SKH
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
SKH

ಭಾರತದಲ್ಲಿ ಸಮುದಾಯ ಸಂಘಟನೆಯ / ಅಭಿವೃದ್ಧಿಯ ಇತಿಹಾಸ  - 4

12/20/2019

0 Comments

 
Picture
ಶರಣ ಸಾಹಿತ್ಯ
ಕರ್ನಾಟಕದ ಭಕ್ತಿ ಪಂಥದಲ್ಲಿ ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯ ಎರಡು ಸಮಾನಾಂತರ ಮಾರ್ಗಗಳು. ಅವುಗಳ ಉದ್ದೇಶ, ಸಾಧನಾ ಪಥ, ಒಪ್ಪಿಕೊಂಡ ಮೌಲ್ಯಗಳು ಇತ್ಯಾದಿ ಸ್ವಲ್ಪ ಹೆಚ್ಚು ಕಡಿಮೆ ಒಂದೇ ತರಹ ಕಾಣಿಸುತ್ತವೆ. ಶರಣ ಸಾಹಿತ್ಯದಲ್ಲಿ ಶಿವನ ಪಾರಮ್ಯವನ್ನು ಪ್ರತಿಪಾದಿಸಿದರೆ, ದಾಸಸಾಹಿತ್ಯದಲ್ಲಿ ಹರಿಸರ್ವೋತ್ತಮತ್ವವನ್ನು ನಿರೂಪಣೆ ಮಾಡಿದೆ. ಭಕ್ತಿ ಮಾರ್ಗವನ್ನು ಎರಡೂ ಸಾಹಿತ್ಯ ಪ್ರಕಾರಗಳೂ ಅಳವಡಿಸಿಕೊಂಡಿವೆ. ಹಾಗೇನೆ ಬದುಕಿನ ಮೌಲ್ಯಗಳನ್ನು ವಿವರಿಸುವಾಗ ಭಾವನೆ, ಕಲ್ಪನೆಗಳು ಒಂದೇ ಆಗಿದ್ದು ಶಬ್ದ ಪ್ರಯೋಗಗಳು, ಸಣ್ಣಪುಟ್ಟ ಆಚಾರಗಳು ಬೇರೆ ಬೇರೆ ಆಗಿರುವುದನ್ನು ಕಾಣಬಹುದಾಗಿದೆ.   

ಶರಣ ಸಾಹಿತ್ಯದ ಪ್ರಕಾರ ಶಿವನೇ ಸರ್ವೋತ್ತಮ. ವೀರಶೈವರು ಸಾಧನಾ ಹಂತದಲ್ಲಿ ದ್ವೈತವನ್ನೂ, ಸಿದ್ಧಾವಸ್ಥೆಯಲ್ಲಿ ಅದ್ವೈತವನ್ನು ಅಂಗೀಕರಿಸಿದ್ದಾರೆ.  ವೀರಶೈವರು ಏಕದೇವೋಪಾಸಕರು. ಶಿವನೇ ಅವರ ಪರದೈವ. ಜೀವರು ಶಿವನಿಂದ ಸೃಷ್ಟಿಸಲ್ಪಟ್ಟವರು. ಶಿವನು ಲಿಂಗಸ್ವರೂಪನಾದರೆ ಜೀವರು ಅಂಗ ಸ್ವರೂಪ. ಶಿವನಿಗೂ ಜೀವರಿಗೂ ವಿಭುತ್ವ ರೂಪದಿಂದ, ಅಣುತ್ವ ರೂಪದಿಂದ ಭೇದವಿದೆಯಾದರೂ, ಚೇತನ ರೂಪದಿಂದ ಭೇದವಿಲ್ಲ. ಶಿವನೂ ಸತ್ಯ, ಜೀವರೂ ಸತ್ಯ. ಜೀವಿಗಳೆಲ್ಲಾ ಶಿವಸ್ವರೂಪರೇ ಆಗಿರುತ್ತಾರೆ.  

ಜೀವಿಯು ಬಂಧನಗಳಿಂದ ಬಿಡುಗಡೆ ಪಡೆದು, ಮಾಯಾ ಪಾಶಗಳಿಂದ ನಿವೃತ್ತಿಯಾಗಿ ಸಾಧನೆಯ ಮೂಲಕ, ಶಿವ ಸ್ವರೂಪವನ್ನು ಪಡೆದು, ಶಿವನಲ್ಲಿ ಐಕ್ಯನಾಗುತ್ತಾ, ಶಿವನೇ ಆಗುತ್ತಾನೆ. ಜೀವನು ಶಿವೈಕ್ಯನಾಗುತ್ತಾನೆ. ಇದೇ ಲಿಂಗಾಂಗ ಸಾಮರಸ್ಯ, ಮೋಕ್ಷ.71 ಈ ಉದ್ದೇಶ ಸಾಧನೆಗೆ ಶರಣರು ಒಂದು ಸಾಧನಾಮಾರ್ಗವನ್ನು ಕಂಡುಕೊಂಡಿದ್ದಾರೆ. ಈ ಸಾಧನಾಪಥದಲ್ಲಿ ಶ್ರದ್ಧೆ ಮತ್ತು ಏಕಾಗ್ರತೆಯನ್ನು ಸಾಧಿಸಲು ಅಷ್ಟಾವರಣಗಳ ಅವಶ್ಯಕತೆ ಇದೆ. ಗುರು, ಲಿಂಗ, ಜಂಗಮ, ಪದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ ಮತ್ತು ಮಂತ್ರ, ಇವೇ ಆ ಅಷ್ಟಾವರುಣಗಳು, ಇವುಗಳನ್ನು ಯೋಗ್ಯರಿಂದ ತಿಳಿದುಕೊಂಡು ಸಾಧನೆಗೆ ತೊಡಗಬೇಕು. ನಮಃ ಶಿವಾಯ ಎಂಬ ಐದು ಅಕ್ಷರಗಳಿಂದ ಕೂಡಿದ ಪಂಚಾಕ್ಷರಿ ಮಂತ್ರವೇ ಶಿವಸಾಕ್ಷಾತ್ಕಾರಕ್ಕೆ ಪರಿಣಾಮಕಾರಿ ನೆರವನ್ನು ನೀಡುವ ಸಾಧನ.

ಲಿಂಗಾಂಗ ಸಾಮರಸ್ಯಕ್ಕೆ ಆರು ಹಂತಗಳಲ್ಲಿ ಸಾಧನೆ ನಡೆಯುತ್ತದೆ. ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಇವೇ ಆರು ಷಟ್ಸ್ಥಲಗಳು. ಸಾಧಕನು ಶಿವದೀಕ್ಷೆ ಪಡೆದು, ಅರಿಷಡ್ವರ್ಗಗಳನ್ನು ತ್ಯಜಿಸಿ, ಈ ಸ್ತರಗಳ ಬಗ್ಗೆ ತಿಳುವಳಿಕೆಯನ್ನು ಪಡೆದು ನಿರಂತರ ಸಾಧನೆಗೈದು ಶಿವನೊಂದಿಗೆ ಐಕ್ಯಹೊಂದಲು ಪ್ರಯತ್ನಿಸುತ್ತಾನೆ.

ಶರಣ ಸಾಹಿತ್ಯವು ಅಂತರಂಗ ಹಾಗೂ ಬಹಿರಂಗ ಶುದ್ಧಿಗಳೆರಡಕ್ಕೂ ಪ್ರಾಶಸ್ತ್ಯವನ್ನು ಕೊಟ್ಟಿದೆ. ಪಂಚಾಚಾರಗಳು ಬಾಹ್ಯ ಆಚರಣೆಗೆ, ವ್ಯವಹಾರಗಳಿಗೆ ಅನ್ವಯಿಸಿದರೆ, ಸಪ್ತಾಚಾರಗಳು ಆಂತರಿಕ ಶಿಸ್ತಿಗೆ ಸಂಬಂಧಿಸಿವೆ. ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಭೃತ್ಯಾಚಾರ ಪಂಚಾಚಾರಗಳಾದರೆ, ಕ್ರಿಯಾಚಾರ, ಜ್ಞಾನಾಚಾರ, ಭಾವಾಚಾರ, ಸತ್ಯಾಚಾರ, ನಿತ್ಯಾಚಾರ, ಧರ್ಮಾಚಾರ ಮತ್ತು ಸರ್ವಾಚಾರಗಳೇ ಸಪ್ತಾಚಾರಗಳು. ಇವುಗಳ ಪರಿಕಲ್ಪನೆಗಳನ್ನು ಸಾಧಕನು ಪರಿಯಾಗಿ ಅರ್ಥೈಸಿಕೊಂಡು, ತನ್ನ ಸಾಧನಾಮಾರ್ಗದಲ್ಲಿ ಕ್ರಮಿಸಿ, ಲಿಂಗದಲ್ಲಿ ಐಕ್ಯನಾಗನು ತವಕಿಸುತ್ತಾನೆ. ಇದು ಶರಣ ಸಾಹಿತ್ಯ ಪ್ರಚುರ ಪಡಿಸಿದ ಸಾಧನಾ ಮಾರ್ಗ.

ಶರಣರು ಈ ಚಿಂತನೆಗಳ ಜೊತೆಗೆ ಸಮಾನತೆಯ ಒಂದು ಸಾಮಾಜಿಕ ವ್ಯವಸ್ಥೆಯನ್ನು ರೂಪಿಸಿದರು. ಸಾಮಾಜಿಕ ಸಮಸ್ಯೆಗಳನ್ನು ತಮ್ಮ ಅನುಭವಿಕ ನೆಲೆಯಲ್ಲಿ ಅರ್ಥಮಾಡಿಕೊಂಡು, ವಿಶ್ವದ ಲೇಸನ್ನು ತಮ್ಮ ಗುರಿಯಾಗಿಸಿಕೊಂಡರು. ಈ ಗುರಿಸಾಧನೆಗೆ ಒಂದು ಪ್ರಾಯೋಗಿಕ ಮಾರ್ಗವನ್ನು ಕಂಡುಕೊಂಡರು. ಮೌಲ್ಯಗಳನ್ನು ರೂಪಿಸಿಕೊಂಡರು. ಅಂತಹ ಮೌಲ್ಯಗಳು ಅವರಿಗಷ್ಟೇ ಅಲ್ಲದೆ. ಇತರರಿಗೂ, ಹಾಗೇನೇ ಸಮಾಜ ಕಾರ್ಯಕರ್ತರಿಗೂ ಉಪಯುಕ್ತವಾದವುಗಳಾಗಿವೆ.
  1. ದೇವರು ಒಬ್ಬನೇ ಎಂದು ಶರಣರು ನಂಬುತ್ತಾರೆ, ಅವನನ್ನು ಶಿವ, ಶಂಕರ, ಕೂಡಲ ಸಂಗಮದೇವ, ಈಶ್ವರ ಇತ್ಯಾದಿ ನಾಮಗಳಿಂದ ಗುರುತಿಸಿದ್ದಾರೆ. ಏಕಂ ಸತ್, ವಿಪ್ರಾ ಬಹುದಾ ವದಂತಿ ಎಂಬ ಋಗ್ವೇದದ ಮಾತೂ, ಏಕೋ ದೇವ.... ಎಂಬ ಶ್ವೇತಾಸ್ವತರೋಪನಿಷತ್, ಮುಂತಾದ ಧಾರ್ಮಿಕ ಗ್ರಂಥಗಳೂ, ದಾರ್ಶನಿಕರೂ, ಸಾಧುಸಂತರೂ ಇದನ್ನೇ ಹೇಳಿದ್ದಾರೆ. ದೇವ ಒಬ್ಬ, ನಾಮ ಹಲವು ಎಂದು ಬಸವಣ್ಣನವರೇ ಹೇಳಿದ್ದಾರೆ.  ಇಡೀ ವಿಶ್ವಕ್ಕೆ ದೇವರು ಒಬ್ಬನೆ, ನಾವೆಲ್ಲರೂ ಅವನ ಮಕ್ಕಳು ಎಂಬ ಕಲ್ಪನೆ ಒಂದು ರೀತಿಯ ಐಕ್ಯತಾಭಾವವನ್ನು ತಂದುಕೊಡುತ್ತದೆ.    
  2. ಶರಣರು ಸಮಾನತೆಯನ್ನು ಪ್ರತಿಪಾದಿಸಿದ್ದಾರೆ. ಯಾರೂ ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ. ಜಾತಿ, ಲಿಂಗ, ವಯಸ್ಸು, ವೃತ್ತಿ, ಪ್ರದೇಶಗಳು ಯಾರನ್ನು ಮೇಲಾಗಿಸದು ಅಥವಾ ಕೀಳಾಗಿಸದು. 
  3. ಶರಣರು ಸ್ತ್ರೀ ಸಮಾನತೆ ಮತ್ತು ಸ್ತ್ರೀ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದಾರೆ.  ಸ್ತ್ರೀಯರನ್ನು ಸಮಾನವಾಗಿ ಕಂಡಿದ್ದಾರೆ. ಸ್ತ್ರೀಯರಿಗೆ ಪೂಜೆಯ ಹಕ್ಕು, ಲಿಂಗಧಾರಣೆ ಹಕ್ಕೂ ಇವೆ. ಅವರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಅವರೂ, ಪುರುಷರಂತೆ, ತಮ್ಮ ಜೀವನವನ್ನು ರೂಪಿಸಿಕೊಳ್ಳಬಲ್ಲರು. ಯಾವ ಪಾತ್ರವನ್ನಾದರೂ ನಿಭಾಯಿಸಬಲ್ಲರು.
  4. ಶರಣ ಸಾಹಿತ್ಯ ಅಂತರಂಗ-ಬಹಿರಂಗ ಶುದ್ಧಿಯನ್ನು ಅಪೇಕ್ಷಿಸುತ್ತದೆ.   ಅಂತರಂಗದ ಕಲ್ಪನೆಗಳನ್ನು, ಭಾವನೆಗಳನ್ನು ಬಹಿರಂಗದ ಮಾತು ಮತ್ತು ಚಟುವಟಿಕೆಗಳ ಮೂಲಕ ಗುರುತಿಸಬಹುದು. ಒಂದು ಇನ್ನೊಂದರ ಫಲಿತಾಂಶ. ಇವೆರಡೂ ಒಂದೇ ಪ್ರಕ್ರಿಯೆಯ ಎರಡು ಬೇರೆ ಬೇರೆ ಮಜಲುಗಳು. ಇವೆರಡೂ ಸ್ತರಗಳಲ್ಲಿ ಶುದ್ಧಿ ಇದ್ದವನು ಎಲ್ಲೆಯೂ ಸಲ್ಲುವನು. ಕಳಬೇಡ, ಕೊಲಬೇಡ.... ಎಂಬ ಬಸವಣ್ಣನವರ ವಚನ ಇದನ್ನೇ ಪುಷ್ಟೀಕರಿಸುತ್ತದೆ.  
  5. ಕಾಯಕದ ಪರಿಕಲ್ಪನೆ ಶರಣ ಸಾಹಿತ್ಯದ ಮತ್ತೊಂದು ಮೌಲ್ಯ. ಕಾಯಕ ಎಂದರೆ ಬರೀ ಕೆಲಸವಲ್ಲ. ಅದಕ್ಕೆ ವಿಶಾಲ ಅರ್ಥವನ್ನು ಭಾವಿಸಲಾಗಿದೆ.  ಕಾಯಕ ಶಬ್ದವೂ ಕಾಯ ಶಬ್ದದಿಂದ ನಿಷ್ಪತ್ತಿಗೊಂಡಿದೆ. ಕಾಯಕ ಮನಸ್ಸಿನ ಆಯಾಮವನ್ನೂ ಪಡೆದಿದೆ. ಮನಸ್ಸಿನಲ್ಲಿ ಸೃಜಿಸಿದ್ದು ಹೊರಗೆ ಪ್ರಕಟಗೊಳ್ಳುವುದು ಕ್ರಿಯೆಯಿಂದ. ಅಂತರಂಗದಲ್ಲಿ ಅರಿವಾಡುದೇ ಬಹಿರಂಗದಲ್ಲಿ ಕಾಯಕವಾಗಿ ರೂಪಗೊಳ್ಳುತ್ತದೆ. ಹಾಗಾದರೆ ಕಾಯಕ ಮಾನಸಿಕ ಹಾಗೂ ಶಾರೀರಿಕ ಚಟುವಟಿಕೆಗಳ ಪ್ರಕಟರೂಪ, ಕಾಯಕ ಜಾತಿ, ಮತ, ಲಿಂಗ, ಸ್ಥಳ ಇತ್ಯಾದಿ ಅಂಶಗಳಿಂದ ಪ್ರೇರಿತವಾಗಬಾರದು.  ಅದು ಸತ್ಯವಾಗಿರಬೇಕು ಹಾಗೂ ಶುದ್ಧವಾಗಿರಬೇಕು. ಇದು ಭಗವದ್ಗೀತೆಯ ಕರ್ಮಣ್ಯೆವಾಧಿಕಾರಸ್ತೇ... (ಗೀತೆ 2-4) ಶ್ಲೋಕವನ್ನು ನೆನಪಿಗೆ ತರುತ್ತದೆ.  ಕಾಯಕದಿಂದ ದೇಹಕ್ಕೆ ಶಕ್ತಿ, ಮನಸ್ಸಿಗೆ ಆನಂದ, ಆತ್ಮಕ್ಕೆ ತೃಪ್ರಿ, ಸಮಾಜಕ್ಕೆ ಸಂಪತ್ತು ದೊರೆಯುತ್ತದೆ. ಕಾಯಕವು ದೇಹ ಮತ್ತು ಮನಸ್ಸುಗಳ ಮಾಲಿನ್ಯವನ್ನು ತೊಳೆಯುತ್ತದೆ. ಕಾಯಕ ವೃತ್ತಿಯು ಏಕಾಗ್ರತೆ ಮತ್ತು ಶ್ರದ್ಧೆಯನ್ನು ಹೆಚ್ಚಿಸುತ್ತದೆ. ಕಾಯಕದಲ್ಲಿ ತೊಡಗಿರುವವನು ಆಸ್ತೇಯನಾಗಿರಬೇಕು, ಆಶಾರಹಿತನಾಗಿರಬೇಕು.72
  6. ದಾಸೋಹ - ಕಾಯಕ ಸಾಧನಾಮಾರ್ಗವೂ ಆಗಿದೆ. ಕಾಯಕದಿಂದ ಬಂದ ಫಲವನ್ನು ಹಂಚಿಕೊಂಡು ಉಣ್ಣುವುದು, ಹಂಚಿಕೊಂಡು ಬದುಕುವುದು ದಾಸೋಹ ಎಂದೆನ್ನಿಸಿಕೊಳ್ಳುತ್ತದೆ. ಸನಾತನ ಧರ್ಮದ ವಸುಧೈವ ಕುಟುಂಬಕಮ್ ಪರಿಕಲ್ಪನೆಯ ಉದ್ದೇಶವೂ ಇದೇ. ಕಾಯಕ ಸತ್ಯ ಮತ್ತು ಶುದ್ಧವಾಗಿರುವಂತೆ  ದಾಸೋಹ ನಿಜವಾಗಿರಬೇಕು ಹಾಗೂ ಪ್ರಾಮಾಣಿಕವಾಗಿರಬೇಕು. ಹಾಗಾಗದಿದ್ದರೆ,  ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ, ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ, ಎಂಬಂತಾಗುತ್ತದೆ.   ದಾಸೋಹ ಸಮಷ್ಟಿ ಹಿತದ ಪ್ರತೀಕ. ದಾಸೋಹದಿಂದ ಮನಸ್ಸು ಮಾಗುತ್ತದೆ. ಸಾಧಕ ನಿಃಸ್ವಾರ್ಥಿಯಾಗುತ್ತಾನೆ.  ಇಂಥಹವನು ಯಾವುದೇ ಸಂಸ್ಥೆಗೆ, ಸಮುದಾಯಕ್ಕೆ ಆಸ್ತಿ, ದಾಸೋಹ ಕಲ್ಪನೆ ಸಮಾಜಕಾರ್ಯಕರ್ತನಿಗೂ ಒಂದು ಮೌಲ್ಯವೇ ಆಗಿದೆ.
  7. ಶರಣರು ಅಸ್ಪೃಶ್ಯತೆಯನ್ನು ಒಪ್ಪುವುದಿಲ್ಲ. ಯಾರೂ ಅಸ್ಪೃಶ್ಯರಲ್ಲ. ಪತಿತರನ್ನು ಯಾವ ಭೇದಭಾವವಿಲ್ಲದೆ ಸ್ವೀಕರಿಸಿ, ಸಹಾಯ ಮಾಡಿ, ಅವರನ್ನು ಮೇಲೆತ್ತಿ. ಅವರಿಗೆ ಬದುಕಲು ಅವಕಾಶ ಕೊಡಿ. ಸಮಾಜಕಾರ್ಯಕರ್ತ ಇದನ್ನೇ ಮಾಡುತ್ತಾನೆ.
  8. ನಡೆನುಡಿಗಳ ಸಾಮರಸ್ಯವನ್ನು ಶರಣರು ಸಮರ್ಥಿಸಿದ್ದಾರೆ.  ಶರಣರು ನುಡಿದಂತೆ ನಡೆದಿದ್ದಾರೆ. ನಡೆದಂತೆ ನುಡಿದಿದ್ದಾರೆ. ಅಂತರಂಗ-ಬಹಿರಂಗ ಶುದ್ಧಿಗೆ ಆದ್ಯತೆಯನ್ನು ಕೊಟ್ಟಿದ್ದಾರೆ. 
  9. ಶರಣರು ಬಾಂಧವ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತಾರೆ. ಶರಣರ ಸಾಧನಾಮಾರ್ಗದಲ್ಲಿ ಬಾಂಧವ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಟ್ಟಿದ್ದಾರೆ. 
  10. ಶರಣ ಸಾಹಿತ್ಯದ ಗುರಿ, ಸಮಾಜಕಾರ್ಯದಂತೆ, ಲೋಕದ ಲೇಸೇ ಆಗಿರುತ್ತದೆ.73
  11. ಹಿಂದೂಧರ್ಮದ ಇತರ ಮತಗಳಂತೆ ವೀರಶೈವ ಮತದಲ್ಲಿಯೂ ದಾನದ ಉದ್ದೇಶ, ದಾನಿಗೆ ಇರಬೇಕಾದ ಮನೋಭೂಮಿಕೆ, ದಾನದ ಫಲ ಮುಂತಾದ ವಿಷಯಗಳ ಬಗ್ಗೆ ಹೇಳಲಾಗಿದೆ. ದಾನ ಧರ್ಮದ ಒಂದು ಅಂಗ ಎಂದು ಶರಣರು ನಂಬುತ್ತಾರೆ. ದಾನಕ್ಕೆ ಅಂತಃಪ್ರೇರಣೆಯ ಅವಶ್ಯಕತೆಯ ಬಗ್ಗೆ ಶರಣ ಸಾಹಿತ್ಯದಲ್ಲಿ ಪ್ರಸ್ತಾಪವಿದೆ. ಪ್ರಪಂಚದ ಎಲ್ಲ ಪ್ರಾಣಿಗಳ ಬಗ್ಗೆ - ಎಲ್ಲ ಜೀವಿಗಳ ಬಗ್ಗೆ ದಯವಿರಬೇಕು. ದಯವೇ ಧರ್ಮದ ಮೂಲ. ಬಸವಣ್ಣನವರ ಈ ವಚನವನ್ನು ನೋಡಿ.

ದಯವಿಲ್ಲದ
ದರ್ಮವದಾವುದಯ್ಯಾ?
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ,
ದಯವೇ ಧರ್ಮದ ಮೂಲವಯ್ಯಾ, 
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.
(ಬ.ವ.ಸಂ; ಸಂಖ್ಯೆ 247)      
 

ಕೂಡಲಸಂಗಯ್ಯನನ್ನು ಒಲಿಸಲು ಮೊದಲು ಬೇಕಾದದ್ದು ಸಕಲ ಪ್ರಾಣಿಗಳಲ್ಲಿ ದಯೆ. ಇದೇ ಧಾರ್ಮಿಕ ಬದುಕಿನ ಮೊದಲ ಹೆಜ್ಜೆ. ಇನ್ನು ದಾನ ಮಾಡುವಾಗ ಆ ಧನ ನೀವು ಕಾಯಕ ಮಾರ್ಗದಿಂದ ಸಂಪಾದಿಸಿದ್ದಾಗಿರಬೇಕು. ಅನ್ಯಮಾರ್ಗದಿಂದಲ್ಲ. ಹಾಗೆ ದುಡಿದ ಧನವನ್ನು ಶಿವ ಶರಣರಿಗೆ, ದೀನ ದಲಿತರಿಗೆ ದಾನ ಮಾಡಬೇಕು. ಬೇಡಿ ಬಂದವರಿಗೆ ದಾನ ಮಾಡಬೇಕು. ಧನವನ್ನು ನಿಮ್ಮಲ್ಲೇ ಇಟ್ಟುಕೊಂಡರೆ ಶಿವ ಮೆಚ್ಚುವುದಿಲ್ಲ. ಒಬ್ಬ ಶರಣ ಯಾರ್ಯಾರನ್ನು ಹೇಗೆ ವರಿಸಬೇಕು ಎಂದು ಬಸವಣ್ಣನವರು ಹೇಳುತ್ತಾರೆ.   
   
ತನುವಕೊಟ್ಟು ಗುರುವನೊಲಿಸಬೇಕು,
ಮನವಕೊಟ್ಟು ಲಿಂಗವನೊಲಿಸಬೇಕು,
ಧನವ ಕೊಟ್ಟು ಜಂಗಮವನೊಲಿಸಬೇಕು.
(ಬ.ವ.ಸಂ.ಸಂಖ್ಯೆ 206)

ಧನವನ್ನು ನಿಮ್ಮಲ್ಲೇ ಇಟ್ಟುಕೊಂಡರೆ ಶಿವ ಮೆಚ್ಚಲಾರ ಎಂದೂ ಹೇಳುತ್ತಾರೆ.

ಧನವನಿರಿಸದಿರಾ, ಇರಿಸಿದೊಡೆ ಭವ ಬಪ್ಪದು ತಪ್ಪದು.
ಕೂಡಲಸಂಗದ ಶರಣರಿಗೆ ಸವೆಸಲೇಬೇಕು.
(ಬ.ವ.ಸಂ: ಸಂಖ್ಯೆ 199)

ಜಂಗಮರಿಗೆ, ಶಿವಶರಣರಿಗೆ ದಾನ ಕೊಡುವುದರ ಜತೆಗೆ ಅವಶ್ಯಕತೆ ಇರುವರಿಗೆ (ದೀನರು, ದರಿದ್ರರು, ನಿರ್ಗತಿಕರು, ಅನಾಥರು ಇತ್ಯಾದಿ), ಬೇಡಿದವರಿಗೆ ದಾನ ಕೊಡುವುದನ್ನು ಶರಣರು ಪ್ರತಿಪಾದಿಸುತ್ತಾರೆ.

ಬೇಡುವವರ ನೀಡಿ ನೋಡಿ, ಈಯಲಿಲ್ಲದ ಜೀವನವಿದೇಕೆ
(ಬ.ವ.ಸಂ: ಸಂಖ್ಯೆ 439)

ಬಸವಣ್ಣನವರು ಇನ್ನೊಂದು ವಚನದಲ್ಲಿ ಹೀಗೆ ಹೇಳುತ್ತಾರೆ.

ದೇಹಿ ಎಂದಡೆ ನಾಸ್ತಿ ಎಂಬುವರ
ಬೇಹು ನೋಡಬಂದ ಕಾಣಾ, ಕೂಡಲಸಂಗಮದೇವಾ
(ಬ.ವ.ಸಂ: ಸಂಖ್ಯೆ. 1214) 

ದೇಹಿ ಅಂದರೆ ಅವಶ್ಯಕತೆ ಇರುವವರು ಯಾಚಿಸುವವರು, ವಿನಂತಿಸುವವರು, ಅಂಥವರಿಗೆ ಅವಶ್ಯ ಕೊಡಬೇಕು. ನಾಸ್ತಿ ಅಂದರೆ ಇಲ್ಲ, ಕೊಡಲ್ಲ ಎಂದು ಹೇಳುವುದು, ಅವರ ವಿನಂತಿಯನ್ನು ತಿರಸ್ಕಾರ ಮಾಡುವುದು ಸಲ್ಲ. ದಾನದ ಮಹತ್ವವನ್ನು ಎಷ್ಟು ಎತ್ತರಕ್ಕೆ ಒಯ್ಯುತ್ತಾರೆಂದರೆ, ನಿಮ್ಮಲ್ಲಿ ಕಡಿಮೆ ಇದ್ದರೆ ಚಿಂತೆಯಿಲ್ಲ. ಅದರಲ್ಲೇ ಸ್ವಲ್ಪ ಕೊಡಿ. ಭಿಕ್ಷೆ, ಸಂಗ್ರಹಿಸಿದ ಮೂಲದಿಂದಲಾದರೂ ಸ್ವಲ್ಪ ಕೊಡಿ ಎಂದು ಹೇಳುತ್ತಾರೆ.

ದಾನವನ್ನು ಕೊಡುವಾಗ ಮನಃಪೂರ್ವಕವಾಗಿ ಕೊಡಿ. ಕಾಟಾಚಾರಕ್ಕೊ, ಉದ್ದೇಶರಹಿತವಾಗಿಯೋ, ದಾನ ಕೊಡುವುದು ಒಂದು ವಿಧಿ, ಒಂದು ಸಂಪ್ರದಾಯ ಎಂತಲೋ ಕೊಡಬೇಡಿ. ಆಸಕ್ತಿಯಿಂದ ಕೊಡಿ. ದಾನ ಕೊಡುವಾಗ ಪ್ರಾಮಾಣಿಕವಾಗಿರಿ ಎಂದು ಬಸವಣ್ಣನವರು ಹೇಳುತ್ತಾರೆ.

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ,
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ,
ಮಾಡುವ ನೀಡುವ ನಿಜಗುಣವುಳ್ಳಡೆ
ಕೂಡಿಕೊಂಬ ನಮ್ಮ ಕೂಡಲಸಂಗಮದೇವ.
(ಬ.ವ.ಸಂ: ಸಂಖ್ಯೆ 233)

ಇದರ ಜೊತೆಗೆ ನಾನು ದಾನ ಮಾಡಿದೆ, ದಾನ ಕೊಟ್ಟೆ ಎಂದು ಅಹಂಕಾರ ಪಡದಿರಿ. ಹಾಗೆ ಮಾಡಿದರೆ ಶಿವ ಮೆಚ್ಚುವುದಿಲ್ಲ.

ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ,
ಏಡಿಸಿ ಕಾಡಿತ್ತು ಶಿವನ ಡಂಗುರ
(ಬ.ವ.ಸ.ಸಂಖೆ 234)

ದಾನ ಮಾಡಿದರೆ ಸಿಗುವ ಫಲದ ಬಗ್ಗೆಯೂ ಶರಣರು ಹೇಳಿದ್ದಾರೆ. ದಾನದ ಫಲ ಸದ್ಗತಿ ಎಂದು ತಿಳಿಸಿದ್ದಾರೆ. ಆದಕಾರಣ,

ಇದುಕಾರಣ ಇಲ್ಲಿಯೂ ಲೇಸು, ಅಲ್ಲಿಯೂ ಲೇಸು
ಕೊಡಿರೇ, ನಮ್ಮ ಕೂಡಲಸಂಗನ ಶರಣರಿಗೆ
(ಬ.ವ.ಸಂ: ಸಂಖ್ಯೆ 622)74

ಹೀಗೆ ಬಸವಣ್ಣನವರು ದಾನದ ಪ್ರಾಮುಖ್ಯತೆ, ದಾನದ ಅರ್ಹತೆ, ದಾನ ಕೊಡುವವನ ಮನೋಭೂಮಿಕೆ, ದಾನದ ಫಲ ಮುಂತಾದ ವಿಷಯಗಳ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆ. 

ಶರಣರು ಆಚಾರ-ವಿಚಾರಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟಿದ್ದಾರೆ. ಸದಾಚಾರ ಬದುಕಿನ ಅವಿಭಾಜ್ಯ ಅಂಗವಾಗಬೇಕೆಂದು ಬಯಸುತ್ತಾರೆ. ಚನ್ನಬಸವಣ್ಣನವರು ಆಚಾರದ ಐವತ್ತು ಅಂಶಗಳುಳ್ಳ ದೊಡ್ಡದೊಂದು ಪಟ್ಟಿಯನ್ನೇ ಕೊಡುತ್ತಾರೆ. ಇದರಲ್ಲಿ ಒಬ್ಬ ಶರಣ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಆಚಾರದ ಐವತ್ತು ವಿಚಾರಗಳನ್ನು ತಿಳಿಸಿದ್ದಾರೆ. ಅವುಗಳಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಸಮಾಜಕಾರ್ಯಕ್ಕೆ ಸಂಬಂಧಿಸಿದ ಸಂಗತಿಗಳೂ ಇವೆ. ಪರರ ಹೆಣ್ಣಿಗೆ ಆಶಿಸದೆ ಇರುವುದು, ಪರರ ದ್ರವ್ಯವನ್ನು ಅಪಹರಣ ಮಾಡದಿರುವುದು, ಸಜ್ಜನ ಸಂಗವನ್ನು ಬಿಡದಿರುವುದು, ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು, ಆಡಿದ ಭಾಷೆಯನ್ನು ಪೂರೈಸುವುದು, ಸತ್ಯವ ನುಡಿದು ತಪ್ಪದಿರುವುದು, ಪಶು ಸಂಪತ್ತನ್ನು ರಕ್ಷಿಸುವುದು, ಇನ್ನೊಬ್ಬರ ಮನವ ನೋಯಿಸಿ ಮಾತನಾಡದಿರುವುದು, ಅರಿಷಡ್ವರ್ಗಗಳನ್ನು ಮೆಟ್ಟಿ ನಿಲ್ಲುವುದು, ಸರ್ವರಿಗೆ ಹಿತವನ್ನು ಮಾಡುವುದು ಹಾಗೂ ಸಕಲ ಜೀವಿಗಳಿಗೆ ಹಿತವ ಬಯಸುವುದು,75 ಮುಂತಾದ ಮೌಲ್ಯಗಳು ಸಮಾಜಕಾರ್ಯಕರ್ತ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು, ವೃದ್ಧಿಸಿಕೊಳ್ಳಲು ಬಳಸಬಹುದಾಗಿದೆ. ಇಡೀ ಸಮಾಜಕ್ಕೆ (ಸಮುದಾಯವೂ ಸೇರಿದ ಹಾಗೆ) ಹಿತವ ಬಯಸುವುದು, ಹಿತವನ್ನು ಮಾಡುವುದು ಸಮಾಜಕಾರ್ಯದ ತತ್ವವೇ ಆಗಿದೆ.

ಚನ್ನಬಸವಣ್ಣನವರು ದಾನದ ಫಲದ ಬಗ್ಗೆ ಹೀಗೆ ಹೇಳುತ್ತಾರೆ.
ಅನ್ನವನಿಕ್ಕಿದರೆ ಪುಣ್ಯವಹುದು,
ವಸ್ತ್ರವ ಕೊಟ್ಟರೆ ಧರ್ಮವಹುದು,
ಹಣವ ಕೊಟ್ಟರೆ ಶ್ರೀಯಹುದು.
(ಚ.ಬ.ವ.ಸಂ: ಸಂಖ್ಯೆ 57)76

ದಾನವನ್ನು ಯಾರಿಗೆ ಕೊಡಬಾರದು ಎಂಬ ಬಗ್ಗೆ ಹಲವು ಶರಣರು ಹೇಳಿದ್ದಾರೆ. ಭವಿ ದಾನಕ್ಕೆ ಅಪಾತ್ರ. ಭವಿಗೆ ದಾನ ಕೊಡಬೇಡಿ. ಭವಿ ಅಂದರೆ ಸಂಸಾರ ಬಂಧನಕ್ಕೆ ಒಳಗಾದವನು ಎಂದು ಸಾಮಾನ್ಯ ಅರ್ಥವಾದರೆ, ವೀರಶೈವ ದೀಕ್ಷೆಯನ್ನು ಪಡೆಯದವನು ಎಂಬ ವಿಶೇಷಾರ್ಥವೂ ಅದಕ್ಕಿದೆ. ಅರಿಷಡ್ವರ್ಗಗಳನ್ನು ಜಯಿಸಿ, ಶಿವ ತತ್ವದಲ್ಲಿ ನಂಬಿಕೆ ಇರಿಸಿಕೊಂಡು, ಶಿವದೀಕ್ಷೆಯನ್ನು ಪಡೆದು, ಶಿವಭಕ್ತನಾಗಬೇಕು. ಇದು ಸಾಧನೆಯ ಮೊದಲನೆ ಹೆಜ್ಜೆ. ಇಂತಹ ಭಕ್ತನಲ್ಲದವನನ್ನು ಭವಿಯೆಂದು ವಚನಕಾರರು ಕರೆದಿರುವರು. ಸಿದ್ದರಾಮೇಶ್ವರರು ಭವಿ ಯಾರೆಂದು ಹೀಗೆ ಹೇಳುತ್ತಾರೆ.

ಭವಿಯೆಂದಡೆ ಮದ್ಯಪಾನ, ಮಾಂಸಭಕ್ಷಣ, ಪರಸ್ತ್ರೀಸಂಗ
ಪರಧನಚೋರತ್ವ ನಿಜವಸ್ತು ಅಂತರತ್ವವಿದ್ದವನೆ ಭವಿಯಯ್ಯಾ
(ಸಿ.ರಾ.ಸಂ: ಸಂಖ್ಯೆ 1391)77

ಯಾರು ಮದ್ಯಪಾನ ಮಾಡುತ್ತಾರೊ, ಮಾಂಸ ತಿನ್ನುತ್ತಾರೋ, ಪರಸ್ತ್ರೀ ಸಂಗ ಮಾಡುತ್ತಾರೋ, ಇನ್ನೊಬ್ಬರ ಹಣವನ್ನು ಕದಿಯುತ್ತಾರೋ, ಯಾರು ಅರಿಷಡ್ವರ್ಗಗಳನ್ನು ಬಿಡುವುದಿಲ್ಲವೋ ಅವರು ಭವಿ. ಮುಂದುವರೆದು ಯಾರು ಜೂಜು, ಬೇಟೆ, ಚದುರಂಗ, ನೆತ್ತ, ಪಗಡೆ, ಸುಮ್ಮನೆ ಅಲೆಯುವುದು ಮುಂತಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೋ ಅಂಥಹವರು ಭವಿ. ಸುರೆ, ಭಂಗಿ, ಮಾಂಸ, ಭವಿಸಂಗ ಇವುಗಳನ್ನು ಬಿಡದಿದ್ದವ ಭವಿ. ಇಂಥವರಿಗೆ ದಾನ ಕೂಡದು ಎಂದು ಹೇಳುತ್ತಾರೆ. ಆದರೆ ಅಲ್ಲಮಪ್ರಭುಗಳು ಭವಿಗೂ ದಾನಕೊಡಿ ಎಂದು ಹೇಳುತ್ತಾರೆ.

ಭವಿಗೆ ಕೊಡಲಾಗದೆಂಬ ಭಕ್ತನ ನುಡಿಯ ಕೇಳಲಾಗದು.
ನಾನು ಭವಿವಿಡಿದು ಭಕ್ತಿಯಿಂದ ಸುಖಿಯಾದೆ ಗುಹೇಶ್ವರಾ!!
(ಅ.ಪ್ರ.ಸಂ: ಸಂಖ್ಯೆ 638)78

ಮದ್ಯಪಾನ, ಮಾಂಸ ತಿನ್ನುವುದು, ಪರಸ್ತ್ರೀ ಸಂಗ ಮುಂತಾದ ದುರ್ಗುಣಗಳು ಇರುವವರಿಗೆ ದಾನ ಸಲ್ಲ ಎಂದು ಅನೇಕ ಶರಣರು ಹೇಳಿದರೆ, ಅಲ್ಲಮಪ್ರಭುಗಳು ಅವನಿಗೂ ದಾನ ಕೊಡಿ, ಅವನನ್ನು ತಿದ್ದಿ, ಅವನನ್ನು ಸರಿದಾರಿಗೆ ತನ್ನಿ ಎಂಬರ್ಥದಲ್ಲಿ ಮಾತನಾಡುತ್ತಾರೆ. ಈ ಮನೋಭೂಮಿಕೆ ಸಮಾಜಕಾರ್ಯ ತತ್ತ್ವಗಳಿಗೆ ಹೊಂದಿಕೊಳ್ಳುತ್ತದೆ ಎಂಬ ಪ್ರೊ. ಶಂಕರ ಪಾಠಕರ ಮಾತು ಸರಿಯಾಗಿಯೇ ಇದೆ. ಏಕೆಂದರೆ ಮೇಲೆ ತಿಳಿಸಿದ ದುರ್ಗುಣಗಳು ಇರುವವರನ್ನು ಸಮಾಜಕಾರ್ಯಕರ್ತರು ಒಪ್ಪಿಕೊಂಡು, ಅವರೊಡನೆ ಸಂಪರ್ಕ ಬೆಳೆಸಿಕೊಂಡು, ಅವರ ಸಮಸ್ಯೆಗಳನ್ನು ಅವರಿಗೆ ತಿಳಿಹೇಳಿ, ಆ ಸಮಸ್ಯೆಗಳಿಂದ ಅವರು ಹೊರಬರಲು ಸಹಾಯಮಾಡುತ್ತಾರೆ. ಹಾಗೆ ಮಾಡುವುದು ವ್ಯಕ್ತಿಗತ ಸಮಾಜಕಾರ್ಯದ ಭಾಗವಾಗುತ್ತದೆ. ಹಾಗಾಗಿ ಅಲ್ಲಮಪ್ರಭುಗಳ ವಚನ ಹೆಚ್ಚು ಅನ್ವಯವಾಗುತ್ತದೆ.79

ಇತರೆ ಶಿವಶರಣರೂ ದಾನದ ವಿವಿಧ ಅಂಶಗಳ ಬಗ್ಗೆ ತಮ್ಮ ಸಾಹಿತ್ಯದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಶರಣರು ದಾನದ ಬಗ್ಗೆಯಲ್ಲದೆ, ತಮ್ಮ ಭಕ್ತಿ ಪಂಥದ ಸಾಹಿತ್ಯದಲ್ಲಿ ವಿನಯ, ಸ್ವ ನಿರ್ಣಯ, ಬಾಂಧವ್ಯ ವೃದ್ಧಿ, ಆಪ್ತ ಸಮಾಲೋಚನೆ ಮುಂತಾದ ವಿಷಯಗಳ ಬಗ್ಗೆ ಹೇಳಿದ್ದಾರೆ ಮತ್ತು ತಮ್ಮ ಬದುಕಿನಲ್ಲಿ ಬಳಸಿ ತೋರಿಸಿದ್ದಾರೆ.80
 
ದಾಸಸಾಹಿತ್ಯ
ಕರ್ನಾಟಕ ಭಕ್ತಿಪಂಥದ ಇನ್ನೊಂದು ವಾಹಿನಿ ದಾಸ ಸಾಹಿತ್ಯ. ಇದು ವೈಷ್ಣವ ತತ್ತ್ವಾದರ್ಶಗಳನ್ನು ಅವಲಂಬಿಸಿದೆ. ಹರಿದಾಸರ ಗುರುಗಳು ಶ್ರೀ ಮಧ್ವಾಚಾರ್ಯರು. ದಾಸರು ತಮ್ಮ ಸಾಹಿತ್ಯದಲ್ಲಿ ದ್ವೈತ ಮತ ತತ್ತ್ವಗಳನ್ನು ಪ್ರತಿಪಾದಿಸಿದ್ದಾರೆ. ದಾಸರು ಮೂಲಭೂತವಾಗಿ ಭಕ್ತಿ ಪಂಥದ ಪ್ರಚಾರಕರಾದರೂ, ಅವರಿಗೆ ಸಾಮಾಜಿಕ ಕಳಕಳಿ ಇದೆ. ತಮ್ಮ ಸಾಹಿತ್ಯದಲ್ಲಿ ಲೋಕನೀತಿಯ ಮೂಲಕ ವ್ಯಕ್ತಿಗಳನ್ನು ಹಾಗೂ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ.

ದ್ವೈತ ಮತದ ಸಾರಾಂಶ ಹೀಗಿದೆ. ದಾಸರು ಭಗವಂತನನ್ನು ಹರಿ ಎಂದು ಕರೆದಿದ್ದಾರೆ. ಹರಿಯೇ ಸರ್ವೋತ್ತಮ. ಉಳಿದ ದೇವತೆಗಳು ಅವನ ಅನುಚರರು. ಹರಿಗೆ ಅನಂತ ಹೆಸರುಗಳು. ವಿಷ್ಣುವೆಂದರೆ ಅವನೇ. ದಶಾವತಾರದ ಹತ್ತು ಹೆಸರುಗಳು, ವಿಷ್ಣುಸಹಸ್ರನಾಮದ ಸಾವಿರ ಹೆಸರುಗಳು, ನಾರಾಯಣ, ಅನಂತಶಯನ, ಕೃಷ್ಣ, ವೆಂಕಟೇಶ್ವರ, ವಿಠಲ ಇತ್ಯಾದಿ ರೂಪಗಳೂ ಅವನ ರೂಪಗಳೆ, ಶ್ರೀಹರಿ ಸರ್ವವ್ಯಾಪಿ, ಸರ್ವಶಕ್ತ, ಸರ್ವಜ್ಞ, ಸೃಷ್ಟಿ, ಸ್ಥಿತಿ, ಲಯ, ನಿಯಮ, ಜ್ಞಾನ, ಅಜ್ಞಾನ, ಬಂಧ ಹಾಗೂ ಮೋಕ್ಷ ಎಂಬ ಎಂಟು ಮಹಾಕಾರ್ಯಗಳ ಕಾರಣಕರ್ತ. ಶ್ರೀಹರಿಯ ಹೆಂಡತಿಯೇ ಲಕ್ಷ್ಮೀದೇವಿ. ಲಕ್ಷ್ಮಿಯು ಭಗವಂತನ ಕ್ರಿಯಾಚೈತನ್ಯ, ಜಗತ್ತು ಸತ್ಯ, ಮಾಯೆಯಲ್ಲ. ಜೀವ ಎಂದರೆ ಜೀವನದ ಸುಖ ದುಃಖಗಳನ್ನು ಅನುಭವಿಸುತ್ತಾ ಬಂಧನಕ್ಕೆ ಒಳಗಾದವನು ಮತ್ತು ಸಾಧನೆಯಿಂದ ಮುಕ್ತಿಗೆ ಅರ್ಹನೂ ಆದವನು. ಪರಮಾತ್ಮ, ಜೀವ, ಜಡ ಎಂಬ ಮೂರು ಮೂಲಾಂಶಗಳಿದ್ದು ಅವುಗಳಲ್ಲಿ ಐದು ಭೇದ (ವ್ಯತ್ಯಾಸ)ಗಳಿವೆ. ಜೀವ-ಈಶ ಭೇದ, ಜೀವ-ಜೀವ ಭೇದ, ಜೀವ-ಜಡ ಭೇದ, ಜಡ-ಜಡ ಭೇದ  ಮತ್ತು ಜಡ-ಈಶ ಭೇದ, ಇವೇ ಆ ಐದು ವ್ಯತ್ಯಾಸಗಳು.

ಬದುಕಿನ ಮಹೋನ್ನತ ಪುರುಷಾರ್ಥ ಮುಕ್ತಿ. ಮುಕ್ತಿಯಲ್ಲಿ ಜೀವಿ ಭಗವಂತನಲ್ಲಿ ಐಕ್ಯನಾಗುವುದಿಲ್ಲ. ಜೀವನು ತನ್ನ ಸ್ವಭಾವ ಜ್ಞಾನವನ್ನು ಪಡೆಯುತ್ತಾನೆ. ಎಷ್ಟೂ ಕ್ಲೇಶವಿಲ್ಲದ ಸ್ವಸ್ವರೂಪ ಸುಖಾನುಭವವೇ ಮುಕ್ತಿ. ಇದನ್ನು ಸಂಪಾದಿಸಲು ಸಾಧನೆ ಬೇಕು. ಭಗವಂತನ ಅನುಗ್ರಹ ಬೇಕು. ಸಾಧನೆ ಮಾಡಲು ಮಾನವ ಜನ್ಮ ಬೇಕು. ಮನುಷ್ಯನ ಪುರುಷಾರ್ಥಗಳು ನಾಲ್ಕು: ಧರ್ಮ, ಅರ್ಥ, ಕಾಮ, ಮೋಕ್ಷ (ಮುಕ್ತಿ). ಜೀವಿಯ ಪ್ರಯಾಣ ಧರ್ಮದಿಂದ ಪ್ರಾರಂಭಗೊಂಡು, ಅರ್ಥಕಾಮಗಳನ್ನು ಪೂರೈಸಿಕೊಂಡು ಕೊನೆಗೆ ಮೋಕ್ಷದಲ್ಲಿ ಕೊನೆಗೊಳ್ಳಬೇಕು.  ಇದು ಸನಾತನ ಧರ್ಮದ ಜೀವನ ವಿಧಾನ.

ಯಾವುದು ಕಾಲ ಮತ್ತು ದೇಶದ ಸಂದರ್ಭಗಳಲ್ಲಿ ಧಾರಣೆಗೆ ಯೋಗ್ಯವಾದುದೊ ಅದು ಧರ್ಮ. ಆತ್ಮದ ಹಿತ ಮತ್ತು ಲೋಕ ಕಲ್ಯಾಣ ಧರ್ಮದ ಉದ್ದೇಶ. ವ್ಯಷ್ಟಿ ಮತ್ತು ಸಮಷ್ಟಿಹಿತವನ್ನು ಕಾಪಾಡುವುದು ಧರ್ಮ. ನಿತ್ಯ ಧರ್ಮ, ಸ್ವಧರ್ಮ, ವರ್ಣಧರ್ಮ (ಸ್ವಭಾವ ಧರ್ಮ), ಆಶ್ರಮ ಧರ್ಮ, ನಿಮಿತ್ತ ಧರ್ಮ, ಆಪದ್ದರ್ಮ ಮತ್ತು ಯುಗಧರ್ಮ ಎಂದು ಧರ್ಮದಲ್ಲಿ ಐಳು ಬಗೆ, ಇದು ದೈನಂದಿನ ಚಟುವಟಿಕೆಗಳ ಜೊತೆಗೆ ನೈತಿಕ ಸಂಹಿತೆಗೂ ಸಂಬಂಧಿಸಿದೆ. ವ್ಯಕ್ತಿ, ಸಮುದಾಯ, ಸಮಾಜ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಧರ್ಮ ಅನ್ವಯವಾಗುತ್ತದೆ. ಧರ್ಮ ಬದುಕಿನ ಅವಿಭಾಜ್ಯ ಅಂಗ ಆಗಬೇಕು. ಧರ್ಮದಿಂದ, ನ್ಯಾಯ ಮಾರ್ಗದಿಂದ ಧನ ಸಂಪಾದನೆ ಆಗಬೇಕು. ಬಂದ ಆದಾಯದಿಂದ ಕಾಮನೆಗಳ ಪೂರೈಕೆಯಾಗಬೇಕು. ಧರ್ಮಕ್ಕೆ ವಿರುದ್ಧವಲ್ಲದ ಕಾಮನೆಗಳನ್ನು ಮಿತವಾಗಿ, ಹಿತವಾಗಿ ವ್ಯಕ್ತಿ ಪಡೆಯಬೇಕು. ಆನಂತರ ಇವನ್ನೆಲ್ಲಾ ತ್ಯಜಿಸಿ ಸಾಧನೆಗೈದು, ಮುಕ್ತಿಯ ಮಾರ್ಗದಲ್ಲಿ ಮುನ್ನಡೆಯಬೆಕು.

ಸಾಧನಾ ಪಥದಲ್ಲಿ ನಾಲ್ಕು ಹಂತಗಳು; ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ತ ಮತ್ತು ಸನ್ಯಾಸ. ಬ್ರಹ್ಮಚರ್ಯದಲ್ಲಿ ಇಂದ್ರಿಯನಿಗ್ರಹ, ಜ್ಞಾನಾರ್ಜನೆ ಕರ್ತವ್ಯಗಳು. ಸುಸಂಸ್ಕೃತ ಸ್ತ್ರೀಯೊಡನೆ ವಿವಾಹ, ಒಂದು ವೃತ್ತಿಯಲ್ಲಿ ತೊಡಗಿಸಿಕೊಳ್ಳುವುದು, ಪ್ರಾಮಾಣಿಕವಾಗಿ ಕೆಲಸ ಮಾಡುವುದು, ಧನಾರ್ಜನೆ, ಸಂಸಾರ ನಿರ್ವಹಣೆ, ಇತರೆ ಆಶ್ರಮಗಳ ರಕ್ಷಣೆ, ದಾನ ಮುಂತಾದವು ಗೃಹಸ್ಥನ ಕರ್ತವ್ಯಗಳು. ಮುಂದಿನ ವಾನಪ್ರಸ್ಥಾಶ್ರಮದಲ್ಲಿ ಅಧ್ಯಯನ, ಚಿಂತನ, ಧ್ಯಾನ, ಕಿರಿಯರಿಗೆ, ಆಕಾಂಕ್ಷಿಗಳಿಗೆ ಮಾರ್ಗದರ್ಶನ ವಾನಪ್ರಸ್ಥಾಶ್ರಮಿಯ ಕರ್ತವ್ಯಗಳು. ಆಶ್ರಮಗಳಲ್ಲಿ ಕೊನೆಯದು ಸನ್ಯಾಸ. ಎಲ್ಲವನ್ನೂ ತ್ಯಜಿಸಿ, ಮೋಕ್ಷ ಸಾಧನೆಗೆ ಪ್ರಯತ್ನಿಸುವುದು ಸನ್ಯಾಸಿಯ ಕರ್ತವ್ಯ. ಅಭಿಲಾಷೆ ಇರುವವರಿಗೆ ಮಾರ್ಗದರ್ಶನವೂ ಸನ್ಯಾಸಿಯ ಕೆಲಸ.

ಸಾಧನೆಗೆ ನಾಲ್ಕು ಮಾರ್ಗಗಳು; ಕರ್ಮಯೋಗ, ಜ್ಞಾನಯೋಗ, ರಾಜಯೋಗ ಮತ್ತು ಭಕ್ತಿಯೋಗ, ಕರ್ಮಯೋಗದಲ್ಲಿ ಕೆಲಸಕ್ಕೆ ಪ್ರಧಾನ್ಯತೆ. ಕರ್ಮಯೋಗವೆಂದರೆ ಜಗತ್ತಿನ ಕರ್ಮಗಳನ್ನು ಕುಶಲತೆಯಿಂದ, ಯೋಗಯುಕ್ತವಾಗಿ ಮಾಡುವುದು. ಪ್ರಾಮಾಣಿಕವಾಗಿ ಮಾಡುವುದು. ನಿಷ್ಕಾಮ ಭಾವನೆಯಿಂದ ಮಾಡುವುದು, ಸ್ವಾರ್ಥ ತ್ಯಾಗಮಾಡಿ ಕೆಲಸಮಾಡುವುದು. ಕೆಲಸ ಮಾಡಲು ನಾನು ಅಧಿಕಾರಿ- ಆದರೆ ಅದರ ಫಲಕ್ಕಾಗಿ ಅಲ್ಲ ಎಂದು ತಿಳಿದು ಮಾಡುವುದು. ಕರ್ಮಣ್ಯೇವಾಧಿಕಾರಸ್ಥೆ ಎಂದು ತಿಳಿದು ಮಾಡುವುದು. ಬಂದ ಫಲವನ್ನು ವಸುಧೈವ ಕುಟುಂಬಕಮ್ ಎಂದು ಹಂಚಿಕೊಂಡು ಬಾಳುವುದು. `ಇದನ್ನು ನಾನು ಮಾಡಿದೆ ಎಂದು ಅಹಂಕಾರ ಪಡದಿರುವುದು. ಇದು ಕರ್ಮಯೋಗದ ತಿರುಳು.

ಜ್ಞಾನಯೋಗದಲ್ಲಿ ಜ್ಞಾನಕ್ಕೆ ಆದ್ಯತೆ. ಸಾಧಕನು ಭಾವನಾಜೀವಿಯಾಗದೆ, ಭಯ, ದಾಕ್ಷಿಣ್ಯ ಇತ್ಯಾದಿಗಳನ್ನು ತೊರೆದು, ದೃಢ ಮನಸ್ಸು, ಚುರುಕು ಬುದ್ಧಿ, ಆಳವಾದ ಶ್ರದ್ಧೆ, ಅಚಲವಾದ ಆತ್ಮ ವಿಶ್ವಾಸಗಳನ್ನು ರೂಢಿಸಿಕೊಂಡು, ಈಶ್ವರ, ಜೀವ, ಜಡ, ಪಂಚ ಭೂತಗಳು, ಭಗವಂತನ ರೂಪಗಳು, ಹೆಸರುಗಳು, ಶಕ್ತಿ ಸಾಮಥ್ರ್ಯಗಳು, ಜೀವರ ವೈವಿಧ್ಯತೆ (ಸಾತ್ಮಿಕ, ರಾಜಸ, ತಾಮಸ), ಇತಿಮಿತಿಗಳು, ಸಾಧನಾ ಪದ್ಧತಿಗಳು ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ಸಾಧನೆಗೆ ಅಂತಹ ಜ್ಞಾನವನ್ನು ಉಪಯೋಗಿಸುವುದು. ಜ್ಞಾನ ಯೋಗದಲ್ಲಿ ಶ್ರವಣ, ಮನನ ಮತ್ತು ನಿಧಿಧ್ಯಾಪನ ಎಂದು ಮೂರು ಹಂತಗಳು, ಸಾಧನೆಯ ಅಂಶಗಳು. ಇವುಗಳ ತಿಳಿವನ್ನು ಪಡೆದು ಸಾಧನೆಯಲ್ಲಿ ತೊಡಗುವುದು ಜ್ಞಾನಯೋಗದ ಸಾರ. 

ಯೋಗಪಥಗಳಲ್ಲಿ ಇನ್ನೊಂದು ರಾಜಯೋಗ, ಮನಸ್ಸಿನ ಏಕಾಗ್ರತೆಯ ಮೂಲಕ ಯಾರು ಬೇಕಾದರೂ ಸಾಕ್ಷಾತ್ಕಾರವನ್ನು ಪಡೆಯಬಹುದು. ರಾಜಯೋಗ ಶಾರೀರಿಕ-ಮಾನಸಿಕ ದೃಢತೆ, ಪರಿಶುದ್ಧತೆ, ಉಸಿರಾಟದ ನಿಯಂತ್ರಣ, ಏಕಾಗ್ರತೆ, ಧ್ಯಾನ ಇತ್ಯಾದಿ ಅಂಶಗಳ ಮೇಲೆ ಈ ಯೋಗ ಪದ್ಧತಿ ರೂಪಗೊಂಡಿದೆ.  ಇದಕ್ಕೆ ಇನ್ನೊಂದು ಹೆಸರು ಅಷ್ಟಾಂಗಯೋಗ. ಯಮ, ನಿಯಮ ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಎಂದು ಎಂಟು ಹಂತಗಳು. ಇವುಗಳನ್ನು ತಿಳಿದುಕೊಂಡು, ಗುರುಮುಖೇನ ಕಲಿತು, ಸಾಧನೆಗೈಯುವುದು ರಾಜಯೋಗದ ಸಾರಾಂಶ.  

ಯೋಗಮಾರ್ಗಗಳಲ್ಲಿ ಕೊನೆಯದು ಭಕ್ತಿಯೋಗ, ಭಕ್ತಿ ಎಂದರೆ ಪ್ರೀತಿ, ಭಗವಂತನನ್ನು ಪ್ರೀತಿಸುವುದು. ಬದುಕಿನ ಹಾಗೂ ದೈನಂದಿನ ಸಕಲ ಕಾರ್ಯಗಳನ್ನು ಭಗವಂತನ ಸೇನೆ ಎಂದು ಮಾಡಿ ಪ್ರೀತಿಯ ಮೂಲಕವೇ ಅವನನು ಹೊಂದುವುದು. ಭಕ್ತಿಯೋಗವು ಪ್ರೀತಿಯಿಂದಲೇ ಪ್ರಾರಂಭವಾಗಿ, ಪ್ರೀತಿಯಿಂದ ಮುಂದುವರೆದು ಪ್ರೀತಿಯಿಂದಲೇ ಪರಿಪೂರ್ಣತೆಯನ್ನು ಕಾಣುವ ಯೋಗ ಸಾಧನ.

ಇಲ್ಲಿ ಸಾಧಕನು ರೂಢಿಸಿಕೊಳ್ಳಬೇಕಾದ ಗುಣಗಳು ಏಳು; ವಿವೇಕ, ವಿಮೋಕ, ಅಭ್ಯಾಸ, ಕ್ರಿಯೆ, ಕಲ್ಯಾಣ, ಅನವಸಾದ ಮತ್ತು ಅನುದ್ಧರ್ಷ. ವಿವೇಕವೆಂದರೆ ಯುಕ್ತಾಯಕ್ತ ವಿವೇಕ. ಆಚಾರ ವಿಚಾರಗಳಿಗೆ ಸಂಬಂಧಿಸಿದ್ದು. ವಿಮೋಕವೆಂದರೆ ಇಂದ್ರಿಯ ನಿಗ್ರಹ, ಅರಿಷಡ್ವರ್ಗಗಳ ನಿಗ್ರಹ. ಅಭ್ಯಾಸವೆಂದರೆ ಭಗವಂತನ ಮೇಲೆ ಅಚಲ ಪ್ರೀತಿ. ಕಲ್ಯಾಣವೆಂದರೆ ತ್ರಿಕರಣ ಶುದ್ಧಿ (ಶಾರೀರಿಕ, ಮಾನಸಿಕ, ವಾಚಿಕ ಶುದ್ಧಿ), ಕಲ್ಯಾಣದಲ್ಲಿ ಸತ್ಯ, ಪ್ರಾಮಾಣಿಕತೆ, ದಯೆ, ಅಹಿಂಸೆ, ದಾನ, ಸೇರಿವೆ. ಅನವಸಾದ ಎಂದರೆ ಅಲ್ಪತೃಪ್ತಿ. ಅನುದ್ಧಕ್ರ್ಷವೆಂದರೆ ಅತಿ ಸಂತೋಷ ಪಡದೆ ಇರುವುದು. ಇದು ಚಂಚಲತೆ ತರುತ್ತದೆ ಎಂಬ ಕಾರಣಕ್ಕಾಗಿ. ಭಕ್ತಿಯೋಗದ ಸಾಧಕ ತನ್ನ ಜೀವನದಲ್ಲಿ ಇವನ್ನು ಅಳವಡಿಸಿಕೊಂಡು ಸಾಧನೆಗೆ ಅರ್ಹನಾಗುತ್ತಾನೆ. 

ಭಕ್ತರಲ್ಲಿ ನಾಲ್ಕು ವಿಧ; ಆರ್ತ (ಕಷ್ಟ ಪರಿಹಾರಕ್ಕಾಗಿ ದೇವರನ್ನು ಮೊರೆ ಹೋಗುವವರು), ಅರ್ಥಾರ್ಥಿ (ಸುಖ ಬಯಸಿ ದೇವರು ಪ್ರಾರ್ಥಿಸುವವರು), ಜಿಜ್ಞಾಸು (ದೇವರ ಬಗ್ಗೆ ತಿಳಿಯಲು ಉತ್ಸುಕರಾಗಿರುವವರು) ಮತ್ತು ಜ್ಞಾನಿ (ಭಗವಂತನ ಸಾಕ್ಷಾತ್ಕಾರವಾಗಿ ಜೀವನ್ಮುಕ್ತರಾದವರು). ಭಕ್ತಿಯಲ್ಲಿ ಎರಡು ವಿಧ; ಅಪರಾ ಮತ್ತು ಪರಾ, ಅಪರಾ (ಗೌಣ) ಭಕ್ತಿಯಲ್ಲಿ ಮೂರು ಹಂತ; ಬಾಹ್ಯಭಕ್ತಿ, ಅನನ್ಯ ಭಕ್ತಿ ಮತ್ತು ಏಕಾಂತ ಭಕ್ತಿ. ಪೂಜೆ, ತೀರ್ಥಯಾತ್ರೆ ಬಾಹ್ಯ ಭಕ್ತಿ. ದೇವರನ್ನು ನಿರಂತರವಾಗಿ ಧ್ಯಾನಿಸುವುದು ಅನನ್ಯಭಕ್ತಿ. ದೇವರು ಬಿಟ್ಟು ಬೇರೇನೂ ಬೇಡ ಎಂದು ಅವನನ್ನು ಚಿಂತಿಸುವುದು ಏಕಾಂತಭಕ್ತಿ. ಸಾಧನೆಯಿಂದ ಈ ಹಂತಗಳನ್ನು ದಾಟಬೇಕು. ಮುಂದಿನ ಹಂತವೇ ಪರಾ ಭಕ್ತಿ.    

ಪರಾ ಭಕ್ತಿಯಲ್ಲಿ ಒಂಬತ್ತು ಬಗೆ; ಶ್ರವಣ ಭಕ್ತಿ, ಕೀರ್ತನ ಭಕ್ತಿ, ಸ್ಮರಣಭಕ್ತಿ, ಪಾದಸೇವನ ಭಕ್ತಿ, ಅರ್ಚನ ಭಕ್ತಿ, ವಂದನ ಭಕ್ತಿ, ದಾಸ್ಯ ಭಕ್ತಿ, ಸಖ್ಯ ಭಕ್ತಿ ಮತ್ತು ಆತ್ಮನಿವೇದನ ಭಕ್ತಿ. ಭಗವಂತನ ಗುಣಗಳ ಬಗ್ಗೆ ಪುರಾಣ, ಕೀರ್ತನಗಳ ಮೂಲಕ ಕೇಳುವುದು ಶ್ರವಣಭಕ್ತಿ. ಕೀರ್ತನೆಗಳ ಮೂಲಕ ಅವನ ಗುಣಗಾನ ಮಾಡುವುದು ಕೀರ್ತನ ಭಕ್ತಿ. ಅವನ ಗುಣಗಳನ್ನು ನೆನೆಸುವುದು ಸ್ಮರಣೆ. ನಿರ್ಮಲ ಹೃದದಿಂದ ದೇವರ ಗುರುಹಿರಿಯರ ಪಾದವನ್ನು ಸೇವಿಸುವುದು ಪಾದ ಸೇವನ. ಎಲೆ, ಹೂವು, ಹಣ್ಣು, ನೀರು ಇತ್ಯಾದಿಗಳಿಂದ ಪೂಜಿಸುವುದೇ ಅರ್ಚನ. ದೇವರಿಗೆ ಕಾಯಾ, ವಾಚಾ, ಮನಸಾ ನಮಸ್ಕರಿಸುವುದೇ ವಂದನ. ದೇವರಲ್ಲಿ-ಗುರುಹಿರಿಯರಲ್ಲಿ ಸ್ವಾಮಿ ಸೇವಕ ಭಾವ ತಾಳುವುದು ದಾಸ್ಯ. ದೇವರನ್ನು ಗೆಳೆಯನಂತೆ ಕಂಡು ಆರಾಧಿಸುವುದು ಸಖ್ಯ. ದೇವರಿಗೆ ತನ್ನನ್ನು ತಾನು ಅರ್ಪಿಸಿಕೊಳ್ಳುವುದು ಆತ್ಮ ನಿವೇದನ. ಹೀಗೆ ಭಕ್ತನು ಸಾಧನೆ ಮಾಡುತ್ತಾ ಕೊನೆಗೆ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಾನೆ. ಭಕ್ತನಲ್ಲಿ ಐದು ಭಾವಗಳು; ಶಾಂತಭಾವ, ದಾಸ್ಯಭಾವ, ಸಖ್ಯಭಾವ, ವಾತ್ಸಲ್ಯ ಭಾವ ಮತ್ತು ಮಧುರಭಾವ. ಇವು ನವವಿಧ ಭಕ್ತಿಯಲ್ಲಿ ಸೇರಿವೆ. 

ಯೋಗಮಾರ್ಗಗಳು ನಾಲ್ಕಾದರೂ ಒಂದಕ್ಕೊಂದು ಸಂಬಂಧಿಸಿವೆ. ಅವುಗಳ ಸಮನ್ವಯ ಮಾರ್ಗವನ್ನು ದಾಸರು ಅನುಸರಿಸಿದ್ದಾರೆ. ಅದಕ್ಕಾಗಿ ದಾಸರು ಹೇಳುತ್ತಾರೆ, ಸಾಧನೆಗೆ ಜ್ಞಾನ, ಭಕ್ತಿ ವೈರಾಗ್ಯಗಳು ಬೇಕೆಂದು. ಜ್ಞಾನ ಭಕ್ತಿಗಳ ಜೊತೆಗೆ ವೈರಾಗ್ಯ ಬೇಕು ಸಾಧಕನಿಗೆ. ಜೀವಿಗಳಲ್ಲಿ ಮೂರು ವಿಧ. ಸಾತ್ವಿಕರು ರಾಜಸರು ಮತ್ತು ತಾಮಸರು. ಸಾತ್ವಿಕರು ಸೌಮ್ಯ ಸ್ವಭಾವದವರು. ಜ್ಞಾನಾರ್ಜನೆಗೆ, ಇಂದ್ರಿಯ ನಿಗ್ರಹಕ್ಕೆ, ದಾನಾದಿ ಧಾರ್ಮಿಕ ಕ್ರಿಯೆಗಳಿಗೆ ಪ್ರಾಶಸ್ತ್ಯ ಕೊಡುತ್ತಾರೆ. ರಾಜಸರು ಆರಂಭಶೂರರು. ನಿಷಿದ್ಧ ಕ್ರಿಯೆಗಳಲ್ಲಿ, ವಿಷಯ ಸುಖದಲ್ಲಿ ಆಸಕ್ತಿ. ಇವರಿಗೆ ಆಸೆ ಹೆಚ್ಚು. ಧನ ಸಂಪಾದನೆಗೆ ಅನ್ಯಮಾರ್ಗ ಹಿಡಿಯಬಲ್ಲರು. ತಾಮಸರು ಅಶಿಸ್ತಿನ ಗುಂಪಿಗೆ ಸೇರಿದವರು. ಹಣ ಮಾಡುವುದಲ್ಲಿ ಅತಿ ಆಸೆ ಹೆಚ್ಚು. ಧನ ಸಂಪಾದನೆಗೆ ಅನ್ಯ ಮಾರ್ಗ ಹಿಡಿಯಬಲ್ಲರು. ನಾಸ್ತಿಕತೆ, ಅಶಿಸ್ತು, ಕ್ರೌರ್ಯ, ನಿದ್ರೆ, ಆಚಾರಲೋಪ, ಸೋಮಾರಿತನ ಇವುಗಳಲ್ಲಿ ಆಸಕ್ತಿ. ತಮಸ್ಸು ಕಾಮ ಪ್ರಧಾನ. ರಜಸ್ಸು ಅರ್ಥ ಪ್ರಧಾನ. ಸತ್ತ್ವ ಧರ್ಮ ಪ್ರಧಾನ. ತಾಮಸನು ರಾಜಸನಾಗಲು, ರಾಜಸನು ಸಾತ್ತ್ವಿಕನಾಗಲು, ಸಾತ್ತ್ವಿಕ ಸ್ಥಿತಪ್ರಜ್ಞನಾಗಲು ಸಾಧ್ಯವಿದೆ. ಅದಕ್ಕೆ ಸಾಧನೆ ಬೇಕು. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ತ್ಯಜಿಸಿ ಸಾಧನೆಗೆ ತೊಡಗಬೇಕು. ಸ್ಥಿತಪ್ರಜ್ಞ ಎಂದರೆ ಸ್ಥಿರ ಬುದ್ಧಿ ಇರುವವ. ದೃಢ ನಿರ್ಣಯವುಳ್ಳ, ಜೀವನದ ಆಗುಹೋಗುಗಳನ್ನು ಸಮಭಾವದಿಂದ, ನಿರ್ವಿಕಾರವಾಗಿ ಸ್ವೀಕರಿಸುವವನು. ಸುಖ-ದುಃಖ, ಸೋಲು-ಗೆಲುವು, ಲಾಭ-ಅಲಾಭ ಮುಂತಾದವುಗಳನ್ನು ಸಮಾನವಾಗಿ ಕಾಣುವವನು. ಭಗವಂತನ ಬಗ್ಗೆ ಭಕ್ತಿ ಉಳ್ಳವರು. ದಾಸರು ಸ್ಥಿತಪ್ರಜ್ಞರಾಗಿದ್ದರು. ದಾಸರು ತೋರಿಸಿದ ಭಕ್ತಿಮಾರ್ಗ ಇದು.  
 
ಅಡಿಟಿಪ್ಪಣಿಗಳು
71. ಎದುರ್ಕಳ ಶಂಕರನಾರಾಯಣ ಭಟ್-`ಹಿಂದೂ ಧರ್ಮದ ಪರಿಚಯ, ಶ್ರೀರಾಮಕೃಷ್ಣ ಪ್ರಕಾಶನ, ಭಾಗಮಂಡಲ, ಕೊಡಗು ಜಿಲ್ಲೆ, 1982, ಪು.150. 

72. ಡಾ.ಎಚ್.ಎಂ.ಮರುಳಸಿದ್ಧಯ್ಯ - ಶರಣರು ನೀಡಿದ ಬೆಳಕು, ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು, 2011, ಪು 88.90.

73. ವಿವರಗಳಿಗೆ ನೋಡಿ. 1. ಡಾ.ಸಿ.ಆರ್.ಗೋಪಾಲ್-`ಸಮಾಜಕಾರ್ಯ ಸಿದ್ಧಾಂತ-ಶರಣರ ಮತ್ತು ದಾಸರ ಜೀವನಶೈಲಿ - ಒಂದು ತೌಲನಿಕ ಚಿಂತನೆ, ಅಖಿಲ ಭಾರತ ಶರಣಸಾಹಿತ್ಯ ಪರಿಷತ್ತು, ಜಗದ್ಗುರು ಶ್ರೀ ಶಿವರಾತ್ರೀಶ್ವರ ವೃತ್ತ, 1ನೇ ಮುಖ್ಯರಸ್ತೆ, 8ನೇ ವಿಭಾಗ, ಜಯನಗರ, ಬೆಂಗಳೂರು - 70. 2014, ಪು12-22, 2. ಪ್ರೊ.ಎಚ್.ಎಂ.ಮರುಳಸಿದ್ಧಯ್ಯ (ಸಂ)-ಭಕ್ತಿ ಪಂಥದಲ್ಲಿ ಸಮಾಜಕಾರ್ಯದ ಬೇರುಗಳು, ಪ್ರಗತಿ ಗ್ರಾಫಿಕ್ಸ್, 119, 3ನೇ ತಿರುವು, 8ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-104. 2009.

74. ಡಾ.ಎಂ.ಎಂ.ಕಲಬುರ್ಗಿ (ಸಂ)-ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ; ಸಂಪುಟ 1. `ಬಸವಣ್ಣನವರ ವಚನ ಸಂಪುಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು. 1993. ಅನುಕ್ರಮವಾಗಿ ವಚನ ಮತ್ತು ಪುಟಗಳ ಸಂಖ್ಯೆ: 199-50, 206-52, 233-58, 234-58, 242-61, 439-106, 622-156, 1214-336.

75. ಡಾ.ಬಿ.ವ್ಹಿ.ಮಲ್ಲಾಪುರ (ಸಂ)-ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ-ಸಂಪುಟ 3-`ಚನ್ನಬಸವಣ್ಣನವರ ವಚನ ಸಂಪುಟ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, 1993. ವಚನ ಸಂಖ್ಯೆ 993 ಪುಟ 325-327.
76. ಅದೇ ಪುಟ 18. 

77. ಡಾ.ಎಸ್.ವಿದ್ಯಾಶಂಕರ (ಸಂ) ಸಮಗ್ರ ವಚನಸಾಹಿತ್ಯ ಜನಪ್ರಿಯ ಅವೃತ್ತಿ-ಸಂಪುಟ 4-ಸಿದ್ಧರಾಮೇಶ್ವರ ವಚನ ಸಂಪುಟ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು. 1993. ವಚನ ಸಂಖ್ಯೆ 1391, ಪುಟ 383.

78. ಡಾ. ಎಸ್.ವಿದ್ಯಾಶಂಕರ (ಸಂ)-ಸಮಗ್ರ ವಚನ ಸಂಪುಟ ಜನಪ್ರಿಯ ಆವೃತ್ತಿ-ಸಂಪುಟ 15; ವಚನ ಪರಿಭಾಷಾಕೋಶ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, 1993, ಪು 155-158.

79. 1. ಡಾ. ಬಿ.ವ್ಹಿ.ಮಲ್ಲಾಪುರ (ಸಂ)-ಸಮಗ್ರ ವಚನ ಸಂಪುಟ ಜನಪ್ರಿಯ ಆವೃತ್ತಿ; ಸಂಪುಟ 2-ಅಲ್ಲಮ ಪ್ರಭುದೇವರ ವಚನ ಸಂಪುಟ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು. 1993, ವಚನ ಸಂಖ್ಯೆ 638 ಪು 172. 2. ಪ್ರೊ.ಶಂಕರ ಪಾಠಕರ ಲೇಖನ- ಭಕ್ತಿ ಪಂಥದಲ್ಲಿ ಸಮಾಜಕಾರ್ಯದ ಬೇರುಗಳು, ಪು 85.
​
80. ವಿವರಗಳಿಗೆ ನೋಡಿ - ಡಾ.ಎಚ್.ಎಂ. ಮರುಳಸಿದ್ಧಯ್ಯ (ಸಂ)- ಭಕ್ತಿ ಪಂಥದಲ್ಲಿ ಸಮಾಜಕಾರ್ಯದ ಬೇರುಗಳು, ಪ್ರಗತಿ ಗ್ರಾಫಿಕ್ಸ್, 119, 3ನೇ ತಿರುವು, 8ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-104, 2009. ಇದರಲ್ಲಿ ಲೇಖನ ಪ್ರೊ.ಶಂಕರ ಪಾಠಕ-ಸಮಾಜಕಲ್ಯಾಣ ಪರಿಕಲ್ಪನೆ - ಪರಂಪರೆ ಮತ್ತು ಭಕ್ತಿಪಂಥದ ಹಿನ್ನೆಲೆಯಲ್ಲಿ, ಪು 73-97.
 
...............................ಮುಂದುವರೆಯುತ್ತದೆ............................... 

0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)