SKH
  • HOME
    • About Us
  • English Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Online Groups
  • Search
  • Contact Us
  • HOME
    • About Us
  • English Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Online Groups
  • Search
  • Contact Us
SKH

‘ಸಮಾಜಕಾರ್ಯದ ಕಣಸುಗಾರ’ ಓದುಗರ ಅನಿಸಿಕೆ, ಅಭಿಪ್ರಾಯಗಳು

6/20/2017

0 Comments

 
ಡಾ. ಎಂ. ಚಿದಾನಂದಮೂರ್ತಿ (ಖ್ಯಾತ ಸಂಶೋಧಕರು)
ರಾಷ್ಟ್ರಮಟ್ಟದ ಸಮಾಜವಿಜ್ಞಾನಿ ಸಮಾಜಕಾರ್ಯಕರ್ತ ನನ್ನ ನೆಚ್ಚಿನ ಸ್ನೇಹಿತ ಡಾ. ಎಚ್.ಎಂ. ಮರುಳಸಿದ್ಧಯ್ಯನವರ ಬಗ್ಗೆ ಬರೆದಿರುವ ಪುಸ್ತಕ ಸರಳವಾಗಿ, ಚಿಂತನಾಪರವಾಗಿ ಮೂಡಿ ಬಂದಿರುವುದುಸಂತೋಷದ ವಿಚಾರ. ಪ್ರತಿದಿನ ನಾನು ಅವರೊಂದಿಗೆ ದೂರವಾಣಿಯ ಮೂಲಕ ಸಂಪರ್ಕದಲ್ಲಿದ್ದೇನೆ. ನನ್ನ ಸಂದೇಹ, ಚಿಂತನೆಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತೇನೆ. ನಾನು ಒಬ್ಬ ಕನ್ನಡಪ್ರಾಧ್ಯಾಪಕನಾಗಿದ್ದರೂ, ಎಷ್ಟೋ ಸಂದರ್ಭಗಳಲ್ಲಿ ನನಗಿಂತ (ಕನ್ನಡದಲ್ಲಿ ಹೆಚ್ಚು ತಿಳಿದವರಂತೆ) ಗೋಚರಿಸುತ್ತಾರೆ.
ಪುಸ್ತಕದ ಶೀರ್ಷಿಕೆ, ‘ಕಣಸುಗಾರ ಎಂಬ ಮಾತು ಹಲವರಿಗೆ ಆಶ್ಚರ್ಯವಾಗಿ ಕಂಡಿರಬಹುದು. ಆದರೆ, ಕಣಸು ಎಂಬ ಮಾತು, ಪದ, ಅರ್ಥಪೂರ್ಣ, ಧ್ವನಿಪೂರ್ಣ. `ನೋಡು ಎಂಬುದು ಹೊರಗಣ್ಣಿಗೆಸಂಬಂಧಿಸಿದ್ದು, `ಕಾಣ್ ಎಂಬುದು ಒಳಗಣ್ಣಿಗೆ ಗೋಚರಿಸುವುದು, ಅನುಭವಿಸುವುದು ಎಂದಿಟ್ಟುಕೊಂಡರೆ, `ಕನಸು ಎಂಬುದು ರಾತ್ರಿ ಮನುಷ್ಯ ಕಲ್ಪಿಸಿಕೊಂಡದ್ದು ಎಂಬರ್ಥದಲ್ಲಿದೆ. `ಕಣಸು ಎಂದರೆ ದರ್ಶನ,ಒಳನೋಟ ಎಂದು ಅರ್ಥೈಸಬಹುದು (ಕಾಣ್-ಕಣಿ=ಭವಿಷ್ಯ). ಈ ಅರ್ಥದಲ್ಲಿ `ಕಣಸುಗಾರ ಎಂದರೆ, `ದಾರ್ಶನಿಕ ಎಂದು ನಾನು ಅರ್ಥೈಸುತ್ತೇನೆ. ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಸಮಾಜಕಾರ್ಯದದರ್ಶನವನ್ನು, ಒಳನೋಟವನ್ನು ಕಂಡು ಅದನ್ನು ರೂಪಗೊಳಿಸಿರುವವರು ಡಾ. ಎಚ್.ಎಂ.ಎಂ.
​

ಎಚ್.ಎಂ.ಎಂ. ಅವರು ಸಮಾಜದ ಬಗ್ಗೆ ಬರಿಯ ಮಾತನಾಡುವವರಲ್ಲ. ಕೇವಲ ಸಂಪ್ರಬಂಧಗಳನ್ನು ಮಂಡಿಸುವವರಲ್ಲ. ನಿರಂತರವಾಗಿ ಸಾಮಾಜಿಕ ಬದುಕಿನ ತೀವ್ರ ಸಮಸ್ಯೆಗಳ ಬಗ್ಗೆ ಚಿಂತಿಸಿ ಅವುಗಳನ್ನು ಕಾರ್ಯರೂಪಕ್ಕೆ ತರುವವರಾಗಿದ್ದಾರೆ. ಅನೇಕ ಹಿಂದುಳಿದ ಹಳ್ಳಿಗಳು ಇವರ ಪ್ರಯತ್ನದಿಂದಾಗಿ ವಿಕಾಸಹೊಂದಿವೆ; ಅಲ್ಲಿ ಹೊಸ ಜಾಗೃತಿ ಮೂಡಿದೆ. ಎಚ್.ಎಂ.ಎಂ. ಬರಹಗಳು ಚಿಂತನೆಗಳಲ್ಲಿ ಹಲವು ಖ್ಯಾತ ವಿದ್ವಾಂಸರ ವಿಚಾರಗಳು ಎದ್ದು ಕಾಣುತ್ತವೆ. ಎಚ್.ಎಂ.ಎಂ. ಕೇವಲ ಅವರ ಮಾತುಗಳನ್ನು ಸಂಗ್ರಹಿಸಿ ಇಟ್ಟಿಲ್ಲ. ಸಂಶೋಧನೆಯ ಒರೆಯಲ್ಲಿ ಪರಿಶೀಲಿಸಿ, ತಮ್ಮ ಚಿಂತನೆ, ಅನುಭವಗಳನ್ನು ಎಚ್.ಎಂ.ಎಂ. ಜೊತೆಯಲ್ಲಿಟ್ಟಿರುವುದರಿಂದ ಅವೆಲ್ಲವೂ ಪುಟಕ್ಕಿಟ್ಟ ಚಿನ್ನವಾಗಿವೆ.

ಎನ್.ಎಸ್. ಸುಬ್ಬಣ್ಣ (ಶ್ರೀ ನ್ಯಾ.ಮೂ. ನಿಟ್ಟೂರು ಶ್ರೀನಿವಾಸರಾವ್ ಪುತ್ರರು)
``ಸಮಾಜಕಾರ್ಯದ ಸಿದ್ಧಾಂತವು ಪಾಶ್ಚಿಮಾತ್ಯ ತಳಹದಿಯ ಮೇಲೆ ಮಾತ್ರ ಕೂರದೆ ಭಾರತೀಯ ವಾತಾವರಣಕ್ಕೆ ಹೊಂದಿಕೊಳ್ಳುವ ಹಾಗೆ ಅದರ ಸಿದ್ಧಾಂತವನ್ನು ಬಲಪಡಿಸಲು ಭಾರತೀಯ ಮೂಲಕದ, ಅದರಲ್ಲೂ ನಮ್ಮ ಆಧ್ಯಾತ್ಮಿಕ ಚಿಂತನೆ ಮತ್ತು ಪರಂಪರೆಗಳಲ್ಲಿರುವ ಹಲವು ಅಂಶಗಳನ್ನು ಸೇರಿಸಿ ಆಕರ್ಷಕ ಮತ್ತು ಸ್ವೀಕರಣೀಯವಾಗುವ ಹಾಗೆ ಎಚ್.ಎಂ. ಮರುಳಸಿದ್ಧಯ್ಯನವರು ಸಮಾಜಕಾರ್ಯವನ್ನು ವಿನ್ಯಾಸಮಾಡಿದ್ದಾರೆ.

ಸಿ.ಬಿ. ಶ್ರೀನಿವಾಸನ್ (ವಕೀಲರು)
ಎಚ್.ಎಂ.ಎಂ. ಅವರೊಡನೆಯ ತಮ್ಮ ನಾಲ್ಕು ದಶಕಗಳ ಸ್ನೇಹದ ನೆನಪಿನಿಂದ ವಕೀಲರಾದ ಶ್ರೀ ಸಿ.ಬಿ. ಶ್ರೀನಿವಾಸ್ ಎರಡು ಪ್ರಮುಖ ಸತ್ಯ ಘಟನೆಗಳನ್ನು ನಮ್ಮೆದುರು ಇಟ್ಟಿದ್ದಾರೆ. ಇಂತಹ ವಿಚಾರಗಳೂ ಪುಸ್ತಕದಲ್ಲಿ ಒಳಗೊಳ್ಳಬೇಕು ಎಂದಿದ್ದಾರೆ. ಇದರಲ್ಲೊಂದು ಸ್ವಲ್ಪ ಅಪ್ರಿಯವೆನಿಸಿದರೂ, ಸತ್ಯ ಹೇಳುವುದು ಒಳ್ಳೆಯದಲ್ಲವೆ ಎನ್ನುವುದು ಶ್ರೀನಿವಾಸ್ ಅವರ ಅಭಿಪ್ರಾಯ.

ಎಚ್.ಎಂ.ಎಂ. ಅವರ ಹಿರಿಯ ಮಗ ವಕೀಲಿ ವೃತ್ತಿಯನ್ನು ಆರಿಸಿಕೊಂಡರು. ಆತನ ಬಗ್ಗೆ ಮನೆಮಂದಿಗೆಲ್ಲ ಅಕ್ಕರೆ, ಹೆಮ್ಮೆ, ಪ್ರೀತಿ. ಮಗನ ಸಮ್ಮತಿ ಮತ್ತು ಮನೆಮಂದಿಯೆಲ್ಲರ ಆಶೆಯಂತೆಯೇ ತಮ್ಮ ಸಂಬಂಧಿಕರ ಕುಟುಂಬದ ತರುಣಿಯೊಂದಿಗೆ ಆತನ ವಿವಾಹವನ್ನು ಎಚ್.ಎಂ.ಎಂ. ನಡೆಸಿದರು. ಮದುವೆಯ ಕೆಲದಿನದ ನಂತರ ಎಚ್.ಎಂ.ಎಂ. ಅವರ ಮಗ ತನಗೆ ಬೇರೊಬ್ಬ ತರುಣಿಯೊಂದಿಗೆ ಪ್ರೇಮಸಂಬಂಧವಿದೆ ಹೀಗಾಗಿ ತನಗೆ ಈ ವಿವಾಹಿತ ಮಡದಿ ಬೇಡವೆಂದು ತಿರಸ್ಕರಿಸಿಬಿಟ್ಟನು. ಇದು ಎರಡೂ ಕಡೆ ಕುಟುಂಬಕ್ಕೆ ದೊಡ್ಡ ಆಘಾತವಾಯಿತು. ಹೆಣ್ಣುಮಗಳೊಬ್ಬಳ ಬದುಕು ತಮ್ಮ ಕಣ್ಣುಗಳೆದುರೇ ಹಾಳಾಗುತ್ತಿರುವುದು ಎಚ್.ಎಂ.ಎಂ. ದಂಪತಿಗಳಿಗೆ ಸಹಿಸಲಾಗಲಿಲ್ಲ. ನೋವಿನಿಂದ ಕೃದ್ಧರಾದರು. ತಾವೂ ಸೊಸೆಯ ಪರವಾಗಿರುವುದಾಗಿ ನಿಂತುದಲ್ಲದೆ, ಅವರ ಕುಟುಂಬದವರು ಸ್ವಂತ ಮಗನ ಮೇಲೆ ಕಾನೂನು ಕ್ರಮ ಕೈಗೊಂಡಾಗ ಬೆಂಬಲಿಸಿದರು. ಮಗ ಕುಟುಂಬದ ಸಂಬಂಧವನ್ನು ಕಡಿದು ಹೊರಟುಹೋದ. ಮಗ ಹೋದರೂ ಪರವಾಗಿಲ್ಲ, ಸದಾ ನ್ಯಾಯನೀತಿ, ನೈತಿಕತೆಯ ಪರವಾಗಿಯೇ ಇರುವ ಎಚ್.ಎಂ.ಎಂ. ಕುಟುಂಬ ಸಂಬಂಧಕ್ಕಿಂತಲೂ, ಶೋಷಿತ ಮಹಿಳೆಗೆ ನ್ಯಾಯ ಒದಗಿಸುವುದು ಮುಖ್ಯ ಎಂಬ ನಿಲುವನ್ನು ತೆಗೆದುಕೊಂಡರು. ಸೊಸೆಯ ಬದುಕನ್ನು ಕಟ್ಟಿಕೊಡಲು ಸಂಪೂರ್ಣವಾಗಿ ತೊಡಗಿಸಿಕೊಂಡರು. ವಕೀಲಿ ವೃತ್ತಿಯಲ್ಲಿ ಐವತ್ತು ವರ್ಷಗಳ ಅನುಭವವಿರುವ ನನಗೆ ಇಂತಹ ಇನ್ನೊಂದು ಪ್ರಕರಣ ಎಲ್ಲೂ ಕಂಡಿಲ್ಲ.

ಎಚ್.ಎಂ.ಎಂ. ಅವರ ಹುಟ್ಟೂರಿನಲ್ಲಿ ಕುಟುಂಬದ ಮನೆಯೊಂದಿದೆ. ಆ ಮನೆಯೇ ಇವರ ಹಿರೀಕರು ಮತ್ತು ಮಕ್ಕಳ ಬಾಳು ಕಟ್ಟಿಕೊಟ್ಟ ಆಸರೆ. ಈ ಮನೆಯ ಜವಾಬ್ದಾರಿ ಎಚ್.ಎಂ.ಎಂ. ಅವರ ಪಾಲಾಗಿತ್ತು. ಕುಟುಂಬದವರಾರೂ ಈಗ ಊರಿನಲ್ಲಿಲ್ಲ. ಈಗ ಆ ಮನೆಯನ್ನು ಏನು ಮಾಡಬೇಕು, ಹೇಗೆ ವಿಲೇವಾರಿ ಮಾಡಬೇಕು ಎನ್ನುವ ಪ್ರಶ್ನೆಯನ್ನು ಎಚ್.ಎಂ.ಎಂ. ವಕೀಲನಾದ ನನ್ನೆದುರು ಇಟ್ಟಿದ್ದರು. ಏನೆಂದು ಸಲಹೆ ಕೊಡುವುದು ಎಂದು ನಾನೂ ಗೊಂದಲದಲ್ಲಿದ್ದೆ. ಎಚ್.ಎಂ.ಎಂ. ನನ್ನೆದುರು ಇಟ್ಟಿದ್ದ ಪ್ರಸ್ತಾವನೆಗೆ ಒಪ್ಪುವುದು ಹೇಗೆಂದು ನನ್ನ ಮನಸ್ಸು ಹೊಯ್ದಾಡುತ್ತಿತ್ತು. ``ನನ್ನ ಇಡೀ ಕುಟುಂಬ ಹಳ್ಳಿಯಲ್ಲಿ ಬಾಳು ಕಟ್ಟಿಕೊಂಡದ್ದು ಈ ಮನೆಯಲ್ಲಿ. ನಾವೆಲ್ಲರೂ ಸಮಾಜಜೀವಿಗಳಾಗಿ ಬೆಳೆಯಲು, ಸಮಾಜಕ್ಕೆ ನಮ್ಮಿಂದ ಏನಾದರೂ ಕೊಡುಗೆ ಕೊಡಲು ನೆರವಾಗಿದ್ದು ಈ ಮನೆ ಮತ್ತು ನಮ್ಮ ಹಳ್ಳಿ ಮತ್ತು ಇಲ್ಲಿನ ಸಮುದಾಯ. ಹೀಗಾಗಿ, ಈ ಮನೆಯನ್ನು ಗ್ರಾಮದ ಸಕಲರ ವಿದ್ಯೆ ಮತ್ತು ಶ್ರೇಯೋಭಿವೃದ್ಧಿಗೆ ಮೀಸಲಿಡಲು ಯೋಚಿಸಿದ್ದೇನೆ. ನಿಮ್ಮ ಸಲಹೆಯೇನು ?

ಇಂತಹದೊಂದು ಪ್ರಸ್ತಾವನೆ, ಕುಟುಂಬದೊಳಗಿದ್ದೂ, ಸದಾ ಸಮಾಜದ ಬಗ್ಗೆಯೇ ಚಿಂತಿಸುವ ಎಚ್.ಎಂ.ಎಂ. ಅಲ್ಲದೆ ಬೇರಾರಿಂದ ಬರಲು ಸಾಧ್ಯ? ಕುಟುಂಬದ ಬೇರಾರಿಂದಲಾದರೂ ವಿರೋಧ ಬರುವ ಸಾಧ್ಯತೆಯ ಬಗ್ಗೆ ಯೋಚಿಸದೆ ಎಚ್.ಎಂ.ಎಂ. ಅವರ ಆಶೆಗೆ ಒತ್ತಾಸೆಯಾದೆ. ಅವರ ಈ ಕನಸಿಗೆ ಅವರ ಮಡದಿ ಮತ್ತು ಮಕ್ಕಳು ಬೆಂಬಲವಾದದ್ದು, ಕುಟುಂಬದ ಇತರರೂ ಒಪ್ಪಿಗೆ ಸೂಚಿಸಿದ್ದು ಎಚ್.ಎಂ.ಎಂ. ಸಮಾಜಕಾರ್ಯವನ್ನು ತಾವು ಮಾತ್ರ ಮಾಡುತ್ತಿಲ್ಲ, ಇಡೀ ಕುಟುಂಬದ ಬಳಗದಲ್ಲೂ ಬೇರು ಬಿಟ್ಟಿಸಿದ್ದಾರೆ ಎಂಬುದು ತಿಳಿಯುತ್ತದೆ.

ಮುಂದಿನದು ಬಹಳ ಸೊಗಸಾದ ಕೆಲಸ. ಯಾವುದೇ ಸ್ವಾರ್ಥಪರ ಛಾಯೆಯೂ ಇಲ್ಲದೆ, ಸದ್ದುಗದ್ದಲವಿಲ್ಲದೆ ಹಳ್ಳಿಯ ಮನೆಯ ಮಾಲಿಕತ್ವವನ್ನು ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಗ್ರಂಥಾಲಯಕ್ಕೆ ಹಸ್ತಾಂತರಿಸುವುದು ಅವರ ಸಮುದಾಯ ಸಂಘಟನೆ ಮತ್ತು ಬೆಳವಣಿಗೆಗೆ ಉದಾಹರಣೆಯಾಗಿದೆ.

ಎ. ಜಾನಪ್ಪ ಮಾಸ್ತರ್, ನಿವೃತ್ತ ಶಿಕ್ಷಕರು, ಹೂವಿನಹಡಗಲಿ
ಎಚ್.ಎಂ.ಎಂ. ಅವರೊಡನೆಯ ತಮ್ಮ ಬಾಲ್ಯದ ದಿನಗಳನ್ನು ಮೆಲಕು ಹಾಕಲು ಪುಸ್ತಕ ನೆರವಾಯಿತೆಂದು ಹೇಳಿರುವ ಶ್ರೀಯುತರು, ಅಂದಿನ ಬಡತನದ ಕುಟುಂಬದಲ್ಲಿ ಹುಟ್ಟಿದರೂ, ಬಡತನವಿಲ್ಲವೇ ಇಲ್ಲ ಎಂಬಂತೆ ವಿದ್ಯಾಭ್ಯಾಸ ಮಾಡಿರುವ ಎಚ್.ಎಂ.ಎಂ. ಅವರನ್ನು ಸಾಧಕ ಎಂದಿದ್ದಾರೆ. ಜೊತೆಗೆ, ಎಚ್.ಎಂ.ಎಂ. ಅವರನ್ನು ವಿವಾಹವಾಗಿ ಕುಟುಂಬಕ್ಕೆ ಆಧಾರವಾಗಿ ಬದುಕಿಗೆ ಮೆರಗು ತಂದ ಶ್ರೀಮತಿ ಶಾಂತವೀರಮ್ಮನವರನ್ನು `ಮಾತೆ ಎಂದು ಶ್ಲಾಘಿಸುತ್ತಾರೆ. ಎಲ್ಲೆಡೆಯೂ ಎಚ್.ಎಂ.ಎಂ. ಅವರಿಗೆ ಬಂಧುಗಳೇ ಇರುವುದು, ಸ್ನೇಹಿತರೇ ಕಾಣುವುದು ಎನ್ನುವುದು ಸುಳ್ಳು ಎನ್ನುವ ಜಾನಪ್ಪ ಮಾಸ್ತರ್, ಎಚ್.ಎಂ.ಎಂ. ಅವರು ತಮ್ಮ ಬದುಕು, ವೃತ್ತಿಯನ್ನು ನಿಷ್ಠುರವಾಗಿ ನಡೆಸಿದ್ದರಿಂದ ಎದುರಿಸಬೇಕಾದ ಶತ್ರುಗಳ ಬಗ್ಗೆ ನಮ್ಮ ಗಮನ ಸೆಳೆದು ಅಂತಹದೂ ಪುಸ್ತಕದಲ್ಲಿ ಹೊರಹೊಮ್ಮಬೇಕಿತ್ತು ಎನ್ನುತ್ತಾರೆ. ಅಷ್ಟೆಲ್ಲಾ ವಿರೋಧಗಳಿದ್ದರೂ, `ಯಾರೇ ಬರಲಿ, ಯಾರೇ ಹೋಗಲಿ, ನಾನು ನನ್ನ ಧರ್ಮದ ಗುರಿಯತ್ತ ನಡೆಯುತ್ತಲೇ ಇರುವೆನು ಎನ್ನುವ ಉಕ್ತಿಯನ್ನು ನೆನೆಯುತ್ತಾರೆ ಎನ್ನುವ ಎಚ್.ಎಂ.ಎಂ.ರ ಉಕ್ತಿಯನ್ನು ನೆನೆಯುತ್ತಾರೆ.

ಶ್ರೀಮತಿ ಸರಳಾ, ಶ್ರೀ ಡಿ. ವೆಂಕಟೇಶ್, ಸಾಯಿಮಣಿ ಪ್ರಕಾಶನ, ಹೊಸಪೇಟೆ
`ಸಮಾಜಕಾರ್ಯದ ಕಣಸುಗಾರ ಒಂದು ಹೊಸಬಗೆಯ ರಚನೆ. ವಿನೂತನ ದೃಷ್ಟಿಕೋನವನ್ನು ನೀಡುವ ಕೃತಿ. ಅಧ್ಯಯನ, ಅಧ್ಯಾಪನ, ಸಾಹಿತ್ಯರಚನೆ, ಕ್ಷೇತ್ರಕಾರ್ಯ, ಸಮಾಜಕಾರ್ಯ, ಸಮಾಜಸೇವೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪ್ರಜ್ಞಾಪೂರಕವಾಗಿ ತಮ್ಮ ಇಡೀ ಜೀವನ, ವ್ಯಕ್ತಿತ್ವವನ್ನು ತೊಡಗಿಸಿಕೊಂಡು, ದುಡಿದು, ಸಫಲರಾಗಿ, ಇಡೀ ಸಮಾಜಕ್ಕೆ ಮಾದರಿಯಾಗಿರುವ ಎಚ್.ಎಂ.ಎಂ. ಅವರ ಬದುಕನ್ನು ಸಮರ್ಥವಾಗಿ ತೋರಿರುವ ಪುಸ್ತಕವಾಗಿದೆ. ಒಂದು ಉತ್ತಮ ಪ್ರಯತ್ನ.

ಪ್ರೊ. ಕೆ. ಭೈರಪ್ಪ (ಖ್ಯಾತ ಸಮಾಜಶಾಸ್ತ್ರಜ್ಞ)
`ನಮ್ಮ ಜನ ಆಯ್ದುಕೊಳ್ಳುವಾಗ ಮುಳ್ಳು ಯಾವುದು, ಮಲ್ಲಿಗೆ ಯಾವುದು ಎಂಬುದನ್ನು ತಿಳಿಯದವರಾಗುತ್ತಾರೆ. ಮುಳ್ಳು ಹಿಡಿದು ಮಲ್ಲಿಗೆ ಬಿಟ್ಟುಬಿಡುತ್ತಾರೆ ಎಂದು ಡಾ. ಚೆನ್ನವೀರ ಕಣವಿಯವರು ಧಾರವಾಡ ವಿಶ್ವವಿದ್ಯಾಲಯ ಎಚ್.ಎಂ.ಎಂ. ಅವರನ್ನು ಬೀಳ್ಕೊಡುವಾಗ ಹೇಳಿರುವ ಮಾತು ಬಹಳ ಮಾರ್ಮಿಕವಾಗಿದೆ. ಎಚ್.ಎಂ.ಎಂ. ಅವರನ್ನು ಬಲ್ಲ ಎಲ್ಲರಿಗೂ ಇದರ ಹಿಂದಿರುವ ಸತ್ಯದ ದರ್ಶನವಾಗದಿರದು. ಮರುಳಸಿದ್ಧಯ್ಯನವರನ್ನು ಕುರಿತು ಹೊರಬಂದಿರುವ ಪುಸ್ತಕದಲ್ಲಿ ಅವರನ್ನು ಪರಿಚಯಿಸುತ್ತಾ ಸಮಾಜಕಾರ್ಯ, ಸಮಾಜಶಾಸ್ತ್ರ ಅಧ್ಯಯನ, ಅಧ್ಯಾಪನ, ಸಂಶೋಧನಾ ಕಾರ್ಯಗಳಲ್ಲಿ ಅವರು ತೊಡಗಿಕೊಂಡು ಮಾಡಿರುವ ಅಸಾಧಾರಣ ಸಾಧನೆಯ ಬಗ್ಗೆ ತಿಳಿಸಿರುವುದು ಎಚ್.ಎಂ.ಎಂ. ಅವರ ಬಗ್ಗೆ ಅಭಿಮಾನ, ಗೌರವ ನೂರ್ಮಡಿಯಾಗುತ್ತದೆ.

ಸದಾ ಸಮಾಜಕಾರ್ಯ ಪ್ರಶಿಕ್ಷಣ ಕುರಿತು ಅದರ ಅನ್ವಯಿಕತೆಯ ಬಗ್ಗೆ ಅಪಾರ ಕಾಳಜಿ ವಹಿಸುತ್ತಾ ಬದುಕನ್ನೇ ಸೇವಾ ಸ್ವರೂಪವಾಗಿಸಿಕೊಂಡಿರುವ ವಿಶಿಷ್ಟ ವ್ಯಕ್ತಿತ್ವದ ಹಿರಿಯ ಚೇತನ ಎಚ್.ಎಂ.ಎಂ. ಅವರು ಸರಳ ಜೀವಿ, ಸ್ನೇಹಮಯಿ, ಆದ್ರ್ರಹೃದಯಿ, ಅಪರೂಪದ ಚೇತನ ಎಂಬುದರಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ.

ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಮೈಸೂರು
ಎಚ್.ಎಂ.ಎಂ. ಅವರ ಜೀವನ ಸಾಧನೆ, ಬರಹ, ಪ್ರಾಧ್ಯಾಪಕ ಪಾತ್ರ ಮೊದಲಾದವುಗಳಲ್ಲಿ ಮುಟ್ಟಿದ ಎತ್ತರ ಬಿತ್ತರಗಳನ್ನು ಲೇಖಕದ್ವಯರು ಬಹಳ ಸುಂದರವಾಗಿ ದಾಖಲಿಸಿದ್ದಾರೆ. ಸಮಾಜಕಾರ್ಯ ಅಧ್ಯಯನ, ಶಿಕ್ಷಣ ಮತ್ತು ಕ್ಷೇತ್ರ ಕಾರ್ಯಗಳಿಗೆ ಒಂದು ಗುರಿ ಹಾಗೂ ನಿರ್ದೇಶನವನ್ನು ಕಲ್ಪಿಸಿದ ಹೆಗ್ಗಳಿಕೆ ಎಚ್.ಎಂ. ಮರುಳಸಿದ್ಧಯ್ಯನವರದು. ವಿಶ್ವವಿದ್ಯಾಲಯದ ಅಧ್ಯಯನ ಹಾಗೂ ಸಂಶೋಧನೆಗಳು ಸದಾಕಾಲವೂ ಜನಮುಖಿಯಾಗಿರಬೇಕೆಂಬ ಅವರ ಆಶಯ ಎಲ್ಲರಿಗೂ ಅನುಕರಣ ಯೋಗ್ಯವಾಗಿದೆ.

ಎಂ.ಎಂ. ಹಿರೇಮಠ
`ನನ್ನ ಹಳ್ಳಿಯೇ ಜಗತ್ತಿನ ಕೇಂದ್ರ ಬಿಂದು! ಎಚ್.ಎಂ.ಎಂ. ಅವರ ಅಭಿವೃದ್ಧಿಪರ ಚಿಂತನೆಗೆ, ತಮ್ಮ ಹಳ್ಳಿಯ ಪ್ರಗತಿಗೆ ತೆಗೆದುಕೊಂಡ ಈ ನಿಲುವು ನನ್ನನ್ನು ಮೋಡಿ ಮಾಡಿದೆ. ಸಮಾಜಕಾರ್ಯದ ಘನತೆಯನ್ನು ಎತ್ತರಿಸಿ, ಅದನ್ನು ಬಿತ್ತರಿಸಿ ತಮ್ಮ ಹಳ್ಳಿ ಹಿರೇಕುಂಬಳೆಗುಂಟೆಯನ್ನು ಅಭಿವೃದ್ಧಿಗೊಳಿಸುವಲ್ಲಿ ಬದ್ಧಕಂಕಣರಾದದ್ದು, ಆ ಕಾರ್ಯದಲ್ಲಿ ಯಶಸ್ವಿಯಾದದ್ದು ಅಭಿನಂದನಾರ್ಹ. ಅವರು ಪ್ರತಿಪಾದಿಸುವ ತತ್ತ್ವಗಳನ್ನು ಪ್ರತಿಯೊಬ್ಬ ವಿದ್ಯಾವಂತರೂ ಚಿಂತಿಸಿ ತಮ್ಮ ತಮ್ಮ ಹಳ್ಳಿಗಳ ಪ್ರಗತಿಗಾಗಿ ಹಾಗೂ ವಿಕಾಸಕ್ಕಾಗಿ ಪ್ರಾಮಾಣಿಕ ಪ್ರಯತ್ನ, ಬೆಂಬಲ ನೀಡಿದ್ದೇ ಆದಲ್ಲಿ ಎಲ್ಲ ಹಳ್ಳಿಗಳು ಅಭಿವೃದ್ಧಿಯ ಕೇಂದ್ರಗಳಾಗುವುದರಲ್ಲಿ ಸಂದೇಹವೇ ಇಲ್ಲ. ಎಚ್.ಎಂ.ಎಂ. ಅವರ ಆದರ್ಶಮಯ ಜೀವನದ ರಸನಿಮಿಷಗಳನ್ನು ಎಳೆಎಳೆಯಾಗಿ ಬಿಡಿಸಿ, ಸುಂದರವಾಗಿ ಚಿತ್ರಿಸಿರುವ ಲೇಖಕರ ಪ್ರಯತ್ನ ಸಾರ್ಥಕವಾದದ್ದು.

ಡಾ. ಚೆನ್ನವೀರ ಕಣವಿ (ಖ್ಯಾತ ಕವಿ)
ಬೆಳಗಾವಿ ಜಿಲ್ಲೆಯ ಅಂಕಲಗಿಯಲ್ಲಿ 1960ರಲ್ಲಿ ಖ್ಯಾತ ಪ್ರಗತಿಶೀಲ ಕಾದಂಬರಿಕಾರರಾದ ಬಸವರಾಜ ಕಟ್ಟೀಮನಿಯವರ ಅಧ್ಯಕ್ಷತೆಯಲ್ಲಿ ಉಪನ್ಯಾಸ ಶಿಬಿರವೊಂದು ನಡೆದಿತ್ತು. ಅದರಲ್ಲಿ ಶ್ರೀ ಎಚ್.ಎಂ. ಮರುಳಸಿದ್ಧಯ್ಯನವರು `ಸಮಾಜಕಾರ್ಯ ಕುರಿತು ಉಪನ್ಯಾಸ ಶಿಬಿರವೊಂದು ನಡೆದಿತ್ತು. ಅದರಲ್ಲಿ ಶ್ರೀ ಎಚ್.ಎಂ. ಮರುಳಸಿದ್ಧಯ್ಯನವರು `ಸಮಾಜಕಾರ್ಯ ಕುರಿತು ಉಪನ್ಯಾಸ ನೀಡಿದ್ದರು. ಸಮಾಜ ಸೇವೆ ಹಾಗೂ ಸಮಾಜಕಾರ್ಯದ ತಾತ್ತ್ವಿಕ ವಿಚಾರಗಳನ್ನು ಬಿಡಿಸಿಟ್ಟು ಅವುಗಳ ನಡುವಿರುವ ವಿಭಿನ್ನತೆಯನ್ನು ವಿವರಿಸಿದರು. ಈ ಎರಡರ ನಡುವಿದ್ದ ನಮ್ಮ ಗೊಂದಲವನ್ನು ನಿವಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಆ ಉಪನ್ಯಾಸವನ್ನು ಧಾರವಾಡ ವಿಶ್ವವಿದ್ಯಾಲಯದ ಪ್ರಸಾರಾಂಗ ಉಪನ್ಯಾಸ ಗ್ರಂಥಮಾಲೆಯಲ್ಲಿ 1991ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಯಿತು. ಬಹುಶಃ ಸಮಾಜಕಾರ್ಯವನ್ನು ಕುರಿತು ಪ್ರಕಟಗೊಂಡ ಮೊದಲ ಕನ್ನಡ ಪುಸ್ತಕ ಅದೇ ಇರಬೇಕು.

ಮುಂದಿನ ದಿನಗಳಲ್ಲಿ ಸಮಾಜಕಾರ್ಯಕ್ಕೆ ಸಂದರ್ಭೋಚಿತ ಸಂಚಲನವನ್ನು ಕೊಟ್ಟು ಅದಕ್ಕೊಂದು ಶಿಸ್ತು, ಸಂಘಟನೆ ಮತ್ತು ಅಧ್ಯಯನ ವಿಚಾರಗಳನ್ನೊಳಗೊಂಡ ಪಠ್ಯವನ್ನು ಒದಗಿಸಿದವರು ಪ್ರೊ. ಎಚ್.ಎಂ. ಮರುಳಸಿದ್ಧಯ್ಯನವರು. ಪ್ರೊ.ಎಚ್.ಎಂ.ಎಂ. `ಸಮಾಜಕಾರ್ಯದ ಕಣಸುಗಾರ ಪ್ರೊ. ಎಚ್.ಎಂ. ಮರುಳಸಿದ್ಧಯ್ಯ ಎಂಬ ಅಪರೂಪದ ಜೀವನಕಥಾ ನಿರೂಪಣೆಯನ್ನು ಓದಿದಾಗ, ಬಸವಣ್ಣನವರ ಧಾರ್ಮಿಕ-ಸಾಮಾಜಿಕ-ಸಾಂಸ್ಕೃತಿಕ ಸಮಾನತೆಯ ಸರ್ವೋದಯದಲ್ಲಿ ನಂಬಿಕೆಯಿಟ್ಟು ಆ ದಾರಿಯಲ್ಲಿ ನಡೆಯಲು ಪ್ರಯತ್ನಿಸಿದ ಪ್ರೊ. ಎಚ್.ಎಂ.ಎಂ.ರವರ ಜೀವನ ಚರಿತ್ರೆಗೆ ಸಮರ್ಪಕವಾದ ಶೀರ್ಷಿಕೆ ಒದಗಿದೆ ಎನಿಸಿತು.

``ಹಲವು ಸಾರ್ಥಕ ಸಾಧನೆಗಳನ್ನು ಮಾಡಿರುವ ಮರುಳಸಿದ್ಧಯ್ಯನವರು ನಮ್ಮ ನಡುವೆ ಇದ್ದಾರೆ ಎನ್ನುವ ಮಾತೇ ಕೆಲವರಿಗೆ ಪವಾಡವೆನಿಸಬಹುದು ಎಂಬ ಮಾತನ್ನು ಗ್ರಂಥದ ಮುನ್ನುಡಿಯಲ್ಲಿ ಹೇಳಿರುವ ಶ್ರೀ ಎಚ್.ಎಸ್. ಗೋಪಾಲರಾಯರು, ``ದೃಢ ಸಂಕಲ್ಪವಿದ್ದರೆ ಎಂತಹ ಅಸಾಧ್ಯವಾದಂತಹ ಕೆಲಸವನ್ನಾದರೂ ಸಾಧಿಸಬಹುದೆನ್ನಲು ಎಚ್.ಎಂ.ಎಂ. ಉದಾಹರಣೆಯಾಗಿದ್ದಾರೆ ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ. ``ಎಚ್.ಎಂ.ಎಂ.ರವರು ಸಾಹಿತ್ಯದಿಂದ ಸಮಾಜಶಾಸ್ತ್ರಕ್ಕೆ, ಅಲ್ಲಿಂದ ಸಮಾಜಕಾರ್ಯಕ್ಕೆ ಬದಲಾದುದಕ್ಕೆ ನನಗೆ ಬೇಸರವೇನಿಲ್ಲ, ಸಂತೋಷವೇ ಆಗಿದೆ ಎಂಬ ಮಾತಿನ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತೆಯೇ ಇಲ್ಲ. ಅವರ ಈ ಎಲ್ಲಾ ಕೆಲಸಗಳ ಹಿಂದೆ ಕನಸು ಕಾಣುವ ಹೃದಯವೊಂದು ಮಿಡಿಯುತ್ತಿರುವುದರಿಂದಲೇ ಅವು ಸಾಹಿತ್ಯಿಕ ಸ್ಪರ್ಶದಿಂದ ಹೆಚ್ಚು ಯಶಸ್ವಿಯಾಗಿವೆ ಎಂದು ನನ್ನ ಅನಿಸಿಕೆ.

ಎ. ಮಾಧವ ಉಡುಪ (ನಿವೃತ್ತ ಪ್ರಾಂಶುಪಾಲರು)
`ಕಾರ್ಯನಿರ್ವಾಹಕ, ಸಂಶೋಧಕ, ಪ್ರತಿಪಾದಕ ಹಾಗೂ ಲೇಖಕ-ಎಂಬ ಮುಖಗಳನ್ನೊಳಗೊಂಡ ಚತುರ್ಮುಖ ಬ್ರಹ್ಮನಾಗಬೇಕು ಎನ್ನುವುದು ಎಚ್.ಎಂ.ಎಂ. ಅವರನ್ನು ಕುರಿತು ಇರುವ ಗ್ರಂಥದಲ್ಲೊಂದು ಮಾತು. ಪ್ರೊ. ಎಚ್.ಎಂ.ಎಂ.ರವರು ಶ್ರೇಷ್ಠ ಸಮಾಜಕಾರ್ಯಕರ್ತರೆನ್ನುವುದನ್ನು ಸಾಬೀತು ಮಾಡುವ ಮೂಲಕ ಈ ಕೃತಿ ಅವರ ವ್ಯಕ್ತಿತ್ವದ ಈ ಬಗೆಯ ಚತುರ್ಮುಖ ಬ್ರಹ್ಮತ್ವದ ಹಿರಿಮೆಯನ್ನು ಪರೋಕ್ಷವಾಗಿ ಧ್ವನಿಸುತ್ತದೆ.

ಪುಸ್ತಕದುದ್ದಕ್ಕೂ ಎರಡು ವಿಚಾರಗಳ ಅನಾವರಣ ಕ್ರಿಯೆ ಜೊತೆಜೊತೆಯಾಗಿಯೇ ಸಾಗುತ್ತದೆ. ಮೊದಲನೆಯದು ಸಮಾಜಕಾರ್ಯದಕ್ಕೆ ಅರ್ಪಿತರಾದ ಮರುಳಸಿದ್ಧಯ್ಯನವರ ಜೀವನ ಸಾಧನೆಯ ಅನಾವರಣವಾದರೆ, ಎರಡನೆಯದು, ಆದರ್ಶ ಸಮಾಜಕಾರ್ಯಕರ್ತನ ನೀತಿಸಂಹಿತೆಯ ಅನಾವರಣ. ವಿಶ್ವವಿದ್ಯಾಲಯದ ತಮ್ಮ ವಿಭಾಗದ ಶೌಚಾಲಯವನ್ನು ಚೊಕ್ಕಗೊಳಿಸಲು ವಿಭಾಗದ ಮುಖ್ಯಸ್ಥ ತಾನೆಂಬ ಪ್ರತಿಷ್ಠೆಯನ್ನು ತೊರೆದು ಮುಂದಾಗುವ ಎಚ್.ಎಂ.ಎಂ.ರವರು ತಮಗೆ ಪ್ರಿಯವಾಗಿದ್ದ ಸ್ವಾವಲಂಬನೆಯ ಮಂತ್ರಬೋಧಿಸಿದ ಮಹಾತ್ಮಾ ಗಾಂಧಿಯವರ ತತ್ತ್ವಗಳನ್ನು ತಮ್ಮ ಜೀವನದಲ್ಲಿ ಆದಷ್ಟೂ ಗಾಢವಾಗಿ ಅಳವಡಿಸಿಕೊಂಡಿದ್ದರೆಂಬುದಕ್ಕೆ ಪುರಾವೆ ಒದಗಿಸುತ್ತದೆ.

ತಾವು ಬರೆದ ಕೃತಿಗಳನ್ನು ಎತ್ತರೆತ್ತರದಲ್ಲಿರುವವರಿಗೆ ಅರ್ಪಿಸಿ ತಾವು ಎತ್ತರಕ್ಕೇರಲು ತವಕಿಸುವವರೇ ಹೆಚ್ಚಿರುವ ಕಾಲದಲ್ಲೇ ಎಚ್.ಎಂ.ಎಂ. ತಮ್ಮ ಬರಹವನ್ನು, ಸಮಾಜಕಾರ್ಯಶೀಲನಾದ ತಮ್ಮ ಆಪ್ತ ಶಿಷ್ಯರಿಗೆ ಅರ್ಪಿಸಿ ತಮ್ಮ ಗುಣೈಕಪಕ್ಷಪಾತಿತ್ವದ ಮುಗ್ಧ ಉದಾತ್ತತೆಯ ಸಾತ್ವಿಕ ಸೌಂದರ್ಯದಿಂದ ನಮ್ಮ ಗಮನ ಸೆಳೆಯುತ್ತಾರೆ.

ಉರಿಯುವ ದೀಪವೊಂದು ತನ್ನ ಬಳಿ ಬರುವ ಹತ್ತಾರು ದೀಪಗಳಿಗೆ ಮುತ್ತಿಕ್ಕಿ ಬೆಳಕು ಹರಡುವ ಕಾಯಕಕ್ಕೆ ಸೆಳೆಯುತ್ತದೆ. ಅಂತೆಯೇ ಮರುಳಸಿದ್ಧಯ್ಯನವರು ತಮ್ಮ ಸಂಪರ್ಕಕ್ಕೆ ಬಂದವರೆಲ್ಲಾ ಸದ್ವಿಚಾರ, ಸದ್ಭಾವಗಳ ಜ್ಯೋತಿಯನ್ನು ಬೆಳಗುವಂತಾಗಬೇಕೆಂದು ಬಯಸುತ್ತಾರೆ ಮತ್ತು ಹಾಗೆ ಆದ ಅನೇಕ ಘಟನೆಗಳನ್ನು ನಾವು `ಸಮಾಜಕಾರ್ಯದ ಕಣಸುಗಾರ ಕೃತಿಯಲ್ಲಿ ಕಾಣುತ್ತೇವೆ.

ಬಸವಣ್ಣನವರು ಹೇಳಿದಂತೆ, `ವಿಚಾರವೆಂಬ ಹೂವಾಗಿತ್ತು, ಆಚಾರವೆಂಬ ಕಾಯಾಗಿತ್ತು, ನಿಷ್ಪತ್ತಿಯೆಂಬ ಹಣ್ಣಾಗಿತ್ತು ಎಂಬುದು ಪ್ರೊ. ಎಚ್.ಎಂ.ಮರುಳಸಿದ್ಧಯ್ಯ ನವರ ಜೀವನಕ್ಕೆ ಅನ್ವಯಿಸುತ್ತದೆ.

ಕೃ.ವೆ. ರಾಮ್ (ಶ್ರೇಷ್ಠ ಸಮಾಜವಿಜ್ಞಾನಿ)
ಕಳೆದಿರುವುದಿಂದು ನಿಮ್ಮ ಜೀವನದಲ್ಲಿ ಎಂಟು ದಶಕಗಳು
ಮೂಡಿರುವುದಿಂದು ನೂತನ ಶುಭದಿನ
ಬಂದಿರುವೆ ನಾನು ನೀಡಲು ಶುಭಾಶಯಗಳು
ಎಣಿಸದಿರಿ ಜನ್ಮ ದಿನಗಳ ಕಳೆದ ವರ್ಷಗಳಿಂದ
ಗುಣಿಸಬೇಕದನ್ನು ಜನರಲ್ಲಿ ತಂದ ಆನಂದದಿಂದ
ಅವರ ದುಃಖದ ಕಾರ್ಮೋಡ ಚದುರಿಸಲು
ನೀಡಿದ ಜ್ಞಾನ ಜ್ಯೋತಿಯಿಂದ
ಸಮಾಜದಲ್ಲಿ ಕೂಡಿ, ನೋಡಿ, ದುಡಿದು, ನುಡಿದು
ಪಡೆದಿರುವಿರಿ ಜ್ಞಾನ ಸಂಪತ್ತು
ಆ ಸಮುದಾಯದ ಕೊರತೆಗಳ ಪರಿಹರಿಸಲು
ಶಾಂತಿ ಸುಖ ಬೆಳೆಸಲು
ನೀಡಲು ಶಿಕ್ಷಣ ಭವ್ಯ ಸಮಾಜ ರಚಿಸಲು
ಬಂದಿರುವ ಬರುವ ಅಭ್ಯರ್ಥಿಗಳಿಗಾಗಿ
ಕೊಡಲಿ ಭಗವಂತ ಶತಾಯು ನಿಮಗೆ
ಪ್ರಚರಿಸಲು ಜ್ಞಾನ ಜ್ಯೋತಿಯ
ಅಳಿಸಲು ದುಗುಡವ ಬೆಳೆಸಲು ಸಂತಸವ
ಎಸ್.ವಿ. ಮಂಜುನಾಥ (ಹಿರಿಯ ಗಾಂಧೀವಾದಿ)

ತಮ್ಮ ಆಳವಾದ ಪಾಂಡಿತ್ಯ, ವಿಚಾರ ಶಕ್ತಿ, ಅನುಭವಗಳನ್ನು ಹಿಂದುಳಿದಿರುವ ನಮ್ಮ ನಾಡಿನ ಗ್ರಾಮ ಪ್ರದೇಶಗಳ ಜನಜೀವನವನ್ನು ಪ್ರಗತಿಯ ಹಾದಿಯಲ್ಲಿ ಮುಂದೊಯ್ಯಲು ಉಪಯೋಗಿಸಿ, ನಾನಾ ಪ್ರಯೋಗಗಳನ್ನು ಕೈಗೊಂಡು ಕಾರ್ಯರೂಪಕ್ಕೆ ತರುವ ನಿರಂತರ ಸಮಾಜಕಾರ್ಯದಲ್ಲಿ ತೊಡಗಿರುವುದೇ ಅಲ್ಲದೆ, ಸೃಜನಶೀಲ ಸಾಹಿತ್ಯವನ್ನೂ ರಚಿಸಿ, ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುತ್ತಿದ್ದರೂ, ತಮ್ಮ ಗ್ರಾಮೀಣ ತೃಣಮೂಲವನ್ನು, ಮೂಲ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವ ಪ್ರೊ. ಎಚ್.ಎಂ. ಮರುಳಸಿದ್ಧಯ್ಯನವರು ಒಬ್ಬ ವಿಶಿಷ್ಟ ವ್ಯಕ್ತಿ. ವೈಶಿಷ್ಟ್ಯಪೂರ್ಣ ಆದರ್ಶವ್ಯಕ್ತಿ.

ಇವರು ತಮ್ಮ ಸರಳತೆ, ಗಾಂಧೀವಾದಿತ್ವದಿಂದ ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತಾರೆ. ಅದರಲ್ಲೂ ಗಾಂಧೀಮಾರ್ಗದಲ್ಲಿ, ಸಮಾಜಸೇವೆಯಲ್ಲಿ ತೊಡಗಿರುವ ನನಗಂತೂ ಪ್ರೊ. ಎಚ್.ಎಂ.ಎಂ. ತುಂಬಾ ಹತ್ತಿರವಾಗುತ್ತಾರೆ. ಸಮಾಜಕಾರ್ಯದ ಆದರ್ಶಗಳು, ವಿಚಾರಗಳು, ಪ್ರಯೋಗಗಳು, ಸಾಧನೆಗಳು ಅವರ ಗ್ರಂಥಗಳು, ಸಮಾಜಕಾರ್ಯವು ಒಂದು `ಪುಸ್ತಕದ ಬದನೆಕಾಯಿ ಆಗಬಾರದೆಂದು ಸಾರಿ ಹೇಳುತ್ತವೆ. ಇವರ ಸಮಾಜಕಾರ್ಯದ ಪ್ರಯೋಗಗಳು, ಕಾರ್ಯರೂಪಗಳು, ಒಂದು ರೀತಿಯಲ್ಲಿ ಮಹಾತ್ಮಾಗಾಂಧಿಯವರ ಅತ್ಯಮೂಲ್ಯವಾದ `ರಚನಾತ್ಮಕ ಕಾರ್ಯಕ್ರಮಕ್ಕೆ ಹೊಂದಿಕೊಳ್ಳುವುದು.

ಸ್ವಾಮಿ ವಿವೇಕಾನಂದರು ಇಂಗ್ಲೆಂಡಿಗೆ ಹೋಗಿದ್ದಾಗ ಭಾರತೀಯ ವೇದಾಂತ, ಆಧ್ಯಾತ್ಮಿಕತೆಯನ್ನು ಜೀರ್ಣಿಸಿಕೊಂಡು ಮಹಾ ದಾರ್ಶನಿಕರಾಗಿದ್ದ ಮ್ಯಾಕ್ಸ್ ಮುಲ್ಲರ್‍ರನ್ನು ಅವರ ಪತ್ನಿಯನ್ನು ನೋಡಿದಾಗ ವಶಿಷ್ಟ-ಅರುಂಧತಿಯರ ನೆನಪಾಯಿತಂತೆ. ಪ್ರೊ.ಎಚ್.ಎಂ.ಎಂ. ಮತ್ತವರ ಧರ್ಮಪತ್ನಿ ಶ್ರೀಮತಿ ಶಾಂತವೀರಮ್ಮನವರನ್ನು ಕಂಡಾಗ ನನಗೆ ಹಾಗೆ ಅನ್ನಿಸುತ್ತದೆ. ಅಂತಹ ಮಹನೀಯರ ಹತ್ತಿರದ ಪರಿಚಯ ನನಗಿರುವುದು ನನ್ನ ಸುಯೋಗ.

ಈ ಅಂಶಗಳನ್ನು ಓದಿದಾಗ ನನಗೆ ಅನ್ನಿಸಿದ್ದು:
1. ನಾವು ವ್ಯಕ್ತಿಗಳ ಹೆಸರನ್ನು ಮಾತ್ರ ಬರೆಯುವುದರ ಜೊತೆಗೆ, ಅವರು ಯಾರು ಎಂಬುದನ್ನು ಸೂಚಿಸುವುದು ಅರ್ಥಗರ್ಭಿತವಾಗುತ್ತದೆಂಬುದು ನನ್ನ ಅಭಿಪ್ರಾಯ.
2. ತಪ್ಪಿರುವಲ್ಲಿ, ವಿಷಯವನ್ನು ಸೇರಿಸಬೇಕಿರುವಲ್ಲಿ ಕೆಂಪು ಸೂಚನೆ ನೀಡಿದ್ದೇನೆ. ಸೇರಿಸಬೇಕಾದ ಪದವನ್ನು ಹಸಿರಲ್ಲಿ ಸೂಚಿಸಿದ್ದೇನೆ.
3.  ಕೆಲವೆಡೆ ನಾವು ಹೇಳಿದ ಹಾಗಿದೆ. ಉದಾ. ಜಾನಪ್ಪ ಮಾಸ್ತರ್ ಅಭಿಪ್ರಾಯ.
0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)