ಪದ್ಮಾ ಸುಬ್ಬಯ್ಯ, ಪು. 194, ಬೆಲೆ : 130, ನಿರುತ ಪಬ್ಲಿಕೇಷನ್ಸ್ ಮನುಷ್ಯನಾಗಿ ಹುಟ್ಟಿದ ಮೇಲೆ ಭೂಮಿಯ ಋಣವನ್ನು, ಸಮಾಜದ ಋಣವನ್ನು ನಾವೆಲ್ಲರೂ ಯಾವುದಾದರೊಂದು ರೀತಿಯಲ್ಲಿ ತೀರಿಸಲೇಬೇಕು. ಸುಮ್ಮನೆ ಸುತ್ತಮುತ್ತ ಕಣ್ಣು ಹಾಯಿಸಿದರೆ ಅದಕ್ಕೆ ಅನುವು ಮಾಡಿಕೊಡುವ ಎಷ್ಟೋ ಸಂಗತಿಗಳು ಕೈಬೀಸಿ ಕರೆಯುತ್ತವೆ. ಇದರಲ್ಲಿ ದತ್ತಕವೂ ಒಂದೆನ್ನುವುದನ್ನು ಹೇಳಬೇಕಿಲ್ಲ. ‘ಮಾತೃಛಾಯಾ' ನನಗೆ ಇಂಥದೊಂದು ಅವಕಾಶವನ್ನು ಒದಗಿಸಿತು. ಅನಾಥ ಮಕ್ಕಳನ್ನು ಪಾಲಿಸುವುದು, ದತ್ತು ಕೊಡುವುದು, ಫಾಸ್ಟರ್ ಕೇರ್ ಗೆ ಒಪ್ಪಿಸುವುದು ಮುಂತಾದ ಹತ್ತಾರು ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವ ‘ಮಾತೃಛಾಯಾ'ದಲ್ಲಿ ಕೆಲಸ ಮಾಡಲು ಸೇರಿದ ಮೇಲೆ ನನಗೆ ಹೊಸದೊಂದು ಲೋಕವೇ ತೆರೆದುಕೊಂಡಿತು. ದಶಕಗಳ ಕಾಲ ನಾನು ಅದರಲ್ಲಿ ತನುಮನಗಳನ್ನು ಒಪ್ಪಿಸಿಕೊಂಡೆ. ಮಕ್ಕಳನ್ನು ದತ್ತು ಕೊಡುವುದಕ್ಕೆ ಅಣಿಮಾಡಿ, ಅವು `ಮನೆ' ಸೇರುವಂತೆ ಮಾಡುವ ಕೆಲಸದಲ್ಲಿ ಸಿಗುವ ಸಂತೋಷ, ಧನ್ಯತೆ ಎಲ್ಲವನ್ನೂ ಮನಃಪೂರ್ತಿ ಅನುಭವಿಸಿದೆ. ಇದಕ್ಕಾಗಿ `ಮಾತೃಛಾಯಾ'ಗೆ, ಕೆನರಾ ಬ್ಯಾಂಕ್ ರಿಲೀಫ್ ಅಂಡ್ ವೆಲ್ಫೇರ್ ಸೊಸೈಟಿಯ ಅಧ್ಯಕ್ಷರು ಮತ್ತು ಸಮಿತಿಗೆ ನಾನು ಋಣಿಯಾಗಿದ್ದೇನೆ. ಮೂರು ದಶಕಗಳ ಕಾಲ ನಾನು ದತ್ತಕದ ವಿಚಾರದಲ್ಲಿ ಕೆಲಸ ಮಾಡಿದ್ದರೂ ಅದನ್ನು ಕುರಿತು ಬರೆಯುವ ಬಗ್ಗೆ ಆಲೋಚಿಸಿರಲಿಲ್ಲ. `ಉದಯವಾಣಿ' ಪತ್ರಿಕೆಯ `ಮಹಿಳಾ ಸಂಪದ'ದಲ್ಲಿ ದತ್ತಕವನ್ನು ಕುರಿತು ಅಂಕಣ ಬರೆಯುವಂತೆ ಅದರ ಸಂಪಾದಕಿ ಡಾ.ಆರ್. ಪೂರ್ಣಿಮಾ ನನ್ನನ್ನು ಒತ್ತಾಯಿಸಿದರು. ಈ ವಿಷಯ ಕುರಿತ ಅಂಕಣ ತೀರಾ ಹೊಸತು. ಅವರೇ ಹೆಸರು ಕೊಟ್ಟು, ಬರೆಯಿಸಿದ ಈ ಅಂಕಣ ತುಂಬಾ ಒಳ್ಳೆಯ ಪ್ರತಿಕ್ರಿಯೆ ಪಡೆಯಿತು. ಇದಕ್ಕಾಗಿ ಗೆಳತಿ ಪೂರ್ಣಿಮಾಗೆ ಮತ್ತು ಪ್ರಕಟಿಸಿದ `ಉದಯವಾಣಿ' ಆಡಳಿತ ವರ್ಗಕ್ಕೆ ನಾನು ಅಭಾರಿಯಾಗಿದ್ದೇನೆ.
ಸಾಮಾಜಿಕ ಕಾರ್ಯಕರ್ತೆಯಾಗಲು ನನ್ನ ತಂದೆ ಕೆ.ಕೆ. ಭೀಮಯ್ಯ ಮತ್ತು ನಂಜಮ್ಮ ಅವರು ಪ್ರೇರಣೆ ನೀಡಿದ್ದಾರೆ. ನನ್ನ ಪತಿ ಕೆ. ಸುಬ್ಬಯ್ಯ ಎಲ್ಲ ರೀತಿಯ ಬೆಂಬಲ ನೀಡಿದ್ದಾರೆ. ನನ್ನ ಮಕ್ಕಳಾದ ಬಿಂದು ಮತ್ತು ಶರಣ್ ಸೋಮಣ್ಣ ಉದ್ದಕ್ಕೂ ನನಗೆ ಸಹಕಾರ ನೀಡಿದ್ದಾರೆ. ಇವರೆಲ್ಲರಿಗೂ ನನ್ನ ಪ್ರೀತಿಯ ಕೃತಜ್ಞತೆ ಸಲ್ಲುತ್ತದೆ. `ಮಡಿಲಿಗೊಂದು ಮಗು' ಪುಸ್ತಕವಾಗಿ ಹೊರಬರಲು ಪ್ರಮುಖ ಸಹಾಯ ನೀಡಿದ ವಸುಧಾ ಮೂರ್ತಿ ಮತ್ತು ರಾಜ್ಯಶ್ರೀ ಸತೀಶ್ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ಸಲ್ಲುತ್ತದೆ. ವಿವಿಧ ರೀತಿಯ ನೆರವು ನೀಡಿದ ರಾಜಶೇಖರ ಹೆಗಡೆ, ಸಿ.ಕೆ. ಮೀನಾ, ಜಾನಕಿ ವಿಶ್ವನಾಥ್, ವಾಣಿ ಲಕ್ಷ್ಮಣ್ ಅವರಿಗೆ, ಇಂಗ್ಲಿಷ್ನಲ್ಲಿ ಈ ಕುರಿತ ನನ್ನ ಪುಸ್ತಕ ಪ್ರಕಟಿಸಿದ ಡ್ರೋನ್ಕ್ವಿಲ್ ಪ್ರಕಾಶನ ಸಂಸ್ಥೆಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. `ಮಡಿಲಿಗೊಂದು ಮಗು' ಪುಸ್ತಕವನ್ನು ಪ್ರಕಟಿಸುತ್ತಿರುವ ಸುಮುಖ ಪ್ರಕಾಶಕರಾದ ನಾರಾಯಣ ಮಾಳ್ಕೋಡ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಮೂರು ದಶಕಗಳ ಹಿಂದಿನ ಕಾಲಕ್ಕೆ ಹೋಲಿಸಿದರೆ ಮಗುವನ್ನು ದತ್ತು ಪಡೆಯುವ ವಿಚಾರದಲ್ಲಿ ಈಗ ಸಮಾಜದ ಭಾವನೆ ಬದಲಾಗಿದೆ. ನನ್ನಿಂದ ತರಬೇತಿ ಪಡೆದ ಅನೇಕ ಸಾಮಾಜಿಕ ಕಾರ್ಯಕರ್ತರು ಶ್ರದ್ಧೆಯಿಂದ ಈ ಪವಿತ್ರವಾದ ಕೆಲಸವನ್ನು ಮುಂದುವರಿಸುತ್ತಿದ್ದಾರೆ. ನನಗೆ ಇದು ತುಂಬಾ ಸಮಾಧಾನವನ್ನು ಕೊಟ್ಟಿದೆ. ದತ್ತು ಪಡೆಯುವುದಕ್ಕೆ ಸಂಬಂಧಿಸಿದ ಎಲ್ಲರಿಗೆ ಈ ಪುಟ್ಟ ಪುಸ್ತಕ ನೆರವಾದರೆ ಅದಕ್ಕಿಂತ ಹೆಚ್ಚಿನ ಸಂತೋಷ ಬೇರೊಂದಿಲ್ಲ. ಪದ್ಮಾ ಸುಬ್ಬಯ್ಯ ಬೆಂಗಳೂರು 1 ಡಿಸೆಂಬರ್ 2007
0 Comments
Leave a Reply. |
Categories![]()
|
Site
|
Vertical Divider
|
Our Other Websites
|
Vertical Divider
|
+91-8073067542
080-23213710 Mail-hrniratanka@mhrspl.com |
Receive email updates on the new books & offers
for the subjects of interest to you. |