆ ವಿರುದ್ಧವಾಗಿರದೆ ತಮ್ಮನ್ನು ಯಾವ ಸಂದರ್ಭದಲ್ಲೂ ಬೆಂಬಲಿಸುವುದಾದರೆ, ನಿಮ್ಮನ್ನು ಎಂ.ಎಲ್.ಸಿ. ಮಾಡುವುದಾಗಿ ಹೇಳಿದರು; `ಅಂಥ ಅಧಿಕಾರ ನನಗೆ ಬೇಡ!' ಎಂದು ಇವರು ನಿರಾರಕರಿಸಿಬಿಟ್ಟರು!

ಇವರು `ಪೌರವಾಣಿ' ಪತ್ರಿಕೆಯನ್ನು ಹೊರಡಿಸಿ, ವಾರ್ತಾ ಮಾಧ್ಯಮಕ್ಕೆ ಒಂದು ಹೊಸ ತಿರುವನ್ನೇ ಕೊಟ್ಟರು. ಅಂದಿನ ಮೈಸೂರು ಮಹಾರಾಜರ ಸರಕಾರವು ತಮ್ಮ ಪತ್ರಿಕೆಯ ಪ್ರಕಟನೆಗೆ ನಿಷೇಧವನ್ನು ಹೇರಿದಾಗ ಪಕ್ಕದ ಅಂದಿನ ಮದರಾಸು ಪ್ರಾಂತ್ಯದ ಹಿಂದೂಪುರದಿಂದ ಪತ್ರಿಕೆ ಹೊರಡಿಸಿ, ಮೈಸೂರ ಸಂಸ್ಥಾನಕ್ಕೆ ಗುಪ್ತವಾಗಿ ಕಳಿಸಿ, ಅದರ ಪ್ರಸಾರ ಮಾಡಿದ ಧೀರರು ಇವರು. ಇವರು ಬರಹಗಾರರಾಗಿಯೂ ಹೆಸರು ಮಾಡಿದ್ದಾರೆ. ತಮ್ಮ ಜೀವನದ ಘಟನಾವಳಿಗಳನ್ನು `ನೆನಪಿನ ಸುರುಳಿ ತೆರೆದಾಗ' ಶೀರ್ಷಿಕೆಯಡಿಯಲ್ಲಿ  ಮನಂಬುಗುವ ಹಾಗೆ ಇವರು ದಾಖಲಿಸಿದ್ದಾರೆ. ಈ ದಾಖಲೆಗಳು ಸಾರ್ವಜನಿಕರ ಕಣ್ತೆರೆಸುವ, ಸಂವೇದನಶೀಲರ ಒಳಗಣ್ಣನ್ನು ತೆರೆಸುವ ಅಪರೂಪದವುಗಳು. ``ಈ ನನ್ನ ನೆನಪಿನ ಸುರುಳಿ ಬಹಳ ಮೌಲಿಕವಾದದ್ದು ಎಂಬ ಭ್ರಾಂತಿ ನನಗಿಲ್ಲ'' ಎಂದು ವಿನಯವನ್ನು ಮೆರೆಯುತ್ತಾರೆ. ಆದರೆ ``ಅವು ಓದಿಸಿಕೊಂಡು ಹೋಗುತ್ತವೆ ಎಂಬ ಭರವಸೆಯನ್ನು ಮಾತ್ರ ನೀಡಬಲ್ಲೆ'' ಎಂದು ಗಟ್ಟಿಯಾಗಿಯೇ ಹೇಳುತ್ತಾರೆ. ``ಇದು ಗಟ್ಟಿ ಸಾಹಿತ್ಯವಲ್ಲ, ಪೆಪ್ಪರ್ಮೆಂಟ್ ಚೀಪಿದಷ್ಟೇ ತೃಪ್ತಿ ಕೊಡಬಲ್ಲದು ಎಂಬ ಅರಿವು ನನಗುಂಟು'' ಎಂದು ಇವರು ಸಂಕೋಚದಿಂದ ಹೇಳಿದರೂ ಇದು ಮನುಕುಲದ ಉನ್ನತಿಗೆ ದುಡಿಯುವವರಿಗೆ `ಹಿಟ್ಟಿನ' ಸಾಹಿತ್ಯ ಎಂದು ನಿರ್ಧಾರದಿಂದ ಹೇಳಬಹುದು.

ಶುಚಿಯಾದ ಬಾಳುವೆಯನ್ನು ಬದುಕುತ್ತಿರುವ ಇವರು `ಮನೆಯನೆಂದು ಕಟ್ಟದಿರು' ಎಂಬ ಕುವೆಂಪು ಅವರ ಮಾತನ್ನು ನಡೆಸಿಕೊಡುತ್ತಿದ್ದಾರೊ ಅನ್ನಿಸುತ್ತದೆ. `ಮನೆಯಿಂದ ಮನೆಗೆ' ಎಂಬ ಕೆ.ಎಸ್.ನರಸಿಂಹಸ್ವಾಮಿ ಅವರ ಅನುಭವವೂ ಇವರದ್ದಾಗಿದೆ ಅನ್ನಿಸುತ್ತದೆ. ಆದರೆ, ಸಭೆ-ಸಮಾರಂಭ, ಮೆರವಣಿಗೆ-ಹೋರಾಟ, ಸಂವಾದ-ಚರ್ಚೆ ಇಂಥ ಯಾವುದೇ ಸಮೂಹ-ಸಮುದಾಯದ ಸಂದರ್ಭವಿರಲಿ ಇವರು ಇತರರಿಗಿಂತ ಎತ್ತರವಾಗಿಯೇ ಕಾಣಿಸುತ್ತಾರೆ. ಇವರದ್ದು `ಸ್ಥಾವರವಲ್ಲದ ಜಂಗಮ' ಬದುಕು. ತೊಂಬತ್ಮೂರನ್ನು ದಾಟಿದ ಇವರು ನೂರನ್ನೂ ದಾಟಲು ಇವರಿಗೆ ಎಲ್ಲ ಹಕ್ಕೂ ಇದೆ, ಅರ್ಹತೆಯೂ ಇದೆ, ಸಾಮಥ್ರ್ಯವೂ ಇದೆ. ನನ್ನಂಥವರಿಗೆ ಇವರ ಬಗೆಗೆ ಇರುವುದು ಅಭಿಮಾನ ಮತ್ತು ಹೆಮ್ಮೆ.
​
ಇತ್ತೀಚೆಗೆ (2007) ಇವರು ಅಪರೂಪದ ಮತ್ತು ಸಮಾಜಕಾರ್ಯಕ್ಕೆ ತತ್ತ್ವಾದರ್ಶ-ಸಿದ್ಧಾಂತ ನೀಡಬಲ್ಲಂಥ ಕೃತಿ ``ಸರ್ವೋದಯ ಯುಗ ಮಂತ್ರ'' ಪ್ರಕಟಿಸಿ ಸ್ಮರಣೀಯ ಕೆಲಸ ಮಾಡಿದ್ದಾರೆ. ಈ ಕೃತಿಯು ಸಮಾಜಕಾರ್ಯದ ಎಲ್ಲ ವರ್ಗಗಳಿಗೆ ಅತ್ಯಾವಶ್ಯಕ ಪಠ್ಯವೆಂದರೂ ಸಲ್ಲುತ್ತದೆ. ಇದಕ್ಕೆ ನಾವೆಲ್ಲರೂ ಕೃತಜ್ಞರಾಗಿರಬೇಕು.
 
ಡಾ.ಎಚ್.ಎಂ. ಮರುಳಸಿದ್ಧಯ್ಯ
62, `ಈಶಕೃಪ' ಮಂಜುನಾಥ ಕಾಲನಿ, ಜೆ.ಪಿ.ನಗರ, ಬೆಂಗಳೂರು-560 078
0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)